
ಬೆಂಗಳೂರು: ಏನೂ ಮಾಡಲಿಕ್ಕಾಗುತ್ತೆ ಎಂದು ಮೂಗು ಮುರಿಯುತ್ತಿದ್ದವರಿಗೆ ಆಮ್ ಆದ್ಮಿ ಕೊಡುತ್ತಿರುವ ಉತ್ತರ ಪದೇ ಪದೇ ಮುಟ್ಟಿ ನೋಡಿಕೊಳ್ಳುವಂತೆ ಮಾಡುತ್ತಿದೆ.ಮೊದಲು ದೆಹಲಿ,ಈಗ ಪಂಜಾಬ್ ಮುಂದೆ ಗುಜರಾತ್..ಆಮೇಲೆ ಕರ್ನಾಟಕ..ಹೀಗೆ ಆಮ್ ಆದ್ಮಿ ರಾಜ್ಯಗಳ ಸ್ಥಳೀಯ ಹಾಗೂ ವಿಧಾನಸಭಾ ಚುನಾವಣೆಗಳನ್ನು ಪ್ರಯೋಗಶಾಲೆಯನ್ನಾಗಿ ಮಾಡಿಕೊಳ್ಳುತ್ತಿದೆ. ಇದೆಲ್ಲದರ ನಡುವೆ ಆಮ್ ಆದ್ಮಿ ಪಾರ್ಟಿ ಮಟ್ಟಿಗೆ ಸಂತೋಷ,ಸಮಾಧಾನ,ಹೆಮ್ಮೆ ತರುವಂಥ ರೀತಿಯಲ್ಲಿ ಅನೇಕ ಗಣ್ಯರು-ಪ್ರತಿಷ್ಟಿತರು ಆಮ್ ಆದ್ಮಿಯ ಭಾಗವಾಗುತ್ತಿದ್ದಾರೆ.
ನಿನ್ನೆಯಷ್ಟೇ ಆಮ್ ಆದ್ಮಿ ಸೇರಿ ಪಕ್ಷದೊಳಗೆ ಹೊಸ ಹುರುಪು ತಂದಿದ್ದ ಮಾಜಿ ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್ ಬೆನ್ನಲ್ಲೇ ಮತ್ತೋರ್ವ ಖಡಕ್-ದಕ್ಷ ನಿವೃತ್ತ ಅಧಿಕಾರಿಯೂ ಆಮ್ ಆದ್ಮಿ ಸೇರುತ್ತಿದ್ದಾರೆ..ಅಂದ್ಹಾಗೆ ಭಾಸ್ಕರ್ ರಾವ್ ಬೆನ್ನಲ್ಲೇ ಪಕ್ಷ ಸೇರ್ಪಡೆಗೊಂಡು ಹೊಸ ಉತ್ಸಾಹದ ಅಲೆಯನ್ನು ಪಕ್ಷ ಹಾಗೂ ಮುಖಂಡ ರಲ್ಲಿ ಮೂಡಿಸೊಕ್ಕೆ ಸಿದ್ಧತೆ ಮಾಡಿಕೊಂಡಿರುವ ಆ ಅಧಿಕಾರಿಯೇ ಕೆ.ಮಥಾಯ್..ಕರ್ನಾಟಕದ ಪಾಲಿಗೆ ಕೇಮ್ಕಾ ಎಂದೇ ಹೆಸರು ಪಡೆದಿರುವ ಕೆ.ಮಥಾಯ್ ಆಮ್ ಆದ್ಮಿ ಸೇರುವುದು ಬಹುತೇಕ ನಿಕ್ಕಿಯಾಗಿದೆ.ಇದನ್ನು ಪುಷ್ಟೀಕರಿಸುವಂಥ ಫೋಟೋವೊಂದು ಕನ್ನಡ ಫ್ಲ್ಯಾಶ್ ನ್ಯೂಸ್ ಗೆ ಎಕ್ಸ್ ಕ್ಲ್ಯೂಸಿವ್ ಆಗಿ ಸಿಕ್ಕಿದೆ.
