“365 ದಿನಕ್ಕೆ 63” ದಿನವಷ್ಟೇ ಡ್ಯೂಟಿ..! ಇದು,ಸಾರಿಗೆ ಲೀಡರ್ ಚಂದ್ರಶೇಖರ್ “ಖದರ್”!: ಮುಷ್ಕರದಲ್ಲಿ ಪಾಲ್ಗೊಂಡವರು ವಜಾ-ಸಂಘಟಿಸಿದ ಮುಖಂಡ ಸೇಫ್..?! ಇದೆಂಥಾ ನ್ಯಾಯ?!

ಬೆಂಗಳೂರು:ಸಾರಿಗೆ ಕಾರ್ಮಿಕರು ಸರ್ಕಾರಿ ನೌಕರ ಮಾನ್ಯತೆಯನ್ನು ಗುರಿಯಾಗಿಟ್ಟುಕೊಂಡು ನಡೆಸಿದ ಆ ಮುಷ್ಕರವನ್ನು ಇಡೀ ರಾಜ್ಯದ ಜನತೆ ಹತ್ತಿರದಿಂದ ನೋಡಿದೆ..ಆ ಮುಷ್ಕರ ನಂತರದ ದುಷ್ಪರಿಣಾಮಗಳು,ಕಾರ್ಮಿಕರ ಸಾಮೂಹಿಕ ವಜಾ,ಅದರಿಂದ ಬೀದಿಗೆ ಬಂದ ಕಾರ್ಮಿಕರ ಕುಟುಂಬಗಳು,ಅವರು ಅನುಭವಿಸುತ್ತಿರುವ ಬವಣೆ,ಮರು ನಿಯೋಜಿಸಿಕೊಳ್ಳಿ ಎಂದು ಚಪ್ಪಲಿ ಸವೆಸುತ್ತಿರುವ ಧಾರುಣತೆ,ಆಗೊಲ್ಲ ಎನ್ನುತ್ತಿರುವ ಸರ್ಕಾರ,ಕ್ಯಾಬಿನೆಟ್ ನಲ್ಲಿ ಡಿಸೀಷನ್ ಆದರಷ್ಟೇ ಕೆಲಸ ಎನ್ನಲಾಗುತ್ತಿರುವ ಬೆಳವಣಿಗೆಗಳನ್ನು ನೋಡಿದಾಗ ಎಂಥಾ ಕಲ್ಲುಮನಸ್ಸೂ ಕರಗುತ್ತದೆ.
ಮುಷ್ಕರ ಬೆಂಬಲಿಸಿ,ಪಾಲ್ಹೊಂಡು,ವಜಾಗೊಂಡ ಸಾವಿರಾರು ಕಾರ್ಮಿಕರು ಪಡುತ್ತಿರುವ ಬವಣೆ ಯಾವ ಶತೃಗೂ ಬೇಡ.ಕೆಲಸ ಸಿಕ್ಕರೆ ಸಾಕಪ್ಪಾ ಎಂದು ಪರಿತಪಿಸುತ್ತಿರುವ ನೌಕರರ ಸ್ಥಿತಿ ಹೀಗಾದ್ರೆ, ಅದೇ ಮುಷ್ಕರವನ್ನು ಸಂಘಟಿಸಿ,ಕಾರ್ಮಿಕರನ್ನು ದಾರಿ ತಪ್ಪಿಸಿದ ಗಂಭೀರ ಆರೋಪಕ್ಕೆ ತುತ್ತಾಗಿರುವ ಸಾರಿಗೆ ಕಾರ್ಮಿಕರ ಕೂಟದ ರಾಜ್ಯಾಧ್ಯಕ್ಷ ಚಂದ್ರಶೇಖರ್ ಸ್ತಿತಿ ಮಾತ್ರ ಆರಾಮದಾಯಕವಾಗಿದೆ ಎಂದೇ ವಿಶ್ಲೇಷಿಸಲಾಗುತ್ತಿದೆ.ಮುಷ್ಕರ ಮಾಡಿದ ಕಾರ್ಮಿಕರು ವಜಾಗೊಂಡಿದ್ದರೆ,ಮುಷ್ಕರ ಸಂಘಟಿಸಿದ ಚಂದ್ರಶೇಖರ್ ವಿರುದ್ಧ ಶಿಸ್ತುಕ್ರಮ ಜಾರಿಯಾಗದಿರುವುದು ಕಾರ್ಮಿಕರಲ್ಲೇ ದೊಡ್ಡ ಮಟ್ಟದ ಆಕ್ರೋಶ,ಅಸಹನೆ,ಅಸಮಾಧಾನ ಮೂಡಿಸಿದೆ.ಇದು ಕೂಟದೊಳಗೆ ಅಗ್ನಿಪರ್ವತವನ್ನೇ ಸೃಷ್ಟಿಸಿದೆ ಎಂದ್ರೂ ಅಚ್ಚರಿ ಪಡಬೇಕಿಲ್ಲ.
