BIG EXCLUSIVE..250 RS WORTH BAGS SOLD FOR 490 IN BBMP SCHOOLS ..-ಆಗ “ಶ್ವೆಟರ್”…ಈಗ “ಸ್ಕೂಲ್ ಬ್ಯಾಗ್”… BBMP ಶಾಲಾ ಮಕ್ಕಳಿಗೆ “ಕಳಪೆ” ಸ್ಕೂಲ್ ಬ್ಯಾಗ್..! -ಲಕ್ಷಾಂತರ ಗೋಲ್ಮಾಲ್.?!

250 ರೂ ಬೆಲೆಯ ಸ್ಕೂಲ್ ಬ್ಯಾಗ್ ಗಳಿಗೆ 495 ರೂ ಫಿಕ್ಸ್..ಅಕ್ರಮ ಬಹಿರಂಗವಾಗುತ್ತಿದ್ದಂತೆ ಸಪ್ಲೈ ಆದೇಶವನ್ನೇ ಹಿಂಪಡೆದ ಶಿಕ್ಷಣಕೋಶ-ಕಿಕ್ ಬ್ಯಾಕ್ ಆಸೆಗೆ ಗುತ್ತಿಗೆದಾರನಿಗೆ ಕೈ ಜೋಡಿಸ್ತಾ ಅಧಿಕಾರಿಗಳ ಜೋಡಿ.. !?

0

ಬೆಂಗಳೂರು: ಬಿಬಿಎಂಪಿ ಅಂಗಳದಲ್ಲಿ ಮತ್ತೊಂದು ಹಗರಣ ಸದ್ದು ಮಾಡಿದೆ.ಕಳೆದ ಕೆಲ ತಿಂಗಳ ಹಿಂದಷ್ಟೇ ಸದ್ದು ಮಾಡಿದ “ಶ್ವೆಟರ್ಸ್ ಹಗರಣ” ಬಿಬಿಎಂಪಿ ಮಾನ ಹರಾಜು ಹಾಕಿತ್ತು.ಅದಾದ ಕೆಲವೇ ತಿಂಗಳ ಬಳಿಕ,ಚರ್ಚೆಗೆ ಮತ್ತೊಂದು ವೇದಿಕೆ ಸೃಷ್ಟಿಸಿದೆ ಈ ಹಗರಣವೂ ಶಿಕ್ಷಣ ಕೋಶಕ್ಕೆ ಸಂಬಂಧಿಸಿದೆ ಎನ್ನುವುದು  ವಿಪರ್ಯಾಸ. ಕಳಪೆ ಗುಣಮಟ್ಟದ ಸ್ಕೂಲ್ ಬ್ಯಾಗ್ ಗಳನ್ನು ಮಕ್ಕಳಿಗೆ ಪೂರೈಕೆ ಮಾಡಿ, ಗುತ್ತಿಗೆದಾರನಿಂದ ದೊಡ್ಡ ಪ್ರಮಾಣದ ಕಿಕ್ ಬ್ಯಾಕ್ ಪಡೆಯಲು ಶಿಕ್ಷಣ ಕೋಶದ ಅಧಿಕಾರಿಗಳು ನಡೆಸಿರ ಬಹುದೆನ್ನಲಾಗುತ್ತಿರುವ ಹುನ್ನಾರ ಕೊನೆಗೂ ಬಟಾಬಯಲಾಗಿದೆ.

