BreakingMoreScrollTop NewsUncategorizedಕ್ರೈಮ್ /ಕೋರ್ಟ್ಫೋಟೋ ಗ್ಯಾಲರಿರಾಜಕೀಯರಾಜ್ಯ-ರಾಜಧಾನಿ

DONT CARE FOR COURT..VICE CHANCELLOR PRO.VENUGOPAL NOT READY TO QUIT..?! ಹೈಕೋರ್ಟ್ ಆದೇಶಕ್ಕೂ ಡೋಂಟ್ ಕೇರ್.. ಕುಲಪತಿ ಖುರ್ಚಿ ಬಿಡದ ಪ್ರೊ,.ಕೆ.ಆರ್ ವೇಣುಗೋಪಾಲ್

ಬೆಂಗಳೂರು:ಖುರ್ಚಿ ವ್ಯಾಮೋಹ ಇರಬೇಕು..ಆದರೆ ಅದು ನ್ಯಾಯಾಂಗ ನಿಂದನೆಯಂಥ ವಿಪರೀತಕ್ಕೆ ಹೋಗಬಾರದು.ಬೆಂಗಳೂರು ವಿವಿ ಕುಪಲತಿ ಡಾ.ವೇಣುಗೋಪಾಲ್ ವಿಷಯದಲ್ಲಿ ಆಗಿರೋದು ಅದೇ..ಹುದ್ದೆಯನ್ನೇ ವಜಾ ಮಾಡಲಾಗಿದೆ ಎಂದು ಹೈ ಕೋರ್ಟ್ ಸಾರಿ ಹೇಳಿದ್ರೂ ಕೋರ್ಟ್ ನ ಆರ್ಡರ್ ಟಪಾಲ್ ನಲ್ಲಿ ಬಂದು ಕೈ ಸೇರಿದರೇನೆ ನಂಬೋದು ಎಂದು ಮಕ್ಕಳಂತೆ ರಚ್ಚೆ ಹಿಡಿದಿರುವುದು ಹೇಸಿಗೆಯಂತ ಕಾಣಿಸುತ್ತಿದೆ.ಇನ್ನೊಂದೆಡೆ ಸಿಂಡಿಕೇಟ್ ಮೆಂಬರ್ಸ್ ವೇಣುಗೋಪಾಲ್ ಕದ್ದುಮುಚ್ಚಿ ಕಚೇರಿಗೆ ಬಂದು ಕಡತಗಳಿಗೆಲ್ಲಿ ಸಹಿ ಹಾಕಿಬಿಡ್ತಾರೆಂದು ಹದ್ದುಗಣ್ಣಿನ ನಿಗಾ ಇಟ್ಟು ಕಾಯುತ್ತಿದ್ದಾರೆ.

ಬಹುಷಃ ಇದು ಬೆಂಗಳೂರು ವಿವಿಯಲ್ಲಿ ನಡೆದಿರಬಹುದಾದ ಮೊದಲ ದುರಂತದ ಪ್ರಕರಣನಾ..? ಬೇರೆ ಕಾರಣಗಳಿಗೆ ವಿವಾದದ ಕೇಂದ್ರವಾಗುತ್ತಿದ್ದ ವಿಶ್ವವಿದ್ಯಾನಿಲಯ ವೇಣುಗೋಪಾಲ್ ಪ್ರಕರಣಕ್ಕೆ ಸಾಕ್ಷಿಯಾಗಬೇಕಾಗಿ ಬರುತ್ತದೆಂದು ಯಾರೂ ಊಹಿಸಿರಲಿಕ್ಕಿಲ್ಲವೇನೋ.ಕುಲಪತಿಯಾಗಿ ನೇಮಕಗೊಂಡ ಮೊದಲ ದಿನದಿಂದಲೂ ನೇಮಕಾತಿ ವಿವಾದದಿಂದ ಹಿಡಿದು ಆಡಳಿತಾತ್ಮಕ  ಹಾಗೂ ಅಭಿವೃದ್ಧಿ ವಿಷಯಗಳಲ್ಲಿ ತೆಗೆದುಕೊಳ್ಳುತ್ತಿದ್ದ ನಿರ್ಣಯ ಮತ್ತು ಕಾರ್ಯ ವೈಖರಿಯಿಂದ ಸದಾ ಚರ್ಚೆಗೆ ಗ್ರಾಸವಾಗಿದ್ದು ಕೂಡ ವಿವಿ ಇತಿಹಾಸದಲ್ಲಿ ಇದೇ ಮೊದಲ ಬಾರಿ ಇರಬೇಕೇನೋ..

