

ಬೆಂಗಳೂರು:ಕೆಲವರನ್ನು ನೋಡಿದಾಗ..ಅವರ ಕಾರ್ಯವೈಖರಿ..ಖಡಕ್ ನೆಸ್ ಗಮನಿಸಿದಾಗ ಪೊಲೀಸ್ ಅಧಿಕಾರಿ ಗಳೆಂದ್ರೆ ಹೀಗೆಯೇ ಇರಬೇಕಪ್ಪಾ ಎನಿಸುತ್ತೆ..ಪೊಲೀಸ್ ವ್ಯವಸ್ಥೆ ಬಗ್ಗೆ ನಂಬಿಕೆ-ವಿಶ್ವಾಸ ಕಳೆದೋಗುತ್ತಿರುವ ಸನ್ನಿವೇಶದಲ್ಲಿ ಹಾಗೊಂದು ವಿಶ್ವಾಸಾರ್ಹತೆಯನ್ನು ಮೂಡಿಸಿದ್ದವರಲ್ಲಿ ಸಿಂಗಂ ಖ್ಯಾತಿಯ ರವಿಚನ್ನಣ್ಣನವರ್ ಕೂಡ ಒಬ್ಬರು..ಆದರೆ ವೇದಾಂತ ಹೇಳೊಕ್ಕೆ..ಬದನೆ ತಿನ್ನೊಕ್ಕಾ ಎನ್ನುವಂತೆ ಅವರ ಬಗ್ಗೆ ಜನ ಇಟ್ಟುಕೊಂಡಿರುವ ಅಪಾರ ಪ್ರಮಾಣದ ಗೌರವ-ಘನತೆಗೆ ಧಕ್ಕೆ ತರುವಂಥ ಗಂಭೀರ ಆಪಾದನೆ ಚನ್ನಣ್ಣನವರ್ ವಿರುದ್ದ ಕೇಳಿಬಂದಿದೆ..ಅದೇ ಲಂಚಾವತಾರ.
ರವಿ ಚನ್ನಣ್ಣನವರ್.ಯೂನಿಫಾರಂ ಹಾಕಿ ನಿಂತ್ರೆ ಸಿಂಹ..ಯೂನಿಫಾರ್ಮ್ ಕಳಚಿ ಸಾರ್ವಜನಿಕ ವೇದಿಕೆಗಳಲ್ಲಿ ಮೈಕ್ ಹಿಡಿದ್ರೆ ಅತ್ಯದ್ಭುತ ವಾಗ್ಮಿ..ಬಹುಷಃ ಪೊಲೀಸ್ ಇಲಾಖೆಯಲ್ಲಿ ಇಂಥಾ ಪ್ರತಿಭಾನ್ವಿತ ಅಧಿಕಾರಿಗಳನ್ನು ನೋಡೊಕ್ಕೆ ಸಿಗೋದೇ ಅಪರೂಪ.ಕೆಲಸ ಮಾಡಿದ ಸ್ಥಳಗಳಲ್ಲೆಲ್ಲಾ ತನ್ನ ಅಸಾಧಾರಣ ಪ್ರತಿಭೆಯಿಂದಲೇ ಬೃಹತ್ ಫ್ಯಾನ್ ಫಾಲೋವರ್ಸ್ ಪಡೆದುಕೊಂಡ ಅಧಿಕಾರಿ ಎನ್ನುವ ಹೆಗ್ಗಳಿಕೆಯು ಚನ್ನಣ್ಣನವರ್ ದ್ದಾಗಿದೆ.ಆದರೆ ಬೆಳ್ಳಗಿರೋದೆಲ್ಲಾ ಹಾಲಲ್ಲ ಎನ್ನುವಂತ ಗಾಧೆ ಮಾತಿಗೆ ನಿದರ್ಶನವಾಗುವಂಥ ಆರೋಪ ಇದೀಗ ಸುದ್ದಿ ಮಾಡುತ್ತಿದೆ.

