BreakingMoreScrollTop NewsUncategorizedಕ್ರೈಮ್ /ಕೋರ್ಟ್ಜಿಲ್ಲೆ

BIG GARBAGE SCANDLE IN TRANSFER STATION..!!??/ BBMP ಯಲ್ಲಿ “ಟ್ರಾನ್ಸ್‌ ಫರ್  ಸ್ಟೇಷನ್‌” ಹಗರಣ,179 ಕೋಟಿ ಅಕ್ರಮಕ್ಕೆ ರೆಡ್‌ ಕಾರ್ಪೆಟ್‌: ಖಾಸಗಿ ಕಂಪೆನಿ ಲಾಭಕ್ಕೆ ಬೆಂಗಳೂರಿಗರ ಜೇಬಿಗೆ ಕತ್ತರಿ..

ಹೈದ್ರಾಬಾದ್‌ ಕಂಪೆನಿಗೆ ಟೆಂಡರ್‌ ಫೈನಲ್..!!ಬಿಬಿಎಂಪಿ ಅಧಿಕಾರಿಗಳ ಜೇಬಿಗೆ ಸೇರಿದ ಕಿಕ್ ಬ್ಯಾಕ್‌ ಎಷ್ಟು,,?!

ಬೆಂಗಳೂರು: ಇದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಇತಿಹಾಸದಲ್ಲಿ ನಡೆಯೊಕ್ಕೆ ಹೊರಟಿರುವ ಬೃಹತ್.. ಬೃಹತ್‌ ಹಗರಣ ಎಂದ್ರೂ ತಪ್ಪಾಗಲಿಕ್ಕಿಲ್ಲ. ಬೆಂಗಳೂರಿನಲ್ಲಿ ಉತ್ಪತ್ತಿಯಾಗುವ ಕಸದ ನಿರ್ವಹಣೆಗೆ ಪೂರಕವಾಗಿ ನಿರ್ಮಾಣ  ಮಾಡೊಕ್ಕೆ ಹೊರಟಿರುವ  “ಟ್ರಾನ್ಸ್ ಫರ್ ಸ್ಟೇಷನ್” ನಲ್ಲಿ ಅಧಿಕಾರಿಗಳು ಕೋಟ್ಯಾಂ ತರ  ಲೂಟಿ ಮಾಡೊಕ್ಕೆ ಹೊರಟಿದ್ದಾರೆ ಎನ್ನಲಾಗುತ್ತಿದೆ. ಇದರ ಮೊತ್ತವೇ ಬರೋಬ್ಬರಿ  ಸುಮಾರು 180ಕೋಟಿ ರು.ಈ ಅಕ್ರಮ ನಡೆದಿದ್ದೇ ಆದಲ್ಲಿ ಪಾಲಿಕೆ ಇತಿಹಾಸದಲ್ಲಿ ನಡೆಸ ಬೃಹತ್‌ ಹಗರಣಗಳಲ್ಲಿ ಒಂದಾದೀತೇನೋ..

ಒಂದಲ್ಲಾ ಎರಡಲ್ಲ ಬರೋಬ್ಬರಿ 180ಕೋಟಿ ರು ಗಳನ್ನು ಬಿಬಿಎಂಪಿ ಕಸದ ಗುಂಡಿಗೆ ಸುರಿಯಲು ಮುಂದಾಗಿದೆ ಎನ್ಸುತ್ತೆ. ವಾರ್ಡ್ ಗಳಲ್ಲಿ ಕಸ ಸಂಗ್ರಹಿಸಿಕೊಂಡು ಹೊರವಲಯದ ಸಂಸ್ಕರಣಾ ಘಟಕಗಳಿಗೆ ಸಾಗಿಸುವ ಬದಲು ನಗರದ ಮೂರು ಪ್ರಮುಖ ಜಾಗಗಳಲ್ಲಿ ಕಸ ಸಂಗ್ರಹಿಸಿಕೊಂಡು ನಂತರ ಸಾಗಣೆ ಮಾಡಲು ಮುಂದಾಗಿದೆ.ಇದಕ್ಕಾಗಿ ಸದ್ದಿಲ್ಲದೆ ಮೂರು ಕಡೆ ಯಾರ ಗಮನಕ್ಕೂ ತಾರದೆ  ಕೋಟ್ಯಂತರ ರು ಖರ್ಚಿನಲ್ಲಿ  ಟ್ರಾನ್ಸ್ ಫರ್ ಸ್ಟೇಷನ್ ಸ್ಥಾಪಿಸಲು ಯೋಜನೆ ರೂಪಿಸಿಕೊಂಡಿದೆ.ಟ್ರಾನ್ಸ್‌ ಫರ್‌ ಸ್ಟೇಷನ್‌ ಗಳನ್ನು ಸ್ಥಾಪಿಸುವ ಉದ್ದೇಶದ ಯೋಜನೆಗೆ ಈಗಾಗಲೇ ಟೆಂಡರ್ ಪ್ರಕ್ರಿಯೆಯನ್ನೂ ಮುಗಿಸಿ ಬಿಟ್ಟಿದೆ. ಆದರೆ ಸಾರ್ವಜನಿಕವಾಗಿ ಇದು ತೀವ್ರ ಚರ್ಚೆಗೆ ಗ್ರಾಸವಾಗಿದೆ.

