Breakinglock downMoreScrollTop NewsUncategorizedಜಿಲ್ಲೆಫೋಟೋ ಗ್ಯಾಲರಿಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ(BMTC-KSRTC)ರಾಜಕೀಯರಾಜ್ಯ-ರಾಜಧಾನಿ

IF YOU WANT JOB…CONDITION APPLY…?! :”ಷರತ್ತು”ಗಳಿಗೆ ಒಪ್ಪಿದರಷ್ಟೇ ಸಾರಿಗೆ ಕಾರ್ಮಿಕರಿಗೆ “ಕೆಲಸ” ?!..ನಿರಾಕರಿಸಿದ್ರೆ “ಖಾಯಂ ನಿರುದ್ಯೋಗ”ದ ಚಿಂತೆ..?!

*******ಯಾವುದೇ ಕಾರ್ಮಿಕ ಸಿಬ್ಬಂದಿ ಮರುನಿಯೋಜನೆ ಆಗಬೇಕಿದ್ದರೆ ಆತನ ಸರ್ವಿಸ್(ಸೇವಾವಧಿ) ಕಡಿತ ಮಾಡಲಾಗುತ್ತದೆ.ಈವರೆಗೆ ಸಿಗುತ್ತಿದ್ದ ಸೌಲಭ್ಯ-ಭತ್ಯೆಗಳಿಗೆ ಮುಂದೆಂದೂ ಬಾಧ್ಯಸ್ಥನಾಗಿರುವುದಿಲ್ಲ.

*******ಮರು ನಿಯೋಜನೆ ಪಡೆಯುವ ಕಾರ್ಮಿಕ ಸಿಬ್ಬಂದಿಗೆ ವಾರ್ಷಿಕವಾಗಿ 2 ಇಂಕ್ರಿಮೆಂಟ್ಸ್ ಕಡಿತ ಮಾಡಲಾಗುತ್ತದೆ.ನಿವೃತ್ತಿ ಆಗುವವರೆಗೂ ಯಾವುದೇ ಮುಂಬಡ್ತಿಗೆ ಅರ್ಹನಾಗಿರುವುದಿಲ್ಲ.

*******3-ಕೆಲಸ ಮಾಡುವ ನಿಗಮಕ್ಕೆ ವಿಧೇಯನಾಗಿರಬೇಕು.ನಿಗಮಕ್ಕೆ ಕಳಂಕ ತರುವ ಯಾವುದೇ ಉದ್ದೇಶ  ಹೊಂದಿರಬಾರದು. ಸೇವಾವಧಿಯಲ್ಲಿ ಯಾವುದೇ ಮುಷ್ಕರ-ಚಳುವಳಿಯಲ್ಲಿ ಪಾಲ್ಗೊಳ್ಳಬಾರದು.ನಿಗಮಗಳು ತೆಗೆದುಕೊಳ್ಳುವ ನಿರ್ದಾರವನ್ನು ಗೌರವಿಸುವಂತಿರಬೇಕು.

ಮುಷ್ಕರದಲ್ಲಿ ಭಾಗವಹಿಸಿದ ತಪ್ಪಿಗೆ ವಜಾಗೊಂಡ ಕಾರ್ಮಿಕ ನೌಕರಿ ನಿರೀಕ್ಷೆಯಲ್ಲಿ ಹತಾಷಗೊಂಡು ಆತ್ಮಹತ್ಯೆಗೆ ಶರಣಾಗಿದ್ಗ ದೃಶ್ಯ( ಸಾಂದರ್ಭಿಕ ಚಿತ್ರ.)
ಮುಷ್ಕರದಲ್ಲಿ ಭಾಗವಹಿಸಿದ ತಪ್ಪಿಗೆ ವಜಾಗೊಂಡ ಕಾರ್ಮಿಕ, ನೌಕರಿ ನಿರೀಕ್ಷೆಯಲ್ಲಿ ಹತಾಷಗೊಂಡು ಆತ್ಮಹತ್ಯೆಗೆ ಶರಣಾಗಿದ್ಗ ದೃಶ್ಯ( ಸಾಂದರ್ಭಿಕ ಚಿತ್ರ.)

