ಬೆಂಗಳೂರು:ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಕ್ಯಾಂಪಸ್ ನಲ್ಲಿ ಕೋಲಾಹಲವನ್ನೇ ಎಬ್ಬಿಸಿದ ಶ್ವೆಟರ್ ಹಗರಣಕ್ಕೆ ತಿರುವು ಸಿಕ್ಕಿದೆ.ಹಗರಣದ ಆರೋಪ ಸುಳ್ಳು ಎನ್ನುವುದನ್ನು ಸಾಕ್ಷ್ಯ ಸಮೇತ ಬಿಂಬಿಸುವ ಕೆಲಸ ಬಿಬಿಎಂಪಿಯಿಂದ ನಡೆದಿದೆ.ವ್ಯಾಪಕ ಅಕ್ರಮ ನಡೆದಿದೆ ಎನ್ನುವ ಡಿಎಸ್ ಎಸ್ ನ ಆರೋಪಕ್ಕೆ ಠಕ್ಕರ್ ಕೊಡುವ ರೀತಿಯಲ್ಲಿನ ವಿವರಣೆಗಳನ್ನೊಳಗೊಂಡ ಪತ್ರವೊಂದನ್ನು ವಿಶೇಷ ಆಯುಕ್ತರಿಗೆ ಸಲ್ಲಿಸಲಾಗಿದೆ.ಸ್ಪಷ್ಟೀಕರಣದ ಪ್ರತಿ ಕನ್ನಡ ಫ್ಲಾಶ್ ನ್ಯೂಸ್ ಗೆ ಲಭ್ಯವಾಗಿದೆ.
ಬಿಬಿಎಂಪಿ ಶಾಲಾ ಮಕ್ಕಳಿಗೆ ಶ್ವೆಟರ್ ತಲುಪ್ತೋ ಇಲ್ವೋ ಗೊತ್ತಿಲ್ಲ,ಆ ಒಂದು ವಿಷಯ ಭಾರೀ ದೊಡ್ಡ ಮಟ್ಟದ ಸುದ್ದಿ ಮಾಡಿದ್ಗಂತೂ ಸತ್ಯ.ಚಾನೆಲ್ ಗಳಂತೂ ದಿನದ ಬಿಗ್ ಬ್ರೇಕಿಂಗ್ ನ್ಯೂಸನ್ನಾಗಿ ಬಿಂಬಿಸಿದ್ವು.ಆ ಒಂದು ಚಾನೆಲ್ ಅಂತೂ ಚಿತ್ರನಟ ಸಹೋದರರ ಮೇಲಿನ ಜಿದ್ದಿಗೆ ಪ್ರತೀಕಾರ ಎನ್ನುವಂತೆ ಮಾನ ಹರಾಜು ಹಾಕೊಕ್ಕೆ ತುದಿಗಾಲಲ್ಲಿ ನಿಂತಿದ್ದು ನೋಡುಗರಿಗೆ ಅಸಹ್ಯಕರ ಎನಿಸಿದ್ದು ಕೂಡ ಸತ್ಯ.ಅದೆಲ್ಲಾ ಒತ್ತಟ್ಟಿಗಿಟ್ಟು ನೋಡಿದ್ರೆ, ಶ್ವೆಟರ್ ಟೆಂಡರ್ ನಲ್ಲಿ ಹಗರಣ ನಡೆದಿರುವುದು ನಿಜನಾ..? ಅಂತದ್ದೊಂದು ಆರೋಪದಲ್ಲಿ ನಿಜಕ್ಕೂ ಸತ್ಯಾಂಶವಿದೆಯೇ..? ಎನ್ನುವ ಶಂಕೆ ಮೂಡುವಂತೆ ವರದಿಯನ್ನು ಬಿಬಿಎಂಪಿ ಶಿಕ್ಷಣ ಇಲಾಖೆ ಸಲ್ಲಿಸಿದೆ.
