ಬೆಳಗಾವಿಯಲ್ಲಿ ಬಿಜೆಪಿಗೆ “ಕುಂದಾ”-ಕಾಂಗ್ರೆಸ್ ನಾಯಕತ್ವಕ್ಕೆ ಹೀನಾಯ ಸೋಲು-ಎಂಇಎಸ್ ಮಗ್ಗಲು ಮುರಿದ ಮತದಾರ  

ಬಿಜೆಪಿ-36,ಕಾಂಗ್ರೆಸ್-09, ಪಕ್ಷೇತರರು-09, ಎಂಇಎಸ್-03 ಹಾಗೂ ಎಐಎಂಐಎಂ 01 ಸ್ಥಾನದಲ್ಲಿ ಗೆಲುವು

0

ಬೆಳಗಾವಿ:ಕುಂದಾನಗರಿ ಬೆಳಗಾಂ ನಿರೀಕ್ಷೆಯಂತೆ ಬಿಜೆಪಿ ಪಾಲಾಗಿದೆ.ಆಡಳಿತಾರೂಢ ಪಕ್ಷಕ್ಕೆ ಮತದಾರ ಮಣೆ ಹಾಕಿದ್ದಾನೆ. ಭಾಷೆಯ ಮೇಲೆಯೇ ಜನರನ್ನು ಒಡೆದಾಳುವ ಕೆಲಸ ಮಾಡುತ್ತಾ ಬಂದಿದ್ದ ಎಂಇಎಸ್ ಗೆ ಮತದಾರ ಸರಿಯಾಗೇ ಬುದ್ಧಿ ಕಲಿಸಿದ್ದಾನೆ.ಮೂರು ವಾರ್ಡ್(14,27,40) ಗಳನ್ನಷ್ಟೇ ದಕ್ಕಿಸಿಕೊಳ್ಳೊಕ್ಕೆ ಸಾಧ್ಯವಾಗಿದೆ.ಇನ್ನು ಕಾಂಗ್ರೆಸ್ ಪ್ರದರ್ಶನ ನಿರಾಶೆಯಲ್ಲಿ ಕೊನೆಗೊಂಡಿದೆ.

4 ಲಕ್ಷದ 31 ಸಾವಿರದ 383 ಮತದಾರರನ್ನು ಒಳಗೊಂಡ ಬೆಳಗಾಂ ಪಾಲಿಕೆ ವ್ಯಾಪ್ತಿಯಲ್ಲಿ ಶೇಕಡಾ 50(ಶೇ.50.42) ಕ್ಕಿಂತಲೂ ಹೆಚ್ಚು ಮತದಾನವಾಗಿತ್ತು.ಅದರ ಫಲಿತಾಂಶ ಇಂದು ಪ್ರಕಟವಾಗಿದ್ದು,ಬಿಜೆಪಿ ಅತ್ಯಂತ ಅಧಿಕ 36 ವಾರ್ಡ್ ಗೆಲ್ಲುವ ಮೂಲಕ ಪಾಲಿಕೆಯನ್ನು ತೆಕ್ಕೆಗೆ ತೆಗೆದುಕೊಂಡಿದೆ.ಕಾಂಗ್ರೆಸ್ ಸಾಧನೆ ಕೇವಲ 9 ವಾರ್ಡ್ ಗಳಿಗೆ ಸೀಮಿತವಾಗಿದೆ.ಪಕ್ಷೇತರರು 9 ಸ್ಥಾನಗಳಲ್ಲಿ ಗೆದ್ದರೆ,ಭಾಷಾ ವಿರೋಧಿ ಎಂಎಸ್ ಕೇವಲ 3 ಸ್ಥಾನಕ್ಕೆ ತೃಪ್ತಿ ಪಟ್ಟಿದೆ.ಸದಾ ಒಡೆದಾಳುವ ಕೆಲಸವನ್ನೇ ಮಾಡುತ್ತಾ ಬಂದಿರುವ ಓವೈಸಿ ನೇತೃತ್ವದ  ಎಐಎಂಐಎಂ ಒಂದು ಸ್ಥಾನ ಗೆಲ್ಲುವ ಮೂಲಕ ಖಾತೆ ತೆರೆದಿದೆ.ಅಂದ್ಹಾಗೆ ಇಲ್ಲಿ,ಅಧಿಕಾರದ ಗದ್ದುಗೆ ಏರೊಕ್ಕೆ ಬೇಕಿರುವ ಮ್ಯಾಜಿಕ್ ನಂಬರ್ 30.

