ಆ “ಶಿಕ್ಷಕ” ಇಡೀ ರಾಜ್ಯವೇ ಹೆಮ್ಮೆ ಪಡುವಂತೆ ಮಾಡಿದ್ದಾದರೂ ಏನು..? ಅಂದ್ಹಾಗೆ ಅವರು ಮಾಡಿದ ಸಾಧನೆಯಾದರೂ ಯಾವುದು.!

ನಾಗರಾಜ್…ಹಳ್ಳಿಯಿಂದ ದೇಶದ ಅತ್ಯುನ್ನತ ರಾಷ್ಟ್ರೀಯ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆಯೋವರೆಗೂ

0

ಬೆಂಗಳೂರು:ಇಡೀ ರಾಜ್ಯವೇ ಹೆಮ್ಮೆ ಪಡುವಂತ ಸಾಧನೆ ಮಾಡಿದ್ದಾರೆ ಬೆಂಗಳೂರಿನ ಶಿಕ್ಷಕರೋರ್ವರು. ಕೇವಲ ರಾಜ್ಯವೇ ಏಕೆ ಇಡೀ,ದೇಶದ ಶಿಕ್ಷಣ ಕ್ಷೇತ್ರದಲ್ಲಿ ಅತ್ಯುತ್ತಮ ಸೇವೆ ಹಾಗೂ ಅಸಾಧಾರಣ ಸಾಮರ್ಥ್ಯಕ್ಕೆ ನೀಡಲಾಗುವ ರಾಷ್ಟ್ರೀಯ ಪ್ರಶಸ್ತಿ  ಬೆಂಗಳೂರು ದಕ್ಷಿಣ  ಜಿಲ್ಲೆಯ ದೊಡ್ಡಬನಹಳ್ಳಿ ಹೈಸ್ಕೂಲ್   ಶಿಕ್ಷಕ ನಾಗರಾಜ್ ಸಿಎಂ ಪಾಲಾಗಿದೆ.

ಕೇಂದ್ರದ ಶಿಕ್ಷಣ ಇಲಾಖೆ ನೀಡುವ ಪ್ರತಿಷ್ಟಿತ ಪ್ರಶಸ್ತಿ ಅನೇಕ ವರ್ಷಗಳಿಂದ ವಿವಿಧೆಡೆ ಸರ್ಕಾರಿ ಶಿಕ್ಷಕನಾಗಿ ಕೆಲಸ ಮಾಡುವುದರ ಜತೆಗೆ ಶಿಕ್ಷಣದಲ್ಲಿ ರಚನಾತ್ಮಕ ಹಾಗೂ ಕ್ರಿಯಾಶೀಲ ಚಟುವಟಿಕೆಗಳಿಂದ ಗಮನ ಸೆಳೆದ ನಾಗರಾಜ್ ಅವರಿಗೆ ಸಂದಾಯವಾಗಿದೆ.ಕಳೆದ 2018 ರಿಂದ ಮೇಲ್ಕಂಡ ಶಾಲೆಯಲ್ಲಿ ವಿಜ್ಞಾನ ಶಿಕ್ಷಕರಾಗಿ ಕೆಲಸ ಮಾಡುತ್ತಿರುವ ನಾಗರಾಜ್,ಕೊರೊನಾ ಅಲೆ ನಡುವೆಯೇ ಶಿಕ್ಷಣ ಇಲಾಖೆ ರೂಪಿಸಿದ ಕಾರ್ಯಕ್ರಮಗಳನ್ನು ವಿದ್ಯಾರ್ಥಿಗಳಿಗೆ ತಲುಪಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸಿ ಎಲ್ಲರ ಗಮನ ಸೆಳೆದಿದ್ದರು.

ಮೂಲತಃ ಚಿತ್ರದುರ್ಗ ಜಿಲ್ಲೆಯ  ಹೊಳಲ್ಕೆರೆ ತಾಲೂಕಿನ ಚನ್ನಪ್ಪನಹಟ್ಟಿ ಗ್ರಾಮದವರಾದ ನಾಗರಾಜ್ ಪ್ರಾಥಮಿಕ ಶಿಕ್ಷಣವನ್ನು ಚನ್ನಗಿರಿ  ತಾಲೂಕಿನ ಜೋಳದಾಳ್ ನಲ್ಲಿ ಪೂರ್ಣಗೊಳಿಸಿದರು.ಕಾಲೇಜ್ ಶಿಕ್ಷಣವನ್ನು ಶಿವಮೊಗ್ಗದ ಸಹ್ಯಾದ್ರಿ ವಿಜ್ಞಾನ ಕಾಲೇಜಿನಲ್ಲಿ ಪೂರೈಸಿ ನಂತರ ಬಿಎಡ್ ಪದವಿಯನ್ನು ಹಾನ್ ಗಲ್ ನಲ್ಲಿ ಮುಗಿಸಿದರು.ಸ್ನಾತಕೋತ್ತರ ಪದವಿಯನ್ನು ಶಂಕರಘಟ್ಟದ ಕುವೆಂಪು ವಿವಿಯಲ್ಲಿ ಪೂರ್ಣಗೊಳಿಸಿದರು.

ನಂತರ ಶಿಕ್ಷಕರಾಗಿ 2005ರಲ್ಲಿ ನೇಮಕಗೊಂಡರು.ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಕಾಡುಸೊನ್ನಪ್ಪನಹಳ್ಳಿ ಶಾಲೆಯಲ್ಲಿ ಶಿಕ್ಷಕರಾಗಿ ವೃತ್ತಿ ಆರಂಭಿಸಿದರು.ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಪಡೆದ ಆ ಶಾಲೆಯಲ್ಲಿ ನಾಗರಾಜ್ ಮಾಡಿದ ಅತ್ಯುತ್ತಮ ಸೇವೆ ಪರಿಗಣಿಸಿ ಶಿಕ್ಷಣ ಇಲಾಖೆ ಎರಡು ವರ್ಷಗಳ ಕಾಲ ಪ್ರೋತ್ಸಾಹಕ ವೇತನವನ್ನೂ ನೀಡಿತು.

