“ಕಿರಿಕ್ ” ರಕ್ಷಿತ್ ಶೆಟ್ಟಿ VS “ಪಬ್ಲಿಕ್” ದೇವಿ ಶೆಟ್ಟಿ “ಜಗಳ್” ಬಂದಿ..!? ದೇವಿಶೆಟ್ಟಿ ಆಕ್ರೋಶಕ್ಕೆ ರಕ್ಷಿತ್ ಆಹಾರವಾಗೊಕ್ಕೆ “ಕಾರಣ”ವಾಗಿದ್ದಾದ್ರೂ ಏನು?!

0

ಬೆಂಗಳೂರು:ಇಂತದ್ದೊಂದು ಸಮರ ನಿಜಕ್ಕೂ ಅಗತ್ಯವಿತ್ತೇ..? ಪರಸ್ಪರ ಕೆಸರೆರಚಾಡಿಕೊಳ್ಳುವ  ಅವಶ್ಯಕತೆ ಇತ್ತೇ..? ಸಮನ್ವಯ ಕಾಯ್ದುಕೊಳ್ಳಬೇಕಾದವರ ನಡುವೆ ಇಂತದ್ದೊಂದು ಮನಸ್ತಾಪ ಸಂಭವಿಸಬೇಕಿತ್ತಾ..? ಖಂಡಿತಾ ಇಲ್ಲ..ಮಾದ್ಯಮ ಹಾಗೂ ಕನ್ನಡ ಚಿತ್ರರಂಗದ ನಡುವಿರಬೇಕಿರೋ ಸಾಮರಸ್ಯವನ್ನೇ ಕದಡುವಂಥ ಕಹಿ ಘಟನೆಯೊಂದು ನಡೆದೋಗಿದೆ..ವ್ಯಕ್ತಿಗತ ತೇಜೋವಧೆ-ಚಾರಿತ್ರ್ಯವಧೆ.ಪರಸ್ಪರ ವ್ಯಕ್ತಿತ್ವ-ಸ್ವಭಾವಗಳನ್ನು ಟೀಕಿಸುವಂಥ ಮಟ್ಟಕ್ಕೆ ಸಂಘರ್ಷ ತಾರಕಕ್ಕೇರಿರುವುದನ್ನು ಮಾದ್ಯಮ ಹಾಗೂ ಚಿತ್ರರಂಗ ವಿಷಾದದ ದೃಷ್ಟಿಕೋನದಲ್ಲಿ ವಿಮರ್ಷಿಸಲಾರಂಭಿಸಿದೆ.

ಯೆಸ್..ಇದು ಕನ್ನಡ ಚಿತ್ರರಂಗದ ಪ್ರತಿಭಾನ್ವಿತ ನಟ-ನಿರ್ದೇಶಕ ರಕ್ಷಿತ್ ಶೆಟ್ಟಿ ಮತ್ತು ಕನ್ನಡ ಸುದ್ದಿ ವಾಹಿನಿಯೊಂದರ ಸಿನೆಮಾ ವಿಭಾಗದ ಮುಖ್ಯಸ್ಥ  ಹಾಗೂ ಅತ್ಯದ್ಭುತ ಬರಹಗಾರ ಮಹೇಶ್ ದೇವಶೆಟ್ಟಿ ನಡುವೆ ನಡೆಯುತ್ತಿರುವ ಸಂಘರ್ಷದ ಕಹಾನಿ.ತಮ್ ತಮ್ ಕ್ಷೇತ್ರಗಳಲ್ಲಿ ತಮ್ಮದೇ ಆದ ರೀತಿಯಲ್ಲಿ ಸಾಧನೆ ಮಾಡಿದ ಇವರಿಬ್ಬರ ನಡುವೆ ನಡೆಯುತ್ತಿರುವ ಸಂಘರ್ಷವನ್ನು ಅತ್ಯಂತ ದುರಾದೃಷ್ಟಕರ ಹಾಗು ವಿಪರ್ಯಾಸಕರ ಎಂದೇ ವಿಶ್ಲೇಷಿಸಲಾಗುತ್ತಿದೆ.

