BreakingCORONA LOCKDOWN HEROESCORONA VIRUSKANNADAFLASHNEWSFIGHTAGAINSTCORONAlock downMoreScrollTop NewsUncategorizedಕ್ರೈಮ್ /ಕೋರ್ಟ್ಜಿಲ್ಲೆಫೋಟೋ ಗ್ಯಾಲರಿಮಾಹಿತಿ/ತಂತ್ರಜ್ಞಾನರಾಜಕೀಯರಾಜ್ಯ-ರಾಜಧಾನಿ

ಇದಾ..?! ಸರ್ಕಾರದ “ಸ್ತ್ರೀ ಶಕ್ತಿ-ಮಹಿಳಾ ಸಬಲೀಕರಣ”ದ ಅಸಲೀಯತ್ತು..ಮಹಿಳಾ ಠಾಣೆಗಳಲ್ಲಿ ಪುರುಷರದೇ ದರ್ಬಾರ್..! 36 ಠಾಣೆಗಳ ಪೈಕಿ 6 ರಲ್ಲಷ್ಟೇ ಮಹಿಳಾ ಅಧಿಕಾರಿಗಳು..

ಮಹಿಳಾ ಪೊಲೀಸ್ ಅಧಿಕಾರಿಗಳ ಸಾಂದರ್ಭಿಕ ಚಿತ್ರ
ಮಹಿಳಾ ಪೊಲೀಸ್ ಅಧಿಕಾರಿಗಳ ಸಾಂದರ್ಭಿಕ ಚಿತ್ರ

ಬೆಂಗಳೂರು:ಸರ್ಕಾರ ಹಾಗೂ ಪೊಲೀಸ್ ಇಲಾಖೆಗಳು ನಾಚಿಕೆಯಿಂದ ತಲೆ ತಗ್ಗಿಸಲೇಬೇಕಾದ ವಿಚಾರ ಇದು..ಮಾತೆತ್ತಿದ್ರೆ ಮಹಿಳಾ ಸಬಲೀಕರಣದ ಬಗ್ಗೆ ಕಂಠ ಶೋಷಣೆ ಮಾಡಿಕೊಳ್ಳುತ್ತೆ ಸರ್ಕಾರ. ಮಹಿಳೆ ಎಲ್ಲಾ ಕ್ಷೇತ್ರಗಳಲ್ಲೂ ಬೆಳೆಯಬೇಕು..ಅದಕ್ಕೆ ಎಲ್ಲಾ ರೀತಿಯ ಸಹಕಾರ ಕೊಡ್ತಿದ್ದೇವೆ ಎಂದು ರಾಜಕಾರಣಿಗಳು ಪುಂಗುತ್ತಲೇ ಇರ್ತಾರೆ.

ಎಲ್ಲಾ ಕ್ಷೇತ್ರಗಳಂತೆ ಪೊಲೀಸ್ ಇಲಾಖೆ ಯಲ್ಲೂ ಮಹಿಳೆಯರ ಸಮಾನತೆ-ಸಮಾನ ಅಧಿಕಾರದ ಬಗ್ಗೆ ಮಾತನಾಡಲಾಗ್ತದೆ.ಆದ್ರೆ ಇಲಾಖೆಯಲ್ಲಿ ಮಹಿಳಾ ಅಧಿಕಾರಿಗಳಿಗೆ ಮಾಡಲಾಗುತ್ತಿರುವ ಮೋಸ-ವಂಚನೆ,ಅವರಿಂದ ಕಸಿದುಕೊ ಳ್ಳಲಾಗುತ್ತಿರುವ ಅಧಿಕಾರ-ಅವಕಾಶ,ಆತ್ಮವಿಶ್ವಾಸ-ಚೈತನ್ಯವನ್ನು ಕುಗ್ಗಿಸುವಂಥ ಕೆಲಸವಿದೆಯೆಲ್ಲಾ ಅದು ನಿಜಕ್ಕೂ ಸರ್ಕಾರಕ್ಕೆ ಶೋಭೆ ತರುವಂತದ್ದಲ್ಲ.ಅದರ ಸಮಗ್ರ ಚಿತ್ರಣವನ್ನೊತ್ತು ಬಂದಿದೆ ಕನ್ನಡ ಫ್ಲಾಶ್ ನ್ಯೂಸ್.

