BreakingCORONA LOCKDOWN HEROESCORONA VIRUSKANNADAFLASHNEWSFIGHTAGAINSTCORONAlock downMoreScrollTOKYO OLYMPICS-2021Top NewsUncategorizedಕ್ರೀಡೆ/ವಿಶ್ಲೇಷಣೆದೇಶ-ವಿದೇಶಫೋಟೋ ಗ್ಯಾಲರಿಮಾಹಿತಿ/ತಂತ್ರಜ್ಞಾನವಿಚಿತ್ರ-ವಿಶೇಷ

ಬಾಲ್ಯದಲ್ಲಿ ಮಣಭಾರದ ಹೊರೆ ಹೊತ್ತ ಮೀರಾಬಾಯಿ “ಭುಜ”ಗಳಿಂದಲೇ ಒಲಂಪಿಕ್ಸ್ ಬೆಳ್ಳಿ ಸಾಧನೆ

ಬೆಳ್ಳಿ ಗೆದ್ದ ಸಂಭ್ರಮದ ಭಂಗಿ..
ಬೆಳ್ಳಿ ಗೆದ್ದ ಸಂಭ್ರಮದ ಭಂಗಿ..

ಟೊಕಿಯೋ: ಸಾಧನೆ ಎನ್ನೋದು ಹೀಗೆಯೇ..ಕೆಲವೇ ಕ್ಷಣಗಳಲ್ಲಿ ಸಂಭವಿಸಿಬಿಡುವ  ಆ ಐತಿಹಾಸಿಕ ರಸಗಳಿಗೆಗೆ ವರ್ಷಗಳಲ್ಲ,ಅದೊಂದು ರೀತಿಯ ಶಬರಿಯ ತಪಸ್ಸು.ಅದು ಸಿದ್ದಿಸೊಕ್ಕೆ-ಸಾಧ್ಯವಾಗೊಕ್ಕೆ  ದಶಕಗಳವರೆಗೂ ಕಾಯಲೇಬೇಕಾಗುತ್ತದೆ.ಇದಕ್ಕೆ ಟೊಕಿಯೋ ಒಲಂಪಿಕ್ಸ್ ಸಾಕ್ಷಿಯಾಗಿದೆ.ಆ ಒಂದು ಸಾಧನೆಗೆ ಭಾರತ ಕಾಯಬೇಕಾಗಿ ಬಂದಿದ್ದು ಒಂದಲ್ಲ ಎರಡಲ್ಲ..ಹತ್ತಲ್ಲ..ಹದಿನೈದಲ್ಲ..ಬರೋಬ್ಬರಿ 21 ವರ್ಷ..ಈ ಅವಧಿಯಲ್ಲಿ ಏನೇನೋ ಆಗೋಗಿಬಿಟ್ಟಿದೆ.ಆದ್ರೆ ಈ ಎರಡು ದಶಕಗಳ ನಿರಂತರ ಕಾತರ-ಕಾಯುವಿಕೆಗೆ ಮೀರಾ ಚಾನು ಫುಲ್ ಸ್ಟಾಪ್ ಹಾಕಿದ್ದಾರೆ. ಪ್ರತಿಯೊಬ್ಬ ಭಾರತೀಯನ ಹೆಮ್ಮೆ ಹಾಗೂ ಸಂಭ್ರಮಕ್ಕೆ 26 ವರ್ಷದ ಮೀರಾ ಚಾನು ಕಾರಣವಾಗಿದ್ದಾಳೆ.

ಜಗತ್ತಿನಲ್ಲಿ  ಸಾಕಷ್ಟು ಸಾಧಕರ ಸಾಧನೆಗೆ ಹಸಿವು-ಬಡತನವೇ ಪ್ರೇರಣೆ ಎನ್ನುವ ಮಾತು ಈ ಸಾಧಕಿಯ ವಿಷಯದಲ್ಲೂ ಸತ್ಯವಾಗಿದೆ. ಮಣಿಪುರ ರಾಜಧಾನಿ ಇಂಪಾಲದ ನಾಂಗ್ ಪೊಕ್ ಕಾಲ್ಚಿಂಗ್ ಎನ್ನುವ ಪುಟ್ಟ ಗ್ರಾಮದಲ್ಲಿ ಜನಿಸಿದ ಅ ಬಾಲಕಿ ಸಾಧನೆಗೂ ಬಾಲ್ಯದ ಕಷ್ಟಕಾರ್ಪಣ್ಯಗಳೇ ಕಾರಣವಾಗಿದ್ದು ವಿಶೇಷ.