ಸರ್ಕಾರಿ ಸೇವೆಯನ್ನು ಶುದ್ಧಹಸ್ತನಾಗಿದ್ದುಕೊಂಡು ಪೂರ್ಣಗೊಳಿಸುವುದು ಕಷ್ಟವಷ್ಟೇ ಅಲ್ಲ ಅಸಾಧ್ಯವೂ ಎನ್ನುವಂತಾಗಿದೆ.ದುರ್ಬೀನ್ ಹಾಕ್ಕೊಂಡು ಹುಡುಕಬೇಕಾದ ಸ್ತಿತಿಯಲ್ಲಿ ಅಂಥವರು ಸಿಕ್ಕರೆ ಅದೆಂತದೋ ಅಭಿಮಾನವಾಗುತ್ತದೆ.ಇಂಥವರೂ ಇರ್ತಾರಾ ಎಂಬ ಆಶ್ಚರ್ಯವೂ ಮೂಡುತ್ತದೆ..ಕೆ.ಮಥಾಯ್ ಅವರನ್ನು ನೋಡಿದಾಗಲೂ ಹಾಗೊಂದು ಅತ್ಯಾಪ್ತ-ಆತ್ಮೀಯ ಭಾವನೆ ಮೂಡುತ್ತದೆ.ಏಕೆಂದರೆ ಕರ್ನಾಟಕ ಕಂಡ ಕೆಲವೇ ಕೆಲವು ದಕ್ಷ-ಪ್ರಾಮಾಣಿಕ-ನಿಷ್ಟಾವಂತ ಎಲ್ಲಕ್ಕಿಂತ ಹೆಚ್ಚಾಗಿ ಖಡಕ್ಕಾದ ಕೆಎಎಸ್ ಅಧಿಕಾರಿಗಳಲ್ಲಿ ಕೆ.ಮಥಾಯ್ ಒಬ್ಬರು.ಸೇವೆಯುದ್ದಕ್ಕೂ ಪ್ರಾಮಾಣಿಕತೆಯನ್ನೇ ಉಸಿರನ್ನಾಗಿಸಿಕೊಂಡು ಬದುಕಿದ ಮಥಾಯ್ ನಿವೃತ್ತ ಜೀವನ ನಡೆಸುತ್ತಿದ್ದರೂ ಅವಿಶ್ರಾಂತ ಮನಸ್ಥಿತಿಗೆ ದಣಿವೆನ್ನುವುದೇ ತೊಡಕಾಗಿಲ್ಲ.
ಕೆ.ಮಥಾಯ್ ಸಧ್ಯ ಸೌಂದರ್ಯ ಶಿಕ್ಷಣ ಸಮೂಹ ಸಂಸ್ಥೆಗಳ ಆಡಳಿತಾಧಿಕಾರಿಯಾಗಿ ಕೆಲಸ ಮಾಡುತ್ತಿದ್ದಾರೆ.ಶಿಕ್ಷಣ ವ್ಯವಸ್ಥೆಯಲ್ಲಿ ಅಮೂಲಾಗ್ರ ಬದಲಾವಣೆಗೆ ಸಂಕಲ್ಪ ತೊಟ್ಟು ಕೆಲಸ ನಿರ್ವಹಿಸುತ್ತಿದ್ದಾರೆ.ಇದರ ನಡುವೆ ಅವರ ಬದುಕು ಶೀಘ್ರವೇ ಮತ್ತೊಂದು ಮಗ್ಗಲು ಬದಲಿಸುತ್ತಿದೆ.ಅವರ ಜೀವನದಲ್ಲಿ ಮತ್ತೊಂದು ಹೊಸ ಅಧ್ಯಾಯ ಶುರುವಾಗುತ್ತಿದೆ.ಅದೇ ರಾಜಕೀಯದ ಹೊಸ ಇನ್ನಿಂಗ್ಸ್.
ಹೌದು..ಕೆ.ಮಥಾಯ್ ರಾಜಕೀಯ ಪ್ರವೇಶಿಸುತ್ತಿದ್ದಾರೆ.ಅಂದ್ಹಾಗೆ ಅವರು ಸೇರುತ್ತಿರುವುದು ಅರವಿಂದ್ ಕೇಜ್ರಿವಾಲ್ ಅವರ ಆಮ್ ಆದ್ಮಿ ಪಾರ್ಟಿಯನ್ನು.ಒಂದೆರೆಡು ಸುತ್ತಿನ ಮಾತುಕತೆಗಳು ಈಗಾಗಲೇ ಮುಗಿದಿದ್ದು ಬೆಂಗಳೂರಿಗೆ ಮುಂದಿನ ಬಾರಿ ಆಗಮಿಸಲಿರುವ ಕೇಜ್ರಿವಾಲ್ ಎದುರು ಅವರು ಆಮ್ ಆದ್ಮಿ ಸೇರಿ ಹೊಸ ಇನ್ನಿಂಗ್ಸ್ ಆರಂಭಿಸಿದರೂ ಅಚ್ಚರಿ ಇಲ್ಲ ಎನ್ನಲಾಗುತ್ತಿದೆ.
