ಬಿಬಿಎಂಪಿ ಮಾಜಿ ಕಾರ್ಪೋರೇಟರ್ ರೇಖಾ ಕದಿರೇಶ್ ಕೊಲೆ ಪ್ರಕರಣ; ಪ್ರಮುಖ ಆರೋಪಿಗಳಾದ ಪೀಟರ್, ಹಾಗೂ ಸೂರ್ಯನ ಕಾಲಿಗೆ ಗುಂಡು ಹಾರಿಸಿ ಅರೆಸ್ಟ್ ಮಾಡಿದ ಪೊಲೀಸರು..!

0

ಬೆಂಗಳೂರು: ಬಿಬಿಎಂಪಿ ಮಾಜಿ ಕಾರ್ಪೊರೇಟರ್ ರೇಖಾ ಕದಿರೇಶ್ ಅವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೀಟರ್ ಮತ್ತು ಸೂರ್ಯ ಎಂಬ ಇಬ್ಬರು ಆರೋಪಿಗಳ ಕಾಲಿಗೆ ಗುಂಡು ಹಾರಿಸಿ, ಪೊಲೀಸರು ಬಂಧಿಸಿದ್ದಾರೆ. ಈ ಇಬ್ಬರು ರೇಖಾ ಕದಿರೇಶ್ ಅವರಿಗೆ ಬಾಡಿಗಾರ್ಡ್ನಂತಿದ್ದವರು ಎಂದು ತಿಳಿದು ಬಂದಿದೆ.

ನಿನ್ನೆ ರೇಖಾ ಅವರು ಬಡ ಜನರಿಗೆ ಫುಡ್‌ಕಿಟ್ ವಿತರಿಸಲು ಸಿದ್ಧತೆಯನ್ನು ನಡೆಸಿಕೊಳ್ಳುತ್ತಿರುವಾಗ ಅಲ್ಲಿಗೆ ಬಂದ ದುಷ್ಕರ್ಮಿಗಳು ರೇಖಾ ಅವರನ್ನು ಚಾಕುವಿನಿಂದ ಇರಿದು, ಕೊಲೆ ಮಾಡಿ ಪರಾರಿಯಾಗಿದ್ದರು. ಈ ಹತ್ಯೆಯ ಸಂಚಿನಲ್ಲಿ ಪಾಲ್ಗೊಂಡಿದ್ದ ನಾಲ್ವರನ್ನು ಪೊಲೀಸರು ಇಂದು ಬೆಳಗ್ಗೆ ಬಂಧಿಸಿದ್ದರು. ಇದೀಗ ರೇಖಾ ಕೊಲೆಯ ಮುಖ್ಯ ಆರೋಪಿಗಳಾದ ಸೂರ್ಯ ಹಾಗೂ ಪೀಟರ್‌ನನ್ನು ಕಾಟನ್‌ಪೇಟೆ ಪೊಲೀಸರು ಬಂಧಿಸಿದ್ದಾರೆ.

ಈ ಹಿಂದೆ ಬಂಧಿತರಾಗಿದ್ದ ನಾಲ್ಕು ಆರೋಪಿಗಳ ಮಾಹಿತಿಯ ಮೇರೆಗೆ ಪೀಟರ್ ಹಾಗೂ ಸೂರ್ಯನಿಗೆ ಪೊಲೀಸರು ಬಲೆ ಬೀಸಿ, ಸೆರೆ ಹಿಡಿದಿದ್ದಾರೆ. ರೇಖಾ ಕದಿರೇಶ್ ಕೊಲೆ ಪ್ರಕರಣದ ಆರೋಪಿಗಳನ್ನು ಶೀಘ್ರವೇ ಬಂಧಿಸುವಂತೆ ಮುಖ್ಯಮಂತ್ರಿ ಯಡಿಯೂರಪ್ಪ ಆದೇಶಿಸಿದ್ದರು. ಇನ್ನು ಆರೋಪಿಗಳ ಪತ್ತೆಗಾಗಿ ವಿಶೇಷ ತಂಡಗಳನ್ನು ರಚನೆ ಮಾಡಲಾಗಿತ್ತು. ಡಿಸಿಪಿ ಸಂಜೀವ್ ಪಾಟೀಲ್ ನೇತೃತ್ವದಲ್ಲಿ ಪಶ್ಚಿಮ ವಿಭಾಗದ ಪೊಲೀಸರು ಫುಲ್ ಅಲರ್ಟ್ ಆಗಿದ್ದರು.

ತಲೆಮರಿಸಿಕೊಂಡಿದ್ದ ಪೀಟರ್ ಹಾಗೂ ಸೂರ್ಯನನ್ನು ಇಂದು ಬಂಧಿಸುವ ವೇಳೆ ಇವರಿಬ್ಬರೂ, ಸಿಬ್ಬಂದಿ ಮೇಲೆಯೇ ಹಲ್ಲೆ ನಡೆಸಿದ್ದರಿಂದ ಪ್ರಾಣರಕ್ಷಣೆಗಾಗಿ ಆರೋಪಿಗಳ ಮೇಲೆ ಗುಂಡು ಹಾರಿಸಲಾಗಿದೆ. ಇನ್ನು ಯಾವ ವಿಚಾರಕ್ಕಾಗಿ ರೇಖಾ ಕದಿರೇಶ್ ಅವರನ್ನ ಹತ್ಯೆ ಮಾಡಲಾಗಿದೆ ಎಂದು ತಿಳಿದು ಬಂದಿಲ್ಲ. ಈ ಕೊಲೆ ಪ್ರಕರಣದಲ್ಲಿ ಅನೇಕರು ಭಾಗಿಯಾಗಿದ್ದಾರೆ. ಆರೋಪಿಗಳಿಗೆ ಸಹಾಯ ಮಾಡಿದವರ ಬಗ್ಗೆ ವಿಚಾರಣೆ ನಡೆಸಲಾಗ್ತಿದೆ ಎಂದು ಬೆಂಗಳೂರು ನಗರ ಪೊಲೀಸ್ ಕಮಿಷನರ್ ಕಮಲ್ ಪಂತ್ ತಿಳಿಸಿದ್ದಾರೆ.

ರೇಖಾ ಕದಿರೇಶ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ರೇಖಾ ಸಂಬಂಧಿ ಸಂಜಯ್ ನೀಡಿದ್ದ ದೂರಿನ ಮೇರೆಗೆ ಕಾಟನ್ ಪೇಟೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಇದೀಗ ಪೊಲೀಸರು ಹತ್ಯೆಯ ಮುಖ್ಯ ಆರೋಪಿಗಳಾದ ಸೂರ್ಯ ಹಾಗೂ ಪೀಟರ್‌ನನ್ನು ಬಂಧಿಸಿದ್ದು, ವೈದ್ಯಕೀಯ ತಪಾಸಣೆಗೊಳಪಡಿಸಿದ್ದಾರೆ. ಈ ಹಿಂದೆಯೂ ಸಹ ಆರೋಪಿ ಪೀಟರ್ ಮೇಲೆ ಮೂರು ಕೊಲೆ, ಒಂದು ಹಲ್ಲೆ, ದರೋಡೆಗೆ ಯತ್ನಿಸಿರುವ ಆರೋಪವೂ ಇದೆ. ಹಾಗೆಯೇ ಸೂರ್ಯನ ಮೇಲೂ ಕೂಡ ಎರಡು ಕೊಲೆ ಮತ್ತೆರಡು ಕೊಲೆಗೆ ಯತ್ನಿಸಿರುವ ಪ್ರಕರಣಗಳಿವೆ.

Spread the love
Leave A Reply

Your email address will not be published.

Flash News