ಹಿರಿಯ IPS ಗಳ ಗುದ್ದಾಟಕ್ಕೆ ಮತ್ತೊಂದು ಅಖಾಡ ರೆಡಿ…!? ಸಿಬಿಐ ವಿರುದ್ಧ ಭಾಸ್ಕರ ರಾವ್ ಕಿಡಿ..?!

ಇಬ್ಬರು ಐಪಿಎಸ್ ಗಳ ಸಂಘರ್ಷಕ್ಕೆ ಮೂಲವೇ ಪತ್ರಕರ್ತೆ “ಕುಶಾಲ”ನಾ...!?

0
ಹಿರಿಯ ಐಪಿಎಸ್ ಭಾಸ್ಕರರಾವ್
ಹಿರಿಯ ಐಪಿಎಸ್ ಭಾಸ್ಕರರಾವ್

ಬೆಂಗಳೂರು:ಇಬ್ಬರು ಐಪಿಎಸ್ ಗಳ ನಡುವೆ ಮತ್ತೊಂದು ಸುತ್ತಿನ ಬಿಗ್ ಫೈಟ್ ಗೆ ಅಖಾಡ ಸಿದ್ಧವಾಗುತ್ತಿದೆ ಎನ್ಸುತ್ತೆ,ಫೋನ್ ಟ್ಯಾಪಿಂಗ್ ಪ್ರಕರಣದಲ್ಲಿ ಸಿಬಿಐ ಕೋರ್ಟ್ ಗೆ ಬಿ-ರಿಪೋರ್ಟ್ ಸಲ್ಲಿಸ್ತಿದ್ದಂಗೆ ಆ ಇಬ್ಬರು ಐಪಿಎಸ್ ಗಳ ನಡುವಿನ ಸಂಘರ್ಷ ಮತ್ತಷ್ಟು ತಾರಕಕ್ಕೇರಲಿದೆ ಎಂದೇ ಹೇಳಲಾಗ್ತಿದೆ. ಸಿಬಿಐ ಕಾರ್ಯವೈಖರಿ, ಕೇವಲ ಆ ಒಬ್ಬ ಹಿರಿಯ ಪೊಲೀಸ್ ಅಧಿಕಾರಿಯಿಂದ ಷ್ಟೇ ಅಲ್ಲ, ಸಾಕಷ್ಟು ಹಿರಿಯ ಐಪಿಎಸ್ ಗಳು ವಿವಿಧ ಕ್ಷೇತ್ರಗಳ ಗಣ್ಯರಿಂದಲೂ ಆಕ್ಷೇಪಕ್ಕೆ ಗುರಿಯಾಗಿದೆ.ಸೋ..ಆ ಇಬ್ಬರು ಅಧಿಕಾರಿಗಳ ನಡುವಿನ ಹೋರಾಟ ಮತ್ತೊಂದು ಮಗ್ಗಲು ಪಡೆಯು ವುದು ಪಕ್ಕಾ ಎನ್ನುವಂತಾಯ್ತು..

ಇಡೀ ರಾಜ್ಯದ ಗಮನ ಸೆಳೆದು,ಅನೇಕ ತಿಂಗಳವರೆಗೂ ತೀವ್ರ ಚರ್ಚೆಯಲ್ಲಿದ್ದು,ಆಡಳಿತ ಹಾಗೂ ವಿಪಕ್ಷಗಳ ನಡುವೆ ಆರೋಪ-ಪ್ರತ್ಯಾರೋಪ-ಟೀಕೆಗಳನ್ನು ಹುಟ್ಟು ಹಾಕಿದ ಫೋನ್ ಟ್ಯಾಪಿಂಗ್ ಹಗರಣದ ಬಗ್ಗೆ ಸಿಬಿಐ ನಡೆಸುತ್ತಿದ್ದ ತನಿಖೆಯ ಅಂತಿಮ ವರದಿ ಏನಾಗ್ಬೋದೆನ್ನುವ ಕುತೂಹಲ ಪ್ರತಿಯೋರ್ವರಲ್ಲೂ ಇತ್ತು.ಆದ್ರೆ 2 ವರ್ಷಗಳ ನಿರಂತರ ವಿಚಾರಣೆ-ಸಾಕ್ಷ್ಯಗಳ ಕ್ರೋಢಿಕರಣದ ನಂತರ ಸಲ್ಲಿಸಿರುವ ಬಿ ರಿಪೋರ್ಟ್ ಅಚ್ಚರಿ-ಆಶ್ಚರ್ಯ-ಬೇಸರ ಮೂಡಿಸಿದೆ.

ಹಿರಿಯ ಐಪಿಎಸ್ ಅಲೋಕ್ ಕುಮಾರ್
ಹಿರಿಯ ಐಪಿಎಸ್ ಅಲೋಕ್ ಕುಮಾರ್

ಯೆಸ್..ನೋ ಡೌಟ್.. ಸಿಬಿಐ ಸಲ್ಲಿಸಿರುವ ಬಿ ರಿಪೋರ್ಟ್ ಗೆ ಹಿರಿಯ ಐಪಿಎಸ್ ಭಾಸ್ಕರ್ ರಾವ್ ,ನಖಶಿಖಾಂತ ಉರಿದು ಹೋಗಿದ್ದಾರೆ. ಬಿ ರಿಪೋರ್ಟ್ ಕೊಡೊಕ್ಕೆ 2 ವರ್ಷಗಳವರೆಗೆ ಕಾಯ ಬೇಕಿತ್ತಾ..ಎಂದು ನೇರವಾಗಿ ಬೇಸರ ಹಾಗೂ ಅಸಮಾಧಾನ ವ್ಯಕ್ತಪಡಿಸಿದ್ದಾರೆ.ಫೋನ್ ಕದ್ದಾಲಿಕೆಯಲ್ಲಿ ನನ್ನನ್ನು ಸಿಕ್ಕಾಕಿಸುವ ಷಡ್ಯಂತ್ರದಲ್ಲಿ ಹಿರಿಯ ಐಪಿಎಸ್ ಅಲೋಕ್ ಕುಮಾರ್ ಹಾಗೂ ಪತ್ರಕರ್ತೆ ಕುಶಾಲ ಪಾತ್ರ ಇರೋದಕ್ಕೆ ಎಲ್ಲಾ ಸಾಕ್ಷ್ಯಗಳನ್ನು ಸಲ್ಲಿಸಿದ್ದರೂ, ಸೂಕ್ತ ರೀತಿಯಲ್ಲಿ ತನಿಖೆ ನಡೆಸದೆ ಬಿ ರಿಪೋರ್ಟ್ ಹಾಕಿದ್ದಾರೆ ಎಂದು ತಮ್ಮ ಆಕ್ರೋಶವನ್ನು ಹೊರ ಹಾಕಿದ್ದಾರೆ. ಸಿಬಿಐ ಬಿ ರಿಪೋರ್ಟ್ ಹಾಕಿದಾಕ್ಷಣ ಎಲ್ಲಾ ಮುಗಿದೋಯ್ತು ಎಂದಲ್ಲ..ಇದು ಯುದ್ಧವೊಂದರ ಅಂತ್ಯವಲ್ಲ,ಮತ್ತೊಂದು ಯುದ್ಧವೊಂದರ ಆರಂಭ ಎಂದು ಮಾರ್ಮಿಕವಾಗಿ ನುಡಿದಿದ್ದಾರೆ.

