Electrical buses to be on Bangalore road tomorrow :ನಾಳೆಯಿಂದಲೇ ಬೆಂಗಳೂರಿನ ರಸ್ತೆಗಿಳಿಯಲಿವೆ ಎಲೆಕ್ಟ್ರಿಕಲ್ ಬಸ್: ಖಾಸಗಿ ಕಂಪೆನಿಯಿಂದಲೇ ಚಾಲಕರ ನಿಯೋಜನೆ

ಮೊದಲ ಹಂತದಲ್ಲಿ ನಮ್ಮ ಮೆಟ್ರೋಗೆ ನಿಲ್ದಾಣಗಳಿಗೆ ಸಂಪರ್ಕ ಕಲ್ಪಿಸುವ ಮಾರ್ಗದಲ್ಲಿ ಎಲೆಕ್ಟ್ರಿಕ್‌ ಬಸ್‌ ಸಂಚಾರ

0

ಬೆಂಗಳೂರು:ಬೆಂಗಳೂರು ಮಹಾನಗರ ಸಾರಿಗೆ ನಿಗಮದ ಬಹು ದಿನಗಳ ಕನಸು ನನಸಾಗಲಿದೆ.ನಾಳೆಯೇ ಇದಕ್ಕೆ ದಿವ್ಯಮುಹೂರ್ತ ಕೂಡ ನಿಗಧಿಪಡಿಸಲಾಗಿದೆ.ಬೆಳಗ್ಗೆ 10:30ಕ್ಕೆ ಕೆಂಗೇರಿ ಬಸ್ ನಿಲ್ದಾಣದಲ್ಲಿ  ಸಾರಿಗೆ ಹಾಗೂ ಕರ್ನಾಟಕ ಬುಡಕಟ್ಟು ಕಲ್ಯಾಣ ಸಚಿವರಾದ ಬಿ.ಶ್ರೀರಾಮುಲು ಎಲೆಕ್ಟ್ರಿಕಲ್ ಬಸ್ ಗಳ ಸೇವೆಗೆ ಚಾಲನೆ ನೀಡಲಿದ್ದಾರೆ.

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಮೊದಲ ವಿದ್ಯುತ್  ಬಸ್ಸಿನ ಅನಾವರಣ ನಾಳೆ ನಡೆಯಲಿದ್ದು ಉದ್ಘಾಟನೆ ನಂತರ ಸಚಿವರು ಅಧಿಕಾರಿಗಳ ಜತೆಗೆ ಅದೇ ಬಸ್ ನಲ್ಲಿ ಪ್ರದಕ್ಷಿಣೆ ಹಾಕಲಿದ್ದಾರೆ.ಅಂದ್ಹಾಗೆ ಬೆಂಗಳೂರಿನಲ್ಲಿ ಎಲೆಕ್ಟ್ರಿಕ್ ಬಸ್ ಸಂಚಾರ ಆರಂಭಿಸುವುದು ಬಿಎಂಟಿಸಿಗೆ ಅಂದುಕೊಂಡಷ್ಟು ಸುಲಭವೇನು ಆಗಿರಲಿಲ್ಲ.ಇದಕ್ಕೆ ಸಾಕಷ್ಟು ಅಡೆತಡೆಗಳಿದ್ದವು. ಅದೆಲ್ಲವನ್ನು ಮೀರಿ ಕೊನೆಗು ಬಸ್ ಗಳನ್ನು ರಸ್ತೆಗಿಳಿಸುವಲ್ಲಿ ಬಿಎಂಟಿಸಿ ಯಶಸ್ವಿಯಾಗಿದೆ.

ಬಿಎಂಟಿಸಿಗೆ ಎನ್‌ಟಿಪಿಸಿ ವಿದ್ಯುತ್ ವ್ಯಾಪಾರ ನಿಗಮ ಲಿಮಿಟೆಡ್ (ಎನ್‌ವಿವಿಎನ್) ಮತ್ತು ಜೆಎಂಬಿ ಜಂಟಿಯಾಗಿ 9 ಮೀಟರ್ ಉದ್ದದ ಬಸ್‌ಗಳನ್ನು ಪೂರೈಕೆ ಮಾಡುವ ಟೆಂಡರ್ ಪಡೆದಿವೆ. ಹವಾನಿಯಂತ್ರಿತ ವ್ಯವಸ್ಥೆ ಇಲ್ಲದಿರುವ ಬಸ್‌ಗಳು ರಸ್ತೆಗೆ ಬರಲಿವೆ. ಬಿಎಂಟಿಸಿ ಅಧಿಕಾರಿಗಳು ದೆಹಲಿಗೆ ಹೋಗಿ ಒಂದು ಸುತ್ತಿನ ಮಾತುಕತೆ ಮುಗಿಸಿದ್ದಾರೆ. ಟೆಂಡರ್ ಪಡೆದಂತೆ ಬಿಎಂಟಿಸಿಗೆ ಒಟ್ಟು 90 ಬಸ್‌ಗಳನ್ನು ಕಂಪನಿ ಪೂರೈಕೆ ಮಾಡಲಿದೆ. 2021ರ ಡಿಸೆಂಬರ್ ಅಂತ್ಯಕ್ಕೆ ಎಲ್ಲಾ ಬಸ್‌ಗಳು ನಗರಕ್ಕೆ ಆಗಮಿಸುವ ನಿರೀಕ್ಷೆ ಇದ್ದು, ಕಂಪನಿ ಸಹ ಈ ಕುರಿತು ಭರವಸೆ ಕೊಟ್ಟಿದೆ.

