MoreScrollTop NewsUncategorizedಜಿಲ್ಲೆಫೋಟೋ ಗ್ಯಾಲರಿರಾಜಕೀಯರಾಜ್ಯ-ರಾಜಧಾನಿ

ತೀವ್ರ ರೋಚಕತೆಯ ಕನ್ನಡ ಸಾಹಿತ್ಯ ಪರಿಷತ್ ಗದ್ದುಗೆ ಗುದ್ದಾಟಕ್ಕೆ ತೆರೆ: ಬೆಂಗಳೂರು ನಗರಕ್ಕೆ ಪ್ರಕಾಶ್ ಮೂರ್ತಿ ಸಾರಥಿ..:ಯಾವ್ಯಾವ ಜಿಲ್ಲೆಗಳಿಗೆ ಯಾರ್ಯಾರು ಅಧ್ಯಕ್ಷರು..? ಇಲ್ಲಿದೆ ನೋಡಿ ಸಂಪೂರ್ಣ ಚಿತ್ರಣ

ಬೆಂಗಳೂರು: ಕನ್ನಡದ ಅಸ್ಮಿತೆಯನ್ನು ಎತ್ತಿ ಹಿಡಿಯುವ ಕನ್ನಡ ನಾಡು ನುಡಿಯ ಪ್ರಾತಿನಿಧಿಕ ಸಂಸ್ಥೆ ಕನ್ನಡ  ಸಾಹಿತ್ಯ ಪರಿಷತ್ ಚುನಾವಣೆ ಯಾವುದೇ ರಾಜಕೀಯ ಚುನಾವಣೆಗಿಂತ ಭಿನ್ನವಾಗಿರಲಿಲ್ಲ..ಕನ್ನಡ ಸಾಹಿತ್ಯದಲ್ಲಿ ರಾಜಕೀಯ ನುಸುಳೋಯ್ತಲ್ಲ ಎನ್ನುವ ಬೇಸರ,ಅಸಮಾಧಾನ,ಆಕ್ರೋಶ ಕಾಡಿದ್ದು ಸುಳ್ಳಲ್ಲ..ಆದ್ರೆ ಇವತ್ತು ಕನ್ನಡದ ಪರಿಚಾರಿಕೆಯನ್ನು ಮಾಡುವ ಮಟ್ಟದಲ್ಲಿ ಸಾಹಿತ್ಯದ ಬೆಳವಣಿಗೆಗಳು ಎಲ್ಲಿವೆ ಎಂದು ಪ್ರಶ್ನಿಸುವವರ ನಡುವೆ ಇದೆಲ್ಲವೂ ಸಹನೀಯವೇ ಬಿಡಿ..

ನಿನ್ನೆ ನಡೆಸ ಕನ್ನಡ ಸಾಹಿತ್ಯ ಪರಿಷತ್ ಚುನಾವಣೆಗೆ ಕೋಟ್ಯಾಂತರ ಖರ್ಚು ಮಾಡಿದರೆನ್ನುವುದು ಸುಳ್ಳಲ್ಲ.ಮತದಾರರನ್ನು ಸೆಳೆಯೊಕ್ಕೆ ಒಬ್ಬ ರಾಜಕೀಯ ಪುಡಾರಿ ಎನಿಸಿಕೊಂಡಾತ ಮಾಡುವಂಥ ಪ್ರಯತ್ನಗಳನ್ನೆಲ್ಲಾ ಸಾಕಷ್ಟು ಸ್ಪರ್ಧಾಕಾಂಕ್ಷಿಗಳು ಮಾಡಿದ್ದು ಸುಳ್ಳಲ್ಲ..ಇದರಲ್ಲಿ ಕೆಲವರು ಗೆದ್ದರು..ಕೆಲವರಿಗೆ ಅದು ಸಾಧ್ಯವಾಗಲಿಲ್ಲ.ಹೇಗೋ..ಏನೋ ನಡೆದು ಹೋಗಬೇಕಿದ್ದ ಒಂದು ಸಾಮಾನ್ಯ ಪ್ರಕ್ರಿಯೆಯಂತೆ ಎಲ್ಲವೂ ಮುಗಿದೋಯಿತು.

ಮೂರರಿಂದ ಐದು ವರ್ಷಗಳಿಗೆ ವಿಸ್ತರಣೆಗೊಂಡ ಬಳಿಕ ನಡೆದ ಮೊದಲ ಚುನಾವಣೆ ಇದೆನ್ನುವುದು ಗಮನಾರ್ಹ. ಜಿಲ್ಲಾಮಟ್ಟದ ಅಧ್ಯಕ್ಷರ ಫಲಿತಾಂಶ ಮೊದಲಿಗೆ ಒಂದೊಂದಾಗಿ  ಹೊರಬಿತ್ತು.ಈ ಪೈಕಿ ಯಾವ್ಯಾವ ಜಿಲ್ಲೆಗಳಿಗೆ ಯಾರೆಲ್ಲಾ ನೂತನ ಅಧ್ಯಕ್ಷರಾಗಿ ಆಯ್ಕೆಯಾದರೆನ್ನುವುದರ ಮಾಹಿತಿ ಕೆಳಕಂಡಂತಿದೆ.