ಫೋನ್ ಕದ್ದಾಲಿಕೆ ರಾದ್ದಾಂತ ಶುರುವಾಗೋದೇ ಆ ಪ್ರಕರಣದಿಂದ: ಯೆಸ್..ಅದು ವಂಚನೆಯ ಕಾರಣದಿಂದ ಸುದ್ದಿ ಮಾಡಿದ ಇಂಜಾಜ್ ಚಿಟ್ ಫಂಡ್ ಹಗರಣ. ವಿಲ್ಸನ್‌ ಗಾರ್ಡನ್ ನಲ್ಲಿ ದಾಖಲಾಗಿದ್ದ ವಂಚನೆ ಕೇಸ್ ಗೆ ಸಂಬಂಧಿಸಿದಂತೆ ಅಂದಿನ  ಕಮಿಷನರ್ ಟಿ. ಸುನಿಲ್ ಕುಮಾರ್ ತನಿಖೆಯನ್ನು ಸಿಸಿಬಿಗೆ ವಹಿಸಿದ್ದರು. ಈ ಕೇಸ್ ತನಿಖೆಗೆ ಪೂರಕವಾಗಿ ಸಿಸಿಬಿ, ಕೆಲ ಅರೋಪಿತರ ಫೋನ್ ಟ್ಯಾಪ್ ಮಾಡ್ತಿತ್ತು.ಈ ಎಲ್ಲಾ ಫೋನ್ ಟ್ಯಾಪಿಂಗ್ ಆಡುಗೋಡಿಯ ಸಿಸಿಬಿ  ಟೆಕ್ನಿಕಲ್ ಸೆಂಟರ್ ನಲ್ಲಿ ನಡೆಯುತ್ತಿತ್ತು.

ತನಿಖೆಗೆ ಸಹಕಾರಿಯಾಗಬಹುದೆನ್ನುವ ಉದ್ದೇಶದಲ್ಲಿ ನಡೆಯುತ್ತಿದ್ದ ಟ್ಯಾಪಿಂಗ್ ವೇಳೆ,ಹಿರಿಯ ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್ ಫರಾಜ್ ಅಹಮದ್ ಜೊತೆಗೆ ಮಾತಾನಾಡಿದ್ದರು.ಈ ವಿಚಾರವನ್ನು ಇನ್ಸ್ ಪೆಕ್ಟರ್ ಮಿರ್ಜಾ ಆಲಿ, ಡಿಸಿಪಿ ಹಾಗು ಅಲೋಕ್ ಕುಮಾರ್ ಗಮನಕ್ಕೆ ತಂದಿದ್ರು.ತನಿಖೆಗೆ ಅದು ಸಹಕಾರಿಯಾಗಬಹುದೆನ್ನುವ ಹಿನ್ನಲೆಯಲ್ಲಿ ಅಲೋಕ್ ಕುಮಾರ್ ಆ ಆಡಿಯೋ ರೆಕಾರ್ಡ್ ನ್ನು ತರುವಂತೆ ಮಿರ್ಜಾ ಅಲಿಗೆ ಅಗಸ್ಟ್  2  ರಂದು ಆದೇಶಿಸಿದ್ದರು.

ಪತ್ರಕರ್ತೆ ಕುಶಾಲ
ಪತ್ರಕರ್ತೆ ಕುಶಾಲ

ಅಲೋಕ್ ಕುಮಾರ್ ಸೂಚನೆಯಂತೆ ಸೋನಿ ಪೆನ್ ಡ್ರೈವ್, ಹೆಚ್ ಪಿ ಪೆನ್ ಡ್ರೈವ್ ಗೆ ಕಾಪಿ ಮಾಡಿ.. ಹೆಚ್ ಸಿ, ಆನಂದ್ ಕುಮಾರ್,ಕಮಿಷನರ್ ಕಚೇರಿಯಲ್ಲಿ ಅಂದು ಮಧ್ಯಾಹ್ನ 1:30ಕ್ಕೆ ಅಲೋಕ್ ಕುಮಾರ್ ಗೆ ನೀಡಿದ್ದರು ಜತೆಗೆ ಒಂದು ಲ್ಯಾಪ್ ಟಾಪ್ ಮತ್ತು ಹೆಡ್ ಫೋನ್ ಕೂಡ ನೀಡಲಾಗಿತ್ತು…ಆಡಿಯೋ ಕಾಫಿ ಮಾಡಿದ ಬಳಿಕ ಲ್ಯಾಪ್ ಟಾಪ್ ಮತ್ತು ಹೆಡ್ ಫೋನ್   ಅಲೋಕ್ ಕುಮಾರ್ ವಾಪಸ್ ಮಾಡಿದ್ರಂತೆ.ಹಲವು ಅಧಿಕಾರಿಗಳ ಮೂಲಕ ತಮ್ಮ ವಾಟ್ಸಪ್ ಗೆ ಆ ಮೂರು ಆಡಿಯೋ ತರಿಸಿಕೊಂಡಿದ್ದರಂತೆ. ಆಗ ಎಂಟ್ರಿಯಾಗಿದ್ದೇ ಪತ್ರಕರ್ತೆ ಶ್ರೀಮತಿ..ಕುಶಾಲ ಮೇಡಮ್..

