BreakingKANNADAFLASHNEWSFIGHTAGAINSTCORONAlock downMoreScrollTop NewsUncategorizedಜಿಲ್ಲೆಫೋಟೋ ಗ್ಯಾಲರಿಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(BBMP)ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ(BDA)ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ(BMTC-KSRTC)ರಾಜಕೀಯರಾಜ್ಯ-ರಾಜಧಾನಿ

ಬಿಎಸ್ ವೈ ಕೆಳಗಿಳಿಸಿದ್ದಾಯ್ತು…ಮುಂದೇನು…ಯಡ್ಡಿ ಇಲ್ಲದ ಬಿಜೆಪಿ ಉಳಿಯುತ್ತಾ,,? ಕರ್ನಾಟಕದಲ್ಲಿ ಇನ್ಮುಂದೆ ಕಮಲ ಅರಳೋದು ಕಷ್ಟನಾ..? ಪ್ರಬಲ ಸಮುದಾಯದ ವೋಟ್ ಬ್ಯಾಂಕ್ ನ್ನು ಶಾಶ್ವತವಾಗಿ ಕಳೆದುಕೊಳ್ತಾ..?

ಬೆಂಗಳೂರು:ನಿರೀಕ್ಷೆಯಂತೆಯೇ ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.ಈ ಮೂಲಕ ಅವರನ್ನು ಪಟ್ಟದಿಂದ ಕೆಳಕ್ಕಿಳಿಸುವ ಷಡ್ಯಂತ್ರ-ಹುನ್ನಾರ-ಪ್ಲ್ಯಾನ್-ಉಪಾಯಕ್ಕೆ ಪುಲ್ ಸ್ಟಾಪ್ ಬಿದ್ದಂತಾಗಿದೆ.ಅವರ ರಾಜಕೀಯ ವಿರೋಧಿ ಪಾಳಯದಲ್ಲಂತೂ ಯುದ್ಧ ಗೆದ್ದ ಸಂಭ್ರಮದ ವಾತಾವರಣ.ಅಂದುಕೊಂಡಿದ್ದನ್ನು ಸಾಧಿಸಿದ ಸಾರ್ಥಕ ಭಾವ.

ಆದ್ರೆ ಯಡಿಯೂರಪ್ಪರನ್ನು ಇಳಿಸಿದಾಕ್ಷಣ ಪಕ್ಷದಲ್ಲಿ ನಡೆಯುತ್ತಿರುವ ಎಲ್ಲಾ ಮೇಲಾಟ-ಹೋಯ್ಲಾಟಗಳಿಗೆ ಪರಿಹಾರ ಸಿಕ್ಕಂತಾಗುತ್ತದಾ..ಖಂಡಿತಾ ಇಲ್ಲ.ಹಾಗೆಂದುಕೊಂಡ್ರೆ ಅದು ಮೂರ್ಖತನವಾದೀತೇನೋ..ಏಕೆಂದ್ರೆ ಪಕ್ಷದೊಳಗೆ ಏನೇ ವ್ಯತ್ಯಾಸಗಳಾದ್ರೂ ಅದನ್ನು ತಾಳ್ಮೆಯಿಂದ ಬಗೆಹರಿಸುವ ಕೆಪಾಸಿಟಿ ಇದ್ದ ಯಡಿಯೂರಪ್ಪ ಅವರಂಥ ಮತ್ತೊಬ್ಬ ನಾಯಕನೇ ಬಿಜೆಪಿಯಲ್ಲಿಲ್ಲ.ಬಿಜೆಪಿಯಿಂದ್ರೆ ಯಡಿಯೂರಪ್ಪ..ಯಡಿಯೂರಪ್ಪ ಎಂದ್ರೆ ಬಿಜೆಪಿಯಂತಾಗಿದ್ದ ಸನ್ನಿವೇಶದಲ್ಲಿ ಬಿಎಸ್ ವೈ ಇಲ್ಲದ ನಿರ್ವಾತವನ್ನು ತುಂಬೋದು ನಿಜಕ್ಕೂ ಕಷ್ಟ..ಕಷ್ಟ.