ನೇಮಕಾತಿ ವಿಚಾರದಲ್ಲಿ ವೇಣುಗೋಪಾಲ್ ಸದಾ ವಿವಾದದ ಕೇಂದ್ರವಾಗೇ ಇದ್ದರು.ನೇಮಕಾತಿ ಎನ್ನುವುದು ಮಾನದಂಡಗಳ ಅನ್ವಯ ನಡೆದೇ ಇಲ್ಲ ಎನ್ನುವ ವಾದ ಅನೇಕರದ್ದಾಗಿತ್ತು.ಆದರೆ ಸರ್ಕಾರದ ಆಡಳಿತದಲ್ಲಿರುವ ಕೆಲವರ ಕೃಪಕಟಾಕ್ಷದಿಂದ ಪಾರಾಗುತ್ತಲೇ ಬಂದಿದ್ದರು.ಕಾನೂನಿನ ರಕ್ಷಣೆ ಪಡೆಯೊಕ್ಕೆ ಲಕ್ಷ ಲಕ್ಷಗಳನ್ನು ಸುರಿದಿದ್ದರೆನ್ನುವ ಆರೋಪಗಳು ಇವೆ.ಆದರೆ ಎಲ್ಲಕ್ಕಿಂತ ಕಾನೂನೇ ದೊಡ್ಡದು ಎನ್ನುವಂತೆ ಮೊನ್ನೆ ನ್ಯಾಯಮೂರ್ತಿ ಎಸ್.ಸುಜಾತ ಮತ್ತು ನ್ಯಾಯಮೂರ್ತಿ ಶಿವಶಂಕರ್ ಅಮರಣ್ಣನವರ್ ಅವರಿದ್ದ ಹೈ ಕೋರ್ಟ್ ನ ದ್ವಿಸದಸ್ಯ ಪೀಠ ವೇಣುಗೋಪಾಲ್ ನೇಮಕಾತಿಯನ್ನು ಅಸಿಂಧು ಎಂದು ಡಿಕ್ಲೇರ್ ಮಾಡಿ ಒಟ್ಟಾರೆ ಪ್ರಕ್ರಿಯೆಯನ್ನೇ ಅನೂರ್ಜಿತಗೊಳಿಸಿದೆ.ಇದು ಕುಲಪತಿಯೊಬ್ಬರ ವಿಚಾರದಲ್ಲಿ ಕೋರ್ಟ್ ಇತ್ತೀಚಿನ ವರ್ಷಗಳಲ್ಲಿ ನೀಡಿರಬಹುದಾದ ಐತಿಹಾಸಿಕ ತೀರ್ಪೆನ್ನುವುದು ಸಿಂಡಿಕೇಟ್ ಸದಸ್ಯ ಸುಧಾಕರ್ ಅಭಿಪ್ರಾಯ.

ಡಾ.ಕೆ.ಆರ್. ವೇಣುಗೋಪಾಲ್ ಅವರ ನೇಮಕಾತಿ ಬಗ್ಗೆ  ರಾಜ್ಯಪಾಲರು ಹೊರಡಿಸಿದ್ದ ಆದೇಶವೇ ರದ್ದದಂತಾಗಿದ್ದು ಈ ವಿಷಯವಾಗಿ ಹೈಕೋರ್ಟ್ ಏಕಸದಸ್ಯಪೀಠ ನೀಡಿದ್ದ  ಆದೇಶವನ್ನೇ ವಿಭಾಗೀಯಪೀಠ ಎತ್ತಿಹಿಡಿದಿದೆ.ಇದರಿಂದಾಗಿ ಈ ಕೂಡಲೇ ವೇಣುಗೋಪಾಲ್ ತಮ್ಮ ಹುದ್ದೆ ತ್ಯಜಿಸಬೇಕಾಗುತ್ತದೆ ಆದರೆ ಸನ್ಮಾನ್ಯರು ನನಗೆ ಕೋರ್ಟ್ ಆದೇಶ ಕೈಯಿಗೆ ಬಂದು ತಲುಪಬೇಕು ಎಂದು ಹಠ ಹಿಡಿದು ಕುತಿದ್ದಾರೆ.