ಆಟ-ಪಾಟ-ತುಂಟಾಟಗಳಲ್ಲಿ ಕಳೆಯಬೇಕಾಗಿದ್ದ ಬಾಲ್ಯ ಬಡತನದಲ್ಲೇ ಕರಗಿಹೋಗುತ್ತಿದ್ದ  ದಿನಗಳಲ್ಲಿ ತನ್ನ ಕೆಜಿಗಟ್ಟಲ ಸೌದೆಯ ಭಾರ ಎತ್ತಿದ ಭುಜಗಳವು.ಅದೇ ಭಾರ ಮನಸು-ದೇಹವನ್ನು ಕಠಿಣಗೊಳಿಸಿ ಸಾಧನೆಗೆ ಹುರಿಗೊಳಿಸಿದ್ದೂ ವಿಶೇಷನೇ.. ಆಕೆ ಹೊತ್ತ ಕೊಟ್ಟಿಗೆಯ ಭಾರವೇ ಇವತ್ತು ಕ್ರೀಡಾ ಜಗತ್ತಿನ ಅತೀ ದೊಡ್ಡ ವೇದಿಕೆಯಲ್ಲಿ ಜಗತ್ತು ನಿಬ್ಬೆರಗಾಗಿಸುವ ಸಾಧನೆಗೆ ಕಾರಣವಾಗಿದ್ದು ಎಷ್ಟು ಸತ್ಯವೋ,ನೂರಾರು ಕೋಟಿ ಭಾರತೀಯರ ನಿರೀಕ್ಷೆಯ ಭಾರವನ್ನು ಸಮರ್ಥವಾಗಿ ಎತ್ತಿ ಬೆಳ್ಳಿ ಪದಕವನ್ನು ಕೊರಳಿಗೇರಿಸಿಕೊಳ್ಳಲು ಸಾಧ್ಯವಾಗಿದ್ದು ಕೂಡ ಅಷ್ಟೇ ವಾಸ್ತವ.

ಮೀರಾ ಚಾನು ಅವರ ಸಾಧನೆಯ ಸ್ಮರಣೀಯ ಕ್ಷಣ..
                      ಮೀರಾ ಚಾನು ಅವರ ಸಾಧನೆಯ ಸ್ಮರಣೀಯ ಕ್ಷಣ..

ಆಕೆ..ಮೀರಾಬಾಯಿ ಚಾನು..ಪಂಚ ಸಹೋದರಿಯರ ನಾಡು ಎಂದು ಕರೆಯಿಸಿಕೊಳ್ಳುವ ಇವತ್ತಿಗೂ ಅಭಿವೃದ್ಧಿ ಕಾಣದ ಈಶಾನ್ಯ ಭಾರತದ ರಾಜ್ಯಗಳಲ್ಲೊಂದಾದ ಮಣಿಪುರ ದಲ್ಲಿ ಜನಿಸಿದ ಹೆಮ್ಮೆಯ ಗುಡ್ಡಗಾಡಿನ ಮಗಳು.  ತುಂಬು ಕುಟುಂಬದಲ್ಲಿ ಜನಿಸಿದ ಮೀರಾ 12 ವಯಸ್ಸಿನವಳಿದ್ದಾಗಲೇ ಗುಡ್ಡಗಾಡುಗಳಿಂದ ಸಂಗ್ರಹಿಸಿದ ಕಟ್ಟಿಗೆಯ ಹೊರೆಗಳನ್ನು ಭುಜದ ಮೇಲೆ ಹೊತ್ತು ಕಿಲೋಮೀಟರ್ ದೂರವನ್ನು ಕ್ರಮಿಸುತ್ತಿದ್ದಳಂತೆ.ಅದೇ ಕಟ್ಟಿಗೆಯ ಮಣಭಾರದ ಬವಣೆ,ಕ್ರೀಡಾ ಇತಿಹಾಸದ ಪುಟಗಳಲ್ಲಿ ಸುವರ್ಣಾಕ್ಷರಗಳಲ್ಲಿ ಬರೆದಿಡುವಂತ ಸಾಧನೆಗೆ ಮೈಲಿಗಲ್ಲಾಗಿದ್ದು ಕಡಿಮೆ ಮಾತೇನಲ್ಲ.

