2006ರಲ್ಲಿ ಯುವರಾಜ್ ಔಟ್ ಮಾಡಿದ್ದೇ ಯಶಸ್ಸಿಗೆ ಕಾರಣ: ಬ್ರಾವೊ ಬಹಿರಂಗ IPL’s Top Wicket-Taker Dwayne Bravo Explains How Dismissing Yuvraj Singh Changed His Career
2006ರಲ್ಲಿ ಯುವರಾಜ್ ಔಟ್ ಮಾಡಿದ್ದೇ ಯಶಸ್ಸಿಗೆ ಕಾರಣ: ಬ್ರಾವೊ ಬಹಿರಂಗ
ಐಪಿಎಲ್ ಟಿ-20 ಟೂರ್ನಿಯಲ್ಲಿ ಅತೀ ಹೆಚ್ಚು ವಿಕೆಟ್ ಪಡೆದ ದಾಖಲೆ ಬರೆದಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಆಲ್ ರೌಂಡರ್ ಡ್ವೈನ್ ಬ್ರಾವೊ, ತಮ್ಮ ಸುದೀರ್ಘ ಯಶಸ್ಸಿನ ಹಿಂದಿನ ಗುಟ್ಟನ್ನು ಬಿಟ್ಟುಕೊಟ್ಟಿದ್ದಾರೆ.
ಡ್ವೈನ್ ಬ್ರಾವೊ ಇದೀಗ ಐಪಿಎಲ್ ನಲ್ಲಿ 172 ವಿಕೆಟ್ ಪಡೆದಿದ್ದು, ಅತೀ ಹೆಚ್ಚು ವಿಕೆಟ್ (170) ಪಡೆದಿದ್ದ ಮುಂಬೈ ಇಂಡಿಯನ್ಸ್ ತಂಡದ ಲಸಿತ್ ಮಾಲಿಂಗ ಅವರ ದಾಖಲೆಯನ್ನು ಮುರಿದರು.
ತಮ್ಮ ಈ ಸಾಧನೆಗೆ 2006ರಲ್ಲಿ ಯುವರಾಜ್ ಸಿಂಗ್ ಅವರನ್ನು ಔಟ್ ಮಾಡಿದ್ದೇ ಕಾರಣ ಎಂದು ಬ್ರಾವೊ ಹೇಳಿಕೊಂಡಿದ್ದಾರೆ.
ಕಿಂಗ್ ಸ್ಟನ್ ಮೈದಾನದಲ್ಲಿ 2006ರಲ್ಲಿ ನಡೆದ ಭಾರತ ವಿರುದ್ಧದ ಏಕದಿನ ಪಂದ್ಯದಲ್ಲಿ ಯುವರಾಜ್ ಸಿಂಗ್ ಅವರನ್ನು ಔಟ್ ಮಾಡಿ ತಂಡಕ್ಕೆ ರೋಚಕ ಗೆಲುವು ತಂದುಕೊಟ್ಟಿದ್ದೇ ನನ್ನ ವೃತ್ತಿಜೀವನ ಬದಲಾಗಲು ಕಾರಣ ಎಂದು ಅವರು ಹೇಳಿದರು.
ಕಿಂಗ್ಸ್ ಟನ್ 2ನೇ ಏಕದಿನ ಪಂದ್ಯದಲ್ಲಿ ವೆಸ್ಟ್ ಇಂಡೀಸ್ 199 ರನ್ ಗಳಿಸಿತ್ತು. ಭಾರತ ಸುಲಭ ಗೆಲುವಿನತ್ತ ಮುನ್ನುಗ್ಗುತ್ತಿತ್ತು. ಅದರಲ್ಲೂ ಯುವರಾಜ್ ಸಿಂಗ್ 93 ರನ್ ಗಳಿಸಿ ಆಡುತ್ತಿದ್ದರು. ಈ ವೇಳೆ ದಾಳಿಗಿಳಿದ ಬ್ರಾವೊ ಬೌಲಿಂಗ್ ವೇಗವನ್ನು ಕಡಿಮೆ ಮಾಡಿ ಹಾಕಿದ ಯಾರ್ಕರ್ ನಿಂದ ಯುವರಾಜ್ ಬೌಲ್ಡ್ ಆಗಿದ್ದರು. ಇದರಿಂದ ವೆಸ್ಟ್ ಇಂಡೀಸ್ ರೋಚಕ ಗೆಲುವು ಸಾಧಿಸಿತ್ತು.
ಯುವರಾಜ್ ಅವರನ್ನು ಔಟ್ ಮಾಡಿದ ರೀತಿಗೆ ಇಡೀ ವಿಶ್ವವೇ ನನ್ನ ಬಗ್ಗೆ ಮಾತನಾಡುವಂತಾಯಿತು. ಬೌಲಿಂಗ್ ವಿಧಾನದಲ್ಲಿ ನಾನು ಮಾಡಿದ ಬದಲಾವಣೆ ಪರಿಸ್ಥಿತಿಗೆ ತಕ್ಕಂತೆ ಹೇಗೆ ಮಾರ್ಪಾಡು ಮಾಡಿಕೊಳ್ಳಬೇಕು ಎಂದು ಹೇಳಿಕೊಟ್ಟಿತು. ಇದು ಮುಂದಿನ ನನ್ನ ಸುದೀರ್ಘ ಕ್ರಿಕೆಟ್ ಬದುಕಿಗೆ ನೆರವಾಯಿತು ಎಂದು ಬ್ರಾವೊ ವಿವರಿಸಿದರು.