ಸಿಲಿಕಾನ್ ಸಿಟಿಯಲ್ಲಿ ಲಾಕ್ಡೌನ್ನಿಂದ ಇಳಿಕೆ ಕಂಡಿದ್ದ ವಾಯುಮಾಲಿನ್ಯ ಪ್ರಮಾಣ ಅನ್ಲಾಕ್ ಆದ ಒಂದೇ ವಾರದೊಳಗೆ ಶೇಕಡಾ 30 ರಿಂದ 50ರಷ್ಟು ಹೆಚ್ಚಳ..!
ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಎರಡನೇ ಅಲೆಯನ್ನು ನಿಯಂತ್ರಿಸುವುದಕ್ಕಾಗಿ ಸರ್ಕಾರ ಲಾಕ್ಡೌನ್ ಘೋಷಿಸಿತ್ತು. ಪರಿಣಾಮ ಬೆಂಗಳೂರಿನಲ್ಲಿ ವಾಹನ ಸಂಚಾರ ಹೆಚ್ಚಾಗೇನೂ ಇರಲ್ಲಿಲ್ಲ. ಜನ ಅತೀ ಅವಶ್ಯಕತೆ ಇದ್ದರೆ ಮಾತ್ರ ರಸ್ತೆಗಿಳಿಯುತ್ತಿದ್ದರು. ಇದರಿಂದ ನಗರದಲ್ಲಿ ವಾಯುಮಾಲಿನ್ಯ ತಗ್ಗಿತ್ತು.
ಈಗ ರಾಜ್ಯದಲ್ಲಿ ಕೊರೊನಾ ನಿಯಂತ್ರಣಕ್ಕೆ ಬಂದಿದ್ದು, ರಾಜ್ಯ ಅನ್ಲಾಕ್ ಆಗಿದೆ. ಬೆಂಗಳೂರಲ್ಲಿ ಹೆಚ್ಚು ವಾಹನಗಳು ಓಡಾಡುತ್ತಿವೆ. ಹಾಗಾಗಿ ಲಾಕ್ಡೌನ್ನಿಂದ ನಗರದಲ್ಲಿ ಇಳಿಕೆ ಕಂಡಿದ್ದ ಗಾಳಿಯ ಗುಣಮಟ್ಟದ ಸೂಚ್ಯಂಕವು ಲಾಕ್ಡೌನ್ ಸಡಿಲಿಕೆಯಾದ ಒಂದೇ ವಾರದೊಳಗೆ ಶೇಕಡಾ 30 ರಿಂದ ಶೇಕಡಾ 50ರಷ್ಟು ಹೆಚ್ಚಳವಾಗಿದೆ. ಇದರಿಂದಾಗಿ ವಾಯುಮಾಲಿನ್ಯದ ಮಟ್ಟ ಮತ್ತೆ ಏರುಗತಿ ಪಡೆದಿದೆ.
ರಾಜ್ಯದಲ್ಲಿ ಕೋವಿಡ್ ಎರಡನೇ ಅಲೆ ವೇಗವಾಗಿ ಹರಡುತ್ತಿದ್ದುದ್ದರಿಂದ ಸರ್ಕಾರ ಕಳೆದ ಏಪ್ರಿಲ್ 10 ರಂದು ನೈಟ್ ಕರ್ಫ್ಯೂ ಮತ್ತು ವೀಕೆಂಡ್ ಕರ್ಫ್ಯೂ ವಿಧಿಸಿತ್ತು. ಮುಂದೆ ಕೋವಿಡ್ ತಾಂತ್ರಿಕ ಸಲಹಾ ಸಮಿತಿಯ ಮೇರೆಗೆ ಮೇ 10 ರಂದು ಸರ್ಕಾರ ರಾಜ್ಯದಲ್ಲಿ ಸಂಪೂರ್ಣ ಲಾಕ್ಡೌನ್ ಘೋಷಿಸಿತ್ತು. ಹಾಗಾಗಿ ಬೆಂಗಳೂರಲ್ಲಿ ವಾಹನ ಸಂಚಾರಕ್ಕೆ ಬ್ರೇಕ್ ಬಿದ್ದಿತ್ತು. ಲಾಕ್ಡೌನ್ ನಿಂದ ನಗರದಲ್ಲಿನ ಬಹುತೇಕ ಚಟುವಟಿಕೆಗಳು ನಿಂತುಹೋಗಿದ್ದವು. ಇದರಿಂದ ಎಕ್ಯುಐ ಶೇಕಡಾ 50 ರಿಂದ ಶೇಕಡಾ 70ರ ವರೆಗೂ ಇಳಿಕೆ ಕಂಡು ಗಾಳಿ ಶುದ್ಧಗೊಂಡಿತ್ತು.
ಜೂನ್ 21ರಿಂದ ರಾಜ್ಯದಲ್ಲಿ ಎರಡನೇ ಹಂತದ ಅನ್ಲಾಕ್ ಜಾರಿಯಲ್ಲಿದೆ. ಪರಿಣಾಮ ವಾಹನಗಳ ಸಂಚಾರ ಒಂದೇ ಬಾರಿಗೆ ಹೆಚ್ಚಾಗಿದ್ದು, ಮೈಸೂರು ರೋಡ್, ತುಮಕೂರ್ ರೋಡ್ ಸೇರಿದಂತೆ ಕೆಲವೆಡೆ ಬೆಳಗ್ಗೆ ಮತ್ತು ಸಂಜೆ ಹೊತ್ತಿಗೆ ವಾಹನ ದಟ್ಟನೆಯಾಗ್ತಿದೆ. ಇದರಿಂದ ಲಾಕ್ಡೌನ್ ನಲ್ಲಿ ಇಳಿಕೆ ಕಂಡಿದ್ದ ಗಾಳಿಯ ಗುಣಮಟ್ಟ ರಾಜ್ಯ ಅನ್ಲಾಕ್ ಆಗತ್ತಿದ್ದಂತೆ ಒಂದೇ ವಾರದಲ್ಲಿ ಮತ್ತೆ ಏರುಗತಿ ಪಡೆದಿದೆ.