ಬೆಂಗಳೂರು:ಹಸಿದವನ ಗೋಳು-ಸಂಕಷ್ಟ ಹಸಿದವನಿಗೇ ಗೊತ್ತಾಗೋದು ಎನ್ನುತ್ತಾರೆ.ಕೆಲಸ ಕಳೆದುಕೊಂಡು ಹತ್ತಿರತ್ತಿರ 10 ತಿಂಗಳಾದ್ರೂ ಸರ್ಕಾರವಾಗಲಿ, ಸಾರಿಗೆ ಸಚಿವ ಶ್ರೀರಾಮುಲು ಅವರಾಗಲಿ, ಸಾರಿಗೆ ಕಾರ್ಮಿಕರ ಗೋಳನ್ನು ಕೇಳದಂತಾಗಿದ್ದಾರೆ.
ಕೆಲಸವಿಲ್ಲದೆ ಅವರ ಜೀವನ,ಅವರನ್ನು ಅವಲಂಭಿಸಿರುವಂಥವರ ಬದುಕು ಹೇಗಿರಬಹುದು..?ತಿನ್ನೊಕ್ಕೆ..ಉಡೊಕ್ಕೆ ಏನ್ ಮಾಡಿಕೊಂಡಿದ್ದಾರೆ.ಅವರ ಮಕ್ಕಳ ಶಿಕ್ಷಣ-ಮದುವೆ-ತಿಂಗಳ ದಿನಸಿ, ಕೇಬಲ್ ಬಿಲ್,.ಎಲೆಕ್ಟ್ರಿಕಲ್ ಬಿಲ್ ಕಥೆ ಏನು..? ಇದೆಲ್ಲದರ ಬಗ್ಗೆ ಒಮ್ಮೆಯಾದರೂ ಆಲೋಚಿಸುವ,ಪ್ರಶ್ನಿಸುವ ಕೆಲಸವನ್ನು ಜವಾಬ್ದಾರಿಯುತ ಸ್ಥಾನದಲ್ಲಿರುವವರು ಮಾಡುತ್ತಿದ್ದಾರಾ..? ಖಂಡಿತಾ ಇಲ್ಲ..ಇಂಥದ್ದರಲ್ಲಿ ಓರ್ವ ಕೆಲಸ ಕಳೆದುಕೊಂಡ ನೌಕರನೇ ವಜಾಗೊಂಡು ಸಂಕಷ್ಟದಲ್ಲಿರುವ ಕಾರ್ಮಿಕರ ಬೆನ್ನಿಗೆ ನಿಂತು ಆಪದ್ಬಾಂಧವನಂತಾಗಿದ್ದಾನೆ.
ಸರ್ಕಾರದ ಕೆಂಗಣ್ಣಿಗೆ ಗುರಿಯಾಗಿ ಕೆಲಸವಿಲ್ಲದೆ 10 ತಿಂಗಳಿಂದ ಬೀದಿಗೆ ಬಿದ್ದಿರುವ 2865 ಸಾರಿಗೆ ಕಾರ್ಮಿಕರ ಜೀವನ ಅಕ್ಷರಶಃ ನರಕವಾಗ್ಹೋಗಿದೆ.ಅಸಹನೀಯವಾಗಿರುವ ಅವರ ಬದುಕುಗಳನ್ನು ಸುಧಾರಿಸುವಂಥ ಕೆಲಸವನ್ನೂ ಸರ್ಕಾರವಾಗಲಿ,ಸಾರಿಗೆ ಇಲಾಖೆಯಾಗಲಿ ಮಾಡುತ್ತಿಲ್ಲ. ಎಂಥಾ ಷರತ್ತುಗಳಿಗೂ ಬದ್ಧರಾಗಿದ್ದುಕೊಂಡು ಕೆಲಸ ಮಾಡೊಕ್ಕೆ ಸಿದ್ಧ ಎಂದು ಸಾರಿಗೆ ಕಾರ್ಮಿಕರು ಹೇಳುತ್ತಿದ್ದರೂ ಅವರನ್ನು ಕೆಲಸಕ್ಕೆ ಮರು ನಿಯೋಜಿಸಿಕೊಳ್ಳೊಕ್ಕೆ ಸರ್ಕಾರವೇ ಸಿದ್ಧವಿಲ್ಲ..ಕೈಯಲ್ಲಿ ಹಣವಿಲ್ಲದೆ,ಯಾವುದೇ ಆದಾಯ ಮೂಲವಿಲ್ಲದೆ ಶೋಚನೀಯವಾಗಿರುವ ಅವರ ಜೀವನಗಳಿಗೆ ಅವರದೇ ಸ್ಥಿತಿಯಲ್ಲಿರುವ ಕಾರ್ಮಿಕನೋರ್ವ ತಾತ್ಕಾಲಿಕವಾಗಿ ಆಸರೆಯಾಗೊಕ್ಕೆ..ಅವರ ಪಾಲಿನ ಆಪದ್ಬಾಂಧವನಾಗಿದ್ದಾನೆ.