ಜಪಾನ್ ರಾಜಧಾನಿ ಟೊಕಿಯೋದಲ್ಲಿ ನಡೆಯುತ್ತಿರುವ ಒಲಂಪಿಕ್ಸ್ ನಲ್ಲಿ ಮಣಿಪುರದ ಸಾಯ್ ಕೋಮ್ ಮೀರಾಬಾಯಿ ಚಾನು ವೇಟ್ ಲಿಫ್ಟಿಂಗ್ ನಲ್ಲಿ ರಜತ ಪದಕ ಗೆಲ್ಲುವ ಮೂಲಕ ಭಾರತೀಯರು ಹೆಮ್ಮೆಯಿಂದ ಬೆನ್ನು ತಟ್ಟಿಕೊಳ್ಳುವಂತೆ ಮಾಡಿದ್ದಾಳೆ.ಪ್ರತಿಯೋರ್ವ ಭಾರತೀಯನ ಕಣ್ಣಾಲಿಗಳನ್ನು ಒದ್ದೆಯಾಗಿಸಿದ್ದಾಳೆ.ಉಕ್ಕಿಬರುತ್ತಿರುವ ಸಂತಸದಿಂದ ಗಂಟಲು ಬಿಗಿಯುವಂತೆ ಮಾಡಿದ್ದಾಳೆ.49 ಕೆಜಿ ವಿಭಾಗದಲ್ಲಿ ಬೆಳ್ಳಿ ಪದಕ ಗಳಿಸಿ ಭಾರತಕ್ಕೆ ಪದಕ ಪಟ್ಟಿಯಲ್ಲಿ ಗೌರವಯುತ ಸ್ಥಾನ ಕಲ್ಪಿಸಿದ್ದಾಳೆ.ಪದಕ ಬೇಟೆಗೆ ಮುನ್ನುಡಿ ಹಾಡಿದ್ದಾಳೆ.

ಒಲಂಪಿಕ್ಸ್ ನಲ್ಲಿ ಕಂಚಿನ ಪದಕ ಗೆದ್ದಿದ್ದ ಹೆಮ್ಮೆಯ ವೇಟ್ ಲಿಫ್ಟರ್  ಕರ್ಣಂ ಮಲ್ಲೇಶ್ವರಿ ನಂತರ ಪದಕ ಗೆದ್ದ ಎರಡನೇ ಭಾರತೀಯ ವೇಟ್ ಲಿಫ್ಟರ್ ಎನ್ನುವ ಹೆಗ್ಗಳಿಕೆಗೆ ಭಾಜನರಾಗಿದ್ದಾರೆ.( 2000ರ ಸಿಡ್ನಿ ಒಲಿಂಪಿಕ್ಸ್‌ನಲ್ಲಿ ಕರ್ಣಂ ಮಲ್ಲೇಶ್ವರಿ ವೇಟ್‌ಲಿಫ್ಟಿಂಗ್ 69 ಕೆ.ಜಿ ವಿಭಾಗದಲ್ಲಿ ಕಂಚಿನ ಪದಕ ಗೆದ್ದಿದ್ದರು.) ಆದರೆ  ಒಟ್ಟು 202 ಕೆ.ಜಿ (87 ಕೆ.ಜಿ. ಹಾಗೂ 115 ಕೆ.ಜಿ.) ಭಾರ ಎತ್ತುವ ಮೂಲಕ ಕರ್ಣಂ ಮಲ್ಲೇಶ್ವರಿ ಸಾಧನೆಯನ್ನು ಮೀರಿದ್ದು ವಿಶೇಷ. ಚಿನ್ನ ಗೆದ್ದ ಚೀನಾದ ಹೋವ್‌ ಝಿಹು ಒಟ್ಟು 210 ಕೆ.ಜಿ (91 ಕೆ.ಜಿ ಹಾಗೂ 116 ಕೆ.ಜಿ) ಭಾರ ಎತ್ತುವ ಮೂಲಕ ಚಿನ್ನಕ್ಕೆ ಕೊರಳೊಡ್ಡಿದರು.

