ಬೆಂಗಳೂರು:ತಡರಾತ್ರಿ ರಾಜಧಾನಿ ಬೆಂಗಳೂರು ಭೀಕರ ಅಪಘಾತಕ್ಕೆ ಸಾಕ್ಷಿಯಾಗಿದೆ.ಇಡೀ ಬೆಂಗಳೂರು ನಿದ್ರಾ ದೇವಿಯ ತೋಳುಗಳಲ್ಲಿ ನೆಮ್ಮದಿಯ ನಿದ್ದೆಗೆ ಜಾರಿದ್ರೆ ಇತ್ತ ಒಂದಲ್ಲಾ ಎರಡಲ್ಲ ಬರೋಬ್ಬರಿ ಏಳು ಜೀವಗಳು ಚಿರನಿದ್ರೆಗೆ ಸರಿದು ಹೋಗಿವೆ.ಕಂಡು ಕೇಳರಿಯದ ರೀತಿಯಲ್ಲಿ ಸಂಭವಿಸಿರುವ ದುರಂತದಲ್ಲಿ ತಮಿಳ್ನಾಡಿನ ಹೊಸೂರು ಕ್ಷೇತ್ರದ ಡಿಎಂಕೆ ಶಾಸಕರ ಪುತ್ರ,ಪತ್ನಿ ಸೇರಿದಂತೆ ಏಳು ಜನ ದುರ್ಮರಣಕ್ಕೀಡಾಗಿದ್ದಾರೆ.
ಕೋರಮಂಗಲದ ಮಂಗಳ ಕಲ್ಯಾಣ ಮಂಟಪದ ಬಳಿ ನಿನ್ನೆ ತಡ ರಾತ್ರಿ 1:30ರ ಸಮಯದಲ್ಲಿ ಅತೀ ವೇಗದಲ್ಲಿ ಬರುತ್ತಿದ್ದ ಏಳು ಜನರಿದ್ದ ಆಡಿ-3 ಕ್ಯೂ ಐಷಾರಾಮಿ ಕಾರು (ಕೆಎ 03 ಎಂವೈ 6666 ) ಇದ್ದಕ್ಕಿದ್ದಂತೆ ಫುಟ್ ಪಾತ್ ಮೇಲಿದ್ದ ಕಂಬಕ್ಕೆ ಡಿಕ್ಕಿ ಹೊಡೆದಿದೆ. ನಂತರ ಅಲ್ಲೇ ಇದ್ದ ಕಟ್ಟಡಕ್ಕೆ ಅಪ್ಪಳಿಸಿದೆ.ಅಪಘಾತದ ತೀವ್ರತೆ ಎಷ್ಟಿತ್ತೆಂದ್ರೆ ಮೃತ ಶವಗಳು ಸೀಟಿಗೆ ಅಂಟಿಕೊಂಡಿದ್ದವು. ಅಪಘಾತ ರಭಸಕ್ಕೆ ಕಾರು ಸಂಪೂರ್ಣ ಜಖಂ ಆಗಿದೆ. ಕಾರಿನ ಒಳಗೆಲ್ಲ ಬರೀ ರಕ್ತದ ಕಲೆಗಳು ಇದ್ದವು. ಮುಂಬದಿ ಹಿಂಬದಿ ಸೀಟ್ ನಲ್ಲಿ ಬರೀ ರಕ್ತ ಕಲೆಗಳು ಕಾಣುತ್ತಿ ದ್ದವು. ಎಡಭಾಗದ ಎರಡು ಟೈರ್ ಪೀಸ್ ಪೀಸ್ ಆಗಿವೆ..ಅವನ್ನು ತೆರವು ಮಾಡುವುದರೊಳಗೆ ಪೊಲೀಸರು ಅಯ್ಯಯ್ಯಪ್ಪಾ ಎನ್ನುವಂತಾಗಿತ್ತು.