ಆತನ ಹೆಸರು ಚನ್ನಕೇಶವ..ದೀಪಾಂಜಲಿ ನಗರ ಡಿಪೋ 16 ದ ಚಾಲಕ.ಮುಷ್ಕರದಲ್ಲಿ ಪಾಲ್ಗೊಂಡು ವಜಾಶಿಕ್ಷೆಗೊಳಗಾದವರ ಸಾಲಿಗೆ ಸೇರಿದ ಚನ್ನಕೇಶವ್ ಅವರೇ ಇದೀಗ ತನ್ನಂತೆಯೇ ಕಷ್ಟಪಡುತ್ತಿರುವ ಸಾರಿಗೆ ಕಾರ್ಮಿಕರಿಗೆ ನೆರವಿನ ಕರ ಚಾಚಿದ್ದಾರೆ.ತನ್ನ ದುಡಿಮೆಯಲ್ಲೇ ಉಳಿಸಿದ ಹಣದಿಂದ ಕಾರ್ಮಿಕರ ಕುಟುಂಬ ಒಂದು ತಿಂಗಳು ಹಸಿವಿನಿಂದ ಮುಕ್ತವಾಗೊಕ್ಕೆ ಬೇಕಾದಷ್ಟು ದಿನಸಿಯನ್ನು ಪೂರೈಸುವ ಕೆಲಸ ಮಾಡುತ್ತಿದ್ದಾರೆ.
ಮೊನ್ನೆಯಿಂದ ಶುರುಮಾಡಿರುವ ಈ ಕಾಯಕದ ಪ್ರಯೋಜನವನ್ನು ಸಾಕಷ್ಟು ಕುಟುಂಬಗಳು ಪಡೆದುಕೊಂಡಿವೆ. ಪ್ರತಿ ಕುಟುಂಬಕ್ಕೆ 25 ಕೆಜಿ ಅಕ್ಕಿ, 3 ಕೆಜಿ ಗೋಧಿ ಹಿಟ್ಟು 2 ಕೆಜಿ ಬೇಳೆ, 2 ಕೆಜಿ ಸಕ್ಕರೆ, 2 ಕೆಜಿ ರವೆ,ದನಿಯಾಪುಡಿ, ಚಿಲ್ಲಿ ಪೌಡರ್, 2 ಲೀಟರ್ ಅಡುಗೆ ಎಣ್ಣೆ.4 ಮೈಸೋಪ್,4 ಬಟ್ಟೆಸೋಪು ಹೀಗೆ ಸರಿಸುಮಾರು 3 ರಿಂದ 3 ವರೆ ಮೌಲ್ಯದ ದಿನಸಿಯನ್ನು ಪೂರೈಸುವ ಕೆಲಸ ಮಾಡುತ್ತಿದ್ದಾರೆ.