ಎಂಇಎಸ್ ಗೆ ಗುನ್ನಾ: ನಾಡದ್ರೋಹಿ ಎಂಇಎಸ್ ಗೆ ಬೆಳಗಾವಿಯ ಜನತೆ ತಕ್ಕ ಪಾಠ ಕಲಿಸಿದ್ದಾರೆ.ಅದು ಗೆಲ್ಲೊಕ್ಕೆ ಸಾಧ್ಯವಾಗಿರೋದು ಕೇವಲ ಮೂರು  ವಾರ್ಡ ಗಳನ್ನಷ್ಟೇ. ಪ್ರತಿಬಾರಿಯೂ ಭಾಷೆಯ ಆಧಾರದ ಮೇಲೆ ಮಾತ್ರ ಬೆಳಗಾವಿಯಲ್ಲಿ ಅಭ್ಯರ್ಥಿಗಳು ಚುನಾವಣೆ ಎದುರಿಸುತ್ತಿದ್ದರು. ಇದನ್ನು ಎಂಇಎಸ್ ಸೊಗಸಾಗಿಯೇ ಬಳಕೆ ಮಾಡಿಕೊಳ್ಳುತ್ತಿತ್ತು. ಚುನಾವಣೆಯಲ್ಲಿ ಗೆದ್ದ ಬಳಿಕ ಮರಾಠಿ ಮಾತೃಭಾಷೆ ಹೊಂದಿರುವ ಪುರಪಿತೃಗಳನ್ನೆಲ್ಲಾ ತನ್ನ ಪಕ್ಷದವರೆಂದು ಘೋಷಿಸಿಕೊಂಡು ಪಾಲಿಕೆಯ ಆಡಳಿತ ಚುಕ್ಕಾಣಿ ಹಿಡಿಯುತ್ತಿತ್ತು.

ಇದರಿಂದ ಬೇಸತ್ತಿದ್ದ ರಾಜಕೀಯ ಪಕ್ಷಗಳದ್ದು ಎಂಇಎಸ್ ಗೆ ಮಣ್ಣು ಮುಕ್ಕಿಸಬೇಕೆನ್ನುವ ಸಿಂಗಲ್ ಪಾಯಿಂಟ್ ಅಜೆಂಡಾವನ್ನಿಟ್ಟುಕೊಂಡು ಪ್ರಚಾರ ನಡೆಸಿದ್ದರು. ಇದೇ ಮೊದಲ ಬಾರಿಗೆ ರಾಜ್ಯದ ಮೂರೂ ರಾಜಕೀಯ ಪಕ್ಷಗಳ ತಮ್ಮ ತಮ್ಮ ಪಕ್ಷಗಳ ಚಿಹ್ನೆಯಡಿಯಲ್ಲಿಯೇ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸುವ ನಿರ್ಧಾರ ಮಾಡಿದ್ದವು. 25 ವರ್ಷಗಳ ನಂತರ ಬಿಜೆಪಿ,ಕಾಂಗ್ರೆಸ್ ಮತ್ತು ಜೆಡಿಎಸ್ ತಮ್ಮ ತಮ್ಮ ಪಕ್ಷಗಳ ಚಿಹ್ನೆಯಡಿಯಲ್ಲಿಯೇ ಸ್ಪರ್ಧೆಗೆ ಇಳಿದವು.ಆಗಲೇ  ಎಂಇಎಸ್ ಬಹುತೇಕ ಮೊಣಕಾಲೂರಿತ್ತು. ಈಗ ಗೆದ್ದಿರುವ ಅಭ್ಯರ್ಥಿಗಳು ಯಾವುದೇ ಕಾರಣಕ್ಕೂ ಪಕ್ಷಾಂತರ ಮಾಡಲು ಸಾಧ್ಯವಿಲ್ಲ. ಹಾಗಾಗಿನೇ ಎಂಇಎಸ್ ನ  ಅಸಲೀಯತ್ತು ಏನನ್ನೋದು  ಗೊತ್ತಾಗಿದೆ.

