SENIOR JOURNALIST NIKHIL JOSHI WILL BE NEW NEWS EDITOR FOR NEWS 18 KANNADA CHANNEL:”ಪ್ರತಿಭೆ”ಗೆ ತಕ್ಕ “ಮನ್ನಣೆ”-“ಸಾಮರ್ಥ್ಯ”ಕ್ಕೆ ಸೂಕ್ತ “ಅವಕಾಶ”:ಪ್ರತಿಭಾನ್ವಿತ ಪತ್ರಕರ್ತ “ನಿಖಿಲ್ ಜೋಷಿ” “ನ್ಯೂಸ್ 18 ಕನ್ನಡ” ಚಾನೆಲ್ ” ನ ನೂತನ “ನ್ಯೂಸ್ ಹೆಡ್..”

ಅತೀ ಸಣ್ಣ ವಯಸ್ಸಿನಲ್ಲಿ ಸುದ್ದಿ ಸಂಪಾದಕನಾಗುತ್ತಿರುವ ಹೆಗ್ಗಳಿಕೆ-ಸುದ್ದಿ ಚಾನೆಲ್ ಗೆ ಹೊಸ ಭಾಷ್ಯ ಬರೆಯುವ ಉತ್ಸಾಹ-ಉಮೇದಿನಲ್ಲಿ ನಿಖಿಲ್

0

ಬೆಂಗಳೂರು:ದೇಶದ ಅತೀ ದೊಡ್ಡ ಸುದ್ದಿ ಜಾಲ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿರುವ ನೆಟ್ವರ್ಕ್-18 ನ ನ್ಯೂಸ್ 18 ಕನ್ನಡಕ್ಕೆ ಹೊಸ ಸಾರಥಿ ಸಿಕ್ಕಿದ್ದಾರೆ.ಇಂಗ್ಲೀಷ್ ಹಾಗೂ ಕನ್ನಡ ಪತ್ರಿಕೋದ್ಯಮದಲ್ಲಿ ಮೈಲಿಗಲ್ಲಿನ ಸಾಧನೆ ಮಾಡಿ ಸಧ್ಯ ನ್ಯೂಸ್ ಫಸ್ಟ್ ಸುದ್ದಿ ವಾಹಿನಿಯಲ್ಲಿ ಮುಖ್ಯ ಸುದ್ದಿ ನಿರೂಪಕ-ಸುದ್ದಿ ಸಂಪಾದನೆ ವಿಭಾಗದಲ್ಲಿ ಪ್ರಮುಖ ಹುದ್ದೆಯಲ್ಲಿದ್ದ ನಿಖಿಲ್ ಜೋಷಿ ಶೀಘ್ರವೇ ನ್ಯೂಸ್-18 ಕನ್ನಡದ ಸುದ್ದಿ ಸಂಪಾದಕರಾಗಿ ನಿಯುಕ್ತಿಗೊಳ್ಳಲಿದ್ದಾರೆ.ಈ ಹೊಣೆಗಾರಿಕೆ ಮೂಲಕ  ನಿಖಿಲ್ ಜೋಷಿ,ಅತೀ ಕಿರಿಯ ವಯಸ್ಸಿನಲ್ಲಿ ಕನ್ನಡ ಸುದ್ದಿ ವಾಹಿನಿಯೊಂದರ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಳ್ಳುತ್ತಿರುವ ಪತ್ರಕರ್ತ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಲಿದ್ದಾರೆ.

ನಿಖಿಲ್ ಜೋಷಿ ನ್ಯೂಸ್ 18 ಕನ್ನಡದ ಸುದ್ದಿ ವಿಭಾಗದ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಳ್ಳುವ ನಿಟ್ಟಿನಲ್ಲಿ ಎಲ್ಲಾ ಪ್ರಕ್ರಿಯೆ ಪೂರ್ಣಗೊಂಡಿದ್ದು ನ್ಯೂಸ್ ಫಸ್ಟ್ ಗೆ ರಾಜೀನಾಮೆ ನೀಡಿ ಸಧ್ಯ ನೊಟೀಸ್ ಪಿರಿಯಡ್ ನಲ್ಲಿದ್ದಾರೆ ಎನ್ನಲಾಗಿದೆ.