ಈವರೆಗೂ ಕಸ ಸಂಗ್ರಹಣೆ ಮತ್ತು ನಿರ್ವಹಣಾ ವ್ಯವಸ್ಥೆ ಹೇಗಿತ್ತು, ಪ್ರತಿ ಮನೆಗಳಿಂದ ಕಸ ಸಂಗ್ರಹಿಸುವ ಆಟೋಗಳು ಕಸವನ್ನು ಕಾಂಪ್ಯಾಕ್ಟರ್ ಗಳಿಗೆ ಹಾಕುತ್ತವೆ. ನಂತರ ಕಾಂಪ್ಯಾಕರ್ ಗಳು ಬೆಂಗಳೂರಿನ ಹೊರ ವಲಯದಲ್ಲಿರುವ ಕಸ ಸಂಸ್ಕರಣಾ ಘಟಕಗಳಿಗೆ ಕೊಂಡೋಯ್ಯುತ್ತವೆ. 10 ಟನ್ ಸಾಮರ್ಥ್ಯದ ಒಂದು ಕಾಂಪ್ಯಾಕ್ಟರ್ ಗೆ ಕಸ ಸಾಗಿಸಲು ತಿಂಗಳಿಗೆ 1.86ಲಕ್ಷ ರು. ಬಾಡಿಗೆ ಮಾತ್ರ ಪಾವತಿಸಬೇಕಾಗುತ್ತದೆ.

ಏನಿದು ವಿವಾದಿತ ಟ್ರಾನ್ಸ್ ಫರ್‌ ಸ್ಟೇಷನ್‌ ಪ್ರಾಜೆಕ್ಟ್: ಆದರೆ ಬಿಬಿಎಂಪಿ ಈಗ ನಿರ್ಧರಿಸಿರುವ ಹೊಸ ಕಸ ನಿರ್ವಹಣಾ ವ್ಯವಸ್ಥೆಯಲ್ಲಿ ಟ್ರಾನ್ಸ್ ಫರ್ ಸ್ಟೇಷನ್ ನಿರ್ಮಿಸಿ ಹೆಚ್ಚುವರಿ 180ಕೋಟಿ ರು. ವೆಚ್ಚ ಮಾಡಲು ಸಾಕಷ್ಟು ತರಾತುರಿಯ ಕ್ರಮಕೈಗೊಳ್ಳುತ್ತಿದೆ. ಅಷ್ಟಕ್ಕೂ ಇಂಥ ಟ್ರಾನ್ಸ್ ಫರ್ ಸ್ಟೇಷನ್ ಗಳು ಈಗಾಗಲೇ ಚಿಕ್ಕ ಪ್ರಮಾಣದಲ್ಲಿ ಅಸ್ತಿತ್ವದಲ್ಲಿದ್ದು, ಅವುಗಳಿಂದ ಕಸ ನಿರ್ವಹಣೆಗೆ ಹೇಳಿಕೊಳ್ಳುವ ಪ್ರಯೋಜನ  ಆಗುತ್ತಿಲ್ಲ.

