WANTED…WANTED…”PRIVATE DRIVERS FOR KSRTC”… KSRTC ಗೆ “ಖಾಸಗಿ” ಚಾಲಕರು ಬೇಕಾಗಿದ್ದಾರೆ..?! ವಿವಾದಾತ್ಮಕ ಟೆಂಡರ್ ಗೆ “ಸಾರಿಗೆ ಸಮೂಹ” ಕೆಂಡಾಮಂಡಲ..ಟೆಂಡರ್ ಹಿಂದೆ “ಕಿಕ್ ಬ್ಯಾಕ್” ಕಮಟು.?!

ಮಂಗಳೂರು.ಪುತ್ತೂರು,ರಾಮನಗರ-ಚಾಮರಾಜನಗರ ವಿಭಾಗಗಳಲ್ಲಿ “ಖಾಸಗಿ” ಚಾಲಕರ ಪೂರೈಕೆಗೆ ಟೆಂಡರ್ ಕರೆದ ಕೆಎಸ್ ಆರ್ ಟಿಸಿ:ಕೆಲಸ ಕಳೆದುಕೊಳ್ಳುವ ಭೀತಿಯಲ್ಲಿ ಡ್ರೈವರ್ಸ್/ಕಂಡಕ್ಟರ್ಸ್

0

ಬೆಂಗಳೂರು:ಈಗ  ಸಮಾಧಾನ ಆಯ್ತು ಎನ್ಸುತ್ತೆ ಸಚಿವ ಶ್ರೀರಾಮಲು ಅವರಿಗೆ….!! ಕೆಎಸ್ ಆರ್ ಟಿಸಿ  ಉದ್ದಾರವೇ ನನ್ನ ಮೊದಲ ಆಧ್ಯತೆ ಎಂದು ಹೇಳಿದ್ದೆಲ್ಲಾ ಬೊಗಳೆ ಎನ್ನೋದು ಕನ್ಫರ್ಮ್ ಆಯ್ತು…?! ಯಾವ ಸ್ತಿತಿಗೆ ಕೆಎಸ್ ಆರ್ ಟಿಸಿ ತಲುಪಬಾರದಿರಲಿ ಎಂದು ಜನ  ಎಂದುಕೊಂಡಿದ್ರೋ ಅದೇ ಅಪಾಯ ಸಚಿವರ ಕಣ್ಣಂಚಲ್ಲಿ ಎದುರಾದ್ರೂ ಶ್ರೀರಾಮುಲು ಮಾತ್ರ ಅದಕ್ಕೂ ನನಗೂ ಸಂಬಂಧ ವೇ ಇಲ್ಲ ಎನ್ನುವಷ್ಟು ನಿರ್ಲಿಪ್ತವಾಗುಳಿದಿದ್ದಾರೆ.ಏಕೆಂದ್ರೆ ನಿಗಮದೊಳಗೆ ಆಡಳಿತ ವ್ಯವಸ್ಥೆಯೇ ಖಾಸಗೀಕರಣದ ಭೂತವನ್ನು ರೆಡ್ ಕಾರ್ಪೆಟ್ ಹಾಸಿ ಆಮಂತ್ರಿಸಿಕೊಳ್ಳುಕ್ಕೆ ವೇದಿಕೆ ಸಿದ್ಧಮಾಡಿಕೊಂಡಿರುವುದು ಅಧೀಕೃತವಾದಂತಾಗಿದೆ.

