BreakingMoreScrollTop NewsUncategorizedಜಿಲ್ಲೆಫೋಟೋ ಗ್ಯಾಲರಿಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ(BMTC-KSRTC)ರಾಜಕೀಯರಾಜ್ಯ-ರಾಜಧಾನಿ

INJUSTICE TO TRANSPORT EMPLYOEES:ಸಾರಿಗೆ ನಿಗಮಗಳಲ್ಲಿ ಇದೆಂಥಾ ಅನ್ಯಾಯ..?! “ಅಧಿಕಾರಿ”ಗಳಿಗಾದ್ರೆ ಅಭೂತಪೂರ್ವ “ಬೀಳ್ಕೋಡುಗೆ”..ಕೆಳ ಹಂತದ ಸಿಬ್ಬಂದಿಗೆ “ಅವಮಾನ”ದ “ನಿರ್ಗಮನ”ನಾ..?!

ಬೆಂಗಳೂರು: ಸಾರಿಗೆ ನಿಗಮಗಳಲ್ಲಿ ಕೆಳ ಹಂತದ ಕಾರ್ಮಿಕ ಸಿಬ್ಬಂದಿಗೆ ಆಗುತ್ತಿರುವ ಅನ್ಯಾಯ-ಕಿರುಕುಳ-ದೌರ್ಜನ್ಯದ ಬಗ್ಗೆ ಹೇಳೊಕ್ಕಿಂತ ಸುಮ್ಮನಿರೋದೇ ಲೇಸು ಅನ್ಸುತ್ತೆ.ಏಕೆಂದರೆ ಪ್ರತಿ ಹಂತದಲ್ಲೂ ಕೆಳ ಹಂತದ ಸಿಬ್ಬಂದಿಯನ್ನು ಜೀತದಾಳುಗಳಂತೆ ನೋಡುವ –ಟ್ರೀಟ್ ಮಾಡುವ ಕೆಟ್ಟ ಪರಂಪರೆ ಇದೆ..ಅಂತದ್ದೇ ಒಂದು ಘಟನೆಯನ್ನು ಇಲ್ಲಿ ಹೇಳಲೇಬೇಕಿದೆ.

ತಾವು ಕೆಲಸ ಮಾಡುವ ಇಲಾಖೆಯನ್ನು ತಮ್ಮ ಮನೆಗಿಂತಲೂ ಹೆಚ್ಚೆನ್ನುವ ರೀತಿಯಲ್ಲಿ ಪ್ರೀತಿಸುವ,ಅದರ ಒಳಿತು-ಉನ್ನತಿಗೆ ತಮ್ಮ ಅನುಭವವನ್ನು ಧಾರೆ ಎರೆವ ಪ್ರಾಮಾಣಿಕರಿದ್ದಾರೆ 4 ಸಾರಿಗೆ ನಿಗಮಗಳಲ್ಲಿ.ಇಲಾಖೆಯನ್ನು ತೊರೆಯುವ ನಿವೃತ್ತಿ ಎನ್ನುವುದು ಇವರ ಪಾಲಿಗೆ ಅತ್ಯಂತ ಕಠೋರ-ಕಹಿ ಸನ್ನಿವೇಶ.ಆದರೆ ನಿರ್ಗಮಿಸಬೇಕಿರುವ ಅನಿವಾರ್ಯತೆ ಪ್ರತಿಯೋರ್ವರದು.

ಪ್ರತಿಯೊಂದು ಆರಂಭಕ್ಕೆ ಅಂತ್ಯ ಇರುತ್ತೆ ಎನ್ನುವ ಹಾಗೆ ಸೇವಾವಧಿಗು ನಿವೃತ್ತಿ ಎನ್ನುವುದೊಂದಿರುತ್ತೆ.ಸಾರಿಗೆ ನಿಗಮಗಳಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ನಿವೃತ್ತಿ ವೇಳೆ ಭಾವಪೂರ್ಣ ವಿದಾಯ ಹೇಳುವ ಸತ್ ಸಂಪ್ರದಾಯವಿದೆ.ಆದ್ರೆ ಇತ್ತೀಚಿನ ದಿನಗಳಲ್ಲಿ ಆ ಸಂಪ್ರದಾಯಕ್ಕೇ ಎಳ್ಳು ನೀರು ಬಿಡುವ ಕೆಲಸ ಅಧಿಕಾರಿಗಳಿಂದ ನಡೆಯುತ್ತಿದೆ.ಅಂತಹುದೇ ಎಂದು ಘಟನೆ ಇತ್ತೀಚೆಗೆ ನಡೆದಿದೆ.

