ಬೆಂಗಳೂರು:25 ವರ್ಷ..ಬೆಳ್ಳಿ ಹಬ್ಬ..ಸಿಲ್ವರ್ ಜ್ಯೂಬಿಲಿ..ರಜತ ಮಹೋತ್ಸವ..
ಹೀಗೆ 25 ವರ್ಷ ಎನ್ನುವುದಕ್ಕೆ ಮಾನ್ಯತೆ-ಘನತೆ-ವಿಶೇಷತೆ ಇದ್ದೇ ಇರುತ್ತದೆ.ವಯಸ್ಸಿನ ದೃಷ್ಟಿಯಿಂದ ವಯಸ್ಸಾಯ್ತಲ್ಲ ಎನ್ನುವ ಬೇಸರವನ್ನು ಹೊರತುಪಡಿಸಿದ್ರೆ ಸಾಧಕನ ಬದುಕಲ್ಲಿ 25 ವರ್ಷಕ್ಕೆ ಅದರದೇ ಮಹತ್ವ ಇದೆ.ಸಮಾಜದ ಓರೆಕೋರೆಗಳು-ತಪ್ಪುಒಪ್ಪುಗಳನ್ನು ತಿದ್ದಿತೀಡುವಂಥ ಕೆಲಸ ಮಾಡುವ ಸಾಮಾಜಿಕ ಕಾರ್ಯಕರ್ತನ ಬದುಕಲ್ಲೂ 25 ವರ್ಷಗಳ ಸುಧೀರ್ಘ ಪ್ರಯಾಣ ಕಡಿಮೆ ಮಾತೇನಲ್ಲ..ಈ ಎಲ್ಲಾ ಪೀಠಿಕೆ ಹಾಕೊಕ್ಕೆ ಕಾರಣ ಸಾಮಾಜಿಕ ಕಾರ್ಯಕರ್ತ ಸಾಯಿದತ್ತಾ.
ಯೆಸ್… ಸಾಮಾಜಿಕ ಕಳಿಕಳಿಯಲ್ಲಿ ಕೆಲಸ ಮಾಡುತ್ತಾ ಬಂದಿರುವ ಸಾಯಿದತ್ತಾ, ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಗುಜರಾಯಿಸಲಿಕ್ಕೆ ಶುರುಮಾಡಿ ಇವತ್ತಿಗೆ ಬರೋಬ್ಬರಿ 25 ವರ್ಷ.ಜನವಸತಿಗೆ ಚಿತಾಗಾರದ ಚಿಮಣಿಯಿಂದ ಸಾಕಷ್ಟು ತೊಂದರೆಯಾಗುತ್ತಿದೆ ಎನ್ನುವ ವಿಷಯದಿಂದ ಆರಂಭಿಸಿದ ಸಾಮಾಜಿಕ ಹೋರಾಟ ಇವತ್ತು ಕ್ರಾಂತಿಕಾರಿ ಎನ್ನುವಂಥ ಬದಲಾವಣೆಗೆ ಕಾರಣವಾದಂಥ ಕಾನೂನಾತ್ಮಕ ಹೋರಾಟಗಳವರೆಗೂ ಸಾಗಿ ಬಂದಿದೆ.ಅವರ 25 ವರ್ಷಗಳ ಈ ಸುಧೀರ್ಘ ಹೋರಾಟದ ಬದುಕಿನ ಮೇಲೆ ಬೆಳಕು ಚೆಲ್ಲುವ ಪ್ರಯತ್ನವೇ ಈ ಲೇಖನ

ಸಮಾಜಕ್ಕಾಗಿ, ಸಾರ್ವಜನಿಕರ ಹಿತಾಸಕ್ತಿಗಾಗಿ ದುಡಿಯುವ ಮನಸ್ಸು ಎಲ್ಲರಿಗೂ ಇರಲ್ಲ, ಸಾಮಾಜಿಕ ಕಳಕಳಿಯಿಂದ, ಜನರ ಒಳಿತಿಗಾಗಿ ದುಡಿಯುವವರು ಕೆಲವೇ ಕೆಲವು ಮಂದಿ. ಅಂತಹವರಲ್ಲಿ ಸಮಾಜದ ಓರೆಕೋರೆಗಳು, ತಪ್ಪುಒಪ್ಪುಗಳನ್ನು ತಿದ್ದಿತೀಡುವಂತಹ ಕೆಲಸ ಮಾಡುತ್ತಾ ಬಂದಿರುವ ಸಾಮಾಜಿಕ ಕಾರ್ಯಕರ್ತ ಸಾಯಿದತ್ತ ಅವರೂ ಕೂಡ ಒಬ್ಬರು.
