BreakingMoreScrollTop NewsUncategorizedಜಿಲ್ಲೆಫೋಟೋ ಗ್ಯಾಲರಿರಾಜಕೀಯವಿಚಿತ್ರ-ವಿಶೇಷ

MASJID & TEMPLE UNDER A SINGLE ROOF… ಒಂದೇ ಕಟ್ಟಡದಲ್ಲಿ “ಹಿಂದು-ಮುಸ್ಲಿಂ” ಭಕ್ತಿ ವಿನಿಯೋಗ-ಹಜರತ್ ಸೈಯದ್ ಸಾದತ್ ದರ್ಗಾ- ಭೂತರಾಯ ಚೌಡೇಶ್ವರಿ ದೇವಾಲಯದಲ್ಲಿ “ಪೂಜೆ-ನಮಾಜ್..”

ಮಾಜಿ ಮುಖ್ಯಮಂತ್ರಿ ಕಡಿದಾಳ್ ಮಂಜಪ್ಪ
ಮಾಜಿ ಮುಖ್ಯಮಂತ್ರಿ ಕಡಿದಾಳ್ ಮಂಜಪ್ಪ

ಶಿವಮೊಗ್ಗ/ತೀರ್ಥಹಳ್ಳಿ:ದೇಶದಲ್ಲಿ ಧರ್ಮ ಸಹಿಷ್ಣುತೆ-ಧಾರ್ಮಿಕ ಸಾಮರಸ್ಯ-ಕೋಮು ಸೌಹಾರ್ದತೆಯ ವಾತಾವರಣ ಹಾಳಾಗುತ್ತಿದೆ ಎನ್ನುವ ಕಳವಳ ನೋವು ಕಾಡಲಾರಂಭಿಸಿದೆ.ಅಣ್ಣ ತಮ್ಮಂದಿರಂತಿದ್ದ ಭ್ರಾತತ್ವಕ್ಕೆ ಸಾಕ್ಷಿಗಳಂತಿದ್ದ ಹಿಂದು-ಮುಸ್ಲಿಂ ನಡುವೆ ಕಚ್ಚಾಡಿಕೊಳ್ಳುವಷ್ಟು ಸಿಟ್ಟು-ಅಸಹನೆ ತಾಂಡವವಾಡಲು ಶುರುವಾಗಿದೆ.ಆದರೆ ಪರಿಸ್ಥಿತಿ ಎಷ್ಟೇ ಬದಲಾಗಲಿ,ಇಂದಿಗೂ ಕೂಡ ಹಿಂದು-ಮುಸ್ಲಿಂ ಬಾಂಧವರು ಪರಸ್ಪರ  ಸಹಿಷ್ಣುತೆಯಿಂದ ಬಾಳಿ ಬದುಕುತ್ತಿರುವ ಒಂದಷ್ಟು ಉದಾಹರಣೆಗಳು ನಮ್ಮ ನಡುವಿದೆ..ಅದೇ ಸಮಾಧಾನ. ಶಿವಮೊಗ್ಗದ  ತೀರ್ಥಹಳ್ಳಿ ತಾಲೂಕಿನ ಕಡಿದಾಳ್ ಗ್ರಾಮ ಅಂತದ್ದೇ ಆದರಣೀಯ ಉದಾಹರಣೆಗೆ ನಿದರ್ಶನವಾಗಿದೆ.

ಎಲ್ಲರಿಗೂ ಕಡಿದಾಳ್ ಎಂದಾಕ್ಷಣ ನೆನಪಾಗುವುದು ಮಾಜಿ ಮುಖ್ಯಮಂತ್ರಿ  ಪ್ರಾಮಾಣಿಕತೆಯ ಪ್ರವಾದಿ ಕಡಿದಾಳ್ ಮಂಜಪ್ಪ ಹುಟ್ಟಿ ಬೆಳೆದ ಈ ಊರು ಸರಿಸುಮಾರು 60 ರ ದಶಕದಿಂದ ಈ ಅವಳಿ ಹಳ್ಳಿಗಳ ಸುತ್ತಲಿನ ಹಲವಾರು ಹಳ್ಳಿಗಳಲ್ಲಿ ಹಿಂದೂ-ಮುಸ್ಲಿಂ ಮತ್ತಿತರ ಜಾತಿ, ಧರ್ಮದವರ ನೆಲೆಯಾಗಿ ನಿಂತಿದೆ. ಈ ಹಳ್ಳಿಯ ಪಕ್ಕದಲ್ಲಿರುವ  ಹರಳಿಮಠ ಎಂಬ ಸಣ್ಣ ಹಳ್ಳಿಯಲ್ಲಿ  ಅಂದು 4-5 ಮುಸ್ಲಿಂ ಕುಟುಂಬಗಳು ನೆಲೆಯೂರಿ ತಮ್ಮ ವ್ಯಾಪಾರ ವಹಿವಾಟುಗಳನ್ನು ನಡೆಸಿಕೊಂಡು ಬರಲಾಗಿದೆ.