ಮುಷ್ಕರವನ್ನುಸಂಘಟಿಸಿ ಹೀರೋ ಆಗಿ ಕೊನೆಗೆ ಕಾರ್ಮಿಕರ ದೃಷ್ಟಿಯಲ್ಲಿ ವಿಲನ್ ಆಗಿರುವ ಚಂದ್ರಶೇಖರ್ ಕೆಲಸದಲ್ಲಿ ಎಷ್ಟು ನೀಯತ್ತು-ಬದ್ಧತೆ ಹೊಂದಿದ್ದಾರೆನ್ನುವ ಕುತೂಹಲ ಮೊದಲಿಂದಲೂ ಕನ್ನಡ ಫ್ಲಾಶ್ ನ್ಯೂಸ್ ಗೆ ಇತ್ತು.ಇದನ್ನು ಪತ್ತೆ ಹಚ್ಚಲು ನಡೆಸುತ್ತಿದ್ದ ಪ್ರಯತ್ನಗಳ ಸನ್ನಿವೇಶದಲ್ಲೇ ಸ್ಪೋಟಕವಾಗಿ ಆರ್ ಟಿಐ ಮಾಹಿತಿ ಲಭ್ಯವಾಗಿದೆ.ಇದನ್ನು ಆಧರಿಸಿ ಚಂದ್ರಶೇಖರ್ ಕಾರ್ಯಕ್ಷಮತೆ-ಬದ್ಧತೆ-ಕೆಲಸದ ವೈಖರಿಯನ್ನು ಸಾಣೆ ಹಿಡಿಯುವ ಪ್ರಯತ್ನವನ್ನು ಮಾಡುತ್ತಿದ್ದೇವೆ.


ಮಹೇಶ್ವರ ಎನ್ನುವವರು ದಿನಾಂಕ 01/01/2020 ರಿಂದ 30/04.2021 ರ ಅವದಿಯಲ್ಲಿ ಡಿಪೋ 33 ರಲ್ಲಿ ಚಾಲಕರಾಗಿರುವ ಚಂದ್ರಶೇಖರ್( ಬಿಲ್ಲೆ ಸಂಖ್ಯೆ 24226) ಕೆಲಸಕ್ಕೆ ಹಾಜರಾಗಿರುವ ಬಗ್ಗೆ ಮಾಹಿತಿ ಕೋರಿ 21/05/2021 ರಂದು ಅರ್ಜಿ ಹಾಕಿದ್ದರು.18/06/2021 ರಂದು ಇಲಾಖೆ ಅಧಿಕಾರಿಗಳು ನೀಡಿರುವ ಮಾಹಿತಿಯ ಅಂಕಿಅಂಶಗಳನ್ನು ಈ ವರದಿ ಮೂಲಕ ಕನ್ನಡ ಫ್ಲಾಶ್ ನ್ಯೂಸ್ ನಿಮ್ಮ ಮುಂದಿಡುತ್ತಿದೆ.
365 ದಿನ 63 ದಿನ ಕೆಲಸ: ಜನವರಿ 2020 ರಲ್ಲಿ ಚಂದ್ರಶೇಖರ್ 2 ಮತ್ತು 3 ರಂದು (2 ದಿನ) ಮಾತ್ರ ಕರ್ತವ್ಯಕ್ಕೆ ಹಾಜರಾಗಿದ್ದಾರೆ.ಅಲ್ಲಿಂದ ಫೆಬ್ರವರಿಯಿಂದ ಹಿಡಿದು ಫೆಬ್ರವರಿಯಿಂದ ಏಪ್ರಿಲ್ ಅಂತ್ಯದವರೆಗೂ ಅಂದ್ರೆ ಹತ್ತಿರತ್ತರ ನಾಲ್ಕು ತಿಂಗಳು ಗೈರಾಗಿದ್ದಾರೆ ಎನ್ನುವುದು ಆರ್ ಟಿಐ ದಾಖಲೆಗಳಲ್ಲೇ ಸ್ಪಷ್ಟವಾಗುತ್ತದೆ.ರಜೆಯಲ್ಲಿ ಕಾಲ ಕಳೆದು ಬೋರ್ ಆಯ್ತು ಎನ್ನಿಸುತ್ತೆ,ಅವರು ಮತ್ತೆ ಕೆಲಸಕ್ಕೆ ಹಾಜರಾಗಿದ್ದು ಮೇ ನಲ್ಲಿ
ಆದ್ರೆ ಮೇ ನಲ್ಲೂ ಅವರು ಕೆಲಸಕ್ಕೆ ಅಟೆಂಡ್ ಆಗಿರೋದು ಕೇವಲ 23 ಹಾಗೂ 30 ರಂದು( 4 ದಿನ).ಮೇ ನಂತರ ಮತ್ತೆ ಸಾಹೇಬ್ರು ಸುಧೀರ್ಘ 3 ತಿಂಗಳು ನಿರಂತರವಾಗಿ ಗೈರಾಗು ತ್ತಾರೆ. ಸೆಪ್ಟೆಂಬರ್ ನಲ್ಲಿ ಚಂದ್ರಶೇಖರ್ ಅವರು ಕೆಲಸಕ್ಕೆ ಹಾಜರಾಗಿದ್ದುದು 5,7,12,17,19,21 ರಂದು( 14 ದಿನ) ಅಂದ್ರೆ ಮೂಡ್ ಬಂದಾಗ ಕೆಲಸಕ್ಕೆ ಹಾಜರಾಗಿದ್ದಾರೆ.ಅನಂತರ ಅಕ್ಟೋಬರ್ ನಲ್ಲಿ ಹೆಚ್ಚು ದಿನ ಕೆಲಸ ಮಾಡಿದಂತೆ ತೋರುತ್ತದೆ.ಏಕೆಂದರೆ ಆ ತಿಂಗಳಲ್ಲಿ 3,8,10,12,15,19,24,26 ರಂದು ಕಷ್ಟಪಟ್ಟು ಕೆಲಸ ಮಾಡಿದ್ದಾರೆ.
