BreakingMoreScrollTop NewsUncategorizedಕ್ರೈಮ್ /ಕೋರ್ಟ್ಜಿಲ್ಲೆಫೋಟೋ ಗ್ಯಾಲರಿಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ(BMTC-KSRTC)ರಾಜಕೀಯರಾಜ್ಯ-ರಾಜಧಾನಿ

“BLACK MONDAY” FOR BMTC:TWO DRIVERS HUNG THEMSELVES. / BMTC ಪಾಲಿಗೆ “ಕರಾಳ ಸೋಮವಾರ”: ಒಂದೇ ದಿನ ಸಾವಿನ ಮನೆ ಅತಿಥಿಗಳಾದ 2 ಚಾಲಕರು..

ಡಿಪೋ ಅಧಿಕಾರಿಗಳ ಕ್ರೌರ್ಯಕ್ಕೆ ಬ್ರೇಕ್ ಎಂದು ಸತ್ಯವತಿ ಮೇಡಮ್..ಕಾರ್ಮಿಕ ಸಿಬ್ಬಂದಿ ಆತ್ಮಹತ್ಯೆ ಸರಣಿಗೆ ಕೊನೆ ಯಾವಾಗ..?!

ಬೆಂಗಳೂರು: ಬಿಎಂಟಿಸಿ ಆಡಳಿತ ನಾಚಿ ತಲೆತಗ್ಗಿಸಲೇಬೇಕು…ಈ ಸಾವುಗಳ ನೈತಿಕ ಹೊಣೆಯನ್ನೂ ಇದೇ ಆಡಳಿತ ಹೊರಬೇಕು…ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ( ಬಿಎಂಟಿಸಿ) ಪಾಲಿಗೆ ಇದು ಕರಾಳ ಸೋಮವಾರ..ಒಂದೇ ದಿನ ಇಬ್ಬರು ಚಾಲಕರು ನೇಣಿಗೆ ಕೊರಳೊಡ್ಡಿದ್ದಾರೆ.ರಾಜರಾಜೇಶ್ವರಿ ನಗರ ಡಿಪೋದಲ್ಲಿ ಡಿಪೋ ಮ್ಯಾನೇಜರ್ ಕಿರುಕುಳಕ್ಕೆ ಬೇಸತ್ತು ಚಾಲಕನೋರ್ವ ಆತ್ಮಹತ್ಯೆ ಮಾಡಿಕೊಂಡಿದ್ದು ಜಿಗಣಿ ಡಿಪೋದ ಚಾಲಕ ರಾಜಕುಮಾರ್ ಎನ್ನುವವರು ಮನೆಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಡಿಪೋ 21 ( ರಾಜರಾಜೇಶ್ವರಿ ನಗರ)ದ ಚಾಲಕ ಹೊಳಿಬಸಪ್ಪ ಎನ್ನುವವರು ಡಿಪೋ ಆವರಣದಲ್ಲೇ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು.ಅದರ ಬೆನ್ನಲ್ಲೇ ಜಿಗಣಿ ಡಿಪೋದ ಚಾಲಕ ರಾಜಕುಮಾರ್ ಎನ್ನುವವರು ಮನೆಯಲ್ಲಿ ನೇಣು ಹಾಕ್ಕೊಂಡು ಸಾವನ್ನಪ್ಪಿದ್ದಾರೆ.ಬಹುಷಃ ಒಂದೇ ದಿನ ಎರಡೆರೆಡು ಸಾವು ಬಿಎಂಟಿಸಿ ಇತಿಹಾಸದಲ್ಲಿ ಹಿಂದೆಂದೂ ಸಂಭವಿಸಿರಲಾರದೇನೋ..