ಕುಶಾಲ ಯಾರು..? ಪ್ರಕರಣದಲ್ಲಿ ಆಕೆಯ ಪಾತ್ರವೇನು..? ಫೋನ್ ಟ್ಯಾಪಿಂಗ್ ಪ್ರಕರಣವನ್ನು ಈ ಪತ್ರಕರ್ತೆಯನ್ನು ಹೊರತುಪಡಿಸಿ ಕಲ್ಪಿಸಿಕೊಳ್ಳ ಲು ಸಾಧ್ಯವೇ ಇಲ್ಲ.ಅನೇಕ ಪತ್ರಿಕೆಗಳಲ್ಲಿ ಕೆಲಸ ಮಾಡಿದ ಮೇಲೆ ಈಕೆ ಎಂಟ್ರಿ ಹೊಡೆದದ್ದೇ ನ್ಯೂಸ್-18 ಕನ್ನಡ ಚಾನೆಲ್ ಗೆ.ಇಂಗ್ಲೀಷ್ ಪತ್ರಿಕೆಗಳಲ್ಲಿ ಕೆಲಸ ಮಾಡಿದ ಅನುಭವಕ್ಕೋ,ಅಧಿಕಾರಿಗಳೊಂದಿಗೆ ಇರೋ ಕಾಂಟ್ಯಾಕ್ಟ್ ನಿಂದಲೋ ಗೊತ್ತಿಲ್ಲ,ಸುದ್ದಿ ಮೂಲಗಳ ವಿಶ್ವಾಸವನ್ನು ಸಲೀಸಾಗಿ ತೆಗೆದುಕೊಂಡಿದ್ದ ಹೆಗ್ಗಳಿಕೆ ಈ ಪತ್ರಕರ್ತೆದು.

ಅಂದ್ಹಾಗೆ ಕುಶಾಲ ಮೇಡಂ ಗೆ ದೃಶ್ಯ ಮಾದ್ಯಮದ ಗಂಧಗಾಳಿನೇ ಗೊತ್ತಿಲ್ಲ ಎನ್ನುವ ಕಾಮನ್ ಟಾಕ್ ಇದೆ.ಕೆಲಸದಲ್ಲಿ ಇದ್ದಷ್ಟು ದಿನ (ಸಧ್ಯ ನ್ಯೂಸ್-18 ಕನ್ನಡದಲ್ಲೂ ಕೆಲಸದಲ್ಲಿಲ್ಲವಂತೆ.ಕೆಲಸದಿಂದ ತೆಗೆದು ಹಾಕಿದ್ದಾರೆನ್ನುವ ಮಾತಿದೆ..ಆದರೆ ಮುಜುಗರದಿಂದ ತಪ್ಪಿಸಿಕೊಳ್ಳೊಕ್ಕೆ ಬ್ರೇಕ್ ತೆಗೆದುಕೊಂಡಿದ್ದೇನೆ ಎಂದು ಓಡಾಡಿಕೊಂಡಿದ್ದಾರಂತೆ..?) ಒಂದ್ ದಿನನೂ ಲೋಗೋ ಇಟ್ಕೊಂಡು ಹೊರಗೋಗಿ ಸುದ್ದಿ ಮಾಡಿಕೊಂಡು ಬಂದಿರಲಿಲ್ಲವಂತೆ..

ಆಫೀಸ್ ನ ಮೂಲೆಯೊಳಗೆ ಕೂತು,ತನ್ನ ಕಿರಿಯ ಸಹದ್ಯೋಗಿಗಳಿಗೆ ಟಾರ್ಚರ್ ಕೊಟ್ಟಿದ್ದೇ ಹೆಚ್ಚಂತೆ. ತನ್ನ ಸಹದ್ಯೋಗಿಗಳು ಎಂತದ್ದೆ ಖಡಕ್-ಎಕ್ಸ್ ಕ್ಲ್ಯೂಸಿವ್  ಸ್ಟೋರಿ ಮಾಡಿಕೊಂಡು ಬಂದ್ರೂ ಆ ಸ್ಟೋರಿಗಳನ್ನೆಲ್ಲಾ “ಚೊತ್ತೆ” ಸ್ಟೋರಿ ಎಂದು ಕುಹಕವಾಡುತ್ತಿದ್ದರಂತೆ..ದ ಏನೇ ಸ್ಟೋರಿ ಅವರ ಪಾಲಿನ ವಿಲನ್ ಆಗಿದ್ದರ ಬಗ್ಗೆ ಆಕೆಯಿಂದ ಕೆಲಸ ಕಳಕೊಂಡು ಸಂತ್ರಸ್ಥರಾದ ಪತ್ರಕರ್ತರೇ ಸಾರಿ ಸಾರಿ ಹೇಳುತ್ತಾರಂತೆ.ಆ ಮಟ್ಟದಲ್ಲಿ ಗೋಳೋಯ್ದುಕೊಂಡ ಕುಶಾಲ,ಭಾಸ್ಕರ್ ರಾವ್ ಆಡಿಯೋ ಟೇಪ್ ಪ್ರಕರಣದಲ್ಲಿಯೂ ತನಗೆ ಬೇಕಾದ ರೀತಿಯಲ್ಲಿ ಕೆಲ ಕ್ರೈಮ್ ರಿಪೋರ್ಟರ್ಸ್ ಗಳನ್ನು ಬಳಸಿಕೊಂಡು ಅವರಿಂದ ಸಾಕಷ್ಟು ಮಾಹಿತಿ ಪಡಕೊಂಡು ನಂತ್ರ ಅವರನ್ನೆಲ್ಲಾ ಪಕ್ಕಕ್ಕೆ ಸರಿಸಿ ಈ ಸ್ಟೋರಿಯ ಕಂಪ್ಲೀಟ್ ಕ್ರೆಡಿಟ್ ತಾನು ಪಡೆದುಕೊಂಡ್ರು ಎಂದು ಕ್ರೈಮ್ ರಿಪೋರ್ಟಸ್ ಗಳು ಫೀಲ್ಡ್ ನಲ್ಲಿ ಹೇಳ್ಕೊಂಡು ಅಡ್ಡಾಡ್ತಿದ್ದಾರಂತೆ.