ಬಿಬಿಎಂಪಿ ಶಾಲಾ-ಕಾಲೇಜುಗಳೆಂದ್ರೆ ಮೂಗು ಮುರಿಯುವವರೇ ಹೆಚ್ಚು.ಪ್ರೋತ್ಸಾಹ-ಅನುದಾನದ ಕೊರೆತೆಯಿಂದ ಸೃಷ್ಟಿಯಾದ ಸಮಸ್ಯೆ ಅಲ್ಲ ಇದು.ಶಿಕ್ಷಣ ವ್ಯವಸ್ಥೆ ಸುಧಾರಿಸಬೇಕೆನ್ನುವ ಕಾಳಜಿ ಇಲ್ಲದವರಿಂದ ನಿರ್ಮಾಣವಾದ ಪರಿಸ್ತಿತಿ.ಹಾಗಾಗಿ ನೋಡೋರಿಗೆ ಬಿಬಿಎಂಪಿ ಶಿಕ್ಷಣ ವ್ಯವಸ್ಥೆ ಸಂಪೂರ್ಣ ನಿರ್ಲಕ್ಷ್ಯಕ್ಕೊಳಗಾಗಿದೆ ಎನ್ನಿಸುತ್ತೆ.ಆದ್ರೆ ಆಗಾಗ ಸದ್ದು ಮಾಡುವ ಶ್ವೆಟರ್ಸ್-ಸ್ಕೂಲ್ ಬ್ಯಾಗ್ ಗಳ ಹಗರಣದಿಂದ ಬಿಬಿಎಂಪಿಗೆ ಇಷ್ಟೊಂದೆಲ್ಲಾ ಅನುದಾನ ಸಿಗುತ್ತಾ ಎಂದೆನಿಸದೆ ಇರೊಲ್ಲ.

ಈಗ ಸುದ್ದಿಯಾಗಿರುವ ಸ್ಕೂಲ್ ಬ್ಯಾಗ್ ಗೋಲ್ಮಾಲ್ ನ್ನೇ ತೆಗೆದುಕೊಳ್ಳಿ, ತೂಗಿ ಅಳೆದು ನೋಡಿದ್ರೆ ಇದು ಹತ್ತು ಲಕ್ಷಕ್ಕೆ ಕಡಿಮೆ ಎನ್ನುವಂತೆ 90 ಲಕ್ಷದ 28 ಸಾವಿರದ 674 ರೂ ಮೊತ್ತದ ಪೂರೈಕೆಯ ಟೆಂಡರ್ ಇದು. ಪ್ರಾಥಮಿಕ ಶಾಲೆಯ 3253 ಮಕ್ಕಳಿಗೆ 490 ರೂ ದರದಲ್ಲಿ  15,93,970 ರೂ ಮೌಲ್ಯದ ಬ್ಯಾಗ್ ,ಪ್ರೌಢಶಾಲೆಯ 7153 ಮಕ್ಕಳಿಗೆ 458 ರೂ ದರದಲ್ಲಿ 32,76,074 ರೂ ಮೌಲ್ಯದ ಬ್ಯಾಗ್,ಪದವಿಪೂರ್ವ ಕಾಲೇಜಿನ 7084 ಮಕ್ಕಳಿಗೆ 490 ರೂ ದರದಲ್ಲಿ 34,71,160 ಮೌಲ್ಯದ ಬ್ಯಾಗ್ ಹಾಗೂ ಪದವಿ ಕಾಲೇಜುಗಳ 1403 ಮಕ್ಕಳಿಗೆ 490 ರೂ ದರದಲ್ಲಿ 6,87,470 ರೂ ಮೌಲ್ಯ ಹೀಗೆ ಒಟ್ಟು 18,893 ಮಕ್ಕಳಿಗೆ 90,28,674 ಮೌಲ್ಯದ ಬ್ಯಾಗ್ ಗಳನ್ನು ವಿತರಿಸುವ ಗುತ್ತಿಗೆಯನ್ನು ಮಾರುತಿ ಎಂಟರ್ ಪ್ರೈಸಸ್ ಅವರಿಗೆ ನೀಡಲಾಗಿತ್ತು. ಆದರೆ ಮಾರುತಿ ಎಂಟರ್ ಪ್ರೈಸಸ್ ನವರು ಕಳಪೆ ಗುಣಮಟ್ಟದ ಬ್ಯಾಗ್ ಗಳನ್ನು ವಿತರಿಸುವ ಮೂಲಕ ಅಕ್ರಮಕ್ಕೆ ಎಡೆ ಮಾಡಿಕೊಟ್ಟಿರುವುದು ಮೇಲ್ನೋಟಕ್ಕೆ ಸಾಬೀತಾಗಿದೆ.