ಬಿಬಿಎಂಪಿ ಶಿಕ್ಷಣ ಇಲಾಖೆ ಮುಖ್ಯ ಆಯುಕ್ತರಿಗೆ ಸಲ್ಲಿಸಿರುವ ಸ್ಪಷ್ಟೀಕರಣದ ಪತ್ರದಲ್ಲಿ ಶ್ವೆಟರ್ ಹಂಚಿಕೆ ನ್ಯಾಯ ಸಮ್ಮತವಾಗಿಯೇ ನಡೆದಿದೆ.ಲಾಕ್ ಡೌನ್ ಗಿಂತ ಮುನ್ನವೇ ನಡೆದ ಟೆಂಡರ್ ನಲ್ಲಿ ಕೊಡಲು ನಿರ್ಧರಿಸಿದ ಶ್ವೆಟರ್ ಗಳಲ್ಲಿ ಕೆಲವನ್ನು ವಿದ್ಯಾರ್ಥಿಗಳಿಗೆ ನೀಡಲಾಗಿದೆ.
ಶ್ವೆಟರ್ ಹಂಚಿಕೆ ಪ್ರಕ್ರಿಯೆ ಮುಂದುವರೆಸಬೇಕೆನ್ನುವಷ್ಟರಲ್ಲೇ ಲಾಕ್ ಡೌನ್ ಘೋಷಣೆಯಾಯಿತು.ಶಾಲೆಗಳ ಮುಖ್ಯೋಪಧ್ಯಾಯರುಗಳು ನೀಡಿದ ಇಂಡೆಂಟ್ ಅನ್ವಯವೇ ಶ್ವೆಟರ್ಸ್ ನೀಡಲಾಗಿದೆ.ಲಾಕ್ ಡೌನ್ ತೆರವಿನ ನಂತರ ನಡೆದ ಒಂದಷ್ಟು ದಿನಗಳಲ್ಲಿ ಹಂಚಿಕೆ ಪ್ರಕ್ರಿಯೆ ನಡೆದಿತ್ತು.ದುರಾದೃಷ್ಟವೋ ಏನೋ ಮತ್ತೆ ಲಾಕ್ ಡೌನ್ ಘೋಷಣೆಯಾಗಿದ್ದರಿಂದ ವಿತರಣೆಯಾಗಬೇಕಿದ್ದ ಶ್ವೆಟರ್ ಗಳು ಬೀರು ಸೇರಿವೆ ಎಂಬುದು ಸ್ಪಷ್ಟೀಕರಣ ಪತ್ರದಲ್ಲಿ ಉಲ್ಲೇಖವಾಗಿದೆ.
23-12-2020 ರ ಸಾರ್ವಜನಿಕ ಶಿಕ್ಷಣ ಇಲಾಖೆಯ ಆದೇಶದನ್ವಯ 6 ರಿಂದ 9ನೇ ತರಗತಿಗೆ ಆನ್ ಲೈನ್ ತರಗತಿ ನಡುದ್ರೆ ಎಸ್ ಎಸ್ ಎಲ್ ಸಿ ಮತ್ತು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ತರಗತಿಗಳನ್ನು ನಡೆಸಲಾಗಿದೆ.ಎಸ್ ಓಪಿ ನಿಯಾಮಗಳಿಗಳ ಅನ್ವಯ ತರಗತಿಗಳು ನಡೆದ ದಿನಾಂಕಗಳಂದು ಮಕ್ಕಳಿಗೆ ಸಹಿ ಪಡೆದು ಶ್ವೆಟರ್ ವಿತರಿಸಲಾಗಿದೆ.ಲಾಕ್ ಡೌನ್ ಜಾರಿಯಾಗಿದ್ದರಿಂದ ಮತ್ತೆ ಶಾಲಾ ಕಾಲೇಜುಗಳು ಶುರುವಾದ್ಮೇಲೆ ಬಾಕಿ ಉಳಿದಿದ್ದನ್ನು ವಿತರಿಸಲು ಕ್ರಮ ವಹಿಸಲಾಗುವುದೆಂದು ಶಾಲಾ/ಕಾಲೇಜು ಮುಖ್ಯಸ್ಥರು ತಿಳಿಸಿದ್ದರೆನ್ನುವುದನ್ನು ಸ್ಪಷ್ಟೀಕರಣ ಪತ್ರದಲ್ಲಿ ನಮೂದಿಸಲಾಗಿದೆ.