ಆದ್ರೆ ಅವತ್ತು ಹಾಗೆ ಆಗಿದ್ದೇ ಒಳ್ಳೇದು ಎನ್ತಾರೆ,ಏಕಂದ್ರೆ ಈ ಸ್ಟೋರಿ ಇಷ್ಟೊಂದು ರಂಪ ರಾಮಾಯಣ ಸೃಷ್ಟಿಸುತ್ತೆ,ಸಿಬಿಐ ತನಿಖೆ ಮಟ್ಟಕ್ಕೆ ಹೋಗುತ್ತೆ ಎನ್ನುವುದರ ಪರಿಕಲ್ಪನೆನೇ ನಮಗಿರಲಿಲ್ಲ.ಇದೆಲ್ಲವನ್ನು ನೋಡಿದ್ರೆ ಸ್ಟೋರಿಯ ಕ್ರೆಡಿಟ್ ಆ ಮಹಾತಾಯಿ ಪಡೆದಿದ್ದೇ ಒಳ್ಳೇದಾಯ್ತು ಎಂದು ಸ್ಟೋರಿ ಪ್ರಸಾರಕ್ಕೆ ಶ್ರಮ ಹಾಕಿದ ಕ್ರೈಮ್ ರಿಪೋರ್ಟಸ್ ನಿಟ್ಟುಸಿರು ಬಿಡ್ತಾರೆ.

ಫೋನ್ ಟ್ಯಾಪಿಂಗ್ ಪ್ರಕರಣದಲ್ಲಿ ಕುಶಾಲ ಎಂಟ್ರಿ ಹೊಡೆದದ್ದು ಹೇಗೆ..? ಯಾವ ಕಾರಣಕ್ಕೆ..? ಎನ್ನುವ ಪ್ರಶ್ನೆ ಅನೇಕರನ್ನು ಕಾಡ ಹತ್ತಿದೆ.”ಆಪ್ತ” ಎನ್ನುವ ಕಾರಣಕ್ಕೆ ಕೇವಲ ಅಲೋಕ್ ಕುಮಾ ರ್ ಗೆ “ಸಹಾಯ” ಮಾಡಬೇಕೆನ್ನುವ ಉದ್ದೇಶಕ್ಕೆ ಎಂಟ್ರಿ ಕೊಟ್ರೋ? EXCLUSIVE ಸುದ್ದಿ ಕಾರಣಕ್ಕೆ ಈ ಸುದ್ದಿಗೆ ಕೈ ಹಾಕಿದ್ರೋ..? ಅಥವಾ ಇದನ್ನು ಹೊರತುಪಡಿಸಿ ಬೇರೆ ಯಾವುದಾ ದರೂ ಉದ್ದೇಶಕ್ಕೆ ಅಪಾಯಕಾರಿ ಹಾಗೂ ಥ್ರಿಲ್ಲರ್ ಆದಂಥ ಸುದ್ದಿಯ ಬೆನ್ನು ಹತ್ತಿದ್ರೋ  ಗೊತ್ತಿಲ್ಲ..? ಆದ್ರೆ    ಈ ಸ್ಟೋರಿ ಇಷ್ಟೊಂದು ಸಮಸ್ಯೆಯನ್ನು ಸೃಷ್ಟಿಸುತ್ತೆ ಎನ್ನುವ ಸಣ್ಣ ಕಲ್ಪನೆಯೂ ಆಕೆಗೆ ಇರಲಿಲ್ಲ ಎನ್ನುವುದಂತೂ ಸತ್ಯ..ಇದನ್ನು ಆಕೆ ತನ್ನ ವೃತ್ತಿಬಾಂಧವರ ಬಳಿಯೇ ಹೇಳಿಕೊಂಡಿದ್ದುಂಟು.

ಸ್ಟೋರಿಗೆ ಬೇಕಾದ ಇನ್ ಪುಟ್ಸ್ ನ್ನೆಲ್ಲಾ ಕೊಟ್ಟು,ಸ್ಟೋರಿ ರೆಡಿ ಆಗೋವರೆಗೂ ಸೀನ್ ನಲ್ಲಿದ್ದ ಕುಶಾಲ ಮೇಡಮ್,ಸ್ಟೋರಿ ಟೆಲಿಕಾಸ್ಟ್ ಆಗುವಾಗ ಮಾತ್ರ ಕ್ಯಾಮೆರಾದ ಎದುರಿಗೆ ಬರಲೇ ಇಲ್ಲವಂತೆ.? ಅದರ ಉದ್ದೇಶ ಕ್ಯಾಮೆರಾದ ಮುಂದೆ ನಿಂತು ಮಾತನಾಡೊಕ್ಕೆ ಬರೊಲ್ಲ ಎನ್ನುವ ಅಸಹಾಯಕತೆನೋ..? ಅಥವಾ ಸ್ಕ್ರೀನ್ ಮೇಲೆ ಬೇರೆಯರನ್ನು ತೋರಿಸಿ,ಅವರನ್ನು ಇಕ್ಕಟ್ಟಿಗೆ ಸಿಲುಕಿಸಿ ಬಚಾವ್ ಆಗುವ ತಂತ್ರಗಾರಿಕೆ ಇತ್ತಾ ಗೊತ್ತಿಲ್ಲ..! ಆದ್ರೆ ಮೆಗಾ ಎಕ್ಸ್ ಕ್ಲ್ಯೂಸಿವ್ ಆಗಿ  ಸುದ್ದಿ ಪ್ರಸಾರವಾದ ಮೇಲೆ ಶುರುವಾದ ಸಂಕಷ್ಟ ನೋಡಿ  ಉತ್ಸಾಹದಿಂದ ಲೈವ್-ಫೋನೋ ಕೊಟ್ಟ ರಿಪೋರ್ಟರ್ಸ್ ನಡುಗಿ ಹೋಗಿದ್ದು ಮಾತ್ರ ಸತ್ಯ ಅಂತೆ.