 ಬಿಡ್ ನಲ್ಲಿ ಪಾಲ್ಗೊಂಡ ಏಜೆನ್ಸಿಗಳು
ಸ್ಕೂಲ್ ಬ್ಯಾಗ್ ಬಿಡ್ ನಲ್ಲಿ ಪಾಲ್ಗೊಂಡ ಏಜೆನ್ಸಿಗಳು

ಟೆಂಡರ್ ನಲ್ಲಿ ಬಿಡ್ ಮಾಡಿದ ಏಜೆನ್ಸಿಗಳು ಯಾವ್ಯಾವು:ಅಂದ್ಹಾಗೆ ಸ್ಕೂಲ್ ಬ್ಯಾಗ್ ಪೂರೈಕೆಗೆ ಕರೆಯಲಾಗಿದ್ದ ಟೆಂಡರ್ ನಲ್ಲಿ  ಎಲ್ ವಿಟಿ ಕಂಟೈನರ್, ಮಾರ್ಫೋ ಎಕ್ಸ್ ಪೋಟ್ಸ್, ಎಚ್.ಕೆ ಸತೀಶ್( ಕಾಂಟ್ರ್ಯಾಕ್ಟರ್), ಮಾರುತಿ ಎಂಟರ್ ಪ್ರೈಸಸ್,ಶುಭಶ್ರೀ  ಎಂಟರ್ ಪ್ರೈಸಸ್,ಸುದರ್ಶನ್ ಅಂಡ್ ಕೋ ಎನ್ನುವ ಏಜೆನ್ಸಿಗಳು ಪಾಲ್ಗೊಂಡಿದ್ದವು.ಈ ಪೈಕಿ ಅಂತಿಮವಾಗಿ ಮಾರುತಿ ಎಂಟರ್ ಪ್ರೈಸಸ್ ಏಜೆನ್ಸಿಗೆ ಸ್ಕೂಲ್ ಬ್ಯಾಗ್ ಪೂರೈಕೆ ಗುತ್ತಿಗೆ ನೀಡಲಾಯಿತು.

ಆತ ತೋರಿಸಿ ಫೈನಲ್ ಮಾಡಿಕೊಂಡಿದ್ದೇ ಒಂದು..ವಿತರಿಸಿದ್ದೇ ಇನ್ನೊಂದಂತೆ..ಬಿಬಿಎಂಪಿ ಶಿಕ್ಷಣ ವಿಭಾಗದ ಅಧಿಕಾರಿಗಳು ಹೇಳುತ್ತಿರೋ ಈ ಸಂಗತಿಯನ್ನು ನಂಬೊಕ್ಕೆ ಸಾಧ್ಯನಾ..? ಕ್ವಾಲಿಟಿ ಚೆಕ್ ಮಾಡದೆ ವಿತರಣೆಗೆ ಅವಕಾಶ ಕೊಟ್ಟಿದ್ಹೇಗೆ..ಏಕೆ..ನಾವು ನಮ್ ಸ್ವಂತಕ್ಕೆ ಒಂದು ಸಣ್ಣ ಗುಂಡುಪಿನ್ ತೆಗೆದುಕೊಳ್ಳುವಾಗಲೂ ಅದರ ಕ್ವಾಲಿಟಿಯನ್ನು ಹತ್ತಾರು ಬಾರಿ ಕ್ರಾಸ್  ಚೆಕ್ ಮಾಡಿ ಸಮಾಧಾನವಾದ್ಮೇಲೆ ಕೊಂಡುಕೊಳ್ತೇವೆ.ಅಂತದ್ದರಲ್ಲಿ 90 ಲಕ್ಷದಷ್ಟು ಮೌಲ್ಯದ 18 ಸಾವಿರ ಬ್ಯಾಗ್ ಗಳನ್ನು ಕೊಂಡುಕೊಳ್ಳುವಾಗ ಅದರ ಗುಣಮಟ್ಟ ಪರೀಕ್ಷಿಸಿಕೊಳ್ಳದೆ ಹೋದದ್ದು ಎಷ್ಟು ಸರಿ..? ಗುಣಮಟ್ಟ ಪರೀಕ್ಷಿಸಿಯೇ ಪೂರೈಕೆಗೆ ಅವಕಾಶ ಕೊಟ್ಟೆವು ಎಂದೇ ಇಟ್ಟುಕೊಳ್ಳೋಣ,. ವಿತರಣೆಯಾದ ಬ್ಯಾಗ್ ಗಳು ಎಂಥವು..ನಿಜಕ್ಕೂ ಅವು ಆತ ಹೇಳಿದಂತದ್ದವಾ..? ಅಥವಾ ಬೇರೆಯವೋ ಎನ್ನುವುದನ್ನು ಕ್ರಾಸ್ ಚೆಕ್ ಮಾಡಿಕೊಳ್ಳಲಿಲ್ಲವೇಕೆ..? ಆರಂಭದಲ್ಲೇ ಈ ಕೆಲಸ ಮಾಡಿದಿದ್ದರೆ ಶೇಕಡಾ 75 ರಷ್ಟು ಬ್ಯಾಗ್ ಪೂರೈಕೆಯಾದ ಮೇಲೆ ಸಪ್ಲೈ ಆರ್ಡರನ್ನು ಕ್ಯಾನ್ಸಲ್ ಮಾಡಬೇಕಾಗುತ್ತಿರಲಿಲ್ಲವೇನೋ..ಅಲ್ವಾ..

