ನಾನು ಹಿಂದೂ ಅಲ್ಲ ಅಂತ ಇವತ್ತು ಘೋಷಿಸುತ್ತಿದ್ದೇನೆ ಎಂದು ಹಿರಿಯ ಸಾಹಿತಿ ಕುಂ.ವೀರಭದ್ರಪ್ಪ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಗುರುವಾರ ನಡೆದ ಸರ್ವ ಜನಾಂಗದ ಶಾಂತಿಯ ತೋಟ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಹಿಂದೂ ಎನ್ನುವುದು ಬಹಳ ಅಪಾಯಕಾರಿ ಶಬ್ದ. ಹಿಂದೂ ಎಂಬ ಪದದಿಂದ ದೇಶದಲ್ಲಿ ಅಪಾಯ ಸೃಷ್ಟಿಯಾಗುತ್ತಿದೆ. ನಾನು ಹಿಂದೂ ಅಲ್ಲ. ನಾನು ಲಿಂಗಾಯತ, ಬಸವಣ್ಣನ ಅನುಯಾಯಿ ಎಂದರು.
ಹಿಂದೂಗಳು ಬಹುಸಂಖ್ಯಾತರು ಅನ್ನುವುದು ಸರಿಯಲ್ಲ. ಇದು ಮುಖ್ಯ ವಿಷಯವೂ ಅಲ್ಲ. ದೇಶದಲ್ಲಿ 20 ಕೋಟಿ ಮುಸ್ಲಿಮರು, ಸಿಖ್ಖರು ಇದ್ದಾರೆ. ಅನಕ್ಷರಸ್ಥ ಗುಲಾಮರು ನಮ್ಮನ್ನು ಆಳಿದರು. ಮಹಮದ್ ಘೋರಿಯಂಥವರೆಲ್ಲ ಸೋಮನಾಥಪುರದಂಥ ದೇವಸ್ಥಾನಗಳಲ್ಲಿ ಅಡಗಿಸಿಟ್ಟಿದ್ದ ಕಪ್ಪುಹಣವನ್ನು ಲೂಟಿ ಮಾಡಿದರು ಎಂದು ಅವರು ಹೇಳಿದರು.
ಮುಸ್ಲಿಮರು ವ್ಯವಹರ ಮಾಡಬಾರದು ಎಂದರೆ ಅವರು ಎಲ್ಲಿಗೆ ಹೋಗಬೇಕು? ಬೆಂಗಳೂರಲ್ಲಿ ಕಸ ಹೊಡೆಯುವವರು ಕನ್ನಡೇತರ ಬಡವರು. ಇವೆಲ್ಲ ಸರ್ವಾಧಿಕಾರಿ ಶಕ್ತಿಗಳ ಮೊದಲನೇ ಹೆಜ್ಜೆಗಳು. ಸರ್ವಾಧಿಕಾರಿ ಶಕ್ತಿಗಳನ್ನ ನಾವು ಪ್ರತಿಭಟಿಸಿ ತಡೆಯಬೇಕು ಎಂದು ವೀರಭದ್ರಪ್ಪ ಕರೆ ನೀಡಿದರು.
ವರ್ತಮಾನದಲ್ಲಿ ಬದುಕುತ್ತಿಲ್ಲ. ಭೂತಕಾಲಕ್ಕೆ ಹೋಗುತ್ತಿದ್ದೇವೆ ಹೋರಾಟ ಮಾಡುತ್ತಿರುವವರೆಲ್ಲ ಮೇಲ್ವರ್ಗದವರಲ್ಲ. ಹೋರಾಟ ಮಾಡುತ್ತಿರುವವರೆಲ್ಲ ಶೂದ್ರ ಯುವಕರು ಎಂದು ವಿವರಿಸಿದರು.
ಹಲಾಲ್ ಒಂದು ಸಮಸ್ಯೆಯೇ? ಹಿಜಾಬ್ ಗಲಾಟೆ ಆದ ಕಾಲೇಜಲ್ಲಿ ಜನವರಿ ಮೊದಲ ವಾರ ನಾನು ಭಾಷಣ ಮಾಡಿದ್ದೆ. ಆಗ ಏನೂ ಗೊಂದಲ ಇರಲಿಲ್ಲ. ಆಮೇಲೆ ಏಕಾಏಕಿ ಇಡೀ ರಾಜ್ಯ-ರಾಷ್ಟ್ರಕ್ಕೆ ಹರಡಿಬಿಟ್ಟಿತು ಎಂದು ಅವರು ಹೇಳಿದರು.
ಸರ್ವಾಧಿಕಾರಿ ಶಕ್ತಿಗಳ ವಿರುದ್ದ ನಾವು ಪ್ರತಿಭಟಿಸಿ ಅದನ್ನು ತಡೆಯಬೇಕು. ಶೂದ್ರ ಯುವಕರನ್ನು ವಾಪಸ್ ಕರೆತರಬೇಕು ಎಂದು ಸಲಹೆ ಮಾಡಿದರು.