ಅಂದ್ರೆ ಈ ತಿಂಗಳಲ್ಲಿ ಚಂದ್ರು 16 ದಿನ ಕೆಲಸ ಮಾಡಿದ್ದಾರೆ.ನವೆಂಬರ್ 2020 ರಲ್ಲಿ ಮತ್ತೆ ಕೆಲಸಕ್ಕೆ ಬಂದಿರುವ ಚಂದ್ರು ಆ ತಿಂಗಳ 5,9,21,22 ಅಂದ್ರೆ 8 ದಿನ ಕೆಲಸ ಮಾಡಿದ್ದಾರೆ. 2020ರ ಡಿಸೆಂಬರ್ ತಿಂಗಳಲ್ಲಿ ಸಾಹೇಬ್ರು ಕೆಲಸ ಮಾಡಿರೋದು ಕೇವಲ ಒಂದು ದಿನ ಮಾತ್ರ.2021 ರಲ್ಲಿ ಶುಭಾರಂಭ ಮಾಡಿದ ಚಂದ್ರಶೇಖರ್ ಜನವರಿ 2,4,8,11,13,15,18,23, 26,29, 31 ರಂದು 22 ದಿನ ಕೆಲಸ ಮಾಡಿದ್ದಾರೆ.ಫೆಬ್ರವರಿಯಲ್ಲಿ 2,4,8,10,14,18,20 ರಂದು ಅಂದ್ರೆ 14 ದಿನ ಕೆಲಸ ಮಾಡಿದ್ದಾರೆ.
ಅಂದ್ರೆ ಜನವರಿ 2020 ರಿಂದ ಫೆಬ್ರವರಿ 2021ರವರೆಗೆ ಅಂದ್ರೆ ಬರೋಬ್ಬರಿ 13 ತಿಂಗಳ ಕಾಲಾವಧಿಯಲ್ಲಿ ಚಂದ್ರಶೇಖರ್ ಕೆಲಸ ಮಾಡಿರೋದು ಕೇವಲ 63 ದಿನ ಎನ್ನುವುದು ಆರ್ ಟಿಐ ದಾಖಲೆಗಳಿಂದಲೇ ಬಹಿರಂಗವಾಗಿದೆ.ಅಂದರೆ 365 ದಿನಗಳ ಅವಧಿಯಲ್ಲಿ ಒಬ್ಬ ಸರ್ಕಾರಿ ನೌಕರ 42 ದಿನ ಕೆಲಸ ಮಾಡುತ್ತಾನೆಂದ್ರೆ ಅದಕ್ಕೆ ಏನ್ ಅರ್ಥ ಕೊಡಬೇಕೋ ಗೊತ್ತಾಗುತ್ತಿಲ್ಲ.
ಇಷ್ಟು ಅವಧಿವರೆಗೆ ಗೈರಾಗುವ ಅವಕಾಶಗಳಿವೆಯೇ? ಅಷ್ಟು ದಿನ ರಜೆ ಕೊಡುವ ಅನುಮತಿ ಇದೆಯೇ? :ಡಿಪೋ ಮ್ಯಾನೇಜರ್ ಹರೀಶ್ ಕರಾಮತ್ತು? ಚಾಲಕರಾಗಿರುವ ಚಂದ್ರು (ಬಿಲ್ಲೆ ಸಂಖ್ಯೆ 24226) ಇಷ್ಟು ಧೀರ್ಘಾವಧಿಗೆ ಗೈರು ಅಥವಾ ರಜೆ ಮೇಲೆ ತೆರಳೊಕ್ಕೆ ಡಿಪೋ ಮ್ಯಾನೇಜರ್ ಎನಿಸಿಕೊಂಡ ಮೇಲಾಧಿಕಾರಿಯ ಕೃಪಕಟಾಕ್ಷ ವಿಲ್ಲದೆ ಸಾಧ್ಯವೇ ಇಲ್ಲ.ಅನೇಕ ವರ್ಷಗಳಿಂದ ಡಿಪೋ ಪೂರ್ಣಪ್ರಜ್ಞ ಬಡಾವಣೆಯಲ್ಲಿರುವ ಡಿಪೋ 33 ರಲ್ಲಿ ಗೂಟಾ ಹೊಡ್ಕಂಡು ಇರುವ ಹರೀಶ್ ಪರ್ಮಿಷನ್ ಪಡೆಯದೆ ಚಂದ್ರು ಇಷ್ಟು ಧೀರ್ಘಾವಧಿಗೆ ಗೈರಾಗಲು ಸಾಧ್ಯವೇ ಇಲ್ಲ ಎನ್ನುತ್ತಾರೆ ಬಿಎಂಟಿಸಿಯ ಡಿಪೋಗಳಲ್ಲಿ ಕೆಲಸ ಮಾಡುವ ಕೆಲವು ಹೆಸರು ಹೇಳಲಿಚ್ಚಿಸದ ಅಧಿಕಾರಿಗಳು.
