KENCHAPPA GOWDA NEW BOSS…!! TO OKKALIGA SANGHA:ಇನ್ಮುಂದೆ ಒಕ್ಕಲಿಗ ಸಂಘದಲ್ಲಿ “ಕೆಂಚೇಗೌಡ”ರದ್ದೇ ಹವಾ..ಅಧಿಕಾರದ ಚುಕ್ಕಾಣಿ ಹಿಡಿಯುವತ್ತ ಕೆಂಚಪ್ಪ ಗೌಡ ಬಣ- 15 ರಲ್ಲಿ 10 ನ್ನು ಗೆದ್ದು ಬೀಗುತ್ತಿರುವ ಬಣ: ಘಟಾನುಘಟಿಗಳಿಗೆ ಹೀನಾಯ ಸೋಲು
ಬಣಗಳ ಮುಖಂಡರಿಗೆ ಮರ್ಮಾಘಾತ-ಅಪ್ಪಾಜಿ ಗೌಡ-ಪ್ರೊ.ನಾಗರಾಜ್ ಗೆ ಸೋಲು-ಡಾ.ಅಂಜಿನಪ್ಪಗೆ ಅತ್ಯಧಿಕ ಅಂತರದ ಗೆಲುವು
ಬೆಂಗಳೂರು: ತೀವ್ರ ಕುತೂಹಲ-ರೋಚಕತೆಯಿಂದ ಕೂಡಿದ್ದ ರಾಜ್ಯ ಒಕ್ಕಲಿಗರ ಸಂಘದ ಚುನಾವಣೆ ನಿರ್ವಿಘ್ನವಾಗಿ ನಡೆದೋಗಿದೆ..ಆದ್ರೆ ಫಲಿತಾಂಶ ಇಷ್ಟೊಂದು ಅನಿರೀಕ್ಷಿತ-ಅಚ್ಚರಿಯಿಂದ ಕೂಡಿರುತ್ತೆ ಎಂದು ಯಾರೊಬ್ಬರೂ ಊಹಿಸಿರಲಿಕ್ಕಿಲ್ಲವೇನೋ..
ಏಕಂದ್ರೆ ಹಲವು ಬಾರಿ ಗೆದ್ದು ಬೀಗಿದವರನ್ನು ಮತದಾರ ಮನೆಗೆ ಕಳುಹಿಸಿದ್ದಾನೆ.ಹೊಸ ಮುಖಗಳಿಗೆ ಮನ್ನಣೆ ಕೊಟ್ಟಿದ್ದಾನೆ.ಕೆಂಚಪ್ಪ ಗೌಡ ಬಣಕ್ಕೆ ಅಪಾರ ಬೆಂಬಲ ವ್ಯಕ್ತವಾಗಿದ್ದು ಅವರ ಬಣದ್ದೇ ಇನ್ನು ಐದು ವರ್ಷಗಳಲ್ಲಿ ಪಾರುಪತ್ಯ ನಡೆಯಲಿದೆ ಎನ್ನುವುದನ್ನು ಫಲಿತಾಂಶ ಸಾರಿ ಸಾರಿ ಹೇಳಿದೆ.
ಒಕ್ಕಲಿಗರ ಸಂಘ,ರಾಜ್ಯದ ಎರಡನೇ ಅತೀ ದೊಡ್ಡ ಸಮುದಾಯ ಎಂದೇ ಕರೆಯಿಸಿಕೊಳ್ಳುವ ಒಕ್ಕಲಿಗರ ಸ್ವಾಭಿಮಾನ-ಪ್ರತಿಷ್ಟೆಯ ಸಂಘ.ಸಂಘದ ನಿರ್ದೇಶಕ ಸ್ಥಾನಕ್ಕೆ ಆಯ್ಕೆ ಆಗಲಿಕ್ಕೆ ಕೋಟಿಗಳಲ್ಲಿ ಹಣ ಖರ್ಚು ಮಾಡಿದ್ದಾರೆನ್ನುವ ಆರೋಪವಿದೆ.
ಇದಕ್ಕೆಲ್ಲಾ ಸಂಘದಲ್ಲಿ ಕೊಳ್ಳೆ ಹೊಡೆಯೊಕ್ಕೆ ಹಣ ಇದೆ ಎನ್ನುವುದಕ್ಕಿಂತ ಸಮುದಾಯದಲ್ಲಿ ಪ್ರತಿಷ್ಟೆಯಿಂದ ಬದುಕಲು ಕಾರಣ ಎನ್ನುವುದು ಮುಖ್ಯ. ಹಾಗಾಗಿಯೇ ಕೋಟಿಗಳಿಗೂ ತಲೆಕೆಡಿಸಿಕೊಳ್ಳದೆ ಅಭ್ಯರ್ಥಿಗಳು ಈ ಬಾರಿ ಗೆಲ್ಲೊಕ್ಕೆ ಯತ್ನಿಸಿದ್ದಾರೆ ನ್ನುವುದು ಕೂಡ ಅಷ್ಟೇ ಸತ್ಯ ಅದರಲ್ಲಿ ಘಟಾನುಘಟಿಗಳು ಮಣ್ಣುಮುಕ್ಕಿದ್ದಾರೆ. ನಿರೀಕ್ಷೆಯೇ ಇರದ ಹೊಸಬರು ಗೆದ್ದು ಬಂದಿದ್ದಾರೆ.