ಇಂಥ ವೈಫಲ್ಯದ ನಡುವೆಯೂ ಬಿಬಿಎಂಪಿ ಆಡಳಿತ ಸರಕಾರದ ಪರೋಕ್ಷ ಬೆಂಬಲದೊಂದಿಗೆ 150 ಟನ್ ಸಾಮರ್ಥ್ಯದ ಮೂರು ಹೊಸ ಟ್ರಾನ್ಸ್ ಫರ್ ಸ್ಟೇಷನ್ ನಿರ್ಮಾಣ ಮಾಡುತ್ತಿದೆ. ಈ ಮೂಲಕ ಪಾಲಿಕೆಯ ಕೋಟ್ಯಂತ ರು. ಹಣ ಮತ್ತು ಕೋಟ್ಯಂತರ ರು. ಬೆಲೆ ಬಾಳುವ ಜಾಗವನ್ನು ಖಾಸಗಿ ಸಂಸ್ಥೆಗೆ ನೀಡಲು ಕ್ರಮಕೈಗೊಂಡಿದೆ ಎನ್ನಲಾಗಿದೆ.

ಪಾಲಿಕೆ ಪಾಲಿಗೆ ಟ್ರಾನ್ಸ್‌ ಫರ್‌ ಸ್ಟೇಷನ್‌ ಗಳು ಬಿಳಿಯಾನೆಗಳಂತೆ ಏಕೆ..? ಇದರ ಹಿಂದೆ ಯಾರ ಕೈವಾಡ-ಷಡ್ಯಂತ್ರ..? ಪಾಲಿಕೆ ಹಣವನ್ನು ಅನಗತ್ಯ ವಾಗಿ ವೆಚ್ಚ ಮಾಡುವ ದೊಡ್ಡ ಹಗರಣ ಇದಾಗಿದ್ದು, ಇದರ ಹಿಂದೆ ಭಾರೀ ರಾಜಕೀಯ ಕೈಗಳೇ ಕೆಲಸ ಮಾಡುತ್ತಿರುವ ಶಂಕೆ ವ್ಯಕ್ತವಾಗುತ್ತಿವೆ.

ಬೆಂಗಳೂರಿನಲ್ಲಿ ನಿತ್ಯ 4200 ಮೆ.ಟನ್ ಕಸ ಉತ್ಪಾದನೆಯಾಗುತ್ತಿದ್ದು, ಇದರಲ್ಲಿ 3000 ಮೆ.ಟನ್ ಗಳಿಗೂ ಅಧಿಕ ಕಸವನ್ನು ನಗರದ ೩  ಜಾಗಗಳಲ್ಲಿ ಸಂಗ್ರಹಿಸಿಕೊಂಡು ನಂತರ ಕಸ ಹಾಕುವ “ಭೂಭರ್ತಿ”( ಲ್ಯಾಂಡ್ ಫಿಲ್ ಸೈಟ್ ) ತಾಣಗಳಿಗೆ ಸಾಗಿಸಲಾಗುತ್ತದೆ. ಆದರೆ ಬಿಬಿಎಂಪಿ ಆಡಳಿತ ಈಗ ಕೋರಮಂಗಲ, ಚಿಕ್ಕಪೇಟೆ ಹಾಗೂ ಹೂಡಿಯಲ್ಲಿ ತಲಾ ಒಂದೊಂದು ಟ್ರಾನ್ಸ್ ಫರ್ ಸ್ಟೇಷನ್ ನಿರ್ಮಾಣಕ್ಕೆ ಅಸ್ತು ಎಂದಿದೆ.

ಒಂದು ಟ್ರಾನ್ಸ್‌ ಫರ್‌ ಸ್ಟೇಷನ್‌ ಗೆ ಎಷ್ಟಾಗುತ್ತೆ..?! ಸುಮಾರು 150 ಟನ್ ಸಾಮರ್ಥ್ಯದ ಒಂದು ಟ್ರಾನ್ಸ್ ಫರ್ ಸ್ಟೇಷನ್ ನಿರ್ಮಿಸ ಲು ಕನಿಷ್ಟ 22ಕೋಟಿ ರು. ಬೇಕಾಗುತ್ತದೆ. ಅಂದರೆ ಟ್ರಾನ್ಸ್ ಫರ್ ಸ್ಟೇಷನ್ ನಿರ್ಮಾಣ ಕ್ಕೆ 13 ಕೋಟಿಗಳಾ ದರೆ ಅದರ ನಿರ್ವಹಣೆಗೆ 9 ಕೋಟಿ ರು. ವೆಚ್ಚ ಮಾಡಲು ಬಿಬಿಎಂಪಿ ನಿರ್ಧರಿಸಿದೆ. ಇದೇರೀತಿ ಬೆಂಗಳೂರಿನ ಮೂರು ಪ್ರಮುಖ ಸ್ಥಳಗಳಲ್ಲಿ ಟ್ರಾನ್ಸ್ ಫರ್ ಸ್ಟೇಷನ್ ನಿರ್ಮಿಸಿ, ನಿರ್ವಹಣೆ ಮಾಡಲು ವರ್ಷಕ್ಕೆ ಕನಿಷ್ಠ 66ಕೋಟಿ ರು.ವೆಚ್ಚವಾಗುತ್ತದೆ.