ತನ್ನ ತುಂಬು ಕುಟುಂಬದೊಂದಿಗೆ ಮೀರಾಬಾಯಿ ಚಾನು
                                  ತನ್ನ ತುಂಬು ಕುಟುಂಬದೊಂದಿಗೆ ಮೀರಾಬಾಯಿ ಚಾನು
ತನ್ನ ಅಮ್ಮನ ಜತೆಯಲ್ಲಿ ಮುದ್ದಿನ ಮಗಳಾದ ಮೀರಾಬಾಯಿ
ಅಮ್ಮನ ಜತೆಯಲ್ಲಿ  ಮೀರಾಬಾಯಿ

1994ರ ಆಗಸ್ಟ್ 8 ರಂದು ಮಣಿಪುರ ರಾಜಧಾನಿ ಇಂಪಾಲದ ನಾಂಗ್ ಪೊಕ್ ಕಾಲ್ಚಿಂಗ್ ಎನ್ನುವ ಪುಟ್ಟ ಗ್ರಾಮದಲ್ಲಿ ಜನಿಸಿದಾಕೆ ಮೀರಾಬಾಯಿ.ಸಂಕಷ್ಟದಲ್ಲೇ ಕಳೆದ ಜೀವನ ಬದುಕಿನ ಪಾಠ ಕಲಿಸಿತ್ತು.ವೇಟ್ ಲಿಫ್ಟಿಂಗ್ ಗೆ ಸಾಕಷ್ಟು ಪ್ರತಿಭೆಗಳನ್ನು ನೀಡಿರುವ ಮಣಿಪುರದ ಮತ್ತೊಂದು ಕೊಡುಗೆ ನಾನೇಕೆ ಅಗಬಾರದೆನ್ನುವ ಅಗಾಧ ಆಸೆಯಲ್ಲಿ ಸಾಧಕರನ್ನು ನೋಡುತ್ತಲೇ ಬೆಳೆದ ಹುಡುಗಿ.ಆಕೆಯ ಉತ್ಸಾಹಕ್ಕೆ ನೀರೆರೆದವರು ಆಕೆಯ ಗುರು  ವಿಜಯ್ ಶರ್ಮಾ ಹಾಗೂ ಆರೋನ್ ಹಾರ್ಷಿಂಗ್.ಅವರಿಬ್ಬರ ಮಾರ್ಗದರ್ಶನದಲ್ಲಿ ತರಬೇತಿ ಆರಂಭಿಸಿದ ಚಾನು ಗೆ ಸಾಧನೆ ಅಷ್ಟು ಸಲೀಸಾಗಿ ಸಿದ್ದಿಸಿದಲ್ಲ.

ಸ್ಥಳೀಯ-ರಾಜ್ಯ-ರಾಷ್ಟ್ರೀಯ ಮಟ್ಟದಲ್ಲಿ ತನ್ನ ಸಾಧನೆ ಮೂಲಕ ಗಮನ ಸೆಳೆದ ಮೀರಾಬಾಯಿ ಹೆಸರು ಜಾಗತಿಕ ಮಟ್ಟದಲ್ಲಿ ಕೇಳಿಬಂದಿದ್ದು ಗ್ಲಾಸ್ಗೋ ಆವೃತ್ತಿಯ ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ.48 ಕೆಜಿ ತೂಕದ ವಿಭಾಗದಲ್ಲಿ  ಬೆಳ್ಳಿ ಪದಕ ಗೆದ್ದು ಗಮನ ಸೆಳೆದರು.ಅವರ ಸಾಧನೆ ರಿಯೋ ಒಲಂಪಿಕ್ಸ್ ನಲ್ಲಿ ಸ್ಥಾನ ಪಡೆಯೊಕ್ಕೆ ಕಾರಣವಾಯಿತು. 2016 ರ ರಿಯೊ ಒಲಿಂಪಿಕ್ಸ್ ನಲ್ಲಿ ಪಾಲ್ಗೊಂಡರಾದ್ರೂ ಕ್ಲೀನ್ & ಜರ್ಕ್ ವಿಭಾಗದಲ್ಲಿ ಮೂರು ಪ್ರಯತ್ನಗಳಲ್ಲಿಯೂ ಯಾವುದೇ ಯಶಸ್ವಿ ಲಿಫ್ಟ್ ಗಳಿಲ್ಲದೆ ನೀರಸ ಪ್ರದರ್ಶನ ನೀಡಿದ್ರು.ಆದ್ರೆ ಅದೇ ಸೋಲು ಗೆಲ್ಲುವ ಛಲ-ಹಠ ಮೂಡಿಸಿತು.ಅದರ ಪರಿಣಾಮ