ಪೊಲೀಸ್ ಇಲಾಖೆಯಲ್ಲಿ ಇವತ್ತು ಮೈಲಿಗಲ್ಲೆನ್ನುವಂಥ ಸಾಧನೆಗಳು ಮಹಿಳೆಯರಿಂದಲೂ ಸಾಧ್ಯವಾಗಿದೆ.ಇವತ್ತಿಗೂ ಡಿ.ರೂಪಾ,ತಬರಕ್ ಫಾತಿಮಾ,ಎಂ.ಅಶ್ವಿನಿ,ಎಂ.ಸಿ ಕವಿತಾ,ಸಾರಾ ಫಾತಿಮಾ,ಅಕ್ಕಿಯಾ ಕರುನಾಗರನ್,ರೋಹಿಣಿ ಕಟೋಚ್,ಇಶಾ ಪಂತ್,ದಿವ್ಯ ಸಾರಾ ಥಾಮಸ್,ನಿಶಾ ಜೇಮ್ಸ್,.. ಅವರಂಥ ಮಹಿಳಾ ಅಧಿಕಾರಿಗಳು ಪೊಲೀಸ್ ಇಲಾಖೆಯಲ್ಲಿ ತಮ್ಮ ಕಾರ್ಯವೈಖರಿ ಮೂಲಕ ಛಾಪು ಮೂಡಿಸಿದ್ದಾರೆ.ಮಹಿಳಾ ಸಬಲೀಕರಣಕ್ಕೆ ಸಾಕ್ಷಿಪ್ರಜ್ಞೆಯಾಗುಳಿದಿದ್ದಾರೆ.

36 ಮಹಿಳಾ ಠಾಣೆಗಳ ಪೈಕಿ ಮಹಿಳೆಯರೇ ಮೇಲುಸ್ತುವಾರಿಗಳಾಗಿರುವ ಠಾಣೆಗಳ ವಿವರ( ಕೆಂಪು ಬಾಕ್ಸ್ ನಲ್ಲಿರುವುದು ಮಹಿಳಾ ಠಾಣೆಗಳಲ್ಲಿನ ಮಹಿಳಾ ಅಧಿಕಾರಿಗಳ ವಿವರ)
36 ಮಹಿಳಾ ಠಾಣೆಗಳ ಪೈಕಿ ಮಹಿಳೆಯರೇ ಮೇಲುಸ್ತುವಾರಿಗಳಾಗಿರುವ ಠಾಣೆಗಳ ವಿವರ( ಕೆಂಪು ಬಾಕ್ಸ್ ನಲ್ಲಿರುವುದು ಮಹಿಳಾ ಠಾಣೆಗಳಲ್ಲಿನ ಮಹಿಳಾ ಅಧಿಕಾರಿಗಳ ವಿವರ)
ಆರ್ ಟಿಐ ನಲ್ಲಿ ದೊರೆತ ಮಾಹಿತಿಯನ್ನು ಪ್ರದರ್ಶಿಸುತ್ತಿರುವ ಸಾಮಾಜಿಕ ಕಾರ್ಯಕರ್ತ ಎಸ್.ಭಾಸ್ಕರನ್
ಆರ್ ಟಿಐ ನಲ್ಲಿ ದೊರೆತ ಮಾಹಿತಿಯನ್ನು ಪ್ರದರ್ಶಿ ಸುತ್ತಿರುವ ಸಾಮಾಜಿಕ ಕಾರ್ಯಕರ್ತ ಎಸ್.ಭಾಸ್ಕರನ್

ಇದು ಮೇಲಿನ ಹಂತದಲ್ಲಿ ಕೆಲಸ ಮಾಡುತ್ತಿರುವ ಮಹಿಳಾ ಅಧಿಕಾರಿಗಳ ಕಥೆಯಾದ್ರೆ ಇವ್ರ ಕೆಳಹಂತದಲ್ಲಿ ಕೆಲಸ ಮಾಡುವ ಮಹಿಳಾ ಪೊಲೀಸ್ ರ ಕಥೆ ಮತ್ತೊಂದು ರೀತಿದು.ಇಲಾಖೆಗೆ ಸೇರುವ ಮಹಿಳಾ ಅಧಿಕಾರಿಗಳಿಗೆ ಮಹಿಳಾ ಠಾಣೆಗಳಲ್ಲಿಯೇ ಕೆಲಸ ಮಾಡುವ ಅವಕಾಶವನ್ನು ಸರ್ಕಾರ ಪ್ರಜ್ಞಾಪೂರ್ವಕವಾಗಿ ತಪ್ಪಿಸ್ತಿದೆಯೇ ಎನ್ನಿಸುವಂಥಾಗಿದೆ.ಇದಕ್ಕೆ ಕಾರಣ ಸಾಮಾಜಿಕ ಕಾರ್ಯಕರ್ತ ಎಸ್.ಭಾಸ್ಕರನ್ ಅವರಿಗೆ  ಆರ್ ಟಿಐ ನಲ್ಲಿ ಸಿಕ್ಕಿರುವ ಆ ಅಘಾತಕಾರಿ ಮಾಹಿತಿ.