ಮಂಗಳೂರು.ಪುತ್ತೂರು,ರಾಮನಗರ ಮತ್ತು ಚಾಮರಾಜನಗರ ವಿಭಾಗಕ್ಕೆ ಏಜೆನ್ಸಿ ಮೂಲಕ ಚಾಲಕ/ನಿರ್ವಾಹಕರ ನಿಯೋಜನೆ ಸಂಬಂಧ ನೀಡಲಾಗಿರುವ ಟೆಂಡರ್ ನ ಪ್ರತಿ
ಮಂಗಳೂರು.ಪುತ್ತೂರು,ರಾಮನಗರ ಮತ್ತು ಚಾಮರಾಜನಗರ ವಿಭಾಗಕ್ಕೆ ಏಜೆನ್ಸಿ ಮೂಲಕ ಚಾಲಕ/ನಿರ್ವಾಹಕರ ನಿಯೋಜನೆ ಸಂಬಂಧ ನೀಡಲಾಗಿರುವ ಟೆಂಡರ್ ನ ಪ್ರತಿ

ಯೆಸ್..ಯೆಸ್..ಅನುಮಾನವೇ ಬೇಡ..ಕೆಎಸ್ ಆರ್ ಟಿಸಿಯ ಖಾಸಗಿಕರಣಕ್ಕೆ ಹಂತ ಹಂತವಾಗಿ ವೇದಿಕೆ ಸಿದ್ಧವಾಗುತ್ತಿದೆ.ಆಡಳಿತ ವ್ಯವಸ್ಥೆಯೇ ಇದಕ್ಕೆ ಬೇಕಾದ ರೂಪುರೇಷೆಗಳನ್ನು ಸಿದ್ಧಪಡಿಸುತ್ತಿದೆ.ಯಾವ ಅಪಾಯಕ್ಕೆ ಆಸ್ಪದ ನೀಡಬಾರದಿತ್ತೋ ಅದಕ್ಕೆ ಆಮಂತ್ರಣ ನೀಡುವ ಕೆಲಸವನ್ನು ಆಡಳಿತಶಾಹಿ ಮಾಡುತ್ತಿದೆ.ಇದಕ್ಕೆ ಸ್ಪಷ್ಟ ನಿದರ್ಶನ ಪತ್ರಿಕೆಯೊಂದರಲ್ಲಿ ಕೆಎಸ್ ಆರ್ ಟಿಸಿ ಆಡಳಿತವೇ ನೀಡಿರುವ ಜಾಹಿರಾತು.ಆ ಜಾಹಿರಾತನ್ನು ಗಮನಿಸಿದ ಪ್ರತಿಯೋರ್ವನಿಗೂ ಕೆಎಸ್ ಆರ್ ಟಿಸಿ ಖಾಸಗೀಕರಣಕ್ಕೆ ಇದು ಮೊದಲ ಹೆಜ್ಜೆ ಎಂದೆನಿಸದೆ ಇರೊಲ್ಲ.

ಔಟ್ ಸೋರ್ಸ್ ಏಜೆನ್ಸಿಗೆ ನೀಡಲು ಉದ್ದೇಶಿಸಿರುವ ಟೆಂಡರ್ ಮೌಲ್ಯ 10 ಕೋಟಿ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಉಗ್ರಾಣ ಮತ್ತು ಖರೀದಿ ವಿಭಾಗದ ಅಧಿಕಾರಿಗಳು  29-07-2022 ರಂದು ಪತ್ರಿಕೆಯೊಂದರಲ್ಲಿ ನೀಡಿರುವ ಜಾಹೀರಾತು ಸಾರಿಗೆ ನಿಗಮಗಳಲ್ಲಿ ಕೆಲಸ ಮಾಡುತ್ತಿರುವ ಲಕ್ಷಾಂತರ ಕಾರ್ಮಿಕ ಸಿಬ್ಬಂದಿಯನ್ನು ಆತಂಕಕ್ಕೆ ದೂಡಿದೆ.ಇದೇ ಸ್ತಿತಿ ಮುಂದಿನ ದಿನಗಳಲ್ಲಿ ತಮಗೂ ಬಂದೊದಗಬಹುದು ಎನ್ನುವ ಕಳವಳಕ್ಕೂ ಕಾರಣವಾಗಿದೆ.