ದುರಂತದಲ್ಲಿ ಮೂವರು ಮಹಿಳೆಯರು ನಾಲ್ಕು ಪುರುಷರು ಸಾವನ್ನಪ್ಪಿದ್ದು,ಆರು ಜನ ಸ್ಥಳದಲ್ಲಿ ಉಸಿರು ಚೆಲ್ಲಿದರೆ ಇನ್ನೋರ್ವ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ.ಕಾಮನ್ ಆಗಿ ಕಾರಿನ ಮುಂಬದಿ ಇಬ್ಬರು ಕೂರುವುದು ಸಂಪ್ರದಾಯ.ಆದ್ರೆ ಆಡಿ ಕಾರಿನ ಮುಂಭಾಗದ ಸೀಟಿನಲ್ಲಿ ಮೂವರು ಕುಳಿತಿದ್ದರಂತೆ.ಯಾರೊಬ್ಬರೂ ಸೀಟ್ ಬೆಲ್ಟ್ ಹಾಕಿರಲಿಲ್ಲ.ಇನ್ನು ಹಿಂದೆ ನಾಲ್ವರು ಕುಳಿತಿದ್ದರು.ಅಪಘಾತವಾದಾಗ ಬಲೂನ್ ಕೂಡ ಓಪನ್ ಆಗಲಿಲ್ಲ.ಬಹುಷಃ ಸೀಟ್ ಬೆಲ್ಟ್ ಹಾಕಿದಿದ್ದರೆ ಅಪಘಾತವಾದ್ರೂ ಸಣ್ಣಪುಟ್ಟ ಗಾಯಗಳಾಗಿ ಎಲ್ಲರೂ ಬದುಕುಳಿಯುತ್ತಿದ್ದರೆನ್ನುವುದು ಹಲವರ ಅಭಿಪ್ರಾಯ.
ಸಾವನ್ನಪ್ಪಿದವರೆಲ್ಲಾ ಎಲ್ಲರೂ 25-30ರ ವಯೋಮಾನದವರೆನ್ನಲಾಗಿದೆ.ಮೃತರಲ್ಲಿ ದಂಪತಿ ಸಹ ಇದ್ದರು.ಹೊಸೂರು ಎಮ್ಮೆಲ್ಲೆ ಅವರ ಪುತ್ರ ಕರುಣಾಸಾಗರ ಹಾಗೂ ಅವರ ಪತ್ನಿ ಬಿಂದು ಸಾವನ್ನಪ್ಪಿದ್ದಾರೆ.ಇಶಿತಾ (21), ಡಾ.ಧನುಶಾ (21) ಅಕ್ಷಯ್ ಗೋಯಲ್, ಉತ್ಸವ್, ರೋಹಿತ್ ಸಾವನ್ನಪ್ಪಿದ ಇತರರು.ಬಹುತೇಕರು ಕೋರಮಂಗಲದ ಜೋಲೋ ಸ್ಟೇ ಪಿ.ಜಿಯಲ್ಲಿ ವಾಸವಿದ್ರು ಎನ್ನಲಾಗ್ತಿದೆ.
ಆತ ಡಿಎಂಕೆ ಶಾಸಕನ ಪುತ್ರ: ಅಪಘಾತಕ್ಕೆ ಮುಖ್ಯ ಕಾರಣ ಎನ್ನಲಾಗುತ್ತಿರುವ ಕರುಣಾಸಾಗರ್, ಹೊಸೂರು ಕ್ಚೇತ್ರದ ಡಿಎಂಕೆ ಎಂಎಲ್ ಎ ವೈ ಪ್ರಕಾಶ್ ಅವರ ಪುತ್ರ. ಕನ್ಸ್ ಟ್ರಕ್ಷನ್ ಮೆಟೀರಿಯಲ್ ಖರೀದಿಗಾಗಿ ಬೆಂಗಳೂರಿಗೆ ಬಂದಿದ್ದರೆನ್ನಲಾಗ್ತಿದೆ. ನಿನ್ನೆ ರಾತ್ರಿ 9 ಗಂಟೆಗೆ ಕುಟುಂಬಸ್ಥರಿಗೆ ಕರೆ ಮಾಡಿದ್ದ ಕರುಣಾ ಸಾಗರ ಕೆಲಸದ ನಿಮಿತ್ತ ಬೆಂಗಳೂರಿಗೆ ಬಂದಿರುವುದಾಗಿ ಹೇಳಿದ್ದನಂತೆ..