ಇವರಿಬ್ಬರ ನಡುವೆ ಅದ್ಯಾವ ಕಾರಣಗಳಿಗೆ ಸಂಘರ್ಷ ಶುರುವಾಯ್ತೋ…? .ಮಹೇಶ್ ದೇವಿಶೆಟ್ಟಿ ಯಾವ ಹಿನ್ನಲೆಯಲ್ಲಿ ನಟ ರಕ್ಷಿತ್ ಶೆಟ್ಟಿಯನ್ನು ಹಿಗ್ಗಾಮುಗ್ಗಾ ಜಾಡಿಸಲಿಕ್ಕೆ ಶುರುಮಾಡಿದ್ರೋ..? ಪಬ್ಲಿಕ್ ಟಿವಿ ಇದನ್ನೇ ಎಪಿಸೋಡ್ ಗಳಲ್ಲಿ ಪ್ರಸಾರ ಮಾಡಿತೋ..? ರಕ್ಷಿತ್ ಶೆಟ್ಟಿಗೆ ಆತ ಒಬ್ಬ ನಟನೇ ಅಲ್ಲ ಎಂದು ಸರ್ಟಿಫಿಕೇಟ್ ಕೊಡ್ತೋ..?ರಕ್ಷಿತ್ ಶೆಟ್ಟಿ ಅಭಿಮಾನಿಗಳು ಪಬ್ಲಿಕ್ ಟಿವಿ ಮುಂದೆ ಪ್ರತಿಭಟಿಸಿ ಕ್ಷಮೆಗೆ ಆಗ್ರಹಿಸಿದ್ರೋ.. ?ಸಾಮಾಜಿಕ ಜಾಲತಾಣದಲ್ಲಿ ಈ ಬೆಳವಣಿಗೆಯನ್ನು ತರೇವಾರಿಯಾಗಿ ವಿಶ್ಲೇಷಿಸಲು ಆರಂಬಿಸಲಾಯ್ತೋ..? ಈ ಎಲ್ಲಾ ವಿಷಯಗಳನ್ನು ಮತ್ತೆ ಚರ್ಚಿಸುವ ಗೋಜಿಗೇ ಹೋಗೋದು ಜೇನುಗೂಡಿಗೆ ಕಲ್ಲು ಹೊಡೆದಂತೆ…! ಇಂತದ್ದೊಂದು “ಅಸಂಭವ”ದ ಅಗತ್ಯ ನಿಜಕ್ಕೂ ಇತ್ತೇ ಎನ್ನುವುದರ ಬಗ್ಗೆಯಷ್ಟೇ ಬೆಳಕು ಚೆಲ್ಲುವುದು ಕನ್ನಡ ಫ್ಲಾಶ್ ನ್ಯೂಸ್ನ ಉದ್ದೇಶ.

ರಕ್ಷಿತ್ ಶೆಟ್ಟಿ..ಕನ್ನಡದ ಉತ್ತಮ ನಟರ ಸಾಲಿನಲ್ಲಿ ಗುರುತಿಸಿಕೊಳ್ಳುವ ಮಟ್ಟಕ್ಕೆ ಬೆಳೆದಾತ.ತನ್ನ 38 ವರ್ಷದಲ್ಲೇ ಕೆಲವು ಸೃಜನಶೀಲ ಪ್ರಯತ್ನಗಳ ಮೂಲಕ ಪ್ರೇಕ್ಷಕ ಸಮುದಾಯದಲ್ಲಿ ಬೆಳೆದು ಅಭಿಮಾನಿ ವರ್ಗವನ್ನು ಸೃಷ್ಟಿಸಿಕೊಂಡವರು.2010 ರಲ್ಲಿ ನಮ್ ಏರಿಯಾಲ್ಲಿ ಒಂದ್ ದಿನ ಚಿತ್ರದ ಮೂಲಕ  ಚಿತ್ರಜೀವನ ಆರಂಭಿಸಿದ ಈ ನಟ 11 ವರ್ಷಗಳ ವೃತ್ತಿಜೀವನದಲ್ಲಿ ನೆನಪಿಸಿಕೊಳ್ಳುವಂಥ ಒಂದಷ್ಟು ಚಿತ್ರಗಳನ್ನು ಸ್ಯಾಂಡಲ್ ವುಡ್ ಗೆ ನೀಡಿದ್ದಾರೆನ್ನುವುದು ಮಾತ್ರ ಸತ್ಯ.