ಬಿಎಸ್ ವೈ ವೀರಶೈವ ಲಿಂಗಾಯಿತ ಸಮುದಾಯದ ಪರಮೋಚ್ಛ ನಾಯಕರಾಗಿ ಗುರುತಿಸಿಕೊಂಡ್ರೂ ಎಲ್ಲಾ ಸಮುದಾಯವನ್ನು ಸಾಮಾಜಿಕ ನ್ಯಾಯದಲ್ಲಿ ಸರಿದೂಗಿಸಿಕೊಂಡು ಬಂದ ನಾಯಕ.ಯಾವ ಸಮುದಾಯಗಳೇ ಬಂದ್ರೂ ಅವರನ್ನು ಬರಿಗೈಯಲ್ಲಿ ಕಳುಹಿಸಿದ್ದೇ ಕಡ್ಮೆ.ಪಕ್ಷದಲ್ಲಿರುವ ಕೆಲವರು ಜಾತಿ/ಸಮುದಾಯ/ಪಂಥ/ಬೇಧ/ಪ್ರಾದೇಶಿಕತೆ..ಹೀಗೆ ಹಲವು ವ್ಯತ್ಯಾಸಗಳನ್ನು ಬಲವಾಗಿ ಪ್ರತಿಪಾದಿಸಿದರೂ ತಮ್ಮ ಮಾತುಗಳಲ್ಲಾಗಲಿ,ನಿಲುವು-ಧೋರಣೆಗಳಲ್ಲಾಗಲಿ ಅದನ್ನು ಪ್ರತಿಪಾದಿಸಿದವರಲ್ಲ, ಕಾರ್ಯರೂಪಕ್ಕೆ ತಂದವರಂತೂ ಅಲ್ಲವೇ ಅಲ್ಲ.ಅಂಥಾ ವೈರುದ್ಧ್ಯಗಳನ್ನು ಮೆಟ್ಟಿನಿಂತ ಕಾರಣಕ್ಕೆ ಬಿಎಸ್ ವೈ ರಾಜಕೀಯ ಕಾರಣಗಳನ್ನು ಬಿಟ್ಟು ವೈಯುಕ್ತಿಕವಾಗಿ ಎಲ್ಲರಿಗೂ ಇಷ್ಟವಾಗುವಂಥ ವ್ಯಕ್ತಿ.

ರಾಜಕೀಯ ಕಾರಣಗಳಿಗೆ ಯಡಿಯೂರಪ್ಪ ಅವರ ಕೆಲವೊಂದು ನಿಲುವುಗಳನ್ನು ಒಪ್ಪಲಿಕ್ಕಾಗೊಲ್ಲ..(ಬಹುಷಃ ವ್ಯಕ್ತಿಗತ ಹಿತಾಸಕ್ತಿಯನ್ನು ರಾಜಕೀಯಕ್ಕೆ ಬೆರೆಸುವ ತಪ್ಪನ್ನು ಪದೇ ಪದೇ ಮಾಡದೇ ಹೋಗಿದ್ದರೆ ಪೂರ್ಣಾವಧಿಯ ಸಿಎಂ ಆಗಿ ಅಧಿಕಾರ ಪೂರೈಸುತ್ತಿದ್ದರೆನ್ನುವುದು ಕೂಡ ಸತ್ಯ).ಆದ್ರೆ ವ್ಯಕ್ತಿಯಾಗಿ ಯಡಿಯೂರಪ್ಪ ಅವರದು ಎಂಥಾ ವ್ಯಕ್ತಿತ್ವ ಎನ್ನುವುದು ಅವರನ್ನು ಹತ್ತಿರದಿಂದ ಬಲ್ಲವರಿಗೆ ಗೊತ್ತು.ಕೊಟ್ಟ ಮಾತಿಗೆ ತಪ್ಪಿದ್ದೇ ಕಡಿಮೆ.ಕಷ್ಟದ ದಿನಗಳಲ್ಲಿ ಜತೆಯಲ್ಲಿದ್ದವರನ್ನು ಅಧಿಕಾರ ಬಂದಾಗ ನೆನಪಿಸಿಕೊಂಡು ಅವರಿಗೆ ಸಲ್ಲಬೇಕಾದ ಗೌರವ ಕೊಟ್ಟು ಕಾಪಾಡಿದವ್ರು ಯಡಿಯೂರಪ್ಪ.ಹೆಸರಿಗೇ ಇಲ್ಲದ ಅದೆಷ್ಟೋ ಸಾಮಾನ್ಯ ಕಾರ್ಯಕರ್ತರಿಗೆ ಆಯಕಟ್ಟಿನ ಸ್ಥಾನಗಳನ್ನು ಕಲ್ಪಿಸಿಕೊಟ್ಟಿದ್ದು ಕಡಿಮೆ ಮಾತಾ.