ಡಿಪೋ ಹಂತದಲ್ಲಿ ಅಧಿಕಾರಿಗಳು ನಿತ್ಯ ಕೊಡುವ ಕಿರುಕುಳ ಅನುಭವಿಸಿದವರಿಗೆ ಗೊತ್ತು..ಅದರ ಕ್ರೌರ್ಯ ಹೇಗಿರುತ್ತೆ ಅಂಥಾ..ಅವರುಗಳ ಮುಂದೆ ಗುಲಾಮರಂತ ಕೆಲಸ ಮಾಡಬೇಕಾಗಿದೆ.ತಲೆ ಎತ್ತಿಯೂ ಅಡ್ಡಾಡುವಂತಿಲ್ಲ.ನಕ್ಕರೂ ಕಷ್ಟ..ಸುಮ್ಮನಿದ್ದರೂ ಕಷ್ಟ..ಅವರುಗಳ ಕಿರುಕುಳ ಸಹಿಸಿಕೊಳ್ಳಲಿಕ್ಕಾಗದೆ ಇಬ್ಬರು ನಮ್ಮ ಸಹದ್ಯೋಗಿಗಳು ಆತ್ಮಹತ್ಯೆ ಮಾಡಿಕೊಂಡಿರುವುದು ನೋವು ತಂದಿದ್ರೂ,ನಮಗೆ ಅದೇನು ವಿಶೇಷ ಎನಿಸಿಲ್ಲ..ಹಿಂದೆಯೂ ಒಂದಷ್ಟು ಜನ ಆತ್ಮಹತ್ಯೆ ಮಾಡಿಕೊಂಡಿರುವುದನ್ನು ನೋಡಿದ್ದೇವೆ..ಈಗಲೂ ನೋಡುತ್ತಿದ್ದೇವೆ..ಇದಕ್ಕೆ ಬ್ರೇಕ್ ಹಾಕದಿದ್ದರೆ ಮುಂದೆಯೂ ಹೆಚ್ಚಿನ ಪ್ರಮಾಣದಲ್ಲಿ ನೋಡಬೇಕಾಗುತ್ತದೆಯೇನೋ..ಗೊತ್ತಾಗುತ್ತಿಲ್ಲ.

-ಸಹದ್ಯೋಗಿಗಳ ಸಾವಿನಿಂದ ನೊಂದ ಬಿಎಂಟಿಸಿ ಚಾಲಕ

ಹೊಳಿಬಸಪ್ಪನ ಸಾವಿಗೆ ಡಿಪೋ ಮ್ಯಾನೇಜರ್ ಮಲ್ಲಿಕಾರ್ಜುನಯ್ಯ ಕಾರಣ ಎನ್ನಲಾಗುತ್ತಿದೆ.ಈ ಬಗ್ಗೆ ಹೊಳಿಬಸಪ್ಪ ಡೆತ್ ನೋಟ್ ಕೂಡ ಬರೆದಿಟ್ಟಿದ್ದರೆನ್ನುವ ಸುದ್ದಿ ಹರಿದಾಡುತ್ತಿದೆ.ಎರಡು ದಿನಗಳಿಂದಲೂ ಡ್ಯೂಟಿಗಾಗಿ ಪರಿಪರಿಯಾಗಿ ಹೊಳಿಬಸಪ್ಪ ಡಿಪೋ ಮ್ಯಾನೇಜರ್ ಅವರನ್ನು ಕೇಳಿಕೊಂಡಿದ್ದರಂತೆ.ಆದರೆ ಕೆಲಸ ಕೊಡದೆ ಸತಾಯಿಸುತ್ತಿದ್ದ ಕಾರಣಕ್ಕೆ ಬೇಸತ್ತು ಡಿಪೋ ಆವರಣದಲ್ಲೇ ಇದ್ದ ಮರಕ್ಕೆ ಕೊರಳೊಡ್ಡಿ ಬದುಕನ್ನು ಕೊನೆಗಾಣಿಸಿಕೊಂಡಿದ್ದಾರೆನ್ನುವುದು ಸಹದ್ಯೋಗಿಗಳ ಆಪಾದನೆ.