ಆಡಿಯೋ  ಕುಶಾಲಂಗೆ ಸಿಕ್ಕಿದ್ದು ಹೇಗೆ.?..ಅದನ್ನು ಅಲೋಕ್ ಕುಮಾರ್ ಕಳುಹಿಸಿಕೊಟ್ರಾ..ರಹಸ್ಯ ಸೋರಿಕೆ ಮಾಡಿದ್ದು  ತಪ್ಪಲ್ವಾ..?:: ತನಿಖೆಯ ಭಾಗವಾಗಿ ಸಿಕ್ಕ ಭಾಸ್ಕರ್ ರಾವ್ ಅವರ ಆಡಿಯೋ ಸಂಭಾಷಣೆಯನ್ನು ಅತ್ಯಂತ ಕಾನ್ಫಿಡೆನ್ಷಿಯಲ್ ಅಥವಾ ರಹಸ್ಯ ದಾಖಲೆ ಎಂದು ಪರಿಗಣಿಸುವುದೇ ಆದಲ್ಲಿ,ಆ ರಹಸ್ಯ ಪತ್ರಕರ್ತೆ ಕುಶಾಲಗೆ ಸಿಕ್ಕಿದ್ದಾದ್ರೂ ಹೇಗೆ ಎನ್ನುವ ಪ್ರಶ್ನೆ ಕಾಡುತ್ತಿದೆ.ಅಲೋಕ್ ಕುಮಾರ್ ಅವರಿಂದ್ಲೇ ಕುಶಾಲಗೆ ಬಂತಾ.?ಒಂದ್ವೇಳೆ ಅಲೋಕ್ ಕುಮಾರ್ ಅವ್ರೇ ಅದನ್ನು ಸೆಂಡ್ ಮಾಡಿದ್ದರೆ ಅದು ರಹಸ್ಯ ದಾಖಲೆಯನ್ನು ಬಹಿರಂಗಗೊಳಿಸಿದಂತಾಗುವುದಿಲ್ಲವೇ..? ಇದು ಓರ್ವ ಜವಾಬ್ದಾರಿಯುತ ಅಧಿಕಾರಿಯಾಗಿ ಅವರು ಮಾಡಿದ ಅಕ್ಷಮ್ಯವಾಗುವುದಿಲ್ಲವೇ ?  ಎನ್ನುವುದು ಭಾಸ್ಕರ್ ರಾವ್  ಅವರ ಪ್ರಶ್ನೆ.

ಅಲೋಕ್ ಕುಮಾರ್ ತಮಗೆ ಸಿಕ್ಕ ಆ ಮಾಹಿತಿಯನ್ನು ತನಿಖೆಯ ಭಾಗವಾಗಿ ಪರಿಗಣಿಸುವುದೇ ಆಗಿದ್ದರೆ ಅದನ್ನು ತನಿಖೆಗೆ ಸಂಬಂಧಪಟ್ಟವರೊಂದಿಗೆ ಮಾತ್ರ ಹಂಚಿಕೊಳ್ಳಬಹುದಿತ್ತಲ್ಲವೇ.. ಅದನ್ನು ಬಿಟ್ಟು ಪತ್ರಕರ್ತೆ ಕುಶಾಲಗೆ ಸೆಂಡ್ ಮಾಡಿದ್ದು ಘೋರಾಪರಾಧವಲ್ಲವೇ..? ಎಂದು ಪ್ರಶ್ನಿಸಿರುವ ಭಾಸ್ಕರ ರಾವ್ ಸಿಬಿಐ ಈ ಎಲ್ಲಾ ಸಂಗತಿಗಳನ್ನು ಗಂಭೀರವಾಗಿ ಪರಿಗಣಿಸಿದಂತೆ ಇಲ್ಲ ಎನ್ನುವ ಮೂಲಕ ಸಿಬಿಐ ತನಿಖೆಯ ವಿಶ್ವಾಸಾರ್ಹತೆಯನ್ನು ಪ್ರಶ್ನಿಸಿದ್ದಾರೆ.

ಕುಶಾಲ “ರಹಸ್ಯ”ವನ್ನು ಭಾಸ್ಕರ್ ರಾವ್ ಗೆ ಸೆಂಡ್ ಮಾಡಿದ್ದು ತಪ್ಪಲ್ವೇ..: ಭಾಸ್ಕರ್ ರಾವ್ ಅವರು ಅಸಮಾಧಾನ ವ್ಯಕ್ತಪಡಿಸು ವಂತೆ,ಐಪಿಎಸ್ ಅಲೋಕ್ ಕುಮಾರ್ ಅವರು ಪತ್ರಕ ರ್ತೆ ಕುಶಾಲಗೆ ಆಡಿಯೋ ಕ್ಲಿಪ್ ಸೆಂಡ್ ಮಾಡಿದ್ದು ಎಷ್ಟು ಅಕ್ಷಮ್ಯವೋ,ಅದೇ ಮಾತುಕತೆಯ ತುಣುಕನ್ನು ಇ-ಮೇಲ್ ಗೆ ಕಳುಹಿಸಿದ್ದೂ ಅಷ್ಟೇ ಅಪರಾಧ ಎನ್ನುತ್ತಾರೆ.

ಯಾವ ಉದ್ದೇಶದಿಂದ  ಈ ರಹಸ್ಯ ಮಾತುಕತೆಯ ಸಂಭಾಷಣೆಯನ್ನು ತನ್ನ ಇ-ಮೇಲ್ ಗೆ ಕುಶಾಲ  ರವಾನಿಸಿದ್ರು ಎನ್ನುವುದು ಸಾಕಷ್ಟು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ.ದುರುದ್ದೇಶದ  ಭಾಗವಾಗಿಯೋ ಅಥವಾ ವಿಶ್ವಾಸಾರ್ಹ ಮೂಲಗಳೊಂದಿಗೆ ತನ್ನ ಸಂಪರ್ಕದ ಕೆಪಾಸಿಟಿ ಏನೆನ್ನುವುದನ್ನು ಪ್ರೂವ್ ಮಾಡೊಕ್ಕೆ ಹೀಗೆ ಮಾಡಿದ್ರಾ.? ಎನ್ನುವುದು ಭಾಸ್ಕರ ರಾವ್ ಪ್ರಶ್ನೆ. ಅಲೋಕ್ ಕುಮಾರ್ ಅವರಷ್ಟೇ ಆತ್ಮೀಯವಾದ ಸಂಪರ್ಕ ಕುಶಾಲಂಗೆ ಭಾಸ್ಕರ್ ರಾವ್ ಜತೆ ಇರುವುದು ಇಡೀ ಪತ್ರಿಕೋದ್ಯಮಕ್ಕೆ ಗೊತ್ತಿದೆ.ಬಹುಷಃ ಆ ಕಾರಣದಿಂದಲೂ ಕುಶಾಲ ಆಡಿಯೋ ಕ್ಲಿಪ್ಪನ್ನು ಭಾಸ್ಕರ ರಾವ್ ಗೆ ಕಳುಹಿಸಿರುವ ಸಾಧ್ಯತೆಗಳನ್ನು ಅಲ್ಲಗೆಳೆಯುವಂತಿಲ್ಲ ಎಂದು ಜರ್ನಲಿಸಂ ಫೀಲ್ಡ್ ಮಾತನಾಡಿಕೊಳ್ಳುತ್ತಿದೆ.