ಬೆಂಗಳೂರು ನಗರ ಜಿಲ್ಲೆ:ಮೂರನೇ ಯತ್ನದಲ್ಲಿ ಗೆದ್ದು ಬೀಗಿದ ಪ್ರಕಾಶ್ ಮೂರ್ತಿ:ರಾಜ್ಯದ ಪೈಕಿ ಅತೀ ಹೆಚ್ಚು ಮತದಾರರನ್ನು ಹೊಂದಿರುವ ಹೆಗ್ಗಳಿಕೆ ಬೆಂಗಳೂರು ನಗರ ಜಿಲ್ಲೆಯದು.ಎಲ್ಲಾ ಜಿಲ್ಲೆಗಳಿಗಿಂತ ತುಂಬಾ ಪ್ರತಿಷ್ಟಿತವಾದ ಜಿಲ್ಲೆಯಿದು.ಹಾಗಾಗಿ ಉಳಿದೆಡೆಗಿಂತ ಸಹಜವಾಗಿ ಇಲ್ಲಿ ಪೈಪೋಟಿ-ಹಣಾಹಣಿ-ರೋಚಕತೆ ಇದ್ದೇ ಇರುತ್ತೆ.ಅದರಂತೆಯೇ ನಿನ್ನೆ ಎಲ್ಲವೂ ನಡೆಯಿತು.

ಕಳೆದ ಹಾಗೂ ಅದಕ್ಕೂ ಹಿಂದಿನ ಬಾರಿಯ ಪರಾಜಿತ ಅಭ್ಯರ್ಥಿ  ಎಂ.ಪ್ರಕಾಶ ಮೂರ್ತಿ ಈ ಬಾರಿ ಅನಾಯಾಸ ಗೆಲವನ್ನು ದಕ್ಕಿಸಿಕೊಂಡರು. ಎಂ. ತಿಮ್ಮಯ್ಯ  ಹಾಗೂ ಎಂ. ಪ್ರಕಾಶ ಮೂರ್ತಿ  ನಡುವಿನ  ನೇರ ಹಣಾಹಣಿಯಲ್ಲಿ ಬೆಂಗಳೂರು ನಗರ ಜಿಲ್ಲೆ ವ್ಯಾಪ್ತಿಯಲ್ಲಿ ಒಟ್ಟು ಚಲಾವಣೆಯಾದ 10,538 ಮತಗಳಲ್ಲಿ ಬಹುತೇಕ ಮತಗಳನ್ನು ಪಡೆದು ಗೆಲವು ಸಾಧಿಸಿದ್ದಾರೆ. ಈ ಹಿಂದೆ ಎರಡು ಬಾರಿ ಸ್ಪರ್ಧಿಸಿದ್ದ ಎಂ. ತಿಮ್ಮಯ್ಯ ಮೂರನೇ ಬಾರಿ ಸೋಲುವಂತಾಯಿತು.ಅವರೇ ಇದು ತನ್ನ ಕೊನೆಯ ಸೆಣಸಾಟ ಎಂದಿದ್ದರು.

ಸದ್ಭಾವನಾ ಪ್ರತಿಷ್ಠಾನದ ಅಧ್ಯಕ್ಷರಾಗಿರುವ ಎಂ. ಪ್ರಕಾಶಮೂರ್ತಿ ಅವರು, ಪ್ರಕಾಶಕ–ಸಂಪಾದಕರಾಗಿಯೂ ಸಾಂಸ್ಕೃತಿಕ ವಲಯದಲ್ಲಿ ಗುರುತಿಸಿಕೊಂಡಿದ್ದಾರೆ. ವಿವಿಧ ಸಾಂಸ್ಕೃತಿಕ ಸಂಸ್ಥೆಗಳಲ್ಲಿ ಹಲವು ಹುದ್ದೆಗಳನ್ನು ನಿಭಾಯಿಸಿದ ಅನುಭವ ಹೊಂದಿದ್ದಾರೆ. ಎ.ಬಿ. ಮಾರೇಗೌಡ ಹಾಗೂ ಎಚ್‌.ಆರ್. ಲಕ್ಷ್ಮಮ್ಮ ದಂಪತಿ ಪುತ್ರರಾದ ಇವರು, ಬಿ.ಎ ಹಾಗೂ ಡಿ.ಎಂ.ಇ ವಿದ್ಯಾರ್ಹತೆ ಹೊಂದಿದ್ದಾರೆ. ಇವರ ತಂದೆ ಶಿಕ್ಷಕರಾಗಿದ್ದರು. ಬಾಲ್ಯದಿಂದಲೇ ಸಾಂಸ್ಕೃತಿಕ ಹಾಗೂ ಸಾಮಾಜಿಕ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು.

2-ದಕ್ಷಿಣ ಕನ್ನಡ ಕಸಾಪಗೆ ಶ್ರೀನಾಥ್ ರಾಯಭಾರಿ: ದಕ್ಷಿಣ ಕನ್ನಡ ಜಿಲ್ಲಾ ಸಾಹಿತ್ಯ ಪರಿಷತ್ ನೂತನ ಅಧ್ಯಕ್ಷರಾಗಿ ಉಪನ್ಯಾಸಕ, ಲೇಖಕ ಎಂ.ಪಿ.ಶ್ರೀನಾಥ್ ಆಯ್ಕೆಯಾಗಿದ್ದಾರೆ.ಮಂಗಳೂರು ಅಲ್ಲದೆ ಮೂಡುಬಿದಿರೆ, ಬಂಟ್ವಾಳ, ಪುತ್ತೂರು, ಸುಳ್ಯ, ಬೆಳ್ತಂಗಡಿ, ಕಡಬ ತಾಲೂಕು ಕಚೇರಿ, ಮೂಲ್ಕಿ ನಗರ ಪಂಚಾಯಿತಿ, ವಿಟ್ಲ ಪಟ್ಟಣ ಪಂಚಾಯಿತಿ, ಕೊಕ್ಕಡ ನಾಡ ಕಚೇರಿಯಲ್ಲಿ ನಡೆದ ಮತದಾನದಲ್ಲಿ ಉಪನ್ಯಾಸಕ ಶ್ರೀನಾಥ್ ತಮ್ಮ ಎದುರಾಳಿ ಮಂಗಳೂರು ವಿಮಾನ ನಿಲ್ದಾಣದ ಮಾಜಿ ನಿರ್ದೇಶಕ ಎಂ.ಆರ್.ವಾಸುದೇವ ಅವರನ್ನು ಮಣಿಸಿದರು.

