SHOCKING ILLEGAL ASSETS OF BBMP FDC MAYANNA: ಪತ್ನಿ-ಗುತ್ತಿಗೆದಾರರ ಹೆಸರಿನಲ್ಲಿ ಭವ್ಯ ಬಂಗಲೆ-ಪ್ರತಿಷ್ಟಿತ ಕ್ಲಬ್ ಗಳ ಸದಸ್ಯತ್ವ-ಸಿನೆಮಾ ನಿರ್ಮಾಣ,ಆಪ್ತ ನೌಕರರ ಹೆಸರಿನಲ್ಲೂ ಬೇನಾಮಿ ಆಸ್ತಿ-ಐಷಾರಾಮಿ ವಾಹನಗಳ ಮಾಲೀಕ-ದೇವಸ್ಥಾನಗಳಿಗೆ ಲಕ್ಷಾಂತರ ದೇಣಿಗೆ…

2020 ರಲ್ಲಿ ಜೋಸೆಫ್ ಎನ್ನುವವರು ನೀಡಿದ್ದ ದೂರಿನಲ್ಲಿ ಮಾಯಣ್ಣನ ಅಕ್ರಮಗಳು ಉಲ್ಲೇಖ-ಸಾಕ್ಷ್ಯ ಕ್ರೋಢೀಕರಿಸಿ ಎಸಿಬಿ ಬೇಟೆ

0
2020 ರಲ್ಲಿ ಜೊಸೇಫ್ ಎನ್ನುವವರು ಮಾಯಣ್ಣ ವಿರುದ್ದ ಎಸಿಬಿಗೆ ನೀಡಿದ್ದ ದೂರಿನ ಪ್ರತಿ
2020 ರಲ್ಲಿ ಜೊಸೇಫ್ ಎನ್ನುವವರು ಮಾಯಣ್ಣ ವಿರುದ್ದ ಎಸಿಬಿಗೆ ನೀಡಿದ್ದ ದೂರಿನ ಪ್ರತಿ

ಬೆಂಗಳೂರು:ಇಲ್ಲ..ಖಂಡಿತಾ ಇಲ್ಲ..ಅಂದುಕೊಂಡಷ್ಟು ಸಲೀಸಲ್ಲ…ಮಾಯಣ್ಣನನ್ನು ತೂಕ ಹಾಕೋದು..ಎಸಿಬಿ ಇಟ್ಟಿರುವ ಲಗ್ಗೆ ಮಾಯಣ್ಣನ ಅಕ್ರಮ ಕೋಟೆಯಲ್ಲಿ ಗೌಪ್ಯವಾಗಿದ್ದ ಸಾಕಷ್ಟು ರೋಚಕ-ಸ್ಪೋಟಕ ಸಂಗತಿಗಳ ನ್ನು ಹೊರ ಹಾಕುವಲ್ಲಿ ಯಶಸ್ವಿಯಾಗಿದೆ.ಆ ಪೈಕಿ EXCLUSIVE ಆದ ಮಾಹಿತಿಗಳು ಇಲ್ಲಿದೆ.

ಎಸಿಬಿ ದಾಳಿ ನಡೆಯುತ್ತಿದ್ದಂತೆ  ಕನ್ನಡ ಫ್ಲ್ಯಾಶ್ ನ್ಯೂಸ್ ತನಗೆ ಸಿಕ್ಕ ಫಸ್ಟ್ ಹ್ಯಾಂಡ್ ಇನ್ಫರ್ಮೇಷನ್ ಆಧರಿಸಿ ಮಾಯಣ್ಣನ ಜಾತಕವನ್ನು ಬಿಚ್ಚಿಟ್ಟಿತ್ತು.ದಾಳಿ ಮತ್ತು ಪರಿಶೀಲನೆ ಮುಂದುವರೆಯುತ್ತಿದ್ದಂತೆ ಬೆಚ್ಚಿ ಬೀಳಿಸುವಂತ ಸಾಕಷ್ಟು ಮಾಹಿತಿಗಳು ಅನಾವರಣಗೊಳ್ಳುತ್ತಿವೆ.ಮಾಯಣ್ಣನ ಭದ್ರಕೋಟೆಯಲ್ಲಿ ಅಡಗಿ ಕೂತಿದ್ದ ಅದೆಷ್ಟೋ ಅಕ್ರಮಗಳು ಅನಾವರಣಗೊಳ್ಳುತ್ತಿವೆ.ಆ ಪೈಕಿ ಕೆಲವು ಮಾಹಿತಿಗಳು ಕೆಳಕಂಡೆಂತಿವೆ.

