Good news for transport workers”ಸಾರಿಗೆ ಕಾರ್ಮಿಕರಿಗೆ ಗುಡ್ ನ್ಯೂಸ್..?! ಇಂದೇ ಹೊರಬೀಳಲಿದ್ಯಾ “ವಜಾ-ಅಮಾನತ್ತು ರದ್ದು” ಆದೇಶ..

ಶ್ರೀರಾಮುಲು ಸುದ್ದಿಗೋಷ್ಠಿ ಮೇಲೆ ಲಕ್ಷಾಂತರ ಸಾರಿಗೆ ಕಾರ್ಮಿಕರ ಕುತೂಹಲದ ಕಣ್ಣು-ನಿರೀಕ್ಷೆಯಂತೆ ಸಿಹಿ ಸುದ್ದಿ ನೀಡುವ ವಿಶ್ವಾಸ

0

ಬೆಂಗಳೂರು:ರಾಜ್ಯ ಸಾರಿಗೆ ಕಾರ್ಮಿಕರಿಗೆ ಸಿಹಿ ಸುದ್ದಿ ನೀಡೊಕ್ಕೆ ಸರ್ಕಾರ ಸಿದ್ಧವಿದೆ ಎನ್ನುವ ಸುದ್ದಿ ಹೊರಬಿದ್ದಿದೆ. ಸರ್ಕಾರದ ವಿರುದ್ಧವೇ ಸಿಡಿದೆದ್ದು ತೀವ್ರ ಮುಜುಗರವನ್ನುಂಟು ಮಾಡಿದ್ದ ಸಾರಿಗೆ ಕಾರ್ಮಿಕರನ್ನು ಯಾವುದೇ ಕಾರಣಕ್ಕೂ ಇಲಾಖೆಯೊಳಗೆ ಸೇರಿಸಲೇಬಾರದೆನ್ನುವ ಸಂಕಲ್ಪ ಮಾಡಿದಂತಿದ್ದ ಸರ್ಕಾರ,ಕೊನೆಗೂ ಸಾರಿಗೆ ಕಾರ್ಮಿಕರ ಪರ ಸಂವೇದನಾಶೀಲವಾಗಿ ಸ್ಪಂದಿಸಲು ಮುಂದಾಗಿದೆ ಎನ್ನಲಾಗ್ತಿದೆ.

ಕೆಲಸವನ್ನು ಮೊಟಕುಗೊಳಿಸಿ ಮುಷ್ಕರದಲ್ಲಿ ಪಾಲ್ಗೊಂಡಿದ್ದ  ಸಾರಿಗೆ ಕಾರ್ಮಿಕರನ್ನು ವಜಾ-ಅಮಾನತು  ಮಾಡಿದ ಆದೇಶವನ್ನು ವಾಪಸ್ ಪಡೆಯಲು ಸರ್ಕಾರ ನಿರ್ಧರಿಸಿದೆ ಎನ್ನಲಾಗಿದೆ. ಈ ಹಿನ್ನಲೆಯಲ್ಲಿ ಸಾರಿಗೆ ಸಚಿವ ಶ್ರೀರಾಮುಲು ಇಂದು ನಡೆಸಲಿಲಿರುವ ಸುದ್ದಿಗೋಷ್ಠಿ ಅತ್ಯಂತ ಮಹತ್ವ ಪಡೆದಿದೆ.

ಇಂದು ಮಧ್ಯಾಹ್ನ ಸಾರಿಗೆ ಸಚಿವ ಶ್ರೀರಾಮುಲು ಅವರು ಸುದ್ದಿಗೋಷ್ಠಿ ನಡೆಸಲಿದ್ದು ಈ ಸುದ್ದಿಗೋಷ್ಠಿಯಲ್ಲಿ ಮುಷ್ಕರದ ವೇಳೆ ಪಾಲ್ಗೊಂಡು ಸರ್ಕಾರಕ್ಕೆ ತೀವ್ರ ತರದ ಮುಜುಗರವನ್ನುಂಟು ಮಾಡಿದ್ದ ಕಾರಣಕ್ಕೆ ವಜಾಗೊಂಡಿದ್ದ ಮತ್ತು ಅಮಾನತುಗೊಂಡಿದ್ದ ಸಾರಿಗೆ ನೌಕರರ ವಜಾ ಆದೇಶವನ್ನು ವಾಪಸ್ ಪಡೆಯುವ ನಿರ್ಧಾರವನ್ನು ಪ್ರಕಟಿಸಲಿದ್ದಾರೆ ಎನ್ನಲಾಗಿದೆ.ಶ್ರೀರಾಮುಲು ಅವರು ಕರೆದಿರುವ ಸುದ್ದಿಗೋಷ್ಠಿಯ  ಬಗ್ಗೆ ಸಾಕಷ್ಟು ಉತ್ಸುಕರಾಗಿರುವ ಸಾರಿಗೆ ನೌಕರರು, ಇಷ್ಟು ದಿನಗಳವರೆಗೆ ಕಷ್ಟದಲ್ಲಿ ಕಡೆದಿಟ್ಟಂತಹ ನಮ್ಮ ಸಂಕಷ್ಟದ ದಿನಗಳು ದೂರವಾಗಬಹುದು ಎನ್ನುವ ನಿರೀಕ್ಷೆಯಲ್ಲಿ ಇದ್ದಾರೆ.