ಶ್ರೀನಾಥ್ ಉಜಿರೆ ಎಸ್‌ಡಿಎಂ ಕಾಲೇಜಿನಲ್ಲಿ 26 ವರ್ಷಗಳಿಂದ ಕನ್ನಡ ಉಪನ್ಯಾಸಕರು. ದ.ಕ. ಜಿಲ್ಲೆಯ ಕನ್ನಡ ಸಾಹಿತ್ಯ ಪರಿಷತ್ ಗೌರವ ಕಾರ್ಯದರ್ಶಿಯಾಗಿ 2008ರಿಂದ 2021ರವರೆಗೂ ಸೇವೆ ಸಲ್ಲಿಸಿದವರು. ಬೆಳ್ತಂಗಡಿ ತಾಲೂಕಿನಲ್ಲಿ 10 ಸಾಹಿತ್ಯ ಸಮ್ಮೇಳನ ಸಂಘಟಿಸಿದ್ದಾರೆ. ಉಜಿರೆಯಲ್ಲಿ ನಡೆದ ವಿಶ್ವ ತುಳು ಸಮ್ಮೇಳನ ಸಮಿತಿ ಕಾರ್ಯದರ್ಶಿಯಾಗಿ ಕೆಲಸ ಮಾಡಿದ್ದಾರೆ. 2011ರಿಂದ 2014ರ ವರೆಗೆ ತುಳು ಸಾಹಿತ್ಯ ಅಕಾಡೆಮಿ ಸದಸ್ಯರಾಗಿದ್ದರು. ಕನ್ನಡ ಸಾಹಿತ್ಯ ಪರಿಷತ್ತಿಗೆ ದ.ಕ. ಜಿಲ್ಲೆಯಿಂದ ಸಾವಿರಕ್ಕೂ ಹೆಚ್ಚು ವೈಯುಕ್ತಿಕ ಆಜೀವ ಸದಸ್ಯರ ನೋಂದಣಿ ಮಾಡಿಸಿದ್ದಾರೆ. ಕಸಾಪ ಬೆಂಗಳೂರು ಪರೀಕ್ಷಾ ಸಲಹಾ ಸಮಿತಿ ಸದಸ್ಯರಾಗಿದ್ದರು.

3-ವಿಜಯಪುರ ಕಸಾಪಗೆ ಹಾಸಿಂಪೀರ ಸಾರಥಿ: ವಿಜಯಪುರ ಜಿಲ್ಲಾ ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿ ಹಾಸಿಂಪೀರ ವಾಲಿಕಾರ ಆಯ್ಕೆಯಾಗಿದ್ದಾರೆ.ಅವರು ಸತತ ಮೂರು ಬಾರಿ ಆಯ್ಕೆಯಾಗುವ ಮೂಲಕ ಹ್ಯಾಟ್ರಿಕ್ ಸಾಧನೆ ಮೆರೆದಿದ್ದ ಮಲ್ಲಿಕಾರ್ಜುನ ಯಂಡಿಗೇರಿ ಅವರನ್ನು ಮಣಿಸಿದ್ದಾರೆ.ಕಣದಲ್ಲಿದ್ದ ಮಲ್ಲಿಕಾರ್ಜುನ ಭೃಂಗಿಮಠ ಮೂರನೇ ಸ್ಥಾನಕ್ಕೆ ಕುಸಿದಿದ್ದಾರೆ. ಕಲ್ಲಪ್ಪ ಶಿವಶರಣ ಹಾಗೂ ಶ್ರೀಶೈಲ ಸಿದ್ದಣ್ಣ ಆಳೂರ ಎರಡಂಕಿ ಮತ ಪಡೆದಿದ್ದಾರೆ.

ಒಟ್ಟು 9745 ಮತಗಳ ಪೈಕಿ ಚಲಾವಣೆಯಾದ 5620 ಮತಗಳಲ್ಲಿ ಹಾಸಿಂಪೀರ ವಾಲಿಕಾರ 2490 ಮತ ಪಡೆದು 629 ಮತಗಳ ಅಂತರದಿಂದ ಜಯ ಸಾಧಿಸಿದ್ದಾರೆ. ಮಲ್ಲಿಕಾರ್ಜುನ ಯಂಡಿಗೇರಿ 1861, ಮಲ್ಲಿಕಾರ್ಜುನ ಭೃಂಗಿಮಠ 1176, ಕಲ್ಲಪ್ಪ ಶಿವಶರಣ 30 ಹಾಗೂ ಶ್ರೀಶೈಲ ಸಿದ್ದಣ್ಣ ಆಳೂರ 15 ಮತಗಳನ್ನು ಪಡೆದರು., 48 ಮತಗಳು ತಿರಸ್ಕೃತಗೊಂಡಿವೆ..