2017 ರಲ್ಲಿ ಅಮೆರಿಕಾದ  ಅನಾಹೈಮ್ನಲ್ಲಿ ನಡೆದ 2017 ರ ವಿಶ್ವ ವೇಟ್ ಲಿಫ್ಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಪ್ರತಿಫಲಿಸಿತು. ಒಟ್ಟು 48 ಕೆಜಿ (85 ಕೆಜಿ ಸ್ನ್ಯಾಚ್ ಮತ್ತು 109 ಕೆಜಿ ಕ್ಲೀನ್ & ಜರ್ಕ್) ಸ್ಪರ್ಧೆಯಲ್ಲಿ  ದಾಖಲೆ ಸಮೇತ ಚಿನ್ನ ಸಂಪಾದಿಸಿ ಸೋಲಿನ ಪ್ರತೀಕಾರ ತೀರಿಸಿಕೊಂಡರು.ಆಕೆಯ ಗುರಿ ಇದ್ದುದ್ದು ಟೊಕಿಯೋ ಒಲಂಪಿಕ್ಸ್ ನಲ್ಲಿ ಪದಕದ ಮೇಲೆ.

ತನ್ನ ಕ್ರೀಡಾ ಬೆಳವಣಿಗೆಗೆ ಬೆನ್ನಾಗಿ ನಿಂತ ಕೋಚ್ ವಿಜಯ್ ಶರ್ಮಾ ಜತೆ
ತನ್ನ ಕ್ರೀಡಾ ಬೆಳವಣಿಗೆಗೆ ಬೆನ್ನಾಗಿ ನಿಂತ ಕೋಚ್ ವಿಜಯ್ ಶರ್ಮಾ ಜತೆ
ಕ್ರೀಡಾಕ್ಷೇತ್ರದ ಸಾಧನೆಗೆ ರಾಜೀವ್ ಗಾಂಧೀ ಖೇಲ್ ರತ್ನ ಪ್ರಶಸ್ತಿ ಸ್ವೀಕರಿಸಿದ ಸನ್ನಿವೇಶ
ಕ್ರೀಡಾಕ್ಷೇತ್ರದ ಸಾಧನೆಗೆ ರಾಜೀವ್ ಗಾಂಧೀ ಖೇಲ್ ರತ್ನ ಪ್ರಶಸ್ತಿ ಸ್ವೀಕರಿಸಿದ ಸನ್ನಿವೇಶ

