ಆದಿವಾಸಿಗಳ ಹೋರಾಟದ ಆ “ಧ್ವನಿ”ಗೆ ಬಿಡುಗಡೆ ಭಾಗ್ಯವೂ ಸಿಗಲಿಲ್ಲ..ಅದಕ್ಕಾಗಿ “ಸಾವೂ” ಕಾಯಲಿಲ್ಲ..ಹಾಸಿಗೆಯಲ್ಲೇ ಕೊನೆಯುಸಿರೆಳೆದ ಫಾದರ್ ಸ್ಟ್ಯಾಮ್ ಸ್ವಾಮಿ..
ಯಾವ ಆಂಗಲ್ ನಲ್ಲಿ ಇವ್ರು ಜೈಲಿನ ಬ್ಯಾರಕ್ ಮುರಿದು ಪರಾರಿಯಾಗಬಹುದು…ಹಾಗೆ ತಪ್ಪಿಸಿಕೊಂಡು ಹೋಗಿ ಇನ್ನೊಂದಷ್ಟು ವಿದ್ವಂಸಕ ಕೃತ್ಯ ಎಸಗಿ ಭೂಗತರಾಗ್ಬೋದು..ದೇಶದ ಶಾಂತಿ-ಕೋಮುಸೌಹಾರ್ದತೆ ಕದಡುವ ಕೆಲಸಕ್ಕೆ ಕೈ ಹಾಕ್ಬೋದು ಎನಿಸುತ್ತೆ ನೀವೇ ಹೇಳಿ..ಕುಳಿತ ಜಾಗ ಬಿಟ್ಟು ಕದಲೊಕ್ಕೆ ಆಗದಷ್ಟು ನಿಶ್ಯಕ್ತ-ನಿತ್ರಾಣ-ನಿಸ್ತೇಜಗೊಂಡಿರುವ ದೇಹ ಅದು..ಅದರ ಕೈ ಕಾಲಿಗೆಲ್ಲಾ ಸರಪಳಿ ಹಾಕಿ ಬಂಧಿಸಿಡುವುದೆಂದ್ರೆ ಅದು ನ್ಯಾಯನಾ..ಈ ಫೋಟೋ ಗಮನಿಸಿದ ಪ್ರತಿಯೊಬ್ಬನಿಗೂ ನಮ್ಮ ರಾಜಕೀಯ ಹಾಗೂ ಪೊಲೀಸ್ ವ್ಯವಸ್ಥೆ ಬಗ್ಗೆ ಆಕ್ರೋಶ ಮೂಡದೇ ಇರೊಲ್ಲ ಬಿಡಿ..
ದೇಶದ ಸಂಪತ್ತನ್ನು ಕೊಳ್ಳೆ ಹೊಡೆದೋರು..ಲೂಟಿ ಮಾಡ್ತಿರೋರು…ನಿಷ್ಪಾಪಿ ಹೆಣ್ಣು ಮಕ್ಕಳನ್ನು ಹುರಿದು ಮುಕ್ಕಿದ ಕಚ್ಚೆ ಹರುಕರೆಲ್ಲಾ ಮಾಡಿದ ತಪ್ಪಿಗೆ ಸಣ್ಣ ಪಾಪಪ್ರಜ್ಞೆಯೂ ಇಲ್ಲದೆ ಆರಾಮಾಗಿ ಅಡ್ಡಾಡಿಕೊಂಡಿದ್ದಾರೆ, ಆದ್ರೆ ಇಲ್ಲೊಂದು ವೃದ್ಧ ಜೀವ ಕಾರಾಗೃಹದಲ್ಲಿ ಬಿಡುಗಡೆಯ ನಿರೀಕ್ಷೆಯಲ್ಲೇ ಕಾದು ಕಾದು ಉಸಿರು ಚೆಲ್ಲಿದೆ.ದೇಶಾದ್ಯಂತ ಫಾದರ್ ಸ್ಟ್ಯಾನಿ ಅವರನ್ನು ನಡೆಸಿಕೊಂಡ ಪ್ರಭುತ್ವಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ.