ಸಿಬಿಐ ಸಲ್ಲಿಸಿರುವ ಬಿ.ರಿಪೋರ್ಟ್ ಪ್ರಶ್ನಿಸಿ ಭಾಸ್ಕರ ರಾವ್ ಸಲ್ಲಿಸಿರುವ ಪ್ರೊಟೆಸ್ಟ್ ಪಿಟೇಶನ್ ಪ್ರತಿ
ಸಿಬಿಐ ಸಲ್ಲಿಸಿರುವ ಬಿ.ರಿಪೋರ್ಟ್ ಪ್ರಶ್ನಿಸಿ ಭಾಸ್ಕರ ರಾವ್ ಸಲ್ಲಿಸಿರುವ ಪ್ರೊಟೆಸ್ಟ್ ಪಿಟೇಶನ್ ಪ್ರತಿ

ಆದ್ರೆ ಪೊಲೀಸ್ ಇಲಾಖೆಯ ಸಾಕಷ್ಟು ಹಿರಿಯ ಅಧಿಕಾರಿಗಳ ಪ್ರಕಾರ, ತನಿಖೆಯ ಭಾಗವಾಗಿ ಪರಿಗಣಿಸಬಹುದಾದಂಥ ಒಂದು ಗೌಪ್ಯವಾದ ದಾಖಲೆಯನ್ನು ಅಲೋಕ್ ಕುಮಾರ್ ಅವರಂಥ ಉನ್ನತ ಹಾಗೂ ಜವಾಬ್ದಾರಿಯುತ ಸ್ಥಾನದಲ್ಲಿರುವ ಅಧಿಕಾರಿನೇ ಲೀಕ್ ಮಾಡಿರೋದೇ ನಿಜವಾಗಿದ್ರೆ,ಅದರಷ್ಟು ಘನಘೋರ ಅಪರಾಧ ಮತ್ತೊಂದಿಲ್ಲ.ಪತ್ರಕರ್ತೆ ಕುಶಾಲಗೆ  ಆ ಸಂದೇಶ ರವಾನೆಯಾದದ್ದು,ಅದನ್ನು ಭಾಸ್ಕರ ರಾವ್ ಗೆ ಸೆಂಡ್ ಮಾಡಿದ್ದು ಕೂಡ ತಪ್ಪಾಗುತ್ತದೆ ಎನ್ನುತ್ತಾರೆ.

ಸಿಬಿಐ ಸಲ್ಲಿಸಿರುವ ಬಿ ರಿಪೋರ್ಟ್ ಬಗ್ಗೆ ಅಸಮಾಧಾನ-ಆಕ್ಷೇಪ ವ್ಯಕ್ತಪಡಿಸಿರುವ ಭಾಸ್ಕರರಾವ್ ಪ್ರೊಟೆಸ್ಟ್ ಪಿಟೇಶನ್ ಸಲ್ಲಿಸುವ ಬಗ್ಗೆ ಮಾದ್ಯಮಗಳ ಮುಂದೆ ಹೇಳಿಕೆ ನೀಡುತ್ತಿರುವುದು
ಸಿಬಿಐ ಸಲ್ಲಿಸಿರುವ ಬಿ ರಿಪೋರ್ಟ್ ಬಗ್ಗೆ ಅಸಮಾಧಾನ-ಆಕ್ಷೇಪ ವ್ಯಕ್ತಪಡಿಸಿರುವ ಭಾಸ್ಕರರಾವ್ ಪ್ರೊಟೆಸ್ಟ್ ಪಿಟೇಶನ್ ಸಲ್ಲಿಸುವ ಬಗ್ಗೆ ಮಾದ್ಯಮಗಳ ಮುಂದೆ ಹೇಳಿಕೆ ನೀಡುತ್ತಿರುವುದು

ಪೊಲೀಸ್ ಇಲಾಖೆಯಲ್ಲೇ ಅತ್ಯಂತ ಸೆನ್ಸೆಷನ್ ಮೂಡಿಸಿದ ಪ್ರಕರಣ ಸಿಸಿಬಿ ತೆಕ್ಕೆಗೆ ಬಿದ್ದ ಮೇಲೆ ಜಂಟಿ ಆಯುಕ್ತ ಸಂದೀಪ್ ಪಾಟೀಲ್ ಸಾಕಷ್ಟು ತನಿಖೆ ನಡೆಸಿ ಸರ್ಕಾರ ಹಾಗೂ ಪೊಲೀಸ್ ಮಹಾನಿರ್ದೇಶಕರಿಗೆ ವರದಿಯನ್ನು ರವಾನಿಸಿದ್ರು.ಬದಲಾದ ಸನ್ನಿವೇಶದಲ್ಲಿ ಪ್ರಕರಣವನ್ನು ಸರ್ಕಾರ ಸಿಬಿಐಗೆ ವರ್ಗಾಯಿಸ್ತು.ಅಲೋಕ್ ಕುಮಾರ್,ಭಾಸ್ಕರರಾವ್,ಪತ್ರಕರ್ತೆ ಕುಶಾಲ ಸೇರಿದಂತೆ ಸಂಬಂಧಿಸಿದ ಅನೇಕರನ್ನು ತನಿಖೆಯ ಭಾಗವಾಗಿ ವಿಚಾರಣೆ ನಡೆಸಿದ್ದೂ ಆಯ್ತು.ಎಲ್ಲರೂ ತಮ್ ತಮ್ ಮಟ್ಟದಲ್ಲಿ  ಸಾಕ್ಷ್ಯ-ಹೇಳಿಕೆಗಳನ್ನು ಸಿಬಿಐ ಮುಂದೆ ಕೊಟ್ಟಿದ್ದರು.ಸುಮಾರು 2 ವರ್ಷಗಳವರೆಗೆ ನಡೆದ ವಿಚಾರಣೆ ನಂತರ ಚಾರ್ಜ್ ಶೀಟ್ ಕೂಡ ಸಿದ್ದವಾಗಿತ್ತು.ಭಾಸ್ಕರ ರಾವ್ ಪ್ರಕಾರ ಅವರಿಗೆ ಸಿಬಿಐ ತನಿಖೆ ಪಾರದರ್ಶಕ ಹಾಗು ಪ್ರಾಮಾಣಿಕವಾಗಿ ನಡೆಯುತ್ತೆನ್ನುವ ನಂಬಿಕೆ ಇತ್ತಂತೆ.ಆದ್ರೆ ಅರೋಪಕ್ಕೆ ಸೂಕ್ತ ಸಾಕ್ಷಿಗಳು ಇಲ್ಲದ ಕಾರಣ ಬಿ ರಿಪೋರ್ಟ್ ಸಲ್ಲಿಸುತ್ತಿರುವುದಾಗಿ ಹೇಳಿ ಕೈ ತೊಳೆದುಕೊಂಡ ಸಿಬಿಐ ವಿರುದ್ಧ ಕೆಂಡಾಮಂಡಲವಾಗಿದ್ದಾರೆ.