4-ಸಾಂಸ್ಕ್ರತಿಕ ನಗರಿ ಮೈಸೂರಿಗೆ ಮಡ್ಡೀಕೆರೆ ಗೋಪಾಲ್‌ ಅಧ್ಯಕ್ಷ: ಸಾಂಸ್ಕ್ರತಿಕ ನಗರಿ ಮೈಸೂರಿನ ಕಸಾಪಗೆ ಮಡ್ಡೀಕೆರೆ ಗೋಪಾಲ್‌ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.  2008ರಿಂದ 2011ರವರೆಗೆ ಅಧ್ಯಕ್ಷರಾಗಿದ್ದ ಅವರು ಮತ್ತೊಂದು ಅವಧಿಗೆ ಜಿಲ್ಲಾ ಕಸಾಪ ಚುಕ್ಕಾಣಿ ಹಿಡಿದಿದ್ದಾರೆ. ಅಧ್ಯಕ್ಷ ಸ್ಥಾನಕ್ಕೆ ಮೂವರು ಸ್ಪರ್ಧಿಗಳು ಕಣದಲ್ಲಿದ್ದರು.ಈ ಪೈಕಿ ಗೋಪಾಲ್ ಅವರು  2,565 ಮತ ಪಡೆದರು. ಬನ್ನೂರು ಕೆ ರಾಜು1,601, ಕೆ.ಎಸ್‌.ನಾಗರಾಜು 1,485 ಮತ ಪಡೆದರು .ಜಿಲ್ಲೆಯಲ್ಲಿರುವ  ಒಟ್ಟು 13,378 ಮತಗಳ ಪೈಕಿ ಚಲಾವಣೆಗೊಂಡಿದ್ದು 5,722. 71 ಮತಗಳು ತಿರಸ್ಕೃತಗೊಂಡವು.

5-ಗಡಿ ಜಿಲ್ಲೆ ಚಾಮರಾಜನಗರಕ್ಕೆ ಶೈಲಕುಮಾರ್ ಅಧಿಪತಿ: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ನೂತನ  ಅಧ್ಯಕ್ಷರಾಗಿ ಎಂ.ಶೈಲಕುಮಾರ್‌  ಆಯ್ಕೆಯಾಗಿದ್ದಾರೆ.ಗಡಿಜಿಲ್ಲೆಯ ಕನ್ನಡ ತೇರಿನ ಸಾರಥ್ಯವನ್ನು ಅವರು ವಹಿಸಲಿದ್ದಾರೆ. ಶೈಲಕುಮಾರ್‌ ತಮ್ಮ ಸಮೀಪದ ಪ್ರತಿಸ್ಪರ್ಧಿ ಸಿ.ಎಂ.ನರಸಿಂಹಮೂರ್ತಿ ಅವರನ್ನು 643 ಮತಗಳಿಂದ  ಸೋಲಿಸಿದ್ದಾರೆ. ‌ 4,830 ಮಂದಿ ಮತದಾರರ ಪೈಕಿ ನೆರಸಿಂಹಮೂರ್ತಿ 1,316 ಮತ ಪಡೆದರು. ಸಿ.ಎಂ.ನರಸಿಂಹಮೂರ್ತಿ 673 ಮತ ಪಡೆದರು.ನಾಗೇಶ್‌ ಸೋಸ್ಲೆ ಅವರು 150 ಮತಗಳನ್ನು ಗಳಿಸಿದರು. ತಟಸ್ಥರಾಗಿದ್ದ ಸ್ನೇಹ ಅವರಿಗೆ 22 ಮತಗಳು ಬಿದ್ದಿವೆ. 22 ಮತಗಳು ತಿರಸ್ಕೃತಗೊಂಡಿವೆ.

 6-ಚಿಕ್ಕಬಳ್ಳಾಪುರಕ್ಕೆ ಕೋಡಿ ರಂಗಪ್ಪ ನೂತನ ಸಾರಥಿ: ಚಿಕ್ಕಾಬಳ್ಳಾಪುರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿ ಪ್ರೊ.ಕೋಡಿರಂಗಪ್ಪ ಆಯ್ಕೆ ಆಗಿದ್ದಾರೆ. ಕೈವಾರ ಶ್ರೀನಿವಾಸ್ ಮತ್ತು ಪ್ರೊ.ಕೋಡಿರಂಗಪ್ಪ ಅವರ ನಡುವೆ ಅಧ್ಯಕ್ಷ ಸ್ಥಾನಕ್ಕೆ ತೀವ್ರ ಸ್ಪರ್ಧೆ ಇತ್ತು. ಈ ಹಿಂದೆ ಜಿಲ್ಲಾ ಅಧ್ಯಕ್ಷರಾಗಿದ್ದ ಶ್ರೀನಿವಾಸ್ ಮತ್ತೊಮ್ಮೆ ಆಯ್ಕೆ ಬಯಸಿದ್ದರು. ಕೋಡಿ ರಂಗಪ್ಪ ತಮಗೊಂದು ಅವಕಾಶ ನೀಡಿ ಎಂದು ಮತದಾರರನ್ನು ಕೋರಿದ್ದರು.ಅವರ ಮನವಿಗೆ ಮನ್ನಣೆ ನೀಡಿದ ಸಾಹಿತ್ಯಾಸಕ್ತತು. ಕೋಡಿ ರಂಗಪ್ಪ ಅವರಿಗೆ  3,420 ಮತ ನೀಡಿ, 2379 ಮತಗಳ ಭಾರೀ ಅಂತರದಿಂದ ಗೆಲುವಿನ ದಡ ಸೇರಿಸಿದ್ದಾರೆ. ಅವರ  ಪ್ರತಿಸ್ಪರ್ಧಿ ಕೈವಾರ ಶ್ರೀನಿವಾಸ್ 1,041ಪಡೆಯಲಷ್ಟೇ ಶಕ್ತರಾದರು.,.