ಚಂದ್ರು ಅದೆಂಥಾ ಮೋಡಿ ಮಾಡಿದ್ದಾರೋ ಗೊತ್ತಿಲ್ಲ,ಅವ್ರು ಕೇಳಿದಾಕ್ಷಣ ಮರು ಮಾತನಾಡದೆ ರಜೆಯನ್ನು ಸ್ಯಾಂಕ್ಷನ್ ಮಾಡಿದ್ದಾರೆನ್ನುವ ಆರೋಪ ಡಿಪೋ ಮ್ಯಾನೇಜರ್ ಹರೀಶ್ ಮೇಲಿದೆ.ಚಂದ್ರು ಅವರ ಪ್ರಕರಣದಲ್ಲಿ ಹರೀಶ್ ಸರ್ಕಾರಿ ಸೇವಾನಿಯಾಮವಳಿಗಳನ್ನು ಉಲ್ಲಂಘಿಸಿರುವುದು ಮೇಲ್ನೋಟಕ್ಕೆ ಸ್ಪಷ್ಟ.
ಚಂದ್ರು ಮುಷ್ಕರದ ಹೆಸರಲ್ಲಿ ಡಿಪೋದಲ್ಲಿರುವ ಕಾರ್ಮಿಕರನ್ನು ಎತ್ತಿ ಕಟ್ಟಿ ಡಿಪೋ ಒಳಗೆ ಮುಷ್ಕರ ಮಾಡಿಸೊಕ್ಕೆ, ವಡೆ-ಬೋಂಡಾ ಭಜ್ಜಿ ತಯಾರಿಸುವ ಮೂಲಕ ಸಂಸ್ಥೆ ವಿರುದ್ದ ಆಕ್ರೋಶ ವ್ಯಕ್ತಪಡಿಸೊಕ್ಕೆ ವೇದಿಕೆ ಸೃಷ್ಟಿಸಿಕೊಡುತ್ತಾರೆಂದ್ರೆ ಅದಕ್ಕೆ ಅವಕಾಶ ಮಾಡಿಕೊಟ್ಟ ಹರೀಶ್ ವಿರುದ್ಧ ಮೊದಲು ಶಿಸ್ತು ಕ್ರಮ ಜರುಗಿಸ್ಬೇಕಾಗುತ್ತೆ.ಆದ್ರೆ ಅದ್ಯಾವ ಕಾರಣಕ್ಕೆ ಹರೀಶ್ ಅವರ ವಿರುದ್ಧ ಮೇಲಾಧಿಕಾರಿಗಳು ಕ್ರಮ ಜರುಗಿಸಲು ಹಿಂದೇಟು ಹಾಕುತ್ತಿದ್ದಾರೋ ಗೊತ್ತಾಗುತ್ತಿಲ್ಲ.
ಕೆಲವು ಮೂಲಗಳ ಪ್ರಕಾರ ನಾವು ಹೇಳಿದಂತೆ ಕೇಳಿಕೊಂಡು ಸಹಕರಿಸಿದ್ದೇ ಆದಲ್ಲಿ ಮುಂದೆ ನಿಮಗೆ ಎಂತಹುದೇ ಸಮಸ್ಯೆ ಎದುರಾದ್ರೂ ನಿಮ್ಮ ಬೆಂಬಲಕ್ಕೆ ನಾವಿರುತ್ತೇವೆ.. ಹೆದರಬೇಡಿ ಎಂದು ಚಂದ್ರು ಭರವಸೆ ನೀಡಿರುವುದರಿಂದಲೇ ಹರೀಶ್ ಡಿಪೋದ ಒಳಗೆ ಹಾಗೂ ಹೊರಗೆ ಇಲಾಖೆಯ ಶಿಸ್ತುನಿಯಾಮವಳಿಗೆ ವ್ಯತಿರಿಕ್ತವಾದ ಬೆಳವಣಿಗೆಗಳಾಗೊಕ್ಕೆ ಅವಕಾಶ ಮಾಡಿಕೊಟ್ಟಿದ್ದಾರೆನ್ನುವ ಆರೋಪ ಡಿಪೋದಲ್ಲಿ ಕೆಲಸ ಮಾಡುತ್ತಾ ಹರೀಶ್ ರಿಂದ ನೊಂದಿರುವ ಸಾಕಷ್ಟು ಕಾರ್ಮಿಕರದ್ದು.( ಡಿಪೋ ಮ್ಯಾನೇಜರ್ ಹರೀಶ್ ತಮ್ಮ ಸೇವಾವಧಿಯಲ್ಲಿ ಮಾಡಿರುವ ದಂಡಿಯಷ್ಟು ಅಕ್ರಮ-ಭ್ರಷ್ಟಾಚಾರ ಆರೋಪಗಳ ಸಮಗ್ರ ಸುದ್ದಿಯನ್ನು ಕನ್ನಡ ಫ್ಲಾಶ್ ನ್ಯೂಸ್ ಮುಂದಿನ ದಿನಗಳಲ್ಲಿ ಸವಿವರವಾಗಿ ಪ್ರಕಟಿಸಲಿದೆ.)