ಬೆಂಗಳೂರು: ಇವು ಮುಷ್ಕರ ನಡೆಸಿ ಕೆಲಸ ಕಳೆದುಕೊಂಡು ಉದ್ಯೋಗ ಮರು ನಿರೀಕ್ಷೆಯಲ್ಲಿರುವ ಸಾರಿಗೆ ಕಾರ್ಮಿಕ ಸಿಬ್ಬಂದಿಗೆ ಸರ್ಕಾರ-ಸಾರಿಗೆ ನಿಗಮಗಳು ವಿಧಿಸಿರುವ ಷರತ್ತುಗಳು..ಇದಕ್ಕೆ ಒಪ್ಪಿಕೊಂಡ್ರಷ್ಟೇ ಕೆಲಸ..ಒಪ್ಪದಿದ್ರೆ ಅದನ್ನು ನಿಮ್ಮಗಳ “ನಿಷ್ಕಾಳಜಿ-ಕೆಲಸದ ಅವಶ್ಯಕತೆ ನಿಮಗಿಲ್ಲ” ಎಂದು ಭಾವಿಸಿ ವಿಲೇ ಮಾಡುವ ಮಾನಸಿಕ ಹಿಂಸೆಯ ಸೂಚನೆ-ಆದೇಶಗಳು ಡಿಪೋ ಮ್ಯಾನೇಜರ್ಸ್ ಗಳಿಂದ ಬರುತ್ತಿದೆ ಎನ್ನುವ ನೋವನ್ನು ಅನೇಕರು ಕನ್ನಡ ಫ್ಲ್ಯಾಶ್ ನ್ಯೂಸ್ ಜತೆ ಹಂಚಿಕೊಂಡಿದ್ದಾರೆ.

ಇದೇನಾ ಸಾರಿಗೆ ಸಚಿವ ಶ್ರೀರಾಮುಲು ವಜಾಗೊಂಡ ಸಾರಿಗೆ ಕಾರ್ಮಿಕರಿಗೆ ನೀಡುತ್ತಿರುವ ಬಂಪರ್ ಕೊಡುಗೆ..! ಅವರ ಬದುಕುಗಳಿಗೆ ನೀಡುತ್ತಿರುವ ಭದ್ರತೆ-ರಕ್ಷಣೆ..ಅವರಿಗೆ ಸ್ಪಂದಿಸುತ್ತಿರುವ ರೀತಿ..ಯಾವುದೆ ರೀತಿಯಲ್ಲೂ ಪ್ರಯೋಜನಕ್ಕೆ ಬಾರದ ಕೆಲಸವನ್ನು ಮರು ನಿಯೋಜನೆ ಹೆಸರಲ್ಲಿ ನೀಡುತ್ತಿರುವ ಶ್ರೀರಾಮುಲು ಅವರು ಯಾವತ್ತಾದ್ರೂ  ಈ ಮರುನಿಯೋಜನೆಯ ಸಾಧಕ-ಬಾಧಕಗಳ ಬಗ್ಗೆಯಾಗಲಿ, ಕಾರ್ಮಿಕರಿಗೆ ಅದರಿಂದ ಆಗಬಹುದಾದ ಪ್ರಯೋಜನ ಹಾಗೂ ನಷ್ಟಗಳ ಬಗ್ಗೆ ಆಲೋಚಿಸಿದ್ದಾರಾ..? ಖಂಡಿತಾ ಇಲ್ಲ..ಆ ವ್ಯವಧಾನವೇನಾದ್ರೂ ಸಚಿವರಿಗೆ ಇದ್ದಿದ್ದರೆ ಸಧ್ಯಕ್ಕೆ ನೀಡಲಾಗುತ್ತಿರುವ ಮರುನಿಯೋಜನೆಯ ಆದೇಶವನ್ನು ಅವರೇ ವಾಪಸ್ ಪಡೆದು ಕಾರ್ಮಿಕರಿಗೆ ಅನುಕೂಲವಾಗುವ ಹೊಸ ಆದೇಶವನ್ನು ಹೊರಡಿಸುತ್ತಿದ್ದರೇನೋ..ಆದರೆ ಅವರಿಗೆ ಆ ಕಾಳಜಿ-ಹಿತಾಸಕ್ತಿ ಇರಬೇಕಲ್ಲ..