ಜಿಲ್ಲೆಯ ಎಲ್ಲ ತಾಲ್ಲೂಕುಗಳಲ್ಲಿಯೂ ಕೈವಾರ ಶ್ರೀನಿವಾಸ್ ಅವರಿಗಿಂತ ಕೋಡಿ ರಂಗಪ್ಪ ಹೆಚ್ಚು ಮತಗಳನ್ನು ಪಡೆದಿದ್ದಾರೆ. ವಿವಿಧ ಸಂಘಟನೆಗಳು ಸಹ ಕೋಡಿ ರಂಗಪ್ಪ ಅವರನ್ನು ಬೆಂಬಲಿಸಿದ್ದವು.   ಜಿಲ್ಲೆಯಲ್ಲಿ ಪುಸ್ತಕ ಸಂಸ್ಕೃತಿ, ಗ್ರಂಥಾಲಯ ಮತ್ತು ಅಧ್ಯಯನ ಸಂಸ್ಕೃತಿಯನ್ನು ಬೆಳೆಸಬೇಕು. ರಾಜ್ಯ ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜಿಸುವ ಆಲೋಚನೆಯೂ ಇದೆ. ಇದಕ್ಕೆ ಸರ್ಕಾರದ ಮಟ್ಟದಲ್ಲಿ ಮಾತುಕತೆ ನಡೆಸಬೇಕು. ಜನರು ಮತ್ತು ಸರ್ಕಾರದ ಹಸಕಾರ ದೊರೆಯಬೇಕು. ಸಾಹಿತ್ಯ ಪರಿಷತ್ ಸಾಹಿತ್ಯ ಮತ್ತು ಸಾಂಸ್ಕೃತಿಕ ಅಧ್ಯಯನ ಕೇಂದ್ರವನ್ನಾಗಿ ರೂಪಿಸಬೇಕೆನ್ನುವುದು ಅವರ ಇರಾದೆ.

7-ಧಾರವಾಡಕ್ಕೆ ಅಂಗಡಿಯೇ ಅಧಿಪತಿ:ಬಾರೋ ಸಾಧನಾ ಕೇರಿಗೆ ಎಂದ ಬೇಂದ್ರೆ ಅಜ್ಜ ಅವರ ಸಾಹಿತ್ಯಿಕ ಸೊಗಡಿನ ನೆಲಕ್ಕೆ ಅಂಗಡಿ ನೂತನ ಸಾರಥಿಯಾಗಿ ಆಯ್ಕೆಯಾಗಿದ್ದಾರೆ.ತೀವ್ರ ಕುತೂಹಲ ಕೆರಳಿಸಿದ್ದ   ಕನ್ನಡ ಸಾಹಿತ್ಯ ಪರಿಷತ್  ಚುನಾವಣೆಯಲ್ಲಿ ಲಿಂಗರಾಜ ಅಂಗಡಿಗೆ ಇದು ಮೂರನೇ ಗೆಲುವಂತೆ. ಆ ಮೂಲಕ ಶಿವಾನಂದ ಗಾಳಿ ಅವರ ನಂತರ ಹ್ಯಾಟ್ರಿಕ್ ಸಾಧನೆ ಮಾಡಿದ 2ನೇ ವ್ಯಕ್ತಿಯಾಗಿ ಅಂಗಡಿ ಹೊರಹೊಮ್ಮಿದ್ದಾರೆ.

ತಮ್ಮ ಸಮೀಪದ ಪ್ರತಿಸ್ಪರ್ಧಿ ರಾಮು ಮೂಲಗಿ ಅವರಿಗಿಂತ ಕೇವಲ 24 ಮತಗಳನ್ನು ಹೆಚ್ಚು ಪಡೆದು ಅಂಗಡಿ ಅವರು ಪ್ರಯಾಸದ ಗೆಲುವು ಸಾಧಿಸಿದರು. ಹ್ಯಾಟ್ರಿಕ್ ಸಾಧನೆಯ ಕನಸು ಹೊತ್ತಿದ್ದ ಅಂಗಡಿ ಒಂದೆಡೆಯಾದರೆ, ಹೊಸಬರಿಗೆ ಅವಕಾಶ ನೀಡಿ ಎಂಬ ಕೋರಿಕೆ ಮೂಲಕ ರಾಮು ಮೂಲಗಿ ಮತ ಯಾಚಿಸಿದ್ದರು. ಲಿಂಗರಾಜ ಅಂಗಡಿ ಅವರು 1244 ಮತಗಳನ್ನು ಪಡೆದರೆ, ರಾಮು ಮೂಲಗಿ ಅವರು 1220 ಮತಗಳನ್ನು ಪಡೆದು ತೀವ್ರ ಪೈಪೋಟಿ ನೀಡಿದರು. ಕೊನೆ ಕ್ಷಣದಲ್ಲಿ ಕಣದಿಂದ ಹಿಂದೆ ಸರಿದು ರಾಮು ಮೂಲಗಿ ಅವರನ್ನು ಬೆಂಬಲಿಸಿದ ನಾಗರಾಜ ಕಿರಣಗಿ ಅವರಿಗೆ 15 , ವಿಜಯಕುಮಾರ 14 ಮತ ಪಡಡೆದರು.

