Breakinglock downScrollTop NewsUncategorizedಫೋಟೋ ಗ್ಯಾಲರಿಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(BBMP)ರಾಜಕೀಯರಾಜ್ಯ-ರಾಜಧಾನಿ

ಕನ್ನಡ ಚಿತ್ರರಂಗದ ದಿಗ್ಗಜ “ಹಾಸ್ಯನಟ”ನಿಗೆ ಇಂಥಾ ಅವಮಾನನಾ.. ಕೊಟ್ಟ ಮಾತು ಉಳಿಸಿಕೊಳ್ಳೋ ಯೋಗ್ಯತೆ “BBMP” ಗಿಲ್ವಾ..?

ಬೆಂಗಳೂರು:ಬಿಬಿಎಂಪಿ ಯೋಗ್ಯತೆನಾ ಇಷ್ಟು…ಕೇವಲ ಅಕ್ರಮ-ಭ್ರಷ್ಟಾಚಾರಗಳಲ್ಲಿ ಅಷ್ಟೇ ಅಲ್ಲ,ಕಲೆ-ಸಾಹಿತ್ಯ-ಸಂಸ್ಕ್ರತಿ ಕ್ಷೇತ್ರಕ್ಕೆ ಸಂಬಂಧಿಸಿದ ವಿಷಯಗಳಲ್ಲೂ ಅದೇ ಅಸಡ್ಡೆ-ಅದೇ ನಿರ್ಲಕ್ಷ್ಯ-ಅದೇ ಕಳ್ಳಾಟದ ಪ್ರವೃತ್ತಿ ಮುಂದುವರೆಸಿದೆ..ಇದಕ್ಕೆ ಮತ್ತೊಂದು ದುರಂತ ಉದಾಹರಣೆ ಕನ್ನಡ ಚಿತ್ರರಂಗ ಕಂಡ ಖ್ಯಾತ ಹಾಸ್ಯದಿಗ್ಗಜ ಮುಸುರಿ ಕೃಷ್ಣಮೂರ್ತಿ ಅವರ ನಾಮಕರಣದ ವಿಚಾರ.

ಮುಸುರಿ ಕೃಷ್ಣಮೂರ್ತಿ ಈ ಹೆಸರನ್ನು ಕೇಳದ ಚಿತ್ರರಸಿಕರೇ ಕಡಿಮೆ.ಸರಿಸುಮಾರು 250ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ಹಾಸ್ಯನಟ ಹಾಗೂ ಖಳನಾಯಕ ಹಾಗೂ ಪೋಷಕ ಪಾತ್ರಗಳಲ್ಲಿ ನಟಿಸಿ ತಮ್ಮ ವಿಬಿನ್ನ ಶೈಲಿಯ ನಟನೆಯಿಂದ ವಿಶೇಷ ಛಾಪು ಮೂಡಿಸಿದ ಕಲಾವಿದ.ತಮ್ಮ ನಟನೆಯಿಂದಲೇ ಲಕ್ಷಾಂತರ ಅಭಿಮಾನಿಗಳನ್ನು ಗಳಿಸಿಕೊಂಡ ಹಾಸ್ಯ ನಟ.ಅಂಥಾ ನಟನನ್ನು ಇಂದಿಗೂ ಕನ್ನಡ ಚಿತ್ರರಂಗ ಮರೆತಿಲ್ಲ,ಅಭಿಮಾನಿಗಳ ಮಾನಸದಿಂದಲೂ ಮರೆಯಾಗಿಲ್ಲ.

ಆದ್ರೆ ಇಂಥಾ ನಟನನ್ನು ಬಿಬಿಎಂಪಿ ಅವಮಾನಿಸಿದೆ..ಅವರನ್ನು ಅತ್ಯಂತ ಅಮಾನವೀಯವಾಗಿ ನಡೆಸಿಕೊಂಡಿದೆ ಕೂಡ..ಅವರ ಹೆಸರನ್ನು ರಸ್ತೆಗಿಡುವ ವಿಚಾರದಲ್ಲಿ ವರ್ಷಗಳಿಂದಲೂ ಕಳ್ಳಾಟ ನಡೆಸುತ್ತಿದೆಯಲ್ಲದೇ ಅವರ ಹೆಸರನ್ನಿಡಬೇಕೆಂದು ನಿರ್ಧರಿಸಿದ್ದ ರಸ್ತೆಗೆ ಬೇರೆಯವರ ಹೆಸರನ್ನು ಇಡುವ ದ್ವಂದ್ವ ಧೋರಣೆ ಅನುಸರಿಸಿದೆ.ಇದು ಮುಸುರಿ  ಕೃಷ್ಣಮೂರ್ತಿ ಅವರಿಗೆ ಮಾಡಿದ ಘನಘೋರ ಅವಮಾನವಲ್ಲದೆ ಇನ್ನೇನು.

