ಬೆಂಗಳೂರು: ನಮ್ಮ ಬಿಎಂಟಿಸಿ ಬಸ್ ಗಳು ಪವರ್ ಫುಲ್ ಎಂದ್ಹೇಳಿಕೊಳ್ಳುವ ಸಾರಿಗೆ ಸಚಿವ ಶ್ರೀರಾಮಲು ಅವರಿಗೆ ಇದಕ್ಕಿಂತ ಅವಮಾನವಾಗುವ ವಿಷಯ ಮತ್ತೊಂದಿರಲಾರದೇನೋ..ಏಕೆಂದರೆ ಇವತ್ತು ಬೆಂಗಳೂರಿನಲ್ಲಿ ಮತ್ತೊಂದು ಬಿಎಂಟಿಸಿ ಬಸ್ ಹಾಡಹಗಲೇ ಧಗಧಗನೆ ಹತ್ತಿ ಉರಿದಿದೆ.
ಮೆಜೆಸ್ಟಿಕ್ ಟು ಹೊಸಕೆರೆಹಳ್ಳಿ ಬಸ್ ಮೆಜೆಸ್ಟಿಕ್ ನಿಂದ ಹೊರಟು ಬಸ್ ಶೇಷಾದ್ರಿ ರಸ್ತೆ ತಲುಪಿದ್ದ ವೇಳೆ ಇದ್ದಕ್ಕಿದ್ದಂತೆ ಇಂಜಿನ್ ಬಿಸಿ ಹಾಗೂ ಶಾರ್ಟ್ ಸರ್ಕ್ಯೂಟ್ ನಿಂದ ಹೊತ್ತಿ ಉರಿಯಲಾರಂಭಿಸಿದೆ. ಸುಟ್ಟು ಕರಕಲಾದ ಬಸ್ ನ್ನು ಕ್ರೇನ್ ಮೂಲಕ ಎತ್ತುವ ಕಾರ್ಯಚರಣೆ ನಡೆಯುತ್ತಿದೆ.ಅದೃಷ್ಟವಶಾತ್ ಯಾವುದೇ ಪ್ರಯಾಣಿಕರಿಗೆ ಪ್ರಾಣಾಪಾಯವಾಗಿಲ್ಲ.ಬಸ್ ನಲ್ಲಿದ್ದ 30 ಪ್ರಯಾಣಿಕರನ್ನ ಬೇರೆ ಬಸ್ ಗೆ ಶಿಫ್ಟ್ ಮಾಡುವ ಕಾರ್ಯಚರಣೆ ಮುಂದುವರೆದಿದೆ.
ಬಸ್ ನ ಎದುರಿನ ಭಾಗ ಸಂಪೂರ್ಣ ಸುಟ್ಟುಕರಕಲಾಗಿದೆ ಬಸ್ ಗೆ ಬೆಂಕಿ ಬಿದ್ದಾಗ ಡೋರ್ ಲಾಕ್ ಆಗಿತ್ತು..ಬಸ್ ನ ಬ್ಯಾಕ್ ಸೈಡ್ ಡೋರ್ ಒಡೆದು ಹಾಕಿ ಹೊರಬಂದ ಪ್ರಯಾಣಿಕರು ಚಾಲಕನ ಸಮಯ ಪ್ರಜ್ಞೆಯಿಂದ ಅನಾಹುತ ತಪ್ಪಿದೆ. ಅಂದ್ಹಾಗೆ ಇದು ಕಳೆದ 1 ವರೆ ತಿಂಗಳಲ್ಲಿ 3ನೇ ಬಸ್ ಗೆ ಅಗ್ನಿ ಅನಾಹುತ ಎನ್ನಲಾಗುತ್ತಿದೆ.
ಘಟಕ 20ಕ್ಕೆ ಸೇರಿದ ಕೆಎ-57-ಎಫ್ 1447 ಕ್ರಮಸಂಖ್ಯೆಯ ಬಸ್ ಹತ್ತಿ ಉರಿದರೂ ಪ್ರಯಾಣಿಕರಿಗೆ ಯಾವುದೆ ತೊಂದರೆ ಆಗದಿರುವುದಕ್ಕೆ ಚಾಲಕ ನಾಗರಾಜ್ ಹಾಗು ನಿರ್ವಾಹಕ ಕುಮಾರ್ ಅವರ ಸಮಯಪ್ರಜ್ಞೆಯೇ ಕಾರಣ.ಅವರ ಸಮಯಪ್ರಜ್ಞೆಗೆ ಸಾರ್ವಜನಿಕರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.