ಮಾಜಿ ಸಚಿವ ವಿನಯ್ ಕುಲಕರ್ಣಿಗೆ ಬೇಲ್-ಬಿಡುಗಡೆ ಸಧ್ಯಕ್ಕಿಲ್ಲ.ಬೆಂಬಲಿಗರ ವಿಜಯಯೋತ್ಸವ-ಕಾನೂನು ಹೋರಾಟ ಮುಂದುವರೆಸಲು ಯೋಗೇಶ್ ಗೌಡ ಸ್ನೇಹಿತ ನಿರ್ಧಾರ

0

ಧಾರವಾಡ: ಜಿಪಂ ಸದಸ್ಯ ಯೋಗೇಶಗೌಡ ಹತ್ಯೆ ಪ್ರಕರಣದಲ್ಲಿ ಜೈಲು ಸೇರಿದ್ದ ಮಾಜಿ ಸಚಿವ ವಿನಯ್ ಕುಲಕರ್ಣಿಗೆ ಜಾಮೀನು ಮಂಜೂರಾಗಿದೆ.ಈ ಹಿನ್ನಲೆಯಲ್ಲಿ ಅವರ ಅಭಿಮಾನಿಗಳು ಪಟಾಕಿ ಸಿಡಿಸಿ ಸಂಭ್ರಮಿಸಿದರು.

 ಧಾರವಾಡ ಜಿಲ್ಲಾ ಪಂ‌ಚಾಯತ್​ ಸದಸ್ಯ ಯೋಗೇಶ್ ಗೌಡ ಕೊಲೆ ಪ್ರಕರಣದ ಆರೋಪಿ, ಮಾಜಿ ಸಚಿವ ವಿನಯ್ ಕುಲಕರ್ಣಿಗೆ ಸುಪ್ರೀಂಕೋರ್ಟ್​ 302 ಕೇಸ್ ನಲ್ಲಿ ಇಂದು ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ. ಸಾಕ್ಷ್ಯ ನಾಶ ಕೇಸ್ ನಲ್ಲಿ ಬೇಲ್ ಸಿಕ್ಕ ಮೇಲಷ್ಟೇ ಜೈಲ್ ನಿಂದ ಹೊರಬರಲಿದ್ದಾರೆ. ಆದರೆ ವಿನಯ್ ಅಭಿಮಾನಿಗಳು ಮಾಜಿ ಸಚಿವರಿಗೆ ಜಾಮೀನು ಮಂಜೂರಾದ ಸುದ್ದಿ ತಿಳಿಯುತ್ತಿದ್ದಂತೆ ಮಾಜಿ ಸಚಿವರ ಮನೆ ಮುಂದೆ ಪಟಾಕಿ ಸಿಡಿಸಿ ಸಂಭ್ರಮಿಸಿದರು.

ಜೈಲು ವಾಸ ಅನುಭವಿಸಿದ ಮಾಜಿ ಸಚಿವ ವಿನಯ ಕುಲಕರ್ಣಿ ಅವರಿಗೆ ಕೊನೆಗೂ ಸುಪ್ರೀಂ ಕೋರ್ಟ್ ಜಾಮೀನು ನೀಡಿದೆ. 2020ರ ನವೆಂಬರ್ 05 ರಂದು  ಸಿಬಿಐ ನಿಂದ ಬಂಧನವಾಗಿದ್ದ ವಿನಯ ಕುಲಕರ್ಣಿ ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿದ್ದರು.ಅನೇಕ ಬಾರಿ ಜಾಮೀನಿಗೆ ಪ್ರಯತ್ನಿಸಿದರೂ ನಿರಾಕರಿಸಲಾಗುತ್ತಿತ್ತು.

9 ತಿಂಗಳ ತರುವಾಯ ಅವರಿಗೆ ಷರತ್ತು ಬದ್ಧ ಜಾಮೀನು ದೊರೆತಿದ್ದು, ಸುಪ್ರೀಂ ಕೋರ್ಟ್, ಅನೇಕ ಷರತ್ತುಗಳನ್ನು ವಿಧಿಸಿದೆ. ಯಾವುದೇ ಕಾರಣಕ್ಕೂ ಧಾರವಾಡ ಜಿಲ್ಲೆಗೆ ಹೋಗುವಂತಿಲ್ಲ. ಯಾವುದೇ ಕಾರಣಕ್ಕೂ ಸಾಕ್ಷಿಗಳಿಗೆ ಬೆದರಿಕೆ ಹಾಕುವಂತಿಲ್ಲ. ಇನ್ನು ವಾರದಲ್ಲಿ ಎರಡು ಬಾರಿ ಪೊಲೀಸ್ ಠಾಣೆಗೆ ಭೇಟಿ ನೀಡಿ, ಸಹಿ ಮಾಡಿ ಬರಬೇಕು ಎಂಬ ನಿಯಮ ಹಾಕಿದೆ.