ಪ್ರಜಾಸತ್ತಾತ್ಮಕ ವ್ಯವಸ್ಥೆ ಎನ್ನೊದೇ ಸಾರಿಗೆ ನಿಗಮಗಳಲ್ಲಿಲ್ಲವೇ..? ಹಕ್ಕುಗಳಿಗಾಗಿ  ಹೋರಾಡಿದ್ದೇ ಅಕ್ಷಮ್ಯವಾಗೋಯ್ತಾ..? ಮುಷ್ಕರ ನಡೆಸಿದ ಕಾರ್ಮಿಕರ ವಿಷಯದಲ್ಲಿ ತೆಗೆದುಕೊಂಡ ಹಾಗು ಈಗಲೂ ತೆಗೆದುಕೊಳ್ಳುತ್ತಿರುವ ನಿರ್ದಾರಗಳು ಅವರ ಪಾಲಿಗೆ ಮರಣಶಾಸನವಾಗುತ್ತಿದೆಯೇ ಹೊರತು ಅವರ ಜೀವನಗಳನ್ನು ಉದ್ಧಾರ ಮಾಡುವಂತೇನೂ ಕಾಣುತ್ತಿಲ್ಲ. ಮುಷ್ಕರ ಮಾಡಿ ವಜಾ ಆದವರಿಗೆ ಭಿಕ್ಷೆ ರೂಪದಲ್ಲಿ ನೀಡುತ್ತಿರುವ ಮರುನೇಮಕಾತಿ ಎನ್ನುವ ಆದೇಶಗಳು ಕಾರ್ಮಿಕರ ವೃತ್ತಿ-ಜೀವನವನ್ನು ಮತ್ತಷ್ಟು ಅಧೋಗತಿಗೆ ತಳ್ಳುತ್ತಿವೆ..

ಕೆಲಸ ಕಸಿದುಕೊಂಡು ಹತ್ತಿರತ್ತಿರ ಒಂದು ವರ್ಷ ಮನೆಯಲ್ಲಿ ನಿರುದ್ಯೋಗಿಗಳಾಗಿ ಕೊಳೆಯುವಂತೆ ಮಾಡಿದ ಆರೋಪ ಸರ್ಕಾರ  ಹಾಗು ಸಾರಿಗೆ ಇಲಾಖೆ ಮೇಲೆ ಮೊದಲೇ ಇದೆ.ಸಾರಿಗೆ ಕಾರ್ಮಿಕರು ಯಾವ್ ಮಟ್ಟದಲ್ಲಿ ಹತಾಷರಾಗಿದ್ದರೆಂದ್ರೆ ಸರ್ಕಾರದ ಮುಂದೆ ಮಾಡಿದ ತಪ್ಪಿಗೆ ಮಂಡಿಯೂರಿ ನೀವೇನ್ ಹೇಳ್ತಿರೋ ಹಾಗೆಯೇ ಕೇಳುತ್ತೇವೆ..ಕೆಲಸ ಕೊಡ್ರಪ್ಪ ಸಾಕು ಎನ್ನುವ ಸ್ಥಿತಿ ತಲುಪಿಬಿಟ್ಟಿದ್ರು.ಈ ಸನ್ನಿವೇಶಕ್ಕಾಗೇ ಕಾಯುತ್ತಿದ್ದ ಸರ್ಕಾರ ಒಂದೇ ಕಲ್ಲಿನಲ್ಲಿ ಎರಡು ಹಕ್ಕಿಗಳನ್ನು ಬಲಿ ಪಡೆದಂತೆ,ಕಾರ್ಮಿಕರಿಗೆ ಕೆಲಸ ಕೊಟ್ಟು ದೊಡ್ಡ ಉಪಕಾರ ಮಾಡಿದಂಗೂ ಆಗಿರಬೇಕು..ಹಾಗೆಯೇ ಅವರನ್ನು ಸಂಪೂರ್ಣವಾಗಿ ಕಂಟ್ರೋಲ್ ನಲ್ಲಿಯು ಇಟ್ಟುಕೊಳ್ಳುವಂತಿರಬೇಕು ಎನ್ನುವಂಥ ವಾತಾವರಣ ನಿರ್ಮಿಸುವಲ್ಲಿ ಯಶಸ್ವಿಯೂ ಆಗಿಬಿಡ್ತು.

