BBMP WARD RESERVATION ANNOUNCED: ಹೊರಬಿತ್ತು BBMP ವಾರ್ಡ್ ಮೀಸಲಾತಿ: “ಸ್ಪೋಟ”ಗೊಳ್ತು “ಅಸಮಾಧಾನ”- “ಹೊಗೆ”ಯಾಡ್ತಿದೆ ಅತೃಪ್ತಿಯ “ಬೆಂಕಿ”: : “ಎಮ್ಮೆಲ್ಲೆ-ಸಚಿವ”ರ ವಿರುದ್ದ ಅವಕಾಶ ವಂಚಿತರು “ಕೆಂಡಾಮಂಡಲ”..

ಬಹುತೇಕ ಶಾಸಕರೇ ಸ್ಪರ್ದಾಕಾಂಕ್ಷಿಗಳಿಗೆ ಅನ್ಯಾಯ ಮಾಡಿದ್ರಾ..? ತಮಗೆ ಪ್ರತಿಸ್ಪರ್ಧಿ ಗಳಾಗ್ತಾರೆನ್ನುವ ಕಾರಣಕ್ಕೆ ಮೀಸಲಾತಿ ತಪ್ಪಿಸಿದ್ರಾ..?

0

****ಹೊರಬಿತ್ತು ಬಿಬಿಎಂಪಿ ವಾರ್ಡ್ ಮೀಸಲಾತಿ: ಸ್ಪೋಟಗೊಳ್ತು ಅಸಮಾಧಾನ- ಹೊಗೆಯಾಡ್ತಿದೆ ಅತೃಪ್ತಿಯ ಹೊಗೆ: ಎಮ್ಮೆಲ್ಲೆ-ಸಚಿವರ ವಿರುದ್ದ ಅವಕಾಶ ವಂಚಿತರು ಕೆಂಡಾಮಂಡಲ..

****ಡಿಕೆಶಿ ಅತ್ಯಾಪ್ತೆ ಮಾಜಿ ಮೇಯರ್ ಪದ್ಮಾವತಿ,ರಾಮಲಿಂಗಾರೆಡ್ಡಿ ಭಂಟರಾದ ಗಂಗಾಂಬಿಕೆ ಮಲ್ಲಿಕಾರ್ಜುನ್,ಮಂಜುನಾಥ್ ರೆಡ್ಡಿ,ದಿನೇಶ್ ಗುಂಡೂರಾವ್ ಪರಮಾಪ್ತ ಸತ್ಯನಾರಾಯಣ,ಹೆಬ್ಬಾಳದ ಅಬ್ದುಲ್ ವಾಜೀದ್,ಶಿವಾಜಿನಗರದ ಗುಣಶೇಖರ್ ಗೆ ಸ್ಪರ್ಧೆಗೆ ಅವಕಾಶ ನಿರಾಕರಣೆ

*****ಬಿಬಿಎಂಪಿ ಚುನಾವಣೆ ನಡೆಯಬೇಕೆಂದು ಕೋರ್ಟ್ ಮೆಟ್ಟಿಲೇರಿದ್ದ ಕೈ ಅಭ್ಯರ್ಥಿ ಶಿವರಾಜುಗೆ ಸ್ಪರ್ಧಿಸುವ ಅವಕಾಶ ತಪ್ಪಿಸಿದ ಸಚಿವ ಕೆ.ಗೋಪಾಲಯ್ಯ

***** ಕೈ ಮಾಜಿ ಮೇಯರ್ –ಸ್ಪರ್ಧಾಕಾಂಕ್ಷಿಗಳಿಗೆ ಅಘಾತ: ಸಂಪತ್ ಸ್ಪರ್ಧೆ ಅವಕಾಶಕ್ಕೆ ಕಲ್ಲಾಕಿ ಪ್ರತೀಕಾರ ತೀರಿಸಿಕೊಂಡ್ರಾ  ಎಮ್ಮೆಲ್ಲೆ ಅಖಂಡ ಶ್ರೀನಿವಾಸ ಮೂರ್ತಿ