ಸಿಬಿಐ ತನಿಖೆಯನ್ನೇ ಸರಿಯಾಗಿ ಮಾಡಿಲ್ಲ.ಅಲೋಕ್ ಕುಮಾರ್,ಕುಶಾಲ ಅವರುಗಳ ಘೋರಾಪರಾಧವನ್ನು ಪುಷ್ಟೀಕರಿಸುವಂತ ಸಾಕಷ್ಟು ಸಾಕ್ಷ್ಯಗಳನ್ನು ಕೊಟ್ಟ ಮೇಲೂ ಯಾವುದನ್ನೂ ಗಂಭೀರವಾಗಿ ಪರಿಗಣಿಸಿಲ್ಲ ಎಂದು ಆಪಾದಿಸಿದ್ದಾರೆ.ಅಲ್ಲದೇ ಸಾಕಷ್ಟು ಪ್ರಶ್ನೆಗಳನ್ನು ಹಾಕುವ ಮೂಲಕ ಸಿಬಿಐ ತನಿಖೆಯ ವಿಶ್ವಾಸಾರ್ಹತೆಯನ್ನೇ ಶಂಕಿಸಿದ್ದಾರೆ.ಸಿಟಿ ಸಿವಿಲ್ ಕೋರ್ಟ್ ನಲ್ಲಿರುವ ಸಿಬಿಐ ವಿಶೇಷ ನ್ಯಾಯಾಲಯಕ್ಕೆ ಸಿಬಿಐ ಸಲ್ಲಿಸಿರುವ ಬಿ.ರಿಪೋರ್ಟ್ ನ್ನೇ ಕಾನೂನಾತ್ಮಕವಾಗಿ ಪ್ರಶ್ನಿಸಲು ನಿರ್ಧರಿಸಿದ್ದಾರಲ್ಲದೇ, ತಕರಾರು ಅರ್ಜಿ ಸಲ್ಲಿಸೊಕ್ಕೆ ಮುಂದಾಗಿದ್ದಾರೆ. ಶೀಘ್ರವೇ ಪ್ರೊಟೆಸ್ಟ್ ಪಿಟೇಶನ್ ಸಲ್ಲಿಸಿ, ಮರುತನಿಖೆಗೆ ಆದೇಶ ನೀಡುವಂತೆ ಮನವಿ ಮಾಡಲಿದ್ದಾರಂತೆ. ಸಿಬಿಐ ಮತ್ತೊಮ್ಮೆ ತನಿಖೆ ನಡೆಸಬೇಕು ಅಥವಾ ನೋಟಿಸ್ ನೀಡಿ ವಿಚಾರಣೆ ನಡೆಸಬೇಕು. ಇಬ್ಬರ ವಿರುದ್ದ ಸಾಕ್ಷಿಗಳಿದ್ದರೂ ಕೇಸ್ ಮುಚ್ಚಿ ಹಾಕುವ ಯತ್ನ ಅಗುತ್ತಿದೆ.ಎಡಿಜಿಪಿ ಅಲೋಕ್ ಕುಮಾರ್ ಸಾಕಷ್ಟು ಷಡ್ಯಂತ್ರ ನಡೆಸುತ್ತಿದ್ದಾರೆ ಎಂದು ನೇರವಾಗಿ ಹರಿಹಾಯ್ದಿದ್ದಾರೆ.

ಒಟ್ಟಿನಲ್ಲಿ ಇಬ್ಬರು ಐಪಿಎಸ್ ಗಳ ನಡುವೆ ಮತ್ತೊಂದು ಸುತ್ತಿನ ಗುದ್ದಾಟಕ್ಕೆ ಅಖಾಡ ರೆಡಿಯಾಗ್ತಿದೆ.ಬಿ ರಿಪೋರ್ಟ್ ನಿಂದ ಸಧ್ಯಕ್ಕೆ ನಿಟ್ಟುಸಿರು ಬಿಟ್ಟಿರುವ ಅಲೋಕ್ ಕುಮಾರ್ ಹಾಗೂ ಪತ್ರಕರ್ತೆ ಕುಶಾಲ ಅವರ ನಿದ್ದೆಗೆಡಿಸೊಕ್ಕೆ ಪ್ರೊಟೆಸ್ಟ್ ಪಿಟೇಶನ್ ಸಲ್ಲಿಸಿದ್ದಾರೆ ಭಾಸ್ಕರರಾವ್.ಇಬ್ಬರು ಐಪಿಎಸ್ ಗಳ ನಡುವಿನ ಮುಸುಕಿನ ಗುದ್ದಾಟಕ್ಕೆ ಪತ್ರಕರ್ತೆ ಕುಶಾಲ ತುಪ್ಪಸುರಿದ ಆಪಾದನೆಗೆ ಗುರಿಯಾಗಿದ್ದಾರೆ.ಸಧ್ಯಕ್ಕೆ ಮುಗಿಯುವಂಗೆ ಕಾಣದ ಐಪಿಎಸ್ ಗಳ ನಡುವಿನ ಹಗ್ಗಜಗ್ಗಾಟದಲ್ಲಿ ಕುಶಾಲ ಸಿಕ್ಕಾಕೊಂಡು ನೆಮ್ಮದಿ ಕಳೆದುಕೊಳ್ಳೋದು ಕನ್ಫರ್ಮ್ ಎನ್ನುತ್ತಿವೆ ಪೊಲೀಸ್ ಹಾಗೂ ಪತ್ರಿಕೋದ್ಯಮದ ಮೂಲಗಳು.