ಶಿಕ್ಷಕ ವೃತ್ತಿಯ ಜತೆಗೆ ಶಿಕ್ಷಣ ಇಲಾಖೆಯ ಸಾಕಷ್ಟು ಕಾರ್ಯಕ್ರಮಗಳಿಗೆ ನಾಗರಾಜ್ ಸಂಪನ್ಮೂಲ ವ್ಯಕ್ತಿಯಾಗಿ ಕೆಲಸ ಮಾಡಿದ್ದಾರೆ.ಬಿಇಓ ಕಚೇರಿಯಲ್ಲಿ ಶಿಕ್ಷಣ ಸಂಯೋಜಕನಾಗಿಯೂ ಕೆಲಸ ಮಾಡಿದ್ದಾರೆ.ಶಿಕ್ಷಣ ಇಲಾಖೆ ಆಯೋಜಿಸುವ ಕಾರ್ಯಕ್ರಮಗಳು ಹಾಗೂ ನಡೆಸುವ ಸಾಕಷ್ಟು ಕಾರ್ಯಾಗಾರಗಳಲ್ಲಿ ಖಾಯಂ ಸಂಪನ್ಮೂಲ ವ್ಯಕ್ತಿಯಾಗಿ ನಾಗರಾಜ್ ಆಯ್ಕೆಯಾಗುತ್ತಲೇ ಬಂದಿರುವುದು ಅವರ ಹೆಗ್ಗಳಿಕೆ ಹಾಗೂ ಸೇವಾ ಹಿರಿತನಕ್ಕೆ ಸಂದ ಹೆಗ್ಗಳಿಕೆ ಕೂಡ.

ಶಿಕ್ಷಣ ಕ್ಷೇತ್ರದಲ್ಲಿ ಮಾಡಿದ ಸಾಕಷ್ಟು ಸೇವೆಯನ್ನು ಪರಿಗಣಿಸಿ 2019 ರಲ್ಲಿ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ದೊರೆತಿದೆ.ಅದೇ ವರ್ಷ ರಾಜ್ಯಮಟ್ಟದಲ್ಲಿ ನಡೆದ ಸ್ಪರ್ಧೆಯಲ್ಲಿ ಮೊದಲ ಬಹುಮಾನ ಪಡೆದಿದ್ದಾರೆ.ಕನ್ನಡ ಸಾಹಿತ್ಯನ ಕನ್ನಡ ಸೇವಾರತ್ನ ಪ್ರಶಸ್ತಿಯೂ ನಾಗರಾಜ್ ಮುಡಿಗೇರಿದೆ.ಗ್ರಾಮ ಪಂಚಾಯತ್ ಮಟ್ಟದಲ್ಲಿ ಶಿಕ್ಷಣಕ್ಕೆ ಸಂಬಂಧಿಸಿದ ಕಾರ್ಯಕ್ರಮಗಳಲ್ಲಿ ತೊಡಗಿಕೊಂಡಿರುವ ನಾಗರಾಜ್,ಮಳೆ ನೀರನ್ನು ಉಳಿಸುವ ನಿಟ್ಟಿನಲ್ಲಿ ಅಧ್ಯಯನ ಕೈಗೊಂಡು ಅದರ ಕುರಿತಾದ ಅರಿವನ್ನು ಮಕ್ಕಳಲ್ಲಿ ಮೂಡಿಸುವಲ್ಲಿ ತೊಡಗಿದ್ದಾರೆ.

ಇಷ್ಟೆಲ್ಲಾ ಸಾಧನೆ ಮಾಡಿರುವ ಶಿಕ್ಷಕ ನಾಗರಾಜ್ ಮಾಡಿರುವ ಸಾಧನೆಯನ್ನು ಪರಿಗಣಿಸಿ ಕೇಂದ್ರ ಶಿಕ್ಷಣ ಇಲಾಖೆ ರಾಷ್ಟ್ರೀಯ ಪ್ರಶಸ್ತಿಗೆ ಅವರನ್ನು ಆಯ್ಕೆ ಮಾಡಿದೆ.ಮಕ್ಕಳ ಶ್ರಯೋಭಿವೃದ್ಧಿಗೆ ತನ್ನ ವೃತ್ತಿ ಬದುಕನ್ನೇ ಮುಡಿಪಾಗಿಟ್ಟು ದುಡಿಯುತ್ತಿರುವ ನಾಗರಾಜ್ ಸಾಧನೆಗೆ ಅರಸಿ ಬಂದಿರುವ ರಾಷ್ಟ್ರೀಯ ಪ್ರಶಸ್ತಿ ಅವರ ಜವಾಬ್ದಾರಿಯನ್ನು ಮತ್ತಷ್ಟು ಹೆಚ್ಚಿಸಿದೆ ಕೂಡ..ಈ ಪ್ರಯತ್ನಗಳಲ್ಲಿ ಅವರು ಯಶಸ್ವಿಯಾಗಲಿ ಎನ್ನುವುದೇ ಕನ್ನಡ ಫ್ಲಾಶ್ ನ್ಯೂಸ್ ನ ಆಶಯ ಹಾಗೂ ಹಾರೈಕೆ ಕೂಡ..

Spread the love
Leave A Reply

Your email address will not be published.

Flash News