8-ಹಾವೇರಿಗೆ ಲಿಂಗಯ್ಯ ಹಿರೇಮಠ ದೊರೆ:ಏಲಕ್ಕಿ ಕಂಪಿನ ನಗರಿ,ಹತ್ತಿ ನಾಡು ಹಾವೇರಿಯ ಸಾಹಿತ್ಯ ಪರಿಷತ್ ಗೆ  ಲಿಂಗಯ್ಯ ಬಿ.ಹಿರೇಮಠ ನೂತನ ಅಧ್ಯಕ್ಷರಾಗಿ ಪುನರ್‌ ಆಯ್ಕೆಯಾದರು. 2991 ಮತಗಳನ್ನು ಪಡೆದ ಲಿಂಗಯ್ಯ ಹಿರೇಮಠ ಅವರು ಸಮೀಪ ಸ್ಪರ್ಧಿ ಮಾರುತಿ ಶಿಡ್ಲಾಪುರ (1325) ಅವರಿಗಿಂತ 1666 ಮತಗಳ ಭಾರಿ ಅಂತರದಿಂದ ಗೆಲುವಿನ ನಗೆ ಬೀರಿದರು. ಪ್ರಭುಲಿಂಗಪ್ಪ ಹಲಗೇರಿ, ಈಡಿಗರ ವೆಂಕಟೇಶ ಸೇರಿದಂತೆ ಕಣದಲ್ಲಿ ಒಟ್ಟು ನಾಲ್ವರು ಅಭ್ಯರ್ಥಿಗಳಿದ್ದರು.

86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಆತಿಥ್ಯ ‘ಏಲಕ್ಕಿ ಕಂಪಿನ ನಗರಿ’ ಹಾವೇರಿಗೆ ಸಿಕ್ಕಿರುವ ಹಿನ್ನೆಲೆಯಲ್ಲಿ ಚುನಾವಣೆ ತೀವ್ರ ಕುತೂಹಲ ಕೆರಳಿಸಿತ್ತು. 2015ರಿಂದ 2021ರ ಅವಧಿಯಲ್ಲಿ ಅಧ್ಯಕ್ಷರಾಗಿದ್ದ ಲಿಂಗಯ್ಯ ಹಿರೇಮಠ ಅವರು ಎರಡನೇ ಬಾರಿಗೆ ಕಸಾಪ ಜಿಲ್ಲಾ ಘಟಕದ ಚುಕ್ಕಾಣಿಯನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

ಹಾವೇರಿ ಜಿಲ್ಲೆಯಲ್ಲಿ 8495 ಮತದಾರರಿದ್ದು, 5775 ಮತಗಳು ಚಲಾವಣೆಗೊಂಡವು. ಶೇ 67.96; ಶೇಕಡಾ ವಾರು ಮತದಾನದ ಪೈಕಿ ಲಿಂಗಯ್ಯ ಹಿರೇಮಠ; 2991, ಮಾರುತಿ ಶಿಡ್ಲಾಪುರ; 1325, ಪ್ರಭುಲಿಂಗಪ್ಪ ಹಲಗೇರಿ; 1319,ಈಡಿಗರ ವೆಂಕಟೇಶ; 87 ಮತ ಪಡೆದರು. 53 ಮತಗಳು ತಿರಸ್ಕೃತಗೊಂಡವು.

9-ಕೊಪ್ಪಳ ಜಿಲ್ಲಾ ಕಸಾಪ: ಶರಣೇಗೌಡ ಪೊಲೀಸ್ ಪಾಟೀಲ ಗೆಲುವು: ಕೊಪ್ಪಳ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಚುನಾವಣೆಯಲ್ಲಿ ಗಂಗಾವತಿಯ ಶಿಕ್ಷಕ ಶರಣೇಗೌಡ ಪೊಲೀಸ್ ಪಾಟೀಲ ಗೆಲುವು ಸಾಧಿಸಿದ್ದಾರೆ.ತಮ್ಮ  ಪ್ರತಿಸ್ಪರ್ಧಿ ಯಲಬುರ್ಗಾದ ವೀರಪ್ಪ ನಿಂಗೋಜಿ ಅವರ ವಿರುದ್ಧ 330 ಮತಗಳ ಅಂತರದಿಂದ ವಿಜಯ ಸಾಧಿಸಿದ್ದಾರೆ,.ಅಂದ್ಹಾಗೆ ಶಿಕ್ಷಣ ಕ್ಷೇತ್ರದ ಜತೆಗೆ , ಸಾಹಿತ್ಯ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದಾರೆ.ತೀವ್ರ ಕುತೂಹಲ ಕೆರಳಿಸಿದ್ದ ಚುನಾವಣೆಯಲ್ಲಿ ಪೊಲೀಸ್ ಪಾಟೀಲ ಗೆಲವು ಸಾಧಿಸಿದ್ದಾರೆ.ಈ ಮೂಲಕ ಜಿಲ್ಲೆಯಲ್ಲಿ ಸಾಹಿತ್ಯದ ಕಂಪನ್ನು ಪಸರಿಸುವ ಕೆಲಸಕ್ಕೆ ತಮ್ಮನ್ನು ತೊಡಗಿಸಿಕೊಳ್ಳಲಿದ್ದಾರೆ.

10-ಯಾದಗಿರಿ ಕನ್ನಡ ಸಾಹಿತ್ಯ ಪರಿಷತ್‌ಗೆ ಸಿದ್ದಪ್ಪ ಹೊಟ್ಟಿ ಅವಿರೋಧ ಆಯ್ಕೆ:ಯಾದಗಿರಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿಗೆ ಸಿದ್ದಪ್ಪ ಹೊಟ್ಟಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ..ಇದು ಅವರ ಹ್ಯಾಟ್ರಿಕ್ ಗೆಲುವು. ರಾಜ್ಯದಲ್ಲಿಅವಿರೋಧವಾಗಿ ಆಯ್ಕೆಯಾದ ಮೊದಲ ಅಧ್ಯಕ್ಷರೆನ್ನುವ ಖ್ಯಾತಿ ಅವರದು.

