ಕೊರೊನಾದಿಂದ ಸಂಕಷ್ಟಕ್ಕೆ ಸಿಲುಕಿರುವ ಕಲಾವಿದರಿಗೆ ನೆರವಾಗಲು ಮುಂದಾದ ಗಾಯಕ ವಿಜಯ್ ಪ್ರಕಾಶ್ ನೇತೃತ್ವದ “ಕಲಾನಿಧಿ” ತಂಡ..
ಕೋವಿಡ್ ಎರಡನೇ ಅಲೆಯಿಂದಾಗಿ ರಾಜ್ಯದ ಜನತೆ ತೀರಾ ಸಂಕಷ್ಟಕ್ಕೆ ಸಿಲುಕಿದ್ದಾರೆ. ಹಾಗೆಯೇ ಕಲಾವಿದರೂ ಸಹ ಕೊರೊನಾ ಸಂದರ್ಭದಲ್ಲಿ ಶೂಟಿಂಗ್ ಇಲ್ದೇ ಕಷ್ಟ ಪಡುತ್ತಿದ್ದು, ಇವರಿಗೆ ಗಾಯಕ ವಿಜಯ್ ಪ್ರಕಾಶ್ ನೇತೃತ್ವದ ತಂಡ ಸಹಾಯ ಹಸ್ತ ಚಾಚಲು ಮುಂದಾಗಿದೆ.
ಹೌದು. ಕೊರೊನಾದಿಂದ ಸಂಕಷ್ಟಕ್ಕೆ ಸಿಲುಕಿರುವ ಕಲಾವಿದರಿಗೆ ನೆರವಾಗಲು ನಿಧಿ ಸಂಗ್ರಹಿಸುವ ಉದ್ದೇಶದಿಂದ ಗಾಯಕರು, ಸಂಗೀತ ನಿರ್ದೇಶಕರು, ಸೇರಿ, ಸಂಸದರ ಹಾಗೂ ಸಚಿವರ ಸಹಯೋಗದೊಂದಿಗೆ ‘ಕಲಾನಿಧಿ’ ಕಾರ್ಯಕ್ರಮ ನಡೆಸುತ್ತಿದ್ದಾರೆ. ಗಾಯಕ ವಿಜಯ್ಪ್ರಕಾಶ್ ನೇತೃತ್ವದಲ್ಲಿ ಡಿಸಿಎಂ ಅಶ್ವತ್ ನಾರಾಯಣ ಹಾಗೂ ಸಂಸದ ತೇಜಸ್ವಿ ಸೂರ್ಯ ಅವರ ಸಹಾಯದೊಂದಿಗೆ ಈ ಕಾರ್ಯಕ್ರಮ ನಡೆದಿದ್ದು, ಇದೇ ತಿಂಗಳ 25-27ರ ಅವಧಿಯಲ್ಲಿ ಕಲಾನಿಧಿ ಕಾರ್ಯಕ್ರಮ ಪ್ರಸಾರವಾಗಲಿದೆ.
ವಿಜಯ್ಪ್ರಕಾಶ್, ಶಂಕರ್ ಮಾಹದೇವನ್ , ರಘು ದೀಕ್ಷಿತ್, ಸೋನು ನಿಗಮ್, ಅರ್ಜುನ್ ಜನ್ಯ, ವಿದ್ಯಾಭೂಷನ್, ರಾಜೇಶ್ ಕೃಷ್ಣನ್, ಸಂಜಿತ್ ಹೆಗ್ಡೆ, ಹರಿಹರನ್, ಗುರುಕಿರಣ್, ಅನುರಾಧ ಭಟ್ ಸೇರಿದಂತೆ ಇನ್ನೂ ಅನೇಕ ಗಾಯಕರು ಹಾಗೂ ಸಂಗೀತ ನಿರ್ದೇಶಕರು ಕಲಾಪ್ರದರ್ಶನ ನೀಡಲಿದ್ದು, ಈ ಮೂಲಕ ನಿಧಿ ಸಂಗ್ರಹಿಸಿ ಸಂಕಷ್ಟದಲ್ಲಿರುವ ಕಲಾವಿದರಿಗೆ ಸಹಾಯ ಮಾಡಲಿದ್ದಾರೆ.
ಈ ಕುರಿತು ಮಾತನಾಡಿರುವ ಗಾಯಕ ವಿಜಯ್ ಪ್ರಕಾಶ್, ‘ಈ ಕಲಾನಿಧಿಯ’ ನಿಧಿ ಕಲಾವಿದರಿಗೆ ಸೇರಲಿದೆ. ಕೊರೊನಾದಿಂದ ಸಾಕಷ್ಟು ಜನ ಕಷ್ಟದಲ್ಲಿ ಸಿಲುಕಿದ್ದು, ಇವರಲ್ಲಿ ಕಲಾವಿದರೂ ಸಹ ಒಬ್ಬರು. ಕಲಾನಿಧಿ ಕಾರ್ಯಕ್ರಮಕ್ಕೆ ಕಲಾವಿದರ್ಯಾರು ಸಂಭಾವನೆ ಪಡೆಯದೇ ಹಾಡಿದ್ದು, ಇದರಿಂದ ಸಂಗ್ರಹವಾಗುವ ನಿಧಿಯನ್ನು ಕಲಾವಿದರಿಗೆ ಹಂಚಲಾಗುತ್ತದೆ. ಜನರು ಐದು ರೂಪಾಯಿ ಕೊಟ್ರೂ ಅದು ಮಹಾ ದೇಣಿಗೆಯಾಗುತ್ತೆ ಎಂದು ಹೇಳಿದ್ದಾರೆ. ಕಲಾನಿಧಿ ಕಾರ್ಯಕ್ರಮ ಈಗಾಗಲೇ ನಡೆದಿದ್ದು, ಕಾರ್ಯಕ್ರಮದ ಪ್ರಸಾರ ಜೂನ್ 25 ಅಂದರೆ ಇಂದಿನಿಂದ ಪ್ರಾರಂಭವಾಗಲಿದೆ.