ಬೆಂಗಳೂರಲ್ಲಿ 1996 ರಲ್ಲಿ ವಿಲ್ಸನ್ಗಾರ್ಡನ್ ಸ್ಮಶಾನದ ಎಲೆಕ್ಟ್ರಿಕ್ ಕ್ರಿಮಿಟೋರಿಯಂನ ಚಿಮಣಿಯನ್ನು ತೀರ ಕೆಳಗಿನ ಅಂತರದಲ್ಲಿ ನಿರ್ಮಾಣ ಮಾಡಲಾಗಿತ್ತು. ಇದರಿಂದ ಸುಟ್ಟ ಶವಗಳ ಹೊಗೆ ಆ ಸ್ಮಶಾನದ ಪಕ್ಕದಲ್ಲೇ ಇರುವ ಲಾಲ್ಬಾಗ್ ಉದ್ಯಾನವನ, ಹಾಫ್ಕಾಮ್ಸ್, ಸುತ್ತಮುತ್ತಲಿನ ಪರಿಸರಕ್ಕೆ ಹಾನಿಯಾಗುತ್ತಿತ್ತು. ಇದನ್ನರಿತ ಸಾಯಿದತ್ತ ಅವರು ಉಚ್ಛ ನ್ಯಾಯಾಲಯಕ್ಕೆ ಅರ್ಜಿಯನ್ನು ಸಲ್ಲಿಸಿದ್ದರು. ಇದರ ಸುಧೀರ್ಘ ತನಿಖೆಯನ್ನು ನಡೆಸಿದ ನಂತರ ಅಂದಿನ ಬೆಂಗಳೂರು ಮಹಾನಗರ ಪಾಲಿಕೆಯು ಸ್ಮಶಾನದ ಚಿಮಣಿಯನ್ನು ಎತ್ತರಿಸಲು ಕೈಗೊಂಡ ಕ್ರಮಗಳ ಬಗ್ಗೆ ಹೈಕೋರ್ಟ್ಗೆ ಅರ್ಜಿಯನ್ನು ಸಹ ಸಲ್ಲಿಸುತ್ತಾರೆ. ಇದು ಸುತ್ತಮುತ್ತಲಿನ ಪರಿಸರವನ್ನು ಉಳಿಸಲು ಸಾಮಾಜಿಕ ಕಾರ್ಯಕರ್ತ ಸಾಯಿದತ್ತ ಅವರು ಸಲ್ಲಿಸಿದ ಮೊದಲ ರಿಟ್ ಅರ್ಜಿ.