ವೇಣುಗೋಪಾಲ್ ಮುಂದಿರುವ ಆಯ್ಕೆಗಳೇನು,,?

1-ಬಹುತೇಕ ಕಾನೂನಿನ ಆಸರೆಯೂ ಇದೀಗ ವೇಣುಗೋಪಾಲ್ ಅವರಿಗೆ ದಕ್ಕದೆ ಹೋಗಬಹುದು.ಏಕೆಂದರೆ ಏಕಸದ್ಯ ಪೀಠದ ತೀರ್ಪನ್ನೇ ಹೈ ಕೋರ್ಟ್ ಎತ್ತಿ ಹಿಡಿದಿರುವುದರಿಂದ ಸುಪ್ರಿಂ ಮೊರೆ ಹೋದರೂ ಕೆಳ ಹಂತದ ಕೋರ್ಟ್ ಗಳು ನೀಡುವ ಆದೇಶವನ್ನೇ ಪುರಸ್ಕರಿಸುವ ಸಾಧ್ಯತೆಗಳಿವೆ ಎನ್ನಲಾಗ್ತಿದೆ

2-ಈವರೆಗೆ ವೇಣುಗೋಪಾಲ್ ಅವರಿಗೆ ಆಸರೆಯಾಗಿದ್ದುದು ನ್ಯಾಯಾಲಯದ ಮಧ್ಯಂತರ ಆದೇಶ.ಅದೇ ಈಗ ತೆರವಾಗಿರುವುದರಿಂದ ಹುದ್ದೆ ತ್ಯಜಿಸುವುದು ಅನಿವಾರ್ಯವಾಗಲಿದೆ.ತನ್ನ  ಸೇವಾವಧಿ ಜೂನ್ 12ರವರೆಗೆ ಇದೆ ಅಲ್ಲಿವರೆಗೆ ಮುಂದುವರೆಯುವ ಕನಸು ಕಾಣುವುದು ಸೂಕ್ತವಾಗುವುದಿಲ್ಲ.

3- ಅಂತಿಮವಾಗಿ ಸುಪ್ರೀಂಕೋರ್ಟ್ ಮೊರೆ ಹೋಗಿ ಹೈಕೋರ್ಟ್ ವಿಭಾಗೀಯಪೀಠದ ಆದೇಶಕ್ಕೆ ತಡೆಯಾಜ್ಞೆ ತರಬೇಕಾಗುತ್ತದೆ.

ಸರ್ಕಾರ-ಶಿಕ್ಷಣ ಇಲಾಖೆಗೂ ಮುಖಭಂಗ: ಮೇಲ್ಕಂಡ ತೀರ್ಪು ಬೆಂಗಳೂರು ವಿಶ್ವವಿದ್ಯಾಲಯ, ರಾಜ್ಯಪಾಲರ ಕಚೇರಿ, ಡಾ.ಕೆ. ಆರ್. ವೇಣುಗೋಪಾಲ್ ಮತ್ತು ರಾಜ್ಯ ಉನ್ನತ ಶಿಕ್ಷಣ ಇಲಾಖೆಗೆ ಮುಖಭಂಗ ಎಂದೇ ಹೇಳಲಾಗುತ್ತಿದೆ.  ಎಲ್ಲಾ ಮೇಲ್ಮನವಿಗಳನ್ನು ವಜಾಗೊಳಿಸಿ ಏಕಸದಸ್ಯಪೀಠದ ಆದೇಶ ಎತ್ತಿಹಿಡಿದಂತಾಗಿದೆ

ವಿಭಾಗೀಯಪೀಠದ ತೀರ್ಪು ಏನು?: ”ನಾಲ್ಕು ಮೇಲ್ಮನವಿಗಳನ್ನು ವಜಾಗೊಳಿಸುವ ವೇಳೆ ನ್ಯಾಯಮೂರ್ತಿ ಎಸ್.ಸುಜಾತ ಮತ್ತು ನ್ಯಾಯಮೂರ್ತಿ ಶಿವಶಂಕರ್ ಅಮರಣ್ಣನವರ್ ಅವರಿದ್ದ ವಿಭಾಗೀಯಪೀಠವು  2018ರ ಜೂ.12ರಂದು ಹೊರಡಿಸಿದ್ದ ನೇಮಕ ಆದೇಶಕ್ಕೆ ಸರ್ಕಾರದ ಅನುಮೋದನೆ ಇರಲಿಲ್ಲ. ನೇಮಕಾತಿ ಆದ ಮೇಲೆ ಅಂದ್ರೆ  2018ರ ಜೂ.28ರಂದು ಸರ್ಕಾರ ಅನುಮೋದನೆ ನೀಡಿದೆ. ಇದು ಕರ್ನಾಟಕ ವಿಶ್ವವಿದ್ಯಾಲಯಗಳ ಕಾಯ್ದೆ-2000ರ ಸೆಕ್ಷನ್ 14(4)ರ ಸ್ಪಷ್ಟ ಉಲ್ಲಂಘನೆಯಾಗಿದೆ” ಎಂದು ತೀರ್ಪಿತ್ತಿದೆ.