ಶ್ರೀರಾಮುಲು ಸಾರಿಗೆ ಸಚಿವರಾಗಿ ಅಧಿಕಾರ ವಹಿಸಿಕೊಂಡ ದಿನವೇ ಸಾರಿಗೆ ನೌಕರರ ಈ ಪ್ರಮುಖ  ಬೇಡಿಕೆಯನ್ನು ಈಡೇರಿಸುವ ಭರವಸೆ ನೀಡಿದ್ದರು. ಕೆಲಸ ಕಳೆದುಕೊಂಡು ಅತಂತ್ರವಾಗಿರುವ ಸಾವಿರಾರು  ಸಾರಿಗೆ ಕಾರ್ಮಿಕರು ಮಾಡಿಕೊಂಡ ಮನವಿಯ ಮೇರೆಗೆ ಸರ್ಕಾರದ ಗಮನವನ್ನು ಸೆಳೆಯುವ ಭರವಸೆಯನ್ನೂ ಕೊಟ್ಟಿದ್ದರು. ಕೊಟ್ಟ ಮಾತಿನ ಅನ್ವಯವೇ ಸರ್ಕಾರದ ಮನವೊಲಿಸಲು ಯಶಸ್ವಿಯಾಗಿದ್ದಾರೆ ಎನ್ನಲಾಗಿದೆ.

ಸರ್ಕಾರವೂ ಕೂಡ ಸಾರಿಗೆ ಸಚಿವ ಶ್ರೀರಾಮುಲು ಅವರ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದೆ ಎನ್ನಲಾಗಿದೆ.ಈ ಹಿನ್ನೆಲೆಯಲ್ಲಿ ಹಂತ ಹಂತವಾಗಿ ವಜಾಗೊಂಡಿರುವ ಮತ್ತು ಅಮಾನತುಗೊಂಡಿರುವ ನೌಕರರನ್ನು ಕೆಲಸಕ್ಕೆ ಸೇರ್ಪಡೆಗೊಳಿಸುವ ನಿರ್ಧಾರವನ್ನು ಕೈಗೊಂಡಿದೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಸಾರಿಗೆ ಆಡಳಿತ ಮಂಡಳಿಗಳಿಗೆ ಸೂಕ್ತ ಕ್ರಮ ಕೈಗೊಳ್ಳುವಂತೆ  ಸೂಚನೆ ನೀಡಲಿದೆ.ಹಾಗಾಗಿ ಇಂದು ನಡೆಸಲಿದ್ದಾರೆ ಎನ್ನಲಾಗಿರುವ ಸುದ್ದಿಗೋಷ್ಟಿ ಸಾಕಷ್ಟು ಕುತೂಹಲ ಮೂಡಿಸಿದೆ.

“ಸಾರಿಗೆ ಕಾರ್ಮಿಕರು ನನ್ನ ಬಳಿ ಬಂದು ತೋಡಿಕೊಂಡ ನೋವನ್ನು ಸರ್ಕಾರದ ಗಮನಕ್ಕೆ ತಂದಿದ್ದೇನೆ..ಸರ್ಕಾರ ಕೂಡ ಸಕಾರಾತ್ಮಕವಾಗಿ ಸ್ಪಂದಿಸುವ ಭರವಸೆ ಕೊಟ್ಟಿದೆ.ಉಳಿದಿದ್ದನ್ನು ಇಂದು ಮಧ್ಯಾಹ್ನದ ಸುದ್ದಿ ಗೋಷ್ಠಿಯಲ್ಲಿ ನಿರೀಕ್ಷಿಸಿ..”

ಶ್ರೀರಾಮಲು- ಸಾರಿಗೆ ಸಚಿವ (ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುವ ವೇಳೆ..)

“ಸರ್ಕಾರದ ಮೇಲೆ ತುಂಬಾ ನಿರೀಕ್ಷೆ-ಭರವಸೆ ಇಟ್ಟುಕೊಂಡಿದ್ದೇವೆ.ನಾವು ಏನೇ ಮಾಡಿದ್ರೂ ಒಂದೇ ಕುಟುಂಬವೆನ್ನುವುದು ಸರ್ಕಾರಕ್ಕೂ ಗೊತ್ತಿದೆ.ಹಾಗಾಗಿ ನಮ್ಮನ್ನು ಕ್ಷಮಿಸುವಂಥ ಔದಾರ್ಯ ತೋರಿದೆ.ಇಂದು ಮಧ್ಯಾಹ್ನ ಸಿಹಿ ಸುದ್ದಿ ಹೊರಬೀಳಬಹುದೆನ್ನುವ ಕುತೂಹದಲ್ಲಿ ನಾವಿದ್ದೇವೆ.”

ಸುರೇಶ್ ಪ್ರಭು-ವಜಾಗೊಂಡ ಸಾರಿಗೆ ಕಾರ್ಮಿಕ

Spread the love
Leave A Reply

Your email address will not be published.

Flash News