ಕೆಲಸ ಸಿಕ್ಕರೆ ಸಾಕೆನ್ನುವ ಮನಸ್ಥಿತಿಯಲ್ಲಿದ್ದ ಸಾರಿಗೆ ಕಾರ್ಮಿಕರು, “ನಾವೇನೇ ಹೇಳಿದ್ರೂ ಕೇಳ್ತಾರೆ..ನಾವೇನೇ ರೂಲ್ಸ್ ಮಾಡಿದ್ರೂ ಫಾಲೋ ಮಾಡಿಯೇ ಮಾಡ್ತಾರೆ” ಏಕೆಂದ್ರೆ ಉದ್ಯೋಗ ಎನ್ನುವುದು ಅವರಿಗೆ ಅನಿವಾರ್ಯ  ಎಂದು ಅರಿತ ಸರ್ಕಾರ ಗ ರೂಪಿಸಿದ್ದೇ ಮರಣಶಾಸನ ಎಂದೇ ವಿಶ್ಲೇಷಿಸಲಾಗುತ್ತಿರುವ ಆ ರೂಲ್ಸ್ ಗಳನ್ನು….?!

ಕೆಎಸ್ ಆರ್ ಟಿಸಿ,ಬಿಎಂಟಿಸಿ ಸೇರಿದಂತೆ ಇರುವ ನಾಲ್ಕು ನಿಗಮಗಳಲ್ಲಿ ಕೆಲಸ ಕಳೆದುಕೊಂಡು ಮರುನಿಯೋಜನೆ ನಿರೀಕ್ಷೆಯಲ್ಲಿರುವ ಕಾರ್ಮಿಕರನ್ನು ನಿಯಮಗಳೆನ್ನುವ ಚಕ್ರವ್ಯೂಹದಲ್ಲಿ ಬಂಧಿಸಿ ಅವರ ಬಾಯನ್ನಷ್ಟೇ ಅಲ್ಲ, ಹೋರಾಟದ ಕಿಚ್ಚು, ಅನ್ಯಾಯವನ್ನು  ಪ್ರತಿಭಟಿಸುವ ಮನಸ್ತಿತಿ, ಪ್ರಶ್ನಿಸುವ ಹಕ್ಕನ್ನೆಲ್ಲಾ ಕಸಿದುಕೊಳ್ಳುವ ನಿಯಮಗಳನ್ನು ರೂಪಿಸಿತೆನ್ನುವ ಆಪಾದನೆ ಇದೆ.ದುರಂತ ಎಂದ್ರೆ ಈ ಷರತ್ತು ಒಪ್ಪಿಕೊಂಡು ಮರು ನಿಯೋಜನೆಗೆ ಮುಂದಾದವರೇ ಹೆಚ್ಚು,. ಬದುಕಿನ ಅನಿವಾರ್ಯತೆ ಅವರನ್ನು ಅಂತದ್ದೊಂದು ನಿರ್ಣಯಕ್ಕೆ ದೂಡಿದ್ದು ಕೂಡ ಅಷ್ಟೇ ಸತ್ಯ.

ಆದರೆ ಖಾಯಂ ಆಗದೆ  ತರಬೇತಿ ಅವಧಿಯಲ್ಲಿರುವ ಕೆಲವು ಹೊಸಬರಿಗೆ ಈ ನಿಯಮಗಳು ಅಷ್ಟೇನು ಮಾರಕ ಆಗದೆ ಇರಬಹುದು.ಆದರೆ ಅನೇಕ ವರ್ಷದಿಂದ ಕೆಲಸ ಮಾಡಿ, ಸಂಬಳ-ಭತ್ಯೆಗಳ ಹೆಚ್ಚಳಕ್ಕೆ ಕಾರಣವಾಗುವ ಸೇವಾನುಭವವನ್ನೇ ನೆಚ್ಚಿಕೊಂಡಿರುವ ಹಿರಿಯ ಕಾರ್ಮಿಕ ಸಿಬ್ಬಂದಿ ಪಾಲಿಗೆ ಮಾತ್ರ ಅಕ್ಷರಶಃ ಮರಣಶಾಸನ ಎಂದೇ ಹೇಳಲಾಗುತ್ತಿದೆ.