2013 ರಲ್ಲಿ ತೆರೆ ಕಂಡು ಯಶಸ್ವಿಯಾದ ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ,ಅದೇ ವರ್ಷದ ಉಳಿದವರು ಕಂಡಂತೆ,2015 ರಲ್ಲಿನ ವಾಸ್ತು ಪ್ರಕಾರ,2016ರಲ್ಲ ತೆರೆ ಕಂಡ ಸೂಪರ್ ಹಿಟ್ ಚಿತ್ರ ಕಿರಿಕ್ ಪಾರ್ಟಿ,ರಿಕ್ಕಿ,ಗೋದಿ ಬಣ್ಣ ಸಾಧಾರಣ ಮೈಕಟ್ಟು,2019ರಲ್ಲಿನ ಅವನೇ ಶ್ರೀಮನ್ನಾರಾಯಣ ಚಿತ್ರಗಳ ಮೂಲಕ ತಮ್ಮನ್ನು ತಾವು ಪ್ರೂವ್ ಮಾಡಿಕೊಂಡರೆನ್ನುವುದನ್ನು ಅಲ್ಲಗೆಳೆಯೊಕ್ಕಾಗೊಲ್ಲ.ಉಳಿದವರು ಕಂಡಂತೆ ಚಿತ್ರಕ್ಕೆ 62ನೇ ದಕ್ಷಿಣ ಭಾರತ ಫಿಲ್ಮ್ ಫೇರ್ ಉತ್ತಮ ನಿರ್ದೇಶಕ ಪ್ರಶಸ್ತಿ(2015),2014ನೇ ಸಾಲಿನಲ್ಲಿ ಕನ್ನಡ ರಾಜ್ಯ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ,ಬಿಹೈಂಡ್ ವುಡ್ಸ್ ಉತ್ತಮ ನಿರ್ದೇಶಕ ಪ್ರಶಸ್ತಿ ಪಡೆದಿದ್ರು ರಕ್ಷಿತ್ ಶೆಟ್ಟಿ,ಅದೇ ಚಿತ್ರಕ್ಕೆ ಉತ್ತಮ ನಟ ಮತ್ತು ಗೀತ ರಚನಕಾರ ವಿಭಾಗಗಳಲ್ಲು ನಾಮನಿರ್ದೇಶನಗೊಂಡಿದ್ದು ಕಡಿಮೆ ಸಾಧನೆಯೇನಲ್ಲ.

