ಅಂದು ತಂದೆ-ಇಂದು ಮಗ..”ಶಿಗ್ಗಾಂವ್ ಸಿಂಹ”ಕ್ಕೆ ಮುಖ್ಯಮಂತ್ರಿ ಪಟ್ಟ- ಸೋತು ಗೆದ್ದ ಬಿಎಸ್ ವೈ-ಯಡಿಯೂರಪ್ಪ ವಿರೋಧಿ ಬಣಕ್ಕೆ ಮುಖಭಂಗ..
ಬೆಂಗಳೂರು: ಯಾರಾಗ್ತಾರೆ ಅಚ್ಚರಿಯ ಮುಖ್ಯಮಂತ್ರಿ ಎನ್ನುವ ಪ್ರಶ್ನೆಗೆ ಕೊನೆಗು ಉತ್ತರ ಸಿಕ್ಕಂತಿದೆ.ರೇಸ್ ನಲ್ಲಿ ಸಾಕಷ್ಟು ಹೆಸರುಗಳು ಕೇಳಿಬಂದ್ರೂ ಹೈಕಮಾಂಡ್ ತೂಗಿ ಅಳೆದು ಹೆಸರನ್ನೇ ಫೈನಲ್ ಮಾಡಿದೆ. 61 ವರ್ಷ ವಯಸ್ಸಿನ ಬಸವರಾಜ ಬೊಮ್ಮಾಯಿ ಗೆ ರಾಜ್ಯದ ಮುಖ್ಯಮಂತ್ರಿ ಸ್ಥಾನ ಲಭಿಸಿದೆ.ರಾಜ್ಯದ 24ನೇ ಮುಖ್ಯಮಂತ್ರಿಯಾಗಿ ನಾಳೆ ಅಧಿಕಾರ ಸ್ವೀಕರಿಸಲಿದ್ದಾರೆ.
ಲಿಂಗಾಯಿತ ಸಮುದಾಯಕ್ಕೇ ಮುಖ್ಯಮಂತ್ರಿ ಸ್ಥಾನ ನೀಡುವ ಮೂಲಕ ಜಾತಿ ಸಮುದಾಯವನ್ನೇ ಓಲೈಸುವ ಕೆಲಸ ಮಾಡಿದ್ದಾರೆ ಬಿಜೆಪಿ ವರಿಷ್ಠರು.ಸಿಎಂ ಯಾರೇ ಆದ್ರೂ ಅವ್ರು ವೀರಶೈವ ಲಿಂಗಾಯಿತ ಸಮುದಾಯದವ್ರೇ ಅಗಿರುತ್ತಾರೆ ಎನ್ನುವುದು ಕನ್ಫರ್ಮ್ ಆಗೋಗಿತ್ತು.ಆ ನಿರೀಕ್ಷೆಯಂತೆಯೇ ಬೊಮ್ಮಾಯಿ ಅವರಿಗೆ ಮುಖ್ಯಮಂತ್ರಿ ಪಟ್ಟ ನೀಡಿದೆ.
ಕೊನೇ ಹಂತದವರೆಗೂ ಮುಖ್ಯಮಂತ್ರಿ ಆಯ್ಕೆಗೆ ತೀವ್ರತರದ ಕಸರತ್ತು ಶುರುವಾಗಿತ್ತು.ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದಂತೆ ಸಿಎಂ ಗಾದಿಗೆ ಯಾರೆನ್ನುವ ಪ್ರಶ್ನೆಗಳು ಸುಳಿದಾಡಲಾರಂ ಭಿಸಿದ್ದವು. ಅನೇಕರ ಹೆಸರುಗಳು ರೇಸ್ ನಲ್ಲಿ ಕೇಳಿಬಂದಿದ್ವು.ಈ ಪೈಕಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್ ಸಂತೋಷ್ ಅವರ ಹೆಸರು ಮುಂಚೂಣಿಯಲ್ಲಿ ಕೇಳಿಬಂದಿತ್ತು.ಅವರಂತೆಯೇ ಕೇಳಿಬಂದ ಇನ್ನಿತರೆ ಹೆಸರುಗಳು ಬಸವರಾಜ ಬೊಮ್ಮಾಯಿ,ಮುರುಗೇಶ್ ನಿರಾಣಿ, ಅರವಿಂದ ಬೆಲ್ಲದ್,ಸಿ.ಟಿ ರವಿ..ಇದರ ನಡುವೆಯೇ ನನ್ನದೂ ಒಂದು ಹೆಸರು ಇರಲಿ ಎಂದು ಅನೇಕರು ಪರಿಚಿತ ವರದಿಗಾರರ ಮೂಲಕ ಮಾದ್ಯಮಗಳಲ್ಲಿ ತಮ್ಮ ಹೆಸರುಗಳನ್ನು ತೇಲಿ ಬಿಡಿಸಿದ್ದೂ ಉಂಟು. ಆದ್ರೆ ಆ ಹೆಸರುಗಳು ಸಾರ್ವಜನಿಕ ವಲಯದಲ್ಲಿ ತೀವ್ರ ಅಭಾಸಕಾರಿ ಎನಿಸಿದ್ದೂ ಉಂಟು.