 ರಾಜರಾಜೇಶ್ವರಿ ನಗರ ಶಾಸಕ ಮುನಿರತ್ನ
ರಾಜರಾಜೇಶ್ವರಿ ನಗರ ಶಾಸಕ ಮುನಿರತ್ನ

ಅಂದ್ಹಾಗೆ ಮುಸುರಿ ಕೃಷ್ಣಮೂರ್ತಿ ಅವರ ಹೆಸರನ್ನು ಇಡುವ ವಿಚಾರ ಅವರ ಕುಟುಂಬಸ್ಥರಿಂದ ವ್ಯಕ್ತವಾದಂತಲ್ಲ.ಶಾಸಕ ಮುನಿರತ್ನ ಬಿಬಿಎಂಪಿಯ ಸಾಮಾನ್ಯ ಸಭೆಯಲ್ಲೇ ಇದರ ಪ್ರಸ್ತಾಪವಾಗಿತ್ತು.ಅನುಮೋದನೆಯೂ ದೊರೆಯಿತು.ಸರ್ಕಾರದ ಮಟ್ಟದಲ್ಲೂ ಯಾವುದೇ ವಿರೋಧಗಳಿರಲಿಲ್ಲ..ಇನ್ನೇನು ಎಲ್ಲಾ ಮುಗಿದೇ ಹೋಯಿತು ಎಂದುಕೊಳ್ಳುವಷ್ಟರಲ್ಲಿ ಅಘಾತಕಾರಿ ಎನ್ನುವಂಥ ಸುದ್ದಿ ಕೇಳಿ ಬಂತು.ಅಪ್ಪನ ಹೆಸರನ್ನು ಇಡಬೇಕಿದ್ದ ರಸ್ತೆಗೆ ಮತ್ತೋರ್ವರ ಹೆಸರನ್ನು ಇಡಲು ನಿರ್ಧಾರ ಕೈಗೊಳ್ಳಲಾಗಿದೆ ಎನ್ನುವ ಸುದ್ದಿ ತಿಳಿಯಿತು.

2014 ರ ಅಕ್ಟೋಬರ್ 9 ರಂದು ಶಾಸಕರಾಗಿದ್ದ ಮುನಿರತ್ನ ಮಾಗಡಿ ರಸ್ತೆಯ ಒಕ್ಕಲಿಗರ ಸಂಘ ಶಾಲೆಯಿಂದ ಜ್ಞಾನಜ್ಯೋತಿ ನಗರ  ಬೆಂಗಳೂರು ವಿಶ್ವವಿದ್ಯಾಲಯದ ಸಿಗ್ನಲ್ ವರೆಗಿನ ಸುಮಾರು 5 ಕಿಲೋಮೀಟರ್ ಉದ್ದದ ರಸ್ತೆಗೆ “ನಟ ಚಾಣಕ್ಯ ದಿವಂಗತ ಶ್ರೀ ಮುಸುರಿ ಕೃಷ್ಣಮೂರ್ತಿ ರಸ್ತೆ” ಎಂದು ನಾಮಕರಣ ಮಾಡಬೇಕೆನ್ನುವ ಪ್ರಸ್ತಾಪವನ್ನು ಬಿಬಿಎಂಪಿ ಮೇಯರ್ ಮುಂದಿಡುತ್ತಾರೆ.ಆಗ ಮೇಯರ್ ಆಗಿದ್ದವರು ಬಿಜೆಪಿಯ ಶಾಂತಕುಮಾರಿ.