ಬಿಬಿಎಂಪಿಗೆ 66 ಕೋಟಿ ಹೆಚ್ಚುವರಿ ಹೊರೆ..? ಕೋರಮಂಗಲ, ಹೂಡಿ ಮತ್ತು ಚಿಕ್ಕಪೇಟೆ ವಾರ್ಡ್ ಗಳಲ್ಲಿ ಕೋಟ್ಯಂತರ ರುಪಾಯಿ ಬೆಲೆ ಬಾಳುವ ಸುಮಾರು ಎರಡೂವರೆ ಎಕರೆಗೂ ಹೆಚ್ಚಿನ ಜಾಗವನ್ನೂ ಖಾಸಗಿ ಅವರಿಗೆ ನೀಡಲಾಗುತ್ತಿದೆ. ಇದರಿಂದ ಬಿಬಿಎಂಪಿಗೆ ಬಾರೀ ನಷ್ಟ ಉಂಟಾಗುವ ಸಾಧ್ಯತೆ ಇದೆ. ಅಂದರೆ ಟ್ರಾನ್ಸ್ ಫರ್ ಸ್ಟೇಷನ್ ನಿರ್ಮಾಣದಿಂದ ಬಿಬಿಎಂಪಿಗೆ ವರ್ಷಕ್ಕೆ 66ಕೋಟಿ ರು. ಹೆಚ್ಚವರಿ ಹೊರೆಯ ಜತೆಗೆ ನೂರಾರು ಕೋಟಿ ಬೆಲೆ ಬಾಳುವ ಜಾಗವನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ.

ಬಿಬಿಎಂಪಿಗೆ ಹೇಗೆ ನಷ್ಟ ? ಬಿಬಿಎಂಪಿ ಮೂರು ಜಾಗದಲ್ಲಿ 66ಕೋಟಿ ರು. ವೆಚ್ಚ ಮಾಡಿ 150 ಟನ್ ಸಾಮ ರ್ಥ್ಯದ ಟ್ರಾನ್ಸ್ ಫರ್ ಸ್ಟೇಷನ್ ಗಳನ್ನು ನಿರ್ಮಿಸುವ ಬದಲು ಈಗ ಇರುವ ಮಾದರಿಯಲ್ಲೇ ಕಾಂಪ್ಯಾಕ್ಟ ರ್ ಗಳನ್ನು ಹೆಚ್ಚಿಸಬಹುದು. ಒಂದು ಕಾಂಪ್ಯಾಕ್ಟರ್ 10 ಟನ್ ಕಸ ಸಾಗಣೆ ಮಾಡುವ ಸಾಮರ್ಥವಿದೆ. ಇದಕ್ಕೆ ತಿಂಗಳಿಗೆ ಬರೀ 1.86 ಲಕ್ಷ ವೆಚ್ಚವಾಗುತ್ತದೆ.