ಮತ್ತೊಂದು ಪ್ರಕರಣ ಜಿಗಣಿ ಡಿಪೋದಲ್ಲಿ ನಡೆದಿದೆ ಎನ್ನಲಾಗುತ್ತಿದೆ.ವಿಕಲಚೇತನರಾಗಿದ್ದ ರಾಜಕುಮಾರ್ ತಮ್ಮ ಆರೋಗ್ಯದ ಕಾರಣವೊಡ್ಡಿ ಚಾಲಕೇತರ ಕೆಲಸ ಮಾಡುತ್ತಿದ್ದರಂತೆ,ಅನೇಕ ವರ್ಷಗಳಿಂದಲೂ ಇದೇ ಕೆಲಸ ಮಾಡಿಕೊಂಡಿದ್ದರಂತೆ.ಆದರೆ ಇತ್ತೀಚೆಗೆ ಡಿಪೋ ಅಧಿಕಾರಿಗಳು ಚಾಲನೆ ಕೆಲಸ ಮಾಡುವಂತೆ ಒತ್ತಾಯಿಸುತ್ತಿದ್ದರಂತೆ.ತನ್ನ ಪರಿಸ್ಥಿತಿ ಹೇಳಿಕೊಂಡರೂ ಅದಕ್ಕೆ ಒಪ್ಪದೆ ಡ್ರೈವರ್ ಕೆಲಸ ಮಾಡುವುದಿದ್ದರೆ ಮಾಡು,,ಇಲ್ಲಾಂದ್ರೆ ವಾಲೆಂಟೈರಿ ತಗೋ ಎಂದು ಪೀಡಿಸುತ್ತಿದ್ದರಂತೆ.ಇದರಿಂದ ನೊಂದ ಅವರು ಮನೆಯಲ್ಲೇ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆನ್ನುವ ಮಾತು ಕೇಳಿಬರುತ್ತಿದೆ.

ಅದೇನೇ ಆಗಲಿ ಎರಡು ಪ್ರಕರಣಗಳಲ್ಲೂ ಚಾಲಕರ ಸಾವಿಗೆ  ಡಿಪೋ ಮ್ಯಾನೇಜರ್ ಗಳು ಕೊಡುತ್ತಿದ್ದರೆನ್ನಲಾದ ಕಿರುಕುಳವೇ ಕಾರಣ ಎನ್ನಲಾಗುತ್ತಿದೆ.ಡಿಪೋ ಮ್ಯಾನೇಜರ್ ಗಳ ಕಿರುಕುಳದ ಬಗ್ಗೆ ಆರೋಪ ಕೇಳಿಬರುತ್ತಿರುವುದು ಇದೇ ಮೊದಲೇನಲ್ಲ.

ಬಹುತೇಕ ಡಿಪೋಗಳಲ್ಲಿ ಹಿಂದಿನಿಂದಲೂ ಈ ಸರ್ವಾಧಿಕಾರಿ ಧೋರಣೆಯನ್ನು ಅನೇಕರು ನಡೆಸುತ್ತಾ ಬಂದಿದ್ದಾರೆ.ಚಾಲಕರು ಹಾಗೂ ಇತರೆ ಸಿಬ್ಬಂದಿಯನ್ನು ತಮ್ಮ ಮನೆಯ ಗುಲಾಮರಂತೆ ದುಡಿಸಿಕೊಳ್ಳುವ, ಸಿಬ್ಬಂದಿ ರಜೆ-ಡಿಪೋ ಬದಲಾವಣೆ-ವರ್ಗಾವಣೆಗೆ ಲಂಚ ಸುಲಿಗೆ ಮಾಡುತ್ತಾ ಪ್ರತಿ ತಿಂಗಳು ಲಕ್ಷಗಟ್ಟಲೇ ಕಮಾಯಿ ಮಾಡಿಕೊಳ್ಳುತ್ತಿದ್ದಾರೆನ್ನುವ ಆರೋಪ ಗಂಭೀರವಾಗಿದೆ.