ಸಾಮಾಜಿಕ ಕಾರ್ಯಕರ್ತ ಎಸ್.ಭಾಸ್ಕರನ್,ಕಳೆದ ಮಾರ್ಚ್ ನಲ್ಲಿ  ರಾಜ್ಯದ ಮಹಿಳಾ ಪೊಲೀಸ್ ಠಾಣೆಗಳಲ್ಲಿ ಕೆಲಸ ಮಾಡುತ್ತಿರುವ ಮಹಿಳಾ ಅಧಿಕಾರಿಗಳ ಮಾಹಿತಿ ಕೇಳಿ ಆರ್ ಟಿಐ ನಲ್ಲಿ  ಅರ್ಜಿ ಹಾಕಿದ್ದರು.ಅದಕ್ಕೆ ಅನ್ವಯವಾಗುವಂತೆ ಕೊಟ್ಟಿರುವ ಮಾಹಿತಿ ನೋಡುದ್ರೆ ಗಾಬರಿ ಜತಗೆ ಸರ್ಕಾರದ ಯೋಗ್ಯತೆ-ಮಹಿಳಾ ಸಬಲೀಕರಣದ ಡೋಂಗಿತನದ ಪರಿಚಯವಾಗುತ್ತದೆ.ಭಾಸ್ಕರನ್ ಅವರಿಗೆ ಕೊಟ್ಟಿರುವ ಮಾಹಿತಿ ಗಮನಿಸಿದ್ರೆ ಸರ್ಕಾರಕ್ಕೆ ಮಹಿಳಾ ಪೊಲೀಸ್ ಠಾಣೆಗಳ ಅವಶ್ಯಕತೆ ಎನ್ನೋದೇ ಇಲ್ಲವೇನೋ ಎನ್ನುವಂತೆ ಭಾಸವಾಗುತ್ತದೆ.ಏಕೆಂದ್ರೆ ಆ ಪರಿ ಮಹಿಳಾ ಪೊಲೀಸ್ ಠಾಣೆಗಳ ವ್ಯವಸ್ಥೆಯನ್ನು ಹದಗೆಡಿಸಿಟ್ಟಿದೆ.

ಎಸ್.ಭಾಸ್ಕರನ್ ಅವರಿಗೆ ಕೊಟ್ಟಿರುವ ಮಾಹಿತಿ ಕೆಳಕಂಡಂತಿದೆ.ರಾಜ್ಯದಲ್ಲಿರುವ ಒಟ್ಟು ಮಹಿಳಾ ಪೊಲೀಸ್ ಠಾಣೆಗಳು 36,ಅದರಲ್ಲಿ ಮಹಿಳೆಯರೇ ಇನ್ ಚಾರ್ಜ್ ಗಳಾಗಿ ಕೆಲಸ ಮಾಡುತ್ತಿರು ವುದು ಕೇವಲ 6.ಅಂದ್ರೆ ಇನ್ನುಳಿದ 30 ಮಹಿಳಾ ಪೊಲೀಸ್ ಠಾಣೆಗಳಲ್ಲಿ ದರ್ಬಾರ್ ನಡೆಸುತ್ತಿರುವುದೇ ಪುರುಷರೆಂದಾಯ್ತು.ಈ ಅಂಕಿಅಂಶಗಳೇ ಸಾಕಲ್ಲವೇ ಸರ್ಕಾರಕ್ಕೆ ಮಹಿಳಾ ಪೊಲೀಸ್ ಠಾಣೆಗಳ ಬಗ್ಗೆ ಇರುವ ಕಾಳಜಿ ಏನನ್ನೋದು ಅರ್ಥವಾಗೊಕ್ಕೆ.