ಅರಳಿಮಠದ ಮೋಹಿದೀನ್, ಇಬ್ರಾಹಿಂ, ಖಾದರ್ ಮತ್ತಿತರ ಮುಸ್ಲಿಂ ಬಾಂಧವರು  ಜೀವನೋಪಾಯಕ್ಕಾಗಿ ತಮ್ಮ ವ್ಯಾಪಾರಗಳನ್ನು ಹಳ್ಳಿಗಳಲ್ಲಿ ವಿಸ್ತರಿಸುತ್ತಾ ದಿನಸಿ ಸಾಮಗ್ರಿಗಳಾದ   ತೊಗರಿಬೇಳೆ, ಉದ್ದಿನಬೇಳೆ, ಒಣ ಮೆಣಸು, ದನಿಯಾ ಇತ್ಯಾದಿ ದಿನಸಿ ಪದಾರ್ಥಗಳ ಹೊತ್ತುಕೊಂಡು  ಈ ಹಳ್ಳಿಗಳಲ್ಲಿ ಸಂಚರಿಸುತ್ತ ಹಳ್ಳಿಯ ಜನರಿಗೆ ಅಗತ್ಯ ವಸ್ತುಗಳನ್ನು ಸರಬರಾಜು ಮಾಡುವ ಮೂಲಕ ಮನೆಮಾತಾಗಿದ್ದ ಈ ಮುಸ್ಲಿಂ ಕುಟುಂಬದವರ ಸೌಹಾರ್ದಯುತ ಶಾಂತಿಯುತ ನ್ಯಾಯಯುತ ವ್ಯಾಪಾರಕ್ಕೆ ಅಲ್ಲಿನ ಜನರಮೆಚ್ಚುಗೆ ಪಡೆದಿದ್ದರು.

ಹಾರೋಗೂಳಿಗೆ  ಮತ್ತು ಸುತ್ತಮುತ್ತಲಿನ ಹಳ್ಳಿಗಳಲ್ಲಿ ಒಕ್ಕಲಿಗ,ಗೌಡ್ರು ಮನೆಗಳಲ್ಲಿ ಹೆಗ್ಗಡತಿ ಯರು  ಮೊಹಮ್ಮದ್, ಖಾದರ್, ಮೊಯಿದ್ದೀನ್ ದಿನಸಿ  ಸಾಮಗ್ರಿಗಳನ್ನು ಹೊತ್ತುಕೊಂಡು ಬರುವುದನ್ನು ಕಾಯುತ್ತಿದ್ದರು. ಅವರು ಬಂದಾಗ ಬೆಲ್ಲ ನೀರು ಕೊಟ್ಟು ನಂತರ ಕಾಫಿಯನ್ನು ಕೂಡ ಮಾಡಿ ಕೊಟ್ಟು ತಮಗೆ ಬೇಕಾದ ದಿನಸಿ ಸಾಮಗ್ರಿ ಗಳನ್ನು ಪಡೆದುಕೊಂಡು ಹಣಕ್ಕೆ ಪರ್ಯಾಯವಾಗಿ ತಾವೇ ಬೆಳೆದ ಅಡಕೆ, ಭತ್ತ ವನ್ನು  ನೀಡುತ್ತಿದ್ದರು.ಹಳ್ಳಿಗಳಲ್ಲಿ ಕೃಷಿಯನ್ನೇ ನಂಬಿ ಬದುಕುತ್ತಿದ್ದ ವಿವಿಧ ಧರ್ಮ-ಜಾತಿಯ ಮಧ್ಯೆ ಯಾವುದೇ ತಾರತಮ್ಯ ಕಂಡುಬರುತ್ತಿರಲಿಲ್ಲ. ಮೊಹಿದ್ದೀನ್, ಖಾದರ್, ಇಬ್ರಾಹಿಂ  ಮುಸ್ಲಿಮರಾಗಿ ಎಂದು  ನಮಗೆ ಕಾಣುತ್ತಿರಲಿಲ್ಲ. ಅವನ ವ್ಯಾಪಾರ -ವ್ಯವಹಾರ ಮತ್ತು ಪ್ರಾಮಾಣಿಕತೆಗೆ ಎಲ್ಲರೂ ಬೆಲೆ ಕೊಡುತ್ತಿದ್ದರು.