ಬೆಂಗಳೂರು,ಹುಬ್ಬಳ್ಳಿ-ಧಾರವಾಡ ಬಿಟ್ಟರೆ ರಾಜ್ಯದ ಮೂರನೇ ಅತೀ ದೊಡ್ಡ ಪಾಲಿಕೆ ಎನಿಸಿಕೊಂಡಿರುವ ಬೆಳಗಾಂ 58 ವಾರ್ಡ ಗಳನ್ನು ಹೊಂದಿರುವ ಕಾರ್ಪೊರೇಷನ್. ಚುನಾವಣೆಯಲ್ಲಿ ಒಟ್ಟು 385 ಅಭ್ಯರ್ಥಿಗಳು ಕಣಕ್ಕೆ ಇಳಿದಿದ್ದರು. ಬಿಜೆಪಿ 55, ಕಾಂಗ್ರೆಸ್-45, ಜೆಡಿಎಸ್-11, ಆಮ್ ಆದ್ಮಿ ಪಾರ್ಟಿ-27, ಎಂಇಎಸ್-23, ಎಐಎಂಐಎಂ-7 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದವು. ಕಟ್ಟರ್  ಹಿಂದುತ್ವವಾದಿ, ಪಕ್ಕಾ ಮರಾಠಿ ಭಾಷಿಗರದ್ದೇ ಪಕ್ಷ ಎನಿಸಿಕೊಂಡಿದ್ದ ಎಂಇಎಸ್, ಇಲ್ಲಿ ಆಶ್ಚರ್ಯ ಎನಿಸುವಂತೆ ಎಐಎಂಐಎಂ ಜತೆ ಹೊಂದಾಣಿಕೆ ಮಾಡಿಕೊಂಡಿತ್ತು.

ಸೋಲಿನ ಕಹಿಯಿಂದ ಹೊರಬಾರದ ಕೈ ನಾಯಕರು
ಸೋಲಿನ ಕಹಿಯಿಂದ ಹೊರಬಾರದ ಕೈ ನಾಯಕರು

ಮರಾಠಿ + ಮುಸ್ಲೀಂ ಸೂತ್ರಕ್ಕೆ ಎಂಇಎಸ್ ಮೊರೆ ಹೋಗಿತ್ತು. ಎಂಇಎಸ್ ನ ಈ ಸೂತ್ರವೇ ಬಹುತೇಕ ಅದರ ಅವನತಿಗೆ ಕಾರಣವಾಯ್ತು ಎನ್ನಲಾಗಿದೆ.ಯಾವಾಗ ಎಂಇಎಸ್,  ಎಐಎಂಐಎಂ ಜತೆ  ಹೊಂದಾಣಿಕೆ ಮಾಡಿಕೊಂಡಿತೋ, ಆಗಲೇ ಬಹುತೇಕ ಎಂಇಎಸ್ ನ ಬಹುತೇಕ ಮುಖಂಡರು ಬಿಜೆಪಿಯತ್ತ ಮುಖ ಮಾಡಿದ್ದರು. ಈಗ ಚುನಾವಣೆಯಲ್ಲಿ ಕಟ್ಟರ್ ಮರಾಠಿ ಮತದಾರರೂ ಸಹ ಎಂಇಎಸ್ ಗೆ ಬೆನ್ನು ತೋರಿಸಿರೋದು, ಈಗ ಚುನಾವಣೆಯಲ್ಲಿ ಸಾಬೀತಾದಂತಾಗಿದೆ.

ನೀರಸ ಪ್ರದರ್ಶನದ ಹೊರತಾಗಿಯೂ ಖಾತೆ ತೆರೆದ ಓವೈಸಿಯ ಎಐಎಂಐಎಂ
ನೀರಸ ಪ್ರದರ್ಶನದ ಹೊರತಾಗಿಯೂ ಖಾತೆ ತೆರೆದ ಓವೈಸಿಯ ಎಐಎಂಐಎಂ