ದೆಹಲಿ ಮಟ್ಟದಲ್ಲಿ ಬೆಳಗ್ಗೆವರೆಗೂ ನಡೆದ ರಾಜಕೀಯ ಪ್ರಹಸನ ಮಧ್ಯಾಹ್ನದ ವೇಳೆಗೆ ಬೆಂಗಳೂರಿಗೆ ಶಿಫ್ಟ್ ಆಯ್ತು.ಯಾರು ಏನೇ ಊಹೆ-ಅಂದಾಜು-ಲೆಕ್ಕಾಚಾರ ಹಾಕಿದ್ರೂ ಸಿಎಂ ಯಾರಾಗಬೇಕು ಎನ್ನುವುದನ್ನು ಅದಾಗಲೇ ನಿರ್ಧರಿಸಿರುವ ಹೈಕಮಾಂಡ್, ನಾಯಕರ ಮೂಲಕ ಮುಖ್ಯಮಂತ್ರಿ ಹೆಸರಿರುವ ಲಕೋಟೆಯನ್ನು ಕಳುಹಿಸಿಕೊಟ್ಟಾಗಿತ್ತು.ಲಕೋಟೆ ಹಿಡಿದು ಬೆಂಗಳೂರಿಗೆ ಬಂದ ಮೇಲೂ ಶಾಸಕಾಂಗ ಸಭೆ ಬಳಿಕವೇ ಘೋಷಣೆಯಾದ ಬಳಿಕವೇ ಸಿಎಂ ಹೆಸರು ಘೋಷಣೆಯಾಗಬಹುದೆನ್ನುವುದು ಖಾತ್ರಿಯಾಗಿತ್ತು.
ಈ ನಡುವೆ ಮಾದ್ಯಮಗಳು ಮುಖ್ಯಮಂತ್ರಿ ಹಣಾಹಣಿ ಇರುವುದು ಇಬ್ಬರ ನಡುವೆಯೇ ಎಂದು ಬಿಂಬಿಸಲಾರಂಭಿಸಿದ್ವು. ಬಸವರಾಜ ಬೊಮ್ಮಾಯಿ ಹಾಗೂ ಅರವಿಂದ ಬೆಲ್ಲದ್ ಅವರ ನಡೆ-ನುಡಿ-ದೇಶಾವರಿ ನಗು-ಮಂದಹಾಸ ಕೂಡ ಅದಕ್ಕೆ ಪುಷ್ಟಿ ನೀಡುವಂತಿತ್ತು ಬಿಡಿ.ಕ್ಯಾಮೆರಾಗಳ ಕಣ್ಣಲ್ಲಿ ಅತೀ ಹೆಚ್ಚು ಸೆರೆಯಾಗಿದ್ದು ಇವರಿಬ್ಬರೇ ಬಿಡಿ.ಅಲ್ಲಿಗೆ ಒಂದಾ ಬೊಮ್ಮಾಯಿ,ಇಲ್ಲಾಂದ್ರೆ ಅರವಿಂದ ಬೆಲ್ಲದ್..ಅವರನ್ನು ಬಿಟ್ಟರೆ ಮತ್ತೊಬ್ಬರು ಸಿಎಂ ಆಗಲು ಸಾಧ್ಯವೇ ಇಲ್ಲ ಎನ್ನೋದು ನಿಕ್ಕಿಯಾದಂತಾಗಿತ್ತು.ಆಗಲೂ ಇವರಿಬ್ಬರನ್ನು ಬಿಟ್ರೆ ಮೂರನೆಯ ಹೆಸರು ಅಚ್ಚರಿ ಆಯ್ಕೆ ಎನ್ನುವಂತೆ ಹೊರಬಿದ್ರೂ ಆಶ್ಚರ್ಯವಿಲ್ಲ ಎನ್ನುವ ಅಂದಾಜು ಎಲ್ಲರಲ್ಲೂ ಇತ್ತು.
ಮುಖ್ಯಮಂತ್ರಿ ಸ್ಥಾನಕ್ಕೆ ಎಲ್ಲರಿಗಿಂತಲೂ ಹೆಚ್ಚು ಫೇವರೀಟ್ ಹೆಸರಾಗಿ ಕೇಳಿಬಂದಿದ್ದು ಬಸವರಾಜ ಬೊಮ್ಮಾಯಿದು.ಮೊದಲ ಸ್ಥಾನ ಪಡೆಯೊಕ್ಕೆ ಕಾರಣವೂ ಇತ್ತು.ಬಿಜೆಪಿಗೆ ಅನಿವಾರ್ಯ ಎನ್ನುವಂತಾಗಿರುವ ಬಿಎಸ್ ವೈ ಆವರನ್ನು ಸಮಾಧಾನಿಸುವುದು ಹೈಕಮಾಂಡ್ ಗೆ ಮೊದಲ ಆಧ್ಯತೆಯಾಗಿತ್ತು.ಏಕೆಂದ್ರೆ ಬಿಎಸ್ ವೈ ಮುನಿಸಿಕೊಂಡ್ರೆ ಅದು ಪಕ್ಷಕ್ಕೆ ವರವಾಗಿರುವ ಲಿಂಗಾಯಿತ ಸಮುದಾಯದ ಬಹುದೊಡ್ಡ ಜಾತಿಯ ವೋಟ್ ಬ್ಯಾಂಕ್ ಕಳೆದುಕೊಳ್ಳುವುದು ಗ್ಯಾರಂಟಿ ಎನ್ನುವುದು ವರಿಷ್ಠರಿಗೆ ಗೊತ್ತಿದೆ.
