BDA BIG DEMOLITION::ಬಿಡಿಎ ಮೆಗಾ ಕಾರ್ಯಾಚರಣೆಯಲ್ಲಿ 40.57 ಕೋಟಿ ಮೌಲ್ಯದ ಬಿಡಿಎ ಆಸ್ತಿ ವಶ

ಭೂ ಕಬಳಿಕೆದಾರರ ವಿರುದ್ಧದ ಕಾರ್ಯಾಚರಣೆಯಲ್ಲಿ ಕೈ ಬಿಟ್ಟು ಹೋಗಿದ್ದ ಅಪಾರ ಮೌಲ್ಯದ ಭೂಮಿ ವಾಪಸ್

0

ಬೆಂಗಳೂರು: ಭೂಕಬಳಿಕೆದಾರರ ವಿರುದ್ಧದ ಕಾರ್ಯಾಚರಣೆಯನ್ನು ಮುಂದುವರಿಸಿರುವ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಗುರುವಾರ ಎರಡು ಸ್ಥಳಗಳಲ್ಲಿ ಒಟ್ಟು 40.57 ಕೋಟಿ ರೂಪಾಯಿ ಮೌಲ್ಯದ ತನ್ನ ಆಸ್ತಿಯನ್ನು ಮರುವಶಕ್ಕೆ ಪಡೆದುಕೊಂಡಿದೆ.

ಉತ್ತರ ತಾಲೂಕಿನ ಯಶವಂತಪುರ ಹೋಬಳಿಯ ಉಲ್ಲಾಳು ಗ್ರಾಮದ ಸರ್ವೆ ಸಂಖ್ಯೆ 156/2 ರಲ್ಲಿನ 1 ಎಕರೆ 12 ಗುಂಟೆ ಮತ್ತು ಸರ್ವೆ ಸಂಖ್ಯೆ 156/3 ರಲ್ಲಿನ 1 ಎಕರೆ 28 ಗುಂಟೆ ಪ್ರದೇಶವನ್ನು ಬಿಡಿಎ ಬಡಾವಣೆ ನಿರ್ಮಾಣಕ್ಕೆಂದು ಸ್ವಾಧೀನ ಮಾಡಿಕೊಂಡಿತ್ತು. ಆದರೆ, ಈ ಬಗ್ಗೆ ಭೂಮಾಲೀಕರು ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದರು. ವಿಚಾರಣೆ ನಡೆಸಿದ್ದ ನ್ಯಾಯಾಲಯವು ಬಿಡಿಎ ಪರವಾಗಿ ತೀರ್ಪು ನೀಡಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸ್ ವರಿಷ್ಠಾಧಿಕಾರಿ ಭಾಸ್ಕರ್ ಮತ್ತು ಕಾರ್ಯಕಾರಿ ಎಂಜಿನಿಯರ್ ಸುಷ್ಮಾ ನೇತೃತ್ವದಲ್ಲಿ ಬಿಡಿಎ ಅಧಿಕಾರಿಗಳು ಗುರುವಾರ ಸದರಿ ಜಾಗದಲ್ಲಿ ನಿರ್ಮಾಣವಾಗಿದ್ದ ತಾತ್ಕಾಲಿಕ ಶೆಡ್ ಗಳನ್ನು ತೆರವುಗೊಳಿಸಿ ಜಾಗವನ್ನು ಬಿಡಿಎ ವಶಕ್ಕೆ ಪಡೆದುಕೊಂಡರು.

ಈ ಭೂಮಿಯ ಪ್ರಸ್ತುತ ಮಾರುಕಟ್ಟೆ ದರ 34.52 ಕೋಟಿ ರೂಪಾಯಿಗಳಾಗಿದೆ. ಮತ್ತೊಂದು ಕಾರ್ಯಾಚರಣೆಯಲ್ಲಿ ಸರ್ ಎಂ.ವಿಶ್ವೇಶ್ವರಯ್ಯ ಬಡಾವಣೆಯ 6 ನೇ ಬ್ಲಾಕ್ ನಲ್ಲಿ ನಿವೇಶನ ರಚನೆಗಾಗಿ ಭೂ ಸ್ವಾಧೀನಪಡಿ ಸಿಕೊಳ್ಳಲಾಗಿತ್ತು.

ಆದರೆ, ಉಲ್ಲಾಳು ಗ್ರಾಮದ ಸರ್ವೆ ಸಂಖ್ಯೆ 202 ರಲ್ಲಿ ಸ್ವಾಧೀನಪಡಿಸಿಕೊಳ್ಳಲಾಗಿದ್ದ 30×40 ಅಳತೆಯ 7 ನಿವೇಶನಗಳಲ್ಲಿ ಅಕ್ರಮವಾಗಿ ತಾತ್ಕಾಲಿಕ ಶೆಡ್ ಗಳನ್ನು ನಿರ್ಮಾಣ ಮಾಡಲಾಗಿತ್ತು.

ನ್ಯಾಯಾಲಯದ ಆದೇಶದಂತೆ ಈ ಶೆಡ್ ಗಳನ್ನು ತೆರವುಗೊಳಿಸಿದ ಅಧಿಕಾರಿಗಳು ಸ್ವತ್ತನ್ನು ಬಿಡಿಎ ವಶಕ್ಕೆ ಪಡೆದುಕೊಂಡರು.ಈ ನಿವೇಶನಗಳ ಪ್ರಸ್ತುತ ಮಾರುಕಟ್ಟೆ ಮೌಲ್ಯ 6.05 ಕೋಟಿ ರೂಪಾಯಿಗಳು.

ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಬಿಡಿಎ ಅಧ್ಯಕ್ಷ ಎಸ್.ಆರ್.ವಿಶ್ವನಾಥ್ ಅವರು, ವಿವಿಧ ಬಡಾವಣೆಗಳಲ್ಲಿ ಬಿಡಿಎಗೆ ಅಪಾರ ಮೌಲ್ಯದ ಸೇರಿದ ಸ್ವತ್ತುಗಳು ಒತ್ತುವರಿಯಾಗಿವೆ. ಗಣೇಶ ಹಬ್ಬಕ್ಕೆ ಮುನ್ನ ಒತ್ತುವರಿ ತೆರವು ಕಾರ್ಯಾಚರಣೆಯನ್ನು ಆರಂಭಿಸಿದ್ದೇವೆ. ಈ ಕಾರ್ಯಾಚರಣೆ ನಿರಂತರವಾಗಿ ನಡೆಯಲಿದ್ದು, ಎಷ್ಟೇ ಪ್ರಭಾವಶಾಲಿಗಳಾಗಿದ್ದರೂ ಅವರ ವಶದಲ್ಲಿರುವ ಬಿಡಿಎ ಆಸ್ತಿಯನ್ನು ವಶಪಡಿಸಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.ಈ ಕಾರ್ಯಾಚರಣೆಯಲ್ಲಿ ಡಿವೈಎಸ್ ಪಿ ಬಾಲಕೃಷ್ಣ, ಪೊಲೀಸ್ ಇನ್ಸ್ ಪೆಕ್ಟರ್ ಗಳಾದ ಶ್ರೀನಿವಾಸ್ ಮತ್ತು ಲಕ್ಷ್ಮಯ್ಯ, ಎಂಜಿನಿಯರ್ ಪ್ರಕಾಶ್ ಮತ್ತಿತರರು ಪಾಲ್ಗೊಂಡಿದ್ದರು.

Spread the love
Leave A Reply

Your email address will not be published.

Flash News