ಹಳ್ಳಿಯ ಹೆಗ್ಗಡತಿ ಯರು ಮುಸ್ಲಿಂ ಬಾಂಧವರೊಂದಿಗೆ ವ್ಯಾಪಾರ ವಹಿವಾಟುಗಳು ಅತ್ಯಂತ ಪ್ರಾಮಾಣಿಕತೆಯಿಂದ  ಪ್ರೀತಿ-ವಿಶ್ವಾಸ ಸೌಹಾರ್ದಯುತ ವಾಗಿ ಮಾಡುತ್ತಿರುವುದು  ಕಂಡುಬರುತ್ತಿತ್ತು.ಕೆಲವು ಮುಸ್ಲಿಂ ಯುವತಿಯರು ಬೀಡಿ ಕಟ್ಟುವ ಕೆಲಸಗಳಲ್ಲಿ ನಿರತರಾಗಿದ್ದಾರೆ ಇನ್ನೂ ಕೆಲವರು ಅಡಿಕೆ ವ್ಯಾಪಾರ ಮಾಡುವುದು ದಿನಸಿ ಕಿರಾಣಿ ಅಂಗಡಿಗಳನ್ನು ನಡೆಸುವುದು ಮತ್ತು ಅಲ್ಲಿಯ ಕೃಷಿಕರಿಗೆ ಸಾಲ ನೀಡಿ ನಂತರ ಬೆಳೆದ ಅಡಕೆ -ಭತ್ತ ಪಡೆದುಕೊಳ್ಳುತ್ತಿದ್ದರು. ಹಾಗೆ ಕೆಲವು ಮುಸ್ಲಿಂ ವ್ಯಾಪಾರಿಗಳು ಸೈಕಲ್ ಮೂಲಕ ಮೀನುಗಳನ್ನು ಮಾರಾಟ ಮಾಡುತ್ತಿದ್ದರು.

ಖಾದರ್ ಮೀನಿನ ಸೈಕಲ್ ಬಂದಾಗ ಅಲ್ಲಿ ಹಿಂದೂ ಮಹಿಳೆಯರು ಸೈಕಲನ್ನು ಮುತ್ತಿಗೆ ಹಾಕಿ ಒಳ್ಳೆಯ ಮೀನುಗಳನ್ನು ಆರಿಸಿಕೊಂಡು ಹೋಗುತ್ತಿದ್ದರು. ಹಾಗೆ ಸೈಕಲ್ ಮೂಲಕ ಬ್ರೆಡ್ಡು, ಬನ್ನು, ಬಿಸ್ಕೇಟು, ಬೀಡಿ, ಸಿಗರೇಟು  ಬೆಂಕಿಪೊಟ್ಟಣ  ಇತ್ಯಾದಿಗಳನ್ನು ಹಳ್ಳಿಹಳ್ಳಿಗೆ ಸರಬರಾಜು ಮಾಡುತ್ತಿದ್ದುದ್ದೇ ಮುಸ್ಲಿಂ ವ್ಯಾಪಾರಿಗಳು. ಗೌಡ, ಒಕ್ಕಲಿಗ, ಬ್ರಾಹ್ಮಣ, ಆಚಾರ್ಯ ವಿಶ್ವಕರ್ಮ, ಮರಾಠಿ ಸಮುದಾಯ, ಹರಿಜನರು, ಜೊತೆಗೆಕಾಶ್ಮೀರಿ ಪಂಡಿತರ ಪೂರ್ವಜರ ಪಳೆಯುಳಿಕೆ ಯಾದ ಸರಸ್ವತ್ ಬ್ರಾಹ್ಮಿನ್ಸ್ ಈ ಪ್ರಾಂತ್ಯದಲ್ಲಿ ಇರುವುದು ವಿಶೇಷವಾಗಿತ್ತು.