ಟೇಕ್ ಕೇರ್ ಎಂದು ಎಚ್ಚರಿಸಿದ್ರೂ ಡೋಂಟ್ ಕೇರ್ ಮಾಡದ ಕರುಣ್: ಪೊಲೀಸರು ಹೇಳಿದ ಮಾತನ್ನು ಕೇಳಿದಿದ್ದರೆ, ವೇಗದ ಚಾಲನೆ ಮೇಲೆ ನಿಯಂತ್ರಣ ತಂದುಕೊಂಡಿದಿದ್ದರೆ ಅಪಘಾತವೇ ಸಂಭವಿಸುತ್ತಿರಲಿಲ್ಲವೇನೋ ಅನ್ಸುತ್ತೆ.ಏಕಂದ್ರೆ ರಾತ್ರಿ 10.35 ಕ್ಕೆ ಅತಿವೇಗದಿಂದ ಕರುಣ್ ಕಾರನ್ನು ಚಾಲನೆ ಮಾಡಿಕೊಂಡು ಹೋಗಿದ್ದನ್ನು ಪೊಲೀಸರೇ ಗಮನಿಸಿದ್ದರು.ಕರುಣ್ ಓಡಿಸುತ್ತಿದ್ದ ಕಾರನ್ನು ಕೋರಮಂಗಲದ ಅಪೋಲೋ ಆಸ್ಪತ್ರೆ ಬಳಿಯ ಚೆಕ್ ಪೋಸ್ಟ್ ನಲ್ಲಿ ಪೊಲೀಸರು ತಡೆದಿದ್ದರು.ಆ ವೇಳೆ ಕಾರಿನಲ್ಲಿ ಏಳು ಮಂದಿಯಿದ್ದರು.ಕಾರು ತಡೆದು ರ್ಯಾಶ್ ಡ್ರೈವಿಂಗ್ ಬಗ್ಗೆ ಪ್ರಶ್ನೆ ಮಾಡಿದ್ದರಂತೆ.
ನೈಟ್ ರೌಂಡ್ಸ್ ನಲ್ಲಿದ್ದ ಕಾನ್ಸ್ ಟೇಬಲ್ ಪ್ರಶಾಂತ್ ಘಟನೆಯನ್ನು ಮೆಲುಕಾಕಿದ್ದು ಹೀಗೆ,ಕಾರನ್ನು ತಡೆದಾಗ, ಮನೆಗೆ ಹೋಗ್ತಿರೋದಾಗಿ ಚಾಲಕ ಕರುಣ್ ಹೇಳಿದ್ದ.ಇದೇ ರಸ್ತೆಯಲ್ಲಿ ಮನೆಯಿದೆ, ಎಲ್ಲರು ಮನೆಗೆ ಹೋಗ್ತಿದ್ದೀವಿ ಎಂದು ಸಮಜಾಯಿಷಿ ನೀಡಿದ್ದ.ಟೇಕ್ ಕೇರ್ ನೈಟ್ ಕರ್ಪ್ಯೂ ಇದೆ … ನಿಧಾನವಾಗಿ ಹೋಗಿ ಎಂದು ಸೂಚಿಸಿದ್ದರು.
ಘಟನೆ ಸಂಬಂಧ ಕೇಸ್ ದಾಖಲು: ಕ್ಯಾಬ್ ಚಾಲಕ ಸತೀಶ್ ಎನ್ನುವವರು ನೀಡಿದ ದೂರಿನ ಹಿನ್ನಲೆಯಲ್ಲಿ 279 ಮತ್ತು 304a _ ಸೆಕ್ಷನ್ ನಡಿ ಕೇಸು ದಾಖಲು ಮಾಡಲಾಗಿದೆ. ಸೆಕ್ಷನ್ 279 ಅತಿವೇಗದ ಚಾಲನೆ ,304a ನಿರ್ಲಕ್ಷ್ಯತನದ ವಾಹನ ಚಲಾವಣೆಯನ್ನು ಉಲ್ಲೇಖಿಸುತ್ತದೆ.ಆಡುಗೋಡಿ ಪೊಲೀಸ್ ಠಾಣೆಯಲ್ಲಿ ಎಫ್ ಐ ಆರ್ ದಾಖಲಾಗಿದೆ.ಚಾಲಕ ಕರುಣ್ ಸಾಗರ್ ಪ್ರಕಾಶ್ ವಿರುದ್ಧ ಕೇಸ್ ದಾಖಲು ಮಾಡಲಾಗಿದೆ.