ಮುಂದೆ ಬೆಂಗಳೂರು ನಗರದ ಫ್ಲೆಕ್ಸ್, ಬ್ಯಾನರ್ನಂತಹ ಜಾಹೀರಾತುಗಳ ಹಾವಳಿಯ ಬಗ್ಗೆ, ಮದ್ಯವನ್ನು ಪ್ಲಾಸ್ಟಿಕ್ ಪೌಚ್ಗಳಲ್ಲಿ ಮಾರಾಟ ಮಾಡುವುದನ್ನು ನಿಶೇಧಿಸುವ ಬಗ್ಗೆ, ಕೊರೊನಾ ಸಂದರ್ಭದಲ್ಲಿ ನಡೆದ ಪ್ರತಿಭಟನೆಯಿಂದ ಪೊಲೀಸರಿಗೆ ಆಗ್ತಿದ್ದ ತೊಂದರೆಯ ಬಗ್ಗೆ, ಐಪಿಎಸ್ ಅಧಿಕಾರಿಗಳ ಸೇವಾವಧಿ ಬಗ್ಗೆ ಅಲ್ಪಸಂಖ್ಯಾತ ವಿದ್ಯಾಸಂಸ್ಥೆಗಳ ಬಗ್ಗೆ, ಹೀಗೆ ಬರೋಬ್ಬರಿ ಇಪ್ಪತೈದು ವರ್ಷಗಳಿಂದ ಹದಿನೈದಕ್ಕಿಂತ ಹೆಚ್ಚು ರಿಟ್ ಅರ್ಜಿಗಳನ್ನು ಸಲ್ಲಿಸುತ್ತಾ ಬಂದಿದ್ದಾರೆ.
ದತ್ತಾ ಅವರ ಹೋರಾಟದ ಬದುಕನ್ನು ವಿವರಿಸುತ್ತಾ ಹೋದರೆ ಅದಕ್ಕೆ ಸಮಯವೇ ಸಾಕಾಗೋದಿಲ್ಲ..ಸಾಮಾಜಿಕ ಕಳಕಳಿಯ ಹೋರಾಟಗಳಲ್ಲಿ ಯಾವುದೇ ರಾಜಿಗೊಳಗಾಗದೆ ಬದ್ಧತೆ ಹೊಂದಿರುವುದರಿಂದಲೇ ಇವತ್ತು ಕೆಲವೇ ಕೆಲವು ಕಮಿಟೆಡ್ ಸಾಮಾಜಿಕ ಕಾರ್ಯಕರ್ತರಲ್ಲಿ ಒಬ್ಬರಾಗಿ ಗುರುತಿಸಿಕೊಂಡಿದ್ದಾರೆ.



ಸಾಯಿದತ್ತಾ ಅವರ ಬದ್ಧತೆಗೆ ಜಾಹಿರಾತು ವಿರುದ್ಧದ ಹೋರಾಟಕ್ಕಿಂತ ದೊಡ್ಡ ಉದಾಹರಣೆ ಮತ್ತೊಂದು ಬೇಕಿಲ್ಲವೇನೋ.ದೊಡ್ಡ ಮಾಫಿಯಾ ವಿರುದ್ಧ ಟೊಂಕಕಟ್ಟಿ ಹೋರಾಟಕ್ಕೆ ಇಳಿಯೋದು ಸಾಮಾನ್ಯವಾದ ಮಾತೇನಲ್ಲ..ಆ ವೇಳೆ ಅವರಿಗೆ ಹೋರಾಟದಿಂದ ಹಿಂದಕ್ಕೆ ಸರಿಯುವಂತೆ ಬಂದ ಆಮಿಷಗಳು ಜತೆಗೆ ಅದ್ಹೇಗೆ ಹೋರಾಟ ಮಾಡ್ತಿಯೋ ನಾವೂ ನೋಡ್ತೇವೆ,,ನೀನು ಜೀವಸಹಿತ ಉಳಿಯೊಲ್ಲ ಎನ್ನುವ ಮಟ್ಟದ ಬೆದರಿಕೆಗಳು ಕಡಿಮೆನಾ..ಬೇರೆ ಯಾರಾದರೂ ಆಗಿದ್ದರೆ ಒಂದಷ್ಟು ಪಡೆದು,ಮಾಫಿಯಾದ ಸಹವಾಸ ಯಾರಿಗೆ ಬೇಕೆಂದು ಹೋರಾಟದಿಂದಲೇ ಹಿಂದಕ್ಕೆ ಸರಿಯುತ್ತಿದ್ದರೇನೋ..