ಮೇಲ್ಕಂಡ ಮೂರು ಷರತ್ತುಗಳನ್ನು ಒಪ್ಪಿಕೊಳ್ಳುವಂತವರು ಮಾತ್ರ ಕೆಲಸಕ್ಕೆ ಬರಬಹುದು .ಉಳಿದಿದ್ದು ನಿಮ್ಮ ಆಯ್ಕೆ..ಎನ್ನುವ  ಮರುನಿಯೋಜನೆಯ ಪತ್ರಗಳು ಈಗಾಗಲೇ ಎಲ್ಲಾ ನೌಕರರ ಕೈ ಸೇರಿದೆ.ಆದರೆ ಷರತ್ತು ನೋಡುತ್ತಿದ್ದಂತೆ ಎಲ್ಲರೂ ಹೌಹಾರಿ ಹೋಗುತ್ತಿದ್ದಾರೆ.ಷರತ್ತು ಒಪ್ಪಿಕೊಂಡು ಕೆಲಸಕ್ಕೆ ಹೋಗುವುದಕ್ಕಿಂತ ಬೇರೆ ಉದ್ಯೋಗ ನೋಡಿಕೊಳ್ಳುವುದು ಸೂಕ್ತ ಎಂದು ಹಲವರು ಮಾತನಾಡಿಕೊಳ್ಳುತ್ತಿದ್ದರೆ,ಮನೆ ಮಂದಿ ಅನುಭವಿಸಿದ ಕಷ್ಟಕೋಟಲೆಗಳಿಂದ ಜರ್ಝರಿತವಾಗಿರುವ ಇನ್ನು ಕೆಲವು ಕಾರ್ಮಿಕ ಸಿಬ್ಬಂದಿ ಷರತ್ತುಗೊಳಪಟ್ಟು ಮರನಿಯೋಜನೆ ಪತ್ರಗಳನ್ನು ಸ್ವೀಕರಿಸಿ ಡ್ಯೂಟಿ ರಿಪೋರ್ಟ್ ಮಾಡಿಕೊಳ್ಳೊಕ್ಕೆ ಹೋಗುತ್ತಿದ್ದಾರಂತೆ.

ಇದಷ್ಟೇ ಅಲ್ಲ, ಒಂದ್ವೇಳೆ ಈ ಷರತ್ತುಗಳಿಗೆ ಒಪ್ಪಿಕೊಂಡು ಮರುನಿಯೋಜನೆ ಪತ್ರ ಸ್ವೀಕರಿಸಿ ಕೆಲಸಕ್ಕೆ ಬಾರದಿದ್ದರೆ ಕೆಲಸದ ಅಗತ್ಯತೆ ನಿಮಗಿಲ್ಲ ಎಂದು ಭಾವಿಸಿ ನಿಮ್ಮನ್ನು ಕೆಲಸದಿಂದ ತೆಗೆದು ಹಾಕುವ ಅಧಿಕಾರ ನಮಗಿದೆ ಎನ್ನುತ್ತಿದ್ದಾರಂತೆ ಡಿಪೋ ಮ್ಯಾನೇಜರ್ಸ್..ಹಾಗಾಗಿ ಏನ್ ಮಾಡಬೇಕೆಂದು ತೋಚದೆ ಗೊಂದಲಕ್ಕೆ ಸಿಲುಕಿಬಿಟ್ಟಿದ್ದಾರಂತೆ ಸಾರಿಗೆ ಕಾರ್ಮಿಕರು.

“ಈ ಷರತ್ತು ಹಾಕಿ ಕೆಲಸಕ್ಕೆ ತೆಗೆದುಕೊಳ್ಳೊಕ್ಕಿಂತ ಕಾರ್ಮಿಕರಿಗೆಲ್ಲಾ ತೊಟ್ಟು ವಿಷ ಕೊಟ್ಟು ಸತ್ತು ಬಿಡಿ ಎನ್ನೋದೆ ಸರಿ ಇರುತ್ತಿತ್ತೇನೋ..ಎಲ್ಲ ಅವಕಾಶಗಳನ್ನು ಹೋರಾಡಿಯೇ ಪಡೆಯಬೇಕೆನ್ನುವ ಸ್ಥಿತಿಯಿರುವ ಸಾರಿಗೆ ನಿಗಮಗಳಲ್ಲಿ ನಮ್ಮನ್ನು ಜೀತದಾಳುಗಳಂತೆ ನಡೆಸಿಕೊಳ್ಳುವಂಥ ವ್ಯವಸ್ಥೆ ರೂಪಿಸಲಾಗ್ತಿದೆ..” ಎನ್ನುವುದು ಸಾರಿಗೆ ಕಾರ್ಮಿಕರ ಒಡಲಾಳದ ಆಕ್ರೋಶ ಹಾಗೂ ನೋವು.