ಆದರೆ ದುರಂತದ ವಿಚಾರ ಏನಂದ್ರೆ ಕೇಳಿಸಿಕೊಳ್ಳಬೇಕಾದ ಮೇಲಾಧಿಕಾರಿಗಳು ಡಿಪೋ ಹಂತದ ಅಧಿಕಾರಿಗಳನ್ನು ಶಿಕ್ಷಿಸುವ ಮಾತು ಒತ್ತಟ್ಟಿಗಿರಲಿ ಅವರನ್ನು ಪ್ರಶ್ನಿಸುವ ಗೋಜಿಗೂ ಹೋಗುವುದಿಲ್ಲ.ಅಧಿಕಾರಿಗಳು ಹೇಳಿದ್ದನ್ನೇ ನಂಬಿ ಚಾಲಕ/ನಿರ್ವಾಹಕ ಹಾಗೂ ಇತರೆ ಸಿಬ್ಬಂದಿಯನ್ನು ಶಿಕ್ಷಿಸುವ ಕೆಲಸಕ್ಕೆ ನೇರಾನೇರ ಕೈ ಹಾಕುತ್ತಿದ್ದಾರೆ.

ಹೊಸದಾಗಿ ಬಂದಿರುವ ಸತ್ಯವತಿ ಮೇಡಮ್ ಅವರು ಇದನ್ನೆಲ್ಲಾ ಗಮನಿಸಬೇಕು.ಬಿಎಂಟಿಸಿಯಲ್ಲಿ ಕಾರ್ಮಿಕ ಸಿಬ್ಬಂದಿಗೆ ಇರುವ ಜಿಗುಪ್ಸೆಯ ವಾತಾವರಣ ಸಹಿಸಿಕೊಳ್ಳಲಿಕ್ಕಾಗದಷ್ಟು ಗಂಭೀರವಾಗಿದೆ.ಕರಾಳವಾಗಿದೆ ಎನ್ನುವುದು ಇವತ್ತು ನಡೆದಿರುವ ಘಟನೆಯಿಂದ ಸಾಬೀತಾಗಿದೆ.ಎಸಿ ಕಚೇರಿಯಲ್ಲಿ ಕೂರೋದನ್ನು ಬಿಟ್ಟು ಪ್ರತಿ ಡಿಪೋಗಳಿಗೂ ರೌಂಡ್ಸ್ ಹಾಕಿ ಕಾರ್ಮಿಕರ ಸಮಸ್ಯೆ ಕೇಳೋದು ಸೂಕ್ತ.ಮೇಡಮ್ ಅವರಿಂದ ಕಾರ್ಮಿಕರು ನಿರೀಕ್ಷಿಸುತ್ತಿರುವುದು ಕೂಡ ಇದನ್ನೆ

-ಬಿಎಂಟಿಸಿ ಬಸ್ ಪ್ರಯಾಣಿಕರ ವೇದಿಕೆ ಸದಸ್ಯ

ಮೇಲಾಧಿಕಾರಿಗಳ ಮೇಲೆ ನಂಬಿಕೆ ಕಳೆದುಕೊಂಡಿರುವ ಬಹುತೇಕ ಕಾರ್ಮಿಕ ಸಿಬ್ಬಂದಿ ದಿನಂಪ್ರತಿ ಅಧಿಕಾರಿಗಳು ಕೊಡುವ ಕಿರುಕುಳಕ್ಕಿಂತ ಸಾಯೋದೇ ಒಳ್ಳೇದೆನ್ನುವ ನಿರ್ದಾರಕ್ಕೆ ಬರುತ್ತಿದ್ದಾರಂತೆ.ಕುಟುಂಬಗಳ ಬಗ್ಗೆಯೂ ಆಲೋಚಿಸದಷ್ಟು ಜಿಗುಪ್ಸೆಯನ್ನು ಸೃಷ್ಟಿಸುತ್ತಿದ್ದಾರೆಂದ್ರೆ ಅಧಿಕಾರಿಗಳ ಆಟಾಟೋಪ-ದೌರ್ಜನ್ಯ-ಕ್ರೌರ್ಯ ಎಷ್ಟಿರಬಹುದೆನ್ನುವುದನ್ನು ಅಂದಾಜಿಸಬಹುದು.