ಹೀಗ್ಹೇಕೆ ಎಂದು ಕನ್ನಡ ಫ್ಲ್ಯಾಶ್ ನ್ಯೂಸ್ ಚನ್ನಕೇಶವ್ ಅವರನ್ನು ಕೇಳಿದಾಗ ಸರ್..ನನಗೆ ಗೊತ್ತಿದೆ ಕೆಲಸ ಕಳೆದುಕೊಂಡ ಸಾರಿಗೆ ಕಾರ್ಮಿಕನ ಜೀವನದ ಗೋಳು..ಕಷ್ಟ ಎಷ್ಟೆಂದು..ಒಂದಲ್ಲ..ಎರಡಲ್ಲ ಬರೋಬ್ಬರಿ 10 ತಿಂಗಳು ಸಂಬಳ ಇಲ್ಲ ಎಂದ್ರೆ ಹೇಗೆ ಜೀವನ ನಡೆಸೋದು..ಅದನ್ನು ಊಹಿಸಿಕೊಂಡರೂ ನಡುಕ ಉಂಟಾಗುತ್ತದೆ..ಪರಿ ಪರಿಯಾಗಿ ಬೇಡಿಕೊಂಡರೂ ಸರ್ಕಾರಗಳು ನಮ್ಮ ನೆರವಿಗೆ ಬರುತ್ತಿಲ್ಲ..ಇನ್ನು ಸಾರಿಗೆ ಕಾರ್ಮಿಕರಿಂದ ಮುಷ್ಕರದ ಸಮಯದಲ್ಲಿ ಲಕ್ಷಾಂತರ ಹಣ ಸುಲಿಗೆ ಮಾಡಿದ ಸಂಘಟನೆಗಳ ಮುಖಂಡರು ಹಣ ಗುಡಿಸಿಕೊಂಡು ಗುಂಡಗಾದ್ರೆ ಹೊರತು,ಒಬ್ಬನೇ ಒಬ್ಬ ಕಾರ್ಮಿಕರ ನೋವಿಗೆ ಸ್ಪಂದಿಸಿಲ್ಲ..ಇಂಥಾ ಸನ್ನಿವೇಶದಲ್ಲಿ ಒಬ್ಬ ಸಮಾನದುಃಖಿಯಾಗಿ ನಾನು ಬಹಳಷ್ಟು ಮಾಡಲಿಕ್ಕಾಗದೇ ಹೋದರೂ ನನ್ನ ಕೈಲಾದ ಸೇವೆಯನ್ನು ಈ ಮೂಲಕ ಮಾಡುತ್ತಿದ್ದೇನೆ..ಇದರಿಂದ ನನಗೆ ಸಂತೃಪ್ತಿಯಿದೆ ಎಂದು ಉತ್ತರಿಸುತ್ತಾರೆ.
ಕೆಲಸ ಕಳೆದುಕೊಂಡು ಅಕ್ಷರಶಹ ಬೀದಿಗೆ ಬಿದ್ದರುವ ಕಾರ್ಮಿಕರಂತೂ ಸರ್ಕಾರ,ಇಲಾಖೆ ಅಥವಾ ಸಾರಿಗೆ ಸಂಘಟನೆಗಳ ಮುಖಂಡರು ಮಾಡಲಾಗದ ಕೆಲಸವನ್ನು ತಮ್ಮಂತೆಯೇ ಕೆಲಸ ಕಳೆದುಕೊಂಡ ಓರ್ವ ಚಾಲಕನಾಗಿ ಮಾಡುತ್ತಿರುವುದಕ್ಕೆ ಮೆಚ್ಚುಗೆ ಮಾತನ್ನಾಡುತ್ತಿದ್ದಾರೆ.ನಾವು ನಂಬಿದವರೆಲ್ಲಾ ಕುತ್ತಿಗೆ ಕೊಯ್ದಿರುವಾಗ ನಮ್ಮ ನೆರವಿಗೆ ಬಂದ ನಿನ್ನ ಹೊಟ್ಟೆ ತಣ್ಣಗಿರಲಿ..ನಿನ್ನ ಕುಟುಂಬ ಚೆನ್ನಾಗಿರಲಿ ಎಂದು ಹಾರೈಸಲಾರಂಭಿಸಿದ್ದಾರೆ.
ಕೆಲಸ ಕಳೆದುಕೊಂಡ ಸಾರಿಗೆ ಕಾರ್ಮಿಕರ ಕುಟುಂಬಗಳ ಹಸಿವನ್ನು ನೀಗಿಸುವ ಕೆಲಸ ಮಾಡುತ್ತಿರುವ ಚೆನ್ನಕೇಶವ್ ಅವರ ಕೆಲಸ ಸಾರಿಗೆ ಕಾರ್ಮಿಕರ ಬದುಕುಗಳೊಂದಿಗೆ ಚೆಲ್ಲಾಟವಾಡುತ್ತಿರುವ ಸರ್ಕಾರ,ಇಲಾಖೆ ಹಾಗೂ ಸಾರಿಗೆ ಒಕ್ಕೂಟಗಳು ಹಾಗೂ ಸೋ ಕಾಲ್ಡ್ ಲೀಡರ್ ಗಳಿಗೆ ನಾಚಿಕೆ ತರಿಸಬೇಕು..