ತಮ್ಮ ಮೆಚ್ಚಿನ ನಾಯಕನಿಗೆ ಜಾಮೀನು ಮಂಜೂರು ಆದ ವಿಚಾರ ತಿಳಿಯುತ್ತಿದ್ದಂತೆ ಧಾರವಾಡದಲ್ಲಿ ವಿಜಯೋತ್ಸವ ಆಚರಿಸಲಾಯಿತು.ಅವರ ಬೆಂಬಲಿಗರು ಪಟಾಕಿ ಸಿಡಿಸಿ ಸಂಭ್ರಮಿಸಿದರು. ನಗರದ ಶಿವಗಿರಿ ಬಡಾವಣೆಯ ಅವರ ಮನೆಗೆ ದೌಡಾಯಿಸಿದ ಸ್ಥಳೀಯ ನಾಯಕರು ಹಾಗೂ ಬೆಂಬಲಿಗರು, ವಿನಯ ಕುಟುಂಬದವರನ್ನು ಭೇಟಿಯಾಗಿ ಶುಭ ಕೋರಿದರು.. 

ಆದರೆ ಸುಪ್ರೀಂ ಕೋರ್ಟ್ ಜಾಮೀನು ಮಂಜೂರು ಮಾಡಿದರೂ ವಿನಯ್ ಕುಲಕರ್ಣಿಗೆ ಬಿಡುಗಡೆ ಭಾಗ್ಯವಿಲ್ಲ. ಇದೀಗ ವಿನಯ್ ಗೆ ಜಾಮೀನು ಸಿಕ್ಕಿರೋದು ಕೊಲೆ ಕೇಸಿನಲ್ಲಿ ಮಾತ್ರ. ಆದರೆ ಮತ್ತೊಂದೆಡೆ ಕೊಲೆಯ ನಂತರ ಸಾಕ್ಷಿ ನಾಶ ಮಾಡಿರೋ ಆರೋಪವೂ ವಿನಯ ಮೇಲಿದೆ. ಈ ಕುರಿತು ಈಗಾಗಲೇ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ಕೇಸು ನಡೆಯುತ್ತಿದ್ದು, ಈಗಾಗಲೇ ಇದೇ ನ್ಯಾಯಾಲಯ ಜಾಮೀನು ತಿರಸ್ಕರಿಸಿದೆ.

ಜಾಮೀನಿಗಾಗಿ ವಿನಯ ಪರ ವಕೀಲರು ಬೆಂಗಳೂರಿನ ಹೈಕೋರ್ಟ್ ಗೆ ಮೊರೆ ಹೋಗಿದ್ದಾರೆ. ಹೀಗಾಗಿ ಈ ಕೇಸ್ ನಲ್ಲಿ ಜಾಮೀನು ಸಿಕ್ಕರೆ ಮಾತ್ರ ವಿನಯ್ ಗೆ ಬಿಡುಗಡೆಯ ಭಾಗ್ಯ ಲಭಿಸಲಿದೆ. ಅಲ್ಲಿಯವರೆಗೂ ವಿನಯ ಕುಲಕರ್ಣಿ ಜೈಲಿನಲ್ಲಿಯೇ ಉಳಿಯಬೇಕಿದೆ.ವಿನಯ್ ಕುಲಕರ್ಣಿಗೆ ಜಾಮೀನು ಮಂಜೂರಾದ ವಿಷಯಕ್ಕೆ ಬೇಸರ ವ್ಯಕ್ತಪಡಿಸಿರುವ ಯೋಗೀಶ್ ಗೌಡ ಮಿತ್ರ ಬಸವರಾಜ ಕೊರವರ್ ಕಾನೂನು ಹೋರಾಟವನ್ನು ಮುಂದುವರೆಸುವುದಾಗಿ ಹೇಳಿದ್ದಾರೆ.

“ಕೋರ್ಟ್ ತೀರ್ಪನ್ನು ನಾವು ಗೌರವಿಸಲೇಬೇಕು..ಆದ್ರೆ ಇದು ನಮಗೆ ತೃಪ್ತಿ ತಂದಿಲ್ಲ..ಇಷ್ಟಕ್ಕೆ ನಾವು ಸುಮ್ಮನಾಗುವುದಿಲ್ಲ..ನಮ್ಮ ಕಾನೂನು ಹೋರಾಟ ಮುಂದುವರೆಯಲಿದೆ..”
-ಬಸವರಾಜ್ ಕೊರವರ್-ಮೃತ ಯೋಗೇಶ್ ಗೌಡ ಸ್ನೇಹಿತ
Spread the love
Leave A Reply

Your email address will not be published.

Flash News