ಅದರಂತೆ 150 ಟನ್ ಟ್ರಾನ್ಸ್ ಫರ್ ಸ್ಟೇಷನ್ ಬದಲು 15 ಕಾಂಪ್ಯಾಕ್ಟರ್ ಗಳನ್ನು ನಿಯೋಜಿಸಿದರೆ, ತಿಂಗಳಿಗೆ 28ಲಕ್ಷ ಮಾತ್ರ ವೆಚ್ಚವಾಗುತ್ತದೆ. ವರ್ಷಕ್ಕೆ 3.35ಕೋಟಿಗಳಲ್ಲಿ ಕಸ ಸಾಗಣೆಯಾಗುತ್ತದೆ. ಅಂದರೆ ವರ್ಷಕ್ಕೆ 22ಕೋಟಿ ರು. ವೆಚ್ಚ ಮಾಡಿ ಒಂದು ಟ್ರಾನ್ಸ್ ಫರ್ ಸ್ಟೇಷನ್ ನಿರ್ಮಿಸಿ ಮಾಡುವ ಕೆಲಸವನ್ನು ಕಾಂಪ್ಯಾಕ್ಟರ್ ಗಳ ಮೂಲಕ ಕೇವಲ 3.35ಕೋಟಿ ವೆಚ್ಚದಲ್ಲೇ ಮುಗಿಸಬಹುದು.

ಆದರೆ ಬಿಬಿಎಂಪಿ ಟ್ರಾನ್ಸ್ ಫರ್ ಸ್ಟೇಷನ್ ನಿರ್ಮಿಸುವ ಲಾಬಿಗೆ ಜೋತು ಬಿದ್ದಿದ್ದು, ಒಂದು ಟ್ರಾನ್ಸ್ ಫರ್ ಸ್ಟೇಷನ್ ನಿರ್ವಹಣೆಯಲ್ಲೇ 6ಕೋಟಿಗಳನ್ನು (ನಿರ್ಮಾಣ ವೆಚ್ಚ 13ಕೋಟಿ ರು. ಹೊರತುಪಡಿಸಿ) ವೆಚ್ಚ ಮಾಡಿ ನಷ್ಟಕ್ಕೆ ಗುರಿಯಾಗುತ್ತಿದೆ. ಇದೇರೀತಿ ನಗರದಲ್ಲಿ ಮೂರು ಟ್ರಾನ್ಸ್ ಫರ್ ಸ್ಟೇಷನ್ ನಿರ್ವಹಣೆಯಿಂದ ಸುಮಾರು 18ಕೋಟಿ ರು.ಗಳಿಗೂ ನಷ್ಟಕ್ಕೆ ಗುರಿಯಾಗಲಿದೆ.

ಹೈದ್ರಾಬಾದ್‌ ಮೂಲದ ಕಂಪೆನಿಗೆ ಗುತ್ತಿಗೆ ನೀಡುವ ಷಡ್ಯಂತ್ರ: ಈ ಟ್ರಾನ್ಸ್ ಫರ್ ಸ್ಟೇಷನ್ ನಿರ್ಮಿಸಿ, ನಿರ್ವ ಹಣೆ ಮಾಡುವ 7 ವರ್ಷಗಳ ಗುತ್ತಿಗೆಯನ್ನು ಹೈದರಾ ಬಾದ್ ಮೂಲದ ಖಾಸಗಿ ಸಂಸ್ಥೆಯೊಂದಕ್ಕೆ ನೀಡಲಾಗಿದ್ದು, ಇದರಿಂದ 7 ವರ್ಷಗಳ ಅವಧಿಗೆ ಬರೀ ಕಸ ನಿರ್ವಹಣೆ ಒಂದೇ ವಿಚಾರದಲ್ಲಿ ಬಿಬಿಎಂಪಿ 140ಕೋಟಿಗಳ ನಷ್ಟ ಅನುಭವಿಸಬೇಕಾಗುತ್ತದೆ. ಜತೆಗೆ 3 ಟ್ರಾನ್ಸ್ ಫರ್ ಸ್ಟೇಷನ್ ನಿರ್ಮಾಣ ವೆಚ್ಚ 39ಕೋಟಿ ರು.ಗಳೂ ಸೇರಿದರೆ, 179ಕೋಟಿ ರು. ನಷ್ಟದಿಂದ ನರಳುವ ಸಾಧ್ಯತೆ ಎಂದು ಅಧಿಕಾರಿಗಳೇ ಹೇಳಿದ್ದಾರೆ.