ಇನ್ನು ವಿದ್ಯಾರ್ಥಿಗಳಿಗೆ ಶ್ವೆಟರ್ ವಿತರಿಸುವ ಟೆಂಡರ್ ಪಡೆದ ಕರ್ನಾಟಕ ಕೈ ಮಗ್ಗ ಅಭಿವೃದ್ಧಿ ನಿಗಮಕ್ಕೆ 12-01-2021 ರಂದು ಶಿಕ್ಷಣ ಇಲಾಖೆ ವಿಶೇಷ ಆಯುಕ್ತರು ಕಾರ್ಯಾದೇಶ ನೀಡಿದ್ರು.6 ರಿಂದ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ ಶ್ವೆಟರ್ ವಿತರಣೆ ಸಂಬಂಧ ಎಲ್ಲಾ ದಾಸ್ತಾನನ್ನು ಮುಖ್ಯಸ್ಥರುಗಳಿಗೆ ನೀಡಿ ಅವರಿಂದ ಸ್ವೀಕೃತಿ ದೃಢೀಕರಣ ಪತ್ರವನ್ನು ಪಡೆದಿರುತ್ತಾರೆ.
ಇನ್ನು ಶ್ವೆಟರ್ ಗಳ ಗುಣಮಟ್ಟವನ್ನೂ ಪರೀಕ್ಷಿಸಿ ದೃಢೀಕರಿಸಿಕೊಳ್ಳಲಾಗಿತ್ತಂತೆ.ಕೆಜಿ ರಸ್ತೆಯಲ್ಲಿರುವ ರೀಜಿನಲ್ ಲ್ಯಾಬೋರೇಟರಿ ಟೆಕ್ಸ್ ಟೈಲ್ಸ್ ಟೆಸ್ಟಿಂಗ್ ಕಮಿಟಿಯಿಂದಲೂ ಗುಣಮಟ್ಟ ದೃಢೀಕರಿಸಿಕೊಳ್ಳಲಾಗಿತ್ತಂತೆ.ಟೆಸ್ಟಿಂಗ್ ರಿಪೋರ್ಟ್ ಹಿನ್ನಲೆಯಲ್ಲಿ ಶ್ವೆಟರ್ ಗಳ ಗುಣಮಟ್ಟ ಪರೀಕ್ಷಿಸಿ ದೃಢಪಡಿಸಿಕೊಳ್ಳಲಾಗಿತ್ತೆಂದು ವಿವರಿಸಲಾಗಿದೆ.
14611 ಶ್ವೆಟರ್ ಗಳ ಪೂರೈಕೆಗೆ ಬೇಡಿಕೆ ಇತ್ತಾದ್ರೂ 14150 ಶ್ವೆಟರ್ ವಿತರಿಸಲಾಗಿತ್ತು.ಈ ಪೈಕಿ 1,72,11,648 ಮೊತ್ತದ ಹಣದಲ್ಲಿ 3,44,219 ರೂಗಳನ್ನು ಟಿಡಿಎಸ್ ರೂಪದಲ್ಲಿ ಕಟ್ ಮಾಡಿ 1,68,66,741 ರೂಗಳನ್ನು ಶಿಕ್ಷಣ ಮೂಲಕ ಪಾವತಿಸಲಾಗಿದೆ.ಎಲ್ಲಾ ದಾಸ್ತಾನನ್ನು ಪೂರೈಸಿ ಅದಕ್ಕೆ ಶಾಲಾ-ಕಾಲೇಜುಗಳ ಮುಖ್ಯಸ್ಥರಿಂದ ಸ್ವೀಕೃತಿ ದೃಢೀಕರಣ ಪಡೆದಿರುವುದು ಎಲ್ಲಾ ಪ್ರಕ್ರಿಯೆ ನ್ಯಾಯ ಸಮ್ಮತವಾಗಿರುವುದನ್ನು ದೃಢೀಕರಿಸುತ್ತದೆಯಲ್ಲವೇ ಎನ್ನುವುದು ಶಿಕ್ಷಣ ಇಲಾಖೆ ಸಹಾಯಕ ಆಯುಕ್ತ ಉಮೇಶ್ ಅಭಿಪ್ರಾಯ.