“ಷರತ್ತುಗಳನ್ನು ವಿಧಿಸಿ ಕೆಲಸಕ್ಕೆ ತೆಗೆದುಕೊಳ್ಳುತ್ತಿರುವುದು ಪ್ರಜಾಪ್ರಭುತ್ವ ವಿರೋಧಿ ನಿಲುವು..ನಾವೇನು ಪ್ರಜಾಸತ್ತಾತ್ಮಕ ವ್ಯವಸ್ಥೆ ಯಲ್ಲಿದ್ದೇವೋ..ಅಥವಾ ಹಿಟ್ಲರ್ ಜಮಾನದಲ್ಲಿದ್ದೇವೋ ಗೊತ್ತಾಗ್ತಿಲ್ಲ.ಕಾರ್ಮಿಕರನ್ನು ಶೋಷಿತರಂತೆ ನೋಡಲಾಗುವ ನಿಗಮಗಳಲ್ಲಿ ಇನ್ಮುಂದೆ ಹೆಚ್ಚು ಶೋಷಣೆ ನಡೆಯೊಕ್ಕೆ ಇದು ಕಾರಣವಾಗಲಿದೆ.ಕಾರ್ಮಿಕರು ನೂರಾರು ಬಾರಿ ಆಲೋಚಿಸಿ ನಿರ್ದಾರ ಕೈಗೊಳ್ಳಿ”

 -ಆನಂದ್, ಕಾರ್ಮಿಕ ಮುಖಂಡ   

ಕೆಲಸ ಕೊಟ್ಟಂಗೆ ಮಾಡಿ,ಕಾರ್ಮಿಕರ ಪಾಲಿಗೆ ಹೀರೋ ರೇಂಜ್ನಲ್ಲಿ ಬಿಲ್ಡಪ್ ಕೊಡ್ತಿರೋ ಸಚಿವ ಶ್ರೀರಾಮುಲು ಆತ್ಮಾವಲೋಕನ ಮಾಡಿಕೊಳ್ಳಬೇಕು.ಯಾವ್ ರೀತಿಯಲ್ಲೂ ಸಾರಿಗೆ ಕಾರ್ಮಿಕರ ಪ್ರಯೋಜನಕ್ಕೆ ಬಾರದ ಷರತ್ತುಬದ್ದ ನಿಯೋಜನೆ ವಿರುದ್ದ ಕಾನೂನಾತ್ಮಕ ಹೋರಾಟ ನಡೆಸೋದಾಗಿ ಸುಪ್ರಿಂ ಕೋರ್ಟ್ ವಕೀಲ ಶಿವರಾಜ್ ಎಚ್ಚರಿಸಿದ್ದಾರೆ.

ಇದೆಲ್ಲದರ ನಡುವೆಯೇ ಸಂಘಟನೆಗಳು ಒಗ್ಗೂಡಿ ಮರಣಶಾಸನದಂತಿರುವ ಷರತ್ತುಗಳನ್ನು ಸಡಿಲಿಸಿ ಕಾರ್ಮಿಕರು ಕೆಲಸ ಮಾಡುವ ವಾತಾವರಣ ಕಲ್ಪಿಸಬೇಕು ಎಂದು ಆಗ್ರಹಿಸಿ ಶೀಘ್ರವೇ ಪ್ರತಿಭಟನೆ ನಡೆಸೊಕ್ಕೆ ಕೂಡ ವೇದಿಕೆ ಸೃಷ್ಟಿಯಾಗ್ತಿರೋದು ಕೂಡ ಸತ್ಯ.

Spread the love

Related Articles

Leave a Reply

Your email address will not be published.

Back to top button
Flash News