30-10-2014 ರಂದು ಇದೇ ವಿಷಯವನ್ನು ಬಿಬಿಎಂಪಿ ಆಡಳಿತ ಪಕ್ಷದ ನಾಯಕರಾಗಿದ್ದ ಎನ್.ಆರ್ ರಮೇಶ್ ಬಿಬಿಎಂ;ಪಿ ಕೌನ್ಸಿಲ್ ಸಭೆಯಲ್ಲಿ ಮಂಡಿಸಿದರು.ಇದಕ್ಕೆ ಬಿಜೆಪಿಯ ಮುಖಂಡ ಅಶ್ವತ್ಥನಾರಾಯಣ ಅನುಮೋದಿಸಿದ್ದರು.28-11-2014 ರಂದು ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ರಸ್ತೆ ನಾಮಕರಣಕ್ಕೆ ಸಾರ್ವಜನಿಕರು ಹಾಗೂ ಸಂಘಸಂಸ್ಥೆಗಳಿಂದ ಆಕ್ಷೇಪಣೆಗಳಿದ್ದಲ್ಲಿ ಅದನ್ನು ಸಲ್ಲಿಸಲು ಸರ್ಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಲಾಗಿತ್ತು.ಇದಕ್ಕೆ ಅನ್ವಯವಾಗುವಂತೆ ಪತ್ರಿಕೆಗಳಲ್ಲಿ 06-12-2014 ರಂದು ರಸ್ತೆ ನಾಮಕರಣಕ್ಕೆ ಸಂಬಂಧಿಸಿದಂತೆ ಸಾರ್ವಜನಿಕರು ಹಾಗೂ ಸಂಘಸಂಸ್ಥೆಗಳಿಂದ ಆಕ್ಷೇಪಣೆಗಳನ್ನು ಕರೆಯಲಾಗಿತ್ತು.

ಇದಕ್ಕೆ ಪೂರಕವಾಗಿ 27-05-2015 ರಂದು ಪದ್ಮನಾಭ ರೆಡ್ಡಿ, ಮೇಲ್ಕಂಡ ವಿಷಯವನ್ನು ಮರು ಪ್ರಸ್ತಾಪಿಸಿದ್ರು.ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಸಭೆಯ ವಿಷಯದ ಸಂಖ್ಯೆ:182/2014-15 ಕ್ಕೆ ಸಂಬಂಧಿಸಿದಂತೆ ಮಂಡಿಸಲಾದ ಹಾಗು ಅನುಮೋದಿಸಲಾದ ವಿಷಯಕ್ಕೆ ಒಪ್ಪಿಗೆ ನೀಡಲಾಯಿತಲ್ಲದೇ,ಸರ್ವಾನುಮತದಿಂದ ರಸ್ತೆ ನಾಮಕರಣಕ್ಕೆ ಹಸಿರುನಿಶಾನೆ ನೀಡಲಾಯಿತು.ಆಶ್ಚರ್ಯ ಎಂದ್ರೆ ಯಾವುದೇ ಅಕ್ಷೇಪಣೆಗಳು ಬಾರದ ಹೊರತಾಗ್ಯೂ ಮತ್ತೊಮ್ಮೆ ಬಿಬಿಎಂಪಿ, 17-04-2015 ರಂದು “ನಟ ಚಾಣಕ್ಯ ದಿವಂಗತ ಶ್ರೀ ಮುಸುರಿ ಕೃಷ್ಣಮೂರ್ತಿ ರಸ್ತೆ”ನಾಮಕರಣ ಮಾಡುವಂತೆ ಸರ್ಕಾರಕ್ಕೆ ಮರು ಪತ್ರ ಬರೆಯಲಾಯಿತು.ಇದರ ಅವಶ್ಯಕತೆ ಇಲ್ಲದಿದ್ದರೂ ಯಾಕೆ ಈ ರೀತಿಯ ನಿಲುವನ್ನು ಅನುಸರಿಸಲಾಯಿತೋ ಎನ್ನುವುದು ಇವತ್ತಿಗೂ ಯಕ್ಷಪ್ರಶ್ನೆ.

