
ಬೆಂಗಳೂರು: ವಿದ್ಯಾರ್ಥಿ ಜೀವನದ ನಿರ್ಣಾಯಕ ಘಟ್ಟ ಎಂದೇ ಪರಿಗಣಿಸಲಾಗುವ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಈ ಬಾರಿ ವಿದ್ಯಾರ್ಥಿಗಳು ಗಣನೀಯ ಸಾಧನೆ ಮಾಡಿದ್ದಾರೆ.ಅವರ ಸಾಲಿನಲ್ಲಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಚಾಲಕರ ಪುತ್ರಿಯೋರ್ವಳು ಸೇರುವ ಮೂಲಕ ಬಿಎಂಟಿಸಿ ಕಾರ್ಮಿಕರ ಕುಟುಂಬಗಳಿಗೆಲ್ಲಾ ಹೆಮ್ಮೆಯ ಕೋಡು ಮೂಡಿಸಿದ್ದಾಳೆ.
ಬಿಎಂಟಿಸಿ28ನೇ ಡಿಪೋದಲ್ಲಿ ಕೆಲಸ ಮಾಡುತ್ತಿರುವ ಹನುಮಪ್ಪ ಗಡದ್ ಅವರ ಪುತ್ರಿ ಸುಶ್ಮಿತಾ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ 625ಕ್ಕೆ 622 ಅಂಕಗಳು ಅಂದ್ರೆ ಶೇಕಡಾ 99.52 ರಷ್ಟು ಅಂಕಗಳನ್ನು ಪಡೆಯುವ ಮೂಲಕ ಗಣನೀಯ ಸಾಧನೆ ಮಾಡಿದ್ದಾಳೆ.
ಕುಟುಂಬದಲ್ಲಿ ಅಷ್ಟೇನು ಹೇಳಿಕೊಳ್ಳುವಂಥ ವ್ಯವಸ್ಥೆಗಳಿಲ್ಲದಿದ್ದರೂ ಓದಿ ಬದುಕಿನಲ್ಲಿ ಏನಾದರೊಂದು ಸಾಧನೆ ಮಾಡಬೇಕು.ಅಪ್ಪನ ಹೆಸರನ್ನು ಉಳಿಸಬೇಕು.ಅಪ್ಪನ ಕಷ್ಟಗಳಿಗೆ ಒಳ್ಳೆಯ ಉದ್ಯೋಗ ಪಡೆದು ಹೆಗಲಾಗಬೇಕೆನ್ನುವ ಹಿರಿದಾಸೆಯಲ್ಲಿ ಸುಶ್ಮಿತಾ ಹಗಲಿರುಳು ಓದಿ ಎಸ್ ಎಸ್ ಎಲ್ ಸಿ ಹುಬ್ಬೇರಿಸುವ ಸಾಧನೆ ಮಾಡಿದ್ದಾಳೆ.

ಮುಂದೆ ಒಳ್ಳೆಯ ಉದ್ಯೋಗವನ್ನು ಪಡೆದು ಕುಟುಂಬಕ್ಕೆ ನೆರವಾಗಬೇಕು.ಬಿಎಂಟಿಸಿ ಕಾರ್ಮಿಕರ ಮಕ್ಕಳು ಮನಸು ಮಾಡಿದರೆ ಏನ್ ಬೇಕಾದ್ರೂ ಮಾಡಬಹುದು ಎನ್ನುವುದನ್ನು ಮಾಡಿ ತೋರಿಸಬೇಕು ಎನ್ನುವ ಕನಸನ್ನು ಹೊತ್ತಿರುವ ಸುಶ್ಮಿತಾ ಸಾಧನೆಗೆ ಬಿಎಂಟಿಸಿ ಕಾರ್ಮಿಕರ ಕುಟುಂಬಗಳು ಹರ್ಷ ವ್ಯಕ್ತಪಡಿಸಿವೆ.
ಬಿಎಂಟಿಸಿ ಆಡಳಿತ ಮಂಡಳಿ ಕೂಡ ತಮ್ಮ ಕಾರ್ಮಿಕನ ಮಗಳ ಸಾಧನೆಗೆ ಅಭಿನಂದನೆ ಸಲ್ಲಿಸಿದೆ.ಶೀಘ್ರವೇ ಆಕೆಯನ್ನು ಪೋಷಕರೊಂದಿಗೆ ಕರೆಯಿಸಿ ಸನ್ಮಾನಿಸಲು ನಿರ್ದರಿಸಿದೆ.ಅಲ್ಲದೇ ಆಕೆಯ ಭವಿಷ್ಯದ ಶಿಕ್ಷಣಕ್ಕೆ ಅಗತ್ಯವಿರುವ ನೆರವು ನೀಡುವುದಾಗಿಯೂ ಆಡಳಿತ ಮಂಡಳಿ ಭರವಸೆ ನೀಡಿದೆ.
ಸುಶ್ಮಿತಾ ಸಾಧನೆಗೆ ಕನ್ನಡ ಫ್ಲ್ಯಾಶ್ ನ್ಯೂಸ್ ಕೂಡ ಹರ್ಷ ಹಾಗು ಅಭಿನಂದನೆ ವ್ಯಕ್ತಪಡಿಸಿದೆ.ಈ ಬಾರಿಯ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಸುಶ್ಮಿತಾಳಷ್ಟೇ ಸಾಧನೆ ಮಾಡಿರಬಹುದಾದ ಬಿಎಂಟಿಸಿ ಎಲ್ಲಾ ಕಾರ್ಮಿಕರ ಮಕ್ಕಳ ಸಾಧನೆಗೂ ಅಭಿನಂದನೆ ಸಲ್ಲಿಸುತ್ತದೆ.
WHAT A ACHIVEMNET…BMTC DRIVER’S DAUGHTER SECURE 99.52% IN SSLC: ಬಿಎಂಟಿಸಿ ಕಾರ್ಮಿಕನ ಮಗಳ ಹೆಮ್ಮೆಯ ಸಾಧನೆ:ಕಷ್ಟದಲ್ಲೂ ಶೇ.99.52 ಅಂಕ ಪಡೆದು ಗಣನೀಯ ಸಾಧನೆ