ಮುಷ್ಕರದಲ್ಲಿ ಪಾಲ್ಗೊಂಡ ಕಾರ್ಮಿಕರು ವಜಾಗೊಳ್ತಾರೆ..ಮುಷ್ಕರ ರೂಪಿಸಿದ ಚಂದ್ರುವಿಗೇಕೆ ಶಿಕ್ಷೆಯಿಲ್ಲ:ಇದು ಸಾರಿಗೆ ಮುಷ್ಕರಕ್ಕೆ ಬೆಂಬಲ ಕೊಟ್ಟುಅದರ ಪರಿಣಾಮವಾಗಿ ಕೆಲಸ ಕಳೆದುಕೊಂಡ, ಸಾವಿರಾರು ಕಾರ್ಮಿಕರು ಇವತ್ತು ಮಾಡುತ್ತಿರುವ ಪ್ರಶ್ನೆ.ಮುಷ್ಕರದಲ್ಲಿ ಪಾಲ್ಗೊಂಡ ನಾವು ತಪ್ಪಿತಸ್ಥರಾಗುತ್ತೇವೆ.ಅದರ ಪರಿಣಾಮವಾಗಿ ನಮ್ಮನ್ನು ಕೆಲಸದಿಂದ ವಜಾಗೊಳಿಸಲಾಗುತ್ತೆ.ಆದ್ರೆ ಮುಷ್ಕರ ರೂಪಿಸಿದ ಸೃಷ್ಟಿಕರ್ತ ಚಂದ್ರು ವಿರುದ್ಧ ಒಂದೇ ಒಂದು ಶಿಸ್ತುಕ್ರಮ ಜಾರಿಯಾಗೊಲ್ಲ ಎಂದ್ರೆ ಇದೇನ್ ಅರ್ಥ..
ಈ ಬೆಳವಣಿಗೆ ,ಇಲಾಖೆ ಹಾಗೂ ಸರ್ಕಾರ ಕಾರ್ಮಿಕರ ವಿಷಯದಲ್ಲಿ ತೋರುತ್ತಿರುವ ದೊಡ್ಡ ತಾರತಮ್ಯಕ್ಕೆ ಸಾಕ್ಷಿಯಲ್ವೇ ಎಂದು ಪ್ರಶ್ನಿಸ್ತಾರೆ.ನಮ್ಮನ್ನು ನೀರಿನ ಆಳ ತೋರಿಸುವುದಾಗಿ ಇಳಿಸಿ ಸಂಪೂರ್ಣ ಮುಳುಗಿಸಿಬಿಟ್ಟ ಚಂದ್ರು ಎಂದು ಇವತ್ತಿಗೂ ಕಣ್ಣೀರು ಹಾಕುವ ಕಾರ್ಮಿಕರು ದಿನನಿತ್ಯ ವಿಧಾನಸೌಧ ಹಾಗೂ ಬಿಎಂಟಿಸಿ ಕೇಂದ್ರ ಕಚೇರಿ ಮುಂದೆ ಕುಟುಂಬಸಮೇತರಾಗಿ ನೌಕರಿ ಗಿಟ್ಟಿಸಿಕೊಳ್ಳಲು ಪಡೋ ಹರಸಾಹಸ ನೋಡಿದ್ರೆ ಬೇಸರವಾಗುತ್ತದೆ ಎನ್ನುತ್ತಾರೆ ಬಿಎಂಟಿಸಿಯ ಹಿರಿಯ ಅಧಿಕಾರಿಗಳು.
ತಪ್ಪಿತಸ್ಥರ ವಿರುದ್ಧ ಶಿಸ್ತು ಕ್ರಮ ತೆಗೆದುಕೊಳ್ಳುವುದರಲ್ಲಿ ಮೀನಾಮೇಷ ಎಣಿಸದ ಖಡಕ್ ಅಧಿಕಾರಿಗಳೆನಿಸಿ ಕೊಂಡಿರುವ ಎಂಡಿ ಶಿಖಾ ಮೇಡಮ್ ಹಾಗೂ ಶಿಸ್ತುಪಾಲನಾ ಮೇಲಾಧಿಕಾರಿ ಡಾ.ಅರುಣ್ ಅವರು ಚಂದ್ರು ಹಾಗೂ ಇತರೆ ಕಾರ್ಮಿಕರ ವಿಷಯದಲ್ಲಾ ಗಿರುವ ಬಹುದೊಡ್ಡ ತಾರತಮ್ಯವನ್ನು ಸರಿಪಡಿಸೊಕ್ಕೆ ಹಿಂದೇಟು ಹಾಕುತ್ತಿದ್ದಾರೋ ಗೊತ್ತಾಗ್ತಿಲ್ಲ ಎನ್ನೋದು ಸಾರಿಗೆ ಕಾರ್ಮಿಕರ ಯೂನಿಯನ್ ಗಳ ಪ್ರಶ್ನೆ.