ಸರ್ಕಾರಕ್ಕೆ ರವಾನಿಸಲಾದ ಮೇಲ್ಕಂಡ  ಪ್ರಸ್ತಾವನೆಯನ್ನು  30-09-2015 ರಂದು ಅನುಮೋದಿಸಿದ ಸರ್ಕಾರದ ಅಧೀನ ಕಾರ್ಯದರ್ಶಿ ಹಿದಾಯುತುಲ್ಲಾ, ಬೆಂಗಳೂರು ವಿಶ್ವವಿದ್ಯಾಲಯದ ಸಿಗ್ನಲ್ ವರೆಗಿನ ಸುಮಾರು 5 ಕಿಲೋಮೀಟರ್ ಉದ್ದದ ರಸ್ತೆಗೆ “ನಟ ಚಾಣಕ್ಯ ದಿವಂಗತ ಶ್ರೀ ಮುಸುರಿ ಕೃಷ್ಣಮೂರ್ತಿ ರಸ್ತೆ” ಎಂದು ನಾಮಕರಣ ಮಾಡಲು ಅನುಮೋದನೆ ನೀಡಿದ್ರು.ಮೇಲ್ಕಂಡ ಬೆಳವಣಿಗೆಗಳಾದರೂ ಬಿಬಿಎಂಪಿ ರಸ್ತೆ ನಾಮಕರಣ ಮಾಡಲು ಯಾವುದೆ ಕ್ರಮ ಕೈಗೊಳ್ಳದ ಹಿನ್ನಲೆಯಲ್ಲಿ ಮುಸುರಿ ಅವರ ಪುತ್ರ ಜಯಸಿಂಹ ಮುಸುರಿ ಅವರು  ತುಂಬಾ ಬೇಸರದಿಂದ 30-09-2015 ರಂದು ಬಿಬಿಎಂಪಿಗೆ ವಿಷಯವನ್ನು ನೆನಪಿಸುವ ಪ್ರಯತ್ನ ಮಾಡಿದ್ರು.

ಇದೆಲ್ಲದರ ನಡುವೆ ಅಚ್ಚರಿ ಎನ್ನುವಂತೆ ನಡೆದ ಬೆಳವಣಿಗೆಗಳಲ್ಲಿ ಮುಸುರಿ ಕೃಷ್ಣಮೂರ್ತಿ ಅವರ ಹೆಸರನ್ನಿಡಲು ಮಾಡಲಾಗಿದ್ದ ನಿರ್ದಾರಕ್ಕೆ ತಿದ್ದುಪಡಿ ತರುವ ರೀತಿಯಲ್ಲಿ 12-06-2020 ರಂದು ಅದೇ ರಸ್ತೆಗೆ ಉಲ್ಲೇಖ-ವ್ಯಾಖ್ಯಾನದ ರೀತಿಯನ್ನಷ್ಟೇ ಬದಲಿಸಿ,ಮಾಗಡಿ ಮುಖ್ಯ ರಸ್ತೆ  ಶ್ರೀಗಂಧದಕಾವಲ್ ನಿಂದ ಪ್ರಾರಂಭವಾಗಿ  ಮರಿಯಪ್ಪನ ಪಾಳ್ಯ ಮಾರ್ಗವಾಗಿ ಕೆಂಗೇರಿ ಉಪನಗರ ಹೊರವರ್ತುಲ ರಸ್ತೆ ಮೂಲಕ ಮೈಸೂರು ಮುಖ್ಯ ರಸ್ತೆಗೆ  ಸೇರುವ ರಸ್ತೆಗೆ ಶ್ರೀ ಕೆ.ಎಚ್.ರಾಮಯ್ಯ ರಸ್ತೆ ಎಂದು ಕೌನ್ಸಿಲ್ ಸಭೆಯಲ್ಲಿ ನಾಮಕರಣ ಮಾಡುವ ತೀರ್ಮಾನ ಕೈಗೊಳ್ಳಲಾಗುತ್ತೆ.29-06-2021 ರಂದು ಅದೇ ನಿರ್ಣಯವನ್ನು ಅನುಮೋದಿಸುವಂತೆ  ನಗರಾಭಿವೃದ್ದಿ  ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರವನ್ನು ಬರೆಯಲಾಗುತ್ತೆ.

ಆದ್ರೆ ಪ್ರಶ್ನೆ ಇರೋದು ಮುಸುರಿ ಕೃಷ್ನಮೂರ್ತಿ ಹೆಸರನ್ನಿಡಲಾಗಿದ್ದ ರಸ್ತೆಗೆ ಕೆ.ಎಚ್ ರಾಮಯ್ಯ ಅವರ ಹೆಸರನ್ನಿಡುವ ನಿರ್ಣಯವನ್ನೇಕೆ ತೆಗೆದುಕೊಳ್ಳಲಾಯಿತು ಎನ್ನುವುದರ ಬಗ್ಗೆ.ಮುಸುರಿ ಕೃಷ್ನಮೂರ್ತಿ ಅವರ ಹೆಸರನ್ನಿಡುವ ವಿಚಾರದಲ್ಲೇಕೆ ಬಿಬಿಎಂಪಿ ಇಷ್ಟೊಂದು ವಿರೋದಾಭಾಸಕ್ಕೆ ಸಿಲುಕಿತು ಎನ್ನುವುದು ಮುಸುರಿ ಕೃಷ್ನಮೂರ್ತಿ ಅವರ ಪುತ್ರ ಜಯಸಿಂಹ ಅವರ ವಾದ.