***** ಮಗನನ್ನು ಕಾರ್ಪೊರೇಷನ್ ಗೆ ಕಳುಹಿಸುವ ಬಿಜೆಪಿಯ ಕಟ್ಟೆ ಸತ್ಯನಾರಾಯಣಗೆ ಮರ್ಮಾಘಾತ -ಪದ್ಮನಾಭರೆಡ್ಡಿ ಮೇಯರ್ ಆಗಲೇಬೇಕೆ್ನ್ನುವ ಕನಸಿಗೂ ತಣ್ಣೀರು-ಮಾಜಿ ಮೇಯರ್ ಗೌತಮ್ ಗೂ ಇಲ್ಲ ಸ್ಪರ್ಧೆಯ ಅವಕಾಶ

ಬೆಂಗಳೂರು:ಬಿಬಿಎಂಪಿ ವಾರ್ಡ್ ಮೀಸಲಾತಿಯೇನೋ ಪ್ರಕಟವಾದಂತಿದೆ.ಆದ್ರೆ ಮೀಸಲಾತಿ ಮಾಡಿರೋ ವ್ಯವಸ್ಥೆ ಗಮನಿಸಿದ್ರೆ ಇದು ಪಕ್ಕಾ ಪೊಲಿಟಿಕಲ್ ಗೇಮ್ ಎನಿಸ್ದೆ ಇರೊಲ್ಲ.ಏಕೆಂದ್ರೆ ಬಿಜೆಪಿ ಸರ್ಕಾರ ಪ್ರಜ್ಞಾಪೂರ್ವಕವಾಗೇ  ಕ್ಲೀನ್ ಸ್ವೀಪ್ ಮಾಡಬಲ್ಲ ಹುರಿಯಾಳುಗಳಿಗೆ ಸ್ಪರ್ಧಿಸುವ ಅವಕಾಶವನ್ನೇ ತಪ್ಪಿಸಿದಂತಿದೆ( ಬಿಜೆಪಿ ಬದಲು ಬೇರೆ ಯಾವುದೇ ಪಕ್ಷಗಳ ಸರ್ಕಾರ ಇದ್ರೂ ಇದನ್ನೇ ಮಾಡ್ತಿದ್ವು ಎನ್ನುವುದು ಕೂಡ ಅಷ್ಟೇ ಸತ್ಯ).ಮೀಸಲಾತಿ ನಿಗಧಿಯಲ್ಲಿ ಅನ್ಯಾಯ ನಡೆದಿದೆ ಎನ್ನುವ ಅಪಸ್ವರ ಭಾರೀ ಜೋರಾಗಿ ಕೇಳಿಬಂದಿರೋದ್ರಿಂದ ಬಹುತೇಕರು ಮೀಸಲಾತಿ ಪ್ರಶ್ನಿಸಿ ಕೋರ್ಟ್ ಮೆಟ್ಟಿಲೇರೊಕ್ಕೆ ನಿರ್ಧರಿಸಿರುವುದಾಗಿ ಕನ್ನಡ ಫ್ಲ್ಯಾಶ್ ನ್ಯೂಸ್ ಗೆ ತಿಳಿಸಿದ್ದಾರೆ.

ಅಂದುಕೊಂಡಂತೆಯೇ ನಿನ್ನೆ ರಾತ್ರಿ 243 ವಾರ್ಡ್ ಗಳ ಮೀಸಲಾತಿ ನಿಗಧಿ ಮಾಡಿ  ಅಧಿಸೂಚನೆ ಹೊರ ಡಿಸಲಾಗಿದೆ.ಮೀಸಲಾತಿಯೇನೋ ಫೈನಲ್ ಆಗಿದೆ.ಆದ್ರೆ ಮೀಸಲಾಗಿ ನಿಗಧಿ ಜನಸಂಖ್ಯೆಗೆ ಅನುಗುಣವಾಗಿ ನಡೆದಿಲ್ಲ ಎನ್ನುವ  ಅಪಸ್ವರ ಕೇಳಿಬಂದಿದೆ.