ಸ್ಕೂಲ್ ಬ್ಯಾಗ್ ಪೂರೈಕೆ ಬಗ್ಗೆ ಪತ್ರಿಕೆಗಳಲ್ಲಿ ಪ್ರಕಟವಾದ ಜಾಹಿರಾತು
ಸ್ಕೂಲ್ ಬ್ಯಾಗ್ ಪೂರೈಕೆ ಬಗ್ಗೆ ಪತ್ರಿಕೆಗಳಲ್ಲಿ ಪ್ರಕಟವಾದ ಜಾಹಿರಾತು
ಮಾರುತಿ ಎಂಟರ್ ಪ್ರೈಸಸ್ ಬಿಡ್ ನಲ್ಲಿ ಪಾಲ್ಗೊಂಡಿರುವ ಬಗ್ಗೆ ಸ್ಪಷ್ಟನೆ
ಮಾರುತಿ ಎಂಟರ್ ಪ್ರೈಸಸ್ ಬಿಡ್ ನಲ್ಲಿ ಪಾಲ್ಗೊಂಡಿರುವ ಬಗ್ಗೆ ಸ್ಪಷ್ಟನೆ

ಫೆಬ್ರವರಿ 15ರ ಆರ್ಡರ್ ಫೆಬ್ರವರಿ 22ಕ್ಕೆ ಕ್ಯಾನ್ಸಲ್ ಆಗಿದ್ದೇಕೆ..: ಅಕ್ರಮ ನಡೆದಿರುವುದನ್ನು ಒಪ್ಪಿಕೊಂಡಿತೆನ್ನುವುದಕ್ಕೆ ಇದಕ್ಕಿಂತ ದೊಡ್ಡ ನಿದರ್ಶನ ಬೇಕಿಲ್ವೇನೋ. ಮಾರುತಿ ಎಂಟರ್ ಪ್ರೈಸಸ್ ನವ್ರರಿಗೆ ಸ್ಕೂಲ್ ಬ್ಯಾಗ್ ಪೂರೈಕೆಗೆ 15-02-2022 ರಂದು ಹಿರಿಯ ಸಹಾಯಕ ನಿರ್ದೇಶಕ ಹನುಮಂತಯ್ಯ ವರ್ಕ್ ಆರ್ಡರ್ ಕೊಟ್ಟಿದ್ದಾರೆ.ಗುತ್ತಿಗೆದಾರ ಬಿಬಿಎಂಪಿಯನ್ನೇ ಯಾಮಾರಿಸಿ ಕಳಪೆ ಗುಣಮಟ್ಟದ ಬ್ಯಾಗ್ ಗಳನ್ನು ಬೇಡಿಕೆ ಅನ್ವಯ ಶಾಲಾ-ಕಾಲೇಜುಗಳಿಗೂ ವಿತರಿಸಿದ್ದಾನೆ.