 ಮುಸುರಿ ಕೃಷ್ಣಮೂರ್ತಿ ಪುತ್ರ ಜಯಸಿಂಹ
ಮುಸುರಿ ಕೃಷ್ಣಮೂರ್ತಿ ಪುತ್ರ ಜಯಸಿಂಹ

ತನ್ನ ತಂದೆಯ ಹೆಸರನ್ನು ರಸ್ತೆಗೆ ನಾಮಕರಣ ಮಾಡುವ ವಿಚಾರದಲ್ಲಿ ಬಿಬಿಎಂಪಿ ಅನುಸರಿಸುತ್ತಿರುವ ಧೋರಣೆ ಹಾಗೂ ಮಾಡು ತ್ತಿರುವ ನಿರ್ಲಕ್ಷ್ಯದ ಬಗ್ಗೆ ಬೇಸರ-ಅಸಮಾಧಾನ ವ್ಯಕ್ತಪಡಿಸಿರುವ ಜಯಸಿಂಹ ಮುಸುರಿ, ಇಷ್ಟೊಂದು ಗೊಂದಲ-ವಿವಾದ ಅಗತ್ಯ ವಿತ್ತೇ ಎಂದು ಪ್ರಶ್ನಿಸಿದ್ದಾರೆ.250 ಚಿತ್ರಗಳು,ನೂರಾರು ನಾಟಕಗಳಲ್ಲಿ ಅಭಿನಯಿಸಿದ ತನ್ನ ತಂದೆಗೆ ಬಿಬಿಎಂಪಿ ಅಗೌರವ ಸೂಚಿಸಿರುವುದರ ವಿರುದ್ಧ ತನ್ನ ಹೋರಾಟ ಮುಂದುವರೆಸುವುದಾಗಿ ಹೇಳಿದ್ದಾರೆ.

ಈ ಬಗ್ಗೆ ಕನ್ನಡ ಫ್ಲಾಶ್ ನ್ಯೂಸ್ ಶಾಸಕ ಹಾಗೂ ಚಿತ್ರ ನಿರ್ಮಾಪಕರೂ ಆದ ಮುನಿರತ್ನ ಅವರನ್ನು ಸಂಪರ್ಕಿಸಿತು.ಈ ವಿಚಾರ ದಲ್ಲಿ ಅವರಿಗೆ ಮೊದಲಿದ್ದ ಆಸಕ್ತಿ ಇದ್ದಂತೆ ತೋರಲಿಲ್ಲ..ಇದರ ಬಗ್ಗೆ ಮಾತನಾಡುತ್ತೇನೆ ಎಂದ್ಹೇಳಿ ಸುಮ್ಮನಾದರು. ಚಿತ್ರರಂಗದೊಂದಿಗೆ ನಿಕಟ ಸಂಪರ್ಕ ಹೊಂದಿರುವ ಮುನಿರತ್ನ ಅವರಿಂದ ಇಂತದ್ದೊಂದು ನಿರುತ್ಸಾಹದ ಮಾತುಗಳು ವ್ಯಕ್ತವಾಗಿದ್ದು ಅದೇಕೋ ಅಭಾಸವೆನಿಸ್ತು.ಆದರೆ ಕೆಲವು ಮೂಲಗಳಿಂದ ಕನ್ನಡ ಫ್ಲಾಶ್ ನ್ಯೂಸ್ ಗೆ ಗೊತ್ತಾದ ವಿಷಯ ಏನೆಂದರೆ,ದಲಿತ ಕವಿ ಸಿದ್ದಲಿಂಗಯ್ಯ ಅಂತ್ಯ ಸಂಸ್ಕಾರ ದಿನದಂದು ಇದೇ ಮುನಿರತ್ನ ಮೇಲ್ಕಂಡ ರಸ್ತೆಗೆ ಕವಿ ಸಿದ್ದಲಿಂಗಯ್ಯ ಅವರ ಹೆಸರನ್ನಿಡುವುದಾಗಿ ಮಾತು ಕೊಟ್ಟಿದ್ದರಂತೆ.ಮುಸುರಿ ಕೃಷ್ನಮೂರ್ತಿ ಅವರ ಹೆಸರನ್ನಿಡಬೇಕೆನ್ನುವ ವಿಷಯ ಪ್ರಸ್ತಾಪಿಸಿದವ ರು,ಹಾಗೆಯೇ ಅದೇ ರಸ್ತೆಗೆ ಸಿದ್ದಲಿಂಗಯ್ಯ ಅವರ ಹೆಸರನ್ನಿಡುವುದಾಗಿ ಘೋಷಿಸಿದ್ದು ಇದೇ  ಮುನಿರರತ್ನ ಎನ್ನುವುದು ಅಭಾಸವಷ್ಟೇ ಅಲ್ಲ ಹಾಸ್ಯಾಸ್ಪದವೂ ಹೌದು.