ನಮ್ಮ ಕಾರ್ಮಿಕ ಬಂಧುಗಳನ್ನು ಕಳೆದುಕೊಳ್ಳುತ್ತಿರುವುದು ಇದೇ ಮೊದಲೇನಲ್ಲ.ಆದರೆ ಇಬ್ಬರು ಒಂದೇ ದಿನ ಆತ್ಮಹತ್ಯೆ ಮಾಡಿಕೊಂಡಿರುವುದು ನಮ್ಮ ಹೃದಯ ಕಲಕಿಬಿಟ್ಟದೆ.ನಮ್ಮನ್ನು ತುಂಬಾ ಡಿಸ್ಟರ್ಬ್ ಮಾಡಿದೆ.ಎಲ್ಲಕ್ಕಿಂತ ಹೆಚ್ಚಾಗಿ ಆಕ್ರೋಶ ಮೂಡಿಸಿದೆ.ಮೇಡಮ್ ಸತ್ಯವತಿ ಅವರು ಡಿಪೋ ಹಂತದಲ್ಲಿರುವ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳದಿದ್ದಲ್ಲಿ ಬೀದಿಗಿಳಿದು ಹೋರಾಟ ಮಾಡಬೇಕಾಗುತ್ತದೆಯೇನೋ..ಕಾರ್ಮಿಕರ ನೋವುಗಳಿಗೆ ಸ್ಪಂದಿಸುವ ಮಾತೃವಾತ್ಸಲ್ಯವನ್ನು ಅವರಿಂದ ನಿರೀಕ್ಷಿಸುತ್ತಿದ್ದೇವೆ.

ಆನಂದ್-ಸಾರಿಗೆ ಕಾರ್ಮಿಕರ ಮುಖಂಡ

ಬಿಎಂಟಿಸಿಗೆ ನೂತನ ಎಂಡಿಯಾಗಿ ಬಂದಿರುವ ಸತ್ಯವತಿ ಅವರಿಗೆ ಈ ಎಲ್ಲಾ ಸಂಗತಿಗಳು ಗೊತ್ತಿರದೆ ಇರಲಿಕ್ಕಿಲ್ಲ..ವ್ಯವಸ್ಘೆಗೆ ಸಾಣೆ ಹಿಡಿಯುವ ಕೆಲಸಕ್ಕೆ ಕೈ ಹಾಕಿದ್ದಾರೆನ್ನುವ ಮಾತುಗಳಿವೆ.ಇದರ ನಡುವೆ ಇಡೀ ಬಿಎಂಟಿಸಿ ಆಡಳಿತ ವ್ಯವಸ್ಥೆಯನ್ನೇ ತಲೆ ತಗ್ಗಿಸುವಂತೆ ಮಾಡಿರುವ ಇಂದಿನ ಬೆಳವಣಿಗೆ ನಂತರ ಅಧಿಕಾರಿಗಳ ಬುಡಕಾಯಿಸುವ ಕೆಲಸಕ್ಕೆ ಕೈ ಹಾಕಲೇಬೇಕಿದೆ.ಒಂದೇ ಡಿಪೋಗಳಲ್ಲಿ ಅನೇಕ ವರ್ಷಗಳಿಂದಲೂ ಅವರಪ್ಪನ ಜಾಗೀರ್ ದಾರ್ ಎನ್ನುವ ರೇಂಜ್ನಲ್ಲಿ ಗೂಟಾ ಹೊಡ್ಕಂಡು ಕೂತಿರುವ ಅದೆಷ್ಟೋ ಡಿಪೋ  ಮ್ಯಾನೇಜರ್ ಗಳಿಗೆ ಬುದ್ಧಿ ಕಲಿಸುವ ಕೆಲಸಕ್ಕೆ ಮುಂದಾಗಬೇಕಿದೆ.

ಈ ಕೆಲಸ ಆಗದೇ ಹೋದಲ್ಲಿ ಮೇಡಮ್ ಸತ್ಯವತಿ ಅವರ ಮೇಲಾಣೆ,ಬಿಎಂಟಿಸಿ ಸಿಬ್ಬಂದಿಯ ಆತ್ಮಹತ್ಯೆ ಸರಣಿ  ಮುಂದುವರೆಯುತ್ತಲೇ ಇರುತ್ತೆ.

 

Spread the love

Related Articles

Leave a Reply

Your email address will not be published.

Back to top button
Flash News