ಅಕ್ರಮ ನಡೆಸೋರ ವಿರುದ್ದ ಕ್ರಮ ಕೈಗೊಳ್ಳಿ ಎಂದು ದೂರು ಕೊಟ್ಟರೆ ಆಪಾದಿತರೊಂದಿಗೇನೆ ಶಾಮೀಲಾಗಿ ತೊಟ್ಟ ಖಾಕಿಗೆ ಕಳಂಕ ತಟ್ಟಿಸುವಂತ ಕೆಲಸ ಪೊಲೀಸ್ ಇಲಾಖೆಯಿಂದಲೇ ನಡೆಯುತ್ತಿದೆ ಎನ್ನೋದು ಇವತ್ತಿನ ಆರೋಪವಲ್ಲ.ಪೊಲೀಸ್ ದೂರು ಪ್ರಾಧಿಕಾರಕ್ಕೆ ಸಾರ್ವಜನಿಕರಿಂದ ಪೊಲೀಸ್ ಅಧಿಕಾರಿ,ಸಿಬ್ಬಂದಿ ವಿರುದ್ದ ದಾಖಲಾಗುವ ದೂರುಗಳಲ್ಲಿ ಇದರಲ್ಲಿ ಪ್ರಸ್ತಾಪ ಪದೇ ಪದೇ ಆಗುತ್ತಲೇ ಇರುತ್ತದೆ.ವಿಚಿತ್ರ ಹಾಗೂ ವಿಶೇಷ ಏನ್ ಗೊತ್ತಾ,ಇಂಥಾ ದೂರುಗಳನ್ನೆಲ್ಲಾ ಕ್ರೋಢೀಕರಿಸಿ ದೂರು ಪ್ರಾಧಿಕಾರ ಸಿದ್ದಪಡಿಸಿ ಸಲ್ಲಿಸಿರುವ ವರದಿಯಲ್ಲಿಯೇ ರವಿ ಚನ್ನಣ್ಣನವರ್ ವಿರುದ್ಧದ ಲಂಚದ ಆರೋಪದ ಪ್ರಸ್ತಾಪವಿದೆ ಎಂದು ದಿ ಫೈಲ್ ವರದಿ ಮಾಡಿದೆ.

ಅಂದ್ಹಾಗೆ ದಿ ಫೈಲ್ ಹೇಳಿಕೊಂಡಿರುವಂತೆ 2021 ರ ಸೆಫ್ಟೆಂಬರ್ 28ರಂದೇ ರವಿ ಚನ್ನಣ್ಣನವರ್ ಹಾಗೂ ಅವರ ಟೀಂ ವಿರುದ್ದ 55 ಲಂಚ ರೂ ಲಂಚ ಆರೋಪದ ದೂರು ಸಲ್ಲಿಕೆಯಾಗಿತ್ತು.ಇದನ್ನು ಗಂಭೀರವಾಗಿ ಪರಿಗಣಿಸಿದ್ದ ಮುಖ್ಯ ಕಾರ್ಯದರ್ಶಿ ರವಿ ಕುಮಾರ್ ಒಳಾಡಳಿತ ಕಾರ್ಯದರ್ಶಿಗೆ ದೂರಿನ ಬಗ್ಗೆ ಗಂಭೀರ ತನಿಖೆ ಕೈಗೊಳ್ಳುವಂತೆಯೂ ಸೂಚಿಸಿದ್ದರಂತೆ.ಏಕೆಂದರೆ ರವಿ ಚನ್ನಣ್ಣನವರ್ ಅವರ ಡೀಲ್ ಹಾಗೂ ಹಣ ವರ್ಗಾವಣೆಯ ಕುರಿತಾದ ಸಮಗ್ರ ಮಾಹಿತಿ ಇನ್ಸ್ ಪೆಕ್ಟರ್ ಶ್ರೀನಿವಾಸ್ ಹಾಗೂ ಈ ಬಗ್ಗೆ ದೂರು ನೀಡಿದ್ದ ಮಂಜುನಾಥ್ ಅವರ ಆಡಿಯೋದಲ್ಲಿಯೇ ಬಹಿರಂಗವಾಗಿದೆ ಎನ್ನಲಾಗಿದೆ.
