ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಕೋವಿಡ್-19 ಸೋಂಕು ಹರಡುವುದನ್ನು ನಿಯಂತ್ರಿಸುವ ನಿಟ್ಟಿನಲ್ಲಿ ವಾಣಿಜ್ಯ ಸಂಸ್ಥೆಗಳು, ಕೈಗಾರಿಕೆಗಳು, ಹೋಟೆಲ್, ರೆಸ್ಟೋರೆಂಟ್ಸ್, ಕಛೇರಿಗಳು ಹಾಗೂ ಹೆಚ್ಚು ಜನಸೇರುವ ಸ್ಥಳದಲ್ಲಿ ಕಾರ್ಯನಿರ್ವಹಿಸುವ ಎಲ್ಲಾ ಸಿಬ್ಬಂದಿ ಕಡ್ಡಾಯವಾಗಿ ಲಸಿಕೆ ಪಡೆಯಬೇಕು. ಇದರಿಂದ ನಗರ ಸುರಕ್ಷಿತವಾಗಿರುವುದರ ಜೊತೆಗೆ ಎಲ್ಲರೂ ನಿರ್ಭಯದಿಂದ ಇರಬಹುದು ಎಂದು ಮುಖ್ಯ ಆಯುಕ್ತ ಗೌರವ್ ಗುಪ್ತ ರವರು ತಿಳಿಸಿದ್ದಾರೆ.
ವಾಣಿಜ್ಯ ಸಂಸ್ಥೆಗಳು, ಕೈಗಾರಿಕಾರಿ ಸಂಸ್ಥೆಗಳು, ಹೋಟೆಲ್ ಅಸೋಸಿಯೇಷನ್ ಸೇರಿದಂತೆ ಇನ್ನಿತರೆ ಸಂಘಗಳ ಜೊತೆ ವರ್ಚುವಲ್ ಮೂಲಕ ನಡೆದ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಮುಖ್ಯ ಆಯುಕ್ತರು, ನಗರದಲ್ಲಿ ಶೇ. 74 ರಷ್ಟು ಮೊದಲನೇ ಡೋಸ್ ಹಾಗೂ ಶೇ. 26 ರಷ್ಟು ಎರಡನೇ ಡೋಸ್ ಲಸಿಕೆಯನ್ನು ಪಡೆದಿದ್ದು, ಎಲ್ಲರೂ ಲಸಿಕೆಯನ್ನು ಪಡೆದು ಕೋವಿಡ್ ಸೋಂಕನ್ನು ನಿಯಂತ್ರಿಸಬೇಕು ಎಂದರು.
ನಗರದ 198 ವಾರ್ಡ್ ಗಳಿಗೂ ಪ್ರತಿನಿತ್ಯ 400 ಅಥವಾ ಅದಕ್ಕಿಂತಲೂ ಹೆಚ್ಚು ಲಸಿಕೆಯನ್ನು ಆದ್ಯತೆ ಮೇರೆಗೆ ಪೂರೈಕೆ ಮಾಡುತ್ತಿದ್ದು, ಪ್ರತಿನಿತ್ಯ 80,000 ರಿಂದ 90,000 ಮಂದಿ ಲಸಿಕೆ ಪಡೆಯುತ್ತಿದ್ದಾರೆ. ನಗರದಲ್ಲಿ ಅಗತ್ಯ ಲಸಿಕೆ ಲಭ್ಯವಿದ್ದು, ಲಸಿಕೆಯ ಕೊರೆತೆಯಿಲ್ಲ. ನಿಮ್ಮಲ್ಲಿ ಯಾರಾದರೂ ಇನ್ನೂ ಮೊದಲನೆ ಡೋಸ್ ಲಸಿಕೆ ಪಡೆಯದವರಿದ್ದರೆ ಕೂಡಲೆ ಹತ್ತಿರದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಲಸಿಕೆ ಪಡೆಯಿರಿ. 50 ಹಾಗೂ ಅದಕ್ಕಿಂತ ಹೆಚ್ಚಿನ ಮಂದಿ ಲಸಿಕೆ ಪಡೆಯಬೇಕಾದರೆ ಪಾಲಿಕೆ ವತಿಯಿಂದ ವಿಶೇಷ ಲಸಿಕಾ ಕ್ಯಾಂಪ್ ವ್ಯವಸ್ಥೆ ಮಾಡಿ ಸ್ಥಳಕ್ಕೆ ಬಂದು ಲಸಿಕೆ ನೀಡಲಾಗುವುದು. ಇದಕ್ಕೆ ನಿಮ್ಮೆಲ್ಲರ ಸಹಕಾರ ಅಗತ್ಯವಿದ್ದು, ಇದಕ್ಕೆ ಸಹಕರಿಸಿದಾಗ ಮಾತ್ರ ಎಲ್ಲರೂ ಲಸಿಕೆ ಪಡೆಯಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ವಿಶೇಷ ಆಯುಕ್ತ ಡಿ.ರಂದೀಪ್, ನಗರದ ವಾಣಿಜ್ಯ ಸಂಸ್ಥೆಗಳು, ಕೈಗಾರಿಕೆಗಳು, ಹೋಟೆಲ್, ರೆಸ್ಟೋರೆಂಟ್ ಮತ್ತು ಕಛೇರಿಗಳಲ್ಲಿ ಕಾರ್ಯನಿರ್ವಹಿಸುವ ಎಲ್ಲಾ ಸಿಬ್ಬಂದಿಗಳು ಕಡ್ಡಾಯವಾಗಿ ಮೊದಲನೇ ಡೋಸ್ ಲಸಿಕೆಯ ನ್ನಾದರೂ ಪಡೆದಿರಬೇಕು. ಹೆಚ್ಚು ಜನಸೇರುವ ಸ್ಥಳದಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಗೆ ಲಸಿಕೆ ಪಡೆಯಲು ಏನಾದರೂ ಆರೋಗ್ಯ ಸಮಸ್ಯೆ ಇದ್ದಲ್ಲಿ ಮಾತ್ರ ವಿನಾಯಿತಿ ನೀಡಲಾಗುವುದು. ಜೊತೆಗೆ ಆದ್ಯತೆ ಮೇರೆಗೆ ಸಿಬ್ಬಂದಿಗೆ ಲಸಿಕೆ ನೀಡಲಾಗುವುದು ಎಂದರು.
ಆಗಸ್ಟ್ 31ರೊಳಗೆ ಎಲ್ಲಾ ಸಿಬ್ಬಂದಿ ಲಸಿಕೆ ಪಡೆದಿರಬೇಕು. ಸೆಪ್ಟೆಂಬರ್ 1 ರಿಂದ ಪಾಲಿಕೆಯ ಆರೋಗ್ಯಾಧಿಕಾರಿಗಳು, ಮಾರ್ಷಲ್ಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಕೋವಿಡ್ ನಿಯಮವನ್ನು ಉಲ್ಲಂಘಿಸಿರುವುದು ಕಂಡುಬಂದರೆ ನಿಯಮಾನುಸಾರ ದಂಡ ವಿಧಿಸಲಿದ್ದಾರೆ ಎಂದು ತಿಳಿಸಿದರು.