ಮಂಗಳೂರು.ಪುತ್ತೂರು,ರಾಮನಗರ ಮತ್ತು ಚಾಮರಾಜನಗರ ವಿಭಾಗಕ್ಕೆ ಏಜೆನ್ಸಿ ಮೂಲಕ ಹೊರಗುತ್ತಿಗೆ ಆಧಾರದಲ್ಲಿ ಚಾಲಕರನ್ನು ಕೆಲಸಕ್ಕೆ ನಿಯೋಜಿಸಿಕೊಳ್ಳುವ ಕುರಿತಾದ ಜಾಹೀರಾತೊಂದನ್ನು ನೀಡಲಾಗಿದೆ.ಟೆಂಡರ್ ನ ಮೊತ್ತ 10 ಕೋಟಿ ಎಂದು ಅದರಲ್ಲಿ ಉಲ್ಲೇಖಿಸಲಾಗಿದೆ.ಇದು ಟೆಂಡರ್ ನ ಸಾರಾಂಶ.ಈ ಜಾಹಿರಾತಿನಲ್ಲೇನಿದೆ ಎಂದು ಕೇಳಬಹುದು..ಬಹುದೊಡ್ಡ ಆತಂಕಕ್ಕೆ ಮುನ್ನುಡಿ ಬರೆಯುತ್ತಿರುವುದೇ ಈ ಜಾಹಿರಾತು.

ಮೇಲ್ಕಂಡ ವಿಭಾಗಗಳಲ್ಲಿ ಕೆಲಸ ಮಾಡಲು   ಡ್ರೈವರ್ಸ್-ಕಂಡಕ್ಟರ್ಸ್ ಗಳೇನು  ಕೆಎಸ್ ಆರ್ ಟಿಸಿಯಲ್ಲಿ ಇಲ್ಲವೇ..? : ಒಂದ್ವೇಳೆ ಇಲ್ಲವೆಂದ್ರೆ ಕೆಎಸ್ ಆರ್ ಟಿಸಿ ಮೂಲಕವೇ ನಿಯೋಜಿಸಿಕೊ ಳ್ಳುವ ಕೆಲಸವನ್ನೇಕೆ ಆಡಳಿತ ವ್ಯವಸ್ಥೆ ಮಾಡುತ್ತಿಲ್ಲ.? ಅದನ್ನು ಬಿಟ್ಟು ಹೊರಗುತ್ತಿಗೆಯಲ್ಲಿ ಖಾಸಗಿ ಏಜೆನ್ಸಿಗಳಿಂದ ಚಾಲಕರನ್ನು ನಿಯೋಜಿಸಿಕೊಳ್ಳುವ ದರ್ದು..ಹಕೀಕತ್ತೇನಿದೆ..? ಇದರ ಹಿಂದೆ ಇರೋ ಉದ್ದೇಶ ಒಂದೇ ಖಾಸಗಿ ಸಾರಿಗೆ ಸಂಸ್ಥೆಗೆ ಲಾಭ ಮಾಡಿಕೊಟ್ಟು ಅವರು ಕೊಡುವ ಕಿಕ್ ಬ್ಯಾಕ್ ಪಡೆಯುವುದಷ್ಟೇ..ಎನ್ನುವುದು ಅದೆಷ್ಟೋ ಕೆಎಸ್ ಆರ್ ಟಿಸಿ ಚಾಲಕರ ಆಕ್ರೋಶ ಮತ್ತು ಅಸಮಾಧಾನ.

ಮಂಗಳೂರು.ಪುತ್ತೂರು,ರಾಮನಗರ ಮತ್ತು ಚಾಮರಾಜನಗರ ವಿಭಾಗಗಳಲ್ಲಿ ಕೆಲಸ ಮಾಡೊಕ್ಕೆ ಯಾರೂ ಬರುತ್ತಿಲ್ಲ..ಯಾರೊಬ್ಬರೂ ಆಸಕ್ತಿ ತೋರುತ್ತಿಲ್ಲ.ಇದಕ್ಕೆ ಅಲ್ಲಿನ ವಾತಾವರಣ ಕಾರಣ..ಹಾಗಾಗಿ ಆ ವಿಭಾಗಗಳಲ್ಲಿ ಚಾಲಕರ ಕೊರತೆ ಸಾಕಷ್ಟಿದೆ ಎನ್ನುವುದು ಸಾರಿಗೆ ಅಧಿಕಾರಿಗಳ ಮಾತು..ಇರಬಹುದು ಎನ್ನುವ ಕಾರಣಕ್ಕೆ ಅದನ್ನು ಒಪ್ಪಿಕೊಳ್ಳೋಣ..ಆದ್ರೆ ಅದಕ್ಕೆ ಖಾಸಗಿ ಏಜೆನ್ಸಿಗೆ ಗುತ್ತಿಗೆ ನೀಡೋದೇ ಪರಿಹಾರನಾ..? ಎಂದು ಕೇಳಿದ್ರೆ ಅವರಿಂದ ಉತ್ತರವಿಲ್ಲ.