36 ಠಾಣೆಗಳ ಪೈಕಿ ಮಹಿಳೆಯರೇ ಅಧಿಕಾರಿಗಳಾಗಿ ಕೆಲಸ ಮಾಡುತ್ತಿರುವ ಠಾಣೆಗಳು ಯಾವುವು ಎಂದ್ರೆ (ಲೇಖನ ಪ್ರಕಟವಾಗುವ ಹೊತ್ತಿಗೆ ದಾಖಲೆಗಳಲ್ಲಿ ಇರುವ ಮಾಹಿತಿಗಳ ಅನ್ವಯ) ಬೆಳಗಾವಿ(ಶ್ರೀದೇವಿ ಪಾಟೀಲ್),ಬೆಂಗಳೂರು ಹಲಸೂರು ಗೇಟ್(ಆಯಿಷಾ),ಬೆಂಗಳೂರಿನ ಬಸವನಗುಡಿ(ಮೀನಾಕ್ಷಿ), ದಾವಣಗೆರೆ(ಶಿಲ್ಪ ವೈ.ಎಸ್), ಮಂಗಳೂರು(ರೇವತಿ),ಮೈಸೂರು(ಮಮತಾ),ರಾಮನಗರ(ಸುಮಾ ರಾಣಿ),ಇನ್ನುಳಿದ ಜಿಲ್ಲೆಗಳಲ್ಲಿನ ಮಹಿಳಾ ಠಾಣೆಗಳಲ್ಲಿ ಬಹುತೇಕ ಪುರುಷ ಅಧಿಕಾರಿಗಳೇ ಉಸ್ತುವಾರಿಗಳಾಗಿ ಕೆಲಸ ಮಾಡುತ್ತಿದ್ದಾರೆನ್ನುವುದು ಆರ್ ಟಿಐ ದಾಖಲೆಗಳಲ್ಲಿ ಉಲ್ಲೇಖವಾಗಿದೆ.

ಮಹಿಳಾ ಠಾಣೆಗಳಿಗೆ ಮಹಿಳೆಯರನ್ನೇ ನಿಯೋಜಿಸಬೇಕೆನ್ನುವ ಸರ್ಕಾರದ ಆದೇಶದ ಪ್ರತಿ
ಮಹಿಳಾ ಠಾಣೆಗಳಿಗೆ ಮಹಿಳೆಯರನ್ನೇ ನಿಯೋಜಿಸಬೇಕೆನ್ನುವ ಸರ್ಕಾರದ ಆದೇಶದ ಪ್ರತಿ

ವಿಚಿತ್ರ ಎಂದ್ರೆ ಮಾನ್ಯ ಮುಖ್ಯಮಂತ್ರಿಗಳಾದ ಬಿ.ಎಸ್ ಯಡಿಯೂರಪ್ಪ ಅವರ ತವರು ಜಿಲ್ಲೆಯಾದ ಶಿವಮೊಗ್ಗ(ವೀರೇಶ್),ಮಂಡ್ಯ(ದೇವರಾಜ್ ಎಲ್.)ದಲ್ಲಿಯೂ ಮಹಿಳಾ ಠಾಣೆಗಳಲ್ಲಿ ಪುರುಷರೇ ದರ್ಬಾರ್ ಮಾಡುತ್ತಿದ್ದಾರೆ.ಅಷ್ಟೇ ಅಲ್ಲ ಗೃಹಸಚಿವ ಬಸವರಾಜ ಬೊಮ್ಮಾಯಿ ಪ್ರತಿನಿಧಿಸುವ ಹಾವೇರಿ ಜಿಲ್ಲೆಯ ಮಹಿಳಾ ಠಾಣೆಯಲ್ಲೂ ಚಿದಾನಂದ್ ಎನ್ನುವ ಅಧಿಕಾರಿಯೇ ದರ್ಬಾರ್ ಮಾಡುತ್ತಿದ್ದಾರೆ.ಮುಖ್ಯಮಂತ್ರಿ ಹಾಗೂ ಗೃಹಸಚಿವರ ಕ್ಷೇತ್ರಗಳಲ್ಲಿಯೇ ಮಹಿಳಾ ಠಾಣೆಗಳ ಪರಿಸ್ಥಿತಿಯಾಗಿರುವುದು ನಿಜಕ್ಕೂ ದುರಾದೃಷ್ಟಕರ ಎನ್ನುತ್ತಾರೆ  ಸಾಮಾಜಿಕ ಕಾರ್ಯಕರ್ತ ಎಸ್.ಭಾಸ್ಕರನ್.