ರವಿ ಚನ್ನಣ್ಣನವರ್ ಗೆ 25 ಲಕ್ಷ, ಡಿವೈಎಸ್ಪಿಗೆ 15 ಲಕ್ಷ ಹಾಗು ಡಿವೈಎಸ್ಪಿ ಕಚೇರಿಯಲ್ಲಿನ ಮತ್ತೋರ್ವ ಅಧಿಕಾರಿಗೆ 10 ಲಕ್ಷ ಹಣ ನೀಡಿರುವುದಾಗಿ ಅಶೋಕ್ ಎಂಬಾತ ಕಂದಪ್ಪ ಮತ್ತು ಸಂಪತ್ ಎಂಬುವವರ ಮುಂದೆ ಬಾಯ್ಬಿಟ್ಟಿರುವುದಾಗಿ ದೂರುದಾರ ಮಂಜುನಾಥ್ ತಮ್ಮ ದೂರಿನಲ್ಲಿ ವಿವರಿಸಿದ್ದಾರೆ.
ಘಟನೆ ಹಿನ್ನಲೆ:ಆನೇಕಲ್ ತಾಲೂಕಿನ ಮಾರನಾಯಕನಹಳ್ಳಿಯ ಅಶೋಕ್ ಅವರು ತಿಮ್ಮರಾಯಸ್ವಾಮಿ ಬ್ಲೂ ಮೆಟಲ್ಸ್ ಕ್ರಷರ್ ನಡೆಸುತ್ತಿದ್ದರು. ಕ್ರಷರ್ ಮುಚ್ಚುವ ಹಂತದಲ್ಲಿದೆ. ಹೊಸದಾಗಿ ಉದ್ಯಮ ನಡೆಸಲು ಮಂಜುನಾಥ್ ಅವರಿಂದ 40.00 ಲಕ್ಷ ಹಣ ಪಡೆದಿದ್ದರು. ಆದರೆ ಫ್ಯಾಕ್ಟರಿ ಮಾರಿದ್ರೆ ಅದರಲ್ಲಿ ಬರುವ ಹಣದಿಂದ ಹೊಸದಾಗಿ ಆದಿ ಬೈರವ ಬ್ಲೂ ಮೆಟಲ್ ಕ್ರಷರ್ ಉದ್ಯಮ ನಡೆಸಬಹುದು ಎಂದು ಮಂಜುನಾಥ್ ಅವರನ್ನು ನಂಬಿಸಿದ್ದರಂತೆ ಅಶೋಕ್.

ಇದನ್ನು ನಂಬಿ ಮಂಜುನಾಥ್ ತಮ್ಮ ಕಾರ್ಖಾನೆಯನ್ನು 2019ರ ಮೇ 14ರಂದು ಎಸ್ಸೆ ಕಾರ್ಪೋರೇಟ್ ಕಂಪನಿಗೆ 3.96 ಕೋಟಿ ರು.ಗಳಿಗೆ ಮಾರಾಟ ಮಾಡಿ ವೆಂಕಟೇಶನ್ ಎಂಬುವರಿಗೆ ನೋಂದಣಿ ಮಾಡಿಕೊಟ್ಟಿದ್ದರು. ಇದರಿಂದ ಬಂದ ಹಣವನ್ನು ಡಿಡಿ ರೂಪದಲ್ಲಿ ಅತ್ತಿಬೆಲೆ ಗೆಸ್ಟ್ ಲೈನ್ ಹೋಟೆಲ್ನಲ್ಲಿ ಅಶೋಕ್ ಗೆ ಎಂಬುವರಿಗೆ ನೀಡಿದ್ದರಂತೆ.