ಬಹುತೇಕ ಅಧಿಕಾರಿಗಳು ಸುಳ್ ಹೇಳ್ತಿದಾರೆ ಸರ್,..:ಸಾರಿಗೆ ಅಧಿಕಾರಿಗಳು ಕೊಡುತ್ತಿರುವ ಕಾರಣವನ್ನಿಟ್ಟುಕೊಂಡು ಡ್ರೈವರ್ಸ್-ಕಂಡಕ್ಟರ್ಸ್ ಗಳನ್ನು ಕೇಳಿದ್ರೆ ಸರ್..ಇವರೆಲ್ಲಾ ಕಳ್ಳರು ಸರ್..ಸುಳ್ ಹೇಳ್ತಿದಾರೆ.. ಮಂಗಳೂರು. ಪುತ್ತೂರು, ರಾಮನಗರ ಮತ್ತು ಚಾಮರಾಜನಗರಕ್ಕೆ ಅಲ್ಲಿನ ಸ್ಥಳೀಯರನ್ನೇ ಆಯ್ಕೆ ಮಾಡಿಕೊಂಡರೆ ಏಕೆ ಬರೊಲ್ಲ ಸರ್..ಇವರು ಬೇಕಂತಲೇ ಅದಕ್ಕೆ ಸಿದ್ಧವಿಲ್ಲ.ಹೊರಗುತ್ತಿಗೆ ಏಜೆನ್ಸಿಗಳಿಗೆ ಗುತ್ತಿಗೆ ಕೊಡ್ಲಿಕ್ಕೆ ಸಿದ್ಧವಿದ್ದಾರೆ.ಆದ್ರೆ ನಮ್ ಮೂಲಕವೇ ಹೊಸ ನೇಮಕಾತಿ ಮಾಡಿಕೊಳ್ಳೊಲ್ಲ ಅಂದ್ರೆ ಏನು..? ಅನ್ತಾರೆ.

ಹೊರಗುತ್ತಿಗೆಯಲ್ಲಿ ಚಾಲಕರ ನೇಮಕ ಬಿಟ್ಟರೆ ಸಮಸ್ಯೆಗೆ ಪರಿಹಾರವೇ ಇಲ್ವಾ..?!ಆರ್ಥಿಕ ಹೊರೆ ಕಾರಣಕ್ಕೆ ಹೊಸದಾಗಿ ನೇಮಕ ಮಾಡಿಕೊಳ್ಳೋದು ಕಷ್ಟವಾಗುತ್ತದೆ ಎಂದೇ ಇಟ್ಟುಕೊಳ್ಳೋಣ.ಆದರೆ ಇನ್ನೊಂದು ಐಡ್ಯಾ ವರ್ಕೌಟ್ ಮಾಡಿಕೊಳ್ಳೊಕ್ಕೆ ಅವಕಾಶವಿದೆಯೆಲ್ಲಾ..? ಕೆಎಸ್ ಆರ್ ಟಿಸಿ,ಬಿಎಂಟಿಸಿ ಹಾಗೂ ಇತರೆ ನಿಗಮಗಳಲ್ಲಿ ಮಂಗಳೂರು.ಪುತ್ತೂರು,ರಾಮನಗರ ಮತ್ತು ಚಾಮರಾಜನಗರ ಜಿಲ್ಲೆಗಳವರು ಸಾಕಷ್ಟು ಸಂಖ್ಯೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರು ತಮ್ಮ ಊರುಗಳಲ್ಲಿ ಕೆಲಸ ಮಾಡೊಕ್ಕೆ ತುದಿಗಾಲಲ್ಲಿದ್ದಾರೆ.ಅವರನ್ನು ಅಲ್ಲಿಗೇ ವರ್ಗಾವಣೆ ಮಾಡಬಹುದಲ್ಲ.