ಕನ್ನಡ ಫ್ಲ್ಯಾಶ್ ನ್ಯೂಸ್ ಯಾವಾಗ ಅಕ್ರಮದ ಬೆನ್ ಬಿತ್ತೋ ದಿಢೀರ್ 22-02-2022 ರಂದು ಸಪ್ಲೈ ಆರ್ಡರನ್ನು ಗುಣಮಟ್ಟ ಸರಿ ಇಲ್ಲ ಎನ್ನುವ ಕಾರಣ ನೀಡಿ ಕ್ಯಾನ್ಸಲ್ ಮಾಡುತ್ತೆ.ಬಹುತೇಕ ಸಪ್ಲೈ ಆದ ಮೇಲೆ ಸ್ಥಗಿತಗೊಳಿಸುವಂತೆ ಆದೇಶ ಕೊಟ್ಟಿದ್ದೇ ಅನುಮಾನ ಮೂಡಿಸುತ್ತೆ.ಗುಣಮಟ್ಟವನ್ನು ಮೊದಲೇ ಪರೀಕ್ಷಿಸಿಕೊಳ್ಳುವ ಕೆಲಸ ನಡೆದಿದ್ರೆ ಆರಂಭದಲ್ಲಿ ಅಕ್ರಮಕ್ಕೆ ಬ್ರೇಕ್ ಹಾಕಬಹುದಿತ್ತಲ್ವಾ..? ವಿದ್ಯಾರ್ಥಿಗಳಿಗೂ ಕಳಪೆ ಬ್ಯಾಗ್ ಸಿಗ್ತಿರಲಿಲ್ಲ..ಹಾಗೆಯೇ ಪಾಲಿಕೆ ಬೊಕ್ಕಸಕ್ಕೂ ನಷ್ಟವಾಗುತ್ತಿರಲಿಲ್ಲ ಎನ್ನುವುದು ಶಿಕ್ಷಣ ತಜ್ಞರ ಪ್ರಶ್ನೆ.

ಸಪ್ಲೈ ಮಾಡಿದ ಬ್ಯಾಗ್ ಗಳನ್ನು ವಾಪಸ್ ಪಡೀತಾರಂತೆ..ಗುತ್ತಿಗೆದಾರನಿಗೆ ಕ್ವಾಲಿಟಿ ಬ್ಯಾಗ್ ವಿತರಿಸೊಕ್ಕೆ ಮತ್ತೊಂದು ಅವಕಾಶ ಕೊಡ್ತಾರಂತೆ:?: ಇದು ಮತ್ತೊಂದು ವಿಚಿತ್ರ ನಿರ್ದಾರ ಎನಿಸುತ್ತೆ.ಕಳಪೆ ಎನ್ನೋದು ದೃಢಪಟ್ಟ ಮೇಲೆ  ವಿತರಿಸಲಾಗಿರುವ ಎಲ್ಲಾ ಬ್ಯಾಗ್ ವಾಪಸ್ ಪಡೆಯುತ್ತಾರಂತೆ ಬಿಬಿಎಂಪಿ ಅಧಿಕಾರಿಗಳು.ಇದು ಎಷ್ಟರ ಮಟ್ಟಿಗೆ ಸಾಧ್ಯ ಎನ್ನುವುದು ಒಂದ್ ಪ್ರಶ್ನೆಯಾದ್ರೆ, ಕಳಪೆ ಬ್ಯಾಗ್ ಪೂರೈಸಿ ದೊಡ್ಡ ತಪ್ಪು ಮಾಡಿರುವ ಮಾರುತಿ ಎಂಟರ್ ಪ್ರೈಸಸ್ ನವರನ್ನು ಶಿಕ್ಷಿಸುವ ಬದಲು,ಆತ ಹೇಳಿದಂತೆ,ಮೊದಲು ತೋರಿಸಿದಂತ ಬ್ಯಾಗ್ ಗಳನ್ನು ಪೂರೈಸುವುದಕ್ಕೆ ಅವಕಾಶ ಕೊಡ್ತಾರಂತೆ ವಿಶೇಷ ಆಯುಕ್ತ ಬಾಬು ರೆಡ್ಡಿ.