ಬಿಜೆಪಿ ಪಕ್ಷ ಸೆಪ್ಟೆಂಬರ್-ಅಕ್ಟೋಬರ್ ನಲ್ಲಿ ನಡೆಯಬಹುದೆನ್ನಲಾಗು ತ್ತಿರುವ ಬಿಬಿಎಂಪಿ ಚುನಾವಣೆಯಲ್ಲಿ ಶತಾಯಗತಾಯ ಅಧಿಕಾರದ ಚುಕ್ಕಾಣಿ ಹಿಡಿಯಲೇಬೇಕೆನ್ನುವ ಉಮೇದಿನಲ್ಲಿ ತನಗಿಷ್ಟ ಬಂದಂತೆ ಮೀಸಲಾಗಿ ನಿಗಧಿ ಮಾಡಿದೆ ಎನ್ನುವ ಬಹುದೊಡ್ಡ ಆಪಾದನೆ ಕೇಳಿಬಂದಿದೆ.

ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳಿಗೆ ಈಸಿ ಕೇಕ್ ಆಗಿದ್ದ ವಾರ್ಡ್ ಗಳ ಮೀಸಲಾತಿಯನ್ನೇ ಬದಲಿಸಿ ಅವರಿಗೆ ಸ್ಪರ್ಧಿಸುವ ಅವಕಾಶವನ್ನೇ ತಪ್ಪಿಸಲಾಗಿದೆ ಎನ್ನುವುದು ಮೇಲ್ನೋಟಕ್ಕೆ ಗೋಚರವಾಗುವ  ಸತ್ಯ ಕೂಡ.

ಚುನಾವಣೆಗಳು ಶೀಘ್ರ ನಡೆಯಬೇಕೆಂದು ಯಾರ್ಯಾರು ಕೋರ್ಟ್ ಮಟ್ಟದಲ್ಲಿ ಹೋರಾಡುತ್ತಿದ್ದರೋ…ಆಗಾಗ ಪ್ರೆಸ್ ಮೀಟ್ ಮಾಡುತ್ತಿದ್ದರೋ ಅವರಲ್ಲಿ ಬಹುತೇಕರಿಗೆ ಸ್ಪರ್ಧೆಗೆ ಅವಕಾಶವನ್ನೇ ನೀಡದೆ ಬಾಲ ಕಟ್ ಮಾಡಲಾಗಿದೆ.ಅವರಲ್ಲಿ ಪ್ರಮುಖರಾದವರು ಶಂಕರಮಠ ವಾರ್ಡ್ ನ ಕೈ ಅಭ್ಯರ್ಥಿ ಶಿವರಾಜು.ಎಂ. ಸಾಮಾನ್ಯ ವರ್ಗಕ್ಕಿದ್ದ ಮೀಸಲಾತಿಯನ್ನು ಕಿತ್ತಾಕಿ ಅಲ್ಲಿ ಎಸ್ ಸಿ ಕ್ಯಾಂಡಿಡೇಟ್ ನಿಲ್ಲಿಸೊ ವ್ಯವಸ್ಥೆ ಮಾಡಲಾಗಿದೆ.ಇದು ಸಚಿವ ಹಾಗೂ ಕ್ಷೇತ್ರ ಶಾಸಕ ಕೆ.ಗೋಪಾಲಯ್ಯ ಅವರ ರಾಜಕೀಯ ಚಾಣಾಕ್ಷ ನಡೆ ಎಂದೇ ಹೇಳಲಾಗ್ತಿದೆ.

ಹೆಬ್ಬಾಳದ ಮನೋರಾಯನಪಾಳ್ಯ ವಾರ್ಡ್ ನ ಅಬ್ದುಲ್ ವಾಜೀದ್ ಅವರಿಗೂ ಸ್ಪರ್ಧೆಗೆ ಅವಕಾಶವಿಲ್ಲದಂತಾಗಿದೆ.ಆ ವಾರ್ಡನ್ನು ಹಿಂದುಳಿದ ವರ್ಗ(ಎ) ಮಹಿಳೆಗೆ ಮೀಸಲಿರಿಸಲಾಗಿದೆ.