ಆದ್ರೆ ದತ್ತಾ ಹಾಗೆ ಮಾಡದೇ ಕಾನೂನಾತ್ಮಕ ಹೋರಾಟದಲ್ಲಿ ಗೆದ್ದೇ ತೀರಿದ್ರು.ಇವತ್ತು ಬೆಂಗಳೂರೇನಾದ್ರೂ ಜಾಹಿರಾತಿನಿಂದ ಮುಕ್ತವಾಗಿ ಸುಂದರವಾಗಿ ಕಾಣುತ್ತಿದೆ ಎಂದ್ರೆ ಅದಕ್ಕೆ ಸಾಯಿದತ್ತಾ ಅವರ ಕೊಡುಗೆ ಅಪಾರ ಹಾಗೂ ಅನನ್ಯ ಎನ್ನುತ್ತಾರೆ ಸಾಯಿದತ್ತಾ ಅವರನ್ನು ನಿಕಟವಾಗಿ ಕಂಡ ಅನೇಕ ಸಾಮಾಜಿಕ ಕಾರ್ಯಕರ್ತರು.
ಅಧಿಕಾರಶಾಹಿ ವಿರುದ್ಧ ತೊಡೆತಟ್ಟಿ ನಿಂತ ಕರ್ನಾಟಕದ ಕೇಮ್ಕಾ ಎಂದೇ ಕರೆಯಲ್ಪಡುವ ದಕ್ಷ-ಪ್ರಾಮಾಣಿಕ ಅಧಿಕಾರಿ ಕೆ.ಮಥಾಯ್ ಅವರ ಬೆನ್ನಿಗೆ ನಿಂತು ಹೋರಾಟ ನಡೆಸಿದ್ದು ದತ್ತಾ ಅವರ ಹೆಗ್ಗಳಿಕೆ.ಸಾಯಿದತ್ತಾ ಕೊಟ್ಟ ಬೆಂಬಲ ಹಾಗೂ ನೈತಿಕ ಸ್ಥೈರ್ಯವನ್ನು ಯಾವತ್ತೂ ಮರೆಯೊಲ್ಲ ಎನ್ತಾರೆ ಕೆ.ಮಥಾಯ್.
ಇವು ಕೇವಲ ಸ್ಯಾಂಪಲ್ಸ್ ಅಷ್ಟೇ,ಇಂಥಾ ಹತ್ತಾರು ನಿದರ್ಶನಗಳು ಸಾಯಿದತ್ತಾ ಅವರ ಸಾಮಾಜಿಕ ಕಳಕಳಿಗೆ ಸಾಕ್ಷಿ ನುಡಿಯುತ್ತವೆ.ಸಮಾಜದ ಹಿತಾಸಕ್ತಿಗೆ ವ್ಯತಿರಿಕ್ತವಾಗುವಂಥ ಸನ್ನಿವೇಶಗಳನ್ನು ಕಾನೂನು ಚೌಕಟ್ಟಿನಲ್ಲಿ ಪ್ರಶ್ನಿಸುತ್ತಾ ಬಂದಿರುವ ಸಾಯಿದತ್ತಾ ಅವರ 25ನೇ ಬೆಳ್ಳಿ ಮಹೋತ್ಸವದ ಸಂಭ್ರಮಕ್ಕೆ ಕನ್ನಡ ಫ್ಲಾಶ್ ನ್ಯೂಸ್ ಶುಭ ಹಾರೈಸುತ್ತದೆ.ಸಾಮಾಜಿಕ ಕಾರ್ಯಕರ್ತರಾದ ಸಾಯಿದತ್ತ ಅವರು. ಸಮಾಜಕ್ಕಾಗಿ ಸಮಾಜದ ಒಳಿತಿಗಾಗಿ ಸಾಯಿದತ್ತ ಅವರ ಹೋರಾಟ ಹೀಗೆ ಮುಂದುವರಿಯಲಿ.