ಈ ಬಗ್ಗೆ ಬಿಬಿಎಂಪಿ ಹಾಗೂ ಕನ್ನಡ ಚಿತ್ರರಂಗದ ಅನೇಕರನ್ನು ಸಂಪರ್ಕಿಸುವ ಕೆಲಸವನ್ನು ಕನ್ನಡ ಫ್ಲಾಶ್ ನ್ಯೂಸ್ ಮಾಡಿತು. ಆಗಿರೋ ಲೋಪ ಸರಿಪಡಿಸಿಕೊಳ್ಳುವ ಮಾತು ಕೇಳಿಬಂದಿತಲ್ಲದೇ,ಮುಸುರಿ ಕೃಷ್ಣಮೂರ್ತಿ ಅವರ ಹೆಸರನ್ನಿಡುವ ವಿಚಾರದಲ್ಲಿ ಸಕಾರಾತ್ಮಕವಾಗಿ ಸ್ಪಂದಿಸುವ ಭರವಸೆ ದೊರೆಯಿತು.

ಆದರೆ ವಾಸ್ತವದ ವಿಚಾರ ಎಂದ್ರೆ ಅತ್ತು ಕರೆದು ಔತಣ ಮಾಡಿಸಿಕೊಂಡ್ರು ಎನ್ನುವ ಮಾತಿನಂತೆ ವಿವಾದ,ಗೊಂದಲಗಳ ನಂತರ ಮುಸುರಿ ಕೃಷ್ಣಮೂರ್ತಿ ಅವರ ಹೆಸರನ್ನು ರಸ್ತೆಗೆ ನಾಮಕರಣ ಮಾಡಬೇಕಾಗಿ ಬಂತಲ್ಲ ಎನ್ನುವುದು ನಿಜಕ್ಕೂ ವಿಪರ್ಯಾಸ ಅಷ್ಟೇ ಅಲ್ಲ ನಾಚಿಕೆಗೇಡು ಕೂಡ. ಮುಸುರಿ ಕೃಷ್ಣಮೂರ್ತಿ ಅವರಂಥ ಮೇರು ಹಾಸ್ಯ ನಟನಿಗೆ ಬಿಬಿಎಂಪಿ ಮಾಡ್ತಿರೋ ಅವಮಾನ ಅಕ್ಷಮ್ಯವೇ ಸರಿ..

ರಸ್ತೆ ನಾಮಕರಣದಿಂದ ವಿವಾದದವರೆಗಿನ ಘಟನಾವಳಿಗಳು:

**9-10-2014:ಬಿಬಿಎಂಪಿ ಮೇಯರ್ ಗೆ ರಾಜರಾಜೇಶ್ವರಿ ನಗರ ಶಾಸಕ ಮುನಿರತ್ನ ರಿಂದ  “ನಟ ಚಾಣಕ್ಯ ದಿವಂಗತ ಶ್ರೀ ಮುಸುರಿ ಕೃಷ್ಣಮೂರ್ತಿ ರಸ್ತೆ” ಎಂಬ ಮನವಿ