ಮಾಡಿರೋದೇ ತಪ್ಪು ಅದಕ್ಕಾಗಿ ಏಜೆನ್ಸಿಯನ್ನು ಬ್ಲ್ಯಾಕ್ ಲೀಸ್ಟ್ ಮಾಡೋದನ್ನು ಬಿಟ್ಟು ಆದದ್ದು ಆಗೋಯ್ತು..ಇನ್ಮುಂದೆ ಹಾಗೆಲ್ಲಾ ಮಾಡಬೇಡ ಎಂದು ಸಮಾಧಾನ ಹೇಳಿ ಮತ್ತೆ ಬ್ಯಾಗ್ ಪೂರೈಕೆಗೆ ಅವಕಾಶ ಕೊಡುತ್ತೇವೆ ಎನ್ನುತ್ತಿರುವುದು ಹಾಸ್ಯಾಸ್ಪದವಾಗಿದೆ.ಆದರೆ ರೆಡ್ಡಿ ಅವರ ಪ್ರಕಾರ ಹಾಗೆ ಮತ್ತೊಂದು ಚಾನ್ಸ್ ಕೊಡಲಿಕ್ಕೆ ಕೆಟಿಪಿಪಿ ಆಕ್ಟ್ ನಲ್ಲಿ ಅವಕಾಶ ಇದೆಯಂತೆ..ಅದು ಎಷ್ಟರ ಮಟ್ಟಿಗೆ ಸತ್ಯನೋ? ಬಾಬು ರೆಡ್ಡಿ ಅವರೇ ಹೇಳಬೇಕು.

ಸಹಾಯಕ ಆಯುಕ್ತ ಉಮೇಶ್
ಸಹಾಯಕ ಆಯುಕ್ತ ಉಮೇಶ್
ಹಿರಿಯ ಸಹಾಯಕ ನಿರ್ದೇಶಕ ಹನುಮಂತಯ್ಯ
ಹಿರಿಯ ಸಹಾಯಕ ನಿರ್ದೇಶಕ ಹನುಮಂತಯ್ಯ
ವಿಶೇಷ ಆಯುಕ್ತ ಬಾಬು ರೆಡ್ಡಿ.
ವಿಶೇಷ ಆಯುಕ್ತ ಬಾಬು ರೆಡ್ಡಿ.

ಉಮೇಶ್-ಹನುಮಂತಯ್ಯ ಜುಗಲ್ ಬಂದಿ: ಕೆಲ ತಿಂಗಳ ಹಿಂದೆ ಶ್ವೆಟರ್ ಅಕ್ರಮ ಸದ್ದು ಮಾಡಿದ್ದರಿಂದಲೇ ಎಚ್ಚೆತ್ತುಕೊಳ್ಳಬೇಕಿತ್ತು ಶಿಕ್ಷಣ ವಿಭಾಗದ ಅಧಿಕಾರಿಗಳು.ಆದರೆ ಅದರ ನೈತಿಕ ಹೊಣೆ ಹೊತ್ತ ಸಹಾಯಕ ಆಯುಕ್ತ ಉಮೇಶ್ ಹಾಗೂ ಹಿರಿಯ ಸಹಾಯಕ ನಿರ್ದೇಶಕ ಹನುಮಂತಯ್ಯ ಜೋಡಿ ಮತ್ತೊಂದು ಗೋಲ್ಮಾಲ್ ನಡೆಯೊಕ್ಕೆ ಅವಕಾಶವನ್ನೇಕೆ ಮಾಡಿಕೊಟ್ಟರು.. ಸ್ಕೂಲ್ ಬ್ಯಾಗ್ ಪೂರೈಕೆಯ ಪ್ರತಿ ಹಂತಗಳಲ್ಲು ಎಚ್ಚರಿಕೆ ವಹಿಸಬೇಕಿತ್ತು.ಆದರೆ ಮಾರುತಿ ಎಂಟರ್ ಪ್ರೈಸಸ್ ನವ್ರು ಶೇಕಡಾ 75 ರಷ್ಟು ಬ್ಯಾಗ್ ಪೂರೈಸೊಕ್ಕೆ ಅವಕಾಶ ಕೊಟ್ಟಿದ್ದೇಕೆ ಎನ್ನುವುದೆ ಪ್ರಶ್ನೆ.