ಒಲಂಪಿಕ್ಸ್ ಗೆ ಅರ್ಹತೆ ಪಡೆಯೊಕ್ಕೆ ನಡೆದ ಪಂದ್ಯದಲ್ಲಿ ಮೀರಾಬಾಯಿ ಚಾನು 49 ಕೆಜಿ ವಿಭಾಗದಲ್ಲಿ 2 ನೇ ಸ್ಥಾನ ಗಳಿಸಿದರು.ಅಷ್ಟೇ ಅಲ್ಲ, 2021 ರ ಬೇಸಿಗೆ ಕ್ರೀಡಾಕೂಟಕ್ಕೆ ಅರ್ಹತೆ ಪಡೆದ ಮೊದಲ ಮತ್ತು ಏಕೈಕ ಮಹಿಳಾ ಭಾರ ಎತ್ತುವ ಆಟಗಾರ್ತಿ ಎಂದೆನಿಸಿಕೊಂಡರು.ಅಷ್ಟೆ ಅಲ್ಲ, ಸ್ನ್ಯಾಚ್‌ನಲ್ಲಿ 86 ಕೆಜಿ ಸೇರಿದಂತೆ  ಒಟ್ಟು 205 ಕೆಜಿಗೆ 119 ಕೆಜಿ ಭಾರವನ್ನು ಕ್ಲೀನ್ ಮತ್ತು ಜರ್ಕ್‌ನಲ್ಲಿ ವಿಶ್ವ ದಾಖಲೆಯ ಸಾಧನೆ ಮಾಡಿದರು.ಅದು ಒಲಂಪಿಕ್ಸ್ ಪದಕ ಬೇಟೆಯ ಗುರಿಯ  ಸಾಧನೆಗೆ ದಾರಿಯನ್ನು ಸಲೀಸು ಮಾಡಿಕೊಟ್ಟಿತು.

2018ರ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಭಾರತಕ್ಕೆ ಮೊದಲ ಚಿನ್ನದ ಪದಕ ಗೆದ್ದುಕೊಟ್ಟರು. 196 ಕೆಜಿ, ಸ್ನ್ಯಾಚ್‌ನಲ್ಲಿ 86 ಕೆಜಿ ಮತ್ತು ಕ್ಲೀನ್ ಮತ್ತು ಜರ್ಕ್‌ನಲ್ಲಿ 110 ಕೆಜಿ ಎತ್ತಿ ಈ ಸಾಧನೆ ಮಾಡಿದರು. 2019 ರ ಏಷ್ಯನ್ ವೇಟ್‌ಲಿಫ್ಟಿಂಗ್ ಚಾಂಪಿಯನ್‌ಶಿಪ್‌ನ 49 ಕೆಜಿ ವಿಭಾಗದಲ್ಲಿ ಕ್ಲೀನ್ ಮತ್ತು ಜರ್ಕ್‌ನಲ್ಲಿ ಕಂಚು ಗೆದ್ರು.

2019 ರ ವಿಶ್ವ ವೇಟ್‌ಲಿಫ್ಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ 201 ಕಿ.ಗ್ರಾಂ (87 ಕಿ.ಗ್ರಾಂ ಸ್ನ್ಯಾಚ್ ಮತ್ತು 114 ಕಿ.ಗ್ರಾಂ ಕ್ಲೀನ್ & ಜರ್ಕ್) ಎತ್ತಿ 4 ನೇ ಸ್ಥಾನ ಗಳಿಸಿದ್ರು. ಆದ್ರೆ ಈ ವೈಯಕ್ತಿಕ ಸಾಧನೆ 49 ಕೆಜಿ ವಿಭಾಗದಲ್ಲಿ ಹೊಸ ರಾಷ್ಟ್ರೀಯ ದಾಖಲೆಯಾಗಿ ದಾಖಲಾಗಿದೆ. ಅದಾದ ನಾಲ್ಕನೇ ತಿಂಗಳಲ್ಲಿ ಅಂದ್ರೆ  2020 ರಲ್ಲಿ ನಡೆದ  ಹಿರಿಯ ರಾಷ್ಟ್ರೀಯ ವೇಟ್‌ಲಿಫ್ಟಿಂಗ್ ಚಾಂಪಿಯನ್‌ಶಿಪ್‌ನ 49 ಕೆಜಿ ವಿಭಾಗದಲ್ಲಿ 203 ಕೆಜಿ (ಸ್ನ್ಯಾಚ್‌ನಲ್ಲಿ 88 ಕೆಜಿ ಮತ್ತು ಕ್ಲೀನ್ & ಜರ್ಕ್‌ನಲ್ಲಿ 115 ಕೆಜಿ) ಎತ್ತಿ  ತನ್ನ ವೈಯಕ್ತಿಕ ದಾಖಲೆಯನ್ನು ತಾನೇ ಮುರಿದಿದ್ದು ಚಾನು ಕಡಿಮೆ ಸಾಧನೆಯೇನಲ್ಲ.

