“ವಿಧಾನಸಭೆ-ಪರಿಷತ್ ಕಲಾಪಗಳ ವೀಕ್ಷಣೆಗೆ ಬರುವ ಮಕ್ಕಳ ಪ್ರವೇಶವನ್ನು ದಯವಿಟ್ಟು ನಿರ್ಬಂಧಿಸಿ..ಬರೀ ಕಚ್ಚಾಟ-ವಾಕ್ಸಮರ್-ಕೆಸರರೆಚಾಟ-ಕಲಾಪಗಳ ಗೌರವಕ್ಕೆ ಧಕ್ಕೆ ತರುವಂತೆ ನಡೆದುಕೊಳ್ಳುವ ರಾಜಕಾರಣಿಗಳನ್ನು ನೋಡಿ ನಮ್ಮ ಮಕ್ಕಳ ಮನಸ್ತಿತಿ ಕುರೂಪಗೊಳ್ಳುತ್ತಿವೆ.ಸತ್ಪ್ರಜೆಗಳಾಗಬೇಕಾದವರು ಬಹುತೇಕ ರಾಜಕಾರಣಿಗಳಂತೆ ಆಗಬೇಕೆಂದುಕೊಂಡು ತಮ್ಮ ಭವಿಷ್ಯವನ್ನೇ ಹಾಳು ಮಾಡಿಕೊಳ್ಳೊಕ್ಕೆ ಪ್ರಚೋದನೆ ಕೊಟ್ಟಂತಾಗುತ್ತದೆ..”
ಹೀಗೊಂದು ಮನವಿಯನ್ನು ಸಾಮಾಜಿಕ ಕಾರ್ಯಕರ್ತ ಎಚ್.ಎಂ.ವೆಂಕಟೇಶ್ ಅವರು ವಿಧಾನಸಭೆ ಸಭಾಪತಿ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಲ್ಲಿ ಮಾಡಿಕೊಂಡಿರುವುದು ಸಂಚಲನವನ್ನೇ ಮೂಡಿಸಿದೆ.
ಸರ್ಕಾರದ ಮುಂದೆ ಇಡಲಾಗಿರುವ ಈ ಪ್ರಸ್ತಾವನೆ ಸ್ವಲ್ಪ ವಿಚಿತ್ರ ಎನಿಸ್ಬೋದು..ಆದರೆ ಅದರೊಳಗೊಂದು ಸದಾಶಯ ಅಡಗಿದಂತಿದೆ.ಕಣ್ಣೆದುರಿಗೆ ನಡೆಯುವ ಸಾಕಷ್ಟು ಬೆಳವಣಿಗೆಗಳಿಂದ ಮಕ್ಕಳ ಬದುಕು ಹಾಗೂ ಭವಿಷ್ಯ ಪ್ರಭಾವಕ್ಕೀಡಾಗುತ್ತಿದೆ. ಆ ಪ್ರಭಾವಗಳಿಗೆ ಒಳಗಾಗಿ ರೂಪುಗೊಳ್ಳುತ್ತಿರುವ ಬದುಕು ಹಾಗು ಭವಿಷ್ಯವನ್ನು ಹೊಲಸೆದ್ದು ಹೋಗಿರುವ ರಾಜಕೀಯ ಹಾಳು ಮಾಡುವ,ವಿರೂಪಗೊಳಿಸುವ ಆತಂಕ ಇರುವುದರಿಂದ ಅದಕ್ಕೆ ಅವಕಾಶ ಮಾಡಿಕೊಡಬಾರದೆನ್ನುವ ಪ್ರಸ್ತಾಪವನ್ನು ಸರ್ಕಾರದ ಮುಂದೆ ಇಟ್ಟಿದ್ದಾರೆ ಸಾಮಾಜಿಕ ಕಾರ್ಯಕರ್ತ ಎಚ್.ಎಂ.ವೆಂಕಟೇಶ್.
ನಮ್ಮನ್ನಾಳುವವರು ಕ್ಷೇತ್ರಗಳ ಅಭಿವೃದ್ದಿಗಾಗಿ ಹೇಗೆಲ್ಲಾ ಚರ್ಚೆ ಮಾಡುತ್ತಾರೆ ಎನ್ನುವುದನ್ನು ತಿಳಿದುಕೊಳ್ಳುವ ಆಸೆ ಹಾಗು ಕುತೂಹಲಕ್ಕೆ ವಿಧಾನಸಭೆ/ಪರಿಷತ್ ಕಲಾಪ ವೀಕ್ಷಿಸಲು ಅನೇಕ ಕಡೆಗಳಿಂದ ರಾಜ್ಯದ ವಿವಿಧ ಶಾಲಾ ಕಾಲೇಜುಗಳ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಬೆಂಗಳೂರಿಗೆ ಬರುತ್ತಾರೆ.
