“HASI KARAGA MANTAPA” FROM BDA IN THE COST OF 4 CRORES:BDA ದಿಂದ 4 ಕೋಟಿ ರೂಪಾಯಿ ವೆಚ್ಚದಲ್ಲಿ “ಹಸಿಕರಗ” ಮಂಟಪ

ಕರಗಕ್ಕೆ ಶೃದ್ಧೆ-ಸಂಭ್ರಮ ಇಮ್ಮಡಿಗೊಳಿಸುವ ನಿಟ್ಟಿನಲ್ಲಿ ಬಿಡಿಎ ಮಹತ್ವದ ಹೆಜ್ಜೆ: ಎಸ್.ಆರ್.ವಿಶ್ವನಾಥ್

0

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರು ನಗರದ ವಿಶ್ವವಿಖ್ಯಾತ ಕರಗ ಮಹೋತ್ಸವದ ಪೂಜಾ ಸ್ಥಳವಾದ ಶ್ರೀಕಂಠೀರವ ಕ್ರೀಡಾಂಗಣದ ಆವರಣದಲ್ಲಿರುವ ಹಸಿ ಕರಗ ಮಂಟಪವನ್ನು ಅಭಿವೃದ್ಧಿಪಡಿಸಲು ಬೆಂಗಳೂರು ಅಭಿವೃದ್ಧಿದ ಪ್ರಾಧಿಕಾರ ನಿರ್ಧರಿಸಿದೆ.

ಇದಕ್ಕಾಗಿ ಸುಮಾರು 4 ಕೋಟಿ ರೂಪಾಯಿ ಹಣ ಮಂಜೂರಾತಿಗೆ ಬಿಡಿಎ ಅನುಮೋದನೆ ನೀಡಿದೆ. ಈ ನಿರ್ಧಾರವನ್ನು ತೆಗೆದುಕೊಂಡಿದ್ದಕ್ಕಾಗಿ ಬಿಡಿಎ ಅಧ್ಯಕ್ಷ ಎಸ್.ಆರ್.ವಿಶ್ವನಾಥ್ ಮತ್ತು ಆಯುಕ್ತ ರಾಜೇಶ್ ಗೌಡ ಅವರಿಗೆ ಶುಕ್ರವಾರ ವಹ್ನಿಕುಲ ಕ್ಷತ್ರಿಯ ಸಮಾಜದ ಮುಖಂಡರು ಸನ್ಮಾನಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಎಸ್.ಆರ್.ವಿಶ್ವನಾಥ್ ಅವರು, ಬೆಂಗಳೂರು ಕರಗ ಇಡೀ ವಿಶ್ವದಲ್ಲಿ ಹೆಸರುವಾಸಿಯಾಗಿರುವ ಉತ್ಸವವಾಗಿದೆ. ಯಲಹಂಕದಲ್ಲಿ ನಡೆಯುವ ಕರಗ ಉತ್ಸವಕ್ಕೆ ಸೂಕ್ತ ರೀತಿಯಲ್ಲಿ ಅಗತ್ಯ ಮೂಲಸೌಕರ್ಯಗಳನ್ನು ಕಲ್ಪಿಸಲಾಗಿದೆ. ಇದನ್ನು ನೋಡಿದ ಬೆಂಗಳೂರು ಕರಗ ಸಮಿತಿಯವರು ಶ್ರೀ ಕಂಠೀರವ ಕ್ರೀಡಾಂಗಣದ ಆವರಣದಲ್ಲಿಯೂ ಇಂತಹ ಸೌಲಭ್ಯಗಳನ್ನು ಕಲ್ಪಿಸುವಂತೆ ಮನವಿ ಮಾಡಿದ್ದರು ಎಂದರು.

ಇಲ್ಲಿರುವ ಕಲ್ಯಾಣಿ ಮತ್ತು ಹಸಿ ಕರಗ ಮಂಟಪ ಶಿಥಿಲಗೊಂಡು ವೀರಗಾರರು ಪೂಜಾ ವಿಧಿವಿಧಾನಗಳನ್ನು ನಡೆಸುವುದು ಕಷ್ಟಕರವಾಗಿತ್ತು. ಈ ಸಮಸ್ಯೆಯನ್ನು ಪರಿಹರಿಸುವ ನಿಟ್ಟಿನಲ್ಲಿ ಬಿಡಿಎ ಪ್ರಾಧಿಕಾರದ ಸಭೆಯಲ್ಲಿ ಚರ್ಚಿಸಿ ಬಿಡಿಎ ವತಿಯಿಂದಲೇ ಮಂಟಪ ಮತ್ತು ಕಲ್ಯಾಣಿಯನ್ನು ಅಭಿವೃದ್ಧಿಪಡಿಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.