ಹೇಳಹೆಸರಿಲ್ಲದ ಸಂದರ್ಭದಲ್ಲಿ ಕಾಲಿಗೆ ಚಕ್ರ ಕಟ್ಟಿಕೊಂಡು ಸುತ್ತಾಡಿ ರಾಜ್ಯದಲ್ಲಿ ಬಿಜೆಪಿ ಪಕ್ಷವನ್ನು ಕಟ್ಟಿ ಬೆಳೆಸಿದ ನಾಯಕ ಯಡಿಯೂರಪ್ಪ. ಆ ದಿನಗಳ ಸಂಕಟ-ಸಂಕಷ್ಟವನ್ನು ಯಡಿಯೂರಪ್ಪ ಅವರ ಜತೆಗಿದ್ದ ಕೆಎಸ್ ಈಶ್ವರಪ್ಪ, ಶಿವಪ್ಪ  ಅವರಂಥ ನಾಯಕರು ಕಣ್ಣಿಗೆ ಕಟ್ಟಿದಂತೆ ಹೇಳುವಾಗಲೆಲ್ಲಾ ಯಡಿಯೂರಪ್ಪ ಎಂಥಾ ನಾಯಕ ಎನ್ನುವುದು ಗೊತ್ತಾಗುತ್ತದೆ.ಶೂನ್ಯದಲ್ಲಿದ್ದ ಪಕ್ಷವನ್ನು ಅಧಿಕಾರಕ್ಕೆ ತರುವ ಮಟ್ಟದಲ್ಲಿ ಬೆಳೆಸಿದ ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಉತ್ತಮ ಆಡಳಿತ ನೀಡಿದರೆನ್ನುವುದನ್ನು ಅವರ ರಾಜಕೀಯ ವಿರೋಧಿಗಳೇ ಒಪ್ಪಿಕೊಳ್ಳುತ್ತಾರೆ.ಮಕ್ಕಳನ್ನು ಅದರಲ್ಲೂ ವಿಜಯೇಂದ್ರನನ್ನು ರಾಜಕೀಯದ ವ್ಯವಹಾರಗಳಲ್ಲಿ ಎಳೆದು ತರುವ ಕೆಲಸ ಮಾಡದೇ ಇದ್ದಿದ್ದರೆ ಬಿಎಸ್ ವೈ ಅವರನ್ನು ವಿರೋಧಿಸುವ ಮಾತಿರಲಿ,ಅವರನ್ನು ಪ್ರಶ್ನಿಸುವ ಎದೆಗಾರಿಕೆಯನ್ನೂ ಯಾರೊಬ್ಬರು ಮಾಡುತ್ತಿರಲಿಲ್ಲವೇನೋ..