ವಿಧಾನಸಭೆ ಸಭಾಪತಿ ವಿಶ್ವೇಶ್ವರ ಹೆಗಡಿ ಕಾಗೇರಿ ಅವರಿಗೆ ಸಾಮಾಜಿಕ ಕಾರ್ಯಕರ್ತ ಎಚ್.ಎಂ.ವೆಂಕಟೇಶ್ ಬರೆದಿರುವ ಇ-ಮೇಲ್ ಪತ್ರ
ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬಲಗೊಳಿಸುವ ನವ ಭಾರತ ನಿರ್ಮಾಣದ ಅಡಿಪಾಯದ ಪ್ರಜೆಗಳಾಗಿ ರೂಪುಗೊಳ್ಳುತ್ತಿರುವ ಶುದ್ಧ ಮನಸ್ಸಿನ, ಎಳೆವಯಸ್ಸಿನ, ಇನ್ನೂ ಪಕ್ವವಾಗದ ಮನಸ್ಥಿತಿಯಲ್ಲಿರುವ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಆಯ್ಕೆಯಾದ ನಮ್ಮನ್ನಾಳುವ ಜನಪ್ರತಿನಿಧಿಗಳು ರಾಜ್ಯದ ಅಭಿವೃದ್ಧಿಗಾಗಿ ಮತ್ತು ಕಾನೂನುಗಳನ್ನು ರೂಪಿಸುವ ಸದಸ್ಯರುಗಳು ನಡೆದುಕೊಳ್ಳುತ್ತಿರುವ ರೀತಿಗಳನ್ನು ನೋಡಿ ತುಂಬಾ ಬೇಸರದಿಂದ ವಿಧಾನಸೌಧದಿಂದ ಹೊರಗೆ ಬಂದಿರುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ಸಭಾಪತಿ ಅವರಿಗೆ ಬರೆದಿರುವ ಪತ್ರದಲ್ಲಿ ಉಲ್ಲೇಖಿಸಿದ್ದಾರೆ ವೆಂಕಟೇಶ್.
ತಮ್ಮ ನಿಲುವನ್ನು ಮುಂದುವರೆಸುತ್ತಾ.. ವಿಧಾನಮಂಡಲದ ಸದಸ್ಯರುಗಳು ವಿಧಾನಸಭೆ ಅಧಿವೇಶನದಲ್ಲಿ ನಡೆದುಕೊಳ್ಳುತ್ತಿರುವ ರೀತಿ, ಬಳಸುವ ಭಾಷೆ, ಅಸಂವಿಧಾನಿಕ ಪದಗಳ ಬಳಕೆ, ಚರ್ಚಿಸುತ್ತಿರುವ ರೀತಿ-ನೀತಿಗಳು ಭಾರತದ ಸಂಸ್ಕೃತಿಗೆ ದಕ್ಕೆ ಉಂಟು ಮಾಡುತ್ತಿರುವುದನ್ನು ನೋಡುವ ವಿದ್ಯಾರ್ಥಿನಿಯರು ಮತ್ತು ವಿದ್ಯಾರ್ಥಿಗಳ ಮನಸ್ಥಿತಿ ಹಾಳಾಗುತ್ತದೆ. ಹಾಗೆಯೇ ಜನಪ್ರತಿನಿಧಿಗಳ ಮೇಲೆ ಅವರಿಗಿರುವ ಗೌರವ, ವಿಶ್ವಾಸ ಕಳೆದುಕೊಳ್ಳುತ್ತದೆ.
