ಯುಗಾದಿಗೆ ರೈತರಿಗೆ ಸಿಹಿಸುದ್ದಿ: ಹಾಲಿಗೆ 2.50 ರೂ. ಏರಿಕೆ! bamul hike milk Rs. 250 per liter to farmers
ಯುಗಾದಿಗೆ ರೈತರಿಗೆ ಸಿಹಿಸುದ್ದಿ: ಹಾಲಿಗೆ 2.50 ರೂ. ಏರಿಕೆ!
ಪ್ರತೀ ಲೀಟರ್ ಹಾಲಿಗೆ ಎರಡೂವರೆ ರೂಪಾಯಿ ಹೆಚ್ಚಳ ಮಾಡುವ ಮೂಲಕ ಬೆಂಗಳೂರು ಸಹಕಾರಿ ಹಾಲು ಒಕ್ಕೂಟ (ಬಮುಲ್) ಹೈನುಗಾರಿಕೆ ರೈತರಿಗೆ ಯುಗಾದಿ ಉಡುಗೊರೆ ನೀಡಿದೆ.
ಬೆಂಗಳೂರು ಹಾಲು ಒಕ್ಕೂಟ ರೈತರಿಗೆ ಈ ಮೊದಲು ಪ್ರತಿ ಲೀಟರ್ ಹಾಲಿಗೆ ಕನಿಷ್ಠ 27 ರೂ. ಬೆಲೆ ನಿಗದಿ ಮಾಡಿತ್ತು. ಏಪ್ರಿಲ್ 1ರಿಂದ ಲೀಟರ್ ಹಾಲು ಖರೀದಿಗೆ 2.50 ರೂ. ಹೆಚ್ಚಳ ಮಾಡಲಾಗಿದ್ದು, ಪ್ರತಿ ಲೀಟರ್ ಹಾಲಿಗೆ 29.50 ರೂ. ದೊರೆಯಲಿದೆ.
ಹಾಲಿನ ಫ್ಯಾಟ್ ಆಧಾರದ ಮೇಲೆ ಹಾಲಿನ ದರ ನಿಗದಿ ಮಾಡಲಾಗಿದೆ. ರೈತರಿಗೆ ಸಹಕಾರಿ ಆಗುವ ನಿಟ್ಟಿನಲ್ಲಿ ಹಾಲಿನ ದರ ಏರಿಕೆ ಮಾಡಲಾಗಿದ್ದು, ಬಮುಲ್ ವ್ಯಾಪ್ತಿಯ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ರಾಮನಗರ ಜಿಲ್ಲೆಯ ರೈತರಿಗೆ ಇದರಿಂದ ಅನುಕೂಲವಾಗಲಿದೆ.
ಕಳೆದ ಎರಡು ವರ್ಷಗಳಿಂದ ಹಾಲಿನ ದರ ಏರಿಕೆ ಮಾಡುವಂತೆ ರೈತರು ಒತ್ತಾಯ ಮಾಡಿದ್ದರು. ಇದೀಗ ಯುಗಾದಿ ಹಬ್ಬಕ್ಕೂ ಮೊದಲು ಬೆಂಗಳೂರು ಸಹಕಾರಿ ಹಾಲು ಒಕ್ಕೂಟ (ಬಮುಲ್) ಹಾಲಿನ ದರ ಹೆಚ್ಚಳ ಮಾಡಿರುವುದು ರೈತರ ಮೊಗದಲ್ಲಿ ಸಂತಸ ಮೂಡಿಸಿದೆ.
ಬಮುಲ್ ರೀತಿಯೇ ಉಳಿದ ಹಾಲಿನ ಒಕ್ಕೂಟಗಳು ಶೀಘ್ರದಲ್ಲೇ ಹಾಲಿನ ದರ ಹೆಚ್ಚಳ ಮಾಡುವ ಸಾಧ್ಯತೆ ಇದೇ ಎಂದು ನಿರೀಕ್ಷಿಸಲಾಗಿದೆ.