ಇದೀಗ 2020 ರ ಬೇಸಿಗೆ ಒಲಿಂಪಿಕ್ಸ್ ನಲ್ಲಿ ಬೆಳ್ಳಿ ಗೆದ್ದು ಆ ಸಾಧನೆ ಮಾಡಿದ ಮೊದಲ ಭಾರತೀಯ ವೇಟ್‌ಲಿಫ್ಟರ್ ಎನಿಸಿಕೊಂಡಿದ್ದಾರೆ. 115 ಕಿ.ಗ್ರಾಂ ಸ್ನಾಚ್- ಕ್ಲೀನ್ ಮತ್ತು ಎಳೆತದಲ್ಲಿ ಯಶಸ್ವಿಯಾಗಿ ಎತ್ತುವ ಮೂಲಕ ಹೊಸ ಒಲಿಂಪಿಕ್ ದಾಖಲೆಯನ್ನು ಮಿರಾಬಾಯಿ ಚಾನು ಬರೆದಿದ್ದಾರೆ.ಚಾನು ಅವರ ಸಾಧನೆಗೆ ಹಲವಾರು ಪ್ರಶಸ್ತಿಗಳು ಸಂದಿವೆ. 2018 ರಲ್ಲಿ ಅತ್ಯುನ್ನತ ನಾಗರಿಕ ಗೌರವ ಪದ್ಮಶ್ರೀ  ಹಾಗು ಅದೇ ವರ್ಷ ಕ್ರೀಡಾ ಕ್ಷೇತ್ರದಲ್ಲಿ ನೀಡಲಾಗುವ ಅತ್ಯುನ್ನತ ರಾಜೀವ್ ಗಾಂಧಿ ಖೇಲ್ ರತ್ನ  ಪ್ರಶಸ್ತಿ ಸಂದಾಯವಾಗಿದೆ.ಒಲಂಪಿಕ್ಸ್ ನ ಸಾಧನೆ ಚಾನು ಅವರಿಗೆ ಖ್ಯಾತಿಯನ್ನಷ್ಟೇ ಅಲ್ಲ,ಅಪಾರ ಮೊತ್ತದ ಹಣ ಪ್ರಶಸ್ತಿಯ ಹೊಳೆಯನ್ನೇ ಹರಿಸುವುದರಲ್ಲಿ ಅನುಮಾನವಿಲ್ಲ..

ಮೀರಾಬಾಯಿ ಚಾನು ಬಾಲ್ಯ-ಬದುಕು-ಸಾಧನೆ ಬಗ್ಗೆ ಒಂದಿಷ್ಟು

-ಸಂಪೂರ್ಣ ಹೆಸರು: ಸೈಖೋಮ್ ಮೀರಾಬಾಯಿ ಚಾನು

-ಎತ್ತರ: 150 ಸೆಂಟಿಮೀಟರ್ ತೂಕ : 48 ಕೆ.ಜಿ.

-ಹುಟ್ಟಿದ ದಿನಾಂಕ: 8 ಆಗಸ್ಟ್ 1994

-ವಯಸ್ಸು:26 ವರ್ಷಗಳು

-ಜನ್ಮಸ್ಥಳ:ನಾಂಗ್ಪೋಕ್ ಕಾಚಿಂಗ್, ಇಂಫಾಲ್ (ಪೂರ್ವ) ಮಣಿಪುರ,

-ರಾಶಿಚಕ್ರ: ಸಿಂಹರಾಶಿ

-ಪೋಷಕರು ತಂದೆ: ಸೈಖೋಮ್ ಕೃತಿ ಮೈಟೈ (ಸರ್ಕಾರಿ ನೌಕರ)ತಾಯಿ: ಸೈಕೋಹ್ಮ್ ಒಂಗ್ಬಿ ಟೋಂಬಿ ಲೀಮಾ (ಗೃಹಿಣಿ)

-ಒಡಹುಟ್ಟಿದವರು: ಸಹೋದರ- ಸೈಖೋಮ್ ಸನತೊಂಬಾ ಮೈಟೈಸಹೋದರಿ – ಸೈಕೋಮ್ ರಂಗಿತಾ, ಸೈಖೋಮ್ ಶಯಾ

-ಉದ್ಯೋಗ: 2015 ರಂದು, ಭಾರತೀಯ ರೈಲ್ವೆಯಲ್ಲಿ ಹಿರಿಯ ಟಿಕೆಟ್ ಕಲೆಕ್ಟರ್ ಆಗಿ ನೇಮಕ.