ಏಜೆನ್ಸಿ ಮಾಲೀಕ ಪೂರೈಸುತ್ತಿರುವ ಬ್ಯಾಗ್ ಗಳ ಮಾಹಿತಿಯನ್ನು ಡೇ-1 ನಿಂದಲೇ ಪಡೆದುಕೊಳ್ಳಬೇಕಿದ್ದವರು ಏಕೆ ಸುಮ್ಮನಾದರು..ಜವಾಬ್ದಾರಿಯುತ ಅಧಿಕಾರಿಗಳಾಗಿ ಬ್ಯಾಗ್ ಗಳ ಪೂರೈಕೆ ಹೇಗೆ ನಡೆಯುತ್ತಿದೆ ಎನ್ನುವುದನ್ನು ಪರಿಶೀಸಲಿಲ್ಲವೇಕೆ..? ಸ್ಕೂಲ್ ಗಳಿಗೆ ಭೇಟಿ ಕೊಡಲಿಲ್ಲವೇಕೆ..? ಹೋಗ್ಲಿ ಅಟ್ಲೀಸ್ಟ್ ಶಾಲಾ ಮುಖ್ಯೋಪಧ್ಯಾಯರಿಂದ “ಫೀಡ್ ಬ್ಯಾಕ್” ನ್ನೇಕೆ ಪಡೆಯಲಿಲ್ಲ..? ಎನ್ನುವ ಪ್ರಶ್ನೆಗಳು ಸಾರ್ವಜನಿಕವಾಗಿ ಮೂಡುತ್ತವೆ.

ಆದರೆ ವಾಸ್ತವ ಹೇಳುತ್ತಿರುವುದೇ ಬೇರೆ..ಗುತ್ತಿಗೆದಾರ ತಾನು ತೋರಿಸಿದ ಬ್ಯಾಗ್ ಬಿಟ್ಟು ಕಳಪೆ ಬ್ಯಾಗ್ ಪೂರೈಸುತ್ತಿರುವ ಪಕ್ಕಾ ಮಾಹಿತಿ ಇದ್ದಾಗ್ಯೂ…!,ಇದರಲ್ಲಿ ಅಕ್ರಮ ನಡೆಯುತ್ತಿರುವುದು ಖಾತ್ರಿಯಿದ್ರೂ..! ಬೇಕಂತಲೇ ಈ ಜೋಡಿ ಮೌನಕ್ಕೆ ಶರಣಾಗಿತ್ತಂತೆ. ಈ ಮೌನಕ್ಕೆ “ಕಿಕ್ ಬ್ಯಾಕ್” ಕಾರಣವಾಗಿತ್ತಾ..!? ಅವರ ಮೌನ ಇಂತದ್ದೊಂದು ಶಂಕೆ ಮೂಡಿಸುತ್ತಿರುವುದಂತು ಸತ್ಯ. ಗುತ್ತಿಗೆದಾರನ ಜತೆ ಕೈ ಜೋಡಿಸಿದ್ದರ ಹಿಂದೆ ಪರ್ಸಂಟೇಜ್ ವ್ಯವಹಾರ ನಡೆದಿತ್ತೇ..?ಇದಕ್ಕೆ ಉಮೇಶ್ ಅಥವಾ ಹನುಮಂತಯ್ಯ ಅವರೇ ಉತ್ತರ ಹೇಳಬೇಕು.

ಸ್ಕೂಲ್ ಬ್ಯಾಗ್ ಪೂರೈಕೆಗೆ ಅನುಮತಿ ನೀಡಿ 15-02-2022 ರಂದು ಬರೆದ ಪತ್ರ
ಸ್ಕೂಲ್ ಬ್ಯಾಗ್ ಪೂರೈಕೆಗೆ ಅನುಮತಿ ನೀಡಿ    15-02-2022 ರಂದು ಬರೆದ ಪತ್ರ
ಸ್ಕೂಲ್ ಬ್ಯಾಗ್ ಪೂರೈಕೆ ನಿಲ್ಲಿಸುವಂತೆ 22-02-2022 ರಂದು ಬರೆದ ಪತ್ರ
ಸ್ಕೂಲ್ ಬ್ಯಾಗ್ ಪೂರೈಕೆ ನಿಲ್ಲಿಸುವಂತೆ      22-02-2022 ರಂದು ಬರೆದ ಪತ್ರ