ಗೋಧಿ ಬಣ್ಣ ಸಾಧಾರಣ ಮೈ ಕಟ್ಟು ಚಿತ್ರದಲ್ಲಿನ ಗೀತ ರಚನೆಗೆ KAFTA ಅವಾರ್ಡ್ಸ್,IIFTA ಉತ್ಸವಮ್ ನಲ್ಲಿ ಅದೇ ಚಿತ್ರಕ್ಕೆ ಪೋಷಕ ನಟ,ಉತ್ತಮ ಚಿತ್ರ,ಮುಖ್ಯ ಭೂಮಿಕೆಯಲ್ಲಿನ ನಟನೆ,ಅತ್ಯುತ್ತಮ ಗೀತ ರಚನೆಗೆ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ರು ರಕ್ಷಿತ್ ಶೆಟ್ಟಿ,ಇನ್ನು ಅದೇ ಉತ್ಸವಮ್ ನಲ್ಲಿ ಉತ್ತಮ ಕಥೆಗಾಗಿ ನಾಮನಿರ್ದೇಶನಗೊಂಡಿತ್ತು ಈ ಚಿತ್ರ.ಇನ್ನು ರಕ್ಷಿತ್ ಶೆಟ್ಟಿಯ ವೃತ್ತಿ ಜೀವನದಲ್ಲಿ ಮೈಲಿಗಲ್ಲಿನ ಚಿತ್ರ ಎಂದೇ ಕರೆಯಿಸಿಕೊಳ್ಳುವ ಕಿರಿಕ್ ಪಾರ್ಟಿಗೆ 2016ನೇ ಸಾಲಿನ ಉತ್ತಮ ಮನರಂಜನಾ ಚಿತ್ರ ಎನ್ನುವ ಹೆಗ್ಗಳಿಕೆಗೆ ರಾಜ್ಯ ಪ್ರಶಸ್ತಿ ಸಂದಿತ್ತು.ಇನ್ನು “ಉತ್ತಮ ನಟ,ಉತ್ತಮ ಗೀತ ರಚನೆಕಾರ, ಅತ್ಯುತ್ತಮ ವಿಮರ್ಷಾ ಚಿತ್ರ  ವಿಭಾಗಗಳಲ್ಲೂ 64ನೇ ದಕ್ಷಿಣ ಭಾರತ ಫಿಲ್ಮ್ ಫೇರ್ ಪ್ರಶಸ್ತಿ ಲಭಿಸಿತ್ತು.ಅದೇ ಚಿತ್ರ 6ನೇ  ಸೈಮಾ ಪ್ರಶಸ್ತಿ ಸಮಾರಂಭದಲ್ಲಿ ಉತ್ತಮ ನಟ,ಉತ್ತಮ ಚಿತ್ರ ಹಾಗೂ ಅತ್ಯುತ್ತಮ ಮನರಂಜನೆ ನೀಡಿದ ನಟ ಎನ್ನುವ ಸಾಲು ಸಾಲು ಪ್ರಶಸ್ತಿಗಳು ರಕ್ಷಿತ್ ಶೆಟ್ಟಿ ಜೋಳಿಗೆಯನ್ನು ತುಂಬಿಸಿದ್ದಕ್ಕೆ ಇತಿಹಾಸವೇ ಸಾಕ್ಷಿಯಿದೆ.

ಶ್ರೀಮನ್ ನಾರಾಯಣ ಹುಟ್ಟುಹಾಕಿದ್ದ ದೊಡ್ಡ ಮಟ್ಟದ ನಿರೀಕ್ಷೆಯನ್ನು ಹುಸಿಗೊಳಿಸಿತ್ತೆನ್ನುವುದು ಸತ್ಯವಾದ್ರೂ ಬಿಗ್ ಬಜೆಟ್ ಚಿತ್ರಗಳ ನಿರ್ಮಾಣ ಹಾಗೂ ಮಾರುಕಟ್ಟೆ ವಿಸ್ತಾರ ಕನ್ನಡ ಚಿತ್ರರಂಗಕ್ಕೂ ಸಾಧ್ಯ ಎನ್ನುವುದನ್ನು ಪರಿಚಯಿಸಿಕೊಟ್ಟಿತೆಂದು   ಚಿತ್ರ ವಿಮರ್ಷಕರೇ ವಿಶ್ಲೇಷಿಸಿದ್ದನ್ನು ಮರೆಯಬಾರದು.ಆ ಚಿತ್ರದ ಅನಿರೀಕ್ಷಿತ ಸೋಲಿನ ನೈತಿಕ ಹೊಣೆಯನ್ನೂ ಹೊತ್ತುಕೊಂಡಿದ್ದ ರಕ್ಷಿತ್ ಶೆಟ್ಟಿ,ಎಚ್ಚರಿಕೆಯ ಹೆಜ್ಜೆಗಳನ್ನು ಇಡುವ ಮಾತನಾಡಿದ್ದರು.ತಪ್ಪುಗಳಿಂದ ಕಲಿತ ಪಾಠ ನನ್ನ ಚಾರ್ಲಿ 777 ಚಿತ್ರದಲ್ಲಿ ಸ್ಪಷ್ಟವಾಗಿ ಕಾಣುತ್ತದೆ.ಹಾಗೆಯೇ ಸಪ್ತಸಾಗರದಾಚೆ ಎಲ್ಲೋ ಕೂಡ ತನ್ನ ವೃತ್ತಿಜೀವನದಲ್ಲಿ ಮೈಲಿಗಲ್ಲಾಗುವ ಚಿತ್ರವಾಗಲಿದೆ ಎಂದು ರಕ್ಷಿತ್ ಶೆಟ್ಟಿ ಅಭಿಮಾನ ಪೂರ್ವಕವಾಗಿಯೇ ಹೇಳಿದ್ದರು.