ಕೆಎಸ್ ಆರ್ ಟಿಸಿ ಲೀವ್ ರೂಲ್ಸ್ ಏನೇಳುತ್ತೆ:ಕಾರ್ಮಿಕ ಕಾಯ್ದೆಗೊಳಪಡುವ ಪ್ರಾಧಿಕಾರಿಗಳು ಅಥವಾ ನಿಗಮಗಳಿಗೆ ಅನ್ವಯವಾಗುವಂತೆ ಕೆಎಸ್ ಆರ್ ಟಿಸಿ ಹಾಗೂ ಇತರೆ 3 ಸಾರಿಗೆ ನಿಗಮಗಳಿಗೆ ಇರುವ ಲೀವ್ ರೂಲ್ಸ್ ಪ್ರಕಾರ ಚಂದ್ರಶೇಖರ್ ಇಷ್ಟು ಧೀರ್ಘಾವಧಿ ಗೈರಾಗಿರುವುದು ಅಕ್ಷಮ್ಯ ಎನ್ನಲಾಗುತ್ತೆ.ಇಷ್ಟು ದಿನಗಳವರೆಗೆ ರಜೆ ಕೊಡುವ ಅವಕಾಶವಂತೂ ಮೊದಲೇ ಇಲ್ಲವಂತೆ.ಮೇಲಾಧಿಕಾರಿ ಎನಿಸಿಕೊಂಡಾತ ಇದಕ್ಕೆ ಅವಕಾಶ ಕೊಡುವಂತಿಲ್ಲ.ಇಂಥಾ ಬೆಳವಣಿಗೆಗಳಾದ ಪಕ್ಷದಲ್ಲಿ ಅಂಥಾ ಕಾರ್ಮಿಕನ ವಿರುದ್ಧ ಮೇಲಾಧಿಕಾರಿಗಳಿಗೆ ದೂರು ನೀಡಬೇಕಾಗಿದ್ದುದು ಡಿಪೋ ಮ್ಯಾನೇಜರ್ ಬಾಧ್ಯಸ್ಥಿಕೆ ಕೂಡ.ಆದ್ರೆ ಚಂದ್ರಶೇಖರ್ ಇಷ್ಟೆಲ್ಲಾ ಸೇವಾನಿಯಾಮವಳಿ ಉಲ್ಲಂಘಿಸಿದ್ದರೂ ಮೇಲಾಧಿಕಾರಿಗಳ ಗಮನಕ್ಕೆ ಹರೀಶ್ ತಾರದಿರುವುದು ಚಂದ್ರಶೇಖರ್ ಅವರಷ್ಟೇ ಡಿಪೋ ಮ್ಯಾನೇಜರ್ ಕೂಡ ತಪ್ಪಿತಸ್ಥರೆನ್ನುವುದನ್ನು ಸಾರಿ ಹೇಳುತ್ತದೆ ಎನ್ನುತ್ತಾರೆ ಕೆಎಸ್ ಆರ್ ಟಿಸಿ (ಎಐಟಿಯುಸಿ) ರಾಜ್ಯಾಧ್ಯಕ್ಷ ಅನಂತ ಸುಬ್ಬರಾವ್.

ಅನಾರೋಗ್ಯ ಸಂಬಂಧಿ ರಜೆ ಮೇಲೆ ಗೈರಾಗಲು ಅವಕಾಶವಿದೆಯೇ?: ಇದು ಕೂಡ ನಮ್ಮನ್ನು ಕಾಡಿದ ಮತ್ತೊಂದು ಪ್ರಶ್ನೆ,ತಪ್ಪಿನಿಂದ ತಪ್ಪಿಸಿಕೊಳ್ಳಲು ಅನಾರೋಗ್ಯದ ಕಾರಣವನ್ನುಚಂದ್ರಶೇಖರ್ ಮುಂದೊಡ್ಡಿ ರಜೆ ಪಡೆದಿರಬಹುದೇ? ಈ ಬಗ್ಗೆಯೂ ಲೀವ್ ರೂಲ್ಸ್ ಪ್ರತ್ಯೇಕವಾದ ಉಲ್ಲೇಖ ನೀಡುತ್ತದೆ.