ಈ ವಿಶ್ವವಿಖ್ಯಾತ ಕರಗದ ಬಗ್ಗೆ ಸ್ವತಃ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಹೆಚ್ಚಿನ ಆಸಕ್ತಿ ತೋರಿ 4 ಕೋಟಿ ರೂಪಾಯಿಗಳನ್ನು ಮಂಜೂರು ಮಾಡುವ ನಿರ್ಧಾರವನ್ನು ಕೈಗೊಂಡಿದ್ದಾರೆ. ಸುಂದರವಾಗಿ ಮಂಟಪ ನಿರ್ಮಾಣ ಸೇರಿದಂತೆ ಇನ್ನಿತರೆ ಅಗತ್ಯ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸಲಾಗುತ್ತದೆ. ಒಂದು ವೇಳೆ ಈ ಅಭಿವೃದ್ಧಿ ಕಾಮಗಾರಿಗೆ ಹೆಚ್ಚುವರಿ ಹಣ ಬೇಕಾದರೆ ಅದನ್ನೂ ಒದಗಿಸಿಕೊಡಲು ಬಿಡಿಎ ಬದ್ಧವಾಗಿದೆ ಎಂದು ವಿಶ್ವನಾಥ್ ತಿಳಿಸಿದರು.

ಏಪ್ರಿಲ್ ನಲ್ಲಿ ಶಿಲಾನ್ಯಾಸ: ಹಸಿ ಕರಗ ಮಂಟಪ ಮತ್ತು ಸುತ್ತಮುತ್ತಲಿನ ಪರಿಸರವನ್ನು ಅಭಿವೃದ್ಧಿಪಡಿಸುವ ಯೋಜನೆಯನ್ನು ಕ್ಷಿಪ್ರಗತಿಯಲ್ಲಿ ರೂಪಿಸಲಾಗುತ್ತದೆ. ಏಪ್ರಿಲ್ ತಿಂಗಳಲ್ಲಿ ಈ ಅಭಿವೃದ್ಧಿ ಕಾಮಗಾರಿಗೆ ಶಿಲಾನ್ಯಾಸ ನೆರವೇರಿಸಲಾಗುತ್ತದೆ. ಮುಂದಿನ ವರ್ಷದ ಏಪ್ರಿಲ್ ತಿಂಗಳಲ್ಲಿ ನಡೆಯುವ ಕರಗದ ವೇಳೆಗೆ ಕಾಮಗಾರಿಯನ್ನು ಪೂರ್ಣಗೊಳಿಸುವ ಗುರಿಯನ್ನು ಹಾಕಿಕೊಳ್ಳಲಾಗಿದೆ ಎಂದು ತಿಳಿಸಿದರು.

ಏನೇನು ಅಭಿವೃದ್ಧಿ?:ಹಸಿ ಕರಗ ಮಂಟಪ ಅಭಿವೃದ್ಧಿ, ಕಲ್ಯಾಣಿ ಜೀರ್ಣೋದ್ಧಾರ, ಬೃಂದಾವನ, ಧ್ಯಾನ ಮಂದಿರ, ಭಕ್ತರು ಕುಳಿತುಕೊಳ್ಳಲು ವ್ಯವಸ್ಥೆ, ದೀಪಾಲಂಕಾರ ವ್ಯವಸ್ಥೆ ಸೇರಿದಂತೆ ಹಲವಾರು ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತದೆ. ವಿಧಾನಪರಿಷತ್ ಸದಸ್ಯ ಪಿ.ಆರ್.ರಮೇಶ್, ತಿಗಳರ ಸಂಘದ ಸುಬ್ಬಣ್ಣ, ಲಕ್ಷ್ಮಣ್, ಲೋಕೇಶ್, ಕೃಷ್ಣಮೂರ್ತಿ, ಯಾದಗಿರಿ ರಾಮಚಂದ್ರ, ಸುರೇಶ್, ಜಯರಾಜ್ ಇದ್ದರು.

Spread the love
Leave A Reply

Your email address will not be published.

Flash News