ಇದೆಲ್ಲಾ ರಕ್ಷಿತ್ ಶೆಟ್ಟಿ ವೃತ್ತಿಜೀವನದ ಸಾಹಸ-ಸಾಧನಗಾಥೆಗಳ ವಿಷಯವಾದ್ರೆ ಅವರ ಪ್ರೊಪೆಷನಲ್ ಕ್ಯಾಲಿಬರ್ ಹಾಗೂ ಪರ್ಸ ನಾಲಿಟಿಸ್ ಕ್ವಾಲಿಟಿಸ್ ಬಗ್ಗೆ ಹೇಳೋದಾದ್ರೆ ಬೆರಳೆಣಿಕೆಯ ಹಿಟ್  ಚಿತ್ರಗಳನ್ನು ನೀಡಿರುವ ರಕ್ಷಿತ್ ಗೆ ಅಹಂ ಬಂದಿದೆ,ಇದು ತಾನು ಸಾಗಿ ಬಂದ ದಾರಿಯನ್ನೇ ಮರೆಯುವಂತೆ ಮಾಡಿದೆ ಎನ್ನುವ ಮಾತುಗಳಿರೋದು ಕೂಡ ಸುಳ್ಳಲ್ಲ..ಇದನ್ನು ಸಂಪೂರ್ಣವಾಗಿ ಅಲ್ಲಗೆಳೆಯೊಕ್ಕೆ ಹೇಗೆ ಆಗಲ್ವೋ ಹಾಗೆಯೇ ಹರ್ಡೆಂಡ್ ಪರ್ಸೆಂಟ್ ಸತ್ಯ ಎಂದು ಒಪ್ಪಲಿಕ್ಕೂ ಆಗೊಲ್ಲ.ಏಕೆಂದ್ರೆ ಇದು ಚಿತ್ರರಂಗದ ಬಹುತೇಕ ಸ್ಟಾರ್ ನಟರಿಗೆ ಇರೋ ಕೆಟ್ಟ ಚಾಳಿ ಕಾಯಿಲೆ ಹಾಗು ಖಯಾಲಿ.ಒಂದ್ ಹಿಟ್ ಚಿತ್ರ ಕೊಟ್ಟಾಕ್ಷಣ ತಾವೇನೋ ಕಿತ್ ದಬಾಕಿದಿವಿ ಎಂದೋ ಅಹಂನ ಭೂತವನ್ನು ಮೈ-ಮನಸಿಗೆ ಅಂಟಿಸಿಕೊಂಡೇ ಅಡ್ಡಾಡುತ್ತಲೇ ಇರುತ್ತಾರೆ.ಆದ್ರೆ ಚಿತ್ರರಂಗ, ಏಳು-ಬೀಳು-ಸೋಲು-ಗೆಲುವುಗಳ ಅಖಾಡ ಎಂದರಿತು ಸ್ಥಿತಪ್ರಜ್ಞರಾಗುಳಿದಂಥವ್ರನ್ನು ಮಾತ್ರ ಧೀರ್ಘಕಾಲದವರೆಗೂ ಸಂಭಾಳಿಸುತ್ತದೆ ಎನ್ನುವುದು ನಗ್ನ ಸತ್ಯ.ಇದನ್ನು ರಕ್ಷಿತ್ ಶೆಟ್ಟಿ ಕೂಡ ಅರ್ಥ ಮಾಡಿಕೊಳ್ಳೋದು ಸೂಕ್ತ ಎನಿಸುತ್ತದೆ.