ಹಾಗೆಯೇ ಶಿವಾಜಿನಗರ ವಿಧಾನಸಭಾ ಕ್ಷೇತ್ರದ ಜಯಮಹಲ್ ವಾರ್ಡ್ ನಿಂದ ಸ್ಪರ್ದಿಸುತ್ತಿದ್ದ ಗುಣಶೇಖರ್ ಗೆ ಸ್ಪರ್ಧಿಸುವ ಅವಕಾಶ ನಿರಾಕರಿಸ ಲಾಗಿದೆ.ಅವರ ವಾರ್ಡ್  ಸಾಮಾನ್ಯ ಮಹಿಳೆಗೆ ಮೀಸಲಾಗಿದೆ.ಇನ್ನು ಮಾಜಿ ಸಚಿವ ರಾಮಲಿಂಗಾರೆಡ್ಡಿ ಅವರ ಪರಮಾಪ್ತ ಮಡಿವಾಳ ವಾರ್ಡ್ ನ ಕಾಂಗ್ರೆಸ್ ಅಭ್ಯರ್ತಿ ಮಂಜುನಾಥ ರೆಡ್ಡಿ ವಾರ್ಡನ್ನುಸಾಮಾನ್ಯ ಮಹಿಳೆಗೆ ಮೀಸಲಿಸಲಾಗಿದೆ.

ಹಾಗೆಯೇ ರಾಜಾಜಿನಗರ ವಿಧಾನಸಭಾ ಕ್ಷೇತ್ರದ ಪ್ರಕಾಶ್ ನಗರ ವಾರ್ಡ್ ನಿಂದ ಸ್ಪರ್ದಿಸುತ್ತಿದ್ದ ಮಾಜಿ ಮೇಯರ್ ಪದ್ಮಾವತಿ ವಾರ್ಡ್ ಮೀಸಲಾತಿಯನ್ನು ಹಿಂದು ಳಿದ ವರ್ಗ(ಎ)ಗೆ ಬದಲಿಸಲಾಗಿದೆ.

ಜಯನಗರ ವಿಧಾನಸಭಾ ಕ್ಷೇತ್ರದ ಜಯನಗರ ವಾರ್ಡ್ ನ ಮತ್ತೋರ್ವ ಕೈ ಅಭ್ಯರ್ಥಿ ಮಾಜಿ ಮೇಯರ್ ಗಂಗಾಂಬಿಕೆ ಮಲ್ಲಿಕಾರ್ಜುನ್ ಗೆ ವಾರ್ಡೇ ಇಲ್ಲದಂತೆ ಮಾಡಲಾಗಿದೆ. ಭೈರಸಂದ್ರ ವಾರ್ಡ್ ನಿಂದ ಸ್ಪರ್ದಿಸುವ ಆಸೆ ಇಟ್ಟುಕೊಂಡಿದ್ದ ನಾಗರಾಜ್ ಗೂ ಅವಕಾಶ ಇಲ್ಲದಂತಾಗಿದೆ. ಗುರಪ್ಪನ ಪಾಳ್ಯ ವಾರ್ಡ್ ನಿಂದ ಆಯ್ಕೆಯಾಗುತ್ತಿದ್ದ ಕೈ ಅಭ್ಯರ್ಥಿ ಮಹಮದ್ ರಿಜ್ವಾನ್ ಗೂ ಈ ಬಾರಿ ಟಿಕೆಟ್ ಇಲ್ಲದಂತಾಗಿದೆ.

ಇದು “ಕೈ” ಕಥೆಯಾದ್ರೆ “ಬಿಜೆಪಿ”ದು ಕೂಡ ಕರುಣಾಜನಕ ಕಥೆ..ಹಿರಿಯ ಸದಸ್ಯ ಪದ್ಮನಾಭ ರೆಡ್ಡಿ ಅವರಿಂದ ಕಾಚರಕನಹಳ್ಳಿ ವಾರ್ಡ್ ನ್ನೇ ಕಸಿದುಕೊಳ್ಳಲಾಗಿದೆ. ಸಾಮಾನ್ಯ ಮಹಿಳೆಗೆ ವಾರ್ಡ್ ಮೀಸಲಿಡಲಾಗಿದೆ.ಈ ಬಾರಿ ಗೆದ್ದಿದ್ರೆ ಪದ್ಮನಾಭ ರೆಡ್ಡಿ ಮೊದಲ ಮೇಯರ್ ಆಗುತ್ತಿದ್ದರೆಂದೇ ವಿಶ್ಲೇಷಿಸಲಾಗುತ್ತಿತ್ತು.