ದೆಹಲಿ ಮತ್ತು ಪಂಜಾಬ್ ಗಳಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯುವಲ್ಲಿ ಯಶಸ್ವಿಯಾದ ಆಮ್ ಆದ್ಮಿ ಪಾರ್ಟಿ ಮುಂಬರುವ ಗುಜರಾತ್ ಜತೆಗೆ ಕರ್ನಾಟಕದ ಎಲೆಕ್ಷನ್ ಮೇಲೂ ಕಣ್ಣಿಟ್ಟಿರೋದು ಎಲ್ಲರಿಗೂ ಗೊತ್ತಿರುವುದೇ..ಇದಕ್ಕಾಗಿ ಅತ್ಯಂತ ಗೌಪ್ಯವಾದ ರಣತಂತ್ರವನ್ನು ಕೇಜ್ರಿವಾಲ್ ರೂಪಿಸುತ್ತಿದ್ದಾರೆ.ವಿಧಾನಸಭಾ ಚುನಾವಣೆ ಜತೆಗೆ ಯಾವಾಗ್ ಬೇಕಾದ್ರೂ ಡಿಕ್ಲೇರ್ ಆಗಬಹುದಾದ ಬಿಬಿಎಂಪಿ ಎಲೆಕ್ಷನ್ ನ್ನೂ ಆಮ್ ಆದ್ಮಿ ಗಂಭೀರವಾಗಿ ಪರಿಗಣಸಿದೆ.ಹಾಗಾಗಿಯೇ ವಾರ್ಡ್ ಮಟ್ಟದಲ್ಲಿ ಅನೇಕ ಸಮಸ್ಯೆಗಳನ್ನು ಪ್ರಧಾನವಾಗಿಟ್ಟುಕೊಂಡು ಹೋರಾಟ ನಡೆಸಿ ಜನಸಾಮಾನ್ಯರನ್ನು ಮುಟ್ಟಲು ಶ್ರಮವಹಿಸುತ್ತಿದೆ ಆಮ್ ಆದ್ಮಿ ಪಡೆ.
ಆಮ್ ಆದ್ಮಿ ಪಕ್ಷವೇ ಏಕೆ..ಕರ್ನಾಟಕದಲ್ಲಿ ಆ ಪಕ್ಷಕ್ಕೆ ನೆಲೆಯೇ ಇಲ್ಲ. ಅಲ್ಲದೇ ಪಂಜಾಬ್-ದೆಹಲಿ ರಾಜಕಾರಣಕ್ಕೂ ಕರ್ನಾಟಕದ ರಾಜಕಾರಣಕ್ಕೂ ಅಜಗಜಾಂತರ ವ್ಯತ್ಯಾಸವಿದೆ ಎಂದು ಕನ್ನಡ ಫ್ಲ್ಯಾಶ್ ನ್ಯೂಸ್ ಮಥಾಯ್ ಅವರನ್ನು ಕೇಳಿತು.ಆಗ ಅವರು ಕೊಟ್ಟ ಉತ್ತರ ಹೀಗಿತ್ತು…
“ಕಾಂಗ್ರೆಸ್,ಬಿಜೆಪಿ,ಜೆಡಿಎಸ್ ಪಕ್ಷಗಳಿಂದಲೂ ತಮಗೆ ಕರೆ ಬಂದಿದ್ದು..ಈಗಲೂ ಬರುತ್ತಿರುವುದು ನಿಜ.ಆದರೆ ಮೂರು ಪಕ್ಷಗಳ ಬಗ್ಗೆ ಜನರಲ್ಲಿ ಬೇಸರ-ಅಸಹನೆ-ಆಕ್ರೋಶವಿದೆ.ಜನರಿಗೆ ಸಧ್ಯಕ್ಕೆ ಹತ್ತಿರವಾಗಿರುವ ಪಕ್ಷ ಎಂದರೆ ಅದು ಆಮ್ ಆದ್ಮಿ ಪಕ್ಷ.ಕೇಜ್ರಿವಾಲ್ ಅವರಿಂದ ಹಿಡಿದು ಪಕ್ಷದೊಳಗಿನ ಎಲ್ಲರಲ್ಲೂ ಸತ್ಯ-ಪ್ರಾಮಾಣಿಕತೆ-ಬದ್ಧತೆ ಇದೆ.ಹಾಗಾಗಿ ನನ್ನ ಮನಸ್ಥಿತಿ ಹಾಗೂ ಕಾರ್ಯವೈಖರಿಗೆ ಆಮ್ ಆದ್ಮಿನೇ ಸೂಕ್ತ ಎಂದು ನಿರ್ಧರಿಸಿ ಪಕ್ಷ ಸೇರುವ
ಆಲೋಚನೆ ಮಾಡುತ್ತಿದ್ದೇನೆ” ಎನ್ನುವ ಮೂಲಕ ಮಥಾಯ್ ಆಮ್ ಆದ್ಮಿ ಸೇರುತ್ತಾರೆನ್ನುವ ಸುದ್ದಿಯನ್ನು ಅವರೇ ಬಹುತೇಕ ಅಧೀಕೃತಗೊಳಿಸಿದ್ದಾರೆ.