ಮಾಡಿಕೊಂಡ ಯಡವಟ್ಟು ಸರಿ ಹೋದ್ಮೇಲೆ ಅದಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ಕೇಳೊಕ್ಕೆ ಕಾಲ್ ಮಾಡಿದ್ರೆ ರಿಯಾಕ್ಟ್ ಮಾಡು ವಂತ ಸೌಜನ್ಯ ಪ್ರದರ್ಶಿಸಿದ್ರೆ,ಬ್ಯುಸಿಯಿದ್ದರೆ ತಡವಾಗಿಯಾದ್ರೂ ರಿಯಾಕ್ಟ್ ಮಾಡುವಂತ ಸೌಜನ್ಯ ಬೆಳೆಸಿಕೊಂಡಿದ್ರೆ ಈ ಅಸಂಭವಗಳೇ ಸೃಷ್ಟಿಯಾಗುತ್ತಿರಲಿಲ್ಲ ವೇನೋ..ಅದೆಷ್ಟೊ ಸನ್ನಿವೇಶಗಳಲ್ಲಿ ಮಾದ್ಯಮಗಳವ್ರು ಕೇಳೋ ಪ್ರಶ್ನೆಗಳು ತಮಗ್ಹೇಗೆ ಕಿರಿಕಿರಿ ಉಂಟುಮಾಡ್ತವೆ..ನೋವು ನೀಡ್ತವೆ..ನೇರವಾಗಿ ಎದೆಯನ್ನೇ ಚುಚ್ಚುತ್ತವೆ ಎಂದು ಆಪಾದಿಸುವ ಸ್ಟಾರ್ಸ್ ಗಳಿಗೆ ಆಗುವ ಅನುಭವವೇ,ಗಂಭೀರ-ಪ್ರಮುಖ ವಿಚಾರಗಳಿಗೆ ಸ್ಪಷ್ಟನೆ ಕೇಳುವ ಸನ್ನಿವೇಶ ದಲ್ಲಿ ಸಂಪರ್ಕಕ್ಕೆ ಯತ್ನಿಸಿದ್ರೂ ಪ್ರಜ್ಞಾಪೂರ್ವಕವಾಗಿ ಸ್ಟಾರ್ಸ್ ಗಳು ಸಿಗದಿದ್ದಾಗ ಮಾದ್ಯಮದವರಿಗೂ ಆಗುತ್ತದೆ ಎಂದು ಅರ್ಥ ಮಾಡಿಕೊಳ್ಳಬೇ ಕಾಗುತ್ತದೆ.ರಕ್ಷಿತ್ ಶೆಟ್ಟಿ ವಿಚಾರದಲ್ಲಿ ಇದೇ ಆಗಿರಬೋದು ಎನಿಸುತ್ತದೆ.ಇದನ್ನು ರಕ್ಷಿತ್ ಶೆಟ್ಟಿ ಅವರಂಥ ನಟ ಅರ್ಥ ಮಾಡಿಕೊಳ್ಳಬೇಕಾಗುತ್ತದೆ.