ಯಾವುದೇ ಕಾರ್ಮಿಕ ಸಿಬ್ಬಂದಿ ನಿವೃತ್ತರಾದರು ಅವರಿಗೆ ಬೀಳ್ಕೋಡಲು ಇಲಾಖೆ 3 ಸಾವಿರ ಹಣವನ್ನು ರಿಸರ್ವ್ ಮಾಡಿದೆ.ಆ ಹಣದಲ್ಲಿ ಕೆಲವು ವಸ್ತುಗಳನ್ನು ಖರೀದಿಸಿ ಆ ಬೀಳ್ಕೋಡುಗೆ ಸಂಪ್ರದಾಯವನ್ನು ಮುಗಿಸಲಾಗುತ್ತಿದೆ.ಆದ್ರೆ ಇತ್ತೀಚೆಗೆ ಆಧಿಕಾರಿಗಳು ನಿವೃತ್ತರಾದರೆ ಮಾತ್ರ ಅವರಿಗೆ ಅದ್ದೂರಿಯಾಗಿ ಬೀಳ್ಕೊಡುವ ಕೆಲಸ ನಡೆಯುತ್ತಿದೆ.ಕೆಳ ಹಂತದ ಸಿಬ್ಬಂದಿಗೆ ಮಾತ್ರ  ಆ ಬೀಳ್ಕೊಡುಗೆ ಅವಕಾಶವೇ ಸಿಗುತ್ತಿಲ್ಲ.ಇದು ಕೆಳ ಹಂತದ ಕಾರ್ಮಿಕ ಸಿಬ್ಬಂದಿಯನ್ನು ತೀವ್ರ ನಿರಾಶೆ-ನೋವಿಗೆ ಒಳಗಾಗುವಂತೆ ಮಾಡಿದೆ.

ಇತ್ತೀಚೆಗೆ ಕತ್ರಿಗುಪ್ಪೆಯ  ಬಿಎಂಟಿಸಿ ವೋಲ್ವೋ ಡಿಪೋ-13 ರಲ್ಲಿ ಕಳೆದ 20  ವರ್ಷಗಳಿಂದ ಕೆಲಸ ಮಾಡುತ್ತಿದ್ದ    ನಾಗರಾಜ್.ಗೆ ಸೇವಾನಿವೃತ್ತಿ ಘೋಷಣೆಯಾಗಿತ್ತು.31-10-2021ರಂದು ನಿವೃತ್ತರಾದ ನಾಗರಾಜ್ ಗೆ ಆತ್ಮೀಯ ಹಾಗೂ ಭಾವಪೂರ್ಣವಾದ ಬೀಳ್ಕೋಡುಗೆ ನೀಡಬಹುದೆಂದೇ ಭಾವಿಸಲಾಗಿತ್ತು.ಎಲ್ಲಕ್ಕಿಂತ ಹೆಚ್ಚಾಗಿ 20 ವರ್ಷಗಳಿಂದ ದುಡಿದ ತನ್ನನ್ನು ಆತ್ಮೀಯವಾಗಿ ಬೀಳ್ಕೋಡಲಾಗುತ್ತೆ ಎನ್ನುವ ನಿರೀಕ್ಷೆಯಲ್ಲಿ ನಾಗರಾಜ್ ಇದ್ದರು.ಆದ್ರೆ ಆದದ್ದೇ ಬೇರೆ. ಅವರಿಗೆ ಸೌಜನ್ಯಕ್ಕೆ ನಿವೃತ್ತಿಯ ದಿನದಂದು ಅಧಿಕಾರಿಗಳು ಪ್ರೀತಿಯಿಂದ ಮಾತನಾಡಿಸಲೇ ಇಲ್ಲ..ಕಾಟಾಚಾರಕ್ಕೆ ಒಂದೆರೆಡು ಮಾತನ್ನಾಡಿ ಓ.ಕೆ ಗುಡ್ ಬೈ ..ಒಳ್ಳೇದಾಗಲಿ ಎಂದು ಹೇಳಿ ಕಳುಹಿಸಿದ್ದಾರೆ.

ತನಗಾದ ಅನ್ಯಾಯ-ಅವಮಾನಕ್ಕೆ ಅಕ್ಷರಶಃ ನೊಂದುಕೊಂಡ ನಾಗರಾಜ್ ಸ್ಥಳದಲ್ಲೇ ಕಣ್ಣೀರಾಗಿದ್ದಾರೆ.ತನ್ನ 20 ವರ್ಷಗಳ ಸೇವೆಗೆ ಬೆಲೆನೇ ಇಲ್ಲವಾ..ಪ್ರಾಣ ಪಣಕ್ಕಿಟ್ಟು-ರಕ್ತ ಬೆವರನ್ನು ಒಂದಾಗಿಸಿ ಕೆಲಸ ಮಾಡಿದ್ದಕ್ಕೆ ಬಂದ ಬೆಲೆ ಇದೇನಾ..ಎಂದು ತನ್ನ ಸಹದ್ಯೋಗಿ ಮಿತ್ರರ ಬಳಿ ಹೇಳಿಕೊಂಡು ಅತ್ತಿದ್ದಾರೆ.ಸಹದ್ಯೋಗಿಗಳು ಸಮಾಧಾನಪಡಿಸಿ ಕಳುಹಿಸಿದ್ದಾರೆ.