WANTED..WANTED..”PRIVATE DRIVERS FOR KSRTC”..KSRTC ಗೆ “ಖಾಸಗಿ” ಚಾಲಕರು ಬೇಕಾಗಿದ್ದಾರೆ. .?! ವಿವಾದಾತ್ಮಕ ಟೆಂಡರ್ ಗೆ “ಸಾರಿಗೆ ಸಮೂಹ” ಕೆಂಡಾಮಂಡಲ:ಟೆಂಡರ್ ಹಿಂದೆ “ಕಿಕ್ ಬ್ಯಾಕ್” ಕಮಟು.?!

ಚಾಲಕ/ನಿರ್ವಾಹಕರಿಗೆ ತಮ್ಮ ಊರುಗಳಲ್ಲಿದ್ದುಕೊಂಡು ಕೆಲಸ ಮಾಡೊಕ್ಕೆ ಅವಕಾಶ ಸಿಕ್ಕಂಗಾಗುತ್ತೆ,ಹಾಗೆಯೇ ಕೆಎಸ್ ಆರ್ ಟಿಸಿ ಸಮಸ್ಯೆನೂ ಶಾಶ್ವತವಾಗಿ ಬಗೆಹರಿಯುತ್ತೆ..ಇದು ಅಧಿಕಾರಿಗಳಿಗೆ ಗೊತ್ತಿರದ ವಿಷಯವೇನಲ್ಲ.ಆದ್ರೆ ಔಟ್ ಸೋರ್ಸ್ ನವರಿಂದ ಕಿಕ್ ಬ್ಯಾಕ್ ತಿನ್ನಲೇಬೇಕೆನ್ನುವ ದುರುದ್ದೇಶ ಅವರಲ್ಲಿರುವುದರಿಂದ ಖಾಸಗೀಕರಣಕ್ಕೆ ಎಡೆಮಾಡಿಕೊಡುವ  ಬೆಳವಣಿಗೆಗೆ ಅವಕಾಶ ಕೊಡ್ತಿದ್ದಾರೆನ್ನುವುದು ಕೆಎಸ್ ಆರ್ ಟಿಸಿ ಚಾಲಕ ಪರಮೇಶ್  ಆರೋಪ.

ಹೈದ್ರಾಬಾದ್-ಕರ್ನಾಟಕ ಮಾದರಿಯಲ್ಲೇ ಆಧ್ಯತೆ ಕೊಡಬಹುದಲ್ವಾ..ಹೈದ್ರಾಬಾದ್-ಕರ್ನಾಟಕ ಮಾದರಿಯಲ್ಲಿಯೇ ಮೇಲ್ಕಂಡ ವಿಭಾಗಗಳಿಗೂ ಪ್ರಾದೇಶಿಕವಾಗಿರುವ ಚಾಲಕ/ನಿರ್ವಾಹಕರಿಗೆ ಆಧ್ಯತೆ ಕೊಡುವ ಕೆಲಸ ಮಾಡಿದ್ರೆ ಔಟ್ ಸೋರ್ಸ್ ನಲ್ಲಿ ಡ್ರೈವರ್ಸ್-ಕಂಡಕ್ಟರ್ಸ್ ಗಳನ್ನು ನಿಯೋಜಿಸಿಕೊಳ್ಳುವ ದರಿದ್ರ ಸ್ತಿತಿ ನಿರ್ಮಾಣವಾಗ್ತಿತ್ತ ಎಂದು ಸಾರಿಗೆ ಕಾರ್ಮಿಕರು ಪ್ರಶ್ನಿಸ್ತಾರೆ.