ಈ ಹಣವನ್ನು ಫಿನ್ ಕೇರ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ನಲ್ಲಿ ಹೊಸದಾಗಿ ಮಾಡಿಸಿದ್ದ ಖಾತೆಗೆ (ಖಾತೆ ಸಂಖ್ಯೆ; 19200000003520) ಜಮಾ ಮಾಡಲಾಗಿತ್ತು. ಇದಾದ 2-3 ದಿನಗಳ ನಂತರ ಅಶೋಕ್ ಎಂಬಾತ ‘ ಅಷ್ಟು ಹಣ ನಿನ್ನ ಖಾತೆಯಲ್ಲಿದ್ದರೆ ನಿನಗೆ ಐ ಟಿ ಯಿಂದ ತೊಂದರೆಯಾಗುತ್ತದೆ. ಆದ್ದರಿಂದ ನಾನು ಹೇಳಿದವರ ಖಾತೆಗಳಿಗೆ ಹಣವನ್ನು ವರ್ಗಾವಣೆ ಮಾಡಿಸು ಎಂದು ನಂಬಿಸಿದ್ದನಂತೆ.
ಅದರಂತೆ ಸುಬ್ರಮಣಿ ಅವರ ಇಂಡಿಯನ್ ಬ್ಯಾಂಕ್ ಖಾತೆಗೆ 35 ಲಕ್ಷ, ಅತ್ತಿಬೆಲೆ ಕರೂರು ವೈಶ್ಯ ಬ್ಯಾಂಕ್ನ ಎಬಿಆರ್ ಬಾರ್ ಅಂಡ್ ರೆಸ್ಟೋರೆಂಟ್ ಖಾತೆಗೆ 25 ಲಕ್ಷ, ಮಾಯಸಂದ್ರ ಸಿಂಡಿಕೇಟ್ ಬ್ಯಾಂಕ್ನಲ್ಲಿ ಮಂಗಳ ಅವರಿಗೆ 25 ಲಕ್ಷ, ಹೊಸೂರಿನ ಕೆನರಾ ಬ್ಯಾಂಕ್ನಲ್ಲಿ ಶಿವಶಂಕರ್ ಎಂಬುವರಿಗೆ 60 ಲಕ್ಷ ರು., ಹೊಸೂರಿನಲ್ಲಿದ್ದ ಫೆಡರಲ್ ಬ್ಯಾಂಕ್ನಲ್ಲಿ ಬೆಸ್ಟ್ ಎಲೆಕ್ಟ್ರಿಕಲ್ ಹೊಂದಿದ್ದ ಖಾತೆಗೆ 35 ಲಕ್ಷ ರು ಜಮಾ ಮಾಡಿದ್ದರಂತೆ.
ಅಷ್ಟೇ ಅಲ್ಲ, ಉಮಾ ಎಂಬುವರ ಖಾತೆಗೆ 5 ಲಕ್ಷ, ಕೆ ರೇಣುಕ ಎಂಬುವರು ಹೊಂದಿದ್ದ ಲಕ್ಷ್ಮಿ ವಿಲಾಸ್ ಬ್ಯಾಂಕ್ ಖಾತೆಗೆ 1.30 ಕೋಟಿ, ಮಂಜುನಾಥ್ ಎಂಟರ್ ಪ್ರೈಸೆಸ್ಗೆ 8 ಲಕ್ಷ, ಗೀತಾ ಶೈಲೇಶ್ ಪಾಟೀಲ್ ಅವರ ಖಾತೆಗೆ 4 ಲಕ್ಷ, ಚೇತನ್ ಶೈಲೇಶ್ ಪಾಟೀಲ್ ಖಾತೆಗೆ 4 ಲಕ್ಷ.ಹೀಗೆ ಒಟ್ಟು 3.96 ಕೋಟಿ ರು.ಗಳನ್ನು ಆರ್ಟಿಜಿಎಸ್ ಮುಖಾಂತರ ಮಂಜುನಾಥ್ ಟ್ರಾನ್ಸ್ ಫರ್ ಮಾಡಿದ್ದರಂತೆ.