ಈ ಬಾರಿಯ ಚುನಾವಣೆ ಹೊಸ ಯುಗಾಂತರ-ನವ ಮನ್ವಂತರಕ್ಕೆ ನಾಂದಿ ಹಾಡಿರುವುದಂತೂ ಸತ್ಯ.ಏಕಂದ್ರೆ ಬಣ ಕಟ್ಟಿಕೊಂಡ ಮುಖಂಡರುಗಳೇ ಸೋಲುಂಡಿದ್ದಾರೆ.
ಪ್ರೊ.ನಾಗರಾಜ್, ಮಾಜಿ ಅಧ್ಯಕ್ಷ ಅಪ್ಪಾಜಿಗೌಡ,ಕಾಳೇಗೌಡ ಅವರಂಥವರು ಸೋಲುಂಡು ಮನೆ ಸೇರಿದ್ದಾರೆ.ತೀವ್ರ ವಿರೋಧ-ಆರೋಪಗಳಿದ್ದಾಗ್ಯೂ ಹೊಸಬರನ್ನೇ ಕಟ್ಟಿಕೊಂಡು ತಂಡ ಕಟ್ಟಿಕೊಂಡು ಸ್ಪರ್ಧೆಗಿಳಿದಿದ್ದ ಕೆಂಚಪ್ಪ ಗೌಡ ತಾವೂ ಸೇರಿದಂತೆ ತಮ್ಮ ಬಣದ ಹಲವರನ್ನು ಗೆಲ್ಲಿಸಿಕೊಂಡು ಬರುವಲ್ಲಿ ಯಶಸ್ವಿಯಾಗಿದ್ದಾರೆ.ತಂಡದ ಕ್ಯಾಪ್ಟನ್ ಹೇಗಿರಬೇಕೆನ್ನುವುದನ್ನು ಕೆಂಚಪ್ಪ ಗೌಡ ಪ್ರೂವ್ ಮಾಡಿದ್ದಾರೆಂದ್ರೂ ಅತಿಶಯವಾಗದು.
15 ನಿರ್ದೇಶಕ ಸ್ಥಾನಗಳ ಪೈಕಿ 10 ರಲ್ಲಿ ಕೆಂಚಪ್ಪ ಗೌಡ ಅವರ ಬಣ ಗೆದ್ದು ನಗೆಯ ಕೇಕೆ ಹಾಕಿದೆ.ಕೆಂಚಪ್ಪ ಗೌಡ,ಮಾರೇಗೌಡ,ಡಾ.ನಾರಾಯಣಸ್ವಾಮಿ,ಎಲ್ ಶ್ರೀನಿವಾಸ್, ಆರ್ ಪ್ರಕಾಶ್,ದೇವರಾಜು,ವೆಂಕಟ ರಾಮೇಗೌಡ,ಅಶೋಕ್,ಸುರೇಶ್ , ಬಿ.ವಿ ರಾಜೇಗೌಡ ಅವರು ಗೆಲುವು ಸಾಧಿಸಿದ್ದಾರೆ. ಸಂಭಾವಿತ ವ್ಯಕ್ತಿ ಹಾಗೂ ಸಮುದಾಯದ ಹೆಸರಾಂತ ವೈದ್ಯರಾದ ಡಾ.ಅಂಜಿನಪ್ಪ ಅತ್ಯಧಿಕ ಮತ ಪಡೆದು ಗೆಲುವು ಸಾಧಿಸಿದ್ದಾರೆ.ಇನ್ನುಳಿದಂತೆ ಸಿನೆಮಾ ನಿರ್ಮಾಪಕ ಉಮಾಪತಿ, ಎಚ್.ಸಿ ಜಯಮುತ್ತು, ಡಿ.ಹನುಮಂತಯ್ಯ, ಎಂ.ಪುಟ್ಟಸ್ವಾಮಿ ಗೆಲವು ಸಾಧಿಸಿದ್ದಾರೆ.
15 ಸ್ಥಾನಗಳ ಪೈಕಿ 9 ರಲ್ಲಿ ಗೆಲುವು ಸಾಧಿಸಿರುವ ಕೆಂಚಪ್ಪ ಗೌಡ ಬಣಕ್ಕೆ ಅಗತ್ಯವಿರುವಷ್ಟು ಬಹುಮತ ಪಡೆಯೊಕ್ಕೆ ನಿನ್ನೆಯಿಂದಲೇ ಲೆಕ್ಕಾಚಾರ ಶುರುವಾಗಿದೆ.35 ಸ್ಥಾನಗಳ ಪೈಕಿ ಅಧಿಕಾರದ ಗದ್ದುಗೆ ಏರೊಕ್ಕೆ ಬೇಕಿರುವ ಇನ್ನಷ್ಟು ಸ್ಥಾನಗಳನ್ನು ಪಡೆಯೊಕ್ಕೆ ಪ್ರಯತ್ನ ಪ್ರಾರಂಭವಾಗಿದೆ.
ಕೆಂಚಪ್ಪ ಗೌಡ ಬಣ ಶತಾಯಗತಾಯ ಅಧಿಕಾರ ಹಿಡಿದೇ ತೀರುವ ಉಮೇದಿನಲ್ಲಿರುವುದರಿಂದ ಅದರ ಪಟ್ಟುಗಳನ್ನೂ ಚೆನ್ನಾಗಿ ಅರಿತಿರುವ ಕೆಂಚಪ್ಪ ಗೌಡ ಅಂಡ್ ಹಿಸ್ ಟೀಮ್ ಇದಕ್ಕೆ ಬೇಕಾದ ಎಲ್ಲಾ ಸಿದ್ಧತೆ ಶುರುವಿಟ್ಟುಕೊಂಡಿದೆ.