ಕಲಾಪವನ್ನು ವೀಕ್ಷಿಸಲು ದೂರ ದೂರಿಂದ ಬರುವ ವಿದ್ಯಾರ್ಥಿಗಳು ಗ್ಯಾಲರಿಯಲ್ಲಿ ಕುಳಿತಿರುವ ದೃಶ್ಯಕಲಾಪದ ವೇಳೆ ಕಚ್ಚಾಡುತ್ತಿರುವ ನಮ್ಮನ್ನಾಳುವ ಚುನಾಯಿತ ಪ್ರತಿನಿಧಿಗಳು
ಬಹಳ ವರ್ಷಗಳಿಂದ ವಿಧಾನಮಂಡಲದ ಅಧಿವೇಶನದಲ್ಲಿ ಸದಸ್ಯರುಗಳು ನಡೆಯುವ ನಡವಳಿಕೆಗಳು ಒಂದು ರೀತಿಯಲ್ಲಿ ವಿಶ್ಲೇಷಿಸ ಬೇಕಾದರೆ A ಸರ್ಟಿಫಿಕೇಟ್ ಕೊಡುವಂತಹ ಸನ್ನಿವೇಶಗಳು, ಮಾರಾಮಾರಿ ಹಂತಕ್ಕೆ,ಅವ್ಯಾಚ ಶಬ್ದ, ಅಸಂಬದ್ಧ ನಡವಳಿಕೆಗಳು, ವಾಗ್ವಾದ, ಧರಣಿ, ಅಸಂವಿಧಾನಿಕ ಪದ ಬಳಕೆ ಜೊತೆಗೆ ದೇಶದ್ರೋಹದ ಮಾತುಗಳು ಪುಂಖಾನುಪುಂಖವಾಗಿ ಹರಿದು ಬರುತ್ತಿರುವುದನ್ನು ನೋಡಿದ ವಿದ್ಯಾರ್ಥಿ-ವಿದ್ಯಾರ್ಥಿನಿಯರ ಮೇಲೆ ದುಷ್ಪರಿಣಾಮಗಳು ಬೀರುವ ಎಲ್ಲ ಲಕ್ಷಣಗಳು ಕಂಡುಬರುತ್ತಿರುವುದರಿಂದ ಮುಂದಿನ ದಿನಗಳಲ್ಲಿ ವಿಧಾನಮಂಡಲದ ಅಧಿವೇಶನವನ್ನು ವಿದ್ಯಾರ್ಥಿ-ವಿದ್ಯಾರ್ಥಿನಿಯರು ವೀಕ್ಷಿಸದಂತೆ ರದ್ದು ಪಡಿಸಬೇಕೆಂದು ವೆಂಕಟೇಶ್ ಆಗ್ರಹಪೂರ್ವಕ ವಿನಂತಿ ಮಾಡಿದ್ದಾರೆ.
ಇಂತಹ ಸನ್ನಿವೇಶಗಳನ್ನು ನೋಡಿದ ವಿದ್ಯಾರ್ಥಿ ವಿದ್ಯಾರ್ಥಿನಿಯರ ಮೇಲೆ ದುಷ್ಪರಿಣಾಮ ಬೀರಿ ಅಸ್ತವ್ಯಸ್ತ, ಸಮಾಜ ನಿರ್ಮಾಣವಾಗಬಹುದು. ಮತ್ತು ಸ್ವಸ್ಥ ಸಮಾಜಕ್ಕೆ ಧಕ್ಕೆ ಉಂಟಾಗಬಹುದು. ಈ ಎಲ್ಲಾ ಕಾರಣಕ್ಕೆ ಜನಪ್ರತಿನಿಧಿಗಳು ವಿಧಾನಸಭೆಯಲ್ಲಿ ನಡೆದುಕೊಳ್ಳುವ ರೀತಿ ಕಾರಣವಾಗಬಹುದು. ಇಂದಿನ ಮಕ್ಕಳೇ ಮುಂದಿನ ಪ್ರಜೆ ಗಳಾಗಿ ರೂಪಿಸುವ ಗುರುತರ ಜವಾಬ್ದಾರಿ ನಮ್ಮೆಲ್ಲಾ ಸಾರ್ವಜನಿಕರ ಮೇಲಿರುವುದರಿಂದ ದಯವಿಟ್ಟು ವಿಧಾನಸಭೆ ಹಾಗು ಪರಿಷತ್ ಕಲಾಪಗಳ ವೀಕ್ಷಣೆಗೆ ವಿದ್ಯಾರ್ಥಿಗಳನ್ನು ಆಹ್ವಾನಿಸದಂತೆ ಆದೇಶಿಸಬೇಕೆಂದು ಮನವಿ ಮಾಡಿದ್ದಾರೆ.