ಮಹಿಳಾ ಠಾಣೆಗಳ ನಿರ್ಮಾಣದ ಉದ್ದೇಶವೇ ಸಾಫಲ್ಯವಾಗುತ್ತಿಲ್ಲ: ಮಹಿಳಾ ಠಾಣೆಗಳಲ್ಲಿ ಮಹಿಳಾ ಅಧಿಕಾರಿಗಳೇ ಇರ್ಬಕೆನ್ನುತ್ತದೆ ನಿಯಮ.ಆಯಾ ಜಿಲ್ಲೆಗಳಲ್ಲಿ ಮಹಿಳೆಯರ ಮೇಲಾಗುವ ತರೇವಾರಿ ದೌರ್ಜನ್ಯ ಪ್ರಕರಣಗಳ ದೂರನ್ನು ಕೊಡಲಿಕ್ಕೆಂದೇ ಸರ್ಕಾರ ಸ್ಥಾಪಿಸಿದ ಈ ಮಹಿಳಾ ಠಾಣೆಗಳಲ್ಲಿ ಪುರುಷ ಅಧಿಕಾರಿಗಳೇ ದರ್ಬಾರ್ ಮಾಡುತ್ತಿರುವುದರಿಂದ ಮಹಿಳೆಯರು ದೂರು ಕೊಡಲು ಹೋಗುತ್ತಿಲ್ಲ. ಪುರುಷ ಅಧಿಕಾರಿಗಳಿಂದಾಗಿ ಠಾಣೆಗಳಿಗೆ ಹೋಗಲು ಹಿಂದೇಟು ಹಾಕುತ್ತಿರುವ ಮಹಿಳೆಯರು ತಮ್ಮ ಮೇಲಿನ ದೌರ್ಜನ್ಯದ ಬಗ್ಗೆ ದೂರು ನೀಡಲು ಅಂಜುತ್ತಿದ್ದಾರಂತೆ. ಸಮಸ್ಯೆಯ ಗೌಪ್ಯತೆಯನ್ನು ಪುರುಷ ಅಧಿಕಾರಿಗಳಿಗೆ ವಿವರಿಸಲು ಮುಜುಗರ ಪಡುತ್ತಿದ್ದಾರಂತೆ. ಹಾಗಾಗಿಯೇ ಮಹಿಳೆಯರ ಮೇಲೆ ನಡೆಯುತ್ತಿ ರುವ ಸಾಕಷ್ಟು ದೌರ್ಜನ್ಯದ ಪ್ರಕರಣಗಳು ಮಹಿಳೆಯರ ಹಿಂದೇಟು-ಮುಜುಗರ ಅಂಜಿಕೆಯಿಂದಾಗಿ ಪೊಲೀಸ್ ದಾಖಲೆಗಳಲ್ಲಿ ರಿಜಿಸ್ಟರ್ ಆಗುತ್ತಿಲ್ಲ ಎನ್ನುವುದು ಮಹಿಳಾವಾದಿ ವಿನುತಾ ವಿವರಣೆ.