ಗೊತ್ತಿದ್ದೋ..ಗೊತ್ತಿಲ್ಲದೆಯೋ, ಹುಂಭ-ಹುಡುಗಾಟದ ರಕ್ಷಿತ್ ಶೆಟ್ಟಿ  ಮಾಡಿದ ತಪ್ಪನ್ನೇ, ಚಿತ್ರರಂಗವನ್ನು ಹತ್ತಿರದಿಂದ ಸೂಕ್ಷ್ಮವಾಗಿ ಗಮನಿಸುತ್ತಾ ಬಂದಿರುವ ಹಿರಿಯ  ಸಿನೆಮಾ ವರದಿಗಾರ ಮಹೇಶ್ ದೇವಿಶೆಟ್ಟಿ ಮಾಡಿದ್ದು ಸರಿನಾ ಎಂದು ಚಿತ್ರರಂಗ ಹಾಗೂ ಮಾದ್ಯಮ ಜಗತ್ತು ಮಾತ್ನಾಡಿಕೊಳ್ಳುತ್ತಿರುವುದು ಸುಳ್ಳಲ್ಲ. ಮಹೇಶ್ ದೇವಿಶೆಟ್ಟಿ.ಚಿತ್ರರಂಗಕ್ಕೆ ಅತ್ಯಂತ ಚಿರಪರಿಚಿತ ಹೆಸ್ರು.ಅವರನ್ನು ತಿಳಿಯದವರೇ ಇಲ್ಲ ಎನ್ನುವಷ್ಟರ ಮಟ್ಟಿಗೆ ತಮ್ಮ ಕೆಲಸದ ಮೂಲಕ ಹೆಸರು ಮಾಡಿದ್ದಾರೆ ಶೆಟ್ಟಿ.ಸ್ವಲ್ಪ ಒರಟು ಎನ್ನೋದನ್ನು ಬಿಟ್ರೆ ಕೆಲಸಕ್ಕೆ ಕುಳಿತ್ರೆ ದೈತ್ಯ ಎನ್ನುವುದು ಅವರನ್ನು ಹತ್ತಿರದಿಂದ ಬಲ್ಲವರ ಮಾತುಗಳು.ಯಾವುದೇ ಇಸಂಗಳಿಗೂ  ಜೋತುಬೀಳದೆ ಇದ್ದದ್ದನ್ನು ಇದ್ದಾಗೆ ಹೇಳುವ ನಿಷ್ಠೂರ ಮನಸ್ತಿತಿಯ ಬರಹಗಾರ ಎನ್ನುವ ಹೆಗ್ಗಳಿಕೆ ಅವರಿಗಿದೆ.ಆದ್ರೆ ಅದೇ ಕಾರಣಕ್ಕೆ ಹಲವರ ವಿರೋಧಕ್ಕೆ ತುತ್ತಾಗಿದ್ದುಂಟು.

ಇಷ್ಟೆಲ್ಲಾ ಕ್ವಾಲಿಟಿಸ್ ಇರುವಂಥ ಮಹೇಶ್ ದೇವಿಶೆಟ್ಟಿ ರಕ್ಷಿತ್ ಶೆಟ್ಟಿ ವಿಚಾರದಲ್ಲಿ ತೇಜೋವಧೆ-ಚಾರಿತ್ರ್ಯವಧೆ  ಮಟ್ಟಕ್ಕೆ ಇಳಿದುಬಿಟ್ರಾ ಎಂದು ಚಿತ್ರರಂಗ ಶಂಕೆ ವ್ಯಕ್ತಪಡಿಸುತ್ತದೆ.ಪಬ್ಲಿಕ್ ಟಿವಿಯಲ್ಲಿ ಪ್ರಸಾರವಾದ ರಕ್ಷಿತ್ ಶೆಟ್ಟಿ ಕುರಿತಾದ ವರದಿಯಲ್ಲಿ ಉಲ್ಲೇಖಿಸಿದ ಸನ್ನಿವೇಶ,ಬಳಸಲಾದ ಪದಗಳು,ವಿಮರ್ಷಿಸಿದ ರೀತಿ ಅದ್ಹೇಕೋ ಹಲವರನ್ನು ನೋಯಿಸಿದೆ.ಮಹೇಶ್ ದೇವಿಶೆಟ್ಟಿ ಅವರಿಂದ ಇಂತದ್ದೊಂದು ವರದಿಯನ್ನು ನಿರೀಕ್ಷಿಸಿರಲಿಲ್ಲ.ಈ ಬರಹದ ಹಿಂದೆ ವ್ಯಕ್ತಿಗತ ಅಸಹನೆ-ಸಿಟ್ಟು-ಆಕ್ರೋಶ-ಹಿತಾಸಕ್ತಿ ಅಡಗಿದೆಯಾ ಎಂದು ಚಿತ್ರರಂಗ ವಿಶ್ಲೇಷಿಸುತ್ತಿರುವುದು ಸುಳ್ಳಲ್ಲ. ಮಹೇಶ್ ದೇವಿಶೆಟ್ಟಿ ಅವರ ಬರಹವನ್ನು ಮೆಚ್ಚುವ, ಎದೆಗಾರಿಕೆಯ ವರದಿಗಾರಿಕೆಯನ್ನು ಒಪ್ಪುವಂಥವ್ರೇ ಇಂತದ್ದೊಂದು ವರದಿ ಬೇಕಿರಲಿಲ್ಲ ಎಂದು ಮಾತ್ನಾಡಿಕೊಂಡಿದ್ದು ಕೂಡ ಅಷ್ಟೇ ಸತ್ಯ.