13-05-2020 ರಂದೇ ಎಸಿಬಿಗೆ ಮಾಯಣ್ಣನ ಅಕ್ರಮಗಳ ಬಗ್ಗೆ ದೂರೊಂದನ್ನು ನೀಡಲಾಗಿತ್ತು.ಜೊಸೇಫ್ ಟಿ.ಕೆ ಎನ್ನುವವರು ನೀಡಿದ ಆ ದೂರಿನಲ್ಲೇ ಮಾಯಣ್ಣ ಅಕ್ರಮವಾಗಿ ಸಂಪಾದನೆ ಮಾಡಿದ್ದಾರೆ ಎನ್ನಲಾದ ಸಾಕಷ್ಟು ಗಳಿಕೆಯ ಉಲ್ಲೇಖವನ್ನೂ ಮಾಡಲಾಗಿತ್ತು.ರಸ್ತೆ ಮೂಲಭೂತ ಸೌಕರ್ಯ ವಿಭಾಗದಲ್ಲಿ 12 ವರ್ಷಗಳಿಂದಲೂ ಕೆಲಸ ಮಾಡುತ್ತಿರುವ ಮಾಯಣ್ಣ 20  ಕೋಟಿಗೂ ಹೆಚ್ಚಿನ ಮೌಲ್ಯದ ಅಕ್ರಮ ಆಸ್ತಿ ಸಂಪಾದನೆ ಮಾಡಿರುವುದ ನ್ನು ದಾಖಲೆಗಳ ಸಮೇತ ದೂರಿನಲ್ಲಿ ಉಲ್ಲೇಖಿಸಲಾಗಿತ್ತು.ಕನ್ನಡ ಫ್ಲ್ಯಾಶ್ ನ್ಯೂಸ್ ಗೆ ಆ ದೂರಿನ ಪ್ರತಿ ಲಭ್ಯವಾಗಿದೆ.ಆ ಒಂದಷ್ಟು ರೋಚಕ ಸಂಗತಿಗಳು ನಿಮಗಾಗಿ

ಅಂದ್ಹಾಗೆ ಬಿಬಿಎಂಪಿಯಲ್ಲಿ ಪ್ರಥಮ ದರ್ಜೆ ಗುಮಾಸ್ತರಾಗಿರುವ  ಮಾಯಣ್ಣ,ತನ್ನ ಪತ್ನಿ ಉಮಾ ಹೆಸರಿನಲ್ಲಿ ಬೆಂಗಳೂರಿನ ಉಲ್ಲಾಳದಲ್ಲಿ 4 ಅಂತಸ್ತಿನ ಭವ್ಯ ಬಂಗಲೆ ಹೊಂದಿದ್ದಾರೆ ಎನ್ನುವುದು ದೂರಿನಲ್ಲಿ ಉಲ್ಲೇಖವಾಗಿತ್ತು. ವೀರಭದ್ರ ನಗರದಲ್ಲಿ 4 ಅಂತಸ್ತಿನ ಭವ್ಯ ಬಂಗಲೆ ಮಾಲೀಕತ್ವ ಹೊಂದಿದ್ದಾರೆ.ಗುತ್ತಿಗೆದಾರ ಕಾರ್ತಿಕ್ ಗೌಡ ಎನ್ನುವವರ ಹೆಸರಿನಲ್ಲಿ ಬೇನಾಮಿಯಾಗಿ ಕತ್ರಿಗುಪ್ಪೆಯ ಗೆಲ್ಹಾಕ್ಸಿ ಆಸ್ಪತ್ರೆ ಬಳಿ ಮನೆ ನಿರ್ಮಿಸುತ್ತಿದ್ದಾರೆ ಇದರ ಮೌಲ್ಯ 6 ಕೋಟಿ ಎನ್ನುವುದನ್ನು ದೂರಿನಲ್ಲಿ ಉಲ್ಲೇಖಿಸಲಾಗಿತ್ತು.ಬಿಬಿಎಂಪಿ ಹೌಸಿಂಗ್ ಸೊಸೈಟಿಯಲ್ಲಿ ಒಂದು ನಿವೇಶನ ಹೊಂದಿದ್ದಾರೆ.ವಿಷಯ ಪರಿವೀಕ್ಷಕ ಬೊಮ್ಮೇಗೌಡ ಹೆಸರಿನಲ್ಲಿಯೂ ಅಕ್ರಮವಾಗಿ ನಿವೇಶನ ಹೊಂದಿದ್ದಾರೆ ಎನ್ನುವುದನ್ನು ದೂರಿನಲ್ಲಿ ಉಲ್ಲೇಖಿಸಲಾಗಿತ್ತು.

