ಬೆಂಗಳೂರು:ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಅಕ್ಷರಶಃ ಮುಳುಗುವ ಹಡಗಿನಂತಾಗಿದೆ.ಸರ್ಕಾರ ದೊಡ್ಡ ಮನಸು ಮಾಡಿ ನೆರವಿಗೆ ಧಾವಿಸದಿದ್ದರೆ ಬಿಎಂಟಿಸಿ ಪರಿಸ್ತಿತಿ ಶೋಚನೀಯವಾಗಿ ಖಾಸಗೀಕರಣವೋ..ಅಥವಾ ಮುಚ್ಚುವ ಭೀತಿಗೆ ಸಿಲುಕುವುದರಲ್ಲಿ ಅನುಮಾನವೇ ಇಲ್ಲ.ಇದರ ದುಷ್ಪರಿಣಾಮಕ್ಕೆ ಕಾರ್ಮಿಕರು ತುತ್ತಾಗುತ್ತಿರುವುದು ವಿಪರ್ಯಾಸ.
ಮೊದಲಲ್ಲೇ ತಿಂಗಳ ಮೊದಲ ವಾರದಲ್ಲಿ ಕಾರ್ಮಿಕರಿಗೆ ಸಂಬಳ-ಭತ್ಯೆ ಸಿಗುತ್ತಿದ್ದ ಪರಿಸ್ತಿತಿ ಈಗ ಇಲ್ಲವಾಗಿದೆ.ಕಳೆದ ಕೆಲ ತಿಂಗಳಿಂದ ಕಾರ್ಮಿಕರಿಗೆ ಭತ್ಯೆ ಮನೆ ಹಾಳಾಗಿ ಹೋಗ್ಲಿ ತಿಂಗಳ ಸಂಬಳ ನಿಯಮಿತವಾಗಿ ಆಗದಂಥ ಸ್ತಿತಿ ನಿರ್ಮಾಣವಾಗಿದೆ.ಆ ಸಂಪ್ರದಾಯ ಈ ತಿಂಗಳು ಮುಂದುವರೆಯಲಿದೆ.ಏಕೆಂದರೆ ಆಡಳಿತ ಮಂಡಳಿಯೇ ಈ ಬಾರಿ ಬಿಎಂಟಿಸಿ ಕಾರ್ಮಿಕರಿಗೆ ಸಂಬಳ ಕೊಡೊಕ್ಕೆ ಖಜಾನೆಯಲ್ಲಿ ದುಡ್ಡೇ ಇಲ್ಲ ಎನ್ನುವ ಅಸಹಾಯಕತೆ ತೋಡಿಕೊಂಡಿದೆ.
ಹೌದು..ಕೇಳೊಕ್ಕೆ ಆಶ್ಚರ್ಯವಾಗಬಹುದು..ದಿನಂಪ್ರತಿ ಬಿಎಂಟಿಸಿ ಬಸ್ ಗಳಲ್ಲಿ ಪ್ರಯಾಣಿಸುತ್ತಿರುವ ಪ್ಯಾಸೆಂಜರ್ಸ್ ಗಳ ಸಂಖ್ಯೆ ಕ್ರಮೇಣ ಸುಧಾರಣೆಯಾಗುತ್ತಿದೆ. ಬಿಎಂಟಿಸಿ ಗಳಿಕೆಯೂ ಹಳಿಗೆ ಬರುತ್ತಿದೆ.ಎಲ್ಲವೂ ಸರಿಯಾಗಿರುವಾಗ ಸಂಬಳ ಕೊಡೊಕ್ಕೇನು ಬ್ಯಾನೆ ಎಂದು ಕೇಳಬಹುದು.ಆದ್ರೆ ಹಿಂದಿನಿಂದಲೂ ಮಾಡಿಕೊಂಡು ಬಂದಿದ್ದ “ಅವ್ಯವಸ್ಥೆ”,ಅದರ ಪರಿಣಾಮವಾದ “ಆರ್ಥಿಕ ಅಶಿಸ್ತಿ”ನ ಪ್ರಭಾವ ಈಗಲೂ ಮುಂದುವರೆದುಕೊಂಡು ಬಂದಿದೆ.ಹಾಗಾಗಿನೇ ಎಲ್ಲವೂ ಸರಿಯಾಗುತ್ತಿರುವಾಗಲೇ ಆರ್ಥಿಕ ಹೊಡೆತದ ಕಾರಣಕ್ಕೆ ಸಂಬಳದ ದಿನಾಂಕದಲ್ಲೂ ಏರುಪೇರಾಗುತ್ತಿದೆ.
ಈ ಬಾರಿ ಬಿಎಂಟಿಸಿಯ 50 ಸಾವಿರಕ್ಕೂ ಹೆಚ್ಚು ಕಾರ್ಮಿಕರು ಸಂಬಳ ನಿರೀಕ್ಷಿಸೋದೇ ತಪ್ಪಾಗಬಹುದು.ಏಕೆಂದರೆ ಕಾರ್ಮಿಕರಿಗೆ ಕೊಡೊಕ್ಕೆ ಖಜಾನೆಯಲ್ಲಿ ಹಣವೇ ಇಲ್ಲವಂತೆ.ಬರ್ತಿರೋ ಗಳಿಕೆಯ ಶೇಕಡಾ 65 ರಷ್ಟು ಪ್ರಮಾಣ ಇಂಧನಕ್ಕೆ ಹೋಗುತ್ತಿದೆಯಂತೆ.ಮಾಡಿಕೊಂಡಿರುವ ಸಾಲಕ್ಕೆ ಬಡ್ಡಿ ಕಟ್ಟೊಕ್ಕೆ ಮತ್ತೊಂದಷ್ಟು ಹಣ ಖರ್ಚಾಗುತ್ತಿದೆ.