ಈ ಸೂಕ್ಷ್ಮವನ್ನು ಅರಿತೇ ಹೈಕಮಾಂಡ್ ಸಿಎಂ ಅಭ್ಯರ್ಥಿ ಆಯ್ಕೆಯ ಅವಕಾಶವನ್ನು ಯಡಿಯೂರಪ್ಪರಿಗೆ ಕೊಟ್ಟಿತ್ತೆನ್ನಲಾಗಿದೆ.ಯಡಿಯೂರಪ್ಪ ಸೂಚಿಸುವ ಅಭ್ಯರ್ಥಿಗೆ ಮೊದಲ ಮನ್ನಣೆ ನೀಡುವುದಾಗಿಯೂ ಹೇಳಿತ್ತು.ಇಂಥದ್ದೊಂದು ಅವಕಾಶವನ್ನು ಸಮರ್ಥವಾಗಿ ಬಳಸಿಕೊಂಡ ಯಡಿಯೂರಪ್ಪ, ತಮ್ಮ ಮಾತನ್ನು ಶಿರಾಸವಹಿಸಿ ಪಾಲಿಸುವ ಬಸವರಾಜ ಬೊಮ್ಮಾಯಿ ಅವರೇ ಮುಖ್ಯಮಂತ್ರಿ ಸ್ಥಾನಕ್ಕೆ ಸೂಕ್ತ ಎಂದು ನಿರ್ಧರಿಸಿ ತನ್ನ ಅಭಿಪ್ರಾಯವನ್ನು ಹೈಕಮಾಂಡ್ ಗೆ ತಿಳಿಸಿದರೆನ್ನಲಾಗಿದೆ.ಹಾಗಾಗಿ ಯಾರೇ ರೇಸ್ ನಲ್ಲಿದ್ರೂ ಮೊದಲ ಪ್ರಾಶಸ್ತ್ಯ-ಪ್ರಾತಿನಿಧ್ಯತೆ ಬಸವರಾಜ ಬೊಮ್ಮಾಯಿಗೆ ಎಂಬುದನ್ನು ಹೈಕಮಾಂಡ್ ನಿರ್ಧರಿಸಿಯಾಗಿತ್ತಂತೆ.ಕವರ್ ನಲ್ಲಿ ಇದ್ದ ಆ ಹೆಸರೇ ಬಸವರಾಜ ಬೊಮ್ಮಾಯಿ ಎಂದು ಹೇಳಲಾಗುತ್ತಿತ್ತು.ಅದು ಕೊನೆಗೂ ಈಡೇರಿದೆ.
ಕನ್ನಡ ಫ್ಲಾಶ್ ನ್ಯೂಸ್ ಕೂಡ ಬಸವರಾಜ ಬೊಮ್ಮಾಯಿ ಅವರೇ ಮುಖ್ಯಮಂತ್ರಿಯಾಗಲಿದ್ದಾರೆ..ಯಾಕೆ ಆಗಲಿದ್ದಾರೆ..ಅದರ ಹಿಂದಿರುವ ಕಾರಣಗಳೇನು ಎನ್ನುವುದರ ಬಗ್ಗೆ ವಿವರವಾದ ವಿಶ್ಲೇಷಣೆ ನೀಡಿತ್ತು.ಅದೇನೇ ಆಗಲಿ ತೂಗಿ ಅಳೆದು ಹೈಕಮಾಂಡ್ ಬಸವರಾಜ ಬೊಮ್ಮಾಯಿ ಅವರನ್ನು ಸಿಎಂ ಮಾಡುವ ಮೂಲಕ ಬಿಎಸ್ ವೈ ಕೈ ಮೇಲಾಗುವಂತೆ ಮಾಡಿದೆ.ಬಸವರಾಜ ಬೊಮ್ಮಾಯಿ ಆಯ್ಕೆ,ಬಿಎಸ್ ವೈ ಅವರನ್ನು ಕೆಳಕ್ಕಿಳಿಸುವ ನಿಟ್ಟಿನಲ್ಲಿ ಸಾಕಷ್ಟು ಪ್ರಯತ್ನ ನಡೆಸಿದ ಅವರ ವಿರೋಧಿ ಬಣಕ್ಕೆ ದೊಡ್ಡ ಸೆಟ್ ಬ್ಯಾಕ್ ಎಂದೇ ಹೇಳಲಾಗುತ್ತಿದೆ.