

ಬೆಂಗಳೂರು.ಬಿಬಿಎಂಪಿಯ ಮಹಾನ್ ಭ್ರಷ್ಟ ಅಧಿಕಾರಿ ಎನಿಸಿಕೊಂಡಿದ್ದ ಕೆಂಪೇಗೌಡ ನಗರ ಉಪವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರ ಪ್ರಸನ್ನ ಅಮಾನತ್ತುಗೊಳಿಸಲಾಗಿದೆ.ಬಿಬಿಎಂಪಿ ದಕ್ಷಿಣ ವಲಯದ ವ್ಯಾಪ್ತಿಯಲ್ಲಿ ವ್ಯಾಪಕವಾಗಿ ಕೇಳಿಬರುತ್ತಿದ್ದ ಅಕ್ರಮ ಕಟ್ಟಡ ನಿರ್ಮಾಣ ಕುರಿತಾದ ದೂರುಗಳ ಹಿನ್ನಲೆಯಲ್ಲಿ ಕ್ರಮ ಕೈಗೊಳ್ಳೋದನ್ನು ಬಿಟ್ಟು ಬಿಲ್ಡರ್ಸ್ ಜತೆ ಶಾಮೀಲಾಗಿ ಅಕ್ರಮಕ್ಕೆ ಸಾಥ್ ಕೊಡುತ್ತಿದ್ದ ಆರೋಪದ ಹಿನ್ನಲೆಯಲ್ಲಿ ಪ್ರಸನ್ನ ಅವರನ್ನು ಅಮಾನತುಗೊಳಿಸಲಾಗಿದೆ.
ಕೆಂಪೇಗೌಡ ನಗರ ಉಪವಿಭಾಗದಲ್ಲಿ ಅನೇಕ ವರ್ಷಗಳಿಂದ ಸಹಾಯಕ ಕಾರ್ಯಪಾಲಕ ಅಭಿಯಂತರರಾಗಿ ಕೆಲಸ ಮಾಡುತ್ತಿ ರುವ ಪ್ರಸನ್ನ,ಅಕ್ರಮ ಕಟ್ಟಡಗಳ ಬಗ್ಗೆ ಯಾವುದೇ ದೂರು ಬಂದರೂ ದೂರುದಾರರ ಪರ ಕೆಲಸ ಮಾಡೋದನ್ನು ಬಿಟ್ಟು ಬಿಲ್ಡರ್ಸ್ ನೀಡುತ್ತಿದ್ದ ಕಿಕ್ ಬ್ಯಾಕ್ ಆಸೆಗೆ ಪ್ರಕರಣಕ್ಕೆ ತಿಪ್ಪೆ ಸಾರಿಸುವ ಕೆಲಸ ಮಾಡುತ್ತಿದ್ದರೆನ್ನುವ ಆರೋಪ ಕೇಳಿಬಂದಿತ್ತು.ಅವರ ಕರ್ತವ್ಯ ಲೋಪದ ಕಾರಣಕ್ಕೆ ದಕ್ಷಿಣ ವಲಯದಲ್ಲಿ ವ್ಯಾಪಕವಾಗಿ ಅಕ್ರಮ ಕಟ್ಟಡಗಳು ತಲೆ ಎತ್ತೊಕ್ಕೆ ಕಾರಣವಾಗಿತ್ತು.
ಪ್ರಸನ್ನ ಅವರ ಅದಕ್ಷತೆ-ಅಪ್ರಾಮಾಣಿಕತೆ ಹಾಗು ಭ್ರಷ್ಟಾಚಾರದ ಬಗ್ಗೆ ದಕ್ಷಿಣ ವಲಯದ ವಿಶೇಷ ಆಯುಕ್ತೆ ತುಳಸಿ ಮದ್ದಿನೇನಿ ಅವರ ಗಮನವನ್ನು ಸೆಳೆಯಲಾಗಿತ್ತು.ಆದ್ರೆ ಮೇಡಮ್ ಅದ್ಯಾಕೋ ಪ್ರಸನ್ನ ವಿರುದ್ದ ಕ್ರಮ ಕೈಗೊಳ್ಳೊಕ್ಕೆ ಮೀನಾಮೇಷ ಎಣಿಸುತ್ತಿದ್ದರು.ತುಳಸಿ ಅವರ ನಿರ್ಲಕ್ಷ್ಯದ ಬಗ್ಗೆ ಸಾಕಷ್ಟು ಗುಮಾನಿ ಕೂಡ ವ್ಯಕ್ತವಾಗಿತ್ತು.
ಮೇಡಮ್ ಅವ್ರು ಕೂಡ ಪ್ರಸನ್ನ ಅವರ ಜತೆ ಕೈ ಜೋಡಿಸಿದ್ದಾರಾ ಎನ್ನುವಂತೆ ಜನ ಮಾತನಾಡಿಕೊಳ್ಳುವಂತಾಗಿತ್ತು.ಪ್ರಸನ್ನ ಅವರ ಬಗ್ಗೆ ಕೇಳಿಬಂದ ವ್ಯಾಪಕ ದೂರುಗಳನ್ನು ಗಂಭೀರವಾಗಿ ಪರಿಗಣಿಸಿದ ಬಿಬಿಎಂಪಿ ಆಡಳಿತ ವಿಭಾಗದ ಸಹಾಯಕ ಆಯುಕ್ತರು ತತ್ ಕ್ಷಣಕ್ಕೆ ಜಾರಿಗೆ ಬರುವಂತೆ ಪ್ರಸನ್ನ ಅವರನ್ನು ಅಮಾನತಗೊಳಿಸಿದ್ದಾರೆ.
ಕಟ್ಟಡ ನಿರ್ಮಾಣ ನಿಯಾಮವಳಿಗೆ ವ್ಯತಿರಿಕ್ತವಾಗಿ ನಕ್ಷೆ ಮಂಜೂರಾತಿ ಮಾಡಲಾದ ಸಾಕಷ್ಟು ಪ್ರಕರಣಗಳಲ್ಲಿ ಪ್ರಸನ್ನ ಸಮರ್ಪಕವಾಗಿ ಕೆಲಸ ಮಾಡದೆ ಬಿಲ್ಡರ್ಸ್ ಜತೆಗೆ ಶಾಮೀಲಾಗಿ ಪ್ರಕರಣಗಳನ್ನು ಇತ್ಯರ್ಥಗೊಳಿಸುತ್ತಿದ್ದರೆನ್ನುವ ಗಂಭೀರ ಆರೋಪವಿತ್ತು.ತನಗೆ ಬರುವ ದೂರುಗಳಲ್ಲೂ ಹಣ ಮಾಡಿಕೊಳ್ಳುವ ಕೆಟ್ಟ ಚಾಳಿಯನ್ನು ಮುಂದುವರೆಸಿದ್ದರು ಎನ್ನುವ ಮಾತಿದೆ.ಈ ಎಲ್ಲಾ ಅಂಶಗಳನ್ನು ಗಂಭೀರವಾಗಿ ಪರಿಗಣಿಸಿದ ಆಡಳಿತ ವಿಭಾಗದ ಉಪ ಆಯುಕ್ತರು ತತ್ ಕ್ಷಣಕ್ಕೆ ಪ್ರಸನ್ನ ಅವರನ್ನು ಅಮಾನತುಮಾಡಿ ಆದೇಶ ಹೊರಡಿಸಿದ್ದಾರೆ.