“ವೀಕೆಂಡ್ ಕರ್ಫ್ಯೂ”ನಲ್ಲೂ ರಸ್ತೆಗಿಳಿಯಲಿವೆ ಬಿಎಮ್ಟಿಸಿ, ಕೆಎಸ್ಆರ್ಟಿಸಿ ಬಸ್ಗಳು..!
ಬೆಂಗಳೂರು: ರಾಜ್ಯದಲ್ಲಿ ಸದ್ಯ ಎರಡನೇ ಹಂತದ ಅನ್ಲಾಕ್ ಜಾರಿಯಲ್ಲಿದೆ. ಹಾಗೆಯೇ ಇಂದು ಸಂಜೆಯಿಂದ ಕರ್ನಾಟಕದಲ್ಲಿ ವಾರಾಂತ್ಯ ಕರ್ಫ್ಯೂ ಜಾರಿಯಾಗುತ್ತಿದ್ದು, ಜನ ಅಗತ್ಯ ಇದ್ದರೆ ಮಾತ್ರ ರಸ್ತೆಗಿಳಿಯಬೇಕಿದೆ. ಇನ್ನು ವಾರಾಂತ್ಯದಲ್ಲಿ ಬಸ್ ಸಂಚಾರ ಇರುತ್ತೋ ಇಲ್ಲವೋ ಎಂಬ ಗೊಂದಲವಿತ್ತು. ಇದೀಗ ವೀಕೆಂಡ್ ಕರ್ಫ್ಯೂನಲ್ಲಿಯೂ ಬಿಎಮ್ಟಿಸಿ, ಕೆಎಸ್ಆರ್ಟಿಸಿ ಬಸ್ ಸಂಚಾರ ಇರುತ್ತದೆಂದು ತಿಳಿದುಬಂದಿದೆ.
ಜನರ ಅನುಕೂಲಕ್ಕಾಗಿ ವೀಕೆಂಡ್ ಕರ್ಫ್ಯೂನಲ್ಲಿಯೂ ಬೆಳಗ್ಗೆ 6ರಿಂದ ಸಾಯಂಕಾಲ 7 ಗಂಟೆಯವರೆಗೂ ಬಿಎಮ್ಟಿಸಿ ಬಸ್ ಸಂಚಾರ ಇರಲಿದೆ. ಬಿಎಂಟಿಸಿ ಕಡೆಯಿಂದ ಪ್ರಯಾಣಿಕರಿಗೆ ಯಾವುದೇ ನಿರ್ಬಂಧವಿರುವುದಿಲ್ಲ, ಜನರು ಕೆಲಸ, ಕಚೇರಿಗಳಿಗೆ ನಾಳೆಯೂ ಓಡಾಟ ನಡೆಸಬಹುದು. ಆದ್ದರಿಂದ ಬಸ್ ಸಂಚಾರಕ್ಕೆ ನಿರ್ಬಂಧ ಹೇರಲು ಸಾಧ್ಯವಿಲ್ಲ, ಜನರು ಅವರ ಅಗತ್ಯತೆಯ ಮೇರೆಗೆ ಸಂಚಾರ ನಡೆಸಬೇಕು ಎಂದು ತಿಳಿಸಲಾಗಿದೆ.
ಅಲ್ಲದೇ ನಾಳೆ ವೀಕೆಂಡ್ ಕರ್ಫ್ಯೂ ಜಾರಿಯಲ್ಲಿರುವುದರಿಂದ ಸದರಿ ಅವಧಿಯಲ್ಲಿ ದಿನನಿತ್ಯದ ಖರೀದಿ, ಔಷಧಿಗಳು, ಇನ್ನಿತರೆ ವಸ್ತುಗಳನ್ನು ಹೊರತುಪಡಿಸಿ ಉಳಿದೆಲ್ಲಾ ವಾಣಿಜ್ಯ ಚಟುವಟಿಕೆಗಳನ್ನು ಸೇರಿದಂತೆ ಜನರ ಓಡಾಟಕ್ಕೂ ನಿರ್ಬಂಧವಿರುತ್ತದೆ. ಹಾಗಾಗಿ ಬೆಂಗಳೂರಲ್ಲಿ ಬಸ್ ಸಂಚಾರ ಮಾಡುವ ಪ್ರಯಾಣಿಕರ ಸಂಖ್ಯೆ ಕೂಡ ಕಡಿಮೆ ಇರುತ್ತದೆ. ಆದ್ದರಿಂದ ಬಿಎಂಟಿಸಿ ಬಸ್ ಗಳ ಸಂಖ್ಯೆಯನ್ನು ಕಡಿಮೆ ಮಾಡಲು ನಿರ್ಧರಿಸಲಾಗಿದೆ. ಇನ್ನು ಕೆಎಸ್ಆರ್ಟಿಸಿ ಬಸ್ ಕೂಡ ವಾರಾಂತ್ಯದ ಕರ್ಫ್ಯೂನಲ್ಲಿಯೂ ಸಂಚಾರ ನಡೆಸಲಿವೆ ಎಂದು ತಿಳಿದು ಬಂದಿದೆ.