**30-10-2014 ಬಿಬಿಎಂಪಿ ಸಾಮಾನ್ಯ ಸಭೆಯಲ್ಲಿ ಆಡಳಿತ ಪಕ್ಷದ ನಾಯಕ ಎನ್.ಆರ್ ರಮೇಶ್ ರಿಂದ ನಿರ್ಣಯ ಮಂಡನೆ,ಅಶ್ವತ್ಥ ನಾರಾಯಣ ಅವರಿಂದ ಅನುಮೋದನೆ

**28-11-2014:ಪಾಲಿಕೆಯಲ್ಲಿ ತೆಗೆದುಕೊಂಡ ನಿರ್ಣಯಕ್ಕೆ ಸಂಬಂಧಿಸಿದಂತೆ ಆಕ್ಷೇಪಣೆಗಳು-ಅಭಿಪ್ರಾಯಗಳನ್ನು ಆಹ್ವಾನಿಸಲು ಸರ್ಕಾರಕ್ಕೆ ಪ್ರಸ್ತಾವನೆ. 

**06-12-2014: ರಸ್ತೆ ನಾಮಕರಣಕ್ಕೆ ಸಂಬಂಧಿಸಿದಂತೆ ಸಾರ್ವಜನಿಕರಿಂದ ಆಕ್ಷೇಪಣೆಗಳ ಆಹ್ವಾನ.

**27-02-2015:ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಸಭೆಯ ವಿಷಯದ ಸಂಖ್ಯೆ:182/2014-15 ಕ್ಕೆ ಸಂಬಂಧಿಸಿದಂತೆ ಮಂಡಿಸಲಾದ ಹಾಗು ಅನುಮೋದಿಸಲಾದ ವಿಷಯಕ್ಕೆ ಒಪ್ಪಿಗೆ-ಸರ್ವಾನುಮತದಿಂದ ರಸ್ತೆ ನಾಮಕರಣಕ್ಕೆ ಹಸಿರುನಿಶಾನೆ.

**17-04-2015:ರಸ್ತೆ ನಾಮಕರಣಕ್ಕೆ ಸಂಬಂಧಿಸಿದಂತೆ ಯಾವುದೇ ಆಕ್ಷೇಪಣೆ ಬಾರದ ಹಿನ್ನಲೆಯಲ್ಲಿ “ನಟ ಚಾಣಕ್ಯ ದಿವಂಗತ ಶ್ರೀ ಮುಸುರಿ ಕೃಷ್ಣಮೂರ್ತಿ ರಸ್ತೆ”ನಾಮಕರಣ ಮಾಡುವಂತೆ ಸರ್ಕಾರಕ್ಕೆ ಮರು ಪತ್ರ.

**30-09-2015:ಬಿಬಿಎಂಪಿ ಸಾಮಾನ್ಯ ಸಭೆಯಲ್ಲಿ ತೆಗೆದುಕೊಂಡ ನಿರ್ಣಯಕ್ಕೆ ಸರ್ಕಾರದಿಂದ ಅನುಮೋದನೆ

**01-10-2015:ಸರ್ಕಾರದಿಂದ ಗ್ರೀನ್ ಸಿಗ್ನಲ್ ಸಿಕ್ಕರೂ ಕ್ರಮ ಕೈಗೊಳ್ಳದ ಬಿಬಿಎಂಪಿಗೆ ಮುಸುರಿ ಪುತ್ರ ಜಯಸಿಂಹ ಅವರಿಂದ ಪತ್ರ

**12-06-2020:ಮುಸುರಿ ಕೃಷ್ಣಮೂರ್ತಿ ಹೆಸರಿನ ರಸ್ತೆಗೆ ಕೆ.ಎಚ್.ರಾಮಯ್ಯ ರಸ್ತೆ ಎಂದು ನಾಮಕರಣ ಮಾಡಲು ನಿರ್ಧಾರ.

**29-06-2021: ಅಚ್ಚರಿ ಬೆಳವಣಿಗೆ ನಡುವೆ ಮೇಲ್ಕಂಡ ರಸ್ತೆಗೆ ಶ್ರೀ.ಕೆ.ಎಚ್ ರಾಮಯ್ಯ ರಸ್ತೆ ಎಂದು ನಾಮಕರಣ ಮಾಡಲು ಸರ್ಕಾರಕ್ಕೆ ಪತ್ರ.

Spread the love

Related Articles

Leave a Reply

Your email address will not be published.

Back to top button
Flash News