 

“ಸತ್ಯವನ್ನು ಸಮಾಧಿ ಮಾಡುವ ಯತ್ನ ನಡೆದಿದೆ..ಹಿರಿಯ ಅಧಿಕಾರಿಗಳ ಗಮನಕ್ಕೆ ತಾರದೆ ರಿಪೋರ್ಟ್ ಸಲ್ಲಿಸಿದಂತಿದೆ”

ಸಿಬಿಐ ಹಿರಿಯ ಅಧಿಕಾರಿಗಳ ಗಮನಕ್ಕೆ ಬಿ ರಿಪೋರ್ಟ್ ಬಂದಿಲ್ಲ.ಮೇಲಾಧಿಕಾರಿಗಳ ಗಮನಕ್ಕೆ ತಾರದೆ ಕೋರ್ಟ್ ಗೆ ಬಿ.ರಿಪೋರ್ಟ್ ಸಲ್ಲಿಸಿದ್ದಾರೆ.  ಅಲೋಕ್ ಕುಮಾರ್ ಅವರಿಂದಲೇ ಪ್ರೆಸ್ ರಿಪೋರ್ಟರ್ ಕುಶಾಲಗೆ ಆಡಿಯೋ ಹೋಗಿದೆ ಎನ್ನುವುದನ್ನು ಸಿಬಿಐ ಅಧಿಕಾರಿಗಳೇ ಒಪ್ಪಿಕೊಂಡಿದ್ದಾರೆ.ಹೀಗಿರುವಲ್ಲಿ ಹೇಗೆ ಬಿ.ರಿಪೋರ್ಟ್ ಸಲ್ಲಿಸಿದ್ದಾರೆ ಗೊತ್ತಾಗುತ್ತಿಲ್ಲ,ಪ್ರಕರಣ ಮುಚ್ಚಾಕೊಕ್ಕೇನೆ ಇದೆಲ್ಲಾ ನಡೀತಿದೆ ಅನ್ಸುತ್ತೆ.ಬಿ.ರಿಪೋರ್ಟನ್ನು ಒಪ್ಪಿಕೊಳ್ಳದಂತೆ ನ್ಯಾಯಾಲಯಕ್ಕೆ ಮನವಿ ಮಾಡಿದ್ದೇವೆ.ಕಾನೂನು ವಿರುದ್ದ ನಡೆದುಕೊಂಡಿರುವ ಇಬ್ಬರು ಆರೋಪಿಗಳಾದ ಅಲೋಕ್ ಕುಮಾರ್ ಹಾಗೂ ಕುಶಾಲ  ವಿರುದ್ದ ದೋಷಾರೋಪಣಾ ಪಟ್ಟಿ ಸಲ್ಲಿಸಬೇಕು ಎಂದು ಮನವಿ ಮಾಡಿಕೊಂಡಿದ್ದೇನೆ.ಆ ಸಮಯದಲ್ಲಿ ನನಗೆ ತೀವ್ರ ಮಾನಹಾನಿಯಾಗಿದೆ.ನನಗೆ ಆಗಿರುವ ಅನ್ಯಾಯಕ್ಕೆ ನ್ಯಾಯ ಸಿಗಬೇಕು ಅಷ್ಟೇ.. 

“ವರದಿಯನ್ನು ಸರ್ಕಾರ ಒಪ್ಪಬೇಕು..ದೂರುದಾರ ಕುಲದೀಪ್ ಒಪ್ಪಿದಾಕ್ಷಣ ಎಲ್ಲಾ ಮುಗಿದಂಗಲ್ಲ.”

ಸರ್ಕಾರ ಪ್ರಕರಣವನ್ನು ಸಿಬಿಐಗೆ ಒಪ್ಪಿಸಿದ ಮೇಲೆ ಅದು ನೀಡುವ ವರದಿಯನ್ನು ಸರ್ಕಾರ ಒಪ್ಪಬೇಕಾಗುತ್ತದೆ. ದೂರುದಾರ ಕುಲದೀಪ್ ಜೈನ್ ಒಪ್ಪಿದಾಕ್ಷಣ ಎಲ್ಲವೂ ಮುಗಿದಂಗೆ ಅಲ್ಲ.ಕೇವಲ ಡಿಸಿಪಿ ಒಪ್ಪಿಕೊಂಡಾಕ್ಷಣ ಓ.ಕೆ ಎನ್ನುವುದಕ್ಕೆ ಇದೇನು ಸಾಮಾನ್ಯ ಕೇಸ್ ಅಲ್ಲ.ಅಲ್ಲದೇ ಇದು ಕುಲದೀಪ್ ಅವರಿಗೆ ಸೀಮಿತವಾದ ಪ್ರಕರಣವಲ್ಲ..ಕರ್ನಾಟಕಕ್ಕೆ ಸೇರಿದ ಪ್ರಕರಣ. ಅಂದುಕೊಂಡಂತೆ ಮುಗಿಸೊಕ್ಕೆ ಆಗೊಲ್ಲ.

“ನನಗೆ ನ್ಯಾಯಬೇಕು.ಅಲ್ಲಿವರೆಗೂ ಹೋರಾಟ ಕೈ ಬಿಡಲ್ಲ..ಯಾರದೋ ಸ್ವಾರ್ಥಕ್ಕೆ ಅಧಿಕಾರ ಮಿಸ್ಯೂಸ್ ಆಗಬಾರದು”

ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು.ಶಿಕ್ಷೆಯಾಗದೆ ಹೋದರೆ ಇನ್ನೊಬ್ಬ ಅಧಿಕಾರಿಯೂ ಹೀಗೆಯೇ ಪವರ್ ನ್ನು ಮಿಸ್ಯೂಸ್ ಮಾಡಬಹುದು.ಸಂಬಂಧವೇ ಪಡದವರಿಗೆ ಗೌಪ್ಯವಾದ ಮಾಹಿತಿಯನ್ನು ಸೋರಿಕೆ ಮಾಡುವುದು ಅಕ್ಷಮ್ಯವಲ್ಲವೇ..?ಇದು ಅನ್ ಎಥಿಕಲ್ ಅಷ್ಟೇ ಅಲ್ಲ ಅನ್ ಪ್ರೊಫೆಷನಲ್ ಕೂಡ..ಸರ್ಕಾರ ನಮ್ಮಂಥ ಅಧಿಕಾರಿಗಳ ಮೇಲೆ ಇಷ್ಟೊಂದು ನಂಬಿಕೆ ಇಟ್ಟುಕೊಂಡಿರುವಾಗ ಅವರ ವಿಶ್ವಾಸ-ಭರವಸೆ ಮುರಿಯುವಂಥ ಕೆಲಸ ಮಾಡುವುದು ಸರಿನಾ..?ಸ್ವಾರ್ಥಕ್ಕಾಗಿ ಅಧಿಕಾರ ಮಿಸ್ಯೂಸ್ ಮಾಡಬಾರದು.

Spread the love
Leave A Reply

Your email address will not be published.

Flash News