ಮಹಿಳಾ ಅಧಿಕಾರಿಗಳಿಗೆ ಇಷ್ಟವಿದ್ದರೂ ಡಮ್ಮಿ ಸ್ಥಾನಗಳಲ್ಲಿ ಕಾರ್ಯನಿರ್ವಹಣೆ:ನಮ್ಮಲ್ಲಿ ಮಹಿಳಾ ಅಧಿಕಾರಿಗಳಿಗೆ ಕೊರತೆ ಅಥವಾ ಬರ ಇದೆ ಎಂದೇನಲ್ಲ.ಸಾಕಷ್ಟು ಮಹಿಳಾ ಅಧಿಕಾರಿಗಳಿಗೆ ಮಹಿಳಾ ಠಾಣೆಗಳಲ್ಲಿ ಕೆಲಸ ಮಾಡೊಕ್ಕೆ ಇಷ್ಟವಿದ್ದರೂ ಅವರಿಗೆ ಆ ಅವಕಾಶ ನಿರಾಕರಿಸಲಾಗುತ್ತಿದೆ.ಪುರುಷರನ್ನೇ ತಂದು ಕೂರಿಸಲಾಗುತ್ತಿದೆ.ಮಹಿಳಾ ಅಧಿಕಾರಿಗಳನ್ನು ಕೆಲಸವಿಲ್ಲದ ಡಮ್ಮಿ ವಿಭಾಗಗಳಿಗೆ ಹಾಕಿ ಕೊಳೆಯಿಸಲಾಗುತ್ತಿದೆ ಎನ್ನುವ ಆರೋಪಗಳಿವೆ. ಅಂದ್ಹಾಗೆ ಇದು ಕೇವಲ ಪುರುಷ ಮೇಲಾಧಿಕಾರಿಗಳ ಅವಧಿಯಲ್ಲಿ ಆಗುತ್ತಿರುವ ಅನ್ಯಾಯವಲ್ಲ,.ಮಹಿಳೆಯರು ಉನ್ನತ ಸ್ಥಾನದಲ್ಲಿದ್ದಾಗಲೂ ಮಹಿಳಾ ಠಾಣೆಗಳ ಬಲವರ್ಧನೆ-ಮಹಿಳಾ ಪೊಲೀಸ್ ಅಧಿಕಾರಿಗಳನ್ನು ಅಲ್ಲಿಗೆ ನಿಯೋಜಿಸುವ ವಿಷಯದಲ್ಲಿ ನಿರ್ಲಕ್ಷ್ಯ ವಹಿಸಲಾಗಿತ್ತೆಂದು ತಮ್ಮ ಅಳಲು ತೋಡಿಕೊಳ್ತಾರೆ ಹೆಸರು ಹೇಳಲಿಚ್ಛಿಸದ ಕೆಲ ಮಹಿಳಾ ಪೊಲೀಸ್ ಅಧಿಕಾರಿಗಳು.

ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಪ್ರಮೀಳಾ ರೆಡ್ಡಿ
ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಪ್ರಮೀಳಾ ರೆಡ್ಡಿ

ನಮ್ಮವರೇ ನಮ್ಮನ್ನು ತುಳಿಯುವ ಕೆಲಸ ಮಾಡುತ್ತಿದ್ದಾರೆ ಸಾರ್..ಮಹಿಳಾ ಠಾಣೆಗಳಲ್ಲಿ ನಮಗೆ ಅವಕಾಶ ಕಲ್ಪಿಸಿಕೊಡಬೇಕೆಂದು ಮನವಿ ಮಾಡಿದ್ರೂ ಅದನ್ನು  ತಿರಸ್ಕರಿಸಲಾಗುತ್ತಿದೆ.ಮಹಿಳಾ ಠಾಣೆಗಳಲ್ಲಿದ್ದರೆ ಅಟ್ಲೀಸ್ಟ್ ಮಹಿಳೆಯರ ಅದೆಷ್ಟೋ  ಸಮಸ್ಯೆ ಬಗೆಹರಿಸಬಹುದು.ಆದ್ರೆ ನಮಗಿಷ್ಟವಿಲ್ಲದ ಹುದ್ದೆಗೆ ನಿಯೋಜಿಸಿ ನಮ್ಮ ಮೇಲಾಧಿಕಾರಿಗಳೇ  ನಮ್ಮ ಆತ್ಮವಿಶ್ವಾಸ ಕುಂದಿಸುವ ಕೆಲಸ ಮಾಡುತ್ತಾರೆಂದು ಅನೇಕ ಮಹಿಳಾ ಪೊಲೀಸ್ ಅಧಿಕಾರಿಗಳು ಕನ್ನಡ ಫ್ಲಾಶ್ ನ್ಯೂಸ್ ಜತೆ ಅಳಲು ತೋಡಿಕೊಂಡಿದ್ದಾರೆ. 36 ಠಾಣೆಗಳ ಪೈಕಿ  ಕೇವಲ 7ರಲ್ಲಿ ಮಾತ್ರ ಮಹಿಳಾ ಪೊಲೀಸ್ ಅಧಿಕಾರಿಗಳಿದ್ದಾರೆನ್ನುವ ಸಂಗತಿಯನ್ನು ಕನ್ನಡ ಫ್ಲಾಶ್ ನ್ಯೂಸ್ ರಾಜ್ಯ ಮಹಿಳಾ ಆಯೋಗದ ಗಮನಕ್ಕೆ ತಂದಿದೆ.ಈ ವಿಷಯವನ್ನು ಕೇಳುತ್ತಿದ್ದಂಗೆ ಗಾಬರಿ ಹಾಗು ಕಳವಳಗೊಂಡ ಆಯೋಗದ ರಾಜ್ಯಾಧ್ಯಕ್ಷೆ ಪ್ರಮೀಳಾ ರೆಡ್ಡಿ,ತತ್ ಕ್ಷಣಕ್ಕೆ ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಅವರಿಗೆ ಪತ್ರ ಬರೆಯೋದಾಗಿ ಹೇಳಿದ್ದಾರೆ.