ಇಷ್ಟು ಧೀರ್ಘಾವಧಿಗೆ ಗೈರಾಗಿದ್ದಲ್ಲಿ ಅಥವಾ ರಜೆ ನೀಡಿದ್ದೇ ಆಗಿದ್ದಲ್ಲಿ ಅದಕ್ಕೆ ಅಗತ್ಯವಾದ ಡಾಕ್ಟರ್ ದೃಢೀಕರಣ ಪತ್ರವನ್ನು ಕಾರ್ಮಿಕ ಸಲ್ಲಿಸಬೇಕಾಗುತ್ತೆ.ಆದ್ರೆ ದೃಢೀಕರಣ ಪತ್ರ ಚಂದ್ರಶೇಖರ್ ಸಲ್ಲಿಸಿದ್ದಾರಾ..? ಖಂಡಿತಾ ಈ ಬಗ್ಗೆ ಅನುಮಾನಗಳಿವೆ. ಇಲ್ಲಿ ಕಾಡುವ ಮತ್ತೊಂದು ಪ್ರಶ್ನೆ ಎಂದ್ರೆ ಒಂದ್ವೇಳೆ ಅನಾರೋಗ್ಯದ ನೆವ ಮುಂದಿಟ್ಟುಕೊಂಡು ರಜೆ ಪಡೆದಿದ್ದಾರೆ ಎಂದುಕೊಳ್ಳೋಣ,ಆಗ ಚಂದ್ರಶೇಖರ್ ರಜೆ ಪಡೆದು ರೆಸ್ಟ್ ನಲ್ಲಿರಬೇಕಿತ್ತು.ಆದ್ರೆ ಹಾಗಾಗಿಲ್ಲವೇ? ಈ ಅವಧಿಯಲ್ಲಿ ಚಂದ್ರಶೇಖರ್ ಮುಷ್ಕರದ ಹುರುಪಿನಲ್ಲಿ ತಮ್ಮ ಕೂಟವನ್ನು ಕಟ್ಟಿಕೊಂಡು ರಾಜ್ಯ ಪ್ರವಾಸದಲ್ಲಿದ್ದರು. ಡಿಪೋಗಳ ಮುಂದೆ ಮೀಟಿಂಗ್ ಮಾಡಿ ಅಮಾಯಕ ಕಾರ್ಮಿಕರನ್ನು ಸಂಘಟಿಸುವ ಕೆಲಸಕ್ಕೆ ಮುಂದಾಗಿದ್ದರು.ಸೋ, ಅವರ ಆರೋಗ್ಯ ಹದಗೆಟ್ಟಿರಲಿಲ್ಲ ಎನ್ನುವುದನ್ನುಈ ಸಾರಿ ಹೇಳುತ್ತದೆ.

ರಜೆಯನ್ನು ಅಧೀಕೃತವಾಗಿ ನೀಡಿದ್ದರೂ ಆ “ರಜೆ”ಯನ್ನು ಇಲಾಖೆ ವಿರುದ್ಧದ ಚಟುವಟಿಕೆಗೆ ಬಳಸಿಕೊಂಡಿದ್ದೂ ತಪ್ಪಂತೆ..?: ಇನ್ನೂ ಒಂದು ಹೆಜ್ಜೆ ಮುಂದ್ಹೋಗಿ ಆಲೋಚಿಸೋಣ,ರಾಜ್ಯ ಪ್ರವಾಸದಲ್ಲಿದ್ದು ಡಿಪೋಗಳ ಮುಂದೆ ಮೀಟಿಂಗ್ ಮಾಡಿದ್ದು ಸರಿಯೇ ಎಂದಿಟ್ಟುಕೊಳ್ಳೋಣ,ಆದ್ರೆ ಅವರ ಉದ್ದೇಶ ಏನಾಗಿತ್ತೆನ್ನುವುದನ್ನು ಆಲೋಚಿಸಬೇಕಾಗುತ್ತದೆ.
ಚಂದ್ರಶೇಖರ್ ಮುಷ್ಕರಕ್ಕೆ ಮೀಟಿಂಗ್ ಮಾಡಿದ್ದು,ಕಾರ್ಮಿಕರನ್ನು ಸಂಘಟಿಸಿದ್ದು ಸರ್ಕಾರಿ ನೌಕರಿ ಮಾನ್ಯತೆಗಾಗಿ..ಅದು ಸರ್ಕಾರ ಹಾಗೂ ಇಲಾಖೆಗಳ ವಿರುದ್ಧವಾದ ಹೋರಾಟವಾಗಿತ್ತಲ್ವಾ..? ಇಲಾಖೆ ವಿರುದ್ಧ ಕಾರ್ಮಿಕರನ್ನು ಎತ್ತಿಕಟ್ಟುವುದು ಕಾನೂನುಸಮ್ಮತವೇ? ಅದನ್ನು ಗಮನಿಸುವ ಕೆಲಸವನ್ನು ಡಿಪೋ ಮ್ಯಾನೇಜರ್ ಗಳು ಅಂದಂದೆ ಮಾಡಿದ್ದರೆ ಮುಷ್ಕರದಂಥ ಭೂತ ವರ್ಷವಿಡೀ ಕಾಡುತ್ತಿರಲಿಲ್ಲ.