ರಕ್ಷಿತ್ ಶೆಟ್ಟಿ ಅವರನ್ನು ಟೀಕಿಸಲಿ, ಅವರ ವ್ಯಕ್ತಿಗತ ಹಾಗೂ ವೃತ್ತಿಪರ ಆಯಾಮಗಳನ್ನು ವಿಮರ್ಷಿಸಲಿ,ಅದು ಮಾದ್ಯಮ ಹಾಗೂ ವರದಿಗಾರನ ಕರ್ತವ್ಯವೂ ಹೌದು..ಆದ್ರೆ ಅದು ಶಿಷ್ಟಾಚಾರ-ರಚನಾತ್ಮಕವಾಗಿರಬೇಕೆನ್ನುವು ದು ಕೂಡ ಅಷ್ಟೇ ಸತ್ಯ.ಚಿತ್ರರಂಗದಲ್ಲಿ ತಪ್ಪು-ಒಪ್ಪುಗಳಾದಾಗ ಅದನ್ನು ಸರಿಪಡಿಸೋ ಕೆಲಸವನ್ನು ಮಾದ್ಯಮ ರಂಗ ಮಾಡುತ್ತಲೇ ಬಂದಿದೆ.ಇವತ್ತಿಗೂ ಚಿತ್ರರಂಗ ಹಾಗೂ ಮಾದ್ಯಮರಂಗದ ನಡುವೆ ಒಂದೊಳ್ಳೆ ಸಂಬಂಧ ಮುಂದುವರೆದುಕೊಂಡೇ ಬಂದಿದೆ.

ಆದ್ರೆ ವ್ಯಕ್ತಿಯನ್ನು ಟೀಕಿಸುವ ಭರದಲ್ಲಿ ಮಹೇಶ್ ದೇವಿಶೆಟ್ಟಿ ಕೊಂಚ ವಿವೇಚನೆ ಮರೆತುಬಿಟ್ರಾ..ವಿಮರ್ಷಿಸುವ ರೋಷಾವೇಶದಲ್ಲಿ ಸಂಯಮ-ತಾಳ್ಮೆ ಕಳೆದುಕೊಂಡ್ರಾ..ಅದರಲ್ಲೂ ಅವರಂಥ ಹಿರಿಯ-ಅನುಭವಿ ಸಿನೆಮಾ ವರದಿಗಾರನಿಂದ ಇಂತದ್ದನ್ನು ನಿರೀಕ್ಷಿಸಿ ರಲಿಲ್ಲ ಎಂದು ಚಿತ್ರರಂಗ ಮಾತನಾಡಿಕೊಳ್ಳುತ್ತಿದೆ.ಅದೇನೇ ಆಗಲಿ,ಇಲ್ಲಿ ಯಾರು ಸರಿ..ಯಾರು ತಪ್ಪು ಗೊತ್ತಿಲ್ಲ..ಆದ್ರೆ ಚಿತ್ರರಂಗ ಹಾಗೂ ಮಾದ್ಯಮ ರಂಗದ ನಡುವಿರುವ ಸಮನ್ವಯ-ಸಾಮರಸ್ಯಕ್ಕೆ ಧಕ್ಕೆ ತರುವಂಥ ರೀತಿಯಲ್ಲಿ ಈ ಬೆಳವಣಿಗೆ ನಡೆದಿದ್ದು ಮಾತ್ರ ದುರಾದೃಷ್ಟಕರ.

Spread the love
Leave A Reply

Your email address will not be published.

Flash News