ಇಂತಹ ಸಾರಸ್ವತ ಬ್ರಾಹ್ಮಣ ಯುವಕ ಮುಸ್ಲಿಂ ಯುವತಿಯನ್ನು ಮದುವೆಯಾಗಿ ಸಂಸಾರ ನಿರ್ವಹಣೆ ಮಾಡುತ್ತಿರುವುದು ಇಲ್ಲಿನ ವಿಶೇಷವಾಗಿತ್ತು. ಈಗಲೂ ಕೂಡ ಇಂತಹ ಮುಸ್ಲಿಂ ಮತ್ತು ಸಾರಸ್ವತ ಬ್ರಾಹ್ಮಣ ಕುಟುಂಬದ ಸೌಹಾರ್ದತೆ ನೆಂಟಸ್ತಿಕೆ ಇಂದಿನ ಯುವಜನಾಂಗಕ್ಕೆ ತಿಳಿದಿರಲಿಕ್ಕಿಲ್ಲ.ಹರಳಿಮಠ ದಲ್ಲಿ  ವಾಸವಾಗಿದ್ದ ಹಲವು ಮುಸ್ಲಿಂ ಕುಟುಂಬಗಳು ಇಂದಿಗೂ ಕೂಡ ಇತರೆ ಜನಾಂಗದವರೊಂದಿಗೆ ಇತರೆ ಧರ್ಮದೊಂದಿಗೆ ಸ್ನೇಹಮಯ ವಾತಾವರಣದಲ್ಲಿ ಬದುಕುತ್ತಿದ್ದಾರೆ. ಹಿಂದಿನ ಪೂರ್ವಜರ ಕುಟುಂಬದ ಇಂದಿನ ಯುವ ಮುಸ್ಲಿಂ ಯುವಕ ಜಲೀಲ್ ಖಾಸಗಿಯಾಗಿ ಗೂಡ್ಸ್ ವಾಹನವನ್ನು ಇಟ್ಟುಕೊಂಡು ಇಲ್ಲಿನ ಕೃಷಿಕರೊಂದಿಗೆ ತಮ್ಮ ಬಾಂಧವ್ಯವನ್ನು ಇಟ್ಟು ಕೊಂಡು ತಮ್ಮ ವ್ಯಾಪಾರ ವಹಿವಾಟಿನ ಮೂಲಕ ಜೀವನ ನಿರ್ವಹಣೆಯನ್ನು ಮಾಡುತ್ತಿರುವುದು ಶ್ಲಾಘನೀಯವಾಗಿದೆ.

ತೀರ್ಥಹಳ್ಳಿಯ ಎಳ್ಳಮಾವಾಸ್ಯೆ ಜಾತ್ರೆ, ತೀರ್ಥಮುತ್ತೂರು ಜಾತ್ರೆ ನಗರದ ಮಾರಿಕಾಂಬಾ ಜಾತ್ರೆ ಸೇರಿದಂತೆ ಸುತ್ತಮುತ್ತ ನಡೆಯುವ ಜಾತ್ರೆಗಳಿಗೆ ಮತ್ತು ದಕ್ಷಿಣ ಕನ್ನಡದ ಧರ್ಮಸ್ಥಳ, ಮಂದರ್ತಿ, ಮಾವಿನಕಟ್ಟೆ  ಇತ್ಯಾದಿ ಹಿಂದೂ ದೇವಸ್ಥಾನಗಳಿಂದ ಬರುವ ಯಕ್ಷಗಾನ ಹರಕೆ ಆಟ ನಡೆಯುವ ಸಂದರ್ಭದಲ್ಲಿ   ಇಲ್ಲಿನ ಮುಸ್ಲಿಂ ಕುಟುಂಬದವರು ಅಂಗಡಿ-ಮುಂಗಟ್ಟುಗಳನ್ನು ಹಾಕಿ ಉತ್ತಮ ವ್ಯಾಪಾರಗಳನ್ನು ಮಾಡಿಕೊಂಡು ಬರುತ್ತಿರುವುದನ್ನು ನಾವು ನೋಡಿದ್ದೇವೆ. ಕುವೆಂಪುರವರ ಸರ್ವ ಜನಾಂಗದ ಶಾಂತಿಯ ತೋಟ ರಸಿಕರ ಕಂಗಳ ಸೆಳೆಯುವ ನೋಟ ಕ್ಕೆ ಕಡಿದಾಳು – ಹಾರೋಗೂಳಿಗೆ   ಅವಳಿ ಹಳ್ಳಿಗಳು ಸಾಕ್ಷಿಯಾಗಿ ಇವೆ.