ಕೃಶಗೊಂಡ ಶರೀರ..ನಿತ್ರಾಣಗೊಂಡ ಚೈತನ್ಯ..ಯಾರನ್ನೂ ಎದುರಿಸ್ಲಿಕ್ಕಾಗದಷ್ಟು ನಿಸ್ತೇಜಗೊಂಡ ಶರೀರ-ಶಾರೀರ್ಯವುಳ್ಳ ಕ್ರೈಸ್ತ ಧರ್ಮ ಗುರು ಫಾದರ್ ಸ್ಟಾನ್ ಸ್ವಾಮಿ ಅವರನ್ನು ಅನಾರೋಗ್ಯದ ಕಾರಣಕ್ಕೆ ಬಿಡುಗಡೆಗೊಳಿಸಿ ಉಳಿದ ದಿನಗಳನ್ನು ನೆಮ್ಮದಿಯಾಗಿ ಕಳೆಯೊಕ್ಕೆ ಅವಕಾಶ ಮಾಡಿಕೊಡಬೇಕೆಂದು ಮಾಡಲಾಗಿದ್ದ ಮನವಿಗು ನ್ಯಾಯಾಲಯ ಮನ್ನಣೆ ನೀಡಿರಲಿಲ್ಲ.. ಕೋಳ ತೊಟ್ಟು ಹಾಸಿಗೆಯಲ್ಲೇ ಮುದುಡಿಕೊಂಡಿದ್ದ ವೃದ್ಧ ಜೀವಕ್ಕೆ ನ್ಯಾಯವೂ ಸಿಗಲಿಲ್ಲ..ಇನ್ನಷ್ಟು ದಿನ ಬದುಕೊಕ್ಕೆ ಅವಕಾಶ ಕೊಡಬಹುದಾಗಿದ್ದ ಸಾವಿಗು ಕನಿಕರ ಬರಲಿಲ್ಲ..ಕಳೆದ 8 ತಿಂಗಳಿಂದ ಮಲಗಿದಲ್ಲೇ ಮಲಗಿಕೊಂಡು ಗೋಡೆಯೆಡೆ ಕಣ್ಣು ನೆಟ್ಟಿಕೊಂಡಿದ್ದ ಫಾದರ್ ಸ್ಟ್ಯಾನಿ ಅವರನ್ನು ನಮ್ಮ ಕ್ರೂರ ವ್ಯವಸ್ಥೆಯೇ ಕೊಂದಾಕಿಬಿಡ್ತೆನಿಸುತ್ತದೆ.
ಭೀಮಾ ಕೋರೇಗಾಂವ್ ಪ್ರಕರಣದಲ್ಲಿ ಅಪಾಯಕಾರಿ ಯುಎಪಿಎ ಕಾಯ್ದೆಯಡಿಯಲ್ಲಿ ಫಾದರ್ ಸ್ಟಾನ್ ಸ್ವಾಮಿ ಬಂಧನಕ್ಕೊಳಗಾಗಿದ್ರು.84 ವರ್ಷದ ವೃದ್ಧಾಪ್ಯದಲ್ಲಿ ಅವರನ್ನು ಬಂಧಿಸಿದಂತದ್ದು,ಶಿಕ್ಷೆಗೊಳಪಡಿಸಿದಂತದ್ದರ ಬಗ್ಗೆ ವ್ಯಾಪಕ ಚರ್ಚೆ ಕೂಡ ನಡೆದಿತ್ತು.ಆದ್ರೂ ನ್ಯಾಯಾಲಯದ ತೀರ್ಪಿಗೆ ಮನ್ನಣೆ ಕೊಡಲಾಗಿತ್ತು.ಆದರೆ ವೃದ್ಧಾಪ್ಯದ ಉಳಿದ ದಿನಗಳನ್ನಾದ್ರೂ ನೆಮ್ಮದಿಯಿಂದ ಕಳೆಯೊಕ್ಕೆ ಅವಕಾಶ ಮಾಡಿಕೊಡಬೇಕೆಂದು ಮಾಡಿಕೊಂಡ ಮನವಿಯನ್ನು ಸಾರಾಸಗಟಾಗಿ ತಿರಸ್ಕರಿಸಿತ್ತು ನ್ಯಾಯಾಲಯ.
84 ವರ್ಷದ ಸ್ಟಾನ್ ಸ್ವಾಮಿ ಪಾರ್ಕಿನ್ಸನ್ ಕಾಯಿಲೆಗೂ ತುತ್ತಾಗಿದ್ದರು.ಹಾಗೆಯೇ ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದರು.. ಇತ್ತೀಚೆಗೆ ಕೋವಿಡ್ ಸೋಂಕಿಗೂ ಒಳಗಾಗಿದ್ರು.ಈ ಹಿನ್ನೆಲೆಯಲ್ಲಿ ನ್ಯಾಯಾಲಯದ ಆದೇಶದಂತೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅದಕ್ಕೂ ಮುನ್ನ ಕಳೆದ ಎಂಟು ತಿಂಗಳುಗಳಿಂದ ಸ್ಟಾನ್ ಸ್ವಾಮಿ ತಲೋಜ ಕೇಂದ್ರೀಯ ಕಾರಾಗ್ರಹದಲ್ಲಿದ್ದರು.