ಮಹಿಳೆಯರನ್ನುಸರ್ಕಾರವೇ ನಿರ್ಲಕ್ಷ್ಯಿಸಿರುವುದು ನನ್ನ ಗಮನಕ್ಕೆ ಬಂದಿದೆ.ಮಹಿಳಾ ಅಧಿಕಾರಿಗಳಿಗೆ ಅನ್ಯಾಯವಾಗೋದು ಸರಿಯಲ್ಲ ಎಂದು ತಿಳಿಸಿರುವ ರಾಜ್ಯಾಧ್ಯಕ್ಷೆ ಶ್ರೀಮತಿ ರೆಡ್ಡಿ,ಅಸಮಾನತೆ ನೀಗಲೇಬೇಕು.ಕೆಲಸ ಮಾಡಲು ಇಚ್ಛಿಸುವವರಿಗೆ ಅವಕಾಶ ಕೊಡ್ಬೇಕು.ಎಲ್ಲಾ ಠಾಣೆಗಳಲ್ಲೂ ಮಹಿಳೆಯರೇ ಅಧಿಕಾರಿಗಳಾಗಿ ನಿಯೋಜನೆ ಆಗ್ಬೇಕೆನ್ನುವ ಸರ್ಕಾರದ ನಿಯಾಮವಳಿ ಅನುಷ್ಠಾನಕ್ಕೆ ಬರುವಂತಾಗಬೇಕು..ಆ ನಿಟ್ಟಿನಲ್ಲಿ ಸರ್ಕಾರ ಹಾಗೂ ಪೊಲೀಸ್ ಇಲಾಖೆಗೆ ಪತ್ರ ಬರೆಯುವುದಾಗಿ ಹೇಳಿದ್ದಾರಷ್ಟೇ ಅಲ್ಲ,ಮಹಿಳಾ ಠಾಣೆಗಳಲ್ಲಿ ಮಹಿಳಾ ಅಧಿಕಾರಿಗಳೇ ಇರಬೇಕೆನ್ನುವ ನಿಯಮ ಜಾರಿಯಾಗುವವರೆಗೂ ಸರ್ಕಾರ ಹಾಗೂ ಪೊಲೀಸ್ ಇಲಾಖೆ ಮೇಲೆ ಒತ್ತಡ ತರುತ್ತಲೇ ಇರುವುದಾಗಿ ಹೇಳಿದ್ದಾರೆ.

ಕನ್ನಡ ಫ್ಲಾಶ್ ನ್ಯೂಸ್  ನ ಆಶಯ ಇಷ್ಟೇ,ಮಹಿಳಾ ಠಾಣೆಗಳನ್ನು ಆರಂಭಿಸಿದ ಉದ್ದೇಶ ಈಡೇರಬೇಕು.ಕೆಲಸ ಮಾಡಲು ಉತ್ಸುಕರಾಗಿರುವ ಅದೆಷ್ಟೋ ದಕ್ಷ-ಪ್ರಾಮಾಣಿಕ ಅಧಿಕಾರಿಗಳಿಗೆ ಕೆಲಸ ಮಾಡಲು ಅವಕಾಶ ಕೊಡಬೇಕು.ಮಹಿಳೆಯರ ಸಮಸ್ಯೆ ಪರಿಣಾಮಕಾರಿಯಾಗಿ ಈಡೇರೊಕ್ಕೆ ವೇದಿಕೆ ಸಿದ್ದವಾಗಬೇಕು.ಅವರಿಗೊಂದು ಸಾಂತ್ವನ-ಅಭಯ-ನೆಮ್ಮದಿ ದೊರೆಯುವಂತಾಗಬೇಕು..ಆ ಮೂಲಕ ಸರ್ಕಾರದ ನೈಜ ಮಹಿಳಾ ಸಬಲೀಕರಣದ ಕಾನ್ಸೆಪ್ಟ್ ಅನುಷ್ಠಾನಕ್ಕೆ ಬರಬೇಕು.. ಅಷ್ಟೇ..

Spread the love

Related Articles

Leave a Reply

Your email address will not be published.

Back to top button
Flash News