ಸಾರಿಗೆ ಯೂನಿಯನ್ ಗಳಿಗೆ ವ್ಯಾಪಕ ಖಂಡನೆ:ಉಗ್ರ ಹೋರಾಟದ ಎಚ್ಚರಿಕೆ:ಸಾರಿಗೆ ಯೂನಿಯನ್ ಗಳು ಕೂಡ ಖಾಸಗೀಕರಣ ಹುನ್ನಾರದ ಬೆಳವಣಿಗೆಯನ್ನು ಖಂಡಾತುಂಡವಾಗಿ ಖಂಡಿಸಿವೆ.ಇದೆಲ್ಲಾ ಖಾಸಗೀಕರಣದ ಹುನ್ನಾರ ಅಷ್ಟೆ..ಇವತ್ತು ಮಂಗಳೂರು. ಪುತ್ತೂರು,ರಾಮನಗರ ಮತ್ತು ಚಾಮರಾಜನಗರ ವಿಭಾಗಗಳಲ್ಲಿ ಇಂಥ ವ್ಯವಸ್ಥೆ ಮಾಡುತ್ತಿದ್ದಾರೆ.ನಾಳೆ ಇನ್ನುಳಿದ ವಿಭಾಗಗಳಿಗೂ ಇದನ್ನು ವಿಸ್ತರಿಸುವ ಆತಂಕ ಇದ್ದೇ ಇದೆ.ಕೆಎಸ್ ಆರ್ ಟಿಸಿಯಲ್ಲಿ ಕೆಲಸ ಮಾಡುತ್ತಿರುವ ಚಾಲಕ/ನಿರ್ವಾಹಕರು ಎಲ್ಲಿಗೆ ಹೋಗಬೇಕೆಂದು ಕರ್ನಾಟಕ ಸಾರಿಗೆ ನೌಕರರ ಫೆಡರೇಷನ್ ಎಐಟಿಯುಸಿ  ಅಧ್ಯಕ್ಷ ಅನಂತ ಸುಬ್ಬರಾವ್ ಪ್ರಶ್ನಿಸಿದ್ದಾರೆ. ಸಾರಿಗೆ ಮುಖಂಡ ಆನಂದ್ ಇದು ಅವೈಜ್ಞಾನಿಕ-ಅಸಮರ್ಪಕ ಹಾಗೂ ಅಮಾನವೀಯ ಧೋರಣೆ.ಖಾಸಗೀಕರಣ ಮಾಡೊಲ್ಲ ಮಾಡೊಲ್ಲ ಎನ್ನುವ ಸರ್ಕಾರ ಮತ್ತು ಸಚಿವ ಶ್ರೀರಾಮುಲು ಅವರು ಕೆಎಸ್ ಆರ್ ಟಿಸಿಯನ್ನು ಸಂಪೂರ್ಣ ಮುಳುಗಿಸಿಯೇ ತೀರುವ ಹಠಕ್ಕೆ ಬಿದ್ದಂತೆ ತೋರುತ್ತದೆ.ಆದ್ರೆ ಇದಕ್ಕೆ ಅವಕಾಶ ಕೊಡೊಲ್ಲ ಎನ್ತಾರೆ.