ಸಹಜವಾಗಿ ಯಾವುದೆ ನೇಮಕಾತಿಗಳು ಸರ್ಕಾರದ ಅನುಮೋದನೆ ಪಡೆದ ನಂತರವೇ ನಡೆಯುತ್ತವೆ. ಆದರೆ ಡಾ.ಕೆ.ಆರ್.ವೇಣುಗೋಪಾಲ್ ಪ್ರಕರಣದಲ್ಲಿ ನೇಮಕಾತಿ ನಿಯಮಗಳನ್ನೇ ಉಲ್ಲಂಘಿಸಲಾಗಿದೆ. ಕೇವಲ ನಾಲ್ಕು ವರ್ಷ ಅವಧಿ ಅಥವಾ ಅವರಿಗೆ 67 ವರ್ಷ ತುಂಬುವವರೆಗೆ ಎಂಬ ಅಂಶಗಳನ್ನು ಉಲ್ಲೇಖಿಸಿ 2018ರ ಜೂ.12ರಂದು ನೇಮಕಾತಿ ಮಾಡಲಾಗಿತ್ತು.ಆದರೆ ಪ್ರಕರಣವನ್ನು ಅವಲೋಕಿಸಿ ಏಕ ಸದಸ್ಯ ನ್ಯಾಯಪೀಠವು 2019ರ ಸೆ.24ರಂದು ವೇಣುಗೋಪಾಲ್ ನೇಮಕ ರದ್ದುಪಡಿಸಿತ್ತು. ಆ ಆದೇಶಕ್ಕೆ  ತಡೆಯಾಜ್ಞೆ ನೀಡಿತ್ತು.

ವೇಣುಗೋಪಾಲ್ ಕುಲಪತಿ ಹುದ್ದೆಯನ್ನು ಬಿಟ್ಟುಕೊಡದಿರುವುದು ಕೇವಲ ನ್ಯಾಯಾಂಗ ನಿಂದನೆ ಮಾತ್ರವಲ್ಲ,ಅವರ ನೈತಿಕತೆ ಪ್ರಶ್ನಿಸುವಂತಿದೆ.ಕುಲಪತಿ ಸ್ಥಾನವನ್ನು ತಮ್ಮ ಅರಸೊತ್ತಿಗೆ ಎನ್ನುವಂತೆ ಬಳಸಿಕೊಂಡರು,ಯಾವುದೇ ಕಮಿಟಿ-ಸಬ್ ಕಮಿಟಿಗಳಿಗೆ ನೇಮಕಾತಿ ಮಾಡಲೇ ಇಲ್ಲ.ಎಲ್ಲಕ್ಕೂ ತಾವೇ ಅಧ್ಯಕ್ಷರಾಗಿರಬೇಕೆನ್ನುವ ಸ್ವಾರ್ಥಕ್ಕಾಗಿ ವಿವಿ ಹಿತಾಸಕ್ತಿಯನ್ನು ಬಲಿಕೊಟ್ಟರು.ತಾವು ಮಾಡಿದ ಸ್ವಯಂಕೃತಪರಾಧಕ್ಕೆ ಇವತ್ತು ಸರಿಯಾದ ಶಿಕ್ಷೆಯನ್ನೇ ಅನುಭವಿಸುತ್ತಿದ್ದಾರೆ.