ಜಿಲ್ಲೆಯಲ್ಲಿ 4,787 ಕಸಾಪ ಸದಸ್ಯರಿದ್ದು, 1,719 ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ. ಇದರಲ್ಲಿ 1,489 ಪುರುಷ ಮತದಾರರು, 230 ಮಹಿಳಾ ಮತದಾರರು ಮತ ಚಲಾಯಿಸಿದ್ದರು. ಈ ಪೈಕಿ ಯಾದಗಿರಿ ತಾಲ್ಲೂಕಿನಲ್ಲಿ 2,310 ಮತದಾರರಲ್ಲಿ 878 ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ. ಶಹಾಪುರ ತಾಲ್ಲೂಕಿನಲ್ಲಿ 1,081 ಮತದಾರರಿದ್ದರೆ, ಅದರಲ್ಲಿ 281 ಸದಸ್ಯರು ತಮ್ಮ ಹಕ್ಕು ಚಲಾಯಿಸಿದ್ದಾರೆ. ಸುರಪುರ ತಾಲ್ಲೂಕಿನಲ್ಲಿ 717ರಲ್ಲಿ 234, ಗುರುಮಠಕಲ್‌ ತಾಲ್ಲೂಕಿನಲ್ಲಿ 227ರಲ್ಲಿ 62, ವಡಗೇರಾ ತಾಲ್ಲೂಕಿನಲ್ಲಿ 113ರಲ್ಲಿ 28, ಹುಣಸಗಿ ತಾಲ್ಲೂಕಿನಲ್ಲಿ 339 ಮತದಾರರಲ್ಲಿ 236 ಮತದಾನ ಮಾಡಿದ್ದರು.

11-ರಾಯಚೂರು ಕಸಾಪಗೆ ರಂಗಣ್ಣ ಪಾಟೀಲ ಆಯ್ಕೆ:ರಾಯಚೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಚುನಾವಣೆಯಲ್ಲಿ ರಂಗಣ್ಣ ಪಾಟೀಲ ಅಳ್ಳುಂಡಿ ಅವರು ಗೆಲುವು ಸಾಧಿಸಿದ್ದಾರೆ. ಅವರು ತಮ್ಮ ಪ್ರತಿಸ್ಪರ್ಧಿ ಭೀಮನಗೌಡ ಇಟಗಿ ಅವರ ವಿರುದ್ಧ 329 ಮತಗಳ ಅಂತರದಿಂದ ಜಯಭೇರಿ ಭಾರಿಸಿದ್ದಾರೆ. ರಂಗಣ್ಣ ಪಾಟೀಲ ದೇವದುರ್ಗ ನಿವಾಸಿಯಾಗಿದ್ದು ಸಾಹಿತ್ಯಾಭಿಮಾನಿಯಾಗಿದ್ದಾರೆ. ಕನ್ನಡ ಪರ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುತ್ತಾ ಬಂದಿದ್ದಾರೆ.ಜಿಲ್ಲೆಯಲ್ಲಿ ಕನ್ನಡ ಬೆಳೆಸುವ ಕಾಯಕದಲ್ಲಿ ಮೊದಲಿನಿಂದಲೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

12-ಶಿವಮೊಗ್ಗ ಕಸಾಪಗೆ ಡಿ ಮಂಜುನಾಥ್ ನಾಲ್ಕನೇ ಬಾರಿ ಆಯ್ಕೆ:ತೀವ್ರ  ಕುತೂಹಲ ಹುಟ್ಟಿಸಿದ ಕನ್ನಡ ಸಾಹಿತ್ಯ ಪರಿಷತ್ ಚುನಾವಣೆಯಲ್ಲಿ ಈ ಹಿಂದೆ ಮೂರು ಬಾರಿ ಕಸಾಪ ಅಧ್ಯಕ್ಷಗಾಧಿ ಅಲಂಕರಿಸಿದ ಅನುಭವ ಇರುವ ಡಿ.ಮಂಜುನಾಥ್ ಜಯಭೇರಿ ಗಳಿಸಿದ್ದಾರೆ.ಈ ಮೂಲ  4 ನೇ ಬಾರಿಗೆ ಕಸಾಪ ಜಿಲ್ಲಾಧ್ಯಕ್ಷರಾದರು. 360 ಕ್ಕೂ ಹೆಚ್ಚು ಮತ್ತಗಳಿಂದ ಅವರು ವಿಜಯಶಾಲಿಯಾಗಿದ್ದಾರೆ..ಅವರು ತಮ್ಮ ಪ್ರತಿಸ್ಪರ್ಧಿ ಮಾಜಿ ಅಧ್ಯಕ್ಷ  ಡಿ.ಬಿ.ಶಂಕರಪ್ಪರವರನ್ನು  ಸೋಲಿಸಿದರು.ಪತ್ರಕರ್ತ ಶಿ.ಜು.ಪಾಷಾ,ಗಾ.ರ ಶ್ರೀನಿವಾಸ್ ಎರಡಂಕಿ ಮತ ಪಡೆಯುವುದಕ್ಕಷ್ಟೇ ಸೀಮಿತವಾದರು.\