ಉಳಿದಿದ್ದರಲ್ಲಿ ಬಸ್ ಗಳ ಮೆಂಟೆನೆನ್ಸ್ ಹಾಗೂ ಇತರೆ ಖರ್ಚುಗಳನ್ನು ನೋಡಿಕೊಳ್ಳಬೇಕಾಗಿ ಬಂದಿದೆ.ಈ ಬಾರಿಯೇ 50 ಕೋಟಿಗೂ ಹೆಚ್ಚು ಹಣದ ಕೊರತೆ ಎದುರಾಗಿರುವುದರಿಂದ ಸಂಬಳ ಹೇಗೆ ಕೊಡೋದಪ್ಪ ಎಂದು ತಲೆ ಮೇಲೆ ಕೈ ಹೊತ್ತು ಕೂತಿದ್ದೇವೆ ಎನ್ನುತ್ತಾರೆ ಸಂಸ್ಥೆಯ ಹಿರಿಯ ಅಧಿಕಾರಿಯೊಬ್ಬರು.
ಅವರೇ ಹೇಳುವಂತೆ ಸಂಸ್ಥೆ ಆರ್ಥಿಕ ನಷ್ಟದಲ್ಲಿದೆ.ಸುಮಾರು 2 ಸಾವಿರ ಕೋಟಿಯಷ್ಟು ಸಾಲ ಸಂಸ್ಥೆ ಮೇಲಿದೆ.ಮಾಡಿಕೊಂಡಿರುವ ಸಾಲಕ್ಕೆ ಅಸಲಿನ ಮಾತು ಒತ್ತಟ್ಟಿಗಿರಲಿ ಬಡ್ಡಿ ಕಟ್ಟೊಕ್ಕೆ ಸಾಧ್ಯವಾಗುತ್ತಿಲ್ಲ.ಸರ್ಕಾರದಿಂದ ನೆರವು ಕೇಳಿದ್ದೇವೆ.ಅವರಿಂದ ಸಹಾಯ ಸಿಗದ ಹೊರತು ಸಂಸ್ಥೆ ನಡೆಸೋದು ಕಷ್ಟವಾಗಲಿದೆ.ಸಾಲ ತೀರಿಸದೆ ಬೇರೆ ವಿಧಿಯಿಲ್ಲ.ಗಳಿಕೆಯಲ್ಲಿ ಸುಧಾರಣೆಯಾಗುತ್ತಿದ್ದರೂ ಹಳೆಯ ಸಾಲದ ಹೊಡೆತಗಳು ಈಗಲೂ ಬಾಧಿಸಲಾರಂಭಿಸಿವೆ.ಸರ್ಕಾರದಿಂದ ನೆರವು ಕೇಳಿದ್ದೇವೆ.ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸಿದ್ರಷ್ಟೇ ಈ ಬಾರಿಯ ಸಂಬಳ ಎನ್ನುತ್ತಾರೆ.
ಸಂಬಳವನ್ನೇ ನಂಬಿ ಜೀವನ ನಡೆಸುತ್ತಿರುವ ಆ ದಿನಾಂಕಕ್ಕೇನೆ ಚಾತಕ ಪಕ್ಷಿಗಳಂತೆ ಕಾಯುತ್ತಿರುವ ಸಾರಿಗೆ ಕಾರ್ಮಿಕರಿಗೆ ಈ ತಿಂಗಳ ಸಂಬಳವೇ ಡೌಟ್ ಎನ್ನುವ ಸುದ್ದಿ ಗೊತ್ತಾದ್ರೆ ಅವರ ಪರಿಸ್ತಿತಿ ಏನಾಗಬೇಡ ಹೇಳಿ.ಇವತ್ತು..ನಾಳೆ ಸಂಬಳ ಆಗಬಹುದು ಎಂದು ಕಾದು ಕೂತಿರುವ ಸಾರಿಗೆ ಕಾರ್ಮಿಕರು ಹಾಗೂ ಕುಟುಂಬಗಳಿಗೆ ಇದು ಅಘಾತಕಾರಿಯಾಗಿ ಪರಿಣಮಿಸಿದರೂ ಆಶ್ಚರ್ಯವಿಲ್ಲ.
2 ಸಾವಿರ ಕೋಟಿಯಷ್ಟು ಸಾಲದ ಹೊರೆಗೆ ಕುಗ್ಗಿ ಹೋಗಿರುವ ಬಿಎಂಟಿಸಿಯನ್ನು ಕೈ ಹಿಡಿದು ಎತ್ತದಿದ್ದರೆ ಕೆಲವೇ ದಿನಗಳಲ್ಲಿ ಸಂಸ್ಥೆ ಶಾಶ್ವತವಾಗಿ ಬೀಗ ಜಡಿದುಕೊಳ್ಳೋದ್ರಲ್ಲಿ ಅನುಮಾನವಿಲ್ಲ..ಬಹುಷಃ ಖಾಸಗೀಕರಣದ ಚಿಂತನೆಯಲ್ಲಿದ್ದಂತೆ ತೋರುವ ಸರ್ಕಾರಕ್ಕೆ ಬೇಕಿರುವುದೇ ಅದೇ ಏನೋ ಅನ್ಸುತ್ತೆ.