-ಸುಧಾಕರ್-ಬೆಂಗಳೂರು ವಿವಿ ಸಿಂಡಿಕೇಟ್ ಸದಸ್ಯ

ಈ ಬಗ್ಗೆ ಏನ್ ಕ್ರಮ ಕೈಗೊಳ್ಳಬೇಕೆಂದು ತಿಳಿಯದೆ ಚಿಂತಾಕ್ರಾಂತರಾಗಿದ್ದಾರೆ ಕುಲಸಚಿವ ಕೊಟ್ರೇಶ್.

“ಹೈ ಕೋರ್ಟ್ ಹುದ್ದೆಯನ್ನು ವಜಾಗೊಳಿಸಿರುವ ಬಗ್ಗೆ ಮಾಹಿತಿ ನಮಗೆ ಸೋಶಿಯಲ್ ಮೀಡಿಯಾಗಳಿಂದ ಗೊತ್ತಾಗಿದೆ.ಆದರೆ ಆದೇಶ ಅಧಿಕೃತವಾಗಿ ಕೈ ಸೇರುವವರೆಗೂ ಕ್ರಮ ಕೈಗೊಳ್ಳಲು ಸಾಧ್ಯವಾಗುವುದಿಲ್ಲ..ತನ್ನ ಎದುರಿಗೆ ಸೃಷ್ಟಿಯಾಗಿರುವ ಗೊಂದಲ ನಿವಾರಿಸುವಂತೆ ಉನ್ನತ ಶಿಕ್ಷಣ ಸಚಿವರಿಗೆ ಪತ್ರ ಬರೆದಿದ್ದೇನೆ.ಅಲ್ಲಿಂದ ಬರಬಹುದಾದ ಆದೇಶದ ನಿರೀಕ್ಷೆಯಲ್ಲಿದ್ದೇನೆ.”.

                                                                                                                                -ಕುಲಸಚಿವ ಕೊಟ್ರೇಶ್.

ಆದರೆ ವೇಣುಗೋಪಾಲ್ ಅವರು ಮಾಡಿಕೊಂಡ ಯಡವಟ್ಟುಗಳಿಗೆ ಸರಿಯಾದ ಶಿಕ್ಷೆಯೇ ಆಗಿದೆ ಎನ್ನುತ್ತಾರೆ ಸಿಂಡಿಕೇಟ್ ಸದಸ್ಯರು ಹಾಗು ಅವರಿಂದ ಅವಮಾನ-ಅನ್ಯಾಯಕ್ಕೊಳಗಾದ ಅನೇಕ ಉಪನ್ಯಾಸಕರು.ಹುದ್ದೆ ಬಿಟ್ಟುಕೊಡದೆ ಕಳ್ಳಾಟ ಆಡುತ್ತಿರುವ ವೇಣುಗೋಪಾಲ್ ಕದ್ದುಮುಚ್ಚಿ ವಿವಿಗೆ ಬಂದು ಕಡತಗಳಿಗೆ ಸಹಿ ಹಾಕುವ ಸಾಧ್ಯತೆಗಳಿವೆ.ಹಾಗಾಗಿ ಅದಕ್ಕೆ ಅವಕಾಶ ಮಾಡಿಕೊಡಬಾರದು ಎಂದು ಕುಲಸಚಿವರಿಗೆ ಮೌಖಿಕವಾಗಿ ಮನವಿ ಮಾಡಿಕೊಂಡಿದ್ದಾರಂತೆ.

ಅದೇನೇ ಆಗಲಿ ಇಳಿ ವಯಸ್ಸಿನಲ್ಲಿ ಹುದ್ದೆಯನ್ನು ನಿಯಮಬದ್ದವಾಗಿ ತೆಗೆದುಕೊಳ್ಳದೆ ವಾಮಮಾರ್ಗದ ಮೂಲಕ ಗಿಟ್ಟಿಸಿ ಹುದ್ದೆಯಲ್ಲಿ ಸರ್ವಾಧಿಕಾರಿಯಂತೆ ಮೆರೆದ ಆರೋಪ ಎದುರಿಸುತ್ತಿರುವ ವೇಣುಗೋಪಾಲ್ ಅವರಿಗೆ ನಿವೃತ್ತಿ ಅಂಚಿನಲ್ಲಿ ಇಂತದ್ದೊಂದು ಕಹಿ ಅನುಭವ ಆಗಿರೋದು ವಿಪರ್ಯಾಸ ಹಾಗೆಯೇ ಖೇದಕರ ಕೂಡ.

Spread the love

Related Articles

Leave a Reply

Your email address will not be published.

Back to top button
Flash News