ಮಗ ವಿಜಯೇಂದ್ರನಿಂದ ಹಾಳಾದ್ರು…ಅಧಿಕಾರ ಕಳಕೊಂಡ್ರು ಎನ್ನುವ ಆಪಾದನೆ ಬಿಟ್ಟರೆ ಈ ಕ್ಷಣಕ್ಕೂ ಪಕ್ಷದ ಶಾಸಕರು, ಬಿಎಸ್ ವೈ ಅವರೇ ನಮ್ಮ ಸರ್ವೋಚ್ಛ-ಪ್ರಶ್ನಾತೀತ ನಾಯಕ ಎನ್ನುತ್ತಾರೆ.ಮಗನಿಂದಾಗಿ ಪೂರ್ಣಾವಧಿ ಸಿಎಂ ಆಗಿ ಕೆಲಸ  ಮಾಡುವ ಅವಕಾಶವನ್ನು ಕಳೆದುಕೊಂಡ್ರಲ್ಲ ಪಾಪ ಎನ್ನುವ ಸಹಾನುಭೂತಿಯೂ ಶಾಸಕರ ವಲಯದಲ್ಲಿದೆ.ತಮ್ಮ ಅಸಹನೆ-ಅಸಮಾಧಾನ-ಆಕ್ಷೇಪಗಳ ಮೂಲಕ ಸಾಕಷ್ಟು ಬಾರಿ ವಿಜಯೇಂದ್ರ ಅವರ ಅತಿಯಾದ ಹಸ್ತಕ್ಷೇಪದ ಬಗ್ಗೆ ನಾಯಕರನ್ನು ಎಚ್ಚರಿಸುವ ಪ್ರಯತ್ನ ಮಾಡಿದ್ವಿ..ಆದ್ರೆ ಮಗನನ್ನು ಬಿಟ್ಟು ಕೊಡಲಾರದಷ್ಟು ದೃತರಾಷ್ಟ್ರ ಪ್ರೇಮಕ್ಕೆ ಈಡಾಗಿದ್ದರಿಂದಲೇ  ಇವತ್ತು ಇಂತದೊಂದು ವಿದಾಯ ಹೇಳಬೇಕಾದ ಸ್ಥಿತಿ ಬಂತು..ಇದು ಅವರೇ ತಂದುಕೊಂಡ ಆಪತ್ತು.ಆದ್ರೆ ಯಡಿಯೂರಪ್ಪ ಅವರಂಥ ರಾಜಕೀಯ ಪ್ರಭಾವಳಿ ಇರುವ ನಾಯಕರಿಗೆ ಇಂತದ್ದೊಂದು ವಿಪರ್ಯಾಸಕರ ವಿದಾಯ ಸಿಗುವಂತಾಗಿದ್ದು ದುರಾದೃಷ್ಟಕರ ಎನ್ನುವುದು ಪಕ್ಷದ ಮುಖಂಡರ ನೋವಿನ ಮಾತು.

ತಮ್ಮ ರಾಜೀನಾಮೆಗೆ ವಯಸ್ಸೇ ಕಾರಣ ಎಂದು ಯಡಿಯೂರಪ್ಪ ಹೇಳುತ್ತಿದ್ದರೂ, ಮಗ ವಿಜಯೇಂದ್ರನ ಮೇಲಿನ ದೃತರಾಷ್ಟ್ರ ಪ್ರೇಮವೇ ಅವರ ರಾಜಕೀಯ ಭವಿಷ್ಯಕ್ಕೆ ಮುಳುವಾಯಿತೆನ್ನುವು ದೇ ಅಂತಿಮ ಸತ್ಯ.ಅಂದ್ಹಾಗೆ ಅವರಿಗೆ ಇದೇನು ಹೊಸ ಅನುಭವವೇನಲ್ಲ.ಈ ಹಿಂದೆ ಸಿಎಂ ಆಗಿದ್ದಾಗ ಜೈಲ್ ಗೆ ಹೋಗಲು ಕಾರಣವಾಗಿದ್ದು ಒನ್ಸ್ ಎಗೈನ್ ಇದೇ ದೃತರಾಷ್ಟ್ರ ಪ್ರೇಮ ಎನ್ನುವುದು ಯಡಿಯೂರಪ್ಪ ಅವರಿಗೆ ಗೊತ್ತಿರದ ಸತ್ಯವೇನಾಗಿರಲಿಲ್ಲ..ಎಲ್ಲವೂ ಸ್ಪಟಿಕದಂತೆ ಕ್ರಿಸ್ಟಲ್ ಅಂಡ್ ಕ್ಲಿಯರ್ ಆಗಿತ್ತು.