ಖಾತೆ ತೆರೆದ ಎಐಎಂಐಎಂ: ಏನೇ ಕಟ್ಟರ್ ಮುಸ್ಲೀಂ ಪರವಾದ ಪಕ್ಷ ಎಂದುಕೊಂಡರೂ, ಬೆಳಗಾವಿ ಮಾತ್ರವಲ್ಲ,ಕರ್ನಾಟಕದ ಮುಸ್ಲೀಮ್ ಮತದಾರರು ಕಾಂಗ್ರೆಸ್ ಗೆ ಪಕ್ಕಾ ಓಟ್ ಬ್ಯಾಂಕ್. ಅದನ್ನು ಬದಲಾವಣೆ ಮಾಡಲು ಓವೈಸಿ ಸಹೋದರರಿಂದ ಅಲ್ಲ, ಯಾರಿಂದಲೂ ಸಾಧ್ಯವಿಲ್ಲ.

ಎಐಎಂಐಎಂ ಪಾರ್ಟಿ ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ತನ್ನ ಅಭ್ಯರ್ಥಿಗಳ ನ್ನು ಕಣಕ್ಕಿಳಿಸಿದಾಗಲೇ ಅದರ ಉದ್ದೇಶ ಏನು ಎಂಬುದು ಬಹುತೇಕ ಎಲ್ಲರಿಗೂ ಸ್ಪಷ್ಟವಾಗಿ ಹೋಗಿತ್ತು. ಎಐಎಂಐಎಂ ಅಭ್ಯರ್ಥಿಗಳು ತಾವು ಚುನಾವಣೆಯಲ್ಲಿ ಗೆಲ್ಲದೇ ಹೋದರೂ ಸಹ, ಬೆಳಗಾವಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಸೋಲಿಗಂತೂ ಕಾರಣವಾಗಿರೋದು ಸ್ಪಷ್ಟ. ಎಐಎಂಐಎಂ ಸ್ಪರ್ಧೆಯಿಂದಾಗಿ ಕಾಂಗ್ರೆಸ್ ನ ಪಾರಂಪರಿಕ ಮತ ಬ್ಯಾಂಕ್ ವಿಭಜನೆಯಾಗಿದೆ. ಇದರಿಂದ ಬಿಜೆಪಿಗೆ ಲಾಭವಾಗಿರೋದು ಸ್ಪಷ್ಟ.ನೀರಸ ಪ್ರದರ್ಶನ ನೀಡಿರುವ  ಎಐಎಂಐಎಂ ಕೇವಲ ಒಂದು ವಾರ್ಡ್ ನಲ್ಲಿ ಗೆಲ್ಲುವ ಮೂಲಕ ಖಾತೆ ತೆರೆದಿದೆ.

ಸಾಮೂಹಿಕ ನಾಯಕತ್ವದ ತಾಕತ್ತು ಪ್ರದರ್ಶಿಸಿದ ಬಿಜೆಪಿ
                                  ಸಾಮೂಹಿಕ ನಾಯಕತ್ವದ ತಾಕತ್ತು ಪ್ರದರ್ಶಿಸಿದ ಬಿಜೆಪಿ

ಕೈ ಘಟಾನುಘಟಿಗಳಿಗೆ ಮುಖಭಂಗ:ಲೋಕಸಭಾ ಉಪಚುನಾವಣೆಯಲ್ಲಿ ಅಚ್ಚರಿಯ ಪ್ರದರ್ಶನ ನೀಡಿ ಕೆಲವೇ ಮತಗಳ ಅಂತರದಿಂದ ಸೋಲುಂಡಿದ್ದ ಕಾಂಗ್ರೆಸ್ ಕಾರ್ಪೊರೇಷನ್ ಎಲೆಕ್ಷನ್ ನಲ್ಲಿ ಅತ್ಯಂತ ನೀರಸ ಎನ್ನುವಂತ ಪ್ರದರ್ಶನ ನೀಡಿದೆ.ಕೈ ಅಭ್ಯರ್ಥಿಗಳ ಪ್ರದರ್ಶನ ನೋಡುದ್ರೆ ಕಾಂಗ್ರೆಸ್ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ ಅನ್ಸುತ್ತೆ. ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಖುದ್ದು ಬೆಳಗಾವಿ ಅವರೇ ಆಗಿದ್ದರೂ ತಮ್ಮದೇ ಜಿಲ್ಲೆಯಲ್ಲಿ ಏನೂ ಕಿಸಿಯೊಕ್ಕೆ ಸಾಧ್ಯವಾಗಲಿಲ್ಲ.ಇನ್ನು ಲಕ್ಷ್ಮಿ ಹೆಬ್ಬಾಳ್ಕರ್, ಅಂಜಲಿ ನಿಂಬಾಳ್ಕರ್ ಅವರಿದ್ದರೂ ಏನೂ ಪ್ರಯೋಜನವಾಗಲಿಲ್ಲ..ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಪ್ರವಾಸದಿಂದಲೂ ಪ್ರಯೋಜನವಾಗಲಿಲ್ಲ.