ಆದ್ರೆ ಅವರಿಗೆ ಅದಕ್ಕೆ ಅವಕಾಶ ಮಾಡಿಕೊಡದೆ ಜೇಷ್ಠ್ಯತೆಯನ್ನೇ ಧಿಕ್ಕರಿಸಲಾಗಿದೆ.ಅದರಂತೆ ಬಸವನಗುಡಿ ವಾರ್ಡ್ ನ್ನೂ ಕೂಡ ಮಾಜಿ ಮೇಯರ್ ಕಟ್ಟೆ ಸತ್ಯನಾರಾಯಣ ಅವರಿಗೆ ಇಲ್ಲವಾಗಿಸಿದೆ.ಆ ವಾರ್ಡ್ ಮೀಸಲಾತಿಯನ್ನೂ ಮಹಿಳೆಗೆ ಮೀಸಲಿಡಲಾಗಿದೆ.

ತನ್ನ ಮಗಗನ್ನು ಕಾರ್ಪೊರೇಷನ್ ಗೆ ಕಳುಹಿಸುವ ಆಸೆಯಲ್ಲಿದ್ದ ಕಟ್ಟೆ ಸತ್ಯನಾರಾಯಣ ಅವರ ಆಸೆಗೆ ತಣ್ಣೀರೆರಚಲಾಗಿದೆ. ಹಾಗೆಯೇ ಮತ್ತೋರ್ವ ಮಾಜಿ ಮೇಯರ್ ನಟರಾಜ್ ಗೂ ಈ ಬಾರಿ ಸ್ಪರ್ಧೆಗೆ ಅವಕಾಶವಿಲ್ಲದಂತಾಗಿದೆ. ಅವರೇನಿದ್ದರೂ ಜೆಪಿನಗರದಿಂದ ಸ್ಪರ್ಧಿಸಬೇಕಿದೆಯಷ್ಟೇ.

ಹಾಗೆಯೇ ಶಾಂತಿನಗರ ವಿಧಾನಸಭಾ ಕ್ಷೇತ್ರದ ಜೋಗುಪಾಳ್ಯ ವಾರ್ಡ್ ನಿಂದ ಮತ್ತೊಮ್ಮೆ ಸ್ಪರ್ಧಿಸುವ ಇರಾದೆ ಇಟ್ಟುಕೊಂಡಿದ್ದ ಮಾಜಿ ಮೇಯರ್ ಗೌತಮ್ ಕುಮಾರ್ ಗೂ ಈ ಬಾರಿ ಸ್ಪರ್ಧೆಗೆ ಅವಕಾಶ ಇಲ್ಲದಂತಾಗಿದೆ.ಅವರ ವಾರ್ಡ್ ನ್ನು ಸಾಮಾನ್ಯ ಮಹಿಳೆಗೆ ಮೀಸಲಿಡಲಾಗಿದೆ.

ಶಾಸಕರ ಕೈವಾಡ:ಮೀಸಲು ನಿಗಧಿ ವಿಚಾರದಲ್ಲಿ ನಿರ್ಣಾಯಕ ಪಾತ್ರ ವಹಿಸುವ ಬಹುತೇಕ ಶಾಸಕರು ಈ ಬಾರಿಯ ಮೀಸಲು ನಿಗಧಿ ವಿಚಾರದಲ್ಲಿ ಡಬಲ್ ಗೇಮ್ ಆಡಿದ್ದಾರೆನ್ನುವುದು ಅವಕಾಶ ವಂಚಿತರಿಂದ ಕೇಳಿಬಂದಿದೆ.

ಬಿಜೆಪಿಯಲ್ಲಿ ಈ ರೀತಿಯ ಅಸಹನೆಯಿದ್ದರೂ ದೊಡ್ಡ ಕೂಗಾನೇನು ಕೇಳಿಸುತ್ತಿಲ್ಲ.ಆದ್ರೆ ಕಾಂಗ್ರೆಸ್ ನಿಂದ ಆಕಾಂಕ್ಷಿಗಳಾದವರಂತೂ ಇದನ್ನು ಬಹುದೊಡ್ಡ ಮಟ್ಟದಲ್ಲಿ ಪ್ರಶ್ನಿಸ್ತಿದ್ದಾರೆ ಹಾಗೆಯೇ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ ಕೂಡ.