ಆ ಕಹಿ ಅನುಭವದಿಂದಲೇ ಅವರು ಪಾಠ ಕಲಿಯಬಹುದಿತ್ತೇನೋ..ಮಕ್ಕಳ ಕಿವಿ ಹಿಂಡಿ ಅವರನ್ನು ಮನೆಯ ವಿಚಾರಗಳಿಗಷ್ಟೇ ಸೀಮಿತಗೊಳಿಸಬೇಕಿತ್ತು.ರಾಜಕೀಯಕ್ಕೆ ತಲೆ ಹಾಕಿದ್ರೆ ಹುಷಾರ್ ಎಂದು ಎಚ್ಚರಿಸಬಹುದಿತ್ತು..ಆದ್ರೆ ಅದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳಲೇ ಇಲ್ಲ..ಮುಪ್ಪಾದ ವಯಸ್ಸಿನಲ್ಲಿ ಆಸರೆಯಂತೆ ಇರೋದು ಕೇವಲ ಕುಟುಂಬ  ಎನ್ನುವ  ಮಮಕಾರಕ್ಕೆ ಬಿದ್ದು ಮಾಡಬಾರದ ಮಹಾ ಎಡವಟ್ಟು ಮಾಡಿಕೊಂಡ್ರು..ಮಗನಿಂದಾಗಿ ಮುಖ್ಯಮಂತ್ರಿಗಾಧಿಯನ್ನು ಕಳೆದುಕೊಳ್ಳುವಂತಾಯ್ತು.

ಗದ್ಗಿತರಾಗಿ ಭಾರವಾದ ಮನಸಿನಿಂದ ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದಾರೆ.ಇದು ಅವರ ರಾಜಕೀಯ ಬದುಕು-ಭವಿಷ್ಯದ ಬಹುತೇಕ ಯುಗಾಂತ್ಯವೆಂದೇ ಹೇಳಲಾಗುತ್ತಿದೆ.ಅವರಿಗೆ ಮತ್ತೊಮ್ಮೆ ಮುಖ್ಯಮಂತ್ರಿಯಾಗುವ ಅವಕಾಶ ಸಿಗೋದು ಕಷ್ಟಸಾಧ್ಯ.ಯಾವುದೋ ರಾಜ್ಯದ ರಾಜ್ಯಪಾಲರಾಗುವ ಅವಕಾಶ ಹೈಕಮಾಂಡ್ ನೀಡಿದ್ರೂ ಅದನ್ನು ಒಪ್ಪಿಕೊಳ್ಳೋದು ಬಹುತೇಕ ಡೌಟ್..ಯಾಕಂದ್ರೆ ಯಡಿಯೂರಪ್ಪ ಅವರಿಗೆ ವಯಸ್ಸು ಹಾಗೂ ಆರೋಗ್ಯ ಸಹಕರಿಸೋದು ಕಷ್ಟ.ಸಲಹೆಗಾರ-ಮಾರ್ಗದರ್ಶಿ ಸ್ಥಾನಕ್ಕೆ ಸೀಮಿತಗೊಳಿಸುವ ಮೂಲಕ ಹೈಕಮಾಂಡೇ  ಯಡಿಯೂರಪ್ಪ ಅವರನ್ನು ರಾಜಕೀಯ ನೇಪಥ್ಯಕ್ಕೆ ತಳ್ಳುವ ಪ್ಲ್ಯಾನ್ ಮಾಡಿಕೊಂಡಂತಿದೆಯಾ ಗೊತ್ತಿಲ್ಲ..