ತೀರ್ಥಹಳ್ಳಿ ತಾಲ್ಲೂಕಿನ ಹಣಗೆರೆ  ಗ್ರಾಮದಲ್ಲಿ ಇರುವ ಶ್ರೀ ಹಜರತ್ ಸೈಯದ್ ಸಾದತ್ ದರ್ಗಾ ಮತ್ತು ಶ್ರೀ ಭೂತರಾಯ ಚೌಡೇಶ್ವರಿ ದೇವಾಲಯ ಒಂದೇ ಕಟ್ಟಡದಲ್ಲಿ  ಹಿಂದೂ ಮುಸ್ಲಿಂ ಧರ್ಮದ ಜನರು ಪೂಜೆ-ಪುನಸ್ಕಾರಗಳನ್ನು ಮಾಡುತ್ತಾ ಸೌಹಾರ್ದಯುತ ಧಾರ್ಮಿಕ ಆಚರಣೆಯನ್ನು ಮಾಡುತ್ತಾ ಬಂದಿರುವುದು ಹಾಗೂ ತೀರ್ಥಹಳ್ಳಿ ತಾಲ್ಲೂಕು ನಗರದ  ಹಜರತ್  ಶೈಖುಲ್ ಅಕ್ಬರ್ ಅನ್ವರ್  ಸುಂಷಾ ವಲೀಯುಲ್ಲಾಹಿ  ದರ್ಗಾ – ನಗರ   ಬಹಳ ಸಂಖ್ಯೆ ಹಿಂದೂಗಳು ತಮ್ಮ ಕಷ್ಟ ಸುಖಗಳ ಹರಕೆಯನ್ನು ಪರಿಹರಿಸುವಂತೆ   ಈ ದರ್ಗಾದಲ್ಲಿ ಪೂಜೆ ಸಲ್ಲಿಸುತ್ತಾ ಬಂದಿರುತ್ತಾರೆ. ಇದಕ್ಕೆ ಮುಸ್ಲಿಂ ಬಾಂಧವರು ಅತ್ಯುನ್ನತ ಸಹಕಾರವನ್ನು ನೀಡುತ್ತಿರುವುದು ಶ್ಲಾಘನೀಯವಾಗಿದೆ. ಹಿಂದೂಗಳ ಧಾರ್ಮಿಕ ಆಚರಣೆ ದೇವಸ್ಥಾನಗಳಲ್ಲಿ ನಡೆಯುವ ವಿಶೇಷ ಪೂಜಾ ಕೈಯಂ ಕಾರ್ಯಗಳಿಗೆ ಮುಸ್ಲಿಮರು ದೇಣಿಗೆ ನೀಡುವುದು ಕೂಡ ವಿಶೇಷವಾಗಿರುತ್ತದೆ.  ಇದೆಲ್ಲವೂ ನಮ್ಮ ಊರಿನ ಸುತ್ತಮುತ್ತ ನಡೆಯುತ್ತಿರುವ ಹಿಂದೂ-ಮುಸ್ಲಿಮರ ಸೌಹಾರ್ದತೆಗೆ ಸಾಕ್ಷಿಯಾಗಿದೆ.

ಇಂಥ ಹಲವಾರು ಹಳ್ಳಿಗಳು ಕರ್ನಾಟಕದಾದ್ಯಂತ ಇರುವುದು ಭಾವೈಕ್ಯತೆಯ ಸಂಕೇತವಾಗಿದೆ. ಇಲ್ಲಿ ವಾಸಿಸುವ ಸಾವಿರಾರು ಕುಟುಂಬಗಳು ಸ್ವಾತಂತ್ರ ಬಂದ 75 ವರ್ಷಗಳಿಂದಲೂ ಇಂತಹ  ಸೌಹಾರ್ದಯುತ ವಾತಾವರಣ ವನ್ನು ನಡೆಸಿಕೊಂಡು  ಬರುತ್ತಿವೆ.ಆದರೆ ರಾಜ್ಯದಲ್ಲಿ ಇತ್ತೀಚಿನ ದಿನಗಳಲ್ಲಿ ಮುಸ್ಲಿಂ ಮತ್ತು ಹಿಂದೂಗಳ ಬಾಂಧವ್ಯ ಮತ್ತು ಸೌಹಾರ್ದತೆಯ ನಡುವೆ ವಿಷ ಬೀಜವನ್ನು ಬಿತ್ತಿ ಧರ್ಮದ ಅಮಲನ್ನು ಯುವಕರ ಮೆದುಳಿಗೆ ತುಂಬಿ ಸರ್ವ ಜನಾಂಗದ ಶಾಂತಿಯ ತೋಟದಲ್ಲಿ ಅರಳುವ ಹೂವುಗಳಿಗೆ ರಕ್ತದ ಹನಿಗಳನ್ನುಚಿಮ್ಮಿಸುವ  ಪ್ರಯತ್ನ ನಡೆಯುತ್ತಿರುವುದು ವಿಷಾದನೀಯ ಮತ್ತು ದುರದೃಷ್ಟಕರ ಸಂಗತಿಯಾಗಿದೆ.