ಹಾಗಾದ್ರೆ ಹಾಲಿ ಇರುವ ಸ್ಟೇಷನ್ ಕಥೆ ಏನಾಯ್ತು ? ಬಿಬಿಎಂಪಿ 5 ವರ್ಷಗಳ ಹಿಂದೆಯೇ ಟ್ರಾನ್ಸ್ ಫರ್ ಸ್ಟೇಷನ್ ಆರಂಬಿಸಲು ಹೋಗಿ ಕೈ ಸುಟ್ಟಿಕೊಂಡಿದೆ. ಅಂದರೆ ನಗರದ 50ಕ್ಕೂ ಹೆಚ್ಚು ಕಡೆ ಮಿನಿ ಟ್ರಾನ್ಸ್ ಫರ್ ಸ್ಟೇಷನ್ ನಿರ್ಮಿಸಲು ಟಿಪಿಎಸ್ ಎಂಬ ಖಾಸಗಿ ಸಂಸ್ಥೆಗೆ ಬಿಬಿಎಂಪಿ ಗುತ್ತಿಗೆ ನೀಡಿತ್ತು.

ಆದರೆ ಆ ಸಂಸ್ಥೆ ಈತನಕ ಸಂಜಯ ನಗರ, ದೊಮ್ಮಲೂರು ಹಾಗೂ ಚಿಕ್ಕಪೇಟೆ ಸೇರಿದಂತೆ ಬರೀ 5 ಕಡೆ ಮಾತ್ರ ಮಿನಿ ಟ್ರಾನ್ಸ್ ಫರ್ ಸ್ಟೇಷನ್ ಗಳನ್ನು ಆರಂಭಿಸಲಾಗುತ್ತಿದ್ದು, ಇದರಿಂದ ಕಸ ನಿರ್ವಹಣೆ ಯಾವುದೇ ರೀತಿಯಲ್ಲೂ ಸಹಕಾರಿಯಾಗುತ್ತಿಲ್ಲ. ಬದಲಾಗಿ ಎಲ್ಲವನ್ನೂ ಕಾಂಪ್ಯಾಕ್ಟರ್ ಗಳ ಮೂಲಕವೇ ನಿರ್ವಹಣೆ ಮಾಡಲಾಗುತ್ತಿದೆ. ಇಂಥಾ ದೊಡ್ಡ ವೈಫಲ್ಯ ಬಿಬಿಎಂಪಿ ಮುಂದಿರುವಾಗಲೇ 150 ಟನ್ ಸಾಮರ್ಥ್ಯದ ಟ್ರಾನ್ಸ್ ಫರ್ ಸ್ಟೇಷನ್ ನಿರ್ಮಿಸಿ ಇರುವ ಹಣ ಮತ್ತು ಜಾಗ ಎರಡನ್ನೂ ಕಳೆದುಕೊಳ್ಳಲು ಬಿಬಿಎಂಪಿ ನಿರ್ಧಾರ ಮಾಡಿದೆ.

ಯೋಜನೆಯಿಂದ ಆಗಬಹುದಾದ  ನಷ್ಟವೇನು,,?  ಬಿಬಿಎಂಪಿಗೆ ಒಟ್ಟು 179ಕೋಟಿ ರು. ನಷ್ಟವಾಗಲಿದೆ ಎನ್ನುವುದು ಮೊದಲ ಸಂಗತಿಯಾದ್ರೆ  ಸುಮಾರು 300ಕೋಟಿ ರು. ಬೆಲೆ ಬಾಳುವ ಪ್ರಮುಖ ಜಾಗಗಳು ಕೈ ತಪ್ಪಲಿವೆ.ಹಾಗೆಯೇ  ಉದ್ದೇಶಿತ ಯೋಜನಾ ಜಾಗದಲ್ಲಿರುವ ನಿವಾಸಿಗಳನ್ನು ಒಕ್ಕಲೆಬ್ಬಿಸಬೇಕಾಗುತ್ತದೆ.  150 ಟನ್ ಟ್ರಾನ್ಸ್ ಫರ್ ಸ್ಟೇಷನ್ ಆರಂಭಿಸಿದರೆ ಆಲ್ಲಿ ಸುಮಾರು 150 ಆಟೋಗಳು ನಿಲ್ಲಬೇಕಾಗುತ್ತದೆ. ಆಟೋ ಗಳು ಪಕ್ಕದಲ್ಲೇ ಇರುವ ಕಾಂಪ್ಯಾಕ್ಟರ್ ಬಿಟ್ಟು 7 ಕಿ.ಮೀ.ಗಳಿಂದಲೂ ಕಸ ಹೊತ್ತು ತರಬೇಕಾಗುತ್ತದೆ.