ಏನೇ ಆದ್ರೂ ಒಂದಂತೂ ಸತ್ಯ..ಉಳಿದಿರುವ  ಅವಧಿಯಲ್ಲಿ ಸರ್ಕಾರ ಮುನ್ನಡೆಸೊಕ್ಕೆ ಯಾರನ್ನೇ ಮುಖ್ಯಮಂತ್ರಿ ಮಾಡಿದ್ರೂ ಅದು ಎಲ್ಲಾ ಶಾಸಕರು ಹಾಗು ಸಮುದಾಯದ ಸಹಮತ-ಒಮ್ಮತವಾಗಿರಲಿಕ್ಕೆ ಸಾಧ್ಯವಿಲ್ಲ..ಅದೇನಿದ್ರೂ ತಾತ್ಕಾಲಿಕ ವ್ಯವಸ್ಥೆ ಅಷ್ಟೇ..ಮುಂದಿನ ಚುನಾವಣೆ ವೇಳೆ ಯಡಿಯೂರಪ್ಪ ಅವರಂತ ಸಮರ್ಥ ಹಾಗೂ ಗಟ್ಟಿತನದ ನಾಯಕನನ್ನು ಮುಖ್ಯಮಂತ್ರಿ ಸ್ಥಾನದಲ್ಲಿ ಬಿಂಬಿಸುವುದರಲ್ಲಿ ಬಿಜೆಪಿ ಬಹುದೊಡ್ಡ ಸವಾಲನ್ನೇ ಎದುರಿಸಬೇಕಾಗಿ ಬರಬಹುದೆನ್ನಲಾಗುತ್ತಿದೆ.

ಏಕಂದ್ರೆ, ಯಡಿಯೂರಪ್ಪ ಅವರಂಥ ಮಾಸ್ ಲೀಡರ್-ಜನಾನುರಾಗಿ-ಎಲ್ಲಾ ಸಮುದಾಯಕ್ಕೂ ಸಲ್ಲುವಂಥ ಮತ್ತೊಬ್ಬ ಮುಖಂಡ ಮುಖ್ಯಮಂತ್ರಿಯಾಗಿ ಸಿಗೋದು ಕಷ್ಟ.ರಾಜ್ಯದಲ್ಲಿ, ಪಕ್ಷವನ್ನು ಅಧಿಕಾರಕ್ಕೆ ತರುವ ಮಟ್ಟದಲ್ಲಿ ಪಕ್ಷವನ್ನು ಸಂಘಟಿಸುವುದು ಹೈಕಮಾಂಡ್ ಗೂ ದೊಡ್ಡ ಸವಾಲಾಗಬಹುದು..ಜಾತಿ/ಸಮುದಾಯ/ಪ್ರಾದೇಶಿಕ ಮೇಲಾಟಗಳಲ್ಲಿ ಬಿಜೆಪಿ ಹೊಡೆದು ಹೋಳಾಗುವ ಆತಂಕ ಎದುರಾಗಿದೆ ಎನ್ನಲಾಗ್ತಿದೆ.

ಇಂಥಾ ಸನ್ನಿವೇಶದಲ್ಲಿ ಯಡಿಯೂರಪ್ಪ ಎಂಥಾ ಪಾತ್ರ ವಹಿಸುತ್ತಾರೆನ್ನುವುದು ಕೂಡ ಕುತೂಹಲ ಮೂಡಿಸಿದೆ.ಯಡಿಯೂರಪ್ಪ ಬಿಜೆಪಿ ಬೆನ್ನಿಗೆ ನಿಂತು ಮುನ್ನಡೆಸಿದ್ರೆ ಪಕ್ಷಕ್ಕೂ ಉಳಿಗಾಲ..ಸರ್ಕಾರವೂ ಸೇಫ್..ಮುನಿದು ಕೆಜೆಪಿ,ಜೆಡಿಎಸ್ ಜತೆ ಸಖ್ಯದಂಥ ಪ್ರಯತ್ನಗಳಿಗೆ ಕೈ ಹಾಕಿದ್ರೆ ಬಿಜೆಪಿಗೆ ಬಹುದೊಡ್ಡ ನಷ್ಟವಾಗೋದಷ್ಟೇ ಅಲ್ಲ,ಒಂದು ಪ್ರಬಲ ಸಮುದಾಯದ ವೋಟ್ ಬ್ಯಾಂಕ್ ಬಿಜೆಪಿಯಿಂದ ಶಾಶ್ವತವಾಗಿ ದೂರವಾಗೋ ಆತಂಕವೂ ಇದೆ.. ಏಕಂದ್ರೆ ಯಡಿಯೂರಪ್ಪಂಗೆ ಯಡಿಯೂಪ್ಪನೇ ಸಾಟಿ.

Spread the love

Related Articles

Leave a Reply

Your email address will not be published.

Back to top button
Flash News