ಇನ್ನು ಬೆಂಗಳೂರು ಸ್ಮಾರ್ಟ್‌ ಸಿಟಿ ಯೋಜನೆಯ ಅನುದಾನದಲ್ಲಿ ಈ 90 ಬಸ್‌ಗಳನ್ನು ಗುತ್ತಿಗೆ ಮೇಲೆ ಪಡೆಯಲಾಗುತ್ತಿದೆ. ಪ್ರತಿ ಬಸ್‌ಗೆ 50 ಲಕ್ಷದಂತೆ 45 ಕೋಟಿ ಮತ್ತು ಡಿಪೋಗಳಲ್ಲಿ ಚಾರ್ಜಿಂಗ್ ಘಟಕ ಸ್ಥಾಪನೆ ಮಾಡಲು 5 ಕೋಟಿ ರೂ. ನೀಡಲಾಗುತ್ತದೆ.ಮೊದಲ ಹಂತದಲ್ಲಿ ನಮ್ಮ ಮೆಟ್ರೋಗೆ ನಿಲ್ದಾಣಗಳಿಗೆ ಸಂಪರ್ಕ ಕಲ್ಪಿಸುವ ಮಾರ್ಗದಲ್ಲಿ ಮಾತ್ರ ಎಲೆಕ್ಟ್ರಿಕ್‌ ಬಸ್‌ಗಳನ್ನು ಓಡಿಸಲಾಗುತ್ತದೆ. ಬಸ್ ಪೂರೈಕೆ ಮಾಡುವ ಕಂಪನಿಗೆ ಬಿಎಂಟಿಸಿ ಪ್ರತಿ ಕಿ. ಮೀ. ಗೆ 51.67 ರೂ. ದರವನ್ನು ಪಾವತಿ ಮಾಡಲಿದೆ. ದೇಶದ ಬೇರೆ ರಾಜ್ಯಗಳಿಗೆ ಹೋಲಿಕೆ ಮಾಡಿದರೆ ಈ ದರ ಕಡಿಮೆ ಎನ್ನಲಾಗಿದೆ.

ಬಸ್ ಪೂರೈಕೆ ಕಂಪೆನಿಯಿಂದಲೇ ಚಾಲಕರ ನಿಯೋಜನೆ: ಬಸ್‌ಗಳನ್ನು ಪೂರೈಕೆ ಮಾಡುವ ಕಂಪನಿಯೇ ಚಾಲಕರನ್ನು ನೇಮಿಸಲಿದೆ, ವೇತನ ನೀಡಲಿದೆ. ಬಸ್ ನಿರ್ವಹಣಾ ವೆಚ್ಚ, ವಿದ್ಯುತ್ ಶುಲ್ಕವನ್ನು ಭರಿಸಲಿದೆ. ಬಸ್‌ನ ನಿರ್ವಾಹಕರು ಮಾತ್ರ ಬಿಎಂಟಿಸಿ ಸಿಬ್ಬಂದಿಯಾಗಿರುತ್ತಾರೆ. ಪ್ರಾಯೋಗಿಕ ಯೋಜನೆ ಯಶಸ್ವಿಯಾದರೆ 2ನೇ ಹಂತದಲ್ಲಿ ಬಿಎಂಟಿಸಿ ಬಸ್‌ಗಳನ್ನು ಖರೀದಿ ಮಾಡಲಿದೆ.

ಮೊದಲ ಹಂತದಲ್ಲಿ ಬಿಎಂಟಿಸಿ ಕೆ. ಆರ್. ಪುರ, ಕೆಂಗೇರಿ ಮತ್ತು ಯಶವಂತಪುರ ಡಿಪೋಗಳಿಂದ ಎಲೆಕ್ಟ್ರಿಕ್ ಬಸ್ ಸಂಚಾರ ನಡೆಸಲು ಯೋಜನೆ ರೂಪಿಸಿದೆ. ಕೇಂದ್ರ ಸರ್ಕಾರದ ಬೃಹತ್ ಕೈಗಾರಿಕೆಗಳ ಸಚಿವಾಲಯ ‘ಫೇಮ್ ಇಂಡಿಯಾ-2’ ಯೋಜನೆಯ ಅನ್ವಯ ಕರ್ನಾಟಕದಲ್ಲಿ 400 ಇ-ಬಸ್ ಓಡಿಸಲು ಒಪ್ಪಿಗೆ ನೀಡಿದೆ. ಇದರಲ್ಲಿ 300 ಬಸ್ ಬೆಂಗಳೂರು ನಗರಕ್ಕೆ ಸಿಕ್ಕಿದೆ. ಗುತ್ತಿಗೆ ಆಧಾರದಲ್ಲಿ ಬಸ್ ಪಡೆದು ಓಡಿಸಲು ಕೇಂದ್ರ ಸಹಾಯಧನವನ್ನು ನೀಡಲಿದೆ. ಅಂದ್ಹಾಗೆ ನಾಳೆಯ ಕಾರ್ಯಕ್ರಮದಲ್ಲಿ ಬಿಎಂಟಿಸಿ ಅಧ್ಯಕ್ಷ ನಂದೀಶ್ ರೆಡ್ಡಿ, ಉಪಾಧ್ಯಕ್ಷ ಎಂ.ಆರ್. ವೆಂಕಟೇಶ್ ಭಾಗವಹಿಸಲಿದ್ದಾರೆ.

Spread the love
Leave A Reply

Your email address will not be published.

Flash News