ಬೈ ಎಲೆಕ್ಷನ್ ಫಲಿತಾಂಶದಲ್ಲೇ ಕಾರ್ಪೊರೇಷನ್ ಗೆಲುವಿನ ಮುನ್ಸೂಚನೆ ನೀಡಿದ್ದ ಬಿಜೆಪಿ:ಮಾಜಿ ಕೇಂದ್ರ ಸಚಿವ ಸುರೇಶ್ ಅಂಗಡಿ ಅವರ ನಿಧನದಿಂದ ತೆರವಾದ ಸ್ಥಾನಕ್ಕೆ ನಡೆದ ಉಪಚುನಾವಣೆಯಲ್ಲಿ ಮತದಾರ ಬಿಜೆಪಿಯನ್ನೇ ಬೆಂಬಲಿಸಿ ತಮ್ಮ  ಬೆಂಬಲ ಏನಿದ್ರೂ ಬಿಜೆಪಿಗೆ ಎನ್ನುವುದನ್ನು ಅಂದೇ ಸಾಬೀತುಪಡಿಸಿದ್ದರು.ಅದರ ಮುಂದುವರೆದ ಪರಿಣಾಮವನ್ನು ಕಾರ್ಪೊರೇಷನ್ ಎಲೆಕ್ಷನ್ ನಲ್ಲೂ ಸಾಬೀತುಪಡಿಸಿದ್ದಾರೆ. ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ, ರಮೇಶ್ ಜಾರಕಿಹೊಳಿ,ಬಾಲಚಂದ್ರ ಜಾರಕಿಹೊಳಿ,ಶಶಿಕಲಾ ಜೊಲ್ಲೆ,ಉಮೇಶ್ ಕತ್ತಿ,ಸವದಿ ಅವರಂಥವ್ರ ಸಾಂಘಿಕ ಪ್ರಯತ್ನದ ಫಲವಾಗಿ ಬಿಜೆಪಿಗೆ ಗೆಲುವು ದಕ್ಕಿದೆ.ಬೆಳಗಾವಿ ಪಾಲಿಕೆ ಮೇಲೆ ಬಿಜೆಪಿ ಬಾವುಟ ಹಾರಿದಂತಾಗಿದೆ.

 • ಬೆಳಗಾಂ ಕಾರ್ಪೊರೇಷನ್ ಎಲೆಕ್ಷನ್ ರಿಸಲ್ಟ್ ಹೈಲೆಟ್ಸ್
 • ಬಿಜೆಪಿ ಗೆದ್ದ ವಾರ್ಡ್ ಗಳು-36
 • ವಾರ್ಡ್ 45, 26, 6,15,16,22,23,24,53,54,57,58,36,17,31,32,33,55,35,29,30,42,43,
 • 44,37,40,41,49,50,21,28,39,4,46, 34, 51
 • ಕಾಂಗ್ರೆಸ್ ಗೆದ್ದ ವಾರ್ಡ್ ಗಳು-09
 • ವಾರ್ಡ್ 2, 5, 8,52,11,13,20,56,3
 • ಪಕ್ಷೇತರರು ಗೆದ್ದ ವಾರ್ಡ್ ಗಳು-12
 • ವಾರ್ಡ್ ಗಳು 25,10, 1,47,14,38,48,12,27,7,9,10
 • ಎಂಇಸ್ ಗೆದ್ದ ವಾರ್ಡ್ ಗಳು-03
 • ವಾರ್ಡ್-14,27,40
 • AIMIM ಗೆದ್ದ ಸ್ಥಾನಗಳು-01

 

Spread the love
Leave A Reply

Your email address will not be published.

Flash News