ಚಂದ್ರಶೇಖರ್ ವಿರುದ್ಧ ಅಂದೇ ಅವರ ಕಸ್ಟೋಡಿಯನ್ ಆಗಿರುವ ಹರೀಶ್ ಮೇಲಾಧಿಕಾರಿಗಳ ದೂರು ನೀಡಿದ್ದರೆ ಅಂದೇ ಚಂದ್ರಶೇಖರ್ ಕಿವಿ ಹಿಂಡಬಹುದಾಗಿತ್ತೇನೋ?ಆದ್ರೆ ಹೋಗಿಬಂದಲೆಲ್ಲಾ ಡಿಪೋ ಮ್ಯಾನೇಜರ್ ಗಳೆಲ್ಲಾ ನಮಗೆ ಬೆಂಬಲವಾಗಿದ್ದಾರೆ ಎಂದು ಚಂದ್ರಶೇಖರ್ ಹೇಳಿದ್ರೆ ಡಿಪೋ ಮ್ಯಾನೇಜರ್ಸ್ ಎಲ್ಲಿ ಕ್ರಮ ಕೈಗೊಳ್ತಾರೆ ಹೇಳಿ.. ಚಂದ್ರಶೇಖರ್ ಮುಷ್ಕರದ ಹಿಂದೆ ಇಲಾಖೆ ಅಧಿಕಾರಿಗಳೇ ಬೆಂಗಾವಲಾಗಿ ನಿಂತಿದ್ದರೆನ್ನುವ ಆರೋಪ ಕೇಳಿಬರೊಕ್ಕೆ ಕಾರಣವಾಗಿದ್ದು ಇದೇ ಬೆಳವಣಿಗೆ.
ಡಿಪೋ ಮ್ಯಾನೇಜರ್ ಹರೀಶ್,ಚಂದ್ರಶೇಖರ್ ವರ್ತನೆಯನ್ನು ಮೇಲಾಧಿಕಾರಿಗಳ ಗಮನಕ್ಕೆ ತರುವ ಕೆಲಸ ಮಾಡಿದ್ದರೆ ಮುಷ್ಕರವೇ ರೂಪುಗೊಳ್ಳುತ್ತಿರಲಿಲ್ಲ ಎನ್ನುವ ಮಾತುಗಳಿವೆ. ಆದರೆ ಅವರು ಕೊಟ್ಟ ಸದರ ಹಾಗೂ ಸಹಕಾರದಿಂದಲೇ ಇಲಾಖೆ ಹಿಂದೆಂದೂ ಎದುರಿಸದಂಥ ಮುಷ್ಕರ ಹಾಗೂ ಮುಜುಗರವನ್ನು ಅನುಭವಿಸಬೇಕಾಗಿ ಬಂದಿದ್ದು ದುರಂತ.ಹಾಗಾಗಿ ಚಂದ್ರಶೇಖರ್ ಗಿಂತ ಮುನ್ನ ಮೊದಲು ಶಿಸ್ತು ಕ್ರಮ ಜಾರಿಯಾಗಬೇಕಿದ್ದುದು ಡಿಪೋ ಮ್ಯಾನೇಜರ್ ಹರೀಶ್ ವಿರುದ್ಧ.ಆದ್ರೆ ಶಿಖಾ ಮೇಡಮ್ ಹಾಗೂ ಡಾ.ಅರುಣ್ ಏಕೆ ಇಂತದ್ದೊಂದು ಬೋಲ್ಡ್ ಸ್ಟೆಪ್ ತೆಗೆದುಕೊಳ್ಳಲಿಲ್ಲವೋ ಗೊತ್ತಾಗ್ತಿಲ್ಲ.ಇಲಾಖೆಯಲ್ಲಿ ಆಂತರಿಕ ಶಿಸ್ತು,ಸಂಯಮ,ಪಾರದರ್ಶಕತೆ ತರೊಕ್ಕೆ ನಿರಂತರವಾಗಿ ಶ್ರಮಿ ಸುತ್ತಿರುವ ಜೋಡೆತ್ತುಗಳಾದ ಶಿಖಾ ಹಾಗೂ ಡಾ.ಅರುಣ್ ಅವರಿಂದ ಕಾರ್ಮಿಕರು ಈ ಕ್ಷಣಕ್ಕೂ ಸಾಮಾಜಿಕ ನ್ಯಾಯದ ನಿರೀಕ್ಷೆಯಲ್ಲಿದ್ದಾರೆ.
365 ದಿನಗಳಲ್ಲಿ ಕೇವಲ 63 ದಿನ ಕೆಲಸಕ್ಕೆ ಹಾಜರಾಗಿ ಇಲಾಖೆ ನಿಯಾಮವಳಿಗಳನ್ನು ಧಿಕ್ಕರಿಸಿದ ಚಂದ್ರಶೇಖರ್ ಅವರ ಅಗತ್ಯ ಇಲಾಖೆಗಿದೆಯೋ? ಅಥವಾ ಚಂದ್ರು ಮಾತು ಕೇಳಿ ಹಾಳಾದೆವು,ಮಾಡಿದ ತಪ್ಪನ್ನು ಕ್ಷಮಿಸಿ, ಕೆಲಸಕ್ಕೆ ಸೇರಿಸಿಕೊಳ್ಳಿ,ನೀಯತ್ತಾಗಿ ಕೆಲಸ ಮಾಡಿಕೊಂಡಿರುತ್ತೇವೆಂದು ಅಂಗಲಾಚುತ್ತಿರುವ ಸಾವಿರಾರು ಅಮಾಯಕ ನೌಕರರು ಬೇಕೋ ಎನ್ನುವುದನ್ನು ಶಿಖಾ ಮೇಡಮ್ ಹಾಗೂ ಡಾ.ಅರುಣ್ ಅವ್ರೇ ನಿರ್ಧರಿಸಬೇಕಿದೆ.