 ಕಮಿಷನರ್ ಗುಪ್ತಾಗೆ ಇದರ ಉಸಾಬರಿನೇ ಬೇಡ್ವಂತೆ:?! ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಅದೃಷ್ಟವೋ..ದುರಾದೃಷ್ಟವೋ ಗೊತ್ತಿಲ್ಲ.ಗೌರವ್ ಗುಪ್ತಾರಂಥ ಐಎಎಸ್ ಗಳನ್ನು ಸಹಿಸಿಕೊಳ್ಳಬೇಕಾಗಿ ಬಂದಿದೆ. ವಾರ್ ರೂಂಗೇ ಸೀಮಿತವಾಗಿರುವ ಸಾಹೇಬರಿಗೆ ಗ್ರೀನ್ ಆರ್ಮಿ ಫೋರ್ಸ್  ಸ್ಕೂಲ್ ಬ್ಯಾಗ್ ಅಕ್ರಮವನ್ನು ಗಮನಕ್ಕೆ ತಂದ್ರೂ ಏನೂ ಆಗಿಯೇ ಇಲ್ಲ ಎನ್ನುವಂತೆ  ತುಂಬಾ ತಣ್ಣಗೆ ರಿಯಾಕ್ಟ್ ಮಾಡಿದ್ರಂತೆ.ಅವರಿಗೇನು ಆಗಬೇಕು ಹೇಳಿ..ದುಡ್ಡು ಹೋಗೋದು ಜನರ ಜೇಬಿನಿಂದಲ್ವೇ..ಸಾಹೇಬರಿಗೆ ಕಳೆದುಕೊಳ್ಳುವುದೇನಿದೆ..ಆದರೆ ಶ್ವೆಟರ್ ಹಗರಣದ ನಂತರ ನಡೆದಿರುವ ಸ್ಕೂಲ್ ಬ್ಯಾಗ್ ಹಗರಣವನ್ನು ಗಂಭೀರವಾಗಿ ಪರಿಗಣಿಸೋದು ಅವರ ಕರ್ತವ್ಯವಷ್ಟೇ ಅಲ್ಲ ಬಾಧ್ಯಸ್ಥಿಕೆ ಕೂಡ ಆಗಿತ್ತು.

ಆದರೆ ಅವರ ಧೋರಣೆ ಗಮನಿಸಿದ್ರೆ ಬಿಬಿಎಂಪಿ ಶಾಲೆಗಳ ಬಗ್ಗೆಯಾಗಲಿ, ಮಕ್ಕಳ ಬಗ್ಗೆಯಾಗಲಿ ಆ ಕಾಳಜಿ ಇದ್ದಂತೆ ಅನಿಸ್ತಿಲ್ಲ.ಗೋಲ್ಮಾಲ್ ನಡೆದಿರುವ ಶಂಕೆ ಬಗ್ಗೆಯೂ ತಲೆಕೆಡಿಸಿಕೊಂಡಂತೆ ಕಾಣಲಿಲ್ಲ ಎನ್ನುವುದು ಗ್ರೀನ್ ಆರ್ಮಿ ಫೋರ್ಸ್ ನ ಕಿರಣ್ ಕುಮಾರ್.

ಅದೇನೇ ಇರಲಿ,ಸಧ್ಯಕ್ಕೆ ಕಿರಣ್ ಕುಮಾರ್ ಅಕ್ರಮವನ್ನು ಸಂಬಂಧಿಸಿದವರ  ಗಮನಕ್ಕೆ ತಂದಿದ್ದಾರೆ.ಈ ಬಗ್ಗೆ ಶೀಘ್ರ ಪ್ರತಿಭಟನೆಗೂ ನಿರ್ಧರಿಸಿದ್ದಾರೆ.ಗೌರವ್ ಗುಪ್ತಾ ಏನ್ ಮಾಡ್ತಾರೆ..ಗೋಲ್ಮಾಲ್ ನಡೆಸಿದವರ ವಿರುದ್ದ ಕ್ರಮ ಕೈಗೊಳ್ತಾರೋ..ಅದಕ್ಕೆ ಸಾಥ್ ಕೊಟ್ಟ ಅಧಿಕಾರಿಗಳ ಹೆಡೆ ಮುರಿ ಕಟ್ಟುತ್ತಾರೋ ಕಾದು ನೋಡಬೇಕಿದೆ.

Spread the love
Leave A Reply

Your email address will not be published.

Flash News