ಪಕ್ಷ ಯಾವುದೇ ಇರಲಿ,ಸರ್ಕಾರದ ಮಟ್ಟದಲ್ಲಿ ಲಾಭಿ ಮಾಡೊಕ್ಕೆ ಕಾಂಗ್ರೆಸ್ ಶಾಸಕರಿಗೆ ಅವಕಾಶವಿದ್ದರೂ ತಮ್ಮ ಆಪ್ತರ ವಿಚಾರದಲ್ಲಿ ಅಷ್ಟೇನೂ ಪರಿಣಾಮಕಾರಿಯಾಗಿ ತಮ್ಮ ಪ್ರಭಾವ ಬೀರಿಲ್ಲ ಎನ್ನುವುದು ತಮ್ಮ ಪಕ್ಷದ ಶಾಸಕರುಗಳ ಮೇಲೆಯೇ ಅನೇಕರ ಆಕ್ರೋಶ.ಆದ್ರೆ ಇದನ್ನು ಅಲ್ಲಗೆಳೆದಿರುವ ಬಹುತೇಕ ಶಾಸಕರು ನಾವೇನೇ ಹೇಳಿದ್ರೂ ಬಿಜೆಪಿ ಸಚಿವರು-ಶಾಸಕರು ತಮ್ಮ ಮಾತಿಗೆ ಸೊಪ್ಪಾಕಿಲ್ಲ.ಎಷ್ಟೇ ಒತ್ತಡ ಹೇರಿದ್ರೂ ಫಲಕಾರಿಯಾಗಿಲ್ಲ ಎಂದ್ಹೇಳುವ ಮೂಲಕ ಜವಾಬ್ದಾರಿಯಿಂದ ನುಣುಚಿಕೊಳ್ಳುವ ಯತ್ನ ಮಾಡಿದ್ದಾರೆ.

ಸಂಪತ್ ಸ್ಪರ್ಧೆಗೆ ಬ್ರೇಕ್ ಹಾಕಿಸಿದ ಅಖಂಡ ಶ್ರೀನಿವಾಸ ಮೂರ್ತಿ: ಪುಲಕೇಶಿನಗರ ವಿಧಾನಸಭಾ ಕ್ಷೇತ್ರದ ಡಿಜೆ ಹಳ್ಳಿ ವಾರ್ಡ್ ನಿಂದ ಎರಡು ಬಾರಿ ಗೆದ್ದು ಮೇಯರ್ ಆಗಿದ್ದ ಸಂಪತ್ ರಾಜ್ ಕೂಡ ಸ್ಪರ್ಧೆ ಅವಕಾಶ ಕಳೆದುಕೊಂಡಿದ್ದಾರೆ.ಮೂರನೇ ಬಾರಿ ಕಾರ್ಪೊರೇಟರ್ ಆಗುವ ಅವಕಾಶ ಕೈ ತಪ್ಪಿದೆ.

ಅವರಿಗೆ ಮೀಸಲಾಗುತ್ತಿದ್ದ ಮೀಸಲಾತಿ ಈ ಬಾರಿ ಹಿಂದುಳಿದ ವರ್ಗದ ಮಹಿಳೆಗೆ ಮೀಸಲಾಗಿದೆ.ಇದರ ಹಿಂದೆ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಕೈವಾಡ ಕಾರಣ ಎನ್ನುವ ಗುಮಾನಿ ಸಂಪತ್ ದು.ನನ್ನ ಮೇಲಿನ ರಾಜಕೀಯ ದ್ವೇಷಕ್ಕೆ ನನಗೆ ಸ್ಪರ್ಧಿಸುವ ಅವಕಾಶ ತಪ್ಪಿಸಿದ್ರೆನ್ನುವುದು ಸಂಪತ್ ಆರೋಪ.