ಇದನ್ನು ಸ್ವತಃ ನಿಖಿಲ್ ಜೋಷಿ ಅವರೇ ಕನ್ನಡ ಫ್ಲ್ಯಾಶ್ ನ್ಯೂಸ್ ಗೆ  ಸ್ಪಷ್ಗಪಡಿಸಿದ್ದು,ತನಗೆ ಸಿಕ್ಕಿರುವ ಹೊಣೆಗಾರಿಕೆಯನ್ನು ಸಮರ್ಥವಾಗಿ ನಿಭಾಯಿಸುವ ದೊಡ್ಡ ಸವಾಲನ್ನು ಸಂಸ್ಥೆಯ ತಂಡದೊಂದಿಗೆ ನಿರ್ವಹಿಸಲಿದ್ದೇನೆ.ನ್ಯೂಸ್-18 ಸುದ್ದಿ ನೆಟ್ವರ್ಕ್ ನನ್ನ ಪ್ರತಿಭೆ-ಅರ್ಹತೆ ಹಾಗು ಸಾಮರ್ಥ್ಯವನ್ನು  ಪರಿಗಣಿಸಿ ನೀಡಿರುವ ನಂಬಿಕೆಯನ್ನು ಉಳಿಸಿಕೊಳ್ಳುವ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿಯೂ ಕನ್ನಡ ಫ್ಲ್ಯಾಶ್ ನ್ಯೂಸ್ ಗೆ ತಿಳಿಸಿದ್ದಾರೆ.

ಅಂದ್ಹಾಗೆ ನಿಖಿಲ್ ಜೋಷಿ ವೃತ್ತಿಪರ ಜೀವನ,ಬೆಳವಣಿಗೆ ಬಗ್ಗೆ ನೋಡೋದಾದ್ರೆ ನಿಖಿಲ್ ಅವರದು ಮೂಲತಃ ಉತ್ತರ ಕರ್ನಾಟಕ.ಓದಿದ್ದು ಬಿಬಿಎ( ಬ್ಯಾಚರಲ್ ಆಫ್ ಬ್ಯುಸಿನೆಸ್ ಅಡ್ಮಿನಿಸ್ಟ್ರೇಷನ್).ಬದಲಾದ ಸನ್ನಿವೇಶದಲ್ಲಿ ಪತ್ರಿಕೋದ್ಯಮವನ್ನು ಆಯ್ಕೆ ಮಾಡಿಕೊಂಡಿದ್ದು ಒಂದ್ರೀತಿ ಅಚ್ಚರಿ.

2007 ರಲ್ಲಿ ಪತ್ರಿಕೋದ್ಯಮಕ್ಕೆ ಪಾದಾರ್ಪಣೆ ಮಾಡಿದ ಜೋಷಿ ಮೊದಲು ಕೆಲಸ ಮಾಡಿದ್ದು ಎಫ್ ಎಂ ನಲ್ಲಿ. ಫೀವರ್ ಎಫ್ ಎಂನಲ್ಲಿ ತಿಂಗಳುಗಳಷ್ಟೇ ಕೆಲಸ ಮಾಡಿದ ನಿಖಿಲ್ ಅವರಿಗೆ ನನ್ನ ಕಾರ್ಯಕ್ಷೇತ್ರ ಇದಲ್ಲ ಎಂದೆನಿಸಿ ಅಲ್ಲಿಂದ ನೇರವಾಗಿ ಎಂಟ್ರಿ ಕೊಟ್ಟಿದ್ದೇ ನ್ಯೂಸ್ ಚಾನೆಲ್ ಗೆ ಇಂಗ್ಲೀಷನ್ ನ್ನು ನಿರರ್ಗಳವಾಗಿ ಮಾತನಾಡುವ ಹಾಗು ಅತ್ಯುತ್ತಮ ಸಂವಹನ ಸಾಮರ್ಥ್ಯವೇ ಅವರ ಬೆಳವಣಿಗೆಗೆ ಸಹಕಾರಿಯಾಯ್ತು.

ಅಲ್ಲಿ 7 ವರ್ಷಗಳ ಕಾಲ ಸುಧೀರ್ಘವಾಗಿ ಕೆಲಸ ಮಾಡಿ ಹೆಸರು ಮಾಡಿದ್ರು.ದಕ್ಷಿಣ ಭಾರತದ ಎಲ್ಲಾ ರಾಜ್ಯಗಳಲ್ಲೂ ಟೈಮ್ಸ್ ನ ಪ್ರತಿನಿಧಿಯಾಗಿ ಕೆಲಸ ಮಾಡುವ ಆಫರ್ ಬಂದ್ರೂ ಸ್ವಂತ ನೆಲವಾದ ಬೆಂಗಳೂರಿನ ಸೊಗಡು,ಆಕರ್ಷಣೆ-ತವರುಮನೆಯ ಮಮಕಾರ ಅವರನ್ನು ಎಲ್ಲೂ ಹೋಗದಂತೆ ತಡೆದು ನಿಲ್ಲಿಸಿತು.

