ಬೆಂಗಳೂರು:ಕೊರೊನಾ ಮೂರನೇ ಅಲೆ ಆಗಸ್ಟ್ ತಿಂಗಳ ಕೊನೆಯಲ್ಲಿ ಸ್ಪೋಟಿಸುವ ಆತಂಕವನ್ನು ಬಿಬಿಎಂಪಿ ಹೊರ ಹಾಕಿದೆ. ಈ ತಿಂಗಳಾಂತ್ಯದಲ್ಲಿ ಸೋಂಕಿನ ತೀವ್ರತೆ ಹೆಚ್ಚಲಿದ್ದು ಸೆಪ್ಟೆಂಬರ್ ನಲ್ಲಿ ಸೋಂಕಿತರ ಸಂಖ್ಯೆ ದಿನಂಪ್ರತಿ 5 ರಿಂದ 8 ಸಾವಿರಕ್ಕೆ ಏರಿಕೆಯಾಗಲಿದೆ ಎಂದು ಮುಖ್ಯ ಆರೋಗ್ಯಾಧಿಕಾರಿ ಡಾ.ವಿಜಯೇಂದ್ರ ತಿಳಿಸಿದ್ದಾರೆ.
ಕೊರೊನಾ ಮೂರನೇ ಅಲೆ ಬಗ್ಗೆ ಸಾರ್ವಜನಿಕವಾಗಿ ಸೃಷ್ಟಿಯಾಗಿರುವ ಗೊಂದಲಗಳ ಬಗ್ಗೆ ಸ್ಪಷ್ಟನೆ ನೀಡಿದ ಡಾ.ವಿಜಯೇಂದ್ರ,ಕೊರೊನಾ 3ನೇ ಅಲೆ ಈಗಾಗಲೇ ಶುರುವಾಗಿದೆ.ಆದ್ರೆ ಸಂಖ್ಯೆ ಸಧ್ಯಕ್ಕೆ ಸಾವಿರದ ಒಳಗೆ ಇದೆ.ಆದ್ರೆ ಹಾಗಂತ ಮೈ ಮರೆಯೋದು ಒಳ್ಳೇದಲ್ಲ.ಏಕೆಂದರೆ ಈ ತಿಂಗಳ ಅಂತ್ಯದಲ್ಲಿ ಸೋಂಕಿನ ತೀವ್ರತೆ ಹೆಚ್ಚಲಿದೆ ಎಂದು ಎಚ್ಚರಿಸಿದ್ದಾರೆ.
ಕೊರೊನಾ ಮೊದಲ ಅಲೆ ವೇಳೆ ದಿನಕ್ಕೆ 3 ರಿಂದ 5 ಸಾವಿರ ಪ್ರಕರಣ ಪತ್ತೆಯಾಗುತ್ತಿತ್ತು.ಎರಡನೇ ಅಲೆಯ ವಿದ್ವಂಸಕತೆಯಿಂದ ಸೋಂಕಿನ ತೀವ್ರತೆ 20 ರಿಂದ 26 ಸಾವಿರಕ್ಕೆ ಏರಿಕೆಯಾಗಿತ್ತು.ಕೊರೊನಾ 3ನೇ ಅಲೆಯಿಂದ ದಿನಕ್ಕೆ 5 ರಿಂದ 8 ಸಾವಿರದಷ್ಟು ಪ್ರಕರಣ ವರದಿಯಾಗಲಿದೆ ಎಂದು ವಿವರಿಸಿದ್ದಾರೆ.
ಕೊರೊನಾ 3ನೇ ಅಲೆ ಬರೋದೇ ಇಲ್ಲ ಎಂಬ ಅವಜ್ಞೆ ಖಂಡಿತಾ ಬೇಡ..ಈಗಾಗಲೇ ಕೊರೊನಾ ಬಂದಾಗಿದೆ.ಆದ್ರೆ ಮೊದಲ ಹಾಗೂ ಎರಡನೇ ಅಲೆಯಷ್ಟು ಆತಂಕ ಪಡಬೇಕಾಗಿಲ್ಲ.ಕೊವಿಡ್ ಸುರಕ್ಷತಾ ಕ್ರಮಗಳನ್ನು ಪಾಲಿಸಲೇಬೇಕು.ಮಕ್ಕಳಿಗೇ ಕೊರೊನಾ ಅಲೆ ಬರುತ್ತದೆನ್ನುವುದು ಶುದ್ಧ ಸುಳ್ಳು.ಮೂರನೇ ಅಲೆ ಮಕ್ಕಳಿಗೆ ಬಂದಿರುವ ಉದಾಹರಣೆಗಳು ತೀರಾ ಕಡಿಮೆ ಎಂದು ತಿಳಿಸಿದ್ದಾರೆ.
ಕೊರೊನಾ 3ನೇ ಅಲೆ ಮಕ್ಕಳಿಗೇ ಬರುತ್ತೆನ್ನುವುದಕ್ಕೆ ಯಾವುದೇ ಸಾಕ್ಷ್ಯ-ಪುರಾವೆಗಳಿಲ್ಲ.ಈಗ ಸೋಂಕು ಪತ್ತೆಯಾಗಿರುವವರ ಪೈಕಿ ಮಕ್ಕಳ ಸಂಖ್ಯೆ ತೀರಾ ಕಡಿಮೆ.ಎಲ್ಲಾ ವಯೋಮಾನದವರಿಗೂ ಕೊರೊನಾ ಸೋಂಕು ಬರುವ ಸಾಧ್ಯತೆಗಳಿವೆ.ಹಾಗಾಗಿ ಮೈಮರೆಯದೆ ಜನರು ಎಚ್ಚರಿಕೆ ವಹಿಸಬೇಕೆಂದು ವಿಜಯೇಂದ್ರ ಸೂಚಿಸಿದ್ದಾರೆ.