ಆದ್ರೆ ಇದಕ್ಕೆ ತಲೆಕೆಡಿಸಿಕೊಂಡಿಲ್ಲ.ಸಿವಿ ರಾಮನ್ ನಗರ ವಿಧಾನಸಭಾ ಕ್ಷೇತ್ರದಲ್ಲಿ ಕಳೆದ ಬಾರಿ ಕೊನೇ ಕ್ಷಣಗಳಲ್ಲಿ ಪ್ರಯತ್ನ ಮಾಡಿ ಅಲ್ಪ ಮತಗಳ ಅಂತರದಿಂದ ಸೋತಿದ್ದೆ..ಈ ಬಾರಿ ಕ್ಷೇತ್ರವನ್ನು ಕಾನ್ಸಂಟ್ರೇಟ್ ಮಾಡ್ತೇನೆ ಎಂದು ಬೆಂಬಲಿಗರ ಬಳಿ ಹೇಳಿಕೊಂಡಿದ್ದಾರಂತೆ.

 ಒಂದು ವಾರ್ಡ್ ಬಿಟ್ಟು ಉಳಿದೆಲ್ಲಾ ಮಹಿಳಾ ವಾರ್ಡ್:ಪುಲಕೇಶಿನಗರ ವಿಧಾನಸಭಾ ಕ್ಷೇತ್ರದ ಸ್ಪೆಷಾಲಿಟಿ ಹೇಗಿದೆ ಎಂದ್ರೆ 7 ವಾರ್ಡ್ ಗಳ ಪೈಕಿ ಒಂದನ್ನು ಬಿಟ್ರೆ ಉಳಿದೆಲ್ಲವೂ ಮಹಿಳೆಯರಿಗೆ ಮೀಸಲು ಮಾಡಲಾಗಿದೆ. ಸಗಾಯಪುರಂ ವಾರ್ಡ್ ಬಿಟ್ರೆ  ಎಲ್ಲಾ 6 ವಾರ್ಡ್ ಗಳಲ್ಲೂ ಮಹಿಳೆಯರೇ ಹುರಿಯಾಳುಗಳಾಗಲಿದ್ದಾರೆ.ಇದು ಕಾಂಗ್ರೆಸ್ ಗೆ ಅನುಕೂಲಕರವಾಗಲಿದೆ ಎನ್ನುವುದರಲ್ಲಿ ಡೌಟೇ ಇಲ್ಲ..ಇದರಿಂದೆ ಅಖಂಡ ಶ್ರೀನಿವಾಸ ಮೂರ್ತಿ ವೆಲ್ ಪ್ಲ್ಯಾನ್ಡ್ ಮಾಡಿ ಸೇಫ್ ಗೇಮ್ ಆಡಿದ್ದಾರೆನ್ನುವ ವಿಶ್ಲೇಷಣೆ ಕೇಳಿಬರುತ್ತಿದೆ.

ಎನ್ ಆರ್ ರಮೇಶ್ ಗೂ ವಾರ್ಡಿಲ್ಲ..ಆದ್ರೆ ನನ್ನ ಸ್ಪರ್ಧೆ ವಿಧಾನಸಭೆ..ನನ್ನ ಪತ್ನಿಯೇ ಈ ಬಾರಿಯೂ ಸ್ಪರ್ದಿ: ಪದ್ಮನಾಭನಗರ ವಿಧಾನಸಭಾ ಕ್ಷೇತ್ರದ ಯಡಿಯೂರು ವಾರ್ಡ್ ಮೀಸಲಾತಿ ಕೂಡ ಈ ಬಾರಿ ಕಳೆದ ಸಾರಿಯಂತೆ ಸಾಮಾನ್ಯ(ಮಹಿಳೆ) ಪಾಲಾಗಿದೆ.ಈ ಬಗ್ಗೆ ಎನ್.ಆರ್ ರಮೇಶ್ ಅವರನ್ನು ಸಂಪರ್ಕಿಸಿದಾಗ ಇದು ನಿರೀಕ್ಷಿತ.ನನಗೇನೂ ಬೇಸರವಿಲ್ಲ.ಏಕಂದ್ರೆ ನನ್ನ ಆಯ್ಕೆ-ಆಧ್ಯತೆ ಏನಿದ್ರೂ ವಿಧಾನಸಭೆ ಚುನಾವಣೆ.