ವೈದ್ಯಕೀಯ ಕಾರಣಗಳಡಿ ಜಾಮೀನು ನೀಡಬೇಕೆಂದು ಕೋರಿ ಸ್ವಾಮಿ ಸ್ಟಾನ್ ಸಂಬಂಧಿಗಳು ಅರ್ಜಿ ಹಾಕ್ಕೊಂಡಿದ್ದರು. ಅರ್ಜಿಯ ವಿಚಾರಣೆಯನ್ನು ಮುಂಬಯಿ ಹೈಕೋರ್ಟ್ ಇವತ್ತು ಮಧ್ಯಾಹ್ನ ಎರಡೂವರೆ ಗಂಟೆಗೆ ನಿಗದಿಪಡಿಸಿತ್ತು.
ಆದರೆ ದುರಂತ ನೋಡಿ, ಸ್ಟಾನ್ ಸ್ವಾಮಿಯವರ ವಕೀಲ ಮಿಹಿರ್ ದೇಸಾಯಿ ವಿಚಾರಣೆ ನಡೆಯುವ ಮುನ್ನವೇ ಕೊನೆಯುಸಿರೆಳೆದಿರುವುದನ್ನು ನ್ಯಾಯಪೀಠಕ್ಕೆ ತಿಳಿಸಿದರು. ಸಾವಿನ ವಿಷಯ ತಿಳಿದ ತಕ್ಷಣ ನ್ಯಾಯಪೀಠವು ತೀವ್ರ ವಿಷಾದವನ್ನು ವ್ಯಕ್ತಪಡಿಸಿದ್ದಲ್ಲದೇ ಕಾರಾಗೃಹ ಸಿಬ್ಬಂದಿ ವಿರುದ್ಧ ಕಿಡಿಕಾರಿದೆ.ಫಾದರ್ ಅವರ ಆರೋಗ್ಯದಲ್ಲಿ ಏರುಪೇರು ಕಂಡು ಬಂದ ವಿಷಯ ತಿಳಿದಾಕ್ಷಣ ಆಸ್ಪತ್ರೆಗೆ ದಾಖಲಿಸುವಂತೆ ಸೂಚಿಸಲಾಗಿತ್ತು.ಆದ್ರೆ ನಿರ್ಲಕ್ಷ್ಯ ವಹಿಸಿದ್ದು ಸರಿಯಲ್ಲ..ಸ್ವಲ್ಪ ಸಮಯಪ್ರಜ್ಞೆ ಪ್ರದರ್ಶಸಿದ್ದರೆ ಫಾದರ್ ಬದುಕುಳಿಯಬಹುದಿತ್ತೇನೋ ಎಂದು ಬೇಸರ ವ್ಯಕ್ತಪಡಿಸಿದೆ.
ತನಗೆ ನೀಡಲಾಗುತ್ತಿರುವ ಚಿಕಿತ್ಸೆಗೆ ತನ್ನ ದೇಹ ಸ್ಪಂದಿಸುತ್ತಿಲ್ಲ, ಬಹುಷಃ ಜಾಮೀನು ಸಿಗುವುದಕ್ಕಿಂತ ಮೊದಲೇ ತಾನು ಬಂಧನದಲ್ಲಿಯೇ ಮರಣ ಹೊಂದಬಹುದು ಎಂದು ಸ್ಟಾನ್ ಸ್ವಾಮಿ ನ್ಯಾಯಾಲಯಕ್ಕೆ ಮನವಿ ಮಾಡಿದ್ದರಂತೆ.
ಇದನ್ನು ವಕೀಲರ ವಿಚಾರಣೆ ವೇಳೆ ನ್ಯಾಯಪೀಠಕ್ಕೆ ತಿಳಿಯಪಡಿಸಿದ್ರು.ಇದಕ್ಕಾಗಿ ತೀವ್ರ ವಿಷಾದ ವ್ಯಕ್ತಪಡಿಸಿದ ನ್ಯಾಯಪೀಠ, ಆದಿವಾಸಿಗಳ ಬದುಕುವ ಹಕ್ಕಿಗೆ ಹೋರಾಡುತ್ತಿದ್ದ ಫಾದರ್ ಸ್ಟಾನ್ ಸ್ವಾಮಿ ಅವರ ಅಗಲಿಕೆಯಿಂದ ದೊಡ್ಡ ನಷ್ಟವಾಗಿದೆ ಎಂದು ಸಂತಾಪ ಸೂಚಿಸಿದೆ.ಅದೇನೇ ಆಗಲಿ,ನೆಮ್ಮದಿಯ ದಿನಗಳನ್ನು ಕಳೆಯುವ ಮುಪ್ಪಿನ ವಯಸ್ಸಿನಲ್ಲಿ ಫಾದರ್ ಸ್ಟ್ಯಾನ್ ಅವರನ್ನು ನಮ್ಮ ಪ್ರಭುತ್ವ ನಡೆಸಿಕೊಂಡ ರೀತಿ ಮಾತ್ರ ಖಂಡನಾರ್ಹ.