ಕರ್ನಾಟಕ ಕೈಮಗ್ಗ ನಿಗಮದಿಂದ ಪೂರೈಕೆಯಾದ ಎಲ್ಲಾ ಶ್ವೆಟರ್ ಗಳನ್ನು ಸ್ವೀಕರಿಸಿರುವುದಕ್ಕೆ ದೃಢೀಕರಣ ಪತ್ರ ನೀಡಿದ ಮೇಲೆ,ಇದರಲ್ಲಿ ನಿಗಮದಿಂದ ಅಕ್ರಮ ನಡೆದಿದೆ ಎಂದು ಹೇಳೊದು ಸರಿಯಲ್ಲ.ಹಾಗೆಯೇ ಸಾಕಷ್ಟು ಶ್ವೆಟರ್ ಗಳನ್ನು ಈಗಾಗಲೇ ವಿತರಿಸಿ,ಇನ್ನುಳಿದಿದ್ದನ್ನು ವಿತರಣೆ ಮಾಡೊಕ್ಕೆ ಕಪಾಟು-ಬೀರುಗಳಲ್ಲಿ ದಾಸ್ತಾನು ಮಾಡಿರುವಾಗ ಶ್ವೆಟರ್ ಗಳನ್ನು ವಿತರಿಸಿಲ್ಲ, ಅಕ್ರಮ ನಡೆಸಲಾಗಿದೆ ಎಂದು ಆರೋಪಿಸುವುದರಲ್ಲಿ ಅರ್ಥವೇ ಇಲ್ಲ ಎನ್ನುವುದು ಶಿಕ್ಷಣ ಇಲಾಖೆ ಅಧಿಕಾರಿಗಳ ವಾದ.
ಆದ್ರೆ ಬಿಬಿಎಂಪಿ ಹೇಳುವಂತೆ ಅಕ್ರಮ ನಡೆದೇ ಇಲ್ಲ ಎನ್ನುವುದನ್ನು ಒಪ್ಪೊಕ್ಕೆ ಆಗಲ್ಲ.ಅಕ್ರಮ ನಡೆದಿರುವುದಕ್ಕೆ ಎಲ್ಲಾ ರೀತಿಯ ಪುರಾವೆ ನಮ್ಮ ಬಳಿಯಿದೆ.ಬಿಬಿಎಂಪಿ ಏನೇ ಸಾಕ್ಷ್ಯ ಕೊಟ್ಟರೂ ನಮ್ಮ ಹೋರಾಟವನ್ನು ನಿಲ್ಲಿಸೊಕ್ಕೆ ಸಾಧ್ಯವೇ ಇಲ್ಲ ಎನ್ನುವುದು ಶ್ವೆಟರ್ ಅಕ್ರಮದ ವಿರುದ್ಧ ಹೋರಾಡುತ್ತಿರುವವರ ನಿಲುವು.ಒಟ್ಟಿನಲ್ಲಿ ಶ್ವೆಟರ್ ಹಂಚಿಕೆ ವಿಚಾರದಲ್ಲಿ ಸಧ್ಯಕ್ಕೆ ನಡೆಯುತ್ತಿರುವ ಬೆಳವಣಿಗೆಗಳು,ಅದು ಪಡೆಯುತ್ತಿರುವ ತಿರುವುಗಳನ್ನೆಲ್ಲಾ ಗಮನಿಸಿದಾಗ ಬೇರೆ ಸತ್ಯ ಏನಾದ್ರೂ ಇದೆಯೇ ಎನ್ನುವ ಶಂಕೆ ಮೂಡೋದಂತೂ ಸತ್ಯ.