ನಿಖಿಲ್ ಜೋಷಿ ಟೈಮ್ಸ್ ನೌ ನಲ್ಲಿದ್ದಾಗ ಮಾಡಿದ ಸುದ್ದಿಗಳು ಸಾಕಷ್ಟು ಇಂಪ್ಯಾಕ್ಟ್ ಮೂಡಿಸಿದ್ದುಂಟು.ಅವರ ವೃತ್ತಿಪರತೆ ಕಾರಣದಿಂದಲೇ ಬೆಂಗಳೂರು ಕೇಂದ್ರ ಕಚೇರಿಯಲ್ಲೇ ಒಂದಲ್ಲಾ ಎರಡಲ್ಲ ಬರೋಬ್ಬರಿ 7 ವರ್ಷ ಕೆಲಸ ಮಾಡುವಂತಾಯಿತು.ಆದ್ರೆ ಮಾಡೋದು ಇನ್ನೂ ಸಾಕಷ್ಟಿದೆ ಎಂದುಕೊಂಡವರೇ ಟೈಮ್ಸ್ ನೌ ತೊರೆದು ಕನ್ನಡದ ನಂಬರ್ ಒನ್ ಚಾನೆಲ್ ಟಿವಿ-9 ಸಂಸ್ಥೆ ಸೇರಿದರು.ಕನ್ನಡದ ಟಿವಿ-9 ಹಾಗು ಇಂಗ್ಲೀಷ್ ನ ನ್ಯೂಸ್-9 ಎರಡರಲ್ಲು ತಮ್ಮ ಪ್ರತಿಭೆ-ಸಾಮರ್ಥ್ಯವನ್ನು ಓರೆಗೆ ಹಚ್ಚಿ ಕೆಲಸ ಮಾಡಿ ಮತ್ತಷ್ಟು ಅನುಭವ ಅದರ ಜತೆಗೆ ಪ್ರಬುದ್ಧತೆಯನ್ನೂ ಪಡೆದುಕೊಂಡರು.

ನ್ಯೂಸ್-9 ರಲ್ಲಿ ಕೆಲಸ ಮಾಡುವಾಗಲೇ ಅಲ್ಲಿನ ತಂಡ ಹೊರಬಂದು ಹೊಸತನದೊಂದಿಗೆ ವಿಭಿನ್ನ ಆಯಾಮದ ಚಾನೆಲ್ ಆರಂಭಿಸುವ ಆಲೋಚನೆಗೆ ಬಂದಾಗ ಆ ತಂಡದ ಸದಸ್ಯರಾಗಿ ಹೊರಬಂದವರು ನಿಖಿಲ್.ಚಾನೆಲ್ ಫಸ್ಟ್ ನ್ಯೂಸ್ ಎನ್ನುವ ಶೀರ್ಷಿಕೆಯೊಂದಿಗೆ ಚಾನೆಲ್ ಆರಂಭದ ಪ್ರಕ್ರಿಯೆ ಶುರುವಾದವು.ಆದರೆ ತಾಂತ್ರಿಕ ಕಾರಣಗಳಿಂದ ಚಾನೆಲ್ ಆರಂಭವಾಗಲೇ ಇಲ್ಲ..ಇಡೀ ತಂಡ ಹೊರಬಿದ್ದು ನ್ಯೂಸ್ ಫಸ್ಟ್ ಎನ್ನುವ ಶೀರ್ಷಿಕೆಯೊಂದಿಗೆ ಚಾನೆಲ್ ಆರಂಭಿಸಲು ಟೊಂಕಕಟ್ಟಿ ನಿಲ್ತು.ಆಗಲೂ ತಂಡದ ಸದಸ್ಯರಾಗಿದ್ದವರು ಇದೇ ನಿಖಿಲ್.ಆದರ ಆ ಎರಡ್ಮೂರು ವರ್ಷಗಳ ಅವಧಿಯಲ್ಲಿ ಒಂದಷ್ಟು ಆರ್ಥಿಕ ಮುಗ್ಗಟ್ಟು ಎದುರಿಸಬೇಕಾಯ್ತು ನಿಖಿಲ್.ಚಾನೆಲ್ ಆರಂಭವಾದ ಮೇಲೆ ನಿರೀಕ್ಷೆಗು ಮೀರಿ ಜನಪ್ರಿಯವಾದದ್ದು ಈಗ ಇತಿಹಾಸ ಬಿಡಿ.