ಇನ್ನು ಕೆಂಗೇರಿ ಬಳಿ 2 ದುಬಾರಿ ನಿವೇಶನ ಹೊಂದಿದ್ದಾರೆ.ಚಾಮರಾಜಪೇಟೆಯಲ್ಲಿರುವ ಅನಿಕೇತನ ಕಚೇರಿ ಮಾಲೀಕತ್ವ ಕೂಡ ಬೇನಾಮಿ,ಕತ್ರಿಗುಪ್ಪೆಯಲ್ಲಿ ವಾಸವಿರುವ ಮಾಯಣ್ಣನ ಮನೆ ಬಾಡಿಗೆಯೇ ಲಕ್ಷಾಂತರ ಎಂದು ಉಲ್ಲೇಖಿಸಲಾಗಿತ್ತು. ತಾನು ಕೆಲಸ ಮಾಡುವ ಬಿಬಿಎಂಪಿ ಕಚೇರಿಯಲ್ಲಿರುವ ಬೆಲೆಬಾಳುವ ವಸ್ತುಗಳನ್ನು ಕದ್ದು ಅದನ್ನೆಲ್ಲಾ ತನ್ನ ಮನೆಗೆ ಶಿಫ್ಟ್ ಮಾಡಿಸಿಕೊಂಡಿದ್ದಾರೆಂದು ಆಪಾದಿಸಲಾಗಿತ್ತು. ತನ್ನ ಕಚೇರಿಯಲ್ಲಿ ಕೆಲಸ ಮಾಡುವ ರಶ್ಮಿ,ರೇಖಾ,ಯತೀಶ್ ಅವರ ಹೆಸರಿನಲ್ಲೂ ಬೇನಾಮಿಯಾಗಿ ಆಸ್ತಿ ಮಾಡಿದ್ದಾರೆಂದು ಆಪಾದಿಸಲಾಗಿತ್ತು.

ಶ್ರೀನಗರ ಕ್ಲಬ್,ಕಂಟ್ರಿ ಕ್ಲಬ್ ಸೇರಿದಂತೆ ಅನೇಕ ರಿಕ್ರಿಯೇಷನ್ ಕ್ಲಬ್ ಗಳಲ್ಲಿ ಮಾಯಣ್ಣ ಸದಸ್ಯತ್ವ ಹೊಂದಿದ್ದರು.ಪ್ರಸಿದ್ದ ದೇವಸ್ಥಾನಗಳಿಗೆ ಲಕ್ಷಾಂತರ ದೇಣಿಗೆ ನೀಡಿ ಅದನ್ನು ನಾಮಫಲಕದಲ್ಲಿ ಹಾಕಿಸಿಕೊಳ್ಳುವ ಕೆಟ್ಟ ಖಯಾಲಿ ಮಾಯಣ್ಣನಿಗಿದೆ,ಅಲ್ಲದೇ 10 ಕ್ಕೂ ಹೆಚ್ಚು ದುಬಾರಿ ಹಾಗೂ ಐಷಾರಾಮಿ ವಾಹನಗಳ ಮಾಲೀಕತ್ವ ಹೊಂದಿದ್ದಾರೆ ಎಂದು ಆಪಾದಿಸಿದ್ದ ಜೋಸೆಫ್ ಟಿ.ಕೆ ತನ್ನ ಪತ್ನಿ ಉಮಾ ನಿರ್ಮಾಣದಲ್ಲಿ “ಕಾಡ ಹಾದಿಗಳ ಹೂ” ಎಂಬ ಚಿತ್ರವನ್ನು ಖ್ಯಾತ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಅವರ ಮೂಲಕ ನಿರ್ದೇಶಿಸಿದ್ದರು.ಈ ಚಿತ್ರಕ್ಕೆ ಒಂದಷ್ಟು ಕೋಟಿಗಳನ್ನು ವಿನಿಯೋಗಿಸಿದ್ದಾರೆ ಎಂದು ದಾಖಲೆಗಳ ಸಮೇತ ದೂರು ನೀಡಿದ್ದರು.

2020 ರಂದು ಕೊಟ್ಟ ದೂರನ್ನು ಎಸಿಬಿ ದಾಖಲಿಸಿಕೊಂಡು ಸಾಕ್ಷ್ಯಗಳನ್ನು ಕ್ರೋಢೀಕರಿಸಿ ಸಮಯಕ್ಕಾಗಿ ಕಾಯುತ್ತಿತ್ತು ಅನ್ನಿಸುತ್ತೆ.ಆ ಕಾಲ ಇವತ್ತು ಪರಿಪಕ್ವವಾಯಿತೆನಿಸುತ್ತದೆ..ಎಲ್ಲವನ್ನು ಕೂಲಂಕುಶವಾಗಿ ಪರಿಶೀಲಿಸಿ ಮಾಯಣ್ಣನ ಕೋಟೆಗೆ ಲಗ್ಗೆ ಇಟ್ಟಿದ್ದಾರೆ.ದಾಳಿ ಮತ್ತು ಪರಿಶೀಲನೆ ಮುಂದುವರೆದಂತೆ ಮತ್ತಷ್ಟು ಮಾಹಿತಿಗಳು ಹೊರಬೀಳುವ ಸಾಧ್ಯತೆಗಳಿವೆ.

Spread the love
Leave A Reply

Your email address will not be published.

Flash News