ಆದರೆ ಇಂತಹುದೇ ನಡುವಳಿಕೆಯನ್ನು ಅಧಿಕಾರಿಗಳು ತಮ್ಮ ವಲಯದಲ್ಲಿ ಯಾರಾದರೂ ನಿವೃತ್ತರಾದ್ರೆ ಅವರ ವಿಷಯದಲ್ಲಿ ತೋರುತ್ತಾರಾ ಎನ್ನುವುದೆ ದೊಡ್ಡ ಪ್ರಶ್ನೆ.ಏಕಂದ್ರೆ ಅಧಿಕಾರಿಗಳು ಯಾರೇ ನಿವೃತ್ತರಾದರೂ ಅವರಿಗೆ ಅದ್ದೂರಿಯಾಗಿ ಬೀಳ್ಕೋಡುಗೆ ನೀಡುವ ಅಧಿಕಾರಿಗಳಿಗೆ ತಮ್ಮ ಕೆಳಗೆ ಕೆಲಸ ಮಾಡುವ ಕಾರ್ಮಿಕ ಸಿಬ್ಬಂದಿ ತಮ್ಮವರೆನಿಸುವುದಿಲ್ಲವೇ..? ಹಾಗೆ ಅನ್ನಿಸಿದಿದ್ದರೆ ಕೆಳ ಹಂತದ ಸಿಬ್ಬಂದಿ ಬಗ್ಗೆ ಇಷ್ಟೊಂದು ನಿಷ್ಕಾಳಜಿ-ನಿರ್ಲಕ್ಷ್ಯ ತೋರುತ್ತಿರಲಿಲ್ಲ ಎನ್ನುವುದು ಕೂಡ  ಸತ್ಯವಲ್ಲವೇ..?

ಸಾರಿಗೆ ಸಚಿವ ಶ್ರೀರಾಮುಲು, ಕೆಎಸ್ ಆರ್ ಟಿಸಿ ಅಧ್ಯಕ್ಷ ಚಂದ್ರಪ್ಪ,ಬಿಎಂಟಿಸಿ ಅಧ್ಯಕ್ಷ ನಂದೀಶ್ ರೆಡ್ಡಿ ಅವರಿಗ್ಯಾರಿಗೂ ಇದೆಲ್ಲಾ ಗೊತ್ತಾಗುತ್ತಿಲ್ಲವೇ..? ಅಧಿಕಾರಿಗಳು ಹಾಗು ಕೆಳ ಹಂತದ ಕಾರ್ಮಿಕ ಸಿಬ್ಬಂದಿ ನಡುವೆ ಇರುವ ದೊಡ್ಡ ಕಂದಕ ತಿಳೀತಿಲ್ವೇ..ಅವರ ನಡುವೆ ಸಮನ್ವಯ ಸಾಧಿಸುವ ಮಾತನ್ನಾಡುತ್ತಲೇ ಕಾಲಹರಣ ಮಾಡುತ್ತಿರುವ ಅವರಿಗೆ ಅದು ನಿಗಮದ ಬೆಳವಣಿಗೆ ಮೇಲೆ ಬೀರುತ್ತಿರುವ ದುಷ್ಪರಿಣಾಮಗಳ ಅರಿವಾಗುತ್ತಿಲ್ಲವೆ..? ಇದನ್ನೆಲ್ಲಾ ನೋಡಿದ್ರೆ ಅಧಿಕಾರಿ-ಕಾರ್ಮಿಕರ ನಡುವೆ ಕಂದಕ ಸೃಷ್ಟಿಯಾದರೇನೇ ತಮಗೆ ಹೆಚ್ಚು ಲಾಭ ಎಂಬ ಮನಸ್ತಿತಿಯಲ್ಲಿ ಇವರಿದ್ದಂತೆ ತೋರುತ್ತದೆ..

ಅದೇನೇ ಆಗಲಿ,ಕಾರ್ಮಿಕರು ನಿವೃತ್ತರಾದರೆ ಅವರನ್ನು ಅವಮಾನ ಮಾಡಿ ಕಳುಹಿಸುವ  ಆಡಳಿತಶಾಹಿ, ಅಧಿಕಾರಿಗಳ ನಿವೃತ್ತಿಯನ್ನು ಸಂಭ್ರಮಿಸುವ ರೀತಿಯಲ್ಲಿ ನಡೆದುಕೊಳ್ಳುತ್ತಾ ಬಂದಿರುವುದು ವಿಕೃತಿಯಲ್ಲದೇ ಇನ್ನೇನು ಅಲ್ವಾ..? 

Spread the love

Related Articles

Leave a Reply

Your email address will not be published.

Back to top button
Flash News