ಸುಮ್ಮನಿದ್ದೇವೆ ಎಂದ್ರೆ ಅದು ನಮ್ಮ ದೌರ್ಬಲ್ಯವಲ್ಲ..ತುತ್ತಿನ ಚೀಲಕ್ಕೆ ಕುತ್ತು ಬರುತ್ತದೆಂದ್ರೆ ಮತ್ತೊಮ್ಮೆ ಬೀದಿಗೆ ಇಳಿಯಲಿಕ್ಕೂ ನಾವ್ ಸಿದ್ಧ:ಕೇವಲ ಬಿಎಂಟಿಸಿಗೆ ಸೀಮಿತವಾಗಿದ್ದ ಖಾಸಗೀಕರಣದ ಚಾಳಿ ಕೆಎಸ್ ಆರ್ ಟಿಸಿಗೂ ವ್ಯಾಪಿಸಿರುವುದು ನಿಜಕ್ಕೂ ಆತಂಕಕಾರಿ ಬೆಳವಣಿಗೆ.ಬಹುಷಃ ಮುಷ್ಕರದ ಕಾರಣಕ್ಕೆ ವಜಾ ಶಿಕ್ಷೆ ನೀಡಿದ ಮೇಲೆ ಎಲ್ಲರೂ ಆತಂಕದಿಂದಿದ್ದಾರೆ. ತನ್ನ ನಿರ್ಧಾರವನ್ನು ಯಾವೊಬ್ಬ ಕಾರ್ಮಿಕನೂ ಪ್ರಶ್ನಿಸೊ ಧೈರ್ಯ ಮಾಡೊಲ್ವೇನೋ ಎಂಬ ಧೋರಣೆಯಲ್ಲಿ ಸರ್ಕಾರ ತನಗಿಷ್ಟ ಬಂದ ನಿಯಮಗಳನ್ನು ಜಾರಿ ಮಾಡೊಕ್ಕೆ ಮುಂದಾಗುತ್ತಿ ದೆಯಾ ಎಂದೆನಿಸ್ತಿದೆ.

ಆದರೆ ಸುಮ್ಮನಿದ್ದೇವೆ ಎಂದುಕೊಂಡ್ರೆ ಅದು ನಮ್ಮ ದೌರ್ಬಲ್ಯವಲ್ಲ..ನಮ್ಮ ಹಕ್ಕುಗಳಿಗೆ ಅನ್ಯಾಯವಾಗುತ್ತಿದೆ-ಸ್ವಾಭಿಮಾನಕ್ಕೆ ಧಕ್ಕೆಯಾಗುತ್ತಿದೆ-ತಮ್ಮ ತುತ್ತಿನ ಚೀಲ ಕಸಿದುಕೊಳ್ಳುವ ಕೆಲಸಕ್ಕೆ ಕೈ ಹಾಕಲಾಗುತ್ತಿದೆ ಎಂದೆನಿಸಿದ್ರೆ ಎಷ್ಟ್ ಸಲ ಬೇಕಾದ್ರೂ ಬೀದಿಗೆ ಇಳಿಯೊಕ್ಕೆ ರೆಡಿ ಎನ್ತಿದೆ ಸಾರಿಗೆ ಕಾರ್ಮಿಕರ ಸಮೂಹ.

ಕಾರ್ಮಿಕಸ್ನೇಹಿ ವ್ಯವಸ್ಥೆ ನಿರ್ಮಾಣವೇ ನನ್ನ ಧ್ಯೇಯ-ಉದ್ದೇಶ-ಸಂಕಲ್ಪ-ಕನಸು ಎನ್ನುತ್ತಿದ್ದ ಸಚಿವ ಶ್ರೀರಾಮಲು ಮಂಗಳೂರು.ಪುತ್ತೂರು,ರಾಮನಗರ ಮತ್ತು ಚಾಮರಾಜನಗರ ವಿಭಾಗಗಳ ಖಾಸಗೀಕರಣಕ್ಕೆ ನಡೆಯುತ್ತಿರುವ ಹುನ್ನಾರಕ್ಕೆ ಬ್ರೇಕ್ ಹಾಕಲೇಬೇಕಿದೆ.ಇಲ್ಲವಾದಲ್ಲಿ ಮತ್ತೊಂದು ಉಗ್ರಪ್ರತಿಭಟನೆ ಎದುರಿಸ್ಲಿಕ್ಕೆ ಸಿದ್ಧವಾಗಿ ಎನ್ತಿದೆ ಕಾರ್ಮಿಕ ಸಮೂಹ.

Spread the love
Leave A Reply

Your email address will not be published.

Flash News