ಭೀಕರ ಅಪಘಾತಕ್ಕೆ ಕಾರಣವಾದ ಹಿನ್ನಲೆಯಲ್ಲಿ ಕರುಣ್ ಸಾಗರ್ ಪ್ರಕಾಶ್ ವಿರುದ್ಧ ಎಫ್ಐಆರ್ ಮಾಡಲಾಗಿದ್ದು, ಯಾವುದೋ ಕಾರಣಕ್ಕೆ ವೇಗವಾಗಿ ಕಾರು ಚಲಾಯಿಸಿ ಪುಟ್ ಪಾತ್ ಗೆ ಡಿಕ್ಕಿ ಹೊಡೆದ ಬಳಿಕ ಬ್ಯಾಂಕ್ ನ ಕಟ್ಟಡಕ್ಕೆ ಡಿಕ್ಕಿ ಹೊಡೆದು ಹಾನಿ ಆಗಿತ್ತು. ಈ ವೇಳೆ ಅಪಘಾತದಲ್ಲಿ ಏಳು ಜನರು ಪ್ರಜ್ಞಾ ಹೀನಾ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಅಪಘಾತಕ್ಕೆ ಕಾರಣವಾದ ಚಾಲಕನ ವಿರುದ್ಧ ಕಾನೂನು ರೀತಿಯಲ್ಲಿ ಕ್ರಮ ಕೈಗೊಳ್ಳುವಂತೆ ಸತೀಶ್ ಮನವಿ ಮಾಡಿದ್ದಾರೆ.
ಪ್ರತ್ಯಕ್ಷ ದರ್ಶಿ ಸತೀಶ್ ಹೇಳೋದೇನು..?:ಓಲಾದಲ್ಲಿ ಕ್ಯಾಬ್ ಓಡಿಸುವ ಸತೀಶ್ ಘಟನೆಯನ್ನು ಕಣ್ಣಾರೆ ಕಂಡು ಭಯಗೊಂಡಿದ್ದಾರೆ.ದಿನವಿಡೀ ಓಲಾ ಓಡಿಸುತ್ತಿದ್ದ ಸತೀಶ್ ನಿನ್ನೆ ರಾತ್ರಿ ಅಪಘಾತ ನಡೆದ ವೇಳೆ ರಸ್ತೆ ಬದಿ ಕಾರು ಪಾರ್ಕ್ ಮಾಡಿ ನಿದ್ದೆಗೆ ಜಾರಿದ್ದರು.ಸ್ವಲ್ಪ ಸಮಯದಲ್ಲೇ ಇದ್ದಕ್ಕಿದ್ದಂತೆ ಜೋರಾದ ಶಬ್ದ ಕೇಳಿ ಎದ್ದಿದ್ದಾರೆ. ಕಾರಿನ ಬಳಿ ಬಂದು ನೋಡಿದಾಗ ಕಾರಿನಲ್ಲಿ ದಟ್ಟ ಹೊಗೆ ಬರ್ತಿತ್ತು. ತಕ್ಷಣ ರಸ್ತೆಯಲ್ಲಿ ಬರ್ತಿದ್ದ ಕೆಲವು ವಾಹನ ತಡೆದು ಕಾರಿನಲ್ಲಿ ಇದ್ದವರ ರಕ್ಷಣೆಗೆ ಯತ್ನ ಮಾಡಿದ್ದಾರೆ.ತಕ್ಷಣಕ್ಕೆ ಪೊಲೀಸ್ ಕಂಟ್ರೋಲ್ ರೂಂಗೆ ಮಾಹಿತಿ ನೀಡಿದ್ದಾರೆ.
ಸತೀಶ್ ಅವರಿಗೆ ಅಲ್ಲೇ ಓಡಾಡಿಕೊಂಡಿದ್ದ ಪುಡ್ ಡೆಲಿವರಿ ಬಾಯ್ಸ್ ಜೊತೆಗೂಡಿದ್ದಾರೆ. ಕಾರಿನಲ್ಲಿದ್ದ ಯುವಕ ಯುವತಿಯರ ರಕ್ಷಣೆಗೆ ಪ್ರಯತ್ನ ಮಾಡಿದ್ದಾರೆ.ಆದ್ರೆ ಆ ವೇಳೆಗಾಗಲೇ ಆರು ಜನ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.ತೀವ್ರ ಗಾಯಗೊಂಡಿದ್ದ ಓರ್ವನನ್ನ ಅಸ್ಪತ್ರೆಗೆ ಸಾಗಿಸಿದ್ದಾರೆ.ಆದ್ರೆ ಚಿಕಿತ್ಸೆ ಫಲಕಾರಿಯಾಗದೆ ಆತ ಕೂಡ ಕೊನೆಯುಸಿರೆಳೆದಿದ್ದಾನೆ.