-ಇಷ್ಟವಾದ ಆಹಾರ: ಕಾಂಗ್ಸೊಯ್(ಮಣಿಪುರ ಮೂಲದ ಖಾದ್ಯ) 

-ಕ್ರೀಡಾ ತರಬೇತಿ: 2008 ರಲ್ಲಿ ಇಂಫಾಲ್‌ನ ಖುಮನ್ ಲ್ಯಾಂಪಕ್ ಕ್ರೀಡಾ ಸಂಕೀರ್ಣದಲ್ಲಿ ತರಬೇತಿ.ಅವಳ ಹಳ್ಳಿಯಲ್ಲಿ ವೇಟ್‌ಲಿಫ್ಟಿಂಗ್ ಕೇಂದ್ರ ಇರಲಿಲ್ಲ. ಪ್ರತಿದಿನ 44 ಕಿ.ಮೀ ಪ್ರಯಾಣಿಸಬೇಕಾಗಿತ್ತು.

-ಮೀರಾ ಬಾಯಿ ಅವರ ಕ್ರೀಡಾ ಸ್ಪೂರ್ತಿ- ಕುಂಜುರಾಣಿ  ದೇವಿ

-ಸಾಧನೆ:ಸ್ಥಳೀಯ ವೇಟ್‌ಲಿಫ್ಟಿಂಗ್ ಸ್ಪರ್ಧೆಯಲ್ಲಿ ತನ್ನ 11 ನೇ ವಯಸ್ಸಿನಲ್ಲಿ ಚಿನ್ನದ ಪದಕ.

-2011ರ ಅಂತರರಾಷ್ಟ್ರೀಯ ಯುವ ಚಾಂಪಿಯನ್‌ಶಿಪ್‌-ದಕ್ಷಿಣ ಏಷ್ಯಾದ ಜೂನಿಯರ್ ಕ್ರೀಡಾಕೂಟದಲ್ಲಿ ಭಾಗಿ.ಅನೇಕ ಪದಕಗಳ ಬೇಟೆ.

-2013 ರಲ್ಲಿ ಗುವಾಹಟಿಯಲ್ಲಿ ನಡೆದ ಜೂನಿಯರ್ ರಾಷ್ಟ್ರೀಯ ಚಾಂಪಿಯನ್‌ಶಿಪ್‌ನಲ್ಲಿ ಅತ್ಯುತ್ತಮ ಲಿಫ್ಟರ್ ಪ್ರಶಸ್ತಿ.

2014 ರಲ್ಲಿ, ಗ್ಲ್ಯಾಸ್ಗೋ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ 170 ಕೆಜಿ ಎತ್ತಿ, ಮಹಿಳೆಯರ 48 ಕೆಜಿ ವಿಭಾಗದಲ್ಲಿ ಬೆಳ್ಳಿ.

-2016 ರಲ್ಲಿ, ರಿಯೊ ಒಲಿಂಪಿಕ್ಸ್‌ಗೆ ಅರ್ಹತೆ-ಶೂನ್ಯ ಸಾಧನೆ.

-2017 ರಲ್ಲಿ,  ಯುನೈಟೆಡ್ ಸ್ಟೇಟ್ಸ್ ನ  ಅನಾಹೈಮ್ನಲ್ಲಿ ನಡೆದ ವಿಶ್ವ ತೂಕ ಎತ್ತುವ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನ.

-2018 ರ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಚಿನ್ನದ ಪದಕ.

-ವೇಟ್ ಲಿಫ್ಟಿಂಗ್ ಕೋಚ್: ವಿಜಯ್ ಶರ್ಮಾ

 -ಪ್ರಶಸ್ತಿ-ಗೌರವ 2018 ರಲ್ಲಿ ಪದ್ಮಶ್ರೀ, ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ   

Spread the love

Related Articles

Leave a Reply

Your email address will not be published.

Back to top button
Flash News