“ಮಥಾಯ್ ಅವರು ಆಮ್ ಆದ್ಮಿ ಸೇರುವ ಬಗ್ಗೆ ಸಾಮಾಜಿಕ ಕಾರ್ಯಕರ್ತ ಸಾಯಿದತ್ತಾ ಅತೀವ ಆನಂದ ವ್ಯಕ್ತಪಡಿಸಿದ್ದಾರೆ.”ಮಥಾಯ್ ಆಮ್ ಆದ್ಮಿ ಸೇರುವುದು ಖಚಿತವೇ ಆಗಿದ್ದಲ್ಲಿ,ಅದಕ್ಕಿಂತ ಸಂತಸದ ವಿಚಾರ ಮತ್ತೊಂದಿರಲಾರದೇನೋ..ಮಥಾಯ್ ಅವರಂಥ ದಕ್ಷ-ಪ್ರಾಮಾಣಿಕ ಅಧಿಕಾರಿಗಳಿಗೆ ಆಮ್ ಆದ್ಮಿನೇ ಸೂಕ್ತ ಪಕ್ಷ.ಹಗರಣ-ಭ್ರಷ್ಟಾಚಾರದಲ್ಲೇ ಬಹುತೇಕ ಪಕ್ಷಗಳು ಮುಳುಗೋಗಿವೆ.ಇಂಥಾ ಪಕ್ಷದಲ್ಲಿ ಮುಜುಗರ ಅನುಭವಿಸುತ್ತಾ ಇರುವಂಥ ಸ್ವಭಾವ ಮಥಾಯ್ ಅವರದ್ದಲ್ಲ.ಆದ್ರೆ ಆಮ್ ಆದ್ಮಿ ಭ್ರಷ್ಟಾಚಾರ ಮುಕ್ತ ಸಮಾಜ ನಿರ್ಮಾಣಕ್ಕೆ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದೆ.”
ಅಲ್ಲದೇ ಅದಕ್ಕೆ ಸಿಕ್ಕ ಬೆಲೆಯನ್ನು ನಾವು ಪಂಜಾಬ್-ದೆಹಲಿ ಚುನಾವಣೆಯಲ್ಲೇ ನೋಡಿದ್ದೇವೆ.ಮಥಾಯ್ ಅವರಂಥವರು ಆಮ್ ಆದ್ಮಿ ಸೇರುವುದರಿಂದ ಅವರದೇ ಮನಸ್ತಿತಿಯ ಸಾವಿರ..ಸಾವಿರ ಮುಖಂಡರು,ಕಾರ್ಯಕರ್ತರು ರಾಜಕಾರಣಕ್ಕೆ ಬರುತ್ತಾರೆ.ಹೊಸದೊಂದು ಪ್ರಯೋಗ ಕರ್ನಾಟಕದ ರಾಜಕಾರಣದಲ್ಲಿ ಅಗುವ ಸಾಧ್ಯತೆಗಳಿವೆ.ಹಾಗಾಗಿ ಮಥಾಯ್ ಅವರು ಆಮ್ ಆದ್ಮಿ ಸೇರುವುದಕ್ಕಿಂತ ಸಂತೋಷದ ವಿಷಯ ಮತ್ತೊಂದಿರಲಾರದೇನೋ ಎನ್ನುತ್ತಾರೆ ಸಾಯಿದತ್ತಾ.
ಅದೇನೇ ಇರಲಿ,ಭಾಸ್ಕರ ರಾವ್ ಬೆನ್ನಲ್ಲೇ ಕೆ.ಮಥಾಯ್ ಆಮ್ ಆದ್ಮಿ ಸೇರುತ್ತಿರುವುದು ಹೊಲಸುಗೆಟ್ಟ ಕಾರಣಕ್ಕೆ ಜನ ರಾಜಕೀಯ ವ್ಯವಸ್ಥೆ ಬಗ್ಗೆ ಅಸಹ್ಯಪಟ್ಟುಕೊಳ್ಳುವಂತಾಗಿರುವ ಇಂದಿನ ಸನ್ನಿವೇಶದಲ್ಲಿ ಹೊಸ ಮನ್ವಂತರಕ್ಕೆ ಮುನ್ನುಡಿ ಎಂದು ವಿಶ್ಲೇಷಿಸಿದ್ರೂ ತಪ್ಪಿಲ್ಲ..ಕೆ.ಮಥಾಯ್ ಅವರ ಹೊಸ ರಾಜಕೀಯ ಇನ್ಸಿಂಗ್ಸ್ ಗೆ ಕನ್ನಡ ಫ್ಲ್ಯಾಶ್ ನ್ಯೂಸ್ ವತಿಯಿಂದ ಹಾರ್ದಿಕ ಅಭಿನಂದನೆಗಳು ಹಾಗೆಯೇ ಶುಭ ಕಾಮನೆಗಳು ಕೂಡ..