ಆಂಕರ್ ಎನಿಸಿಕೊಂಡವರು ಕೇವಲ ಬಾಲಿಶ ಹಾಗೂ ಗ್ರಾಂಥಿಕ ಸ್ವರೂಪದ ಪ್ರಶ್ನಾವಳಿಗಳನ್ನು ಇಟ್ಕೊಂಡು ಟೈಂ ಕಿಲ್ ಮಾಡೋದು ಅಥವಾ ಟೈಂ ಪಾಸ್ ಮಾಡೋದೇ ಆಂಕರಿಂಗ್ ಎನಿಸಿಕೊಂಡಿರುವಾಗ ತಮ್ಮ ವಿಶಿಷ್ಟ ಮ್ಯಾನರಿಸಂ,ವಿಷಯದ ಮೇಲೆ ಹಿಡಿತ,ಮಾತಿನ ಪ್ರಬುದ್ಧತೆಯಿಂದ ಹೊಸ ವ್ಯಾಖ್ಯಾನ ಕೊಟ್ಟ ಹೆಗ್ಗಳಿಕೆ ನಿಖಿಲ್ ಅವರದು.ಇದು ಅವರ ಆಂಕರಿಂಗ್ ಹಾಗೂ ಪ್ಯಾನಲ್ ಡಿಸ್ಕಷನ್ಸನ್ನು ಸೂಕ್ಷ್ಮವಾಗಿ ನೋಡಿದವರಿಗೆ ಗೊತ್ತಾಗುತ್ತೆ.

ನ್ಯೂಸ್ ಫಸ್ಟ್ ನಲ್ಲಿ ಎಲ್ಲವೂ ಅಂದುಕೊಂಡಂತೆ ಸಾಗುತ್ತಿರುವಾಗಲೇ ನೆಟ್ವರ್ಕ್ 18 ಸಂಸ್ಥೆಯಿಂದ ಕನ್ನಡ ಸುದ್ದಿ ಸಂಸ್ಥೆಯ ಮುಖ್ಯಸ್ಥರಾಗುವ ಆಫರ್ ಬಂತು..ಅವರೇ ಹೇಳಿರುವಂತೆ ಇದು ಮೂರ್ನಾಲ್ಕು ತಿಂಗಳ ಹಿಂದೆಯೇ ಬಂದಂಥ ಆಫರ್.ಆದ್ರೆ ಇದಕ್ಕೆ ನಾನು ಯೋಗ್ಯನೇ..ಅರ್ಹನೇ..ಇಂತದ್ದೊಂದು ಮಹತ್ವದ ಜವಾಬ್ದಾರಿಯನ್ನು ನಿಭಾಯಿಸಲು ಸಮರ್ಥನೇ ಎಂದು ಆತ್ಮಾವಲೊಕನ ಮಾಡಿಕೊಳ್ಳುವುದಕ್ಕೆ ಕಾಲಾವಕಾಶ ಪಡೆದುಕೊಂಡ್ರಂತೆ.ಅಂತಿಮವಾಗಿ ಮಾರ್ಗದರ್ಶಕರು. ಹಿತೈಷಿಗಳು, ಸನ್ಮಿತ್ರರ ಸಲಹೆ ಮೇರೆಗೆ ಜವಾಬ್ದಾರಿಯನ್ನು ಒಪ್ಪಿಕೊಂಡ್ರಂತೆ.