13-ಕಲ್ಪತರು ನಾಡಿಗೆ ಶಿವಲಿಂಗಪ್ಪ ಸಾರಥಿ:ನಡೆದಾಡುವ ದೇವರ ಸಾನಿಧ್ಯ..ಕಲ್ಪತರು ನಾಡಿನ ಹೆಗ್ಗಳಿಕೆಯ ತುಮಕೂರು ಜಿ್ಲ್ಲಾ ಕಸಾಪ ಅಧ್ಯಕ್ಷರಾಗಿ ಕೆ.ಎಸ್.ಸಿದ್ದಲಿಂಗಪ್ಪ ಆಯ್ಕೆಯಾಗಿದ್ದಾರೆ. ತಮ್ಮ ಸಮೀಪದ ಪ್ರತಿಸ್ಪರ್ಧಿ ಶೈಲಾ ನಾಗರಾಜ್ ಅವರಿಗಿಂತ 713 ಹೆಚ್ಚು ಮತ ಪಡೆದು ಗೆಲುವಿನ ನಗೆ ಬೀರಿದರು.

ತುಮಕೂರು ಜಿಲ್ಲೆಯಲ್ಲಿ ಒಟ್ಟು 5978 ಮತಗಳಿವೆ.ಇದರಲ್ಲಿ ಶೇ 46 ರಷ್ಟು  ಮತಗಳು ಚಲಾವಣೆಯಾದರೆ, ಇವುಗಳಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಸಿದ್ದಲಿಂಗಪ್ಪ ಅವರಿಗೆ ಹೆಚ್ಚು ಮತ ದೊರೆಯಿತು., ನಗರ ಪ್ರದೇಶದಲ್ಲಿ ಶ್ರೀ ಮತಿ ಶೈಲಾನಾಗರಾಜ್ ಅವರಿಗೆ ಸಿದ್ದಲಿಂಗಪ್ಪ ಅವರಿಗಿಂತ 48 ಹೆಚ್ಚು ಮತಗಳು ಬಂದವು., ಒಟ್ಟಾರೆ ಸಿದ್ದಲಿಂಗಪ್ಪ 713 ಹೆಚ್ಚು ಮತ ಪಡೆದು ಕಸಾಪ ಅಧ್ಯಕ್ಷರಾಗಿ ಆಯ್ಕೆಯಾದರು

14-ಬಾಗಲ”ಕೋಟೆ”ಗೆ ಶಿವಾನಂದ ಶೆಲ್ಲಿಕೇರಿಯೇ ಸರದಾರ: ಬಾಗಲಕೋಟೆ ಜಿಲ್ಲಾ ಕಸಾಪ ಅಧ್ಯಕ್ಷರಾಗಿ ಶಿವಾನಂದ ಶೆಲ್ಲಿಕೇರಿ ಆಯ್ಕೆ ಆಗಿದ್ದಾರೆ.ಅವರು 2,452 ಮತಗಳು ಪಡೆದು ವಿಜಯಶಾಲಿಯಾಗಿದ್ದಾರೆ. ತಮ್ಮ ಪ್ರತಿಸ್ಪರ್ದಿ ಜಿ.ಕೆ. ತಳವಾರ ವಿರುದ್ಧ 811 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.ಜಿಲ್ಲಾ ಕಸಾಪ ಚುನಾವಣೆ ತೀವ್ರ ರೋಚಕತೆಯಿಂದ ಕೂಡಿತ್ತು.

 15-ಕೊಡಗು ಕಸಾಪ ಚುನಾವಣೆಯಲ್ಲಿ ಗೆಲುವಿನ ನಗು ಬೀರಿದ ಕೇಶವ ಕಾಮತ್: ಕನ್ನಡ ಸಾಹಿತ್ಯ ಪರಿಷತ್ ಚುನಾವಣೆಯಲ್ಲಿ ಕೊಡಗು ಲೇಖಕರ ಬಳಗದ ಅಧ್ಯಕ್ಷ ಎಂ.ಪಿ.ಕೇಶವ ಕಾಮತ್ ಜಯಭೇರಿ ಬಾರಿಸಿದ್ದಾರೆ. ಪರಿಷತ್ ನ ಮಾಜಿ ಅಧ್ಯಕ್ಷ ಲೋಕೇಶ್ ಸಾಗರ್ ಸೋಲು ಅನುಭವಿಸಿದ್ದಾರೆ. ಕೊಡಗು ಜಿಲ್ಲೆಯ ಮಡಿಕೇರಿ ತಾಲ್ಲೂಕಿನ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಕೇಶವ ಕಾಮತ್ 309 ಮತಗಳಿಂದ ಜಯಗಳಿಸಿದ್ದಾರೆ. ಕೇಶವ ಕಾಮತ್ ಪ್ರತಿಸ್ಪರ್ಧಿಯಾಗಿದ್ದ ಲೋಕೇಶ್ ಸಾಗರ್ 159 ಮತಗಳನ್ನು ಗಳಿಸಿ ಸೋಲನ್ನು ಅನುಭವಿಸಿದ್ದಾರೆ.

ಇನ್ನುಳಿದ ಜಿಲ್ಲೆಗಳ  ಪರಿಷತ್ ಅಧ್ಯಕ್ಷರ ಹೆಸರು ಹಾಗೂ ವಿವರಗಳ ಮಾಹಿತಿ ಕೆಲವೇ ಗಂಟೆಗಳಲ್ಲಿ ಸಿಗಲಿದೆ.

Spread the love

Related Articles

Leave a Reply

Your email address will not be published.

Back to top button
Flash News