ಯಾವುದೇ ಮುಸ್ಲಿಮರು ಅಥವಾ  ಹಿಂದುಗಳು ಕೆಟ್ಟವರಲ್ಲ ಅವರನ್ನು ಒಡೆದು ಆಳುವ ನಮ್ಮ ರಾಜಕಾರಣಿಗಳೇ ಇದಕ್ಕೆ ನೇರ ಹೊಣೆಗಾರರಾಗಿದ್ದಾರೆ. ಎಲ್ಲಿ ಸಾಮರಸ್ಯ ಜೀವನ ನಡೆಯುತ್ತಿದೆಯೋ ಅಲ್ಲಿ ತಮ್ಮ ತಮ್ಮ ಬೇಳೆಗಳನ್ನು ಬೇಯಿಸಿಕೊಳ್ಳಲು ಮತಬ್ಯಾಂಕು ಗಳಿಗಾಗಿ ಮತ್ತು ತಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳಲು ಅಪಪ್ರಚಾರಗಳನ್ನು ಮಾಡುತ್ತಾ ಮುಸ್ಲಿಮರ ವಿರುದ್ಧ ಹಿಂದೂಗಳನ್ನು  ಎತ್ತಿಕಟ್ಟುವ ನಿರಂತರ ಪ್ರಯತ್ನ ಗಳಿಂದಲೇ ಇಂದು ಜಾತ್ರಾ ಮಹೋತ್ಸವ ಗಳಲ್ಲಿ ಮುಸ್ಲಿಮರ ವ್ಯಾಪಾರ ಮಾಡುವುದನ್ನು ಬಹಿಷ್ಕರಿ ಸುತ್ತಿರುವುದು.

ರಾಷ್ಟ್ರಕವಿ *ಕುವೆಂಪು ಅವರ ಸರ್ವಜನಾಂಗದ ಶಾಂತಿಯ ತೋಟವನ್ನು ಸರ್ವ ನಾಶ ಮಾಡುವ ಪ್ರಯತ್ನವೇ ಕೆಲವು  ರಾಜಕಾರಣಿಗಳ ಜೊತೆ ಕೆಲವು ಸಂಘಟನೆ ಗಳು  ಕೈಜೋಡಿಸಿ ಶಾಂತಿ ಸೌಹಾರ್ದತೆಯಿಂದ ಕೂಡಿದ ನಾಡನ್ನು ಒಡೆದು ಆಳುವ   ಪ್ರಯತ್ನಗಳು ನಡೆಯುತ್ತಿವೆ. ಅದರಲ್ಲೂ ಮುಖ್ಯವಾಗಿ ಹಿಂದೂ ಮತ್ತು ಮುಸ್ಲಿಂ ಯುವಕರಲ್ಲಿ ದ್ವೇಷಾಸೂಯೆ ಭಾವನೆಗಳನ್ನು ಮೂಡಿಸಿ  ಪ್ರಬುದ್ಧ ಮನಸ್ಸುಗಳಿಗೆ ಕಿಡಿ ಹೊತ್ತಿಸಿ ಅಮಾಯಕರನ್ನು  ಬಲಿಪಶುಗಳನ್ನಾಗಿ ಮಾಡುತ್ತಿದ್ದಾರೆ,ಇಂತಹ ವ್ಯಕ್ತಿ ಮತ್ತು ಸಂಘಟನೆಗಳ ವಿರುದ್ಧ ಜನ ಜಾಗೃತರಾಗಬೇಕಾಗಿದೆ.

Spread the love

Related Articles

Leave a Reply

Your email address will not be published.

Back to top button
Flash News