ಆದರೆ ನಂತರದಲ್ಲಿ ಅಶೋಕ್ ಮಾಡಿದ ವಂಚನೆ ವಿರುದ್ಧ ಅನ್ಯಾಯಕ್ಕೊಳಗಾದ ಮಂಜುನಾಥ್ ತಮಗೆ ನ್ಯಾಯ ದೊರಕಿಸಿಕೊಡುವಂತೆ ಹಿಂದೆ ಗ್ರಾಮಾಂತರ ಎಸ್ಪಿಯಾಗಿದ್ದ ಈಗಿನ ಸಿಐಡಿ ಎಸ್ಪಿ ರವಿ.ಡಿ.ಚನ್ನಣ್ಣನವರ್ ಗೆ ಮನವಿ ಮಾಡಿದ್ದರಂತೆ. ನ್ಯಾಯ ದೊರಕಿಸಿಕೊಡುವುದಾಗಿ ಹೇಳಿ ಆಪಾದಿತರ ಮೇಲೆ ಎಫ್ ಐ ಆರ್ ದಾಖಲಿಸಲು ಲಂಚ ಪಡೆದಿದ್ದಾರೆನ್ನುವ ಗಂಭೀರ ಆಪಾದನೆಯನ್ನು ಮಂಜುನಾಥ್ ಮಾಡಿದ್ದಾರೆ.
ಕಷ್ಟದಲ್ಲಿದ್ದರೂ ಅವರು ಕೇಳಿದಷ್ಟು ಹಣವನ್ನು ಕೊಟ್ಟಿದ್ದೇನೆ.ಇದಕ್ಕೆ ಸಂಬಂಧಿಸಿದ ಎಲ್ಲಾ ಸಾಕ್ಷ್ಯಗಳು ನನ್ನ ಬಳಿ ಇವೆ.ಯಾವುದೇ ರೀತಿಯ ತನಿಖೆ–ವಿಚಾರಣೆ ನಡೆದರೂ ಅದನ್ನು ಸಾಕ್ಷ್ಯಸಮೇತ ಎದುರಿಸಲು ಸಿದ್ಧ ಎಂದಿರುವ ಮಂಜುನಾಥ್ ಅವರ ದೂರಿನಿಂದಾಗಿ ರವಿ ಚನ್ನಣ್ಣನವರ್ ಬಗ್ಗೆ ಸಾರ್ವಜನಿಕವಾಗಿ ಇದ್ದ ವಿಶ್ವಾಸಾರ್ಹತೆಗೆ ಧಕ್ಕೆ ಬಂದಿದೆ.ಬಾಯಲ್ಲಿ ಸಿದ್ದಾಂತ–ನೈತಿಕತೆ ಬಗ್ಗೆ ಉದ್ದುದ್ದದ ಭಾಷಣ ಬಿಗಿಯುವ ಚನ್ನಣ್ಣನವರ್ ನಿಜವಾಗಿ ಹೀಗಾ..ಛೀ..ಎಂದು ಜನ ಅಸಹ್ಯಪಡುವಂತಾಗಿದೆ. ದೂರಿನ ಸತ್ಯಾಸತ್ಯತೆ ಬಯಲಾಗಬೇಕಾದ್ರೆ ಒಂದು ನಿಷ್ಪಕ್ಷಷಪಾತ ತನಿಖೆ ನಡೆಯಲೇಬೇಕಿದೆ.ಯಾರು ಸಾಚಾ..ಯಾರು ನಿಕಮ್ಮ ಎನ್ನುವುದು ಬಯಲಾಗೋದೇ ಆಗ..