“ಬಹಳ ದೊಡ್ಡ ಹುದ್ದೆ.ಅದನ್ನು ನಿಭಾಯಿಸುತ್ತೇನೆನ್ನುವ ನಂಬಿಕೆಯನ್ನು ಸಂಸ್ಥೆ ಇಟ್ಟುಕೊಂಡಿದೆ.ಆ ನಂಬಿಕೆ ಉಳಿಸಿಕೊಳ್ಳಲಿದ್ದೇನೆ ಎನ್ನುವ  ವಿಶ್ವಾಸ ನನ್ನದು.ನ್ಯೂಸ್-18ನಲ್ಲಿ ಉತ್ಸಾಹಿಗಳ ತಂಡ ಇದೆ ಎನ್ನುವುದನ್ನು ಕೇಳಿಪಟ್ಟಿದ್ದೇನೆ.ಚಾನೆಲ್ ಎನ್ನುವುದು ಪಕ್ಕಾ ಟೀಮ್ ವರ್ಕ್.ತಂಡದೊಂದಿಗೆ ಕೆಲಸ ಮಾಡಿ ಮ್ಯಾನೇಜ್ಮೆಂಟ್  ನಂಬಿಕೆ ಉಳಿಸಿಕೊಳ್ಳಲಿದ್ದೇನೆ.ಚಾನೆಲ್ ನ ಏಳ್ಗೆ-ಅಭಿವೃದ್ದಿ-ಟಿಆರ್ ಪಿ ಹೆಚ್ಚಿಸೊಕ್ಕೆ ಯತ್ನಿಸುತ್ತೇನೆ.”

                                                                             -ನಿಖಿಲ್ ಜೋಷಿ -ಶೀಘ್ರವೇ ಹುದ್ದೆ ಆಲಂಕರಿಸಲಿರುವ ನ್ಯೂಸ್-18 ಕನ್ನಡದ ನೂತನ ಸುದ್ದಿ ಸಂಪಾದಕ

ನಿಖಿಲ್ ಜೋಷಿ ಅವರನ್ನು ಹತ್ತಿರದಿಂದ ನೋಡಿದವರು,ಅವರ ವೃತ್ತಿಪರತೆ ಬಗ್ಗೆ ಬಲ್ಲವರು ಹಾಗು ಅವರೊಂದಿಗೆ ಕೆಲಸ ಮಾಡಿದವರು ಹೇಳುವಂತೆ ನಿಖಿಲ್ ಗೆ ಸಣ್ಣ ವಯಸ್ಸಿರಬಹುದು.ಆದ್ರೆ ಅಗಾಧ ಪ್ರತಿಭೆ ಹಾಗು ಪ್ರೌಢಿಮೆ ಇದೆ.ಅದನ್ನು ಬಳಸಿಕೊಂಡು ನಂಬರ್ ಗೇಮ್ ನಲ್ಲಿ ಚಾನೆಲ್ ಮೇಲೆತ್ತಲು ಯತ್ನಿಸಿ ಅದರಲ್ಲಿ ಯಶಸ್ವಿಯಾಗ್ತಾರೆನ್ನುವ ನಂಬಿಕೆ ನಮ್ಮದು ಎನ್ತಾರೆ.

ಎಲ್ಲವೂ ನಿರೀಕ್ಷೆಯಂತೆ ಆಗಲಿ,ನಿಖಿಲ್ ಜೋಷಿ ತಮ್ಮ ವೃತ್ತಿಪರತೆ ಮೂಲಕ ಸಂಸ್ಥೆ ಇಟ್ಟಿರುವ ನಂಬಿಕೆ-ವಿಶ್ವಾಸವನ್ನು ವೃದ್ದಿಸಲಿ,ಪತ್ರಿಕೋದ್ಯಮದಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸುವುದರಲ್ಲಿ ಯಶಸ್ವಿಯಾಗಲಿ ಎನ್ನುವುದು ಕನ್ನಡ ಫ್ಲ್ಯಾಶ್ ನ್ಯೂಸ್ ನ ಹಾರೈಕೆ ಮತ್ತು ಆಶಯ ಕೂಡ.

SENIOR JOURNALIST NIKHIL JOSHI WILL BE NEW NEWS EDITOR FOR NEWS 18 KANNADA CHANNEL:”ಪ್ರತಿಭೆ”ಗೆ ತಕ್ಕ “ಮನ್ನಣೆ”-“ಸಾಮರ್ಥ್ಯ”ಕ್ಕೆ ಸೂಕ್ತ “ಅವಕಾಶ”:ಪ್ರತಿಭಾನ್ವಿತ ಪತ್ರಕರ್ತ “ನಿಖಿಲ್ ಜೋಷಿ” “ನ್ಯೂಸ್ 18 ಕನ್ನಡ” ಚಾನೆಲ್ ” ನ ನೂತನ “ನ್ಯೂಸ್ ಹೆಡ್..”

Spread the love
Leave A Reply

Your email address will not be published.

Flash News