ಇನ್ನೂ ನಿಂತಿಲ್ಲ ಖಾಸಗಿ ಶಾಲೆಗಳ ಧನದಾಹ; ಪೋಷಕರಿಗೆ ಪೂರ್ತಿ ಶುಲ್ಕ ಪಾವತಿಸುವಂತೆ ಒತ್ತಾಯ..!
ಕೊರೊನಾ ಮಹಾಮಾರಿ ಇಡೀ ಮನುಷ್ಯ ಕುಲವನ್ನೇ ಆರ್ಥಿಕವಾಗಿ, ಸಾಮಾಜಿಕವಾಗಿ, ಮಾನಸಿಕವಾಗಿ ಸಂಪೂರ್ಣ ಕುಗ್ಗುವಂತೆ ಮಾಡಿದೆ. ರಾಜ್ಯದಲ್ಲಂತೂ ಕೊರೊನಾ ಎರಡನೇ ಅಲೆಯಿಂದಾಗಿ ಜನರ ಆರ್ಥಿಕ ಪರಿಸ್ಥಿತಿ ತೀರಾ ಹದಗೆಟ್ಟಿದೆ.
ಕೈಯಲ್ಲಿ ಕೆಲಸ ಇಲ್ಲದೇ, ಜೇಬಲ್ಲಿ ನಯಾ ಪೈಸೆ ಇಲ್ಲದೇ, ಒಂದು ಹೊತ್ತಿನ ಊಟಕ್ಕೂ ಜನ ಕಷ್ಟ ಪಡುತ್ತಿರುವ ಈ ಸಮಯದಲ್ಲಿ ಧನದಾಹಿ ಖಾಸಗಿ ಶಾಲೆಗಳು ಪೋಷಕರನ್ನ ಫೀಸ್ ಕಟ್ಟುವಂತೆ ಒತ್ತಾಯಿಸುತ್ತಿವೆ. ಇದೇನೂ ಹೊಸ ವಿಷಯವೇನಲ್ಲ, ಆದರೆ ಈ ಫೀಸ್ ಟಾರ್ಚರ್ ವಿಚಾರ ಹೈಕೋಟ್ ಮೆಟ್ಟಿಲೇರಿದ್ದು, ಇನ್ನೂ ಕೋರ್ಟ್ ಆದೇಶವನ್ನೇ ನೀಡಿಲ್ಲ, ಆದರೂ ಸಹ ಕೆಲ ಖಾಸಗಿ ಶಾಲೆಗಳು ಪೂರ್ತಿ ಫೀಸ್ ಕಟ್ಟುವಂತೆ ಪೋಷಕರ ಮೇಲೆ ಒತ್ತಡ ಹೇರುತ್ತಿವೆ.
ಬನಶಂಕರಿಯ ಬಿಎನ್ಎಂ ಸ್ಕೂಲ್, ಹೊರಮಾವು ಸಮೀಪದ ವೆಬ್ಗಯಾರ್ ಇಂಟರ್ ನ್ಯಾಷನಲ್ ಸ್ಕೂಲ್, ರಾಜರಾಜೇಶ್ವರಿ ನಗರದ ಬಾಲ್ಡ್ವಿನ್ ಸ್ಕೂಲ್, ನಂದಿನಿ ಲೇಔಟ್ ಹತ್ತಿರದ ಪ್ರೆಸಿಡೆನ್ಸಿ ಸ್ಕೂಲ್, ಲಗ್ಗೆರೆಯ ನಾರಾಯಣ್-ಇ-ಟೆಕ್ನೋ ಸ್ಕೂಲ್, ಕಲ್ಕೆರೆ ಬಳಿಯ ನ್ಯಾಷನಲ್ ಪಬ್ಲಿಕ್ ಸ್ಕೂಲ್ ಸೇರಿದಂತೆ ನಗರದ ಅನೇಕ ಪ್ರೈವೇಟ್ ಶಾಲೆಗಳು ಪೋಷಕರಿಗೆ ಪೂರ್ತಿ ಫೀಸ್ ಕಟ್ಟುವಂತೆ ಟಾರ್ಚರ್ ನೀಡುತ್ತಿವೆ.
ಜನ, ಜೀವನ ನಡೆಸೋಕೂ ಕಷ್ಟ ಪಡ್ತಿರೋ ಇಂತಹ ಸಂದರ್ಭದಲ್ಲಿ ಕೆಲ ಖಾಸಗಿ ಶಾಲೆಗಳು ಪೋಷಕರನ್ನು ರಣಹದ್ದಿನಂತೆ ಕಿತ್ತು ತಿನ್ನುತ್ತಿವೆ. ಪೋಷಕರು ಪ್ರತಿದಿನ ಪ್ರತಿಭಟನೆ ನಡೆಸುವಂತಾಗಿದೆ, ಹಣಕ್ಕಾಗಿ ಪೋಷಕರಿಗೆ ಪ್ರತಿನಿತ್ಯ ಟಾರ್ಚರ್ ನೀಡುತ್ತಿರುವ ಶಾಲೆಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಪೋಷಕ ಸಂಘಟನೆಗಳು ಒತ್ತಾಯಿಸುತ್ತಿವೆ.