ಗಾಡಿ ಓಡಿಸುವವರೇ..ಸವಾರಿ ಮಾಡುವವರೇ ಎಚ್ಚರ:.ಮೇಲ್ಕಂಡ ದುರಂತ ವಾಹನ ಚಾಲನೆ ಮಾಡುವರನ್ನಷ್ಟೇ ಅಲ್ಲ,ಕುಳಿತು ಸವಾರಿ ಮಾಡುವವರೂ ಎಚ್ಚರದಿಂದ ಇರುವಂತೆ ಮಾಡಿದೆ. ಏರ್ ಬ್ಯಾಗ್ , ಸೀಟ್ ಬೆಲ್ಟ್ ಹಾಕಿದ್ರೆ ಮಾತ್ರ ಓಪನ್ ಆಗುತ್ತೆ. ಸೆನ್ಸರ್ ಕನೆಕ್ಟೆಡ್ ಆದ್ದರಿಂದ ಏರ್ ಬ್ಯಾಗ್ ಸೀಟ್ ಬೆಲ್ಟ್ ಗೆ ಕನೆಕ್ಟ್ ಇರುತ್ತೆ.ವಾಹನಕ್ಕೆ ಪ್ರತ್ಯೇಕ ಬಂಪರ್ ಹಾಕಿದ್ರೂ ಏರ್ ಬ್ಯಾಗ್ ಓಪನ್ ಆಗಲ್ಲ.ಗಾಡಿಗೆ ಎಕ್ಸ್ಟಾ ಫಿಟ್ಟಿಂಗ್ ಮಾಡಿಸುವವರು ಗಮನಿಸಲೇಬೇಕು ಸ್ಟೈಲಿಶ್ ಇರಲಿ ಎಂದು ವಾಹನದ ಮುಂಭಾಗ ಬಂಪರ್ ಫಿಟ್ ಮಾಡಿರುವು ದು ಕೂಡ ಅಪಘಾತಕ್ಕೆ ಕಾರಣವಾಗಬಹುದು ಎನ್ನುವುದನ್ನು ಮೇಲ್ಕಂಡ ದುರಂತ ಸಾರಿ ಹೇಳಿದೆ.
ಸಿಎಂ ಸಂತಾಪ: ಬೆಂಗಳೂರಿನಲ್ಲಿ ಭೀಕರ ಅಫಘಾತ ಸಂಭವಿಸಿದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬೆಂಗಳೂರಿನಲ್ಲಿ ಪ್ರತಿಕ್ರಿಯೆ ನೀಡಿ ಘಟನೆಗೆ ಸಂತಾಸ ಸೂಚಿಸಿದ್ದಾರೆ.ದುರಂತ ಬಹಳ ಆಘಾತ ನೀಡಿದೆ.ಪೊಲೀಸರು ಈಗಾಗಲೇ ತನಿಖೆ ಮಾಡ್ತಿದ್ದಾರೆ.ರಾತ್ರಿ ಸಮಯದಲ್ಲಿ ವಾಹನ ಚಲಾಯಿಸುವವರು ಹಾಗೆಯೇ ಪ್ರಯಾಣಿಸುವವರು, ಜಾಗರೂಕತೆಯಿಂದ ಇರಬೇಕು ಸುರಕ್ಷತಾ ಕ್ರಮಗಳೊಂದಿಗೆ ವಾಹನ ಚಲಾಯಿಸಬೇಕು.ಈ ಮೂಲಕ ಇಂತಹ ಅವಘಡ ಆಗದ ರೀತಿ ಎಚ್ಚರ ವಹಿಸಬೇಕು ಎಂದು ಸಲಹೆ ನೀಡಿದ್ದಾರೆ.