ಅಷ್ಟೇ ಅಲ್ಲ, ಇದರಿಂದ ನಿತ್ಯ ಕಸ ಹಾಕುವ ತಾಣದಲ್ಲಿ ದುರ್ವಾಸನೆ ಮತ್ತು ಟ್ರಾಫಿಕ್ ಸಮಸ್ಯೆ ತಲೆದೋರಲಿ ದೆ. ಪರಿಹಾರಗಳೇನು ? ಹಾಗಾದ್ರೆ ಇದಕ್ಕೆ ಪರಿಹಾರವೇ ಇಲ್ಲವಾ… ? ಖಂಡಿತಾ ಇದೆ. ಟ್ರಾನ್ಸ್ ಫರ್ ಸ್ಟೇಷನ್ ಬದಲು ಇರುವ ವ್ಯವಸ್ಥೆ ಮುಂದುವರಿಸಬಹುದು. ಕಾಂಪ್ಯಾಕ್ಟರ್ ಗಳ ಮೂಲಕವೇ ವಾರ್ಡ್ ಗಳಿಗೇ ಹೋಗಿ ಕಸ ಸಂಗ್ರಹಿಸಬಹುದು. ಯೋಜನೆ ಕೈ ಬಿಟ್ಟರೆ 300ಕೋಟಿ ಜಾಗ ರಕ್ಷಣೆಯಾಗುತ್ತದೆ. ಉದ್ದೇಶಿತ ಜಾಗದಲ್ಲಿ ಬಿಬಿಎಂಪಿ ವಾಣಿಜ್ಯ ಅಥವಾ ಪಾರ್ಕಿಂಗ್ ಕಟ್ಟಡ ನಿರ್ಮಿಸಿ ಆದಾಯ ಗಳಿಸಬಹುದು ಉದ್ದೇಶಿತ ಜಾಗದಲ್ಲಿ ನಿವಾಸಿಗಳನ್ನು ಒಕ್ಕಲೆಬ್ಬಿಸುವುದನ್ನು ತಡೆಯಬಹುದು.

ಈ ನಿಟ್ಟಿನಲ್ಲಿ ಬಿಬಿಎಂಪಿ ಕಾರ್ಯಪ್ರವೃತ್ತವಾಗಬೇಕಿದೆ.ಇಲ್ಲದೆ ಹೋದ್ರೆ ಯಾವುದೇ ಆಯಾಮದಲ್ಲೂ ಹೊಸ ಟ್ರಾನ್ಸ್‌ ಫರ್‌ ಸ್ಟೇಷನ್‌ ಗಳ ಆರಂಭ ಪ್ರಯೋಜನಕಾರಿಯಾಗೊಲ್ಲ..ಬಿಬಿಎಂಪಿಗೆ ಹೆಚ್ಚುವರಿ ನಷ್ಟ ಉಂಟುಮಾಡುವ ಈ ಯೋಜನೆಯಿಂದ ಹೈದ್ರಾಬಾದ್‌ ಮೂಲದ ಕಂಪೆನಿ ಹಾಗೂ ಬಿಬಿಎಂಪಿ ಅಧಿಕಾರಿಗಳು ಲಾಭ ಮಾಡಿಕೊಳ್ಳಬಹುದಷ್ಟೇ..

ಖಾಸಗಿ ಕಂಪೆನಿ ಹಿತಾಸಕ್ತಿಗೆ ಮಣಿದು ಬಿಬಿಎಂಪಿ ಸಾರ್ವಜನಿಕರ ತೆರಿಗೆ ಹಣ ಪೋಲು ಮಾಡುವುದಕ್ಕಿಂತ ಯಾವುದೇ ರೀತಿಯಲ್ಲೂ ಪ್ರಯೋಜನಕ್ಕಿಲ್ಲದ ಟ್ರಾನ್ಸ್‌ ಫರ್‌ ಸ್ಟೇಷನ್‌ ಸ್ಥಾಪನೆ ಯೋಜನೆಯನ್ನು ಕೈಬಿಡುವುದು ಎಲ್ಲಾ ರೀತಿಯಲ್ಲೂ ಸೂಕ್ತವಾಗಬಹುದೇನೋ..

Spread the love

Related Articles

Leave a Reply

Your email address will not be published.

Back to top button
Flash News