ಜಯನಗರ ಕ್ಷೇತ್ರದಲ್ಲಿ ಸೀರಿಯಸ್ ಆಗಿ ಕೆಲಸ ಮಾಡುತ್ತಿದ್ದೇನೆ.ಈ ಬಾರಿಯೂ ನನ್ನ ಧರ್ಮಪತ್ನಿ ಪೂರ್ಣಿಮಾ ಅವ್ರೇ ಸ್ಪರ್ದಿಸಲಿದ್ದಾರೆ. ಬಹುಮಹತ್ವದ 7 ಯೋಜನೆಗಳು ಜಯನಗರ ಕ್ಷೇತ್ರದಲ್ಲಿ ಅನುಷ್ಠಾನವಾಗಬೇಕಿದೆ.ಅದನ್ನು ಪೂರ್ಣಗೊಳಿಸುವ ಬ್ಯುಸಿಯಲ್ಲಿದ್ದೇನೆ.ಹಾಗಾಗಿ ನನಗೇನೂ ಬೇಸರವಿಲ್ಲ..ನನ್ನನ್ನು ಜನ ವಿಧಾನಸಭೆಯಲ್ಲಿ ನೋಡೊಕ್ಕೆ ಇಷ್ಟಪಡ್ತಿದ್ದಾರೆಂದು ಮಾರ್ಮಿಕವಾಗಿ ನುಡಿದ್ರು.

ನನ್ನ ವಾರ್ಡ್ ಎಸ್ಟಿ ಆಗ್ಬೇಕಿತ್ತು..ಮೋಸ ಮಾಡಿದ್ದಾರೆ: ಬಹುತೇಕರಂತೆ ಸ್ಪರ್ಧಿಸುವ ಅವಕಾಶ ಕಳೆದುಕೊಂಡವರಲ್ಲಿ ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದ ಮಾಜಿ ಉಪಮೇಯರ್ ಇಂದಿರಾ ಕೂಡ ಒಬ್ಬರು.ಈ ಬಾರಿ ಕುವೆಂಪುನಗರ ವಾರ್ಡ್ ನಿಂದ ಸ್ಪರ್ದಿಸುವ ಇರಾದೆ ಇಟ್ಕೊಂಡಿದ್ರು.

ಆದ್ರೆ ಎಸ್ ಸಿ ಮಹಿಳೆ ಮಾಡಿರುವುದರಿಂದ ಅವಕಾಶ ತಪ್ಪಿದೆ..ಆದ್ರೆ ಜನಸಂಖ್ಯೆ ಆಧಾರದಲ್ಲಿ ನೋಡಿದ್ರೆ ನನ್ನ ವಾರ್ಡ್ ಎಸ್ಪಿ ಮಹಿಳೆ ಆಗ್ಬೇಕಿತ್ತು.ಆದರೆ ನಾನು ಗೆಲ್ತೇನೆ ಎನ್ನುವ ಕಾರಣಕ್ಕೆ ಎಸ್ ಸಿ ಮಹಿಳೆ ಮಾಡಿದ್ದಾರೆ.ಆದ್ರೆ ಇದನ್ನು ಪ್ರಶ್ನಿಸಿ ಕೋರ್ಟ್ ಮೆಟ್ಟಿಲನ್ನೇರುತ್ತೇನೆ ಎಂದು ಹೇಳಿದ್ರು.

ಮೇಲ್ನೋಟಕ್ಕೆ ಕಾಂಗ್ರೆಸ್,ಜೆಡಿಎಸ್ ಸೇರಿದಂತೆ ಬಿಜೆಪಿಯ ಸ್ಪರ್ಧಾಕಾಂಕ್ಷಿಗಳು ಸರ್ಕಾರ ಹೊರಡಿಸಿರುವ ಮೀಸಲಾತಿಗೆ ಬಹುತೇಕ ತೃಪ್ತರಾದಂತಿಲ್ಲ.ಇದನ್ನು ಪ್ರಶ್ನಿಸಲು ಮುಂದಾಗಿದ್ದಾರೆ.ಈ ಬೆಳವಣಿಗೆ ಇನ್ನ್ಯಾವ ತಿರುವುಗಳಿಗೆ ಎಡೆ ಮಾಡಿಕೊಡಲಿದೆಯೋ ಗೊತ್ತಾಗುತ್